ಇತ್ತೀಚೆಗೆ ಪ್ರಪಂಚಾದ್ಯಂತ ನಡೆಯುತ್ತಿರುವ ಬಹುತೇಕ ಭಯೋತ್ಪಾದನೆಯ ಹಿಂದೆ ಧಾರ್ಮಿಕ ಕಾರಣಗಳು ಇರುವುದನ್ನು ಮನಗೊಂಡು ಭಯೋತ್ಪಾದನೆಗೆ ಮತ್ತು ಭಯೋತ್ಪಾದಕರಿಗೆ ಧರ್ಮವಿಲ್ಲ. ದೇವನೊಬ್ಬ ನಾಮ ಹಲವು ಹಾಗಾಗಿ ಎಲ್ಲರೂ ಸಹಬಾಳ್ವೆ ನಡೆಸಬೇಕೆಂದು ಓತಾನುಪ್ರೋತವಾಗಿ ಹೇಳುವುದನ್ನು ಕೇಳಿದ್ದೇವೆ. ನಿಜ ಹೇಳಬೇಕೆಂದರೆ ಅದೆಲ್ಲವೂ ಕೇವಲ ಬಾಯಿ ಚಪಲಕ್ಕೆ ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎನ್ನುವಂತೆ ತಪ್ಪಿಸಿಕೊಳ್ಳಲು ಹೇಳುವ ಮಾತಾಗಿ ನಿಜ ಜೀವನದಲ್ಲಿ ಅಂತಹ ಸಾಮರಸ್ಯ ಇಲ್ಲವಾಗಿದೆ. ಆದರೆ ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯ ಕಥಾ ನಾಯಕರಾದ ಶ್ರೀ ಇಬ್ರಾಹಿಂ ಸುತಾರ್ ಅವರು ನಿಜಕ್ಕೂ ಭಾವೈಕ್ಯದ ರಾಯಭಾರಿಗಳಾಗಿದ್ದಾರೆ ಎಂದರೂ ತಪ್ಪಾಗಲಾರದು.
ಬಾಗಲಕೋಟ ಜಿಲ್ಲೆಯ, ಮುಧೋಳ ತಾಲ್ಲೂಕಿನ ಮಹಾಲಿಂಗಪುರದ ನಬೀ ಸಾಹೇಬ್ ಮತ್ತು ಅಮೀನಾಬಿ ದಂಪತಿಗಳಿಗೆ 10-05-1940ರಲ್ಲಿ ಇಬ್ರಾಹಿಂ ಸುತಾರ್ ಅವರ ಜನನವಾಗುತ್ತದೆ. ಅತೀ ಬಡ ಕುಟುಂಬವಾದ್ದರಿಂದ ಕೇವಲ ಮೂರನೇ ತರಗತಿಯವರೆಗೆ ಮಾತ್ರ ಅವರ ವಿದ್ಯಾಭ್ಯಾಸವಾಗಿ ಅಕ್ಷರಗಳ ಪರಿಚಯವಾಗಿ ಅಲ್ಪ ಸ್ವಲ್ಪ ಓದು ಬರೆಯುವುದನ್ನು ಕಲಿತುಕೊಳ್ಳುತ್ತಾರೆ. ಆದರೆ ಅಷ್ಟರಲ್ಲಿಯೇ ಸುತಾರ್ ಅವರು ವಿದ್ಯೆಗಿಂತ ವಿನಯವನ್ನು ಕಲಿತುಕೊಂಡರು ಎಂದರೂ ತಪ್ಪಾಗಲಾರದು. ಮನೆಯ ತುಂಬಾ ಮಕ್ಕಳು ದುಡಿಯುವ ಕೈ ಒಂದಾದರೆ ತಿನ್ನವ ಕೈಗಳು ಹತ್ತಾರು. ಹಾಗಾಗಿ ಚಿಕ್ಕವಯಸ್ಸಿನಲ್ಲಿಯೇ ನೇಕಾರಿಕೆಯನ್ನು ಕಲಿತ ಸುತಾರರು ಕುಟುಂಬದ ನೆರವಿಗೆ ತಮ್ಮ ಅಳಿಲು ಸೇವೆಯನ್ನು ಸಲ್ಲಿಸತೊಡಗುತ್ತಾರೆ.
