ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗ ಬೇಕಾದ ಅನಿವಾರ್ಯ ಸಂದರ್ಭಗಳು ಬಂದಾಗ ಎಲ್ಲೋ ಉಳ್ಳವರು ತಮ್ಮದೇ ವಾಹನಗಳಲ್ಲಿಯೋ ಇಲ್ಲವೇ, ಬಾಡಿಗೆ ವಾಹನ ಮಾಡಿಕೊಂಡು ಹೋದರೆ ಬಹುತೇಕರು ವಿಧಿ ಸರ್ಕಾರಿ/ಖಾಸಗೀ ಬಸ್ ಇಲ್ಲವೇ ರೈಲುಗಳನ್ನು ಅವಲಂಭನೆ ಮಾಡಲೇ ಬೇಕಾಗುತ್ತದೆ. ಹಾಗೆ ಪರ ಊರಿಗೆ ಹೋಗುವಾಗ ಸಮಯ ಉಳಿಸುವ ಸಲುವಾಗಿ ಬಹುತೇಕರು ರಾತ್ರಿಯ ಪ್ರಯಾಣ ಮಾಡಲು ಇಚ್ಚಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಸ್ಲೀಪರ್ ಅಥವಾ ಸೆಮಿ ಸ್ಲೀಪರ್ ಕೋಚ್ ಬಸ್ಸಿನಲ್ಲಿ ಸೀಟ್ ಬುಕ್ ಮಾಡಿ, ರಾತ್ರಿ ತಮ್ಮ ಕೆಲಸವನ್ನು ಮುಗಿಸಿಕೊಂಡು ಊಟ ಮಾಡಿ ಬಸ್ ಹತ್ತಿ ನಿದ್ರೆ ಮಾಡಿದ್ರೇ ಬೆಳಗಾಗುವಷ್ಟರಲ್ಲಿ ತಲುಪಬೇಕಾದ ಸ್ಥಳವನ್ನು ತಲುಪಬಹುದು ಎನ್ನುವುದು ಎಲ್ಲರ ಲೆಖ್ಖಾಚಾರ. ಹೀಗೆ ಲೆಖ್ಖಾಚಾರ ಹಾಕಿಕೊಂಡು ರಾತ್ರೀ ಪ್ರಯಾಣಿಸುವವರ ಲೆಖ್ಖಾಚಾರವನ್ನು ನಮಗೇ ಗೊತ್ತಿಲ್ಲದಂತೆ ಬುಡಮೇಲು ಮಾಡುವರು ಇರುತ್ತಾರೆ ಎನ್ನುವ ಭಯಾನಕ ಅನುಭವಗಳು ಇದೋ ನಿಮಗಾಗಿ.
ಶಂಕರನಿಗೆ ಕೆಲದ ನಿಮಿತ್ತ ಇದ್ದಕ್ಕಿಂದ್ದತೆಯೇ ಮಂಗಳೂರಿಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿತ್ತು. ಎಷ್ಟೇ ಕಷ್ಟ ಪಟ್ಟರೂ ಅಲ್ಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಆಗದೇ, ಹೋಗುವಾಗಾ ಹೇಗೋ ತನ್ನ ಸ್ನೇಹಿತರ ಕಾರಿನಲ್ಲಿ ಮಂಗಳೂರಿಗೆ ತಲುಪಿ ತನ್ನ ಕೆಲಸವನ್ನು ಮುಗಿಸಿಕೊಂಡು ಸಂಜೆಯ ರೈಲಿನ ಟಿಕೆಟ್ ಸಿಗದ ಕಾರಣ, ಕಡೇ ಸಮಯದಲ್ಲಿ ಟಿಕೆಟ್ ಬುಕ್ ಮಾಡಿದ ಪರಿಣಾಮ ಸೆಮೀ ಸ್ಲೀಪರಿನ ಕಡೆಯ ಸೀಟ್ ಸಿಕ್ಕಿತ್ತು. ಪಾಲಿಗೆ ಬಂದಿದ್ದೇ ಪಂಚಾಮೃತ ಎಂದು ಸೀಟ್ ಪಕ್ಕದಲ್ಲಿಯೇ ಲ್ಯಾಪ್ಟ್ಯಾಪ್ ಇಟ್ಟುಕೊಂಡು ಇನ್ನೇನು ನಿದ್ದೆಗೆ ಜಾರ ಬೇಕು ಎಂದುಕೊಳ್ಳುತ್ತಿದ್ದ ಸಮಯದಲ್ಲಿಯೇ ಬಸ್ಸಿಗೆ ಹತ್ತಿಕೊಂಡ ಮಧ್ಯ ವಯಸ್ಸಿನ ತರುಣನೊಬ್ಬ ಬ್ಯಾಗ್ ಹಿಡಿದುಕೊಂಡು ಸೀದಾ ಶಂಕರನ ಪಕ್ಕದ ಸೀಟಿಗೆ ಬಂದು ಕುಳಿತುಕೊಂಡು ನಮಸ್ಕಾರ ಸಾರ್! ಎಂದರು ನಿದ್ದೆ ಗಣ್ಣಿನಲ್ಲಿಯೇ ನಮಸ್ಕಾರಗಳನ್ನು ಹೇಳಿದ ನಂತರ, ಎಲ್ಲಿ ಬೆಂಗಳೂರಾ ಎಂದು ಕೇಳಿದಾಗ ಹೌದು ಎಂದ ಶಂಕರ ಎಲ್ಲಿ ಇಳೀತೀರೀ ಎಂದಾಗ ಮೆಜೆಸ್ಟಿಕ್ ಎಂದು ಹೇಳಿ ಹೆಚ್ಚಿನ ಮಾತು ಮುಂದುವರಿಸದೇ ನಿದ್ದೆಗೆ ಜಾರಿದ.
ಮಾರ್ಗದ ಮಧ್ಯದಲ್ಲಿ ಮಧ್ಯರಾತ್ರಿಯ ಸಮಯದಲ್ಲಿ ಕಾಫೀಗೆಂದು ನಿಲ್ಲಿಸಿದಾಗ ಎಚ್ಚರಗೊಂಡ ಶಂಕರ, ಪಕ್ಕದ ಸೀಟಿನ ಸಹಪ್ರಯಾಣಿಕರಿಗೆ ತೊಂದರೆಯಾಗದಂತೆ ಬಸ್ ಇಳಿದು ಕಾಫಿ ಕುಡಿದು ತನ್ನ ಸೀಟಿನಲ್ಲಿ ಕುಳಿತಾಗಲೂ ಪಕ್ಕದ ಸೀಟಿನ ಯುವಕ ಮಲಗಿಯೇ ಇದ್ದ. ಇನ್ನೊಬ್ಬರ ಉಸಾಬರಿ ತನಗೇಕೆ ಎಂದು, ಹುಡುಗ ಹೇಗೂ ಮಲಗಿದ್ದಾನೆ ಎಂದು ಕೊಂಡು ಲ್ಯಾಪ್ಟ್ಯಾಪ್ ಬ್ಯಾಗನ್ನು ಸೀಟಿನ ಕೆಳಗೆ ಇಟ್ಟು ಕಣ್ಣು ಮುಚ್ಚಿದ್ದೇ ತಡ ನಿದ್ದೆಗೆ ಹೋಗಿದ್ದೇ ಗೊತ್ತಾಗಲಿಲ್ಲ. ಅದೇಕೋ ಏನೋ, ಯಾರೋ ಅಡ್ಡ ಬಂದರೋ ಎನ್ನುವ ಕಾರಣಕ್ಕೆ ಚಾಲಕ, ಇದ್ದಕ್ಕಿದ್ದಂತೆಯೇ ಬ್ರೇಕ್ ಹಾಕಿದಾಗಲೇ ಶಂಕರಿನಿಗೆ ಎಚ್ಚರವಾಯಿತು. ಎಚ್ಚರ ಆದ ಕೂಡಲೇ ಬೆಳಕು ಹರಿಯುತ್ತಿದ್ದರಿಂದ ಎಲ್ಲಿದ್ದೀವಿ ಎಂದು ನೋಡಲು ಪಕ್ಕಕ್ಕೆ ತಿರುಗುತ್ತಾನೆ. ಪಕ್ಕದ ಸೀಟಿನ ಯುವಕ ಅಲ್ಲಿಲ್ಲ. ಕೂಡಲೇ ಸೀಟಿನ ಕೆಳಗಿನ ಲ್ಯಾಪ್ಟ್ಯಾಪ್ ಬ್ಯಾಗ್ ಇದೆಯಾ ಅಂತ ನೋಡಲು ಕೈ ಹಾಕಿದ್ರೇ, ಎದೆ ಧಸಕ್ ಎಂದಿತು. ಅವನ ಲ್ಯಾಪ್ಟ್ಯಾಪ್ ಬ್ಯಾಗ್ ಬದಲಾಗಿ ಆ ಹುಡುಗ ತಂದಿದ್ದ ಕಿತ್ತೋಗಿರೋ ಬ್ಯಾಗ್ ಇದೆ. ಕೂಡಲೇ ಎದ್ದು ಅಯ್ಯೋ ಕಳ್ಳಾ ಕಳ್ಳಾ ಎಂದು ಜೋರಾಗಿ ಕಿರುಚುತ್ತಾ ಡ್ರೈವರ್ ಅವರ ಬಳಿ ಹೋದ ತಕ್ಷಣವೇ ಕ್ಲೀನರ್ ಏನಾಯ್ತು ಸರ್ ಎಂದು ಕೇಳಿದ್ದಾನೆ. ಕೂಡಲೇ ಎಲ್ಲವನ್ನು ವಿವರಿಸಿದಾಕ್ಷಣ, ಸರ್ ಇನ್ನೂ ಬಸ್ಸಿನಿಂದ ಯಾರೂ ಇಳ್ದಿಲ್ಲ. ನಿಮ್ಮ ಪಕ್ಕದ ಸೀಟಿನವರು ಬಸ್ ಇಳಿಯಲು ಹೋಗಿದ್ದಾರೆ ನೋಡಿ ಎಂದಿದ್ದನ್ನು ಕೇಳಿದ್ದೇ ತಡ ಧಡ ಧಡಾ ಎಂದು ಹೋಗಿ ನೋಡಿದರೇ, ಶಂಕರನ ಲ್ಯಾಪ್ ಟ್ಯಾಪ್ ಬ್ಯಾಗ್ ನೇತು ಹಾಕಿಕೊಂಡು ಇನ್ನೇನು ಬಸ್ಸು ಇಳಿಯುವುದರಲ್ಲಿ ಇದ್ದ ಆ ಯುವಕ. ಏಯ್ ನಂದೂ ಬ್ಯಾಗೂ ಎಂದು ಹೇಳಿದಾಕ್ಷಣ, ಎನೂ ಆಗೇ ಇಲ್ಲದಂತೇ ಓ, ಸಾರಿ ಸರ್, ನಿದ್ದೆಯ ಮಂಪರಿನಲ್ಲಿ ನಿಮ್ಮ ಬ್ಯಾಗ್ ತೆಗೆದುಕೊಂಡು ಬಂದಿದ್ದೀನಿ ಎಂದು ಹೇಳುತ್ತಾ ತನಗೇನೂ ಗೊತ್ತಿಲ್ಲದಂತೆ ಶಂಕರನ ಬ್ಯಾಗ್ ಕೈಗಿತ್ತು ತನ್ನ ಬ್ಯಾಗ್ ತೆಗೆದುಕೊಂಡು ಸರ ಸರನೆ ಬಸ್ ಇಳಿದು ಹೋರಟೇ ಬಿಟ್ಟ.
