ಅದು ತೊಂಬತ್ತರ ದಶಕ ಅಂತ್ಯದ ಸಮಯ. ಆಗ ತಾನೇ ಮದುವೆಯಾಗಿದ್ದ ನಮಗೆ ಮಧುಚಂದ್ರಕ್ಕೆ ಹೋಗಬೇಕೆನ್ನುವ ತವಕ. ಈಗಿನಂತೆ ವಿದೇಶಕ್ಕೆ ಹೋಗುವ ಅರ್ಥಿಕ ಸಧೃಡತೆಯಾಗಲೀ, ಅನುಕೂಲತೆಗಳು ಇಲ್ಲದಿದ್ದಾಗ, ಜೈಪುರ್, ಉದಯಪುರ್, ಬಾಂಬೆಯ ಕಡೆ ಸುತ್ತಾಡಿಬರುವುದೆಂದು ತೀರ್ಮಾನಿಸಿಯಾಗಿತ್ತು. ಇದೇ ಸ್ಥಳಗಳಿಗೆ ಹೋಗಲು ತೀರ್ಮಾನಿಸಿದ್ದರ ಹಿಂದೆಯೂ ಒಂದು ಬಲವಾದ ಕಾರಣವಿದ್ದು, ನಮ್ಮಾಕಿಯ ಜೊತೆ ಬಾಲ್ಯದಿಂದಲೂ ನೆರೆಹೊರೆಯವರಾಗಿದ್ದು, ಸಹಪಾಠಿಯೂ ಆಗಿದ್ದು ಆಕೆಯ ಮದುವೆಯೂ ಸಹಾ ನಮ್ಮ ಮದುವೆಯಾಗಿ 15-20 ದಿನಗಳ ನಂತರ ದೂರದ ರಾಜಾಸ್ಥಾನದ ಮಾರ್ವಾಡ್ ಗಂಜಿನ ದೇವಗಡ್ ಮಜಾರಿಯಾ ಎಂಬ ಊರಿನ ಹತ್ತಿರದ ಹಳ್ಳಿಯಲ್ಲಿತ್ತು. ತನ್ನ ಮದುವೆ ಇದ್ದರೂ ಸಹಾ ಆಕೆ ತನ್ನ ಬಾಲ್ಯದ ಗೆಳತಿಯ ನಮ್ಮ ಮದುವೆಯಲ್ಲಿ ಭಾಗವಹಿಸಿ ತುರಾತುರಿಯಲ್ಲಿ ತನ್ನೂರಿಗೆ ತನ್ನ ಮದುವೆಗೆ ಹೋಗುವ ಮುನ್ನಾ ನೀವಿಬ್ಬರೂ ಖಂಡಿತವಾಗಿಯೂ ನಮ್ಮ ಮದುವೆಗೆ ಬರಲೇ ಬೇಕು ಎಂದು ಆಗ್ರಹ ಪೂರ್ವಕವಾಗಿ ಆಮಂತ್ರಿಸಿದ್ದೂ ಕಾರಣವಾಗಿತ್ತು.
ಇಲ್ಲಿಂದ ಮುಂಬೈಯ್ಯಿಗೆ ಹೇಗೋ ರೈಲಿನಲ್ಲಿ ರಿಸರ್ವೇಷನ್ ಸಿಕ್ಕಿದರೂ ಅಲ್ಲಿಂದ ಸುಮಾರು 16 ಗಂಟೆಗಳ ರೈಲ್ವೇ ಪ್ರಯಾಣಕ್ಕೆ reservation ಸಿಕ್ಕದ ಪರಿಣಾಮ, ಒಂದು ಹೆಜ್ಜೆ ಇಡಲೂ ಸಾಧ್ಯವಾಗದಂತೆ ತುಂಬಿ ತುಳುಕುತ್ತಿದ್ದ unreserved ಬೋಗಿಯಲ್ಲಿ ಹಾಗೂ ಹೀಗೂ ಕಷ್ಟ ಪಟ್ಟು ಹತ್ತಿಕೊಂಡು ಯಾರನ್ನೋ ಕಾಡಿ ಬೇಡಿ ಸ್ವಲ್ಪ ಜಾಗ ಪಡೆದುಕೊಂಡು ಮಾರ್ವಾಡ್ ಗಂಜ್ ತಲುಪುವ ಹೊತ್ತಿಗೆ ಮಟ ಮಟ ಮಧ್ಯಾಹ್ನ ಮೂರಾಗಿತ್ತು. ಅಲ್ಲಿಂದ ಫೆವಿಕಾಲ್ ಜಾಹೀರಾತಿನಲ್ಲಿ ತೋರಿಸುವ ಜನಭರಿತ ಬಸ್ ಒಂದನ್ನು ಹಿಡಿದು ಸುಮಾರು ಆರು ಗಂಟೆಗಳ ಕಾಲ ಮರುಭೂಮಿಯ ಧೂಳಿನಲ್ಲಿ ಜಿಂಕೆ, ಒಂಟೆಗಳನ್ನೆಲ್ಲಾ ನೋಡಿಕೊಂಡು ದೇವಗಡ್ ಮಜಾರಿಯಾ ತಲುಪುವ ಹೊತ್ತಿಗೆ ರಾತ್ರಿ ಒಂಭತ್ತಾಗಿತ್ತು. ಅಲ್ಲಿಯೇ ಸಮೀಪದ ಎಸ್.ಟಿ.ಡಿ ಬೂತ್ ನಿಂದ ಮದುವೆಯ ಮನೆಯವರಿಗೆ ಕರೆಮಾಡಿ ನಾವು ಇರುವ ಸ್ಥಳವನ್ನು ಹೇಳಿದ ಅರ್ಧ ಗಂಟೆಯೊಳಗೆ ಜೀಪ್ ನೊಂದಿಗೆ ಬಂದು ನಮ್ಮನ್ನು ಕರೆದುಕೊಂಡು ಮದುವೆ ಮನೆಗೆ ತಲುಪಿದಾಗ ರಾತ್ರಿ ಹತ್ತೂವರೆ.
ಪ್ರಯಾಣದ ಆಯಾಸದಿಂದಾಗಿ ಊಟವೂ ಬೇಡ ಏನೂ ಬೇಡ ಸುಮ್ಮನೇ ಆರಾಮಾಗಿ ನಿದ್ರೇ ಮಾಡಿಬಿಡೋಣ ಎಂದು ಮನಸ್ಸು ಹೇಳಿದರೂ ಅಲ್ಲಿನವರ ಆಥಿತ್ಯಕ್ಕೆ ಬೆರಗಾಗಿ ಹೋದೆವು. ನಾವು ಬರುತ್ತೀವೀ ಎಂದು ನಮಗಾಗಿ ಅನ್ನ ಮತ್ತು ಸಾರು ಮಾಡಿಸಿದ್ದ ಹುಡುಗಿಯ ಮನೆಯವರು ನಮ್ಮನ್ನು ಬಹಳ ಆದಾರಾಥಿತ್ಯದಿಂದ ನೋಡಿಕೊಂಡಿದ್ದಲ್ಲದೇ ಅಲ್ಲಿಯೇ ಸಮೀಪದಲ್ಲಿ ಅವರ ಬಂಧುಗಳ ಮನೆಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಟ್ಟರು. ರಾತ್ರಿ ಸುಖವಾಗಿ ನಿದ್ದೇ ಮಾಡಿ ಬೆಳಗ್ಗೆ ಎದ್ದು ಪ್ರಾಥರ್ವಿಧಿಗಳನ್ನು ಎಲ್ಲಿ ಮಾಡುವುದು ಎಂದು ಯೋಚಿಸುತ್ತಿರುವಾಗಲೇ, ಚೆನ್ನಾಗಿ ನಿದ್ದೇ ಬಂತಾ ಭಾವ ಎಂದು ಅಚ್ಚ ಕನ್ನಡದಲ್ಲಿ ಸ್ವಚ್ಛವಾಗಿ ಕೇಳಿದ್ದನ್ನು ಕೇಳಿ ತಿರುಗಿ ನೋಡಿದಲ್ಲಿ ಮದುವಣಗಿತ್ತಿಯ ತಮ್ಮ ರಾಕೇಶ ನಮ್ಮ ವ್ಯವಸ್ಥೆಗೆ ಟೋಂಕ ಕಟ್ಟಿ ನಿಂತಿದ್ದ. ಅತನೇ ನಮಗೆಲ್ಲಾ ವ್ಯವಸ್ಥೆಗಳನ್ನು ನೋಡಿಕೊಂಡಿದ್ದಲ್ಲದೇ ನಮಗಾಗಿಯೇ ವಿಶೇಷವಾಗಿ ಇಡ್ಲೀ,ಸಾಂಬಾರ್ ಮತ್ತು ಚೆಟ್ನಿಯನ್ನೂ ತಿಂಡಿಗಾಗಿ ಸಹಾ ಮಾಡಿಸಿದ್ದ.
