ಬಾಳಗಂಚಿ ಊರ ಹಬ್ಬ ಆಚರಿಸುವಿಕೆ

ನಮ್ಮೂರು ಬಾಳಗಂಚಿಯ ಸಮಸ್ತ ಗ್ರಾಮಸ್ಥರಿಗೆ ಸಾಷ್ಟಾಂಗ ಪ್ರಣಾಮಗಳು. ಕಳೆದ ವರ್ಷ ದೊಡ್ಡ ಹಬ್ಬಕ್ಕೆ ಊರಿಗೆ ಬಂದು ಸಂಭ್ರಮಿಸಿ ಹೋದ ನಂತರ, ಊರಿಗೆ ಬರುವ ಅವಕಾಶವೇ ದೊರೆತಿರಲಿಲ್ಲ. ಈ ವರ್ಷ ಯುಗಾದಿಯ ಸಮಯದಲ್ಲಿ ಕೋರೋನಾ ಮಾಹಾಮಾರಿಯ ಸಂಬಂಧಿತವಾಗಿ ಪ್ರಪಂಚಾದ್ಯಂತವೇ ಲಾಕ್ ಡೌನ್ ಇದ್ದ ಕಾರಣ ಊರ ಹಬ್ಬ ಮುಂದೂಡಿದ್ದು ಸ್ವಲ್ಪ ಬೇಸರವೆನಿದರೂ, ಈ ವರ್ಷ ಹಬ್ಬ ನಿಲ್ಲಿಸದೇ ಮುಂದೂಡಿರುವ ವಿಷಯ ತುಸು ನೆಮ್ಮದಿ ತಂದಿದ್ದು, ಕಾಲ ಎಲ್ಲವೂ ಸರಿ ಹೋದ ನಂತರ ಪ್ರತೀ ವರ್ಷದಷ್ಟು ವಿಜೃಂಭಣೆಯಲ್ಲದಿದ್ದರೂ ಸರಳ ಸಂಭ್ರಮವಾಗಿ, ಶಾಸ್ತ್ರೋಕ್ತವಾಗಿ ಆಚರಿಸಬಹುದು ಎನ್ನುವುದು ನನ್ನನ್ನೂ ಒಳಗೊಂಡು ಭಕ್ತಾದಿಗಳ ಆಶಯವೂ ಆಗಿತ್ತು ಎನ್ನುವುದಂತೂ ಸುಳ್ಳಲ್ಲ. ಒಳ್ಳೆಯ ಕೆಲಸಗಳಿಗೆ ಭಗವತಿಯ ಪ್ರೇರಣೆ ಇರುತ್ತದೆ ಎನ್ನುವಂತೆ ಸಾಮಜಿಕ ಅಂತರವನ್ನು ಕಾಪಾಡಿಕೊಂಡು ಊರ ಹಬ್ಬ ಮಾಡಲು ಸರ್ಕಾರದ ಕಡೆಯಿಂದ ಯಾವುದೇ ಆಡ್ಡಿ ಇಲ್ಲ ಎಂಬ ಆದೇಶವನ್ನು ತಹಶೀಲ್ದಾರ್ ಹೊರಡಿಸಿದಾಗಲಂತೂ ಸಮಸ್ತ ಭಕ್ತಾದಿಗಳ ಆತಂಕ ಸರಿದು ಆಶ್ವಯುಜ ಮಾಸದಲ್ಲಿ ಸಂಭ್ರಮದ ನಾಡ ಹಬ್ಬ ದಸರ ನಂತರ ಕಾರ್ತೀಕ ಮಾಸದಲ್ಲಿ ಊರ ಹಬ್ಬ ಆಚರಿಸಬಹುದು ಎನ್ನುವುದು ಎಲ್ಲಾ ಭಕ್ತಾದಿಗಳ ಸಂಕಲ್ಪವೂ ಆಗಿತ್ತು. ಎಲ್ಲದ್ದಕ್ಕಿಂತಲೂ ಖುಷಿ ಕೊಟ್ಟ ವಿಷಯವೇನಂದರೆ, ಪ್ರಪಂಚಾದ್ಯಂತ ತನ್ನ ಕಬಂಧ ಬಾಹುವನ್ನು ಚಾಚಿದ್ದ ಕೋರೋನಾದ ಅರ್ಭಟ ನಮ್ಮೂರಿನಲ್ಲಿ ಇಲ್ಲದಿರುವುದು ಮನಸ್ಸಿಗೆ ನೆಮ್ಮದಿ ಕೊಟ್ಟಿತು.