ಶಂಕರನ ಅದೃಷ್ಟ ಚೆನ್ನಾಗಿದ್ದ ಕಾರಣ, ಬಸ್ಸಿಗೆ ಯಾರೋ ಅಡ್ಡ ಬಂದು ಬ್ರೇಕ್ ಹಾಕಿದ ಪರಿಣಾಮ ಶಂಕರನ ಲ್ಯಾಪ್ ಟ್ಯಾಪ್ ಬ್ಯಾಗ್ ಅವನಿಗೆ ಸಿಕ್ಕಿತ್ತು ಇಲ್ಲವಾಗಿದ್ದಲ್ಲಿ ನಾಜೂಕಾಗಿ ಎತ್ತಿಕೊಂಡು ಹೋಗಿರುತ್ತಿದ್ದ ಆ ಸಹ ಪ್ರಯಾಣಿಕ.
ಅಷ್ಟು ಹೊತ್ತಿಗೆ ಇಡೀ ಬಸ್ಸಿನವರೆಲ್ಲಾ ಎಚ್ಚೆತ್ತು ಸರ್ ಸುಮ್ಮನೇ ಬಿಡ್ಬಾರ್ದಾಗಿತ್ತು ಅವನನ್ನು ಹಿಡಿದು ಪೋಲೀಸರಿಗೆ ಒಪ್ಪಿಸಬೇಕಾಗಿತ್ತು ಎಂದು ತಲಾ ತಟ್ಟಿಗೆ ಒಂದೊಂದು ಸಲಹೆ ಕೊಟ್ಟರು. ಸರಿ ಹೇಗೋ ಬ್ಯಾಗ್ ಸಿಕ್ಕಿತಲ್ಲ ಎನ್ನುವ ಸಂತೋಷದಲ್ಲಿ ತನ್ನ ಸೀಟ್ನಲ್ಲಿ ಬಂದು ಕುಳಿತಾಗ ಅವನ ಸೀಟಿನ ಮುಂದೆ ಇದ್ದ ವಯೋವೃದ್ಧ್ರರು ಹೇಳಿದ ಇದೇ ರೀತಿಯ ಪ್ರಸಂಗ ಮತ್ತಷ್ಟೂ ರೋಚಕವಾಗಿತ್ತು.
ಉಡುಪಿಯ ಶ್ರೀಯುತರ ಸಂಬಂಧಿಗಳ ಮದುವೆ ಮುಗಿಸಿ ಎಲ್ಲರೂ ಇದೇ ರೀತಿ ರಾತ್ರಿಯ ಬಸ್ಸಿನಲ್ಲಿ ಬೆಂಗಳೂರಿಗೆ ಹಿಂದಿರುಗುತ್ತಿದ್ದಾರೆ. ಮದುವೆಗೆ ವಧುವಿಗೆ ಹಾಕಿದ್ದ ಆಭರಣಗಳೆಲ್ಲವನ್ನೂ ಒಂದು ಬ್ಯಾಗಿನಲ್ಲಿ ಹಾಕಿ ಅದನ್ನು ತಮ್ಮ ಸೀಟಿನ ಮೇಲೆ ಇಟ್ಟು ಎಲ್ಲರೂ ನಿದ್ದೆಗೆ ಜಾರಿ ಹೋಗಿದ್ದಾರೆ. ಬೆಳಗಿನ ಜಾವ ಬೆಂಗಳೂರಿಗೆ ಬಂದಾಗ ಎದ್ದು ನೋಡಿದರೇ ಆಭರಣಗಳಿದ್ದ ಬ್ಯಾಗ್ ನಾಪತ್ತೆಯಾಗಿತ್ತು. ಎಲ್ಲರೂ ಎದೆ ಎದೆ ಬಡಿದುಕೊಂಡು ಅತ್ತರೇ, ಹುಡುಗನ ತಾಯಿ ನೇರವಾಗಿ ನಮ್ಮ ಮನೆಗೆ ಮಹಾಲಕ್ಷ್ಮಿ ಆಗಿ ಬರಬೇಕಾದವಳು, ಅಪಶಕುತನದಂತೆ ದರಿದ್ರ ಲಕ್ಷ್ಮಿಯಂತೆ ಬಂದಳಲ್ಲಪ್ಪಾ ಎಂದು ಗೋಳೋ ಎಂದು ಏನೂ ಅರಿಯದ ಹುಡುಗಿಯ ಮೇಲೆ ಆಪಾದನೆ ಬಸ್ಸಿನಲ್ಲಿಯೇ ಮಾಡುತ್ತಾರೆ.