ತಿಳಿಯದ ಊರು. ಅರಿಯದ ಜನ. ಭಾಷೆಯೂ ಅರಿಯದು ಹೇಗೋ ಏನೂ ಎಂದು ಕೊಳ್ಳುತ್ತಿರುವಾಗಲೇ ಒಬ್ಬೊಬ್ಬರೇ ಬಂದು ತಮ್ಮನ್ನು ಅಚ್ಚ ಕನ್ನಡಲ್ಲಿ ಸ್ವಚ್ಚವಾಗಿ ಪರಿಚಯಿಸಿಕೊಳ್ಳತೊಡಗಿದರು. ನೋಡ ನೋಡ ತೊಡಗಿದಂತೆಯೇ, ಅರ್ಧ ಮುಕ್ಕಾಲು ಗಂಟೆಯಲ್ಲಿ ಇಡೀ ಊರಿನ ಅರ್ಧಕ್ಕರ್ಧ ಜನಾ ನನಗೆ ಪರಿಚಯವಾಗಿದ್ದಲ್ಲದೇ ಆತ್ಮೀಯರೂ ಆಗಿ ಹೋಗಿ, ನಾವೇನೂ ರಾಜಸ್ಥಾನದ ಮಾರ್ವಾಡಿಗಳ ಜೊತೆಯಲ್ಲಿದ್ದೇವೋ ಅಥವಾ ಕರ್ನಾಟಕದಲ್ಲಿ ಇದ್ದೇವೋ ಎನ್ನುವಷ್ಟರ ಮಟ್ಟಿಗೆ ಅನುಮಾನ ಬರುವ ಹಾಗೆ ಕನ್ನಡ ಮಯವಾಗಿತ್ತು ಆ ಊರು. ಹಾಗೇ ವಿಚಾರಿಸಿ ನೋಡಿದಾಗ ಆ ಊರಿನ ಬಹುತೇಕರು ತಮ್ಮ ವಿದ್ಯಾಭ್ಯಾಸ ಮಾಡಿದ ನಂತರ ಉದ್ಯೋಗವನ್ನು ಅರಸಿಕೊಂಡು ಕರ್ನಾಟಕದ ವಿವಿಧ ಭಾಗಗಳಿಗೆ ಬಂದು ತಮ್ಮ ತಮ್ಮ ವ್ಯವಹಾರಗಳಲ್ಲಿ ತೊಡಗಿಕೊಂಡರೂ ಊರ ಹಬ್ಬ ಮತ್ತು ಶುಭಕಾರ್ಯಗಳಲ್ಲಿ ಎಲ್ಲರೂ ಊರಿಗೆ ಬಂದು ಸಂಭ್ರಮ ಸಡಗರದಿಂದ ಭಾಗವಹಿಸುತ್ತಾರೆ ಎನ್ನುವುದು ತಿಳಿಯಿತು. ಇನ್ನೂ ಆಶ್ಚರ್ಯವೆನ್ನುವಂತೆ ಹುಡುಗಿಯ ಸೋದರತ್ತೆ ನಮ್ಮೂರಿನ ಪಕ್ಕದ ಹಿರೀಸಾವೆಯಲ್ಲಿ ಬಟ್ಟೇ ಅಂಗಡಿಯ ವ್ಯವಹಾರ ಮಾಡುತ್ತಿದ್ದು, ಆವರ ಮಕ್ಕಳೆಲ್ಲರೂ ಕನ್ನಡ ಮಾಧ್ಯಮದಲ್ಲೇ ಓದಿರುವುದಲ್ಲದೇ, ಅವರ ಮನೆಯವರೆಲ್ಲರಿಗೂ ನಮ್ಮೂರು ಬಾಳಗಂಚಿಯ ಪರಿಚಯ ಇದ್ದದ್ದು ನನಗೆ ಬಹಳ ಖುಷಿಯನ್ನು ತಂದಿತ್ತು. ಮದುವೆಗೆಂದು ಆ ಊರಿನಲ್ಲಿ ಇದ್ದ ಮೂರ್ನಾಲ್ಕು ದಿನಗಳೂ ಇಡೀ ಊರಿನವರು ನಮ್ಮನ್ನು ಅವರ ಹತ್ತಿರದ ಬಂಧುಗಳೆಂದೇ ನೋಡಿಕೊಂಡು ಬಹುತೇಕರಿಗೆ ನಾವಿಬ್ಬರೂ ಅಕ್ಕಾ-ಭಾವ ಆಗಿಹೋಗಿದ್ದೆವು.
ಇಂದಿಗೂ ಸಹಾ, ನಮ್ಮ ಮಗಳು ಮತ್ತು ನಮ್ಮಾಕಿಯ ಗೆಳತಿಯ ಮಗ ಇಬ್ಬರೂ ಸಹಪಾಠಿಗಳಾಗಿದ್ದು ನಮ್ಮ ಗೆಳೆತನ ಮತ್ತೊಂದು ಪೀಳೀಗೆಗೆ ಮುಂದುವರೆದಿದೆ, ಇಂದಿಗೂ ಸಹಾ, ನಮ್ಮಾಕಿಯ ಗೆಳತಿಯ ತಮ್ಮಾ ರಾಕೇಶ ಪ್ರತೀ ವರ್ಷವೂ ರಕ್ಷಾ ಬಂಧನ ದಿನ ತಪ್ಪದೇ ನಮ್ಮ ಮನೆಗೆ ಬಂದು ನಮ್ಮಾಕಿಯ ಕೈಯ್ಯಲ್ಲಿ ರಕ್ಷೇ ಕಟ್ಟಿಸಿಕೊಂಡು ಹೋಗುವುದಲ್ಲದೇ, ಅವರ ಮನೆಯ ಎಲ್ಲಾ ಶುಭ-ಅಶುಭಕಾರ್ಯಗಳಲ್ಲಿಯೂ ನಾವುಗಳು ಭಾಗಿಯಾಗಿ ಅವರ ಕುಟುಂಬದವರೆಲ್ಲರಿಗೂ ನೆಚ್ಚಿನ ಅಕ್ಕ-ಭಾವನಾಗಿದ್ದರೆ, ರಾಕೇಶ ನಮ್ಮ ಮಕ್ಕಳಿಗೆ ಮುದ್ದಿನ ಮಾವನೂ ಹೌದು. ಮನೆಗೆ ಬಂದಾಗಲೆಲ್ಲಾ ಸುಮಾರು ಎರಡು ಮೂರು ಗಂಟೆಗಳ ಕಾಲ ನಮ್ಮ ಮಕ್ಕಳೊಂದಿಗೆ ಬೆರೆತು ಅವರ ವಿದ್ಯಾಭ್ಯಾಸಗಳನ್ನೆಲ್ಲಾ ವಿಚಾರಿಸಿ ಸೂಕ್ತ ಸಲಹೆಯನ್ನು ಕೊಡುವುದಲ್ಲದೇ ಮಕ್ಕಳಿಗೆ ಉಡುಗೊರೆಯನ್ನೂ ಕೊಟ್ಟು ಒಬ್ಬ ಸೋದರ ಮಾವನ ಎಲ್ಲಾ ಕರ್ತವ್ಯಗಳನ್ನು ಸೂಕ್ತರೀತಿಯಲ್ಲಿ ನಿಭಾಯಿಸುತ್ತಿದ್ದಾನೆ. ಏನ್ ಭಾವಾ.. ಹೇಗೀದ್ದೀರೀ?. ನೀವ್ ಬಿಡಿ ಯಾವಾಗಲೂ ಆರಾಮ್ ಎಂದು ಎತ್ತರದ ಧ್ವನಿಯಲ್ಲಿ ಅವನಿಂದ ಕೇಳುವುದಕ್ಕೇ ಆನಂದವಾಗುತ್ತದೆ. ಈ ರೀತಿಯಾಗಿದೆ ನಮ್ಮ ಮತ್ತು ಮರ್ವಾಡಿ ಕುಟುಂಬಗಳ ಮತ್ತು ರಾಜ್ಯಗಳ ನಡುವಿನ ಅವಿನಾಭಾವ ಸಂಬಂಧವಿದೆ.
ಆದರೆ ಇಂತಹ ಸುಮಧುರ ಸಂಬಂಧಕ್ಕೆ ಹುಳಿ ಹಿಂಡುವಂತಹ ಕೆಲಸ ಕಳೆದ ಒಂದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮಾರ್ವಾಡಿ ಹಟಾವೋ ಎನ್ನುವ ಹ್ಯಾಶ್ ಟ್ಯಾಗಿನಲ್ಲಿ ಹತ್ತಾರು ಸಂದೇಶಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ. ಅದರಲ್ಲೂ ದಕ್ಷಿಣ ಕನ್ನಡದ ಹೃದಯಭಾಗವಾದ ಉಡುಪಿಯಲ್ಲಿ ಅದ್ಯಾವುದೋ ಮಾರ್ವಾಡಿ ಅಂಗಡಿಯಲ್ಲಿ ವಿದ್ಯುತ್ ವೈರ್ ಕೊಂಡಾಗ ಆದ ಅಳತೆಯ ವ್ಯತ್ಯಾಸವಾಗಿರುವ ವಿಡಿಯೋವೊಂದನ್ನು ಹರಿ ಬಿಡುತ್ತಿದ್ದಾರೆ. ಆ ವಿಡೀಯೋದಲ್ಲಿಯೇ ನೋಡಿದಂತೆ ಆಗಿರುವ ತಪ್ಪಿಗೆ ಯಾವುದೇ ರೀತಿಯ ಉದ್ಧಟತನ ತೋರಿಸದೇ, ಸೌಮ್ಯವಾಗಿ ಕ್ಷಮೆ ಕೋರಿ ಸರಿಯಾದ ಅಳತೆಯ ವೈರ್ ಕೊಟ್ಟು ಕಳುಹಿಸಿರುವುದೂ ಸಹಾ ನೋಡಬಹುದಾಗಿದೆ.
ವ್ಯಾಪಾರಂ ದ್ರೋಹ ಚಿಂತನಂ ಎನ್ನುವಂತೆ ವ್ಯಾಪಾರದಲ್ಲಿ ಯಾರೇ ಆಗಲೀ ಮೋಸ ಮಾಡಿದ್ದಲ್ಲಿ ಅದನ್ನು ಖಂಡಿಸೋಣ ಮತ್ತು ಅದನ್ನು ಸರಿಪಡಿಸಿಕೊಳ್ಳುವಂತೆ ಎಚ್ಚರಿಕೆಯನ್ನೂ ಕೋಡೋಣ. ಅದಾದ ನಂತರವೂ ಅದೇ ವ್ಯಾಪಾರಿಗಳು ಮೋಸದ ವ್ಯಾಪಾರ ಮಾಡುತ್ತಿದ್ದಲ್ಲಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವಂತೆ ಪೋಲೀಸರಿಗೆ ದೂರು ಕೊಡೋಣ. ಅದು ಬಿಟ್ಟು ದೂರದ ರಾಜಾಸ್ಥಾನದಿಂದ ಬಂದರೂ ಇಲ್ಲಿಯವರ ಹಾಗೆ ಕನ್ನಡ ಕಲಿತು ಎಲ್ಲರೊಡನೆ ಸೌಹಾರ್ಧಯುತವಾಗಿ ಬಾಳುತ್ತಿರುವ ಮಾರ್ವಾಡಿಗಳನ್ನು ಏಕಾಏಕಿ ಓಡಿಸಿ ಎನ್ನುವ ಅಭಿಯಾನದ ಹಿಂದಿರುವ ಷಡ್ಯಂತ್ರವಾದರೂ ಏನು ಎಂಬುದನ್ನು ಅರಿತು ಕೊಳ್ಳಬೇಕಾಗಿದೆ.
ನಮಗೆಲ್ಲರಿಗೂ ತಿಳಿದಿರುವಂತೆ ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಇರುವ ಅಷ್ಟೂ ಹೋಟೆಲ್ಗಳ ಮಾಲಿಕರೂ ಇದೇ ಉಡುಪಿ ಮೂಲದ ಕನ್ನಡಿಗರೇ ಆಗಿದ್ದಾರೆ. ಅಲ್ಲಿನ ಶಿವಸೇನೆ ಇದನ್ನೇ ಮುಂದಿಟ್ಟುಕೊಂಡು ಮದ್ರಾಸಿಗಳೇ ಮುಂಬೈ ಬಿಟ್ಟು ತೊಲಗೀ ಎಂದು ಗಲಾಟೆ ಮಾಡಿದಾಗ ನಾವೆಲ್ಲರೂ ಉಡುಪಿಯ ಬಂಟರ ಪರವಾಗಿ ನಿಂತು ಪ್ರತಿಭಟಿಸಲಿಲ್ಲವೇ? ಈ ದೇಶದ ಪ್ರತಿಯೊಬ್ಬ ನಾಗರೀಕರೂ ಸಹಾ ಕಾಶ್ಮೀರದಿಂದ (article 370 & 35A ತೆಗೆದು ಹಾಕಿದ ನಂತರ) ಕನ್ಯಾಕುಮಾರಿಯವರೆಗೆ ಕಛ್ ನಿಂದ ಕಟಕ್ ವರೆಗೆ ದೇಶದ ಯಾವ ಮೂಲೆಯಲ್ಲಿ ಬೇಕಾದರೂ ಸ್ವಾಭಿಮಾನಿಯಾಗಿ, ಸ್ವಾವಲಂಭಿಯಾಗಿ ದುಡಿದು ಬದುಕುವ ಹಕ್ಕು ಇದೆಯಲ್ಲವೇ? ಅಂತಹ ಹಕ್ಕನ್ನು ಹತ್ತಿಕ್ಕಲು ಮುಂದಾಗಿರುವ ಪಟ್ಟಭಧ್ರ ಹಿತಾಸಕ್ತಿಯ ಆ ಕಾಣದ ಕೈಗಾಳಾದರೂ ಯಾರು?
ಇವೆಲ್ಲವನ್ನೂ ಸೂಕ್ಷ್ಮವಾಗಿ ಆವಲೋಕಿಸಿ ನೋಡಿದಾಗ ವ್ಯಾಪಾರವನ್ನೇ ಅವಲಂಭಿಸಿರುವ ಮತ್ತೊಂದು ಕೋಮಿನವರು ಮತ್ತು ಕೆಲವೊಂದು ದೇಶವಿರೋಧಿ ಪಟ್ಟ ಭಧ್ರ ಹಿತಾಸಕ್ತಿಯನ್ನು ಹೊಂದಿರುವ ದೇಶದ ಹಿತಶತ್ರುಗಳು ಮತ್ತೊಮ್ಮೆ ಬ್ರಿಟೀಷರಂತೆ ಹಿಂದೂಗಳನ್ನು ಜಾತಿಯ ಆಧಾರಿತವಾಗಿ ಒಡೆದು ಆಳುವ ಕನಸನ್ನು ಕಾಣುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇಂದು ದಿನಸಿ ಅಂಗಡಿಯಿಂದ ಹಿಡಿದು, ಬಹುತೇಕ ಫ್ಯಾನ್ಸಿ ಸ್ಟೋರ್, ಗಿರವಿ ಅಂಗಡಿಗಳು, ಚಿನ್ನ-ಬೆಳ್ಳಿ ವ್ಯಾಪಾರ, ಚಾಟ್ಸ್ ಅಂಗಡಿಗಳು, ಬಟ್ಟೇ ಅಂಗಡಿಗಳು, ಪೇಂಟ್ಸ್ ಮತ್ತು ಹಾರ್ಡ್ವೇರ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಅಂಗಡಿಗಳಲ್ಲಿ ಮಾರ್ವಾಡಿಗಳು ಬೇರೂರ ತೊಡಗಿರುವುದು ಅವರ ವಿರೋಧಿಗಳಿಗೆ ಸಹಿಸಲಾರದಾಗಿದೆ. ಕನ್ನಡವನ್ನು ಕ್ಷಣಮಾತ್ರದಲ್ಲಿಯೇ ಕಲಿತು ತಮ್ಮ ವಾಕ್ಚಾತುರ್ಯ, ಕಡಿಮೆ ಬೆಲೆಯ ಉತ್ತಮ ಗುಣಮಟ್ಟದ ವಸ್ತುಗಳಿಂದ ಜನರ ಜೊತೆಗೊಂದು ವ್ಯಾವಹಾರಿಕ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳುವ ಮೂಲಕ ಬಹುತೇಕ ಸ್ಥಳೀಯರಾಗಿ ಹೋಗುತ್ತಿದ್ದಾರೆ.
ಬಹುಶಃ ಇದೇ ಮೂಲಭೂತವಾದಿಗಳ ಮತ್ತು ಪಟ್ಟಭದ್ರರ ನಿದ್ದೆಯನ್ನು ಕೆಡಿಸಿರಬೇಕು ಅದಕ್ಕಾಗಿಯೇ ಈ ಮಾರ್ವಾಡಿ ಹಟಾವೋ ಅನ್ನುವ ಅಭಿಯಾನ ಆರಂಭಿಸಿ, ಭಾಷೆ ಮತ್ತು ಜಾತಿಯ ಹೆಸರಿನಲ್ಲಿ ಸಂಘರ್ಷವನ್ನು ಏರ್ಪಡಿಸುತ್ತಿದ್ದಾರೆ. ಇದೇ ರೀತಿಯ ಕೆಲ ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ಇದೇ ಮಾರ್ವಾಡಿಗಳು ತಮ್ಮ ದೇವಸ್ಥಾನದ ಮುಂದೆ ಹಾಕಿಕೊಂಡಿದ್ದ ಬ್ಯಾನರ್ ವಿಚಾರವಾಗಿ ರೋಲ್ಕಾಲ್ ಕೊಡಲಿಲ್ಲ ಎನ್ನುವ ವಿಷಯದಲ್ಲಿ ಆರಂಭವಾದ ಸಣ್ಣ ಮಟ್ಟದ ಚಕಮಕಿ ಹಿಂದೀ ಹೇರಿಕೆ ಎನ್ನುವ ಹೆಸರಿನಲ್ಲಿಯೂ ಪ್ರತಿಭಟನೆ ಮತ್ತು ಒಂದೆರಡು ಕಡೆ ಸಣ್ಣ ಪುಟ್ಟ ಘರ್ಷಣೆಗಳು ನಡೆದು ನಂತರ ನಿಜಾಂಶ ತಿಳಿದಾಗ ತಣ್ಣಗಾಗಿದ್ದು ಇನ್ನೂ ಹಚ್ಚ ಹಸಿರಾಗಿಯೇ ಇದೆ.
ಇದನ್ನೇ ನೆಪ ಮಾಡಿಕೊಂದು ನಾಳೆ, ಉಡುಪಿಯಿಂದ ಬೆಂಗಳೂರಿಗೆ, ಮುಂಬೈಯಿಗೆ ಹೋಗಿ ಹೋಟೆಲ್ ನಡೆಸುತ್ತಿರುವವರ ವಿರುದ್ಧ ಕರಾವಳಿಯನ್ಸ್ ಹಟಾವೋ ಎನ್ನುವ ಅಭಿಯಾನ ಮಾಡಲು ಮುಂದಾದರೇ ಒಪ್ಪುವುದಕ್ಕೆ ಆಗುತ್ತದೆಯೇ? ಇದು ಹೀಗೆಯೇ ಮುಂದು ವರಿಸುತ್ತಾ ಹೋಗಿ ದೇವಾಲಯಗಳಲ್ಲಿ ಬ್ರಾಹ್ಮಣರದ್ದೇ ಪ್ರಾಭಲ್ಯ ಹಾಗಾಗಿ ಬ್ರಾಹ್ಮಣರನ್ನು ಹಟಾವ್ ಎಂದು ಯಾರೋ ತಲೆಕೆಟ್ಟವರು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟರೇ ಒಪ್ಪಲು ಸಾಧ್ಯವೇ? ಮಾರ್ವಾಡಿಗಳಾಗಲಿ, ಬ್ರಾಹ್ಮಣರಾಗಲೀ ಅವರೆಲ್ಲರೂ ತಮ್ಮ ಉದರ ನಿಮಿತ್ತವಾಗಿ ತಾವು ಕಲಿತ ವಿದ್ಯೆಯಿಂದ ಪೂಜೆ ಪುನಸ್ಕಾರಗಳನ್ನು ಮಾಡುತ್ತಲೋ, ವ್ಯಾಪಾರ ಮಾಡುತ್ತಲೋ ಜೀವನ ನಡೆಸುತ್ತಿದ್ದಾರೆಯೇ ಹೊರತು ಮತ್ತೊಬ್ಬರ ತಲೆ ಒಡೆದು ಹಣ ಸಂಪಾದನೆ ಮಾಡುತ್ತಿಲ್ಲ ಎನ್ನುವುದು ಗಮನಾರ್ಹವಾದ ಅಂಶವಾಗಿದೆ.
ಈಗಾಗಲೇ ಹೇಳಿದಂತೆ ವ್ಯಾಪಾರ ವ್ಯವಹಾರಗಳಲ್ಲಿ ಯಾವುದೇ ಧರ್ಮದ ಸೋಂಕಿರಬಾರದು. ಯಾವುದೇ ಧರ್ಮದ ವ್ಯಾಪಾರಿಯಾಗಲೀ ಒಂದು ವೇಳೆ ಮೋಸ ಮಾಡುತ್ತಿದ್ದಲ್ಲಿ ಅವರ ವಿರುದ್ದ ಪೋಲೀಸರಿಗಾಗಲೀ, ಗ್ರಾಹಕರ ಹಿತರಕ್ಷಣ ಸಂಸ್ಥೆಗೆ ದೂರು ನೀಡುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಸೂಕ್ತವಾದ ವ್ಯವಸ್ಥೆಯಾಗಿದೆ.
ಅಷ್ಟಕ್ಕೂ ಮಾರ್ವಾಡಿಗಳಿಗೆ ಕೆಂಪು ಹಾಸಿನ ರತ್ನಕಂಬಳಿ ಹಾಸಿ ಕರೆ ತಂದವರೂ ಇದೇ ರಿಯಲ್ ಎಸ್ಟೇಟ್ ಮಾಫಿಯಾದವರೇ ಅಲ್ಲವೇ? ಸ್ಥಳೀಯರಿಗಿಂತ ಹೆಚ್ಚು ಕಮಿಷನ್ ಕೊಡ್ತಾರೆ ಮತ್ತು ಸ್ವಲ್ಪ ಹೆಚ್ಚಿನ ಬೆಲೆಗೆ ಆಸ್ತಿಗಳನ್ನು ಕೊಂಡ್ಕೊಳ್ತಾರೆ ಅಂತ ಸ್ಥಳೀಯರಿಗೆ ಪುಸಲಾಯಿಸಿ ಬೆಂಗಳೂರಿನ ಹೃದಯ ಭಾಗವಾದ ಅಕ್ಕೀಪೇಟೆ, ಚಿಕ್ಕ ಪೇಟೆ, ಬಳೇ ಪೇಟೆ, ಕುಭಾರ ಪೇಟೆ, ತಿಗಳರಪೇಟೆ…. ಹೀಗೆ ಹತ್ತಾರು ಪೇಟೆಗಳಲ್ಲಿ ಮಾರ್ವಾಡಿಗಳನ್ನು ಕರೆತಂದು ಅವರು ಈಗ ಪ್ರಾಭಲ್ಯಮಾನಕ್ಕೆ ಬಂದರೆಂದು ಅವರನ್ನು ಈಗ ಆಚೆಗೆ ದೂಡಿ ಎನ್ನುವುದು ಬಲಾತ್ಕಾರ ಮತ್ತು ಸರ್ವಾಧಿಕಾರೀ ಧೋರಣೆಯಲ್ಲದೇ ಮತ್ತೇನು?
ಇಂದು ಮಾರ್ವಾಡಿ ಹಟಾವೋ ಎಂಬುವುದಕ್ಕೆ ಹಿಂಬದಿಯಲ್ಲಿ ನಿಂತು ಬೆಂಕಿ ಹಚ್ಚುತ್ತಿರುವ ಕಾಣದ ಕೈಗಳು ಮುಂದೊಂದು ದಿನ ಜಾತಿ ಜಾತಿಗಳನ್ನು ಎತ್ತಿಕಟ್ಟಿ ಒಂದೊಂದೇ ವ್ಯಾಪಾರ ಕ್ಷೇತ್ರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಸಾಧ್ಯತೆಗಳನ್ನೂ ಅಲ್ಲಗಳಿಯಲಾಗದು ಅಲ್ವೇ?
ಹಾಗೆ ನೋಡಿದಲ್ಲಿ ಮಾರ್ವಾಡಿಗಳು ದೇಶಕ್ಕೆ ದ್ರೋಹ ಬಗೆಯುವ ನಮಕ್ ಹರಾಮ್ ಕೆಲಸವನ್ನು ಮಾಡಿರುವ ಉದಾಹರಣೆಯಂತೂ ಎಲ್ಲೂ ಕಂಡಿಲ್ಲ ಮತ್ತು ಕೇಳಿಲ್ಲ. ತಾವು ಸಂಪಾದಿಸಿದ ಹಣದಲ್ಲಿ ಇಂತಿಷ್ಟು ಪಾಲಿನ ಹಣ ಸಮಾಜ ಸೇವೆಗಾಗಿ ಎಂದು ಎತ್ತಿಟ್ಟು ಅದನ್ನು ಅವರ ಸಮಾಜ ಮುಖಾಂತರ ಯಾವುದೇ ಧರ್ಮ ಮತ್ತು ಜಾತೀಯನ್ನೂ ನೋಡದೇ, ಅನೇಕ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಇಂದಿಗೂ ಸಹಾ ಅನೇಕ ಬಸ್ ನಿಲ್ದಾಣಗಳಲ್ಲಿ ತಂಗುದಾಣ ಮತ್ತು ಕುಡಿಯಲು ಶುದ್ಧ ನೀರಿನ ಅರವಟ್ಟಿಗೆಗಳನ್ನು ಇದೇ ಮಾರ್ವಾಡಿ ಸಮಾಜ ರಾಜ್ಯಾದ್ಯಂತ ನಿರ್ಮಾಣ ಮಾಡಿ, ಅದನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆಯನ್ನೂ ಮಾಡುತ್ತಿರುವು ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ. ಚೈನಾ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂದು ಅವರು ಧರ್ಮ ಗುರುಗಳು ಕರೆ ಕೊಟ್ಟಿದ್ದನ್ನು ಚಾಚೂ ತಪ್ಪದೇ ಪಾಲಿಸುತ್ತಾ, ಅದಷ್ಟೂ ಚೈನಾ ಉತ್ಪನ್ನಗಳನ್ನು ತಮ್ಮ ಮಳಿಗೆಯಲ್ಲಿ ಮಾರುತ್ತಿಲ್ಲ ಎನ್ನುವುದು ಸತ್ಯವೇ ಸರಿ.
ಹಿಂದೂ ಮಾರ್ವಾಡಿಗಳಿಗೆ ವ್ಯಾಪಾರದಲ್ಲಿ ತೊಂದರೆಯುಂಟು ಮಾಡಿ ಅವರ ವ್ಯಾಪಾರವನ್ನು ಕೈವಶ ಮಾಡಿಕೊಳ್ಳಲು ಕೆಲ ಕಾಣದ ಕೈಗಳು ನಡೆಸುತ್ತಿರುವ ಈ ಹುನ್ನಾರಕ್ಕೆ ನಾವುಗಳಾರೂ ಬಲಿಯಾಗದೇ ಇಂತಹ ವಿರೋಧಿ ಸಂದೇಶಗಳನ್ನು ಸಂಪೂರ್ಣವಾಗಿ ಓದದೇ ಮತ್ತೊಬ್ಬರಿಗೆ ರವಾನಿಸದಿರೋಣ.
ಅದೇ ರೀತಿ, ಮಾರ್ವಾಡಿ ಸಮುದಾಯಕ್ಕೂ ಇದು ಎಚ್ಚರಿಕೆಯ ಗಂಟೆಯಾಗಿರಲಿ. ವ್ಯಾಪಾರ ವ್ಯವಹಾರ ಮಾಡುವಾಗ ತೂಕ ಮತ್ತು ಅಳತೆಯಲ್ಲಿ ಯಾವುದೇ ರೀತಿಯಲ್ಲಿ ಮೋಸ ಮಾಡದೇ ನಿಶ್ಪಕ್ಷಪಾತವಾಗಿ ತಮ್ಮ ವ್ಯವಹಾರವನ್ನು ಮುಂದುವರೆಸಿಕೊಂಡು ಹೋಗುವ ಮೂಲಕ ಜನಮಾನಸದಲ್ಲಿ ಮತ್ತೊಮ್ಮೆ ನಂಬಿಕೆಯನ್ನು ಉಳಿಸಿಕೊಳ್ಳುವ ಗುರುತರವಾದ ಜವಾಭ್ಧಾರಿ ಅವರದ್ದಾಗಿದೆ. ಸಮಾಜದಲ್ಲಿ ಯಾರಿಗೇ ಅನ್ಯಾಯವಾದರೂ ಅದನ್ನು ಸರಿಪಡಿಸಲು ಸಂವಿಧಾನಾತ್ಮಕ ಕಾನೂನಿ ಚೌಕಟ್ಟಿನಲ್ಲಿ ಹೋರಾಡಬೇಕೇ ಹೋರತು ಅವರನ್ನು ನಿಷೇಧಿಸಿ, ಇವರನ್ನು ಹೊರಗೋಡಿಸಿ ಎನ್ನುವ ಧಮನಕಾರಿ ದಬ್ಬಾಳಿಕೆಯ ಸರ್ವಾಧಿಕಾರ ಸ್ವಲ್ಪವೂ ಸಲ್ಲದ್ದಾಗಿದೆ ಏಕೆಂದರೆ ಮಾರ್ವಾಡಿಗಳು ನಮ್ಮವರೇ ಅಲ್ವೇ?
ಏನಂತೀರೀ?