ಕೆಲ ವರ್ಷಗಳ ಹಿಂದೆ ಸುಧಾ ನರಸಿಂಹರಾಜು ಅವರು ದೂರದರ್ಶನದಲ್ಲಿ ನಡೆಸಿಕೊಡುತ್ತಿದ್ದ ಸಂದರ್ಶನದಲ್ಲಿ ಭಾಗವಹಿಸಿದ್ದ ವರನಟ ರಾಜ್ ಕುಮಾರ್ ಅವರು ಅರವತ್ತು ಮತ್ತು ಎಪ್ಪತ್ತರ ದಿನಗಳಲ್ಲಿ ಬಹಳ ಉತ್ತಂಗದ ಶಿಖರವೇರಿದ್ದರೂ, ಅಂದಿನ ದಿನದಲ್ಲಿ ನಿರ್ಮಾಪಕ ನಿರ್ದೇಶಕರು, ತಮ್ಮ ಚಲನಚಿತ್ರಗಳಿಗೆ ಮೊದಲು ಆ ಹಾಸ್ಯ ನಟನ ಕಾಲ್ ಶೀಟ್ ಇದೆಯೇ ಎಂದು ನಿಗಧಿಪಡಿಸಿಕೊಂಡು ನಂತರ ನಾಯಕ, ನಾಯಕಿ ಮತ್ತು ಉಳಿದ ಸಹಕಲಾವಿದರನ್ನು ಸಂಪರ್ಕಿಸುತ್ತಿದ್ದರು ಎಂದು ಹೇಳಿದರು ಎಂದರೆ ಆ ಹಾಸ್ಯ ನಟ ಎಂತಹ ಮಹಾನ್ ನಟನಿರಬೇಕು ಎಂಬುದು ತಿಳಿಯುತ್ತದೆ. ಈ ರೀತಿ ಡಾ. ರಾಜ್ ಅವರು ಹೇಳಿದ್ದು ಹಾಸ್ಯ ಚಕ್ರವರ್ತಿ ಕನ್ನಡ ಚಿತ್ರರಂಗದ ಚಾರ್ಲೀ ಚಾಪ್ಲೀನ್ ತನ್ನ ಆಂಗಿಕ ಅಭಿನಯದಿಂದಲೇ ತೆರೆಯ ಮೇಲೆ ಬಂದ ತಕ್ಷಣವೇ ಎಲ್ಲಾ ಪ್ರೇಕ್ಷಕರನ್ನೂ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದದ್ದಲ್ಲದೇ, ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದ ಮಹಾನ್ ನಟ ದಿ. ಟಿ ಆರ್ ನರಸಿಂಹರಾಜು ಅವರ ಕುರಿತಂತಾಗಿತ್ತು. ಡಾ.ರಾಜ್ ಅವರ ಈ ಮಾತು ಅವರ ಸರಳತೆ ಮತ್ತು ಸಜ್ಜನತೆಯ ಶ್ರೇಷ್ಠತೆಗೆ ಕನ್ನಡಿ ಹಿಡಿದಂತಿದ್ದರೆ, ನರಸಿಂಹ ರಾಜು ಅವರು ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಶಾಶ್ವತವಾಗಿ ಗಳಿಸಿದ್ದ ಶ್ರೇಷ್ಠತೆಗೆ ಕನ್ನಡಿ ಹಿಡಿದಂತಿತ್ತು ಎಂದರೂ ತಪ್ಪಾಗಲಾರದು. ಹಾಗಾಗಿ ಅವರೇ ಇಂದಿನ ಕನ್ನಡದ ಕಲಿಗಳು ಕಥಾ ನಾಯಕರು.
