ಶ್ರೀಕಂಠ, ವಿಷಕಂಠ, ನೀಲಕಂಠ

ಸಮುದ್ರ ಮಂಥನದ ಸಮಯ, ಕೈಲಾಸ ಪರ್ವತವನ್ನೇ ಕಡಗೋಲಾಗಿಸಿಕೊಂಡು ಆದಿಶೇಷನ ಒಂದು ತುದಿ ದೇವತೆಗಳು ಮತ್ತು ಮತ್ತೊಂದು ತುದಿಯನ್ನು ಅಸುರರು ಹಿಡಿದುಕೊಂಡು ಮಜ್ಜಿಗೆ ಕಡೆದಂತೆ ಸಮುದ್ರವನ್ನು ಕಡೆಯುತ್ತಿದ್ದಾಗ ಉಕ್ಕಿಬಂದ ಕಾರ್ಕೋಟಕ ವಿಷವನ್ನು ತಾಳಲಾರದೇ, ಎಲ್ಲರೂ ಆ ಪರಶಿವನ ಮೊರೆ ಹೊಕ್ಕಾಗಾ ಹಿಂದೂ ಮುಂದೇ ನೋಡದ ಶಿವಾ ಆ ಕಾರ್ಕೋಟಕ ವಿಷವನ್ನು ತನ್ನ ಎರಡೂ ಕೈಗಳಿಗೆ ಬರುವಂತೆ ಮಾಡಿಕೊಂಡು ಗಟ ಗಟನೆ ಆಪೋಷನೆ ಮಾಡುತ್ತಿರುವ ವಿಷಯ ತಿಳಿದು, ಪಾರ್ವತಿದೇವಿ ಓಡೋಡಿ ಬರುವಷ್ಟರಲ್ಲಿ ಶಿವ ವಿಷವನ್ನು ಸೇವಿಸಿಯಾಗಿರುತ್ತದೆ. ಇದನ್ನು ಕಂಡ ಪಾರ್ವತೀ ದೇವಿ ಕೂಡಲೇ ಆ ವಿಷ ಗಂಟಲಿನಿಂದ ಕೆಳಗೆ ಇಳಿಯಂತೆ ನೋಡಿಕೊಳ್ಳುವ ಸಲುವಾಗಿ ತನ್ನ ಪತಿದೇವನ ಗಂಟಲನ್ನು ಗಟ್ಟಿಯಾಗಿ ಅದುಮಿಕೊಂಡು ಹಿಡಿದುಕೊಳ್ಳುವ ಮೂಲಕ ಆ ವಿಷ ಶಿವನ ಗಂಟಲಲ್ಲೇ ಉಳಿಯುವ ಮೂಲಕ ಶಿವ ವಿಷಕಂಠನಾಗಿ, ಗಂಟಲಲ್ಲೇ ವಿಷ ಹೆಪ್ಪುಗಟ್ಟಿದ ಪರಿಣಾಮವಾಗಿ ನೀಲಕಂಠನಾಗುತ್ತಾನೆ ಎಂಬುದು ಪುರಾಣ ಪ್ರಸಿದ್ಧ ಕಥೆ ಎಲ್ಲರಿಗೂ ತಿಳಿದಿರುವ ಸಂಗತಿಯಷ್ಟೇ. ಈ ಕಲಿಯುಗದಲ್ಲಿ ಕಣ್ಣಿಗೆ ಕಾಣದ ಮಹಾಮಾರಿ ಕೋರೋನಾ ಕೂಡಾ ಅದೇ ಗಂಟಲಿಗೇ ವಕ್ಕರಿಸಿಕೊಳ್ಳುವುದು ನಿಜಕ್ಕೂ ಅತಂಕಕಾರಿಯಾಗಿದೆ.

ಕಳೆದ ಸೋಮವಾರವಿನ್ನೂ ಶಾಸ್ತ್ರೋಕ್ತವಾಗಿ ಗುರು ಹಿರಿಯರ ಸಮ್ಮುಖದಲ್ಲಿ ಸರಳವಾಗಿ ಆದರೇ ಅಷ್ಟೇ ಸಂಭ್ರಮವಾಗಿ ಐವತ್ತನೇ ಹುಟ್ಟು ಹಬ್ಬ ಆಚರಿಸಿಕೊಂಡ ನನಗೆ, ಹುಟ್ಟುಹಬ್ಬದ ಉಡುಗೊರೆಯಾಗಿ ಕೋರಾನಾ ಮಹಾಮಾರಿ Home Delivery ಆಗಿದ್ದಂತೂ ನಿಜಕ್ಕೂ ಬೇಸರದ ಸಂಗತಿಯಾಗಿತ್ತು. ನಾವು ಎಷ್ಟೇ ಮುಂಜಾಗ್ರತಾ ಕ್ರಮ ವಹಿಸಿ, ಪುರೋಹಿತರೂ ಸೇರಿದಂತೆ ಹದಿನೈದು ಜನರು ಮೀರದಂತೆ ಎಚ್ಚರ ವಹಿಸಿ, ಸಾಮಾಜಿಕ ಅಂತರವನ್ನೆಲ್ಲಾ ಕಾಪಾಡಿಕೊಂಡಿದ್ದರೂ ಸಂಜೆ ಪುಸ್ತಕ ಬಿಡುಗಡೆಯಾದ ನಂತರ ನಾಲ್ಕೈದು ಜನ ಅತ್ಮೀಯರನ್ನು ಮನೆಗೆ ಕರೆದು ಅವರಿಗೆ ಪುಸ್ತಕವನ್ನು ಹಂಚಿದ್ದೇ ಮುಳುವಾಯಿತೇನೋ? ನಿರ್ಧಿಷ್ಟವಾಗಿ ಹೀಗೆಯೇ ಬಂದಿರಬಹುದು ಎನ್ನುವುವುದಕ್ಕೆ ಸ್ಪಷ್ಟ ಪುರಾವೆಗಳಿಲ್ಲದಿದ್ದರೂ ಬುಧವಾರ ಮಧ್ಯಾಹ್ನದಿಂದ ಯಾಕೋ ಗಂಟಲು ನೋವು ಶುರುವಾಯಿತು. ಬಹುಶಃ ಸತ್ಯನಾರಾಯಣ ಪೂಜೆಗೆಂದು ತಂದಿದ್ದ ಸೀತಾಫಲ, ಸೇಬು, ಸಪೋಟ ತಿಂದಿದ್ದರಿಂದ ಬಂದಿರಬಹುದೆಂದು ಉಪ್ಪು ನೀರನ್ನು ಗಂಟಲಿಗೆ ಹಾಕಿಕೊಂಡು ಮುಕ್ಕಳಿಸಿ ಸುಮ್ಮನಾದೆ.

ಸೋಮವಾರ ಸಂಜೆ ನಮ್ಮ ಮನೆಗೆ ಬಂದಿದ್ದ ಆತ್ಮೀಯರೊಬ್ಬರು ಬುಧವಾರ ಸಂಜೆ, ನನಗೆ ಕೋವಿಡ್ + ಎಂದು ಧೃಢಪಟ್ಟಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ನೀವೂ ಒಮ್ಮೆ ಪರೀಕ್ಷಿಕೊಳ್ಳಿ ಎಂಬ ಸಂದೇಶವನ್ನು ಕಳುಹಿಸಿದಾಗ ಅದನ್ನು ಓದಿ ಸುಮ್ಮನಾಗಿದೆ. ಗುರುವಾರ ಗಂಟಲು ನೋವಿನ ಬಾವು ಕಿವಿಯವರೆಗೂ ತಲುಪಿದ್ದರಿಂದ ವಿಧಿ ಇಲ್ಲದೇ ನಮ್ಮ ಕುಟುಂಬ ವೈದ್ಯರನ್ನು ಭೇಟಿದಾಗ, ಅವರೂ ಸಹಾ ಶೀತದ ಪರಿಣಾಮ ಗಂಟಲು ನೋವು ಬಂದಿರಬಹುದೆಂದು ಔಷಧಿಯನ್ನು ನೀಡಿ, ಏನೇ ಆಗಲೀ ಒಂದು ಸಲಾ ಕೋವಿಡ್ ಪರೀಕ್ಷೆ ಮಾಡಿಸುವುದು ಉತ್ತಮ. ಹತ್ತಿರದ Primary health center (PHC)ನಲ್ಲಿ ಉಚಿತವಾಗಿ ಮಾಡುತ್ತಾರೆ ಒಮ್ಮೆ ಮಾಡಿಸು ಎಂದಾಗ ಸರಿ ಸರ್ ಎಂದು ಹೇಳಿ ಬಂದೆ.

ಹಾವು ಕಚ್ಚಿ, ಹಾವಿನ ವಿಷದಿಂದ ಸಾಯುವುದಕ್ಕಿಂತಲೂ ಹಾವು ಕಚ್ಚಿರುವ ವಿಷಯ ಕೇಳಿಯೇ ಭಯಕ್ಕೆ ಸುಮಾರು ಜನಾ ಸತ್ತು ಹೋಗುತ್ತಾರೆ ಎನ್ನುವಂತೆ ಗುರುವಾರ ರಾತ್ರಿಯಿಡೀ ಸರಿಯಾಗಿ ನಿದ್ದೆಯೇ ಬರಲಿಲ್ಲ. ಅಯ್ಯೋ ಕೋವಿಡ್ + ಬಂದರೆ ಹೇಗೆ ಎಂಬ ಆತಂಕದಲ್ಲಿಯೇ ಇಡೀ ರಾತ್ರಿ ಹಾಸಿಗೆಯಲ್ಲಿ ಅತ್ತಿಂದಿತ್ತ ಒದ್ದಾಡಿದೆ. ಅದಕ್ಕೆ ಸರಿಯಾಗಿ ಸ್ವಲ್ಪ ಜ್ವರವೂ ಕಾಣಿಸಿಕೊಂಡಿತು. ಬೆಳಿಗ್ಗೆ ನಿತ್ಯಕ್ರಮಗಳನ್ನು ಮುಗಿಸಿ ತಿಂಡಿ ತಿಂದು ಹತ್ತಿರದ PHCಯಲ್ಲಿ ಪರೀಕ್ಷೆ ಮಾಡಿಸಲು ಹೊರಟಾಗ, ಮನೆಯಾಕಿ, ರೀ ಅಪ್ಪಿ ತಪ್ಪಿ ಕೋವಿಡ್ + ಬಂದರೆ ಏನ್ರೀ ಮಾಡುವುದು ಎಂದಾಗ, ಕೋವಿಡ್ +ve ನಿಂದ -ve ಆದರೆ ಮನೆಯಲ್ಲಿ ಸಂಕ್ರಾಂತಿ ಅಂದರೆ ಸಂಭ್ರಮದ ವಾತಾವರಣ. ಅಕಸ್ಮಾತ್ ಗ್ರಹಚಾರ ಕೆಟ್ಟು, ಕೆಡುಕಾದಲ್ಲಿ ಎಲ್ಲರ ಓಂ ಶಾಂತಿ ಎಂದು ಹಾಸ್ಯ ಮಾಡಿ ಮೆನೆಯಿಂದ ಹೊರಬಿದ್ದೇ.

ಬೇರೆ ಕಡೆ ಹೇಗೋ ಏನೋ ನನಗೆ ತಿಳಿಯದು, ನಾನು ಹೋಗಿದ್ದ ತಿಂಡ್ಲಿವಿನ ವಿರೂಪಾಕ್ಷಪುರದ ಕೆನರಾಬ್ಯಾಂಕ್ ಲೇಔಟಿನ PHCಯ ಸಿಬ್ಬಂಧಿ ನಿಜಕ್ಕೂ ಜನಸ್ನೇಹೀಯಾಗಿದ್ದರು. ಸರದಿಯ ಸಾಲಿನಲ್ಲಿ ಎಲ್ಲರನ್ನೂ ನೋಂದಾವಣಿ ಮಾಡಿಸಿಕೊಂಡು ಅವರ mobile OTP register ಮಾಡಿಕೊಂಡು, ಗಂಟೆ ಹನ್ನೆರಡಕ್ಕೆ ಸರಿಯಾಗಿ PPE kit ಧರಿಸಿದ ವ್ಯಕ್ತಿಯೊಬ್ಬ ನಮ್ಮ ಮೂಗಿನೊಳಗಿನಿಂದ ದ್ರವವನ್ನು ತೆಗೆದು ಒಂದು Stripಗೆ ಹಾಕಿ ಒಂದೈದು ನಿಮಿಷ ಕಾಯಲು ತಿಳಿಸಿದರು. Pregnency Test ರೀತಿಯಲ್ಲಿ ಆ Strip ಬಣ್ಣದ ಅನುಗುಣವಾಗಿ instant +ve or -ve ನಿರ್ಧರಿಸುತ್ತಾರೆ. ಇಲ್ಲಿ ಅದೃಷ್ಟವಶಾತ್ -ve ಎಂದು ತೋರಿಸಿದಲ್ಲಿ ಅವರಿಗೆ ಮತ್ತೊಮ್ಮೆ swab ಎಂಬ ಗಂಟಲು ದ್ರವ ಪರೀಕ್ಷೇ ಮಾಡಿ ಅದನ್ನು Medical Labಗೆ ಕಳುಹಿಸಿ ಎರಡು ದಿನಗಳ ನಂತರ ಫಲಿತಾಂಶವನ್ನು ತಿಳಿಸುತ್ತಾರೆ. ದುರಾದೃಷ್ಟವಷಾತ್ instant testನಲ್ಲಿ +VE ಎಂದು ಬಂದರೆ ಅಂತಹವರ ಆರೋಗ್ಯದ ಪೂರ್ವಾಪರಗಳನ್ನು ವಿಚಾರಿಸಿ. ಅವರವರ ಅನುಕೂಲಕ್ಕೆ ತಕ್ಕಂತೆ ಸರ್ಕಾರೀ ಅಥವಾ ಖಾಸಗಿ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡುತ್ತಾರೆ. ಉಸಿರಾಟದ ಸಮಸ್ಯೆ, ಅಧಿಕ ರಕ್ತದೊತ್ತಡ, ಮಧುಮೇಹಿಗಳು ಮತ್ತು 60 ವರ್ಷಕ್ಕೆ ಮೇಲ್ಪಟ್ಟವರಿಗೆ ಖಡ್ಡಾಯವಾಗಿ ಆಸ್ಪತ್ರೆಗೆ ಸೇರಿಕೊಳ್ಳಲು ಸೂಚಿಸುತ್ತಾರೆ. ಪುಣ್ಯಕ್ಕೆ ನನಗೆ ಅಂತಹ ಯಾವುದೇ ಸಮಸ್ಯೆ ಇಲ್ಲದಿದ್ದ ಕಾರಣ ಮತ್ತು ಮನೆಯಲ್ಲಿ ಪ್ರತ್ಯೇಕ ಕೊಠಡಿ ಅದಕ್ಕೆ ಸೇರಿದಂತೆಯೇ ಶೌಚಾಲಯ ಮತ್ತು ನೋಡಿಕೊಳ್ಳಲು ಜನ ಇರುವ ಕಾರಣ home quarantine ಆಗಿ ಚಿಕಿತ್ಸೆ ಪಡೆಯಲು ತಿಳಿಸಿ, paracitamal, zinc tablets, azithromycin ಮಾತ್ರೆಗಳನ್ನು ಸೇವಿಸಲು ತಿಳಿಸಿ, ಪ್ರತೀ ದಿನ ಬೆಳಿಗ್ಗೆ ಮಧ್ಯಾಹ್ನ, ಸಂಜೆ ಮತ್ತು ರಾತ್ರಿ temperature, pulse & oxygen level ಪರೀಕ್ಷಿಸಿ ಅದನ್ನು ದಾಖಲು ಪಡಿಸಿ WhatsAPP ಮುಖಾಂತರ ತಿಳಿಸಲು ಹೇಳಿ, ದೈರ್ಯಗೆಡದಿರಿ ಸರಿಯಾದ ಚಿಕಿತ್ಸೆಯಿಂದಾಗಿ ಶೇ99 ರಷ್ಟು ಜನರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಹೇಳಿ ಶುಭ ಹಾರೈಸಿ ಕಳುಹಿಸಿದರು.

ಇಲ್ಲಿಂದ ನೋಡಿ ನಿಜವಾದ ಕಥೆ ಶುರುವಾಗುತ್ತದೆ. ಇಷ್ಟರಲ್ಲಾಗಲೇ ಹತ್ತು ಬಾರಿ ಮನೆಯಿಂದ ಆತಂಕದ ಕರೆಗಳು ಬಂದಿತ್ತು. ಹ್ಯಾಪು ಮೋರೆ ಹಾಕಿಕೊಂಡು ಮನೆಗೆ ಬಂದು ಪರಿಸ್ಥಿತಿಯನ್ನು ಮಡದಿ ಮಕ್ಕಳೊಡನೆ ತಿಳಿಸಿದಾಗ ಎಲ್ಲರೂ ಒಂದು ಕ್ಷಣ ದಿಗ್ರಾಂತರಾಗಿ ಕಡೆಗೆ ಆ ಕೊಠಡಿ, ಈ ಕೊಠಡಿ ಎಂದು ತಮ್ಮ ತಮ್ಮಲೇ ವಾದ ವಿವಾದಗಳನ್ನು ನಡೆಸಿ ಮೇಲಿನ ಕೊಠಡಿಗೆ ಹೋದರೆ ಅವರನ್ನು ನೋಡಿಕೊಳ್ಳಲು ಆಗದು ಹಾಗಾಗಿ ಕೆಳಗಿನ ಕೊಠಡಿಯೇ ಸೂಕ್ತ ಎಂದು ಕೆಳಗಿನ ಕೊಠಡಿಯಲ್ಲಿ ಸಕಲ ಏರ್ಪಾಟನ್ನು ಮಾಡುವಷ್ಟರಲ್ಲಿಯೇ ಬಿಬಿಎಂಪಿ call & SMS ಸುರಿಮಳೆ. ಸಾರ್, ನಿಮಗೆ ಗೊತ್ತೇ ನೀವು ಕೋವಿಡ್ +ve ವ್ಯಕ್ತಿಯಾಗಿದ್ದು home quarantine ಆಗಿ ಚಿಕಿತ್ಸೆ ಪಡೆಯಲು ಒಪ್ಪಿಕೊಂಡಿದ್ದೀರೀ. ನಿಮಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳು ನಿಮ್ಮ ಮನೆಯಲ್ಲಿ ಇದೆಯೇ, ನಿಮ್ಮ ಮನೆಯಲ್ಲಿ ಉಳಿದವರು ಯಾರು ಯಾರು ಇದ್ದಾರೆ? ಅವರೆಲ್ಲರ ಪರೀಕ್ಷೆಗಳನ್ನು ಮಾಡಿಸಿದಿದ್ದೀರಾ, ಕಳೆದ ಒಂದು ವಾರದಿಂದ ನೀವು ಭೇಟಿ ಮಾಡಿದ ಕನಿಷ್ಟ 20 ಜನರ ಹೆಸರು ಮತ್ತು ಅವರ ಮೊಬೈಲ್ ಸಂಖ್ಯೆ ನೀಡಿ. ನಿಮ್ಮ ಮನೆ ಎಲ್ಲಿ ಬರುತ್ತದೆ ನಾವು ಬಂದು ಪರೀಕ್ಷಿಸಬೇಕು ಹಾಗೆಯೇ ನಿಮ್ಮ ಅಕ್ಕ ಪಕ್ಕದವರೊಂದಿಗೆ ನಾವು ಮಾತನಾಡ ಬೇಕು, ಹೀಗೆ ಒಂದೇ ಸಮನೇ ಹತ್ತಾರು ಕರೆಗಳು ಮೊದಲ ಎರಡು ದಿನಗಳಲ್ಲಿ ಬಂದು ನಿಜಕ್ಕೂ ನಮ್ಮನ್ನು ಹತಾಶರಾನ್ನಾಗಿ ಮಾಡಿಬಿಡುತ್ತಾರೆ.

ಮುಳ್ಳಿನ ಮೇಲೆ ಬಿದ್ದ ಪಂಚೆಯನ್ನು ನಿಧಾನವಾಗಿ ತೆಗಯಲೇ ಬೇಕಾದಂತಹ ಅನಿವಾರ್ಯ ಪರಿಸ್ಥಿತಿಯಂತೆ ಅವರೆಲ್ಲರಿಗೂ ಅದಷ್ಟೂ ಸಮಚಿತ್ತದಿಂದ ಉತ್ತರಿಸಿ ಮಾಡಿದ ಮೊದಲ ಕೆಲವೆಂದರೆ, ಮಧ್ಯಾಹ್ನ ಮನೆಯ ಉಳಿದವರಿಲ್ಲರಿಗೂ ಪರೀಕ್ಷೆ ಮಾಡಿಸಿದ್ದು. ದೇವರ ದಯೆ ನನ್ನೊಬ್ಬನ ಹೊರತಾಗಿ ಉಳಿದವರೆಲ್ಲರದ್ದೂ -ve ಬಂದಿದ್ದರಿಂದ ಮನೆಯಲ್ಲಿ ಸ್ವಲ್ಪ ನಿರಾಳ.

ಮೊದಲ ಎರಡ್ಮೂರು ದಿನ ಬಿಬಿಎಂಪಿ ಸಿಬ್ಬಂಧಿಗಳು ನಮ್ಮನ್ನು ಹೈರಾಣಾಗಿಸಿಬಿಡುತ್ತಾರೆ. ಇದೆಲ್ಲಾ ಬಿಟ್ಟು ಸುಮ್ಮನೆ ಯಾವುದಾದರೂ ಆಸ್ಪತ್ರೆಗೆ ಹೋಗಿ ಸೇರಿಕೊಂಡಿದ್ದರೇ ಉತ್ತಮವಾಗುತ್ತಿತ್ತೇನೋ ಎನಿಸದೇ ಇರುವುದಿಲ್ಲ. ಇದೆಲ್ಲದರ ಸಿಟ್ಟು ಮತ್ತು ಸೆವಡುಗಳನ್ನು ಮನೆಯವರು ಎಷ್ಟೇ ಚೆನ್ನಾಗಿ ನೋಡಿಕೊಂಡರೂ ನಮಗೆ ಅದೆಂತಹದ್ದೋ ಸಿಡಿಮಿಡಿಯಾಗಿ ಅವರ ಮೇಲೆ ಹರಿ ಬಿಟ್ಟಿದ್ದೂ ಉಂಟು.

ಮೊದಲು ಯಾರಿಗೂ ಹೇಳಬಾರದು ಎಂದು ಅಂದು ಕೊಂಡರೂ ನಿಧಾನವಾಗಿ ಮನಸ್ಸಿಗೆ ತಡೆಯದೆ ಒಬ್ಬಿಬ್ಬರು ಆತ್ಮೀಯರಿಗೆ ಕರೆ ಮಾಡಿ ವಿಷಯ ತಿಳಿಸಿದ್ದೇ ತಡ, ಯಾರಿಗೂ ಹೇಳಬೇಡಿ ಶ್ರೀಕಂಠನಿಗೆ ಕೋವಿಡ್ +ve ಅಂತೇ ಅಂತಾ ನನ್ನ ಮೇಲೆ ಅಕ್ಕರೆಯಿಂದಲೂ ಅಥವಾ ತಿಳಿಯದೆಯೋ ನಿಧಾನವಾಗಿ ಗೆಳೆಯರ ಗುಂಪಿಗೆ ಗೊತ್ತಾಗುತ್ತಿದ್ದಂತೆಯೇ ದೇಶ ವಿದೇಶಗಳಿಂದ ಕರೆಗಳ ಸುರಿಮಳೆ ಯಾಗುವುದನ್ನು ನೋಡಿ ನಿಜಕ್ಕೂ ಅರೇ, ನನ್ನ ಹಿತೈಷಿಗಳ ಬಳಗ ಇಷ್ತೊಂದು ಸಂಖ್ಯೆಯಲ್ಲಿಯೇ ಎಂದು ನನಗೇ ಆಶ್ವರ್ಯವಾಯಿತು. ಕರೆ ಮಾಡಿದರೆ ಬೇಜಾರಿಲ್ಲಾ ಎಲ್ಲರೂ ತಲಾ ತಟ್ಟಿ ಒಂದೊಂದು ರೀತಿಯ ಚಿಕಿತ್ಸಾ ವಿಧಾನಗಳನ್ನು ಸೂಚಿಸುವುದಲ್ಲದೇ, ನಾನು ಅದನ್ನು ಪರಿಪಾಲಿಸುತ್ತಿದ್ದೇನೋ ಇಲ್ಲವೋ ಎಂದು ಮೂರ್ನಾಲ್ಕು ಬಾರಿ ಕರೆ ಮಾಡಿ ವಿಚಾರಿಸಿಕೊಳ್ಳುವವರಿಗೇನೂ ಕಡಿಮೆ ಇಲ್ಲ.

ಜೀವ ಇದ್ದರೆ ತಾನೇ, ಜೀವನ ಎಂದು ನಾನೇ ಕೆಲವು ದಿನಗಳ ಹಿಂದೆ ಕೋವಿಡ್ ಕುರುತಾದ ಲೇಖನ ಬರೆದಿದ್ದೆ. ಈ ಕೋರಾನಾ ಮಹಾಮಾರಿಗೆ ಯಾವುದೇ ನಿರ್ಧಿಷ್ಟವಾದ ಔಷಧಿ ಇಲ್ಲದಿದ್ದ ಕಾರಣ PHC ನೀಡಿದ್ದ ಇಂಗ್ಲೀಷ್ ಔಷಧಿಗಳೊಡನೇ ಈಗಾಗಲೇ ಸಾಭೀತಾಗಿರುವ ಗಿರಿಧರ್ ಕಝೆಯವರ ಔಷದಿಗಳ ಜೊತೆ, ದಿನಕ್ಕೆರಡು ಬಾರಿ ಉಪ್ಪುನೀರಿನ ಮುಕ್ಕಳಿಸುವಿಕೆಯ ಜೊತೆ ಬಿಸಿ ನೀರಿನ ಹಬೆಯನ್ನು ತೆಗೆದುಕೊಳ್ಳುವುದರ ಜೊತೆ ಅರಿಶಿನ ಕೊಂಬನ್ನು ಸುಟ್ಟು ಅದರ ಹೊಗೆಯನ್ನು ನೇರವಾಗಿ ಮೂಗು ಮತ್ತು ಗಂಟಲಿಗೆ ತೆಗೆದುಕೊಳ್ಳುವ ವಿಧಾನವನ್ನು ಅನುಸರಿಸಿದೆ. ಏನೇ ತಿಂದರೂ ಬಿಸಿಯಾಗಿ ತಿಂದಿದ್ದಲ್ಲದೇ, ದಿನಕ್ಕೂ ಹತ್ತಾರು ಲೋಟ ಬಿಸಿ ಬಿಸಿ ನೀರನ್ನು ಕುಡಿಯುವುದು ಉತ್ತಮ.

ಸುಮಾರು ಮೂವತ್ತು ವರ್ಷಗಳ ಹಿಂದೆ ನಮ್ಮ ಸಹೋದರಿಯರು ಮೈನೆರೆದಾಗ ಅವರನ್ನು ಮೆನೆಯ ಮೂಲೆಯೊಂದರಲ್ಲಿ ಒಂದು ವಾರದವರೆಗೆ ಕೂರಿಸಿ ಅವರಿಗೆ ಶಕ್ತಿ ಬರುವಂತಹ ಊಟೋಪಚಾರ ಮಾಡಿದಂತೆ ನನ್ನನ್ನೂ ಒಂದು ಕೊಠಡಿಯೊಂದರಲ್ಲಿ ಬಂಧಿ ಮಾಡಿ ಹೊತ್ತು ಹೊತ್ತಿಗೆ ಸರಿಯಾಗಿ ಬಿಸಿ ಬಿಸಿಯಾದ ಶುಚಿ ರುಚಿಯಾದ ತಿಂಡಿ, ತೀರ್ಥಗಳು ಮತ್ತು ಊಟೋಪಚಾರಗಳನ್ನು ಹಾಕುತ್ತಿದ್ದದ್ದು ನೆನಪಿಗೆ ಬಂದಿತ್ತು. ಕಳೆದ ಹತ್ತು ದಿನಗಳಿಂದ ನನ್ನ ಕೊಠಡಿಯ ಹೊಸಿಲನ್ನೂ ದಾಡದೇ home quarantine ಆಗಿದ್ದೇನೆ.

ಸುಮಾರು ಐದು ದಿನಗಳ ನಿರಂತರ ಚಿಕಿತ್ಸಾ ಕ್ರಮದ ನಂತರ ಬಿಟ್ಟು ಬರುತ್ತಿದ್ದ ಜ್ವರ ಹಂತ ಹಂತವಾಗಿ ಸಂಪೂರ್ಣ ನಿಂತು ಹೋಯಿತಾದರೂ, ಒಣ ಕೆಮ್ಮು ಮತ್ತು ಕಫ ಹಾಗೆಯೇ ಮುಂದುವರೆಯಿತು. ಪ್ರತೀ ದಿನವೂ ಕರೆಮಾಡಿ ಆರೋಗ್ಯವನ್ನು ವಿಚಾರಿಸುತ್ತಿದ್ದ ವೈದ್ಯರೊಡನೆ ಸಮಾಲೋಚನೆ ಮಾಡಿ ಅವರು ಹೊಸದಾಗಿ ಬರೆದುಕೊಟ್ಟ ಮಾತ್ರೆಯ ಮುಖಾಂತರ ಕೆಮ್ಮೂ ಕೂಡಾ ಕಡಿಮೆಯಾಗಿ ಇವತ್ತಿಗೆ ನನ್ನ ಹತ್ತು ದಿನಗಳ ಚಿಕಿತ್ಸೆ ಸಂಪೂರ್ಣವಾಗಿದೆ. ನಾಳೆ ಬೆಳಿಗ್ಗೆ ಪುನಃ PHCಗೆ ಪುನಃ ಮತ್ತೊಮ್ಮೆ ಪರೀಕ್ಷಿಸಿಕೊಂಡು ಬರಲು ವೈದ್ಯರು ಸೂಚಿಸಿದ್ದಾರೆ. ಭಗವಂತನ ಆಶೀರ್ವಾದ ಮತ್ತು ನಿಮ್ಮಂತಹ ಆತ್ಮೀಯರ ಶುಭಹಾರೈಕೆಗಳ ಫಲವಾಗಿ ಕೋವಿಡ್ +ve -ve ಆಗಿಬರಲಿ ಎಂದು ಆಶಿಸೋಣ.

ಇಲ್ಲಿ ಗಮನಿಸಿಸಬೇಕಾದ ಮತ್ತೊಂದು ಅಂಶವೆಂದರೆ ಕೊರೋನಾ ರೋಗಲಕ್ಷಣಗಳು ಎಲ್ಲರಿಗೂ ಒಂದೇ ರೀತಿಯಾಗಿರುವುದಿಲ್ಲ. ಬಹುತೇಕರಿಗೆ ವಾಸನೆ ಮತ್ತು ರುಚಿ ಇರುವುದಿಲ್ಲ. ಆದರೆ ನನಗೆ ಜ್ವರ, ನೆಗಡಿ ಮತ್ತು ಕೆಮ್ಮು ಇತ್ತೇ ಹೊರತು ರುಚಿ ಮತ್ತು ವಾಸನೆ ಮೊದಲನೇ ದಿನದಿಂದಲೂ ಚೆನ್ನಾಗಿಯೇ ಇತ್ತು. ಬಹುಶಃ ಜ್ವರ ಬಂದಿದ್ದರಿಂದಲೋ ಏನೋ ಏನೇ ತಿಂದರೂ ಕಹಿ ಕಹಿ ಎನಿಸುತ್ತಿದ್ದ ಕಾರಣ, ಹೇರಳೇಕಾಯಿ ಉಪ್ಪಿನಕಾಯಿ ತಿನ್ನುತ್ತಿದ್ದೆ.

ಮತ್ತೊಂದು ವಿಷಯವೆಂದರೆ ಕೋವಿಡ್ ಸೋಂಕಿತರಿಗೆ ಬಹಳ ಸುಸ್ತಾಗುವ ಕಾರಣ, ಎಷ್ಟು ಸಾಧ್ಯವೋ ಅಷ್ಟು ವಿಶ್ರಾಂತಿ ಪಡೆಯುವುದು ಅತ್ಯವಶ್ಯಕ. ನಾನಂತೂ ದಿನಕ್ಕೆ 12-15 ಗಂಟೆಗಳ ಕಾಲ ನಿದ್ದೆ ಮಾಡುತ್ತಿದ್ದೆ.

ಕೋರೋನಾ ಸಮಯದಲ್ಲಿ ನಮ್ಮೊಂದಿಗೆ Thermometer, Oximeter, inhalation kit ಬೆಚ್ಚಗಿನ ಹೊದಿಕೆ ಜೊತೆಯಲ್ಲಿ ಇಟ್ಟುಕೊಳ್ಳುವುದು ಉತ್ತಮ.

ಕಣ್ಣಿಗೆ ಕಾಣದ ವೈರಾಣು ಎಂದು ದಯವಿಟ್ಟು ಉಡಾಫೆ ಮಾಡದೇ, ಸುಮ್ಮನೇ ಎಲ್ಲೆಂದರೆಲ್ಲಿ ಅಂಡಲಯದೇ, ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರವೇ ಮನೆಯಿಂದ ಮಾಸ್ಕ್ ಸಮೇತರಾಗಿಯೇ ಓಡಾಡುತ್ತಾ, ಕೆಮ್ಮು, ಗಂಟಲು ನೋವು, ಗಂಟಲು ಕೆರೆತ, ಜ್ವರ ತಲೇನೋವು ಯಾವುದೇ ರೀತಿಯ ಸಮಸ್ಯೆಗಳು ಕಂಡು ಬಂದಲ್ಲಿ ನಿರ್ಲಕ್ಷಿಸದೇ, ಎಲ್ಲಕ್ಕಿಂತಲೂ ಹೆಚ್ಚಾಗಿ ಸ್ವವೈದ್ಯಕೀಯ ಪದ್ದತಿಯನ್ನು ಮಾಡಿಕೊಳ್ಳದೇ, ತಜ್ಞ ವೈದ್ಯರೊಂದಿಗೆ ಸಮಾಲೋಚನೆ ಮಾಡಿ ಅವರು ಹೇಳಿದಂತೆ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಕೋರೋನಾದಿಂದ ಮುಕ್ತಿ ಹೊಂದ ಬಹುದಾಗಿದೆ.

ಮತ್ತೆ ಎಲ್ಲರೂ ಮುಕ್ತವಾಗಿ ಪರಸ್ಪರ ಭೇಟಿಯಾಗುವ ಸಂದರ್ಭ ಬಂದೇ ಬರುತ್ತದೆ ಎನ್ನುವ ಆಶಾವಾದಿಗಳಾಗೋಣ

ಏನಂತೀರೀ?

2 thoughts on “ಶ್ರೀಕಂಠ, ವಿಷಕಂಠ, ನೀಲಕಂಠ

  1. ನಿಮ್ಮ ಕೊರೋನಾ ಪುರಾಣ ನೋಡಿದೆ. ನಾನೂ ಮಾಸ್ಕ್ ಧರಿಸಿ ಜನಸಂದಣಿಗೆ ಹೋಗದೆ ಬಿಸಿನೀರು ಕುಡಿಯುತ್ತಾ ಉಪ್ಪುನೀರಿನ ಗಾರ್ಗ್ಲಿಂಗ್ ಮಾಡುತ್ತಿದ್ದೆ. ಆದರೂ ನನಗೆ ಲೈಟಾಗಿ ಜ್ವರ ಬಂತು. ಡೋಲೊ 650 ಮಾತ್ರೆ ತೊಗೊಂಡೆ. ಆದರೂ ಜ್ವರ ಬಂದುಹೋಗಿ ಮಾಡುತ್ತಿತ್ತು. ನಂತರ ಕೋವಿಡ್ ಪರೀಕ್ಷೆ ಮಾಡಿಸಿದೆ. ಮಾರನೆಯ ದಿವಸವೇ ಬಿಬಿಎಂಪಿ ಕಡೆಯಿಂದ ಮೆಸೇಜ್ ಮತ್ತು ಫೋನ್ ಬಂತು. ನಿಮಗೆ ಪಾಸಿಟೀವ್ ಬಂದಿದೆ. ಸರ್ಕಾರಿ ಆಸ್ಪತ್ರೆಗೆ ಸೇರ್ತೀರೋ ಖಾಸಗಿ ಆಸ್ಪತ್ರೆಗೆ ಸೇರುತ್ತೀರೋ ಹೇಳಿ ಅಂದರು. ಅರ್ಧ ಗಂಟೆಗೊಂದು ಸಾರಿ ಫೋನ್ ಬರುತ್ತಲೇ ಇತ್ತು. ಕೊನೆಗೆ KIMS ಆಸ್ಪತ್ರೆಗೆ ಸೇರಿದೆ. ಮನೆ ಹತ್ತಿರ ಸುತ್ತಮುತ್ತ ಎಷ್ಟೇ ಮುಚ್ಚಿಟ್ಟರೂ ಎಲ್ಲರಿಗೂ ಗೊತ್ತಾಯಿತು. ಬಿಬಿಎಂಪಿಯವರು ಆಸ್ಪತ್ರೆಗೆ ಸೇರಿದರೂ ಇಪ್ಪತ್ತು ಸಾರಿ ಎಲ್ಲಿದ್ದೀರಿ, ನಿಮ್ಮ ಮನೆ ಅಡ್ರೆಸ್ ಕೊಡಿ ಎಂದು ಕೇಳುತ್ತಲೇ ಇದ್ದರು. ಕೊನೆಗೆ ಆಸ್ಪತ್ರೆಯಲ್ಲಿ ಹತ್ತು ದಿನ ಇದ್ದುಬಂದೆ. ಆದರೂ ಇನ್ನು ಎರಡು ವಾರ ಹುಷಾರಾಗಿರಬೇಕು ಎಂದು ಹೇಳಿದ್ದಾರೆ. ನನ್ನ ದುರಾದೃಷ್ಟ ನನ್ನ ಹೆಂಡತಿ ಮತ್ತು ಚಿಕ್ಕ ಮಗನಿಗೂ ಬಂದಿದೆ. ಅವರು ಮನೆಯಲ್ಲಿದ್ದುಕೊಂಡೇ ವೈದ್ಯರ ಸಲಹೆಯಂತೆ ಟ್ರೀಟ್ಮೆಂಟ್ ಪಡೆಯುತ್ತಿದ್ದಾರೆ.ವಿದು ನನ್ನ ಕೋವಿಡ್ ಪುರಾಣ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s