ಅದೊಂದು ಕೋಳಿ ಅಂಗಡಿ ಇನ್ನೇನು ಅಂಗಡಿಯನ್ನು ಮುಚ್ಚಬೇಕು ಎನ್ನುವ ಸಮಯದಲ್ಲಿ ಅಂಗಡಿಗೆ ಬಂದ ಮಹಿಳೆಯೊಬ್ಬಳು ಇನ್ನೂ ಕೋಳಿ ಸಿಗುತ್ತದೆಯೇ? ಎಂದು ವಿಚಾರಿಸುತ್ತಾಳೆ.
ಕಟುಕ ತನ್ನ ಆಳವಾದ ಫ್ರೀಜರ್ ಅನ್ನು ತೆರೆದುನೋಡಿ ಅಲ್ಲಿ ಉಳಿದಿದ್ದ ಏಕೈಕ ಕೋಳಿಯನ್ನು ಹೊರತೆಗೆದು ತಕ್ಕಡಿಯಮೇಲಿಟ್ಟು 1.5 ಕೆ.ಜಿ. 🐓 ಇದೆ ಕೊಡ್ಲಾ ಎಂದು ಕೇಳುತ್ತಾನೆ.
ತಕ್ಷಣವೇ ಮಹಿಳೆಯು ಕೋಳಿಯ ಗಾತ್ರ ಮತ್ತು ಪ್ರಮಾಣವನ್ನು ನೋಡಿ, ಇದಕ್ಕಿಂತ ಸ್ವಲ್ಪ ದೊಡ್ಡದಿದ್ದರೆ ಕೋಡ್ತೀರಾ ಎಂದು ವಿನಮ್ರವಾಗಿ ಕೇಳುತ್ತಾಳೆ.
ಕೂಡಲೇ ಕಟುಕನು ಆ ಕೋಳಿಯನ್ನು ಮತ್ತೆ ತನ್ನ ಫ್ರೀಜರ್ ಒಳಗೆ ಇಟ್ಟಂತೆ ಮಾಡಿ, ಎನೋ ಹುಡುಕಿದವನಂತೆ ನಟಿಸಿ, ಮತ್ತದೇ ಕೋಳಿಯನ್ನು ತೆಗೆದು ತಕ್ಕಡಿಯ ಮೇಲಿಟ್ಟು, ಆಕೆಗೆ ಕಾಣಿಸದಂತೆ ತನ್ನ ಹೆಬ್ಬೆರಳನ್ನು ತಕ್ಕಡಿಯ ಮೇಲೆ ಒತ್ತಿದಾಗ ಈ ಬಾರಿ ತಕ್ಕಡಿಯಲ್ಲಿ ಅದೇ ಕೋಳಿ 2 ಕೆಜಿಯ ತೂಕ ತೋರಿಸುತ್ತದೆ.
ವಾವ್!! ಅದ್ಭುತ. ದಯವಿಟ್ಟು ನನಗೆ ಆ ಎರಡೂ ಕೋಳಿಗಳನ್ನು ಕೊಡಿ ಎಂದು ಹೇಳುತ್ತಾ, ದುಡ್ಡು ಎಷ್ಟಾಯಿತು? ಎಂದು ವಿನಮ್ರಳಾಗಿ ಕೇಳುತ್ತಾಳೆ ಆ ಮಹಿಳೆ.
ಈ ರೀತಿಯ ಪರಿಸ್ಥಿತಿಯಲ್ಲಿ, ಕಟುಕನ ಸ್ಥಿತಿ ಇಂಗು ತಿಂದ ಮಂಗನಂತಾಗಿ ತನ್ನೆಲ್ಲಾ ಕುತಂತ್ರವೂ ಕೈಕೊಟ್ಟು ಅತ್ತ ದರಿ ಇತ್ತ ಪುಲಿ ಎನ್ನುವ ಪರಿಸ್ಥಿತಿ ಉಂಟಾಗುತ್ತದೆ.
ಈಗ ಕಟುಕ, ಆಕೆಯ ಮುಂದೆ ತನ್ನ ಮುಖ ತೋರಿಸಲಾಗದೇ ತನ್ನ ಕಸಾಯಿ ಖಾನೆಯ ದೊಡ್ಡ ಆಳವಾದ ಫ್ರೀಜರ್ ಒಳಗೆ ತಲೆಯನ್ನು ಹಾಕಿಕೊಂಡು ಇಲ್ಲದ ಮೊದಲ ಕೋಳಿಯನ್ನು ಹುಡುಕುತ್ತಿದ್ದಾನೆ ಅಥವಾ ಹುಡುವಂತೆ ನಟಿಸುತ್ತಿದ್ದಾನೆ.
ಇದೇ ರೀತಿಯ ಮತ್ತೊಂದು ದೃಷ್ಟಾಂತ ಹೀಗಿದೆ.
ನಗರದಲ್ಲಿ ಅದೊಂದು ದೊಡ್ಡದಾದ ಬೇಕರಿ. ಶುಚಿ, ರುಚಿ ಮತ್ತು ಪ್ರಾಮಾಣಿಕತೆಗೆ ಬಹಳ ಪ್ರಸಿದ್ದಿ ಪಡೆದಿದ್ದ ಕಾರಣ ಅವರ ವ್ಯಾಪಾರವೂ ಜೋರಾಗಿಯೇ ಇತ್ತು. ತಮ್ಮ ಉತ್ಪನ್ನದ ಗುಣ ಮಟ್ಟವನ್ನು ಕಾಪಾಡುವ ಸಲುವಾಗಿ ಹಸನಾದ ಬೆಣ್ಣೆಯನ್ನು ಪಕ್ಕದ ಹಳ್ಳಿಯಿಂದ ನೇರವಾಗಿ ಖರೀದಿ ಮಾಡುತ್ತಿದ್ದರು. ಆ ಬೆಣ್ಣೆಯವನೂ ಸಹಾ ಬಹಳ ಪ್ರಾಮಾಣಿಕನಾಗಿದ್ದು ಅನೇಕ ವರ್ಷಗಳಿಂದ ಯಾವುದೇ ತಕರಾರು ಇಲ್ಲದೇ ಬೆಣ್ಣೆಯನ್ನು ಬೇಕರಿಗೆ ತಂದು ಕೊಡುತ್ತಿದ್ದ.
ಅದೇಕೋ ಬೇಕರಿಯವರಿಗೆ ಬೆಣ್ಣೆಯವನ ತೂಕದ ಬಗ್ಗೆ ಸ್ವಲ್ಪ ಅನುಮಾನ ಬಂದು ಅದೊಮ್ಮೆ ಪರೀಕ್ಷಿಸಿ ನೋಡಿದಾಗ ಅರ್ಧ ಕೆಜಿಯ ಬೆಣ್ಣೆಯಲ್ಲಿ 50 ಗ್ರಾಂ ಕಡಿಮೆ ಇತ್ತು. ಕುತೂಹಲದಿಂದ ಎಲ್ಲಾ ಬೆಣ್ಣೆಯ ಪೊಟ್ಟಣಗಳನ್ನೂ ಪರೀಕ್ಶಿಸಿ ನೋಡಿದಾಗ ಎಲ್ಲವೂ 50 ಗ್ರಾಂ ಕಡಿಮೆ ಇದ್ದದ್ದನ್ನು ಕಂಡು ಅವರ ಕೋಪ ನೆತ್ತಿಗೇರಿತ್ತು. ಇಷ್ಟು ವರ್ಷಗಳಿಂದ ನಂಬಿದ್ದ ವ್ಯಕ್ತಿಯೇ ಈ ರೀತಿಯಾಗಿ ತಮಗೆ ಮೋಸ ಮಾಡುತ್ತಿರುವುದನ್ನು ಕಂಡು ಬಹಳ ಬೇಸರವಾಗಿ ಕೂಡಲೇ ಪೋಲೀಸರಿಗೆ ಬೆಣ್ಣೆಯವನ ವಿರುದ್ಧ ದೂರು ದಾಖಲಿಸಿದರು.
ಇದರ ಬಗ್ಗೆ ಅರಿವಿರದ ಬೆಣ್ಣೆಯವನು ಯಥಾ ಪ್ರಕಾರ ಮಾರನೆಯ ದಿನ ಬೇಕರಿಗೆ ಬೆಣ್ಣೆಯನ್ನು ಸರಬರಾಜು ಮಾಡಲು ಬಂದಾಗ ಪೋಲೀಸರು ಆತನನ್ನು ಬಂಧಿಸಿ ವಿಚಾರಣೆಗೆ ನ್ಯಾಯಾಧೀಶರ ಬಳಿ ಕರೆದೊಯ್ದರು. ತನ್ನನ್ನು ಬಂಧಿಸಿರುವ ಕಾರಣ ತಿಳಿಯದೆ ತಬ್ಬಿಬ್ಬಾಗಿದ್ದ ಬೆಣ್ಣೆಯವನು ನ್ಯಾಯಾಧೀಶರಿಂದ ತನ್ನ ಬೆಣ್ಣೆಯಲ್ಲಿ ತೂಕದ ವೆತ್ಯಾಸದ ಕುರಿತಂತೆ ತನ್ನ ಮೇಲಿನ ಆರೋಪವನ್ನು ಕೇಳಿ ದಂಗಾಗಿ ಹೋದನು. ಒಂದು ಕ್ಷಣ ಮೌನವಾಗಿದ್ದು ನಂತರ ಸ್ವಾಮೀ ತೂಕದಲ್ಲಿ ವೆತ್ಯಾಸವಾಗಿರುವುದು ಸತ್ಯ. ಆದರೆ ಇದಕ್ಕೆ ಪ್ರತಿಯಾದ ಶಿಕ್ಷೆಯನ್ನು ನೀವು ಬೇಕರಿಯವರಿಗೇ ಕೊಡಬೇಕಾಗುತ್ತದೆ ಎಂದು ಹೇಳಿದನು.
ಅರೇ ಇದೇನಿದು? ತೂಕಕ ತಪ್ಪನ್ನು ಒಪ್ಪಿಕೊಳ್ಳುತ್ತಿದ್ದಾನೆ ಆದರೆ ಶಿಕ್ಷೆ ಮಾತ್ರಾ ಆರೋಪ ಮಾಡಿದವರಿಗೇ ಕೊಡಲು ಹೇಳುತ್ತಿದ್ದಾನಲ್ಲಾ ಎಂದು ವಿಚಿತ್ರವಾಗಿ ನೋಡಿದಾಗ, ಬೆಣ್ಣೆಯವನು ಸ್ವಾಮೀ, ಇದುವರೆಗೂ ನಾನು ತೂಕ ಹಾಕಲು ಬಳಸುತ್ತಿದ್ದ ಅರ್ಧ ಕೇಜಿಯ ತೂಕದ ಬಟ್ಟು ಕೆಲ ದಿನಗಳಿಂದ ಕಳೆದು ಹೋಗಿತ್ತು. ಹಾಗಾಗಿ ನಾನು ತೂಕದ ಬಟ್ಟಿನ ಬದಲಾಗಿ ಬೇಕರಿಯಲ್ಲಿ ತರುವ ಅರ್ಧಕೇಜಿ ಕೇಕ್ ಇಟ್ಟು ತೂಕ ಮಾಡುತ್ತಿದ್ದೆ. ಈಗ ನನ್ನ ಬೆಣ್ಣೆಯ ತೂಕದಲ್ಲಿ ವೆತ್ಯಾಸವಿದೆ ಎಂದಲ್ಲಿ ಬೇಕರಿಯ ಕೇಕನ್ನೂ ಕೂಡಾ ತೂಕ ಮಾಡಬೇಕೆಂದು ಕೋರಿಕೊಳ್ಳುತ್ತಾನೆ.
ಪ್ರತ್ಯಕ್ಷಿಸಿ ನೋಡಿದರೂ, ಪ್ರಮಾಣಿಸಿ ನೋಡು ಎನ್ನುವ ತತ್ವದಡಿಯಲ್ಲಿ ನ್ಯಾಯಾಧೀಶರು, ಬೇಕರಿಯ ಕೇಕ್ ಮತ್ತು ತೂಕದ ತಕ್ಕಡಿಯನ್ನು ತರಿಸಿ ಕೇಕನ್ನು ತೂಗಿ ನೋಡಿದಾಗ ಅರ್ಧ ಕೇಜಿಯ ಬದಲಾಗಿ ಅದು ಕೇವಲ 450/- ಗ್ರಾಂ ಇದ್ದು 50ಗ್ರಾಂ ಕಡಿಮೆ ಇರುತ್ತದೆ. ಇದನ್ನು ಗಮನಿಸಿದ ಬೇಕರಿಯ ಮಾಲಿಕ ತಾನೇ ತೋಡಿದ ಗುಂಡಿಗೆ ತಾನೇ ಬೀಳಬೇಕಾಯಿತಲ್ಲಾ ಎಂದು ತನ್ನ ಹಳಿಯುತ್ತಾ ಬೆಬ್ಬೆಬ್ಬೇ ಎಂದು ನ್ಯಾಯಾಧೀಶರ ಮುಂದೆ ತಡವರಿಸುತ್ತಾನೆ.
ಈ ಎರಡೂ ಪ್ರಸಂಗಗಳನ್ನು ಗಮನಿಸಿದಲ್ಲಿ, ಎಲ್ಲಿಯವರೆಗೂ ಮೋಸ ಹೋಗುವ ಅಮಾಯಕರು ಇರುತ್ತಾರೋ ಅಲ್ಲಿಯವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ. ಆದರೆ ಈಗ ಕಾಲ ಮುಂಚಿನಂತಿರದೇ ಗ್ರಾಹಕರು ಎಚ್ಚೆತ್ತು ಕೊಂಡಿರುವ ಕಾರಣ ಮುಂಚಿನಂತೆ ಸುಲಭವಾಗಿ ಮೋಸ ಮಾಡಲು ಅಸಾಧ್ಯವಾಗಿದೆ. ಹಾಲು ಕುಡಿದ ಮಕ್ಕಳೇ ದಕ್ಕೋದಿಲ್ಲ ಇನ್ನು ವಿಷ ಕುಡಿಸಿದ ಮಕ್ಕಳು ದಕ್ಕುತ್ತಾರಾ?
ಏನಂತೀರೀ?
ಸಾಮಾಜಿಕ ಜಾಲತಾಣ ಮತ್ತು ಬಹಳ ಹಿಂದೆ ಓದಿದ ಸಂದೇಶಗಳ ಭಾವಾನುವಾದವಾಗಿದೆ.
ಸೂಪರ್.
LikeLike
ಸೂಪರ್ …. ತೂಕ ಮತ್ತು ಅಳತೆ ,ಗುಣಮಟ್ಟ ದ ಕುರಿತ ಸಣ್ಣ ಕಥೆ ಚೆನ್ನಾಗಿದೆ.
LikeLiked by 1 person
ಧನ್ಯೋಸ್ಮಿ
LikeLike