ನರಸಿಂಹರಾಜು ಅವರು ಜುಲೈ 24, 1926 ರಂದು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀ ರಾಮರಾಜು ಮತ್ತು ವೆಂಕಟಲಕ್ಷ್ಮಮ್ಮ ದಂಪತಿಗಳ ಗರ್ಭದಲ್ಲಿ ಜನಿಸುತ್ತಾರೆ. ಬಹುಶಃ ನಟಿಸುವುದಕ್ಕಾಗಿಯೇ ಜನಿಸಿದರೇನೋ ಎನ್ನುವಂತೆ ಅವರ ಅಭಿನಯದ ಬದುಕು ಬಾಲ್ಯದಲ್ಲೇ ಆರಂಭವಾಗಿ ಕಲೆಯೇ ಅವರ ಜೀವನವಾಗಿ ಬಿಡುತ್ತದೆ. ಅವರ ನಾಲ್ಕನೆಯ ವಯಸ್ಸಿನಲ್ಲಿಯೇ ಸಿ.ಬಿ.ಮಲ್ಲಪ್ಪನವರ ಶ್ರೀಚಂದ್ರಮೌಳೀಶ್ವರ ನಾಟಕ ಸಭಾದಲ್ಲಿ ಬಾಲಕಲಾವಿದನಾಗಿ ಸೇರಿಕೊಳ್ಳುವ ಶ್ರೀ ನರಸಿಂಹರಾಜು, ನಟನೆಯ ಜೊತೆ ಜೊತೆಯಲ್ಲಿಯೇ ಬದುಕಿನ ಶಿಕ್ಷಣವೂ ಅಲ್ಲಿಯೇ ದೊರೆಯುತ್ತದೆ. ಕುಳ್ಳಗ್ಗೆ ಸಣ್ಣಗಿನ ಕೋಲು ಮುಖ, ಉಬ್ಬು ಹಲ್ಲನ್ನು ಹೊಂದಿದ್ದ ಅವರ ಶರೀರ ಮತ್ತು ಆವರ ಆಂಗಿಕ ಶೈಲಿಯು ಹಾಸ್ಯಪಾತ್ರಕ್ಕೆಂದೇ ಹೇಳಿ ಮಾಡಿಸಿರುವಂತೆ ಸಹಜವಾಗಿದ್ದರಿಂದ ಅವರು ರಂಗಸ್ಥಳದ ಮೇಲೆ ಬಂದು ನಿಂತರೆ ಸಾಕು, ಪ್ರೇಕ್ಷಕರು ಬಿದ್ದು ಬಿದ್ದು ನಗುತ್ತಿದ್ದದ್ದ ಕಾರಣ ಬಲು ಬೇಗನೇ ಪ್ರಖ್ಯಾತ ಕಲಾವಿದರಾಗಿ ಬಿಡುತ್ತಾರೆ.
ಶ್ರೀ ಚಂದ್ರಮೌಳೀಶ್ವರ ನಾಟಕ ಸಭಾದಿಂದ ಆರಂಭವಾದ ಅವರ ರಂಗಭೂಮಿಯ ವೃತ್ತಿ ಜೀವನ ನಂತರ ಎಡತೊರೆಯ ಕಂಪೆನಿ, ಹಿರಣ್ಣಯ್ಯನವರ ಮಿತ್ರಮಂಡಲಿ, ಭಾರತ ಲಲಿತ ಕಲಾ ಸಂಘ, ಬೇಲೂರಿನ ಗುಂಡಾ ಜೋಯಿಸರ ಕಂಪೆನಿ, ಗುಬ್ಬಿಯ ಚೆನ್ನಬಸವೇಶ್ವರ ನಾಟಕ ಕಂಪೆನಿ ಹೀಗೆ ಹತ್ತು ಹಲವಾರು ಕಂಪನಿಗಳಲ್ಲಿ ಸಾವಿರಾರು ನಾಟಕಗಳಲ್ಲಿ ತಮ್ಮ ಬಣ್ಣದ ಬದುಕಿನ ಆರಂಭದ 25 ವರ್ಷಗಳನ್ನು ಕಳೆಯುತ್ತಾರೆ. ಬಾಲನಟನಾಗಿ ರಂಗಭೂಮಿ ಪ್ರವೇಶಿಸಿದ ನರಸಿಂಹರಾಜು ತಮ್ಮ ಆಭಿನಯ ಕೌಶಲ್ಯದಿಂದ ದಿನದಿಂದ ದಿನಕ್ಕೆ ಬೆಳೆಯುತ್ತಲೇ, ದೊಡ್ಡ ದೊಡ್ಡ ಪಾತ್ರಗಳಿಗೆ ಭಡ್ತಿ ಪಡೆಯುತ್ತಾರೆ. ಆರಂಭದಲ್ಲಿ ನರಸಿಂಹರಾಜು ಅವರು ಪೌರಾಣಿಕ ಪಾತ್ರಗಳಾದ ವಿಶ್ವಾಮಿತ್ರ, ರಾಮ, ಭರತ, ಸಹ ನಟರು ಬಾರದಿದ್ದಲ್ಲಿ ಕೆಲವೊಮ್ಮೆ ರಾವಣ ಅಲ್ಲದೇ ಸ್ತ್ರೀಪಾತ್ರಗಳಲ್ಲಿಯೂ ಮಿಂಚಿದ್ದುಂಟು. ಮುಂದೆ ತಮ್ಮ ವಿಶಿಷ್ಟ ಹಾವ ಭಾವ ಮತ್ತು ಅಂಗ ಚೇಷ್ಟೆಯ ಅಭಿನಯದಿಂದ ಹಾಸ್ಯ ನಟರಾಗಿ ರೂಪುಗೊಂಡು ಬೇಡರ ಕಣ್ಣಪ್ಪ ನಾಟಕದಲ್ಲಿ ಅರ್ಚಕನ ಪುತ್ರ ಕಾಶಿಯ ಪಾತ್ರ ನರಸಿಂಹರಾಜು ಅವರಿಗೆ ತುಂಬಾ ಜನಪ್ರಿಯತೆಯನ್ನು ತಂದು ಕೊಡುತ್ತದೆ. ರಂಗಭೂಮಿಯಲ್ಲಿ ಪಡೆದ ಈ ಎಲ್ಲ ಬಗೆಯ ಅನುಭವ ಅವರಿಗೆ ಸಿನಿಮಾ ಜಗತ್ತಿಗೆ ಪ್ರವೇಶ ಪಡೆಯಲು ಉಪಯೋಗಕ್ಕೆ ಬರುತ್ತದೆ.
ವರನಟ ರಾಜ್‌ಕುಮಾರ್ ಮತ್ತು ನರಸಿಂಹ ರಾಜು ಇಬ್ಬರೂ ಸಹಾ ಬೇಡರ ಕಣ್ಣಪ್ಪ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಾರೆ. ಬೇಡರ ಕಣ್ಣಪ್ಪ ನಾಟಕದ ಸಾವಿರಾರು ಪ್ರದರ್ಶನಗಳಲ್ಲಿ ನಟಿಸಿದ್ದ ನರಸಿಂಹ ರಾಜು ಅವರಿಗೆ ಅರ್ಚಕರ ಮಗ ಕಾಶಿಯ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸಿ ತಮ್ಮ ಚೊಚ್ಚಲು ಚಿತ್ರದಲ್ಲೇ ಕನ್ನಡ ಚಿತ್ರ ರಸಿಕರ ಮನಗೆಲ್ಲುವುದರಲ್ಲಿ ಸಫಲರಾಗುತ್ತಾರೆ. ಮುಂದೆ ಈ ಇಬ್ಬರೂ ನಟರು ಕನ್ನಡ ಚಿತ್ರರಂಗದಲ್ಲಿ ದಿಗ್ಗಜರಾಗಿ ಮೆರೆದರೂ, ರಂಗಭೂಮಿಯನ್ನು ಕಡೆಗಣಿಸದೇ ಸಮಯಸಿಕ್ಕಾಗಲೆಲ್ಲಾ ರಂಗಭೂಮಿಯಲ್ಲಿ ನಮ್ಮ ನಟನಾ ಕೌಶಲ್ಯವನ್ನು ಕನ್ನಡಿಗರಿಗೆ ಉಣ ಬಡಿಸುತ್ತಿದ್ದರು.
