ಆಟಗಾರರ ಆಯ್ಕೆ ಮತ್ತು ಆಟಗಾರರ ವರ್ತನೆ

R J Goyal
Karthik Jaswanth
Amol Majumdar

ಕ್ರಿಕೆಟ್ ಪ್ರಿಯರಿಗೆಲ್ಲರಿಗೂ ನೆನಪಿರುವಂತೆ ಎಂಭತ್ತರ ದಶಕದಲ್ಲಿ ಪಂಜಾಬ್ ಪರವಾಗಿ ಆಡುತ್ತಿದ್ದ ಎಡಗೈ ಸ್ಪಿನ್ನರ್ ರಾಜೇಂದರ್ ಸಿಂಗ್ ಗೋಯಲ್ ರಣಜೀ ಪಂದ್ಯಾವಳಿಗಳಲ್ಲಿ 637 ವಿಕೆಟ್ ಪಡೆದಿರುವ ದಾಖಲೆಯನ್ನು ಇದುವರೆಗೂ ಯಾರೋಬ್ಬರಿಗೂ ಮುರಿಯುವುದಿರಲಿ ಅದರ ಹತ್ತಿರಕ್ಕೂ ಬರಲು ಸಾಧ್ಯವಾಗಿಲ್ಲ. ಅದೇ ರೀತಿ ದೆಹಲಿ ತಂಡಕ್ಕೆ ಆಡುತ್ತಿದ್ದ ಭಾಸ್ಕರ್ ಪಿಳ್ಳೆ ದೇಶೀಯ ಕ್ರಿಕೆಟ್ಟಿನಲ್ಲಿ ಸಾವಿರಾರು ರನ್ನುಗಳ ಸರದಾರ. ಭಾರತ ಕ್ರಿಕೆಟ್ ತಂಡದ ಹೆಸರಾಂತ ಆರಂಭಿಕ ಆಟಗಾರ ಸುನೀಲ್ ಗವಾಸ್ಕರ್ ಕ್ರಿಕೆಟ್ಟಿನಿಂದ ನಿವೃತ್ತಿ ಹೊಂದಿದಾಗ ಆವರ ಸ್ಥಾನವನ್ನು ತುಂಬುವ ಸಾಮರ್ಥ್ಯ ಯಾರಿಗಿದೇ ಎಂದು ಎಲ್ಲರೂ ಯೋಚಿಸುತ್ತಿರುವಾಗ ಥಟ್ ಅಂತ ನೆನಪಾಗಿದ್ದೇ ಕರ್ನಾಟಕದ ಕಾರ್ಲ್ಟನ್ ಸಲ್ಡಾನ. ಕರ್ನಾಟಕದ ಪರ ಸಾವಿರಾರು ರನ್ನುಗಳನ್ನು ಗಳಿಸಿದ್ದಲ್ಲದೇ, ತಮ್ಮ ಅಮೋಘ ಬ್ಯಾಟಿಂಗಿನಿಂದ ನೂರಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಲ್ಲದೇ, ಸೋಲುತ್ತಿದ್ದ ಪಂದ್ಯಗಳನ್ನು ತಮ್ಮ ತಾಳ್ಮೆಯುತ ಬ್ಯಾಟಿಂಗಿನಿಂದ ಡ್ರಾದತ್ತ ಕೊಂಡ್ಯೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ನಮಗೆಲ್ಲಾ ಬಿರುಸಿನ ಆಲ್ರೌಂಡರ್ ಎಂದಾಗಲೆಲ್ಲಾ ನೆನಪಾಗೋದೇ ರಾಬಿನ್ ಸಿಂಗ್ ಅಥವಾ ಯುವರಾಜ್ ಸಿಂಗ್. ಆದರೆ ಇವರಿಬ್ಬರೂ ಕ್ರಿಕೆಟ್ಟಿನ ಕನಸು ಕಾಣುವ ಮುಂಚೆಯೇ ಕರ್ನಾಟಕದ ಬಿ. ವಿಜಯ ಕೃಷ್ಣ ಮತ್ತು ಕಾರ್ತಿಕ್ ಜಸ್ವಂತ್ ರಂತಹ ಆಟಗಾರು ತಮ್ಮ ಬಿರುಸಿನ ಬ್ಯಾಟಿಂಗ್ ಮತ್ತು ಮಾರಕ ಬೋಲಿಂಗಿನಿಂದ ಎದುರಾಳಿ ತಂಡಕ್ಕೆ ಸಿಂಹಸ್ವಪ್ನವಾಗಿ ಕಾಡಿದ್ದರು. ತೆಂಡೂಲ್ಕರ್ ಅಷ್ಟೇ ಪ್ರತಿಭಾವಂತ ಎಂದು ಆಸೆ ಮೂಡಿಸಿದ್ದ ಅಮೋಲ್ ಮಜುಂದಾರ್, ಕಿರಿಯರ ವಿಶ್ವಕಪ್ ಪಂದ್ಯವಳಿಯಲ್ಲಿ ವಿರಾಟ್ ಜೊತೆಯಲ್ಲಿಯೇ ಮಿಂಚಿ, ಈಗ ಮರೆಯಾಗಿ ಹೋದ ತನ್ಮಯ್ ಶ್ರೀವಾಸ್ತವ ಇವರೆಲ್ಲರೂ ಅಪ್ಪಟ್ಟ ಪ್ರತಿಭಾವಂತರು ಎನ್ನುವುದು ಸತ್ಯ.

ದುರಾದೃಷ್ಟವಶಾತ್ ಅಷ್ಟೆಲ್ಲಾ ಅರ್ಹತೆಗಳು ಇದ್ದರೂ, ಅಷ್ಟೆಲ್ಲಾ ಸಾಧನೆಗಳನ್ನು ಮಾಡಿದ್ದರೂ ಮೇಲೆ ತಿಳಿಸಿದ ಈ ಯಾವ ಆಟಗಾರರೂ ಭಾರತ ತಂಡವನ್ನು ಪ್ರತಿನಿಧಿಸಿ ತಮ್ಮ ಸಾಮರ್ಥ್ಯವನ್ನು ತೋರಿಸುವ ಅವಕಾಶವನ್ನೇ ಪಡೆಯಲಿಲ್ಲ. ಆವರು ಆಡುತ್ತಿದ್ದ ಸಮಯದಲ್ಲಿ ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಹಾಗೆ ಆಡುತ್ತಿದ್ದ ಕಾರಣ ಈ ಪ್ರತಿಭಾವಂತರಿಗೆ ಸ್ಥಾನವನ್ನು ಕಲ್ಪಿಸಲು ಸಾಧ್ಯವಾಗಲಿಲ್ಲ ಎನ್ನುವುದು ಬೇಸರದ ಸಂಗತಿ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗಲಿಲ್ಲ ಎಂದು ಈ ಎಲ್ಲಾ ಆಟಗಾರರು ಯಾವುದೇ ರೀತಿಯ ಅಸಹಕಾರವನ್ನಾಗಲೀ, ಪ್ತತಿಭಟನೆಯನ್ನಾಗಲೀ ಮಾಡದೇ, ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದಂತೆ ತಮ್ಮ ಪಾಡಿಗೆ ತಮ್ಮ ತಾವು ನಿಸ್ವಾರ್ಥವಾಗಿ ಆಟವನ್ನು ಆಡುತ್ತಾ ಫಲಾಫಲಗಳನ್ನೆಲ್ಲಾ ಭಗವಂತನ ಮೇಲೆ ಬಿಟ್ಟಿದ್ದರಿಂದಲೇ ಆಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲಾಗದಿದ್ದರೂ ದೇಶೀಯ ಕ್ರಿಕೆಟ್ ಪ್ರಿಯರ ಹೃದಯಗಳಲ್ಲಿ ಇಂದಿಗೂ, ಎಂದೆಂದಿಗೂ ವಿರಾಜಮಾನರಾಗಿರುತ್ತಾರೆ.

ತೊಂಭತ್ತರ ದಶಕದಲ್ಲಿ ಯಾವಾಗ 16 ವರ್ಷದ ಪ್ರತಿಭಾವಂತ ಬಾಲಕ ಸಚಿನ್ ತೆಂಡೂಲ್ಕರ್ ದೇಶದ ಪರವಾಗಿ ಆಡಿದರೋ, ಅಂದಿನಿಂದ ದೇಶೀಯ ಕ್ರಿಕೆಟ್ಟಿನಲ್ಲಿ ಭಾರೀ ಬದಲಾವಣೆ ಕಂಡು ಬಂದಿತು. ಅಲ್ಲಿಯವರೆಗೂ Under-16, 18, 21, University tournaments, local Leage cricketಗಳಲ್ಲಿ ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಿ ಯಶಸ್ವಿಯಾಗಿ, ತಮ್ಮ ರಾಜ್ಯದ ಪರ ರಣಜೀ ತಂಡಕ್ಕೆ ಆಯ್ಕೆಯಾಗಿ ಅಲ್ಲೂ ಯಶಸ್ವಿಯನ್ನು ಕಂಡು ದುಲೀಪ್ ಟ್ರೋಫಿ, ಎನ್.ಕೆ.ಪಿ ಸಾಳ್ವೆ ಮುಂತಾದ ದೇಶೀ ಕ್ರಿಕೆಟನ್ನಲ್ಲಿ ಅತ್ಯದ್ಭುತವಾಗಿ ಯಶ್ವಸಿಯಾದಲ್ಲೀ ಮಾತ್ರವೇ ದೇಶದ ಪರವಾಗಿ ಆಡಲು ಅರ್ಹತೆ ಪಡೆಯುತ್ತಿದ್ದರು. ಕ್ಷಣಮಾತ್ರದಲ್ಲಿ ಇವೆಲ್ಲವೂ ಮಾಯವಾಗಿ ಯಾವುದೇ ಸ್ಥಳೀಯ ಪಂದ್ಯದಲ್ಲಿ ಅಭೂತಪೂರ್ವ ಸಾಧನೆ ಮಾಡಿದನೆಂದರೆ ಸಾಕು ಆತ ಈ ಮೇಲೆ ತಿಳಿಸಿದ ಯಾವುದೇ ಪಂದ್ಯಗಳನ್ನೂ ಆಡದೇ ನೇರವಾಗಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಅರ್ಹತೆ ಗಿಟ್ಟಿಸಿಕೊಳ್ಳುವಂತಾಯಿತು. ಬರೋಡ ತಂಡದ ಪಾರ್ಥೀವ್ ಪಟೇಲ್ ಇದಕ್ಕೆ ತಕ್ಕ ಉದಾಹರಣೆ. ಅರ್ಹತೆ ಇತ್ತೋ ಇಲ್ಲವೋ, ಲಾಭಿ ಮಾಡಿದರೋ ಇಲ್ಲವೋ ತಿಳಿಯದು ಆದರೆ ಆತ ತನ್ನ 16-17ನೇ ವಯಸ್ಸಿಗೆಲ್ಲಾ ದೇಶೀಯ ಕ್ರಿಕೆಟ್ ಆಟವಾಡದೆಯೇ ರಾಷ್ಟ್ರೀಯ ತಂಡದ ಭಾಗವಾಗಿ ಅಲ್ಪ ಸ್ವಲ್ಪ ಮಿಂಚಿ ಮರೆಯಾಗಿ ಹೋದದ್ದು ಈಗ ಇತಿಹಾಸ.

ಪ್ರತಿಭಾವಂತ ಸ‍‍ಚಿನ್ ತೆಂಡೂಲ್ಕರ್ ಮತ್ತು ಅದೃಷ್ಟವಂತ ಪಾರ್ಥೀವ್ ಪಟೇಲ್ ಅವರಿಗೆ ದೊರೆತ ಅವಕಾಶ ನಮಗೂ ಏಕೆ ಸಿಗಬಾರದು? ಎಂದು ಗಲ್ಲೀ ಕ್ರಿಕೆಟ್ ಆಟವಾಡುವ ಆಟಗಾರನೂ ಯೋಚಿಸುವಂತಾಯಿತು. ಒಂದೆರಡು ಪಂದ್ಯಗಳಲ್ಲಿ ಐವತ್ತೋ ನೂರೂ ರನ್ನುಗಳನ್ನು ಗಳಿಸಿ ಎಲ್ಲರೂ ಶಹಭ್ಭಾಶ್ ಎಂದ ಕೂಡಲೇ ತಲೆಯೇ ನಿಲ್ಲದೇ, ತಾನೇನಿದ್ದರೂ ಅಂತರಾಷ್ಟ್ರೀಯ ಮಟ್ಟದಲ್ಲಿ ಆಟವಾಡುವ ಸಾಮರ್ಥ್ಯವಿರುವ ಆಟಗಾರ ಎಂಬ ಭ್ರಮಾ ಲೋಕದಲ್ಲಿ ತೇಲಾಡುವ ಮಂದಿಯೇ ಹೆಚ್ಚಾಗಿ ಹೋದದ್ದು ದೌರ್ಭಾಗ್ಯವೇ ಸರಿ. ತಮ್ಮ ಸಾಮರ್ಥ್ಯದ ಬಗ್ಗೆ ಅಹಂಕಾರ ಇರಬೇಕು ಆದರೆ ದುರಹಂಕಾರ ಇರಬಾರದು. ಕೇವಲ ಕ್ರಿಕೆಟ್ ಆಟವಷ್ಟೇ ಅಲ್ಲದೇ ಆತನ ವರ್ತನೆ, ಭಾಷಾ ಪ್ರಯೋಗ, ಸಹ ಆಟಗಾರರ ಜೊತೆಗಿನ ಹೊಂದಾಣಿಕೆ, ಸ್ವಭಾವ ಎಲ್ಲವೂ ಪ್ರಮುಖವಾಗುತ್ತದೆ ಎನ್ನುವುದನ್ನು ಯಾರೂ ಯೋಚಿಸುವುದೇ ಇಲ್ಲ. ಸಚಿನ್ ಜೊತೆಯೇ ಶಾಲಾ ದಿನಗಳಿಂದಲೂ ಆಟವಾಡುತ್ತಲೇ ಒಟ್ಟೊಟ್ಟಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದರ್ಪಣೆ ಮಾಡಿ ಸಾಕಷ್ಟು ರನ್ನುಗಳ ಹೊಳೆಯನ್ನೇ ಹರಿಸಿದರೂ, ಧಿಡೀರ್ ದೊರೆತ ಹೆಸರು ಮತ್ತು ಹಣದ ಫಲವನ್ನು ಸೂಕ್ತವಾಗಿ ನಿಭಾಯಿಸಲಾಗದೇ ಕ್ರಿಕೆಟ್ಟಿನಿಂದ ಮರೆಯಾಗಿ ಹೋದ ವಿನೋದ್ ಕಾಂಬ್ಲಿಯ ಉದಾಹರಣೆ ನಮ್ಮ ಇಂದಿನ ಯುವ ಕ್ರಿಕೆಟ್ ಆಟಗಾರರಿಗೆ ಎಚ್ಚರಿಕೆಯ ಗಂಟೆಯಾಗಬೇಕಿತ್ತು.

ಇಷ್ಟೆಲ್ಲಾ ಪೀಠಿಕೆ ಏಕೆಂದರೆ, ಕಳೆದ ಐದಾರು ವರ್ಷಗಳಿಂದಲೂ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಐಪಿಎಲ್ ಪಂದ್ಯಾವಳಿಗಳಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಸೂರ್ಯಕುಮಾರ್ ಯಾದವ್ ತನ್ನ ಮಿಂಚಿನ ಆಟದ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣೀಭೂತರಾಗಿರುವುದನ್ನು ಅಲ್ಲಗಳೆಯಲಾಗದು. ಭಾರತ ತಂಡದ ಭಾಗವಾಗಬೇಕು ಎಂದು ಅತ ನಿರೀಕ್ಷಿಸುವುದು ತಪ್ಪಲ್ಲ. ಆದರೆ ಭಾರತ ತಂಡದ ಭಾಗವಾಗುವಷ್ಟರ ಮಟ್ಟಿಗಿನ ಸ್ಥಿರ ಪ್ರದರ್ಶನದ ಸಾಮರ್ಥ್ಯ ತನ್ನಲ್ಲಿದೆಯೇ ಎನ್ನುವ ಅರಿವು ಆತನಿಗೆ ಇರಬೇಕಿತ್ತು. ರಾಷ್ಟ್ರೀಯ ತಂಡದ ಭಾಗವಾಗಿದ್ದರೂ ಇದೇ ರೀತಿ ಉದ್ದಟತನ ತೋರಿ ಮೂಲೆ ಗುಂಪಾಗಿರುವ ಅಂಬಟಿ ರಾಯಡು ಬಗ್ಗೆ ಈತನಿಗೆ ಅರಿವಿಬೇಕಿತ್ತು. ದುರದೃಷ್ಟಶಾತ್ ಸೂರ್ಯ ಕುಮಾರ್ ಅಥವಾ ಅತನ ತಂಡ ಅಥವಾ ಅತನ ಜೊತೆಗಾರರ ಹೊಗುಳುವಿಯೆನ್ನೇ ಧೃಢವಾಗಿ ನಂಬಿದ್ದ ಯಾದವ್ ಆಸ್ಟ್ರೇಲಿಯಾ ಪ್ರವಾಸಕ್ಕೆ ರಾಷ್ಟ್ರೀಯ ತಂಡವನ್ನು ಪ್ರಕಟಿಸಿದಾಗ ತನ್ನ ಹೆಸರು ಆ ಪಟ್ಟಿಯಲ್ಲಿ ಇಲ್ಲಾ ಎನ್ನುವುದನ್ನೇ ದೊಡ್ಡದು ಮಾಡಿಕೊಂಡು, ಮೊನ್ನೆ ಆರ್.ಸಿ.ಬಿ ತಂಡ ವಿರುದ್ಧದ ಪಂದ್ಯಾವಳಿಯಲ್ಲಿ ಭರ್ಜರಿಯಾಗಿ ಆಟವಾಡಿ ತಂಡ ಗೆಲುವಿನ ರೂವಾರೀ ಯಾದರೂ ನಾಯಕ ವಿರಾಟ್ ಕೋಹ್ಲಿಯೊಂದಿಗಿನ ಆತನ ಜಟಾಪಟಿ ಮತ್ತು ಉದ್ಧಟತನವನ್ನು ಒಪ್ಪಲು ಸಾಧ್ಯವೇ ಇಲ್ಲವಾಗಿದೆ.

ಭಾರತೀಯ ಕ್ರಿಕೆಟ್ ತಂಡವು ವಿಶ್ವ ಕ್ರಿಕೆಟ್ಟಿನಲ್ಲಿ ಅತ್ಯಂತ ಬಲಾಢ್ಯ ತಂಡಗಳಲ್ಲಿ ಒಂದಾಗಿದೆ. ಭಾರತೀಯ ತಂಡದಲ್ಲಿ ಸ್ಥಾನ ಪಡೆಯಬೇಕಾದಲ್ಲಿ ಆತ ಅಪ್ರತಿಮ ಆಟಗಾರನಾಗಿರಲೇ ಬೇಕು. ಕೇವಲ ಒಂದೆರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡದೇ ಆತನ ಪ್ರದರ್ಶನ ನಿರಂತರವಾಗಿ ಅತ್ಯುತ್ತಮವಾಗಿರಲೇ ಬೇಕು. 135 ಕೋಟಿ ಜನರಿರುವ ನಮ್ಮ ದೇಶದಲ್ಲಿ ಅಂತಹ ಅತ್ಯುತ್ತಮ ಸಾಮರ್ಥ್ಯ ಹೊಂದಿರುವ ಸಾವಿರಾರು ಆಟಗಾರರು ಇರುವ ಕಾರಣ 16ರ ಬಳಗದಲ್ಲಿ ಸ್ಥಾನ ಪಡೆಯಬೇಕೆಂದರೆ ಆತ ಅತ್ಯುತ್ತಮನಾಗಿರಲೇ ಬೇಕಾಗುತ್ತದೆ. 16ರ ತಂಡದಿಂದ ಕೇವಲ 11 ಶ್ರೇಷ್ಟ ಆಟಗಾರರಿಗಷ್ಟೇ ಆಟವಾಡುವ ಅದೃಷ್ಟ ದೊರೆಯುತ್ತದೆ. ಉಳಿದ ಆಟಗಾರರು ಬೆಂಚ್ ಕಾಯಿಸಲೇ ಬೇಕಾಗುತ್ತದೆ. ಕ್ರಿಕೆಟ್ ಒಂದು ರೀತಿಯ ಧರ್ಮವೇ ಆಗಿರುವ ಭಾರತ ದೇಶದಲ್ಲಿರುವ ಸದ್ಯದ ಪ್ರತಿಭಾವಂತರನ್ನು ಗಮನಿಸಿದಲ್ಲಿ ಒಂದು ತಂಡವೇಕೆ ಹತ್ತಾರು ಅಂತರಾಷ್ಟ್ರೀಯ ತಂಡಗಳನ್ನು ರಚಿಸುವಷ್ಟು ಆಟಗಾರ ದಂಡಿದೆ. ದೇಶೀಯ ಕ್ರಿಕೆಟ್ಟಿನಲ್ಲಿ ರನ್ನುಗಳ ಹೊಳೆಯನ್ನೇ ಹರಿಸುತ್ತಿರುವ ಪ್ರತಿಭಾವಂತ ಮನೀಷ್ ಪಾಂಡೆ ಐದಾರು ವರ್ಷಗಳಿಂದಲೂ ತಂಡದ ಒಳಗೂ ಹೊರಗೂ ಹೋಗುತ್ತಾ ಬರುತ್ತಾ, ಅವಕಾಶ ಸಿಕ್ಕಾಗಲೆಲ್ಲಾ ತನ್ನ ಪ್ರತಿಭೆಯನ್ನು ತೋರಿಸುತ್ತಾ ತಂಡದಲ್ಲಿ ಖಾಯಂ ಸ್ಥಾನಕ್ಕಾಗಿ ಕಾಯುತ್ತಿಲ್ಲವೇ? ಟೆಸ್ಟ್ ಪಂದ್ಯದಲ್ಲಿ ಭರ್ಜರಿಯಾದ ತ್ರಿಶತಕ ಬಾರಿಸಿದರೂ ತಂಡದಿಂದ ಹೊರಗುಳಿದಿರುವ ಕರುಣ್ ನಾಯರ್ ಎಂದಾದರೂ ಈ ರೀತಿಯ ಅಸಹಾಯಕತೆಯನ್ನು ಎಲ್ಲರ ಮುಂದೇ ತೋರಿಸಿರುವ ಉದಾಹರಣೆ ಇದೆಯೇ?

ನಿಜಕ್ಕೂ ಸೂರ್ಯಕುಮಾರ್ ಪ್ರತಿಭಾವಂತ ಎನ್ನುವುದರಲ್ಲಿ ಎರಡು ಮಾತಿಲ್ಲ. ರವರ ಅಂಕಿ ಅಂಶಗಳನ್ನು ಗಮನಿಸಿದಲ್ಲಿ ಇಲ್ಲಿಯವರೆಗೂ ಆಡಿರುವ 8 ಐಪಿಎಲ್ ಟೂರ್ನಿ ಗಳಿಂದ ಕೇವಲ 10 ಅರ್ಧಶತಕವನ್ನು ಗಳಿಸಿದ್ದಾರೆ, ಈ ಬಾರಿ ಬಹಳ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದೇನೆ ಎನ್ನುತ್ತಿರುವ ಭ್ರಮೆಯಲ್ಲಿರುವ ಸೂರ್ಯಕುಮಾರ್ 12 ಪಂದ್ಯಗಳಿಂದ 362 ರನ್ ಗಳಿಸಿದ್ದಾರೆ. ಆದರೆ ಗಮನಿಸಬೇಕಾದ ಮಹತ್ತರ ಅಂಶವೆಂದರೇ, ಇವರಿಗಿಂತಲೂ ಶುಭಂ ಗಿಲ್, ಶ್ರೇಯಸ್ ಐಯರ್, ಮಾಯಾಂಕ್ ಅಗರ್ವಾಲ್, ಶಿಖರ್ ಧವನ್, ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ರವರು ಹೆಚ್ಚಿನ ರನ್ ಗಳಿಸಿದ್ದಾರೆ. ಅಷ್ಟೇ ಏಕೆ ನಿತೀಶ್ ರಾಣಾ, ಅಕ್ಷರ್ ಪಟೇಲ್, ರಾಹುಲ್ ಟೆವಾಟಿಯ ತಮ್ಮ ಸ್ವಸಾಮರ್ಥ್ಯದಿಂದಲೇ ಸೋಲುತ್ತಿದ್ದ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇನ್ನು ದೇಶೀಯ ಕ್ರಿಕೆಟ್ಟಿನ ಎಲ್ಲಾ ವಿಧದದಲ್ಲೂ ರನ್ನುಗಳ ಹೊಳೆಯನ್ನೇ ಹರಿಸಿ, ಈ ಬಾರಿಯ ಚೊಚ್ಚಲು ಐಪಿಎಲ್ ನಲ್ಲಿ 400ಕ್ಕೂ ಹೆಚ್ಚಿನ ರನ್ನುಗಳನ್ನು ಗಳಿಸಿರುವ ಹೊಸಬ ದೇವದತ್ತ ಪಡಿಕ್ಕಲ್ ಸಹಾ ಸೂರ್ಯಕುಮಾರ್ ಯಾದವ್ ಅವರಿಂತ ಮುಂದಿದ್ದರೂ ಈ ರೀತಿಯ ಹುಂಬತನವನ್ನು ಅವರ್ಯಾರೂ ತೋರದಿರುವುದು ಮೆಚ್ಚುವಂತಹ ಅಂಶವಾಗಿದೆ. ತನ್ನ ಕಳಪೆ ಪ್ರದರ್ಶನದಿಂದ ರಾಷ್ಟ್ರೀಯ ತಂಡದಿಂದ ಹೊರಬಿದ್ದಿದ್ದ ಧವನ್ ತನ್ನ ಬ್ಯಾಟಿನಿಂದ ಭರ್ಜರಿ ಪ್ರದರ್ಶನ ತೋರಿದರೇ ಹೊರತು, ಬಾಯಿನಿಂದಲ್ಲಾ. ಕೇವಲ ಟೆಸ್ಟ್ ಪಂದ್ಯಕ್ಕಷ್ಟೇ ಲಾಯಕ್ಕು ಎಂದಿದ್ದ ವೃದ್ಧಿಮಾನ್ ಸಹಾ ಸಿಕ್ಕ ಎರಡು ಪಂದ್ಯದಲ್ಲೇ ತಾನೂ ಸಹಾ ಭರ್ಜರಿಯಾಗಿ ಬ್ಯಾಟ್ ಬೀಸಬಲ್ಲೇ ಎಂದು ತೋರಿಸಿಲ್ಲವೇ? ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸಂಜು ಸಾಂಸ್ಯನ್ ತನ್ನ ಭರ್ಜರಿ ಪ್ರದರ್ಶನದಿಂದಲೇ ಆಯ್ಕೆದಾರರ ಮನಗೆದ್ದು ಟಿ-ಟ್ವೆಂಟೀ ಪಂದ್ಯಾವಳಿಗೆ ಆಯ್ಕೆಯಾಗಿರುವುದು.

ಹಾಗಾಗಿ ಸೂರ್ಯಕುಮಾರ್ ಯಾದವ್ ಅವರನ್ನೂ ಒಳಗೊಂಡು ಎಲ್ಲಾ ಪ್ರತಿಭಾವಂತರೂ ಅರ್ಥ ಮಾಡಿ ಕೊಳ್ಳಬೇಕಾದ ಸಂಗತಿಯೆಂದರೆ ಆಟಗಾರರಿಗೆ ಪ್ರತಿಭೆಯಷ್ಟೇ ಅಲ್ಲದೆ ತಾಳ್ಮೆ ಮತ್ತು ಸಹನೆ ಅತ್ಯಗತ್ಯವಾಗಿದೆ. ರಾಷ್ಟ್ರೀಯ ತಂಡಕ್ಕೆ ಆಡ ಬೇಕೆನ್ನುವ ಆಸೆ ಇರಬೇಕು ಅದರೆ ರಾಷ್ಟ್ರೀಯ ತಂಡಕ್ಕೆ ಆಡಿದರೆ ಮಾತ್ರವೇ ತನ್ನ ಜೀವನ ಸಾರ್ಥಕ ಎನ್ನುವ ಭಾವನೆಯನ್ನು ಮೊದಲು ಕಿತ್ತುಹಾಕಿ ಪ್ರತಿಯೊಂದು ಆಟದಲ್ಲಿಯೋ ನೂರಕ್ಕೆ ನೂರರಷ್ಟು ತಮ್ಮನ್ನು ಸಮರ್ಪಿಸಿಕೊಂಡು ನಿರಂತರವಾಗಿ ಒಂದೇ ರೀತಿಯ ಪ್ರದರ್ಶನ ನೀಡುತ್ತಾ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದಲ್ಲಿ ಖಂಡಿತವಾಗಿಯೂ ಒಂದಲ್ಲಾ ಒಂದು ದಿನ ಅವರ ಪ್ರತಿಭೆಗೆ ಪುರಸ್ಕಾರ ಸಿಕ್ಕೇ ಸಿಗುತ್ತದೆ. ಅಲ್ಲಿಯ ವರೆಗೂ ಕಾಯುವ ತಾಳ್ಮೆಯ ಅಗತ್ಯ ಎಲ್ಲಾ ಆಟಗಾರರಿಗೂ ಇರಲೇ ಬೇಕಾಗುತ್ತದೆ. ದುರದೃಷ್ಟವಷಾತ್ ಕೆಲವೊಂದು ಮಾಧ್ಯಮಗಳು ಮತ್ತು ಒಂದಷ್ಟು ನಿವೃತ್ತ ಆಟಗಾರರು ಕೆಲವು ಪಟ್ಟ ಭಧ್ರ ಹಿತಾಸಕ್ತಿಯಿಂದಾಗಿ ಸೂರ್ಯಕುಮಾರ್ ಯಾದವ್ ನಂತಹ ಆಟಗಾರರಿಗೆ ಅನವಶ್ಯಕವಾಗಿ ದಾರಿ ತಪ್ಪಿಸಿ ಅವರ ಕ್ರೀಡಾ ಬದುಕನ್ನು ಹಾಳು ಮಾಡುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s