ಇದು ದಕ್ಷಿಣ ಭಾರತದ ಜನಪ್ರಿಯ ಆಹಾರವೂ ಹೌದು ಮತ್ತು ದೇವಸ್ಥಾನಗಳಲ್ಲಿನ ಸುಪ್ರಸಿದ್ಧ ಪ್ರಸಾದವೂ ಹೌದು. ಪುಳಿಯೋಗರೇ ಎಂಬ ಹೆಸರು ಕೇಳಿದೊಡನೆ ನಮ್ಮ ಬಾಯಲ್ಲಿ ನೀರೂರುವ ಹಾಗೆಯೇ ಥಟ್ ಅಂತಾ ನೆನಪಾಗೋದೇ ಐಯ್ಯಂಗಾರ್ ಪುಳಿಯೋಗರೇ. ಬ್ರಾಹ್ಮಣರ ಒಂದು ಪಂಗಡವಾದ ಐಯ್ಯಾಂಗಾರರು ಈ ಪಾಕವಿಧಾನವನ್ನು ಬಹಳ ಚೆನ್ನಾಗಿ ಕರಗತ ಮಾಡಿಕೊಂಡು ಅದನ್ನು ತಮ್ಮ ಪೇಟೆಂಟ್ ಮಾಡಿಕೊಂಡಿದ್ದಾರೆ ಎಂದರೂ ಅತಿಶಯೋಕ್ತಿಯೇನಲ್ಲ. ಅಂತಹ ರುಚಿಕರವಾದ ಪುಳಿಯೋಗರೇ ಗೊಜ್ಜನ್ನು ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ನಿಮಗೆ ತೋರಿಸಿಕೊಡುತ್ತಿದ್ದೇವೆ. ಒಮ್ಮೆ ಶುಚಿಯಾಗಿ ನೀರು ಬೆರಸದೇ ಮಾಡಿಟ್ಟುಕೊಂಡ ಈ ಗೊಜ್ಜನ್ನು ಜೋಪಾನವಾಗಿ ಎತ್ತಿಟ್ಟು, ಸುಮಾರು ಐದಾರು ತಿಂಗಳುಗಳ ಕಾಲ ಬೇಕಾದಾಗಲೆಲ್ಲಾ ಅನ್ನದ ಜೊತೆ ಕಲೆಸಿಕೊಂಡು ತಿನ್ನಬಹುದಾಗಿದೆ
ಪುಳಿಯೋಗರೇ ಗೊಜ್ಜನ್ನು ತಯಾರಿಸಿಕೊಳ್ಳಲು ಬೇಕಾದ ಸಾಮಗ್ರಿಗಳು
- ಹುಣಿಸೆಹಣ್ಣು – 250 ಗ್ರಾಂ
- ಪುಡಿ ಮಾಡಿದ ಬೆಲ್ಲ – 1 ಆಚ್ಚು
- ಕರಿಎಳ್ಳು – 6 ಚಮಚ
- ಒಣ ಕೊಬ್ಬರಿ – ಅರ್ಧ ಗಿಟುಕು
- ಮೆಂತ್ಯ – 1 ಚಮಚ
- ಕಾಳು ಮೆಣಸು – 2 ಚಮಚ
- ಕೊತ್ತಂಬರಿ ಬೀಜ – 3 ಚಮಚ
- ಜೀರಿಗೆ- 2 ಚಮಚ
- ಒಣಮೆಣಸಿನಕಾಯಿ- ಗುಂಟೂರು 6 + ಬ್ಯಾಡಗಿ ಮೆಣಸಿನಕಾಯಿ 6
- ಕಡಲೇಕಾಯಿ ಎಣ್ಣೆ – 2-3 ಚಮಚ
- ರುಚಿಗೆ ತಕ್ಕಷ್ಟು ಉಪ್ಪು
- ಉದುರು ಉದುರಾಗಿ ಮಾಡಿದ ಆರಿದ ಅನ್ನ – 1 ಪಾವು
ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು
- ಸಾಸಿವೆ – 1 ಚಮಚ
- ಉದ್ದಿನಬೇಳೆ – 2 ಚಮಚ
- ಕಡಲೆಬೇಳೆ – 2 ಚಮಚ
- ಕಡಲೆಕಾಯಿ ಬೀಜ -100 ಗ್ರಾಂ
- ಕರಿಬೇವಿನ ಎಲೆಗಳು – 8-10
- ಇಂಗು – 1/2 ಚಮಚ
ಪುಳಿಯೋಗರೆ ಗೊಜ್ಜನ್ನು ತಯಾರಿಸುವ ವಿಧಾನ
- ಮೊದಲು ಹುಣಸೇ ಹಣ್ಣನ್ನು ಸುಮಾರು ಎರಡು-ಮೂರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟುಕೊಂಡು ಅದರ ಹುಳಿಯನ್ನು ಚೆನ್ನಾಗಿ ಹಿಂಡಿ ತೆಗೆದಿಟ್ಟುಕೊಳ್ಳಿ
- ಕರಿಎಳ್ಳನ್ನು ಹಸೀ ಹೋಗುವವರೆಗೂ ಹುರಿದುಕೊಂಡು ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ
- ಅರ್ಧ ಗಿಟುಕು ಒಣ ಕೊಬ್ಬರಿಯನ್ನು ಸಣ್ಣಗೆ ತುರಿದು ಸ್ವಲ್ಪ ಹಸೀ ಹೋಗುವವರೆಗೂ ಹುರಿದುಕೊಳ್ಳಿ
- ಒಂದು ಗಟ್ಟಿ ತಳದ ಬಾಣಲೆಯಲ್ಲಿ ಸ್ವಲ್ಪ ಎಣ್ಣೆಹಾಕಿ ಕಾದ ನಂತರ, ಮೆಂತ್ಯ, ಕರಿ ಮೆಣಸು, ಕೊತ್ತಂಬರಿ ಬೀಜ, ಜೀರಿಗೆ ಮತ್ತು ಎರಡೂ ಒಣ ಮೆಣಸಿನಕಾಯಿಗಳನ್ನು ಹಾಕಿ ಚೆನ್ನಾಗಿ ಗರಿ ಗರಿಯಾಗಿ ಹುರಿದು, ಆರಿದ ನಂತರ ನುಣ್ಣಗೆ ಪುಡಿ ಮಾಡಿಕೊಳ್ಳಿ
- ಮತ್ತೆ ಗಟ್ಟಿ ತಳದ ಬಾಣಲೆಯನ್ನು ಒಲೆಯ ಮೇಲಿಟ್ಟು, ಅದು ಬಿಸಿಯಾದ ನಂತರ, ಅದಕ್ಕೆ ಹುಣಿಸೇ ರಸ, ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ
- ಕುದಿಯುತ್ತಿರುವ ಹುಣಸೇ ರಸಕ್ಕೆ, ಪುಡಿ ಮಾಡಿಟ್ಟು ಕೊಂಡ ಮಸಾಲೆ ಮಿಶ್ರಣವನ್ನು ನಿಧಾನವಾಗಿ ಹಾಕಿ ಚೆನ್ನಾಗಿ ಹದ ಬರುವವರೆಗೂ, ಗಂಟಾಗಂತೆ ತಿರುವುತ್ತಿರಿ
- ಈಗ ಪುಡಿ ಮಾಡಿಟ್ಟು ಕೊಂಡ ಎಳ್ಳಿನ ಪುಡಿ ಮತ್ತು ತುರಿದು ಕೊಂಡ ಕೊಬ್ಬರಿ ಬೆರೆಸಿ ಚೆನ್ನಾಗಿ ತಿರುವಿ ಒಂದು ಐದು ನಿಮಿಷಗಳ ನಂತರ ಒಲೆಯನ್ನು ಆರಿಸಿ ಗೊಜ್ಜು ತಣ್ಣಗಾಗಲು ಬಿಡಿ.
ಆರಿದ ಗೊಜ್ಜನ್ನು ಗಾಳಿಯಾಡದಂತಹ ಮುಚ್ಚಳದ ಡಬ್ಬಿಯಲ್ಲಿ ಭಧ್ರವಾಗಿ ತೆಗೆದಿಟ್ಟುಕೊಂಡು ಬೇಕಾದಾಗಲೆಲ್ಲಾ, ಅಗತ್ಯವಿದಷ್ಟು ಗೊಜ್ಜನ್ನು ಉಪಯೋಗಿಸಿ ಕೊಳ್ಳಬಹುದಾಗಿದೆ
- ಗಟ್ಟಿ ತಳದ ಬಾಣಲೆಯಲ್ಲಿ ಎಳೆಂಟು ಚಮಚಗಳಷ್ಟು ಎಣ್ಣೆಯನ್ನು ಹಾಕಿ ಅದು ಕಾದ ನಂತರ, ಸಾಸಿವೆಯನ್ನು ಸಿಡಿಸಿಕೊಂಡು, ಉದ್ದಿನ ಬೇಳೆ, ಕಡಲೇ ಬೇಳೆ ಮತ್ತು ಕಡಲೇಕಾಯಿ ಬೀಜ ಚೆನ್ನಾಗಿ ಕೆಂಪಗೆ ಹುರಿದುಕೊಳ್ಳಿ, ಅದಕ್ಕೆ ಕರೀಬೇವಿನ ಸೊಪ್ಪು ಮತ್ತು ಇಂಗನ್ನು ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ
- ಮಾಡಿಟ್ಟು ಕೊಂಡ ಒಗ್ಗರಣೆಗೆ ಕಲಸಲು ಬೇಕಾದಷ್ಟು ಮಾಡಿಟ್ಟುಕೊಂಡ ಗೊಜ್ಜನ್ನು ಬೆರೆಸಿ ಚೆನ್ನಾಗಿ ಎಣ್ಣೆ ಮಿಶ್ರಣವಾಗುವಂತೆ ತಿರುವಿ
- ಸಿದ್ಧ ಪಡಿಸಿಟ್ಟು ಕೊಂಡಿದ್ದ ಉದುರು ಉದುರಾದ ಅನ್ನದ ಮೇಲೆ ಎರಡು ಚಮಚ ಎಣ್ಣೆಯನ್ನು ಹಾಕಿ ಅದಕ್ಕೆ ಸಿದ್ಧ ಪಡಿಸಿಕೊಂಡ ಈ ಪುಳಿಯೋಗರೇ ಒಗ್ಗರಣೆಯನ್ನು ಬೆರೆಸಿ ಚೆನ್ನಾಗಿ ಕಲೆಸಿದಲ್ಲಿ ರುಚಿ ರುಚಿಯಾದ ಪುಳಿಯೋಗರೇ ಸವಿಯಲು ಸಿದ್ಧ.
ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.
ಏನಂತೀರೀ?
ಮನದಾಳದ ಮಾತು : ಧಿಡೀರ್ ಎಂದು ಪುಳಿಯೋಗರೇ ಗೊಜ್ಜನ್ನು ತಯಾರು ಮಾಡಿಕೊಳ್ಳಬೇಕಿದ್ದಲ್ಲಿ, ಹುಣಸೇ ರಸ ಬೆಲ್ಲ ಮತ್ತು ಉಪ್ಪನ್ನು ಬಾಣಲೆಯಲ್ಲಿ ಹಾಕಿ ಅದು ಚೆನ್ನಾಗಿ ಕುದಿಯುತ್ತಿರುವಾಗ ರುಚಿಗೆ ತಕ್ಕಷ್ಟು ಸಾರಿನ ಪುಡಿ, ಎಳ್ಳಿನ ಪುಡಿ ಮತ್ತು ಕೊಬ್ಬರಿಯನ್ನು ಸೇರಿಸಿ ಚೆನ್ನಾಗಿ ಕುದಿಸಿ ಅದಕ್ಕೆ ಮೇಲೆ ತಿಳಿಸಿದ ಒಗ್ಗರಣೆಯನ್ನೂ ಹಾಕಿಯೂ ಸಹಾ ರುಚಿ ರುಚಿಯಾದ ಧಿಡೀರ್ ಪುಳಿಯೋಗರೆಯನ್ನು ತಯಾರು ಮಾಡಿಕೊಳ್ಳಬಹುದಾಗಿದೆ.