ಮದ್ರಾಸಿನಲ್ಲಿ ಕೇಂದ್ರೀಕೃತವಾಗಿದ್ದ ಕನ್ನಡ ಚಿತ್ರರಂಗ ಅರವತ್ತರ ದಶಕದಲ್ಲಿ ಕನ್ನಡ ಚಿತ್ರಗಳೂ ಸರಿಯಾಗಿ ಪ್ರದರ್ಶನವಾಗದೇ ಚಿತ್ರರಂಗವನ್ನೇ ನಂಬಿದ್ದ ನೂರಾರು ಕಲಾವಿದರಿಗೆ ಎರಡು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ಬಂದೊದಗಿತ್ತು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಗಳಸ್ಯ ಗಂಟಸ್ಯ ಗೆಳೆಯರಾಗಿದ್ದ ರಾಜ್ ಕುಮಾರ್, ನರಸಿಂಹರಾಜು ಬಾಲಕೃಷ್ಣ ಮತ್ತು ಜಿ.ವಿ. ಐಯ್ಯರ್ ಎಲ್ಲರೂ ಒಂದು ಕಡೆ ಕೂಡಿ ಕಲಾವಿದರುಗಳು ಊಟಕ್ಕೆ ಪರದಾಡುವುದನ್ನು ನೋಡಲಾಗದೇ ತಮ್ಮದೇ ಆದ ಒಂದು ನಾಟಕ ಕಂಪನಿಯೊಂದನ್ನು ಆರಂಭಿಸಿ, ಕರ್ನಾಟಕ ರಾಜ್ಯಾದ್ಯಂತ ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸುತ್ತಾರೆ. ರಾಜಕುಮಾರ್ ಅವರ ಘನ ಗಾಂಭೀರ್ಯದ ಶೌರ್ಯದ ಪಾತ್ರಗಳಲ್ಲಿ ನಟಿಸುತ್ತಿದ್ದರೆ, ಬಾಲಕೃಷ್ಣ ಮತ್ತು ನರಸಿಂಹರಾಜು ಒಬ್ಬರಿಗೊಬ್ಬರು ಪೂರಕವಾಗಿ ಹೊಂದಾಣಿಕೆಯಿಂದ ಅಭಿನಯಿಸುತ್ತಿದ್ದರು. ಕೃತ್ರಿಮ ಅಥವಾ ನಯವಂಚಕ ಪಾತ್ರಗಳಲ್ಲಿ ಬಾಲಣ್ಣ ಅಭಿನಯಿಸುತ್ತಿದ್ದರೆ, ಅವರ ಭಂಟನಾಗಿ ಸರಳ ಸಜ್ಜನಿಕೆಯ ಮೂರ್ತಿಯಾಗಿಯೋ ಇಲ್ಲವೇ ಪೆದ್ದನಾಗಿಯೋ ಅಥವಾ ತುಂಟತನ ಇಲ್ಲವೇ ಮೂರ್ಖನ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಹೃನ್ಮನಗಳನ್ನು ಗೆಲ್ಲುವುದರಲ್ಲಿ ನರಸಿಂಹರಾಜು ಸಫಲರಾಗುತ್ತಾರೆ. ಈ ಎಲ್ಲಾ ನಾಟಕಗಳನ್ನು ರಚಿಸಿ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದವರು ಜಿ.ವಿ.ಐಯ್ಯರ್