ಹುಡುಗಿಯ ಕಡೆಯವರು ತಮ್ಮದಲ್ಲದ ತಪ್ಪಿಗೆ ತಮ್ಮ ಹುಡುಗಿ ಜೀವನ ಪರ್ಯಂತ ನರಳಬೇಕಲ್ಲಾ ಎಂದು ಬೇಸರಿಗಿಕೊಂಡು ತಮಗಿದ್ದ ಅಲ್ಪ ಸ್ವಲ್ಪ ಶಿಫಾರಸ್ಸನ್ನು ಬಳಸಿ ಪೋಲೀಸ್ ಕಮಿಷಿನರ್ ಅವರ ತನಕ ಈ ಕೇಸ್ ತಲುಪುವಂತೆ ಮಾಡುತ್ತಾರೆ. ಪೋಲೀಸ್ ಕಮಿಷಿನರ್ ಖುದ್ದಾಗಿ ಆಸ್ಥೆ ವಹಿಸಿದ್ದಾರೆ ಎಂಬ ಕಾರಣದಿಂದ ತನಿಖೆ ಚುರುಕಾಗಿ ಬಸ್ಸಿನ ಮಾಲಿಕರು, ಕ್ಲೀನರ್ ಮತ್ತು ಚಾಲಕರನೆಲ್ಲಾ ಒಂದು ಸುತ್ತಿನ ತನಿಖೆ ನಡೆಸಿ ಈ ರೀತಿಯ ಪ್ರಸಂಗಗಳು ಎರಡು ಮೂರು ತಿಂಗಳಿಗೊಮ್ಮೆ ಅವರ ಬಸ್ಸಿನಲ್ಲಿ ಆಗುತ್ತಿರುತ್ತದೆ ಎಂದು ತಿಳಿಸಿದ್ದಾರೆ. ಈ ಕುರಿತಂತೆ ಯಾವುದೇ ಹೆಚ್ಚಿನ ಮಾಹಿತಿ ದೊರೆತಲ್ಲಿ ತಮಗೆ ತಿಳಿಸಬೇಕೆಂದು ಎಚ್ಚರಿಕೆ ನೀಡಿ ಕಳುಹಿಸಿದ್ದರು.