ಆದರೆ ಇಂದು ಊರಿಗೆ ಬಂದು ತಾಯಿ ಹೊನ್ನಮ್ಮ ಮತ್ತು ನಮ್ಮ ಆರಾಧ್ಯ ದೈವ ಲಕ್ಷ್ಮೀನರಸಿಂಹ ಸ್ವಾಮಿಯ ದರ್ಶನ ಪಡೆದು, ಊರಿನಲ್ಲಿ ಭೇಟಿಯಾದ ಪ್ರತಿಯೊಬ್ಬ ಗ್ರಾಮಸ್ಥರಲ್ಲಿಯೂ, ಊರ ಹಬ್ಬದ ಕುರಿತಂತೆ, ಊರಿನ ಹಿರಿಯರಿಂದ ಯಾವುದೇ ಶುಭ ಸೂಚನೆಗಳು ಬಾರದಿರುವುದು ಆತಂಕವನ್ನು ಮೂಡಿಸಿರುವುದನ್ನು ಕೇಳಿದಾಗ ಮತ್ತು ನೋಡಿದಾಗ ಮನಸ್ಸಿಗೆ ಬೇಸರವಾಗಿದ್ದಂತೂ ಸುಳ್ಳಲ್ಲ. ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಜನ್ಮಿಸುವ ಪ್ರತಿಯೊಬ್ಬರಿಗೂ ತಮ್ಮ ಜೀವಿತಾಧಿಯಲ್ಲಿ ಐದು ಋಣಗಳನ್ನು ತೀರಿಸಲೇ ಬೇಕಾದ ಜವಾಬ್ಧಾರಿಯನ್ನು ಹೊಂದಿರುತ್ತಾರೆ. ಹಾಗಾಗಿಯೇ ಋಣಭಾರವೋ, ಮಣಭಾರವೋ ಎಂಬ ಗಾದೆಯ ಮಾತಿದೆ. ಆ ಐದು ಋಣಗಳಾವುವೆಂದರೆ ಪಿತೃ ಋಣ, ದೇವ ಋಣ, ಋಷಿ ಋಣ, ಭೂತ ಋಣ ಮತ್ತು ಮನುಷ್ಯ ಋಣ.

ಈ ಭೂಮಿಯಲ್ಲಿ ಜನ್ಮ ಪಡೆದ ನಂತರ ನಮಗೂ ನಮ್ಮ ಹುಟ್ಟಿದ ಊರಿಗೂ ಒಂದು ರೀತಿಯ ಅವಿನಾಭಾವ ಸಂಬಂಧವೇರ್ಪಡುತ್ತದೆ. ಹಾಗಾಗಿ ನಾವುಗಳು ನಮ್ಮನ್ನು ಪರಿಚಯಿಸಿಕೊಳ್ಳುವುದೇ ನಮ್ಮ ಹುಟ್ಟೂರಿನ ಮೂಲಕವೇ. ವಯಕ್ತಿಕವಾಗಿ ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳದಿದ್ದರೂ, ವರ್ಷಕ್ಕೊಮ್ಮೆ ಇಲ್ಲವೇ ಎರಡು ಬಾರಿ ಊರಿಗೆ ಬರುವ ಉತ್ಸವ ಮೂರ್ತಿ ಎನಿಸಿದ್ದರೂ , ನನ್ನ ಹೆಸರಾದ ಶ್ರೀಕಂಠ ಜೊತೆಗೆ ಬಾಳಗಂಚಿ ಸೇರಿಸಿಕೊಂಡಿರುವುದಲ್ಲದೇ ನಮ್ಮ ಮಕ್ಕಳ ಹೆಸರಿನೊಂದಿಗೂ ನಮ್ಮ ಪೂರ್ವಜರ ಹೆಮ್ಮೆಯ ಊರು ಬಾಳಗಂಚಿಯನ್ನು ಸೇರಿಸಿಕೊಂಡೇ ಹೆಮ್ಮೆಯಿಂದ ಮೆರೆಯುತ್ತಿದ್ದೇವೆ. ಇದೇ ರೀತಿ ನೂರಾರು ವರ್ಷಗಳ ಹಿಂದೆಯೇ ವಿವಿಧ ಕಾರಣಗಳಿಂದ ಬಾಳಗಂಚಿಯನ್ನು ಬಿಟ್ಟು ಹೋಗಿರುವ ಎಷ್ಟೋ ಮಂದಿ ಇಂದಿಗೂ ತಮ್ಮ ಹೆಸರಿನೊಂದಿಗೆ ಬಾಳಗಂಚಿಯನ್ನು ಸೇರಿಸಿಕೊಂಡಿರುವ ಅನೇಕ ಖ್ಯಾತನಾಮರ ಉದಾಹರಣೆಗಳೆಷ್ಟೋ ಇವೆ

ಹಾಗಾಗಿ ನಮಗೆಲ್ಲಾ ಊರಿಗೆ ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ಬರಲು ಪ್ರೇರೇಪಿಸುವಂತಹದ್ದೇ ನಮ್ಮ ಕುಲದೇವರು, ಆರಾಧ್ಯ ದೈವ ಮತ್ತು ಗ್ರಾಮದೇವತೆಗಳ ಹಬ್ಬ. ಹಾಗಾಗಿಯೇ ಪ್ರತೀ ವರ್ಷ ನಮ್ಮೂರಿನ ಊರ ಹಬ್ಬ, ಜಾತ್ರೆಗಳಿಗೆ ಎಷ್ಟೇ ಕಷ್ಟವಾದರೂ ಸಕುಟುಂಬ ಸಮೇತರಾಗಿ ಬಂದು ಗ್ರಾಮಸ್ಥರ ಜೊತೆ ಒಂದಾಗಿ ಸಂಭ್ರಮ ಸಡಗರದಿಂದ ಊರ ಹಬ್ಬದಲ್ಲಿ ಪಾಲ್ಕೊಂಡು ದೇವಋಣವನ್ನು ತೀರಿಸುತ್ತಾ ಕೃಪಾರ್ಥರಾಗುವುದು ಅನೂಚಾನವಾಗಿ ತಲೆತಲಾಂತರದಿಂದಲೂ ನಡೆದು ಬಂದಿರುವಂತಹ ಸತ್ ಸಂಪ್ರದಾಯ.

ನನಗೆ ತಿಳಿದು ಬಂದಂತೆ ನಮ್ಮ ಊರಿನ ಸುತ್ತಮುತ್ತಲಿನ ಊರ ಹಬ್ಬಗಳು ಸದ್ದು ಗದ್ದಲವಿಲ್ಲದೇ ಈಗಾಗಲೇ ಸರಳವಾಗಿ ಆಚರಿಸಿದ ವಿಷಯ ಒಂದೊಂದಾಗಿ ತಿಳಿದು ಬರುತ್ತಿದೆ. ಮೊನ್ನೆ ವಿಜಯದಶಮಿಯಂದು ಪಕ್ಕದ ಹಿರೀಸಾವೆಯ ಚೌಡೇಶ್ವರೀ ದೇವಾಲಯದಲ್ಲಿ ಬನ್ನೀ ಉತ್ಸವ ಆಚರಿ‌ಸಿ ಉತ್ಸಾಹಿತರಾಗಿ, ಸರಳವಾಗಿ ಅವರ ಊರಿನ ಜಾತ್ರೆಯನ್ನು ಅತೀ ಶೀಘ್ರವಾಗಿ ಆಚರಿಸುವ ಉಮ್ಮೇದಿನಲ್ಲಿದ್ದಾರೆ. ನಮ್ಮ ಊರಿನ ಪಕ್ಕದಲ್ಲೇ ಇರುವ ನಮ್ಮ ಊರಿನಂತೆಯೇ ಏಪ್ರಿಲ್ ತಿಂಗಳಲ್ಲಿ ನಡೆಯುತ್ತಿದ್ದ, ಹುಲಿಕೆರೆ ಅಮ್ಮನ ಹಬ್ಬ ಕೂರೋನಾ ಹಬ್ಬದ ಪ್ರಯುಕ್ತ ಮುಂದೂಡಿದ್ದವರು ಈಗ ಸಮಸ್ತ ಭಕ್ತಾದಿಗಳೆಲ್ಲರೂ ಒಗ್ಗಟ್ಟಿನಿಂದ ಸೇರಿ ಕಳೆದ ಶುಕ್ರವಾರ ದಿಂದ ಹಬ್ಬ ಮಾಡುತ್ತಿದ್ದಾರೆ‌.

ಇದೆಲ್ಲದರ ಜೊತೆ ಲಕ್ಷಾಂತರ ಜನರು ಸೇರಿ ವಿಜೃಂಭಣೆಯಿಂದ ಆಚರಿಸುತ್ತಿದ್ದ ನಾಡ ಹಬ್ಬ ಮೈಸೂರಿನ ದಸರಾ ಈ ಬಾರಿ ಎಂದಿನಂತೆ ಆಡಂಭರ ಇಲ್ಲದಿದ್ದರೂ ಸರಳವಾಗಿಯಾದರೂ ಶ್ರಾಸ್ತ್ರೋಕ್ತವಾಗಿ ಸಂಭ್ರಮದಿಂದ ಕೆಲವೇ ಕೆಲವು ಜನರ ಸಮ್ಮುಖದಲ್ಲಿ ಯಶಸ್ವಿಯಾಗಿ ಯಾವುದೇ ಅಡೆ ತಡೆಯಿಲ್ಲದೇ ಆಚರಿಸಲ್ಪಟ್ಟು ನಮಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದರೂ ತಪ್ಪಾಗಲಾರದು.

ನನಗೆ ವಯಕ್ತಿಕವಾಗಿ ತಿಳಿದ ಈ ಉದಾರಣೆಗಳನ್ನು ಸಾಂಧರ್ಭಿಕವಾಗಿ ಕೊಟ್ಟಿದ್ದೇನೆಯೇ ಹೊರತು ನಮಗೆ ನಿಮಗೆ ತಿಳಿಯದೇ ಇರುವಂತಹ ಅನೇಕ ಊರ ಹಬ್ಬಗಳು ಸದ್ದಿಲ್ಲದೇ ಸಡಗರ ಸಂಭ್ರಮದಿಂದ ಯಾವುದೇ ಗೌಜು ಗದ್ದಲವಿಲ್ಲದೇ ಆಚರಿಸಲ್ಪಟ್ಟಿದೆ. ಹಾಗಾಗಿ ದಯವಿಟ್ಟು ಹಬ್ಬಕ್ಕೆ ಸಂಬಂಧ ಪಟ್ಟವರು ಸ್ವಲ್ಪ ಆಸ್ಥೆ ವಹಿಸಿ ನಮ್ಮ ಬಾಳಗಂಚಿ ಹೊನ್ನಮ್ಮನ ಹಬ್ಬವನ್ನು ಅತೀ ಶೀಘ್ರದಲ್ಲಿ ಆಚರಿಸುವಂತೆ ಈ ಮೂಲಕ ಕಳಕಳಿಯ ವಿನಂತಿ.

ನಮಗೆಲ್ಲಾ ತಿಳಿದಂತೆ ಚೋಮನ ಹಬ್ಬದಂದು ಅಶ್ವತ್ಥ ಕಟ್ಟೆಯ ಬದಿಯಲ್ಲಿ ಹಸಿರು ಚೋಮನಿಂದ ಮಳೆ, ಬೆಳೆ ಶಾಸ್ತ್ರ ಕೇಳಿ, ಮರು ದಿನ, ರಂಗ ಮಂಟಪದ ಮುಂದೆ ಗುಡಿಗೌಡರ ಕುಟುಂಬದವರು ಹೊನ್ನಾರು‌ ಕಟ್ಟಿ ಸಾಂಕೇತಿಕವಾಗಿ ಉತ್ತಿ ಬಿತ್ತಿದ ನಂತರವೇ ಬಾಳಗಂಚಿಯ ಸುತ್ತಮುತ್ತಲಿನ ಹದಿನಾರು ಹಳ್ಳಿಗಳ ರೈತಾಪಿ ವರ್ಗ ಆರಂಭವನ್ನು ಪ್ರಾರಂಭಿಸುವುದು ಅನೂಚಾನವಾಗಿ ನಡೆದುಕೊಂಡು ಬಂದ ವಾಡಿಕೆ.ಈ ಬಾರಿ ಆ ಸಂಪ್ರದಾಯಕ್ಕೆ ಕಡಿವಾಣ ಬಿದ್ದು, ಎಲ್ಲರೂ ಕೃಷಿ ಚಟುವಟಿಕೆಗಳನ್ನು ಆರಂಭಿಸಿ, ಉತ್ತಮವಾದ ಮಳೆ ಬಂದ ಕಾರಣ ಹೆಚ್ಚಿನ ಬೆಳೆ ನಿರೀಕ್ಷಿಸಿದ್ದರು. ಕಾಕತಾಳೀಯವೋ ಅಥವಾ ದೈವೀ ಅವಕೃಪೆಯೋ ಕಾಣೇ, ಚೋಮನ ಹಬ್ಬವೇ ನಡೆಯದೇ ಹೊನ್ನಾರು‌ ಕಟ್ಟದಿದ್ದ‌ ಕಾರಣ, ಬೇಳೆ ಕಾಳುಗಳು, ಸಿರಿ ಧಾನ್ಯಗಳು ನಿರೀಕ್ಷಿಸಿದ ಮಟ್ಟಕ್ಕೆ ಬಾರದೇ ರೈತಾಪಿಜನರು ಆತಂಕಕ್ಕೆ ಈಡಾಗಿರುವ ಆಘಾತಕಾರಿ ಸುದ್ದಿಯೂ ಕೇಳಿ ಬಂದಿದೆ.

ಯಾವುದೋ ಕುಂಟು ನೆಪದಿಂದ ಹಬ್ಬವನ್ನು ನಿಲ್ಲಿಸುವ ಮೂಲಕ, ಅನಾದಿ ಕಾಲದಿಂದಲೂ ನಡೆದು ಬಂದ ಸತ್ ಸಂಪ್ರದಾಯವನ್ನು ತುಂಡರಿದ ಅಪಕೀರ್ತಿ ನಮ್ಮ ಊರಿಗೆ ಬಾರದಿರಲಿ ಮತ್ತು ನಮ್ಮ ಮುಂದಿನ ಪೀಳಿಗೆಗೆ ಹಬ್ಬವನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ನಿಲ್ಲಿಸಬಹುದು ಎಂಬ ‌ಕೆಟ್ಟ ಸಂಪ್ರದಾಯವನ್ನು ನಾವೇ ಹಾಕಿಕೊಟ್ಟಂತೆ ಆಗುವ ಕಾರಣ, ಯಾರೇ ಬರಲೀ, ಬಾರದಿರಲೀ, ಎಷ್ಟೇ ಕಷ್ಟ ಬಂದರೂ ಬಾಳಗಂಚಿ ಹೊನ್ನಮ್ಮನ ಹಬ್ಬ ನಿಂತಿಲ್ಲ ಮತ್ತು ನಿಲ್ಲುವುದಿಲ್ಲ ಎಂದು ಹೆಮ್ಮೆಯಿಂದ ಮತ್ತು ಗರ್ವದಿಂದ ಹೇಳಿಕೊಳ್ಳುತ್ತಿದ್ದ ಹೊನ್ನಮ್ಮನ ಭಕ್ತಾದಿಗಳ ನಂಬಿಕೆ ಚ್ಯುತಿ ಬಾರದಂತೆ ಮತ್ತು ಅಕ್ಕ ಪಕ್ಕದ ಹಳ್ಳಿಯವರು ಆಡಿಕೊಳ್ಳಂದಂತೆ ಪರಿಸ್ಥಿತಿಯನ್ನು ಸರಿದೂಗಿಸಿಕೊಂಡು ಹೋಗುವ ಗುರುತರ ಜವಾಬ್ಧಾರಿ ಸಮಸ್ತ ಬಾಳಗಂಚಿ ಗ್ರಾಮಸ್ಥರ ಮೇಲಿದೆ ಎಂದರೂ ತಪ್ಪಾಗಲಾರದು.

ಎಂದಿನಂತೆ ವಿಜ್ರಂಭಣೆಯಿಂದ ಮಾಡಲು ಆಗದಿದ್ದರೂ, ದೇಶಾದ್ಯಂತ ಇರುವ ಹೊನ್ನಮ್ಮನ ಭಕ್ತಾದಿಗಳು, ಬಾಳಗಂಚಿ ಮತ್ತು ಸುತ್ತಮುತ್ತಲಿನ ಕೆಲವೇ ಕೆಲವು ಆಸ್ತಿಕರೊಂದಿಗೆ ಸರಳವಾಗಿ ಆದರೂ, ಶಾಸ್ತ್ರೋಕ್ತವಾಗಿ ಊರ ಹಬ್ಬವನ್ನು ಮುಗಿಸುವಲ್ಲಿ ಸಪಲರಾಗಬೇಕಾಗಿದೆ.ಇನ್ನೂ ಕಾಲ ಮಿಂಚಿಲ್ಲ ಹಾಸನಾಂಬೆಯ ಉತ್ಸವ ಚಾಮುಂಡೇಶ್ವರಿ‌ ಉತ್ಸವದಂತೆ ಸರಳವಾಗಿ ಹಬ್ಬವನ್ನು ಆಚರಿಸುವ ಮೂಲಕ ಗ್ರಾಮಸ್ಥರು ಮತ್ತು ಹೊನ್ನಮ್ಮನ ಭಕ್ತಾದಿಗಳಲ್ಲಿ ಮನೆಮಾಡಿರುವ ಆತಂಕವನ್ನು ದೂರ ಮಾಡೋಣ. ಇದರಿಂದ ಕಳೆದ ಆರು ತಿಂಗಳಿನಿಂದ ಜಡ್ಡು ಗಟ್ಟಿ ಹೋಗಿರುವ ಗ್ರಾಮಸ್ಥರಿಗೆ ಉತ್ಸಾಹ ಮೂಡುವುದಲ್ಲದೇ, ಕಳೆದು ಹೋದ ಊರಿನ ಕಳೆ ಮತ್ತೊಮ್ಮೆ ಬರುತ್ತದಲ್ಲದೇ ಊರಿನ ಶುದ್ಧಿಕರಣವಾದಂತಾಗುತ್ತದೆ.

ಮಿಂಚಿ ಹೋದ ಮೇಲೆ ಚಿಂತಿಸಿ ಫಲವಿಲ್ಲ ಎನ್ನುವಂತೆ ಚಿಂತಿಸುತ್ತಲೇ ಕಾಲ ಕಳೆಯುವ ಬದಲು ಈ ಕಾರ್ತೀಕ ಮಾಸದಲ್ಲೇ ಹೊನ್ನಮ್ಮನ ಹಬ್ಬವನ್ನು ಆಚರಿಸುವ ಮೂಲಕ ಬಾಳಗಂಚಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲದೇ, ದೇಶಾದ್ಯಂತ ಇರುವ ಹೊನ್ನಾದೇವಿ ಭಕ್ತಾದಿಗಳಿಗೆ ಸಂಭ್ರಮವನ್ನು ಮೂಡುವಂತಾಗಲೀ ಅಲ್ವೇ?

ಏನಂತೀರೀ?

2 thoughts on “ಬಾಳಗಂಚಿ ಊರ ಹಬ್ಬ ಆಚರಿಸುವಿಕೆ

 1. ನಿಮ್ಮ ಅಭಿಪ್ರಾಯ ಮತ್ತು ಸಲಹೆ ತುಂಬಾನೇ ಪರಿಣಾಮಕಾರಿಯಾಗಿ ರುವುದರಿಂದ ಈಗಾಗಲೇ ಹಬ್ಬದ ಚರ್ಚೆಗಳು ನಡೆಯುತ್ತಿವೆ.
  ನಾಳೆ ಇದಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಹತ್ತಿರ ಸಭೆ ನಡೆಯಲು ತೀರ್ಮಾನಿಸಲಾಗಿದೆ.
  ದೇವಿಯ ಆಶಯ ಏನಿರುವುದೋ ನಾಳೆ ವರೆಗೂ ಕಾದು ನೋಡಬೇಕಿದೆ.
  ಇದರ ಬಗ್ಗೆ ತಮ್ಮ ಲೇಖನದಲ್ಲಿ ಜಾಗ್ರತೆ ಮೂಡಿಸಿದಕ್ಕೇ ತುಂಬು ಹೃದಯದ ಧನ್ಯವಾದಗಳು 🙏

  Liked by 1 person

  1. ಬಾಳಗಂಚಿ ಊರಿಗನಾಗಿ, ಹೊನ್ನಾದೇವಿಯ ಭಕ್ತನಾಗಿ‌ ನನ್ನ ಪಾತ್ರ ನಿರ್ವಹಿಸಿದ್ದದೇನೆ. ಇದರಲ್ಲಿ ಧನ್ಯವಾದಗಳ‌ ಮಾತೇ ಬರಬಾರದು.

   ಕಾಕತಾಳಿಯವೋ ಆ ದೇವಿಯ ಆಜ್ಞೆಯೋ ಎನ್ನುವಂತೆ, ಇದೇ ಸಂಧರ್ಭದಲ್ಲಿ ನಾವಯ ಊರಿಗೆ ಬಂದು ಎಲ್ಲರ ಸಮಸ್ಯೆಗಳನ್ನು, ಮನದಾಳದ ಮಾತುಗಳನ್ನು ಅರಿತು ಅದಕ್ಕೆ ಪೂರಕವಾದ ಲೇಖನ ಬರೆಯುವಂತೆ ನಿಮ್ಮೆಲ್ಲರ ಪ್ರೋತ್ಸಾಹ ಶ್ಲಾಘನೀಯ.

   ನಮ್ಮ ನಿಮ್ಮ ಪ್ರೀತಿ ಪೂರ್ವಕ ಸ್ನೇಹ ವಿಶ್ವಾಸ ಸದಾಕಾಲವೂ ಹೀಗೇ ಮುಂದುವರೆಯಲಿ 👍👍🤝🤝

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s