ಇವರೆಲ್ಲರ ಈ ದಿಟ್ಟ ನಿರ್ಧಾರವನ್ನು ಮೆಚ್ಚಿದ ಕರ್ನಾಟಕದ ಕಲಾರಸಿಕರು ಒಂದಲ್ಲಾ ಎರಡಲ್ಲಾ ಹತ್ತು ಹತ್ತು ಬಾರೀ ಅವರ ನಾಟಕಗಳನ್ನು ನೋಡಿ ಹೊಟ್ಟೆಗೆ ಹಿಟ್ಟಿಲ್ಲದ ನಟರಿಗೆ ಕೇವಲ ಹೊಟ್ಟೆಗಷ್ಟೇ ಅಲ್ಲದೇ, ಕೈ ತುಂಬಿ ಚೆಲ್ಲುವಷ್ಟು ದುಡ್ಡನ್ನು ಕೊಡುತ್ತಾರೆ. ಇದೇ ದುಡ್ಡಿನಲ್ಲಿಯೇ ಇದೇ ತಂಡವೇ ಸೇರಿಕೊಂಡು ಕನ್ನಡ ಚಿತ್ರರಂಗದಲ್ಲಿ ನಾನಾ ದಾಖಲೆಗಳನ್ನು ಸೃಷ್ಟಿಸಿದ ರಣಧೀರ ಕಂಠೀರವ ಚಿತ್ರವನ್ನು ಮಾಡುತ್ತಾರೆ. ಈ ಚಿತ್ರದ ಯಶಸ್ಸು ಮತ್ತೊಮ್ಮೆ ಕನ್ನಡ ಚಿತ್ರರಂಗವನ್ನು ಸರಿದಾರಿಗೆ ತಂದು ಅಲ್ಲಿಂದ ಮುಂದೆ ಈ ಎಲ್ಲಾ ನಟರು ಒಂದು ಕ್ಷಣವೂ ಚಿಡುವಿಲ್ಲದಷ್ಟು ನಟರಾಗಿ ಬಿಡುತ್ತಾರೆ.
ನಾವು ಮೆಚ್ಚಿರುವ ಯಾವುದೇ ಶ್ರೇಷ್ಠ ನಟ ನಟಿಯರಿರಲಿ, ಅವರು ನಟಿಸಿರುವ ನೂರಿನ್ನೂರು ಚಿತ್ರಗಳಲ್ಲಿ, ಒಂದೋ ಎರಡೋ ಅಥವಾ ಬೆರಳೆಣಿಕೆಯಷ್ಟು ಪಾತ್ರಗಳು ಮಾತ್ರಾ ನಮ್ಮ ಮನ ಸೆಳದ ಕಾರಣ ನಾವು ಅವರ ಅಭಿಮಾನಿಗಳಾಗಿರುತ್ತೇವೆ. ಆದರೆ ನರಸಿಂಹರಾಜು ಅವರಿಗೆ ಮಾತ್ರಾ ಈ ಮಾತು ಅನ್ವಯಿಸುವುದಿಲ್ಲ ಎಂದು ಘಂಟಾ ಘೋಷವಾಗಿ ಹೇಳಬಹುದು. ಅವರ ಪ್ರತೀ ಪಾತ್ರವೂ ಜನರಿಗೆ ಪ್ರಿಯವೇ. ಅದರಲ್ಲಿ ಯಾವ ಯಾವ ಪಾತ್ರ ಹೆಚ್ಚು ಇಷ್ಟ ಎಂದು ಕೇಳಿದರೇ ಹೇಳಲಾಗದ ತಳಮಳ. ಬೇಕಾದಲ್ಲೀ ಅವರ ಎಷ್ಟು ಚಿತ್ರಗಳನ್ನು ನೋಡಿ ಆನಂದಿಸಿದ್ದೇವೆ ಎಂದಷ್ಟೇ ಹೇಳಬಹುದೇನೋ? ಏಕೆಂದರೆ, ಅವರ ಪ್ರತೀ ಪಾತ್ರ ನಿರ್ವಹಣೆಯೂ ಎಲ್ಲರಿಗೂ ಇಷ್ಟವಾಗಿದ್ದ ಕಾರಣ ನರಸಿಂಹರಾಜು ಅವರು ಜನಮಾನಸದಲ್ಲಿ ಇಂದಿಗೂ ಅಜರಾಮರರಾಗಿದ್ದಾರೆ. ಬೇಡರ ಕಣ್ಣಪ್ಪದ ಕಾಶೀ, ಶ್ರೀಕೃಷ್ಣದೇವರಾಯ ಚಿತ್ರದಲ್ಲಿ ತೆನಾಲಿ ರಾಮಕೃಷ್ಣ, ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ವಿಶ್ವಾಮಿತ್ರರ ಶಿಷ್ಯ ನಕ್ಷತ್ರಿಕನಾಗಿ ಹರಿಶ್ವಂದ್ರ ಪಾತ್ರದ ರಾಜಕುಮಾರರನ್ನು ಕಪಿ ಚೇಷ್ಟೆಯ ಮೂಲಕ ಕಾಡುವ ಪಾತ್ರಕ್ಕೆ ನರಸಿಂಹರಾಜು ಅವರೇ ಸಾಟಿ. ಆ ಜಾಗದಲ್ಲಿ ಮತ್ತೊಬ್ಬರನ್ನು ಖಂಡಿತವಾಗಿಯೂ ಉಹಿಸಿಕೊಳ್ಳಲೂ ಆಗದಷ್ಟು ಸಹಜ ಅಭಿನಯ ನರಸಿಂಹರಾಜು ಅವರದ್ದು. ಚಿತ್ರದಲ್ಲಿ ಹಾಸ್ಯ ನಟರಾಗಿದ್ದರೂ, ಅವರು ನಾಯಕ ನಟನ ಸ ರಿಸಮಕ್ಕೆ ಚಿತ್ರದ ಸಶಕ್ತ ಕೊಂಡಿಯಾಗಿ ಇಡೀ ಚಿತ್ರವನ್ನೇ ತಮ್ಮ ಹಿಡಿತದಲ್ಲಿಟ್ಟು ಕೊಂಡು ಮುನ್ನಡೆಸುವಷ್ಟು ಸಮರ್ಥರಾಗಿದ್ದರು. ಚಿತ್ರಗಳಲ್ಲಿ ನರಸಿಂಹರಾಜು ಅವರನ್ನು ನೋಡಲೆಂದೇ ಅನೇಕರು ಬರುತ್ತಿದ್ದದ್ದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು. ರಮಾದೇವಿ, ಬಿ ಜಯ, ಲಕ್ಷ್ಮೀ ದೇವಿ ಇನ್ನು ಮುಂತಾದ ನಟಿಯವರ ಜೊತೆಯ ಅವರ ಜೋಡಿ ಬಲು ಆಕರ್ಷಣಿಯವಾಗದ್ದಲ್ಲದೇ ಜನಮನ್ನಣೆಯನ್ನು ಪಡೆದಿತ್ತು.
ಶ್ರೇಷ್ಠ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಅವರಿಂದ ಸಾಕಷ್ಟು ಪ್ರಭಾವಿತರಾಗಿದ್ದ ನರಸಿಂಹರಾಜುರವರು ತಮ್ಮ ಪೀಚು ಶರೀರ, ಉಬ್ಬು ಹಲ್ಲು ತಮಗೆ ಅವಮಾನ ಎಂಬ ಕೀಳರಿಮೆಯನ್ನು ಬೆಳಸಿಕೊಳ್ಳದೇ ಅದನ್ನು ಬಳಸಿಕೊಂಡೇ ತಮ್ಮ ವಿಶಿಷ್ಟ ಬಗೆಯ ಹಾವಭಾವಗಳ ಮ್ಯಾನರಿಸಂಗಳ ಮೂಲಕ ಹಾಸ್ಯ ಪಾತ್ರಗಳಿಗೆ ಜೀವ ತುಂಬುತ್ತಿದ್ದರು. ಹಳ್ಳಿಗಳ ಟೆಂಟ್‌ಗಳಲ್ಲಿ ನೆಲದ ಮೇಲೆ ಕುಳಿತು ಚಿತ್ರಗಳನ್ನು ನೋಡುತ್ತಿದ್ದ ಗ್ರಾಮೀಣ ಜನತೆಗೆ ನರಸಿಂಹ ರಾಜು ಅವರನ್ನು ಒಬ್ಬ ನಟನಾಗಿ ಕಾಣದೇ ತಮ್ಮವನೇ ಅಲ್ಲಿ ಪರದೆಯ ಮೇಲೆ ನಟಿಸುತ್ತಿದ್ದಾನೆ ಎಂಬಂತೆ ಭಾಸವಾಗುತ್ತಿತ್ತು. ಇಂದಿಗೂ ಸಹಾ ಉಬ್ಬು ಹಲ್ಲಿನವರನ್ನು ನರಸಿಂಹರಾಜು ಎಂದೇ ಆಡಿಕೊಳ್ಳುತ್ತಾರೆ ಎಂದರೆ ನರಸಿಂಹರಾಜು ಅವರ ದಟ್ಟ ಪ್ರಭಾವ ಜನಮಾನಸದ ಮೇಲೆ ಯಾವ ರೀತಿಯಲ್ಲಿದೆ ಎಂಬುದನ್ನು ಅರಿಯಬಹುದಾಗಿದೆ.