ಹುಡುಗಿಯ ಮನೆಯವರು ಪ್ರತೀ ವಾರಕ್ಕೊಮ್ಮೆ ಬಸ್ಸು ಮತ್ತು ಪೋಲೀಸ್ ಸ್ಟೇಷನ್ನಿಗೆ ಹೋಗಿ ಏನಾದಾರೂ ಮಾಹಿತಿ ಸಿಕ್ಕಿತೇ ಎಂದು ಪದೇ ಪದೇ ವಿಚಾರಿಸುತ್ತಾ ಕಮಿಷಿನರ್ ಕಡೆಯಿಂದಲೂ ತನಿಖಾಧಿಕಾರಿಗಳಿಗೆ ಕರೆ ಮಾಡಿಸುತ್ತಾ ಒತ್ತಡ ಹೇರುತ್ತಿದ್ದರು. ಅದೊಂದು ದಿನ ಬಸ್ಸಿನ ಚಾಲಕ ಕರೆ ಮಾಡಿ ಸರಿ ಇವತ್ತೂ ಕೂಡಾ ಅದೇ ರೀತಿಯಾದ ಪ್ರಸಂಗ ನಡೆದಿದೆ. ಎರಡೂ ಪ್ರಕರಣಗಳನ್ನು ಗಮನಿಸಿದರೇ, ಎರಡೂ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಕುಣಿಗಲ್ಲಿನಲ್ಲಿ ಇಳಿದು ಹೋಗಿದ್ದಾನೆ. ಬಹುಶಃ ಆವನದ್ದೇ ಈ ಕೃತ್ಯವಿರಬಹುದು. ಮುಂದಿನ ಬಾರಿ ಆ ವ್ಯಕ್ತಿ ನಮ್ಮ ಬಸ್ ಹತ್ತಿದರೆ ಖಂಡಿತವಾಗಿಯೂ ನಾನು ಗುರುತಿಸಬಲ್ಲೇ ಎಂದು ತಿಳಿಸಿ ಒಂದಷ್ಟು ಆಶಾಭಾವನೆ ಮೂಡಿಸಿದ ಎಂದರೂ ತಪ್ಪಾಗಲಾರದು.
ಒಂದೆರಡು ವಾರಗಳ ನಂತರ ರಾತ್ರಿ ಬಸ್ ಇನ್ನೇನು ಮೆಜೆಸ್ಟಿಕ್ಕಿನಿಂದ ಹೊರಡಬೇಕು ಎನ್ನುವಷ್ಟರಲ್ಲಿ ಅನುಮಾನಿಸುತ್ತಿದ್ದ ಅದೇ ವ್ಯಕ್ತಿ ಬಸ್ಸಿಗೆ ಹತ್ತಿದ್ದನ್ನು ಚಾಲಕ ಗಮನಿಸಿ, ಕೂಡಲೇ ಪೋಲೀಸರಿಗೆ ಕರೆ ಮಾಡಿ ಬಹುಶಃ ಅದೇ ವ್ಯಕ್ತಿ ಬಸ್ ಹತ್ತಿದ್ದಾನೆ ಪೀಣ್ಯಾದ ಬಳಿ ಬಸ್ ನಿಲ್ಲಿಸುತ್ತೇನೆ ತಾವು ಬಂದು ವಿಚಾರಣೆ ಮಾಡಬಹುದು ಎಂದು ತಿಳಿಸಿದ್ದಾನೆ. ಇಂತಹ ಮಾಹಿತಿಗಾಗಿಯೇ ಕಾಯುತ್ತಿದ್ದ ಪೋಲೀಸರೂ ಸಹಾ ಕೂಡಲೇ ಪೀಣ್ಯಾದ ಬಳಿ ಬಂದು ಬಸ್ಸಿನಲ್ಲಿದ್ದ ಆ ಅನುಮಾನಾಸ್ಪದ ವ್ಯಕ್ತಿಯನ್ನು ಬಂಧಿಸಿ ಕರೆದುಕೊಂಡು ಹೋಗುತ್ತಾರೆ. ನೋಡಲು ಸುರಸುಂದರನಾಗಿ ಯಾವುದೇ ರೀತಿಯ ಅನುಮಾನ ಬಾರದಂತಿರುವ ವ್ಯಕ್ತಿಯನ್ನು ಪೋಲೀಸರು ಏಕಾ ಏಕಿ ಬಂಧಿಸಿದ್ದು ಸಹ ಪ್ರಯಾಣಿಕರಿಗೆ ಅಶ್ಚರ್ಯವಾಗುತ್ತದೆ. ಆತನೂ ಸಹಾ ಯಾಕ್ ಸಾರ್ ನನ್ನನ್ನು ಬಂಧಿಸುತ್ತಿದ್ದೀರೀ? ನಾನೇನು ತಪ್ಪು ಮಾಡಿದೆ ಎಂದು ಆರಂಭದಲ್ಲಿ ಕೊಸರಾಡಿದರೂ ಪೋಲೀಸರು ಕರೆದುಕೊಂಡು ಹೋಗಿ ತಮ್ಮ ಕಾರ್ಯಾಚರಣೆ ಮಾಡಿದಾಗ ತಿಳಿದು ಬಂದ ವಿಷಯ ಮತ್ತಷ್ಟು ಅಚ್ಚರಿಯನ್ನು ಮೂಡಿಸುತ್ತದೆ.
ಆತ ಮತ್ತು ಆತನ ಮನೆಯವರೆಲ್ಲರೂ ಪದವಿ ಪಡೆದ ವಿದ್ಯಾವಂತರಾಗಿದ್ದು, ಒಬ್ಬ ಅಕ್ಕ ಪೋಲೀಸ್ ಇಲಾಖೆಯಲ್ಲೂ ಮತ್ತೊಬ್ಬರು ವಕೀಲೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈತ ಆರಂಭದಲ್ಲಿ ಖಾಸಗೀ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ವಯೋಸಹಜ ಸಹವಾಸದೋಷದಿಂದಾಗಿ ದುಶ್ಚಟಗಳಿಗೆ ಬಲಿಯಾಗಿ ಇದ್ದ ಕೆಲಸವನ್ನು ಬಿಟ್ಟು ಈ ರೀತಿಯಾದ ಕಳ್ಳತನಕ್ಕೆ ಇಳಿದಿದ್ದ. ನೋಡಲು ಸ್ಥಿತಿವಂತರ ಹಾಗೆ ಉಡುಪುಗಳನ್ನು ಧರಿಸಿಕೊಂಡು ಈ ರೀತಿಯಾಗಿ ರಾತ್ರಿಯ ಪ್ರಯಾಣದ ಬಸ್ಸನ್ನೇರಿ ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ತನ್ನ ಕರಾಮತ್ತಿನ ಮೂಲಕ ಲಪಟಾಯಿಸಿ, ಮಧ್ಯರಾತ್ರಿಯಲ್ಲಿಯೇ ಮಾರ್ಗದ ಮಧ್ಯದಲ್ಲಿ ಇಳಿದುಹೋಗಿಬಿಡುತ್ತಿದ್ದ. ಬಸ್ ನಿಲ್ಲಿಸಿ ಎಲ್ಲರಿಗೂ ಎಚ್ಚರವಾಗಿ ಕಳ್ಳತನ ನಡೆದ ವಿಷಯ ಎಲ್ಲರಿಗೂ ಗೊತ್ತಾಗುವಷ್ಟರಲ್ಲಿ ಆತ ತಪ್ಪಿಸಿಕೊಂಡು ಹೋಗಿ ಬಿಡುತ್ತಿದ್ದ. ತಾನು ಕದ್ದ ಆಭರಣಗಳನ್ನು ದೂರ ದೂರದ ಊರಿನಲ್ಲಿ ಆಡವಿಟ್ಟು ಕೈಯಲ್ಲಿ ದುಡ್ಡು ಖಾಲಿಯಾಗುವವರೆಗೂ ಮೋಜು ಮಸ್ತಿ ಮಾಡಿಕೊಂಡಿದ್ದು ನಂತರ ಹಣದ ಅವಶ್ಯಕತೆ ಇದ್ದಾಗ ಮತ್ತೆ ಕಳ್ಳತನಕ್ಕೆ ಇಳಿಯುತ್ತಿದ್ದ. ಅಕಸ್ಮಾತ್ ಹಾಗೇನಾದರೂ ಸಿಕ್ಕಿ ಹಾಕಿಕೊಂಡಲ್ಲಿ ತನ್ನ ಅಕ್ಕಂದಿರು ಬಿಡಿಸಿಕೊಂಡು ಬರುತ್ತಾರೆ ಎಂಬ ದುರಾಲೋಚನೆ ಆತನದ್ದಾಗಿತ್ತು.
ಆದರೆ ಈ ಬಾರಿ ಆತನ ಅದೃಷ್ಟ ಕೈಕೊಟ್ಟ ಪರಿಣಾಮ ಮತ್ತು ಚಾಲಕ ಚಾಕಚಕ್ಯತೆಯಿಂದಾಗಿ ಸಿಕ್ಕಿ ಹಾಕಿಕೊಂಡಿದ್ದ. ಪೋಲೀಸರ ಸಹಾಯದಿಂದ ಆತ ಅಡವಿಟ್ಟಿದ್ದ ಚಿನ್ನವನ್ನೆಲ್ಲಾ ಬಿಡಿಸಿಕೊಂಡು ಬರುವಷ್ಟರಲ್ಲಿ ಮತ್ತು ಪೋಲೀಸರಿಗೆ ಮತ್ತು ಚಾಲಕನಿಗೆ ಭಕ್ಷೀಸು ಕೊಟ್ಟ ನಂತರ ಚಿನ್ನದ ಆಭರಣಗಳ ಬೆಲೆಯ ಅರ್ಧದಷ್ಟು ಖರ್ಚಾಗಿದ್ದರೂ ತಮ್ಮ ಮಗಳ ಮೇಲಿನ ಆರೋಪ ಮುಕ್ತವಾಯಿತಲ್ಲಾ ಎನ್ನುವ ಸಮಾಧಾನ ಹುಡುಗಿಯ ಮನೆಯವರದ್ದು.
ಅದಕ್ಕೇ ಹೇಳೋದು, ಹೊರಗೆ ಹೋಗುವಾಗ ಅನಾವಶ್ಯಕವಾಗಿ ಆಭರಣಗಳನ್ನು ತೆಗೆದುಕೊಂಡು ಹೋಗಲೇ ಬಾರದು. ಹಾಗೆ ತೆಗೆದುಕೊಂಡು ಹೋಗಲೇ ಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಜಾಗೃತೆಯಿಂದ ಕಾಪಾಡಿಕೊಳ್ಳಬೇಕೇ ಹೊರತು, ಕಳೆದು ಕೊಂಡ ನಂತರ ವಿನಾಕಾರಣ ಮತ್ತೊಬ್ಬರ ಮೇಲೆ ಅನಾವಶ್ಯಕವಾಗಿ ಆರೋಪ ಮಾಡಬಾರದು ಮತ್ತು ಎಷ್ಟೇ ಒಳ್ಳೆಯವರಾಗಿ ಕಾಣಿಸಿದರೂ ಸಹ ಪ್ರಯಾಣಿಕರ ಮೇಲೆ ಒಂದು ಎಚ್ಚರಿಕೆಯ ಗಮನ ಇರಲೇ ಬೇಕು ಅಲ್ವೇ?
ಇದೂ ಅಲ್ದೇ ಬಸ್ಸಿನವರೂ ಮಾರ್ಗದ ಮಧ್ಯದಲ್ಲಿ ಯಾರನ್ನೂ ಇಳಿಯಲು ಬಿಡದೇ, ಹಾಗೆ ಇಳಿಯಬೇಕಾದ ಸಂದರ್ಭದಲ್ಲಿ, ಪ್ರಯಾಣಿಕರಿಗೆ ಸ್ವಲ್ಪ ತೊಂದರೆ ಆದರೂ ಪರವಾಗಿಲ್ಲ. ಎಲ್ಲರನ್ನೂ ಎಚ್ಚರಿಸಿ ಅವರ ಸಾಮಾನುಗಳು ಸರಿಯಾಗಿದೆಯೇ ಎಂದು ನೋಡಿ ಕೊಂಡ ನಂತರವೇ ಪ್ರಯಾಣಿಕರನ್ನು ಇಳಿಯಲು ಅನುವು ಮಾಡಿಕೊಟ್ಟರೆ ಈ ರೀತಿಯ ಕುಕೃತ್ಯಗಳನ್ನು ತಡೆಯಬಹುದಾಗಿದೆ.
ಏನಂತೀರೀ?