ಬಾಲ್ಯದಲ್ಲಿಯೇ ತಮ್ಮ ಧರ್ಮದ ಆನ್ವಯದಂತೆ ಪ್ರತಿ ನಿತ್ಯವೂ ಐದು ಬಾರಿ ಮಸೀದಿಯಲ್ಲಿ ನಮಾಜು ಮಾಡುತ್ತಾ ಅಲ್ಲಿಯೇ, ತಮ್ಮ ಧರ್ಮ ಗ್ರಂಥವಾದ ಕುರಾನ್ ಅಧ್ಯಯನ ಮಾಡುತ್ತಾರೆ. ಸಂಜೆ ತಮ್ಮ ಮನೆಯ ಹತ್ತಿರದ ಶ್ರೀ ಗುರು ಸಾಧು ನಿರಂಜನಾವಧೂತರ ಗುಡಿ ಮತ್ತು ಭಜನಾಮಂಡಲಿಗಳಲ್ಲಿ ಭಕ್ತಿ ಪರವಶವಾಗಿ ನಡೆಯುತ್ತಿದ್ದ ಭಜನೆಯನ್ನು ನೋಡಿ ಅದಕ್ಕೆ ಮರುಳಾಗಿ ಆದರಲ್ಲಿ ಅಂತಹದ್ದೇನಿದೆ ಎಂಬ ಕುತೂಹಲದಿಂದ ಊರಿನ ಭಜನಾಸಂಘದಲ್ಲಿ ಪಾಲುಗೊಳ್ಳುವ ಮೂಲಕ ತತ್ವಪದ ಮತ್ತು ವಚನಗಳನ್ನು ಕಲಿತು ಕೊಳ್ಳುವುದರ ಜೊತೆಗೆ ಅಲ್ಲಿ ನಡೆಯುತ್ತಿದ್ದ ಪ್ರವಚನಗಳ ಮೂಲಕ ನಿಜಗುಣಯೋಗಿಗಳ ಶಾಸ್ತ್ರ ಮತ್ತು ಭಗವದ್ಗೀತೆಗಳ ಪರಿಚಯವಾಗಿ ತಮಗೇ ಅರಿವಿಲ್ಲದಂತೇ ಅವೆಲ್ಲವನ್ನೂ ಅಧ್ಯಯನ ಮಾಡುತ್ತಾರೆ.
ಹೀಗೆ ಕೆಲವೇ ವರ್ಷಗಳಲ್ಲಿ ಬಸವಣ್ಣನವರ ತತ್ವಗಳನ್ನು ಅನುಷ್ಠಾನಕ್ಕೆ ತಂದರೆ ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಎಂಬುದನ್ನು ಅರಿತುಕೊಳ್ಳುತ್ತಾರೆ. ಭಗವದ್ಗೀತೆ ಹಾಗೂ ಉಪನಿಷತ್ತುಗಳಲ್ಲಿ ಎಲ್ಲರೂ ಒಪ್ಪುವಂತಹ ಆದರ್ಶಗಳು ಇದ್ದರೂ,ಅದು ಅನುಷ್ಠಾನಕ್ಕೆ ಬರಲಿಲ್ಲ. ಸಮಾನತೆ ಇಲ್ಲದ ಆದರ್ಶವಾದವನ್ನು ಒಪ್ಪಲಾರೆ ಎಂದು ಬಸವಣ್ಣನವರು ಅದನ್ನು ತಿರಸ್ಕರಿಸಿದರು. ಮುಹಮ್ಮದ್ ಪೈಗಂಬರ್ ಅವರು ಮಂತ್ರವನ್ನು ಬಳಸಿದಂತೆ ಬಸವಣ್ಣನವರು ಇಷ್ಟಲಿಂಗ ಬಳಕೆ ಮಾಡಿ, ಸಮಾನತೆಯನ್ನು ಅನುಷ್ಠಾನಕ್ಕೆ ತರಲು ಯತ್ನಿಸಿದರು. ಹಾಗಾಗಿ ಅವರ ಅನುಯಾಯಿಗಳಿಗೆಲ್ಲರಿಗೂ ಲಿಂಗಧಾರಣೆ ಮಾಡಿದ್ದರು. ಆದರೆ ದುರ್ಬಲ ಮನಸ್ಸಿನವರಿಂದ ಬಸವಣ್ಣನವರ ತತ್ವಾದರ್ಶಗಳನ್ನು ಅನುಷ್ಠಾನಕ್ಕೆ ತರಲು ಆಗದು. ವ್ಯಸನಿಗಳಿಗೆ ಸಂಪತ್ತು ನೀಡಿದರೆ ಸದುಪಯೋಗವಾಗದೇ ದುರ್ಬಳಕೆಯಾಗುತ್ತದೆ ಹಾಗಾಗಿ ಅಂತಹವರಿಗೆ ಸಂಸ್ಕಾರ ಎಂಬ ಸಂಪತ್ತು ನೀಡಿದಲ್ಲಿ ಅದರ ಸದುಪಯೋಗವಾಗುತ್ತದೆ, ಇಂತಹ ಸಂಸ್ಕಾರವನ್ನು ಬಸವಣ್ಣನವರು ನಮಗೆ ನೀಡಿದ್ದಾರೆ ಎಂದು ಹೇಳುತ್ತಾರೆ ಇಬ್ರಾಹಿಂ ಸುತಾರ್ ಅವರು.
1970 ರಲ್ಲಿ ಭಾವೈಕ್ಯ ಜನಪದ ಸಂಗೀತ ಮೇಳವನ್ನು ಸ್ಥಾಪಿಸಿ ಇದರಲ್ಲಿ ಪ್ರಶ್ನೋತ್ತರಗಳ ಜೊತೆ ಪದ್ಯಗಳನ್ನು ಹಾಡುವ ಸಂವಾದ ರೂಪ ಭಜನೆಯನ್ನು ಮಾಡುವ ವಿನೂತನ ಕಲಾ ಪ್ರಕಾರದ ಹುಟ್ಟಿಗೆ ಕಾರಣರಾಗಿದ್ದಲ್ಲದೇ, ದೇವರು ಮತ್ತು ಧರ್ಮ ಬೇರೆ ಆದರೂ ಸತ್ಯ ಒಂದೇ ಎಂಬ ತತ್ವದ ಅಡಿಯಲ್ಲಿ ಮಹಾತ್ಮ ಕಬೀರರಂತೆ ಇವರು ಸಮಾಜದಲ್ಲಿ ಭಾವೈಕ್ಯತೆಯನ್ನು ತರಲು ಪ್ರವಚನಗಳನ್ನು ನೀಡಲು ಆರಂಭಿಸಿದರು. ಕಳೆದ ನಾಲ್ಕು ದಶಕಗಳಿಂದ ನಾಡಿನಾದ್ಯಂತ ಸಾಹಿತ್ಯ ವಾಚನ, ಪ್ರವಚನ, ಭಜನೆ ಮತ್ತು ಸಮಾಜಸೇವೆಯ ಮುಖಾಂತರ ಸರ್ವಮಹಾತ್ಮರ ಸಾಹಿತ್ಯವನ್ನು ಬಳಸಿ ಭಾವೈಕ್ಯತೆ ಸಂದೇಶವನ್ನು ತಮ್ಮ ನೂರಾರು ಕಾರ್ಯ ಕ್ರಮಗಳ ಮೂಲಕ ಹಿಂದು-ಮುಸ್ಲಿಂರಲ್ಲಿ ಭಾವೈಕ್ಯತೆ ಬೆಸೆಯುವ ಪವಿತ್ರ ಕಾಯಕದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ.ಜೀವನದುದ್ದಕ್ಕೂ ಭಾವೈಕ್ಯತೆಯ ಸಂದೇಶವನ್ನು ಸಾರುತ್ತ ವಿಶ್ವ ಪ್ರೇಮವನ್ನು ಬೆಳೆಸುವುದೇ ನನ್ನ ಜೀವನದ ಗುರಿಯಾಗಿದೆ ಎಂದು ಅವರೇ ಹೇಳಿಕೊಂಡಿದ್ದಾರೆ.
ತಮ್ಮ ಭಜನಾ ಸಂಘದ ವತಿಯಿಂದ ಕೇವಲ ಭಾವೈಕ್ಯತೆಯ ಭಜನೆಗಳಲ್ಲದೇ ಯೋಗಾಸನ ಶಿಬಿರಗಳು, ಸಾಕ್ಷರತಾ ಶಿಬಿರಗಳು, ಶಾಲಾ ಕೊಠಡಿಗಳ ನಿರ್ಮಸಿ, ಕೊಳವೇ ಭಾವಿಗಳನ್ನು ತೋಡಿಸಿ ಕುಡಿಯುವ ನೀರಿನ್ ಟ್ಯಾಂಕ್ ಆಳವಡಿಸುವಂತಹ ಅನೇಕ ಜನಪರ ಕಾರ್ಯಕ್ರಮಗಳನ್ನು ತಮ್ಮ ನೇತೃತ್ವದಲ್ಲಿ ಮಾಡಿಸಿದ್ದಾರೆ. ಇಂತಹ ವಿಚಾರವಂತ ಮುಸಲ್ಮಾನರ ಸಂಖ್ಯೆ ನಮ್ಮ ದೇಶದಲ್ಲಿ ಅಗಣಿತವಾದಲ್ಲಿ ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯಿಂದ ಬಾಳ ಬಹುದಾಗಿದೆ.
ವೈದಿಕ ಧರ್ಮ, ವಚನಗಳು ಮತ್ತು ಸೂಫಿ ಪರಂಪರೆಗಳ ಹದವಾದ ಸಮ್ಮಿಳನದ ಇವರ ಭಜನೆಗಳು, ಪ್ರವಚನಗಳು ಮತ್ತು , ಸಂವಾದಗಳ ಮೂಲಕ ಜನರಲ್ಲಿ ಭಾವೈಕ್ಯತೆ ತುಂಬುವ ಇವರ ಶ್ಲಾಘನೀಯವಾದ ಕಾರ್ಯವನ್ನು ಗುರುತಿಸಿ
- 1995ರಲ್ಲಿ ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ
- 2018ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
- ಭಾವೈಕ್ಯ ದರ್ಶನ ಶರಣ ಶ್ರೀ ಇಬ್ರಾಹಿಂ ಅವರ ಆಬಿನಂದನಾ ಗ್ರಂಥ,
ಮಾತೃಭಾಷೆ ಉರ್ದುವಾದರೂ ಕನ್ನಡದ ಮೇಲೆ ಅಪಾರವಾದ ಪ್ರೇಮ ಮತ್ತು ಭಾಷೆಯ ಮೇಲೆ ಅಪಾರವಾದ ಹಿಡಿತವಿದ್ದ ಕಾರಣ, ಕನ್ನಡದಲ್ಲಿ ನಾವೆಲ್ಲಾ ಭಾರತೀಯರು, ತತ್ವ ಜ್ಞಾನಕ್ಕೆ ಸರ್ವರೂ ಅಧಿಕಾರಿಗಳು, ಪರಮಾರ್ಥ ಲಹರಿ ಮುಂತಾದ ಅನೇಕ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ.
ಸ್ಥಿತಪ್ರಜ್ಞರು, ಹಣ ಹೆಚ್ಚೋ? ಗುಣ ಹೆಚ್ಚೋ?, ಮನಬಂದಂತೆ ಓಡ್ಯಾಡಬೇಡ, ಆಧ್ಯಾತ್ಮ ಸಂವಾದ ತರಂಗಿಣಿ – 2 ಭಾಗದಲ್ಲಿದೆ, ಮೈಸೂರು ರಾಮಕೃಷ್ಣ ಆಶ್ರಮದಲ್ಲಿ ಮಾಡಿದ ಗೀತಾ ಸಂವಾದ ತರಂಗಿಣಿ 5 ಭಾಗಗಳಲ್ಲಿ ಭಜನೆಯ ಧ್ವನಿಸುರಳಿಗಳನ್ನು ಬಿಡುಗಡೆ ಮಾಡಿದ್ದಾರೆ.
ಸೌಡಿಲ್ಲದ ಸಾಹುಕಾರ, ಪಾಪ ಮಾಡಬೇಡ, ಪುಣ್ಯವನೇ ಮಾಡು, ಉತ್ತಮರ ಸಂಗಮಾಡು, ಮೊದಲು ಮಾನವನಾಗು, ದಯವೇ ಧರ್ಮದ ಮೂಲ, ಭಾವೈಕ್ಯತೆ ಎಂದರೇನು?, ನೀತಿವಂತನಾಗು, ಯಾರು ಜಾಣರು?, ಪರಮಾತ್ಮನ ಭಜಿಸು, ದೈವವು ಬದಲಾಗಬಹುದೇ?, ಗ್ರಹಸ್ಥ ಜೀವನದಲ್ಲಿ ಹೇಗಿರಬೇಕು? ಮುಂತಾದ ಅವರ ಪ್ರವಚನದ ಧ್ವನಿಸುರುಳಿಗಳು ಬಿಡುಗಡೆಯಾಗಿ ಭಾರೀ ಪ್ರಖ್ಯಾತವಾಗಿದೆ.
- ಶ್ರಾವಣಕ್ಕೊಂದು ಸಮಾಜ ಸೇವೆ ಎಂಬ ವಿನೂತನ ಕಾರ್ಯಕ್ರಮವನ್ನು ವಿಜಯಪುರದ ವೇದಾಂತ ಕೇಸರಿ ಪೂಜ್ಯಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮತ್ತು ಇಬ್ರಾಹಿಂ ಸುತಾರ್ ಅವರ ನೇತೃತ್ವದಲ್ಲಿ ಮಾಡಿದ ಸಮಾಜ ಸೇವೆಗಳು ಈ ರೀತಿಯಾಗಿವೆ.
- 1988ರಲ್ಲಿ ಶೇಗುಣಸಿ- ತೇರದಾಳ ಮಧ್ಯೆ 9 ಕಿ.ಮೀ. ಶ್ರಮದಾನದಿಂದ ರಸ್ತೆ ನಿರ್ಮಾಣ
- 2002ರಲ್ಲಿ ಢವಲೇಶ್ವರಲ್ಲಿ ಶ್ರೀ ವಿವೇಕಾನಂದ ಪ್ರಾಥಮಿಕ ಶಾಲೆಯ ನಿರ್ಮಾಣ
- 2009ರಲ್ಲಿ ಬೀಳಗಿ ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ಕಲ್ಯಾಣ ಮಂಟಪದ ನಿರ್ಮಾಣ
- 2011ರಲ್ಲಿ ಅರಳಿಮಟ್ಟಿಯಲ್ಲಿ ಶ್ರೀ ಬಸವೇಶ್ವರ ಯಾತ್ರಿ ನಿವಾಸ
- ಶಾಂತಿಕುಟೀರ ಕನ್ನೂರಿನ ಶ್ರೀ ಸ.ಸ.ಗಣಪತರಾವ್ ಮಹಾರಾಜರ ಜೊತೆಗೆ ವ್ಯಸನಮುಕ್ತ ಸಮಾಜ ನಿರ್ಮಾಣದ ಪಾದಯಾತ್ರೆ
- ಅವರ ಪುತ್ರನ ವಿವಾಹದ ಸಮಯದಲ್ಲಿ, ಕಲ್ಯಾಣ ಮಹೋತ್ಸವದ ನಿಮಿತ್ತ ಶರಣರ – ಸಂತರ – ಸೂಫಿಗಳ ಭಾವೈಕ್ಯ ಸಂಗಮ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ಭಾವೈಕತೆಯನ್ನು ತಮ್ಮ ಮನೆಯಿಂದಲೇ ಮಾಡಿ ತೋರಿಸಿದ ಮಹಾನುಭಾವರು ಇಬ್ರಾಹಿಂ ಸುತಾರರು.
ಹೀಗೆ ಸೂಫಿ ಸಾಹಿತ್ಯ, ವಚನಗಳು, ಪ್ರವಚನ, ಭಜನೆ ಮತ್ತು ಸಮಾಜ ಸೇವೆಯ ಮುಖಾಂತರ ಸರ್ವ ಮಹಾತ್ಮರ ಸಾಹಿತ್ಯವನ್ನು ಬಳಸಿ ಹಿಂದೂ-ಮುಸ್ಲಿಮ್ಮರಲ್ಲಿ ಭಾವೈಕ್ಯತೆಯ ಸಂದೇಶವನ್ನು ನಾಲ್ಕು ದಶಕಗಳಿಂದಲೂ ಸಾರುತ್ತಿರುವ ಕೇವಲ ಕರ್ನಾಟಕವಲ್ಲದೇ ಹೊರರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ದೆಹಲಿ, ಒರಿಸ್ಸಾ, ರಾಜಸ್ಥಾನ,ಗೋವಾಗಳಲ್ಲಿಯೂ ಯಶಸ್ವಿಯಾಗಿ ತಮ್ಮ ಕಾರ್ಯಕ್ರಮಗಳನ್ನು ನೀಡಿ ಕರ್ನಾಟಕದ ಹಿರಿಮೆ ಮತ್ತು ಗರಿಮೆಯನ್ನು ಎತ್ತಿ ಸಾರಿ ಭಾವೈಕ್ಯತೆಯ ರಾಯಭಾರಿಯಾಗಿರುವ ಕರ್ನಾಟಕದ ಸಂತ ಕಬೀರದಾಸರಾದ ಶ್ರೀ ಇಬ್ರಾಹಿಂ ಸುತಾರ್ ಅವರು ನಿಜವಾದ ಕನ್ನಡದ ಕಲಿಗಳೇ ಸರಿ
ಏನಂತೀರೀ?