ಸ್ಕೂಲ್ ಮಾಸ್ಟರ್ ಚಿತ್ರದ ಭಾಮೆಯ ನೋಡಲು ತಾ ಬಂದ ಹಾಡಿನಲ್ಲಿ ಕಣ್ ಸನ್ನೆಯಲೇ ಕನ್ಯೆಯ ಮನ ಸೆಳೆದ ಎಂದಾಗ ಪಿಳಿ ಪಿಳಿ ಕಣ್ಸನ್ನೆ ಮಾಡುತ್ತಾ ಪೆದ್ದು ಪೆದ್ದಾಗಿ ನಟಿಸಿದ್ದು, ಮಿತ್ರಾ ಮಿತ್ರಾ, ಏನಿದೀ ಗ್ರಹಚಾರವೋ ಎಂದು ಚಿತ್ರವಿಡೀ ಹರಿಶ್ಚಂದ್ರನ ಪ್ರಾಣ ತಿನ್ನುವುದೂ, ಚಿತ್ರದ ಕಡೆಗೆ ಅಪ್ಪಾ ನನ್ನನ್ನು ಕ್ಷಮಿಸಿ ಬಿಡಪ್ಪ ಎಂದು ಹರಿಶ್ಚಂದ್ರನಲ್ಲಿ ಕ್ಷಮಾಪಣೆ ಯಾಚಿಸುವ ಧೈನ್ಯತೆ, ಸಂಧ್ಯಾರಾಗದಲ್ಲಿ ಬೇರ್ಪಟ್ಟ ಉದಯ್ ಕುಮಾರ್ ಮತ್ತು ರಾಜಕುಮಾರ್ ಅವರ ಸಂಬಂಧವನ್ನು ಬೆಸೆಯುವ ಪ್ರಬುದ್ಧ ಗೆಳೆಯನ ಪಾತ್ರ, ಯಾರು ಯಾರು ನೀ ಯಾರು? ಎಲ್ಲಿಂದ ಬಂದೇ ಯಾವೂರು ಎಂದು ರಮಾಮಣಿಯವರ ಜೊತೆಯಲ್ಲಿ ನೃತ್ಯಮಾಡುವ ರತ್ನ ಮಂಜರಿ, ವೀರ ಕೇಸರಿ, ಕಣ್ತೆರೆದು ನೋಡು, ರಾಯರ ಸೊಸೆ, ಅವರೇ ನಿರ್ಮಿಸಿದ ಪ್ರೊಫೆಸರ್ ಹುಚ್ಚೂರಾಯ ಚಿತ್ರದಲ್ಲಿ, ಸಾಮಾಜಿಕ ನಿಲುವುಗಳ ಒಂದು ಸುಂದರ ಕಥೆ ಹೆಣೆದು ತಮ್ಮನ್ನು ತಾವು ವಿಜ್ರಂಭಿಸಿಕೊಳ್ಳದೆ ಹೃದಯವಂತ ವ್ಯಕ್ತಿಯಾಗಿ ಕಾಣಿಸಿಕೊಂಡದ್ದು. ