ಗೊರೂರು ರಾಮಸ್ವಾಮಿ ಅಯ್ಯಂಗಾರ್

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೂಕಿನ ಹೇಮಾವತಿ ನದಿಯ ತಟದಲ್ಲಿರುವ ಗೊರೂರು ಎಂಬ ಗ್ರಾಮದಲ್ಲಿ ಶ್ರೀನಿವಾಸ ಅಯ್ಯಂಗಾರ್ ಮತ್ತು ಲಕ್ಷಮ್ಮ ದಂಪತಿಗಳಿಗೆ 1904ರ ಜುಲೈ 4ರಂದು ರಾಮಸ್ವಾಮಿ ಅಯ್ಯಂಗಾರ್ ಅವರು ಜನಿಸುತ್ತಾರೆ. ಓದಿನಲ್ಲಿ ಬಹಳ ಚುರುಕಾಗಿದ್ದ ರಾಮಸ್ವಾಮಿಗಳು ತಮ್ಮ ಹಳ್ಳಿಯಲ್ಲಿಯೇ ಲೋಯರ್ ಸೆಕೆಂಡರಿ ಶಿಕ್ಷಣವನ್ನು ಮುಗಿಸಿದ ಉನ್ನತ ವ್ಯಾಸಂಗಕ್ಕಾಗಿ ಹಾಸನದ ಸರ್ಕಾರಿ ಪ್ರೌಢಶಾಲೆಗೆ ಸೇರಿಕೊಂಡು ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಗಾಂಧೀಯವರ ಅಸಹಕಾರ ಚಳುವಳಿಯಿಂದ ಆಕರ್ಷಿತರಾಗಿ ಶಿಕ್ಷಣಕ್ಕೆ ವಿದಾಯ ಹೇಳಿದ್ದಲ್ಲದೇ, ಗಾಂಧಿಯವರ ಪರಮ ಅನುಯಾಯಿಯಾಗಿ ಅವರ ಆಶ್ರಮವನ್ನು ಸೇರಿಕೊಂಡು, ಗುಜರಾತಿನ ವಿದ್ಯಾಪೀಠದ ವಿದ್ಯಾರ್ಥಿಯಾಗುತ್ತಾರೆ. ಅಲ್ಲಿಯ ಶಿಕ್ಷಣದ ಬಳಿಕ ಮದ್ರಾಸಿನ ಲೋಕಮಿತ್ರ ಮತ್ತು ಭಾರತಿ ಪತ್ರಿಕೆಗಳ ಕನ್ನಡ ಸಮಾಚಾರ ಲೇಖಕರಾಗಿ ಸ್ವಲ್ಪಕಾಲ ಕೆಲಸಮಾಡಿ, ಕೆಂಗೇರಿಯ ಗುರುಕುಲಾಶ್ರಮವನ್ನು ಸೇರಿಕೊಂಡು ಹರಿಜನೋದ್ಧಾರವನ್ನು ಮುಖ್ಯ ಕಾರ್ಯವನ್ನಾಗಿ ಸ್ವೀಕರಿಸಿ, ಅದನ್ನು ಬಹಳ ಶ್ರದ್ಧೆಯಿಂದ ನಿರ್ವಹಿಸುತ್ತಾರೆ. ಆದಾದ ನಂತರ ಬೆಂಗಳೂರಿನ ಅಖಿಲ ಭಾರತ ಚರಕ ಸಂಘದ ಖಾದಿ ವಸ್ತ್ರಾಲಯದ ಸಂಚಾಲಕರಾಗಿದ್ದಲ್ಲದೇ, ಜೊತೆ ಜೊತೆಯಲ್ಲಿಯೇ ಸಾಹಿತ್ಯ ಸೇವೆಯನ್ನು ಮುಂದುವರಿಸುತ್ತಾರೆ,

1933ರ ಹೊತ್ತಿಗೆ ರಾಮಸ್ವಾಮಿ ಐಯ್ಯಂಗಾರರು, ತಮ್ಮ ಹುಟ್ಟೂರು ಗೊರೂರರಿಗೆ ಮರಳಿ, ಮೈಸೂರು ಗ್ರಾಮ ಸೇವಾಸಂಘವನ್ನು ಸ್ಥಾಪಿಸಿ, ಖಾದಿ ಪ್ರಚಾರ, ಹರಿಜನೋದ್ಧಾರ, ವಯಸ್ಕರ ಶಿಕ್ಷಣ, ಗ್ರಾಮ ಕೈಗಾರಿಕೆಗಳು ಮುಂತಾದ ರಚನಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಲ್ಲದೇ ತಮ್ಮ ಸುತ್ತಮುತ್ತಲಿನ ಊರಿನ ಜನರನ್ನೂ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕುವಂತೆ ಪ್ರೇರೇಪಿಸುತ್ತಾರೆ. 1942ರ ಚಲೇಜಾವ್ ಚಳವಳಿಯಲ್ಲಿ ಭಾಗವಹಿಸಿದ ಪರಿಣಾಮ ಸೆರೆಮನೆ ವಾಸವನ್ನೂ ಅನುಭವಿಸುತ್ತಾರೆ. ಇದೇ ಸಮಯದಲ್ಲಿ ಮೈಸೂರಿನಲ್ಲಿ ನಡೆದ ಚಳುವಳಿಯಲ್ಲಿ ಪೋಲೀಸರು ನಡೆಸಿದ ಗೋಲೀಬಾರ್ ಸಮಯದಲ್ಲಿ ಅವರ ಮಗ ಹತನಾದ ನೆನಪಿಗಾಗಿಯೇ ಆ ಸ್ಥಳವನ್ನು ರಾಮಸ್ವಾಮಿ ಸರ್ಕಲ್ ಎಂದೇ ಇಂದಿಗೂ ಕರೆಯಲಾಗುತ್ತದೆ.

ಸ್ವಾತಂತ್ರ್ಯ ಬಂದ ನಂತರ ಮೈಸೂರಿನಲ್ಲಿ ಪ್ರಜಾ ಸರ್ಕಾರ ಸ್ಥಾಪನೆಗಾಗಿ ನಡೆದ ಚಳವಳಿಯಲ್ಲೂ ಭಾಗವಹಿಸಿದರು. ಅದು ಸ್ಥಾಪಿತವಾದ ಮೇಲೆ ಸುಮಾರು ಹನ್ನೆರಡು ವರ್ಷಗಳ ಕಾಲ ರಾಜ್ಯದ ವಿಧಾನಪರಿಷತ್ತಿನ ಸದಸ್ಯರಾಗಿದ್ದಲ್ಲದೇ, ಕರ್ನಾಟಕದ ಏಕೀಕರಣ ಚಳುವಳಿಗಳಲ್ಲಿ ಸಕ್ರೀಯವಾಗಿ ಹೋರಾಡಿದ್ದಲ್ಲದೇ, ಹರಿಜನೋದ್ಧಾರ ಮತ್ತು ಗ್ರಾಮೊದ್ಧಾರಕ್ಕಾಗಿ ಶ್ರಮಿಸಿದ ಅಪ್ರತಿಮ ಗಾಂಧಿವಾದಿಯಾಗಿದ್ದರು. ಗೊರೂರು ಗ್ರಾಮ ಮತ್ತು ಅದರ ಸುತ್ತ ಹರಿಯುವ ಹೇಮಾವತಿ ನದಿ, ಈ ಎರಡೂ ಗೊರೂರರ ಸಾಹಿತ್ಯದಿಂದ ಕನ್ನಡ ನಾಡಿನಲ್ಲಿ ಅಲ್ಲದೇ ಹೊರಜಗತ್ತಿಗೂ ಪರಿಚಯವಾಗುವಂತೆ ಮಾಡಿದರು ಎಂದರೂ ತಪ್ಪಾಗಲಾರದು. ಆರ್. ಕೆ ನಾರಾಯಣ ತಮ್ಮ ಕಲ್ಪನೆಯ ಊರಾದ ಮಾಲ್ಗುಡಿ ಊರಿನ ಬಗ್ಗೆ ಬರೆಯುವ ಎಷ್ಟೋ ವರ್ಷಗಳ ಮುಂಚೆಯೇ, ರಾಮಾಸ್ವಾಮೀ ಐಯ್ಯಂಗಾರರು ತಮ್ಮ ಸಾಹಿತ್ಯದಲ್ಲಿ ತಮ್ಮ ಊರಾದ ಗೋರೂರನ್ನು ತಮ್ಮ ಸಾಹಿತ್ಯದ ಮೂಲಕ ಅತ್ಯಂತ ನವಿರಾಗಿ ಚಿತ್ರಿಸಿಕೊಟ್ಟಿದ್ದಾರೆ. ಹೇಮಾವತಿ ನದಿಯ ಮೂಲಕ, ಒಂದು ಊರು ಮತ್ತು ನದಿಯೊಡನೆ ಅಭಿನ್ನತೆ ಸಾಧಿಸಿದ ಲೇಖಕರು ವಿರಳವೇ. ಹಳ್ಳಿಯ ಚಿತ್ರಗಳು, ಗರುಡಗಂಬದ ದಾಸಯ್ಯ, ನಮ್ಮ ಊರಿನ ರಸಿಕರು, ಬೆಟ್ಟದ ಮನೆಯಲ್ಲಿ ಮತ್ತು ಇತರ ಪ್ರಬಂಧಗಳಲ್ಲದೇ, ಕಥೆಗಳು ಮತ್ತು ವಿನೋದ ಚಿತ್ರಗಳು, ಬೆಸ್ತರ ಕರಿಯ, ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಬಂಧಗಳ ಮೂಲಕ ನಾಡಿನಲ್ಲಿ ಪ್ರಖ್ಯಾತರಾದರು. ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಸರು ಗಳಿಸಿದ ಹೇಮಾವತಿ ಮತ್ತು‌ ಭೂತಯ್ಯನ ಮಗ ಅಯ್ಯು ಕಾದಂಬರಿಯ ಕತೃ ಸಹಾ ಗೊರೂರು ರಾಮಸ್ವಾಮಿ ಐಯ್ಯಂಗಾರರೇ.

ತಮ್ಮ ಸಾಹಿತ್ಯದ ಸೇವೆಗಾಗಿ ಗೌರವ ಡಾಕ್ಟರೇಟ್ ಪಡೆದು ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ಎಂದೇ ಖ್ಯಾತರಾಗಿದ್ದ ರಾಮಸ್ವಾಮಿ ಐಯ್ಯಂಗಾರ್ ಅವರ ಸಾಹಿತ್ಯ ಸೃಷ್ಟಿ ಸಮೃದ್ಧವಾದುದು. ಪ್ರಬಂಧ, ಕಥೆ, ಕಾದಂಬರಿ, ಪ್ರವಾಸ ಕಥನ, ವಿಮರ್ಶೆ, ಜೀವನ ಚಿತ್ರ, ಭಾಷಾಂತರ – ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಗೋರೂರು ಕೈಯಾಡಿಸದ ಸಾಹಿತ್ಯ ಪ್ರಕಾರವಿಲ್ಲ ಎಂದರೂ ತಪ್ಪಾಗಲಾರದು. ಅಮೇರಿಕಾದಲ್ಲಿ ಗೋರೂರು ಎಂಬ ಅವರ ಪ್ರವಾಸೀ ಕಥನ ಬಹುಶಃ ಕನ್ನಡದಲ್ಲಿ ಅತ್ಯಂತ ಪ್ರಖ್ಯಾತಿ ಪಡೆದ ಪ್ರವಾಸೀ ಕಥನ ಎನ್ನುವುದು ಗಮನಾರ್ಹ ಅಂಶ. ಈ ಕೃತಿಯೇ ನಂತರ ಬಹುತೇಕ ಸಾಹಿತಿಗಳಿಗೆ ತಮ್ಮ ಪ್ರವಾಸೀ ಕಥನವನ್ನು ಬರೆಯುವಂತೆ ಪ್ರೇರೇಪಣೆ ನೀಡಿತು ಎಂದರೂ ಅತಿಶಯೋಕ್ತಿಯಾಗಲಾರದು. ತಮ್ಮ ಪ್ರಬಂಧ ಸಾಹಿತ್ಯದಿಂದ ನಾಡನ್ನು ನಗಿಸಿ ನಲಿಸಿದ್ದಾರೆ ಗೊರೂರರು. ಹಾಗೆ ನೋಡಿದರೆ ನಮ್ಮ ಜನತೆಗೆ ನಗೆಯನ್ನು ಕಲಿಸಿದವರಲ್ಲಿ ಅವರು ಪ್ರಮುಖರು ಎನ್ನಬಹುದು.

ಕನ್ನಡಕ್ಕೆ ಗೊರೂರರ ಮುಖ್ಯವಾದ ಕೊಡುಗೆಯೇನು? ಎಂಬುದಕ್ಕೆ ಕುವೆಂಪು ಅವರು ಹೇಳಿದ, ಚಾರ್ಲ್ಸ್ ಡಿಕನ್ಸ್, ಆಲಿವರ್ ಗೋಲ್ಡ್ ಸ್ಮಿತ್, ಎ.ಜಿ. ಗಾರ್ಡಿನರ್ ಮುಂತಾದ ಇಂಗ್ಲಿಷ್ ಲೇಖಕರ ಬರವಣಿಗೆಯನ್ನು ಓದಿ, ಅಲ್ಲಿನ ವಿವಿಧ ರೀತಿಯ ಹಾಸ್ಯವನ್ನು ಚಪ್ಪರಿಸಿದ್ದ ನಮಗೆ ಕನ್ನಡದಲ್ಲಿ ಅಂಥಹ ಹಾಸ್ಯದ ಅರಕೆ ದೊಡ್ಡ ಕೊರಗನ್ನೇ ಉಂಟುಮಾಡಿತ್ತು. ಆ ಅರಕೆಯನ್ನು ಹೋಗಲಾಡಿಸಿದ ಕೆಲವೇ ಲೇಖಕರಲ್ಲಿ ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರರು ನಿಶ್ಚಯವಾಗಿಯೂ ಅಗ್ರಸ್ಥಾನದಲ್ಲಿದ್ದಾರೆ ಎಂಬ ಹೇಳಿಕೆಯೇ, ಕನ್ನಡ ಸಾಹಿತ್ಯ ಲೋಕಕ್ಕೆ ಗೊರೂರು ಅವರ ಕೊಡುಗೆಯನ್ನು ತಿಳಿಸುತ್ತದೆ.

ಗಾಂಧೀವಾದಿ ಗೊರೂರರ ಜಾನಪದ ಪ್ರಜ್ಞೆ ಅದ್ಭುತವಾದುದು. ಅವರೇ ಹೇಳಿಕೊಂಡಂತೆ ಅವರು ಸಾಹಿತಿಗಿಂತ ಹೆಚ್ಚಾಗಿ ಜನಸಾಮಾನ್ಯರ ಮನುಷ್ಯ ಎಂದೇ ಅವರ ನಂಬಿಕೆಯಾಗಿತ್ತು. ಜಾನಪದ ಗುಣಗಳನ್ನೂ, ಶಕ್ತಿಯನ್ನೂ ಹೆಚ್ಚು ಹೆಚ್ಚು ನೋಡಿದಂತೆ, ಭಾರತವನ್ನು ಆಧುನಿಕ ನಾಗರೀಕತೆಯ ಸರ್ವನಾಶದಿಂದ ತಪ್ಪಿಸಬಲ್ಲಂತದ್ದು ಜಾನಪದವೊಂದೇ ಎಂಬ ನಂಬಿಕೆ ದೃಢವಾಗುತ್ತದೆ ಎಂದೇ ಪ್ರತಿಪಾದಿಸಿದರು. ಈ ಜಾನಪದ ಮತ್ತು ಜನಪರ ದೃಷ್ಟಿಯ ಹಿನ್ನೆಲೆಯಲ್ಲಿ ಗೊರೂರರ ಹಾಸ್ಯಪ್ರಜ್ಞೆ ಯಶಸ್ವಿಯಾಗಿ ಕೆಲಸ ಮಾಡಿದೆ ಮತ್ತು ಇಂದಿನ ಜನರಿಗೂ ಜಾನಪದದ ಸೊಗಡನ್ನು ಹಚ್ವ ಹಸಿರಾಗಿರಿಸುವುದರಲ್ಲಿ ಸಫಲವಾಗಿದೆ.

ಗೊರೂರರು ತಮ್ಮ ಬರಹಗಳಲ್ಲಿ ಈಗ ಕಾಣ ಸಿಗದ ಅಥವಾ ಆಧುನಿಕತೆಯಿಂದಾಗಿ ತ್ವರಿತವಾಗಿ ಮರೆಯಾಗುತ್ತಿರುವ ಹಳ್ಳಿಯ ಬದುಕನ್ನು ಅದರ ಎಲ್ಲ ಮುಖಗಳೊಡನೆ ಚಿತ್ರಿಸುವಲ್ಲಿ ಸಫಲರಾಗಿದ್ದಾರೆ. ಗ್ರಾಮೀಣ ಬದುಕಿನಲ್ಲಿ ಅಲ್ಲಿನ ಜನಸಾಮಾನ್ಯರೊಂದಿಗೆ ಬೆರೆತು ಒಂದಾಗಿ ಬಾಳಿದ್ದರಿಂದ ಇದು ಸಾಧ್ಯವಾಗಿದೆ ಎನ್ನಬಹುದಾಗಿದೆ. ಅವರ ಕೃತಿಗಳಲ್ಲಿ ಕಂಡು ಬರುವ ಪಾತ್ರ ವೈವಿಧ್ಯ ಅಪಾರವಾದುದು; ಅಲ್ಲಿ ಗ್ರಾಮದ ಎಲ್ಲ ವೃತ್ತಿಗಳ, ಎಲ್ಲ ಜಾತಿಗಳ ಜನರೂ ಇದ್ದಾರೆ – ಹಾರುವರಿಂದ ಹರಿಜನರ ತನಕ. ಅವರ ಗರುಡಗಂಬದ ದಾಸಯ್ಯ ಕೃತಿಯ ಮುನ್ನುಡಿಯಲ್ಲಿ ದ.ರಾ ಬೇಂದ್ರೆ ಅವರು ಹೇಳಿರುವಂತೆ ಒಬ್ಬ ಅರಸುಗಳೇ, ಹಜಾಮರೇ, ಹಾರುವರೇ, ತುರುಕರೇ, ದಾಸಯ್ಯಗಳೇ, ಬಯಲಾಟದವರೇ, ಸುಭೇಧಾರೇ, ಶಾನುಭೋಗೇ, ಹೊಲೆಯರೇ – ಇವರೆಲ್ಲರನ್ನೂ ಒಂದು ಮಾಲೆಯಲ್ಲಿ ಪೋಣಿಸಿದ ವಿಕಟ ಕವಿತ್ವವು ಪ್ರಶಂಸನೀಯವಾದುದೆಂದು ಯಾರು ಹೇಳಲಿಕ್ಕಿಲ್ಲ? ವರಕವಿಗಳ ಈ ಮಾತು ಗೊರೂರರ ಸಾಹಿತ್ಯಕ್ಕೆಲ್ಲಾ ಅನ್ವಯಿಸಬಹುದಾದ ಹೇಳಿಕೆಯಂತಿದೆ.

ನಮ್ಮ ಎಮ್ಮೆಗೆ ಮಾತು ತಿಳಿಯುವುದೇ? ಎಂಬ ಪ್ರಬಂಧದಲ್ಲಿ ಪ್ರಾಣಿ ಪಾತ್ರವನ್ನೂ ತಂದಿದ್ದಲ್ಲದೇ, ತಮ್ಮ ಪಾತ್ರಗಳ ಮೂಲಕ ಜಾತಿ-ಮತ-ಭೇದಗಳನ್ನು ಮೀರಿ ಎಲ್ಲರನ್ನೂ ಒಗ್ಗೂಡಿಸುವ ಕೆಲವು ಸೂತ್ರಗಳನ್ನು ಗೊರೂರರು ಗುರುತಿಸಿ, ಅವುಗಳಿಗೆ ಒತ್ತು ಕೊಡುವುದರ ಮೂಲಕ ಸಾಮರಸ್ಯಯುತವಾದ ಒಂದು ಸಮಷ್ಟಿಯ ಗ್ರಾಮೀಣ ಚಿತ್ರಣವನ್ನು ಮೂಡಿಸುವುದರಲ್ಲಿ ಎತ್ತಿದ ಕೈ.

ಗೊರೂರರ ಹಾಸ್ಯ ಪ್ರಜ್ಞೆಗೆ ಪ್ರತ್ಯಕ್ಷ ಸಾಕ್ಷಿಯಾಗುವ ಸುಸಂಧರ್ಭವೊಂದು ವಯಕ್ತಿಕವಾಗಿ ನನಗೆ ಲಭಿಸಿದ್ದು ಪೂರ್ವ ಜನ್ಮದ ಸುಕೃತವೇ ಸರಿ. ಆ ಸುಸಂಧರ್ಭ ನಿಜಕ್ಕೂ ಅವರ್ಣನೀಯ. ಗೋಕಾಕ್ ಚಳುವಳಿಯ ನಂತರ ವರನಟ ಡಾ. ರಾಜಕುಮಾರ್ ಮತ್ತು ಗೊರೂರು ರಾಮಸ್ವಾಮಿ ಐಯ್ಯಂಗಾರರನ್ನು ನಮ್ಮ ಬಿಇಎಲ್ ಲಲಿತಕಲಾಸಂಘ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಈ ಇಬ್ಬರೂ ಮಹಾನ್ ದಿಗ್ಗಜರು ಒಂದೇ ವೇದಿಕೆಯ ಮೇಲಿದ್ದರು. ವೇದಿಕೆಯ ಮೇಲೆ ಕೇವಲ ರಾಜಕುಮಾರರು ಮಾತ್ರವೇ ಆಸೀನರಾಗಿದ್ದು ಅವರ ಧರ್ಮ ಪತ್ನಿ ಪಾರ್ವತಮ್ಮನವರು ವೇದಿಕೆಯ ಮುಂಭಾಗದಲ್ಲಿ ಕುಳಿತದ್ದನ್ನು ಗಮನಿಸಿದ ಗೊರೂರರು ತಮ್ಮ ಭಾಷಣದ ಮಧ್ಯೆ ತಮ್ಮ ಹಾಸ್ಯಪ್ರಜ್ಞೆಯನ್ನು ಬಳಸಿಕೊಂಡು ಇಂದೇಕೋ ವರನಟರು ಮಂಕಾಗಿ ಕಾಣುತ್ತಿದ್ದಾರಲ್ಲ. ಬಹುಶಃ ಇಂಜಿನ್ ಇಲ್ಲದೇ ಕೇವಲ ವ್ಯಾಗಿನ್ ನನ್ನು ವೇದಿಕೆಯ ಮೇಲೆ ಕೂರಿಸಿರುವ ಕಾರಣವೋ ? ಎಂದು ಛೇಡಿಸಿದ್ದಲ್ಲದೇ, ಬೇಕೆಂದೇ ದಪ್ಪಗಿದ್ದ ಪಾರ್ವತಮ್ಮ ರಾಜಕುಮಾರ್ ಅವರನ್ನು ಪರ್ವತಮ್ಮ ಎಂದೇ ಹಲವಾರು ಬಾರಿ ಸಂಬೋಧಿಸಿ ಎಲ್ಲರನ್ನೂ ನಗೆಗಡಲಿಗೆ ಜಾರಿಸಿದ್ದು ನನಗೆ ಇನ್ನೂ ಹಚ್ಚಹಸಿರಾಗಿಯೇ ನೆನಪಿದೆ. ಗೊರೂರರ ಹಾಸ್ಯಪ್ರಜ್ಞೆಯ ಅರಿವಿದ್ದ ಮತ್ತು ಸಾಹಿತ್ಯ ಪ್ರೇವಿಯೂ ಆಗಿದ್ದ ಪಾರ್ವತಮ್ಮ ರಾಜಕುಮಾರ್ ಅವರೂ ಸಹಾ ಇದನ್ನು ಸಹಜವಾಗಿ ಹಾಸ್ಯವಾಗಿಯೇ ತೆಗೆದುಕೊಂಡು ಬಿದ್ದೂ ಬಿದ್ದೂ ನಕ್ಕಿದ್ದೂ ಗಮನಾರ್ಹವಾಗಿತ್ತು.

ಖ್ಯಾತ ವಾಗ್ಗೇಯಕಾರರು ಕವಿಗಳು ಮತ್ತು ಹರಿಕಥಾ ವಿದ್ವಾಂಸರಾಗಿದ್ದ ನಮ್ಮ‌ ತಾತ‌ ಬಾಳಗಂಚಿ ಗಮಕಿ ನಂಜುಂಡಯ್ಯರೂ ಮತ್ತು ಗೊರೂರು ರಾಮಸ್ವಾಮಿಗಳ ನಡುವೆ ಗಳಸ್ಯ ಗಂಟಸ್ಯದ ಗೆಳೆತನದ ಪರಿಣಾಮವಾಗಿ ಅವರ ಮನೆಯಲ್ಲಿಯೇ ನಮ್ಮ ತಂದೆ, ಗಮಕಿ ಶಿವಮೂರ್ತಿಗಳು ತಮ್ಮ‌ ಪ್ರಾಥಮಿಕ‌ ಶಿಕ್ಷಣದ ಒಂದು ವರ್ಷದ ವಿದ್ಯಾಭ್ಯಾಸವನ್ನು‌ ಗೊರೂರಿನಲ್ಲಿ ಮಾಡಿದ್ದರು.

ಇಷ್ಟೆಲ್ಲಾ ಸಾಹಿತ್ಯ ಕೃಷಿ ನಡೆಸಿದ್ದ ಗೊರೂರರಿಗೆ ಅನೇಕ ಗೌರವಗಳು, ಪ್ರಶಸ್ತಿ ಪುರಸ್ಕಾರಗಳು ಅವರನ್ನರಸಿ ಬಂದವು. ಅವುಗಳಲ್ಲಿ ಮುಖ್ಯವಾಗಿ

 • ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ
 • ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
 • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
 • ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ
 • ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ
 • ದೇವರಾಜ ಬಹದ್ದೂರ್ ಪ್ರಶಸ್ತಿ
 • ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್
 • ಅಭಿಮಾನಿಗಳು ಅರ್ಪಿಸಿದ ಗ್ರಂಥ ಗೊರೂರು ಗೌರವಗ್ರಂಥ, ಸಂಸ್ಮರಣ ಗ್ರಂಥ ಹೇಮಾವತಿಯ ಚೇತನ
 • ಅವರ ಹೇಮಾವತಿ ಮತ್ತು ಭೂತಯ್ಯನ ಮಗ ಐಯ್ಯು ಚಲನಚಿತ್ರವಾಗಿದ್ದು ಹೀಗೆ ಹತ್ತು ಹಲವಾರು

ಗೊರೂರರ ಬರವಣಿಗೆ ಅಪರೂಪದ್ದು ಮತ್ತು ಅವರಿಗೇ ಅನುರೂಪವಾದದ್ದು. ಇಂತಹ ಗೊರೂರರು ತಮ್ಮ ವಯೋಸಹಜವಾಗಿ ಸೆಪ್ಟೆಂಬರ್ 28,1991ರಂದು ನಿಧನರಾದರು. ಈಗ ಗೊರೂರಂತಹ ಸಾಹಿಗಳು ನಮ್ಮಲ್ಲಿಲ್ಲ, ಅವರು ಚಿತ್ರಿಸಿದಂಥ ಸಮಾಜವೂ ಈಗ ಉಳಿದಿಲ್ಲವಾದರೂ, ಅವರು ಉಳಿಸಿ ಹೋಗಿರುವ ಅನುಭವ ಶ್ರೇಷ್ಠತೆ ನಮಗೆ ಆಸ್ತಿಯಾಗಿ ಉಳಿದಿದೆ ಮತ್ತು ಅದನ್ನು ಓದುತ್ತಾ ಹೋದಂತೆಲ್ಲಾ ಆ ಸುಂದರ ಚಿತ್ರಣ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆಯೇನೋ ಅನ್ನಿಸುವಂತೆ ಮೂಡುತ್ತಾ ಹೋಗುವುದರಿಂದಲೇ ನಮ್ಮ ಗೂರೂರು ರಾಮಸ್ವಾಮಿ ಐಯ್ಯಂಗಾರರು ನಮ್ಮ ಕನ್ನಡದ ಹೆಮ್ಮೆಯ ಕಲಿಗಳೇ ಸರಿ.

ಏನಂತೀರೀ?

4 thoughts on “ಗೊರೂರು ರಾಮಸ್ವಾಮಿ ಅಯ್ಯಂಗಾರ್

 1. ಡಾಕ್ಟರ್ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಬಗ್ಗೆ ಬರೆದಿರುವ ಲೇಖನ ಓದಿದೆ. ತುಂಬಾ ಚೆನ್ನಾಗಿ ಅವರ ಬಗ್ಗೆ ಬರೆದಿದ್ದೀರಿ. ನಾನು ಗೊರೂರರನ್ನು ಖುದ್ದಾಗಿ ಬಲ್ಲೆ. 1971ರಿಂದ 1974ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಧ್ಯಕ್ಷರಾಗಿದ್ದ ಶ್ರೀ ಜಿ.ನಾರಾಯಣ ಅವರಿಗೆ ಆಪ್ತ ಸಹಾಯಕನಾಗಿ, ಕನ್ನಡ ಶೀಘ್ರಲಿಪಿಗಾರನಾಗಿದ್ದಾಗ ಗೊರೂರು ರಾಮಸ್ವಾಮಿ ಅಯ್ಯಂಗಾರ್, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಜಿ.ಪಿ.ರಾಜರತ್ನಂ, ತಿ.ತಾ.ಶರ್ಮ, ದೇಜಗೌ ಪರ್ವತವಾಣಿ ಮುಂತಾದವರು ಪರಿಷತ್ತಿಗೆ ಬರುತ್ತಿದ್ದು ಅವರೆಲ್ಲರೂ ನನಗೆ ಪರಿಚಿತರಾಗಿದ್ದರು. ಗೊರೂರರು ನನಗೆ ಅವರ ಜೀವನದ ಅನೇಕ ಘಟನೆಗಳನ್ನು ನನ್ನ ಜೊತೆ ಹಂಚಿಕೊಂಡಿದ್ದರು.

  Liked by 1 person

  1. ನಮ್ಮ‌ ತಾತನವರ ಆಪ್ತ ಸ್ನೇಹಿತರಾಗಿದ್ದ ಗೊರೂರರ ಮನೆಯಲ್ಲಿಯೇ ನಮ್ಮ ತಂದೆಯವರು ತಮ್ಮ‌ ಪ್ರಾಥಮಿಕ‌ ಶಿಕ್ಷಣದ ಒಂದು ವರ್ಷದ ವಿದ್ಯಾಭ್ಯಾಸವನ್ನು‌ ಮಾಡಿದ್ದರು

   Liked by 1 person

 2. I would like to get in touch with people who have had direct contact with Gorur Ramaswamy Iyengar or know someone who had direct contact.. Please get in touch with me. Thank you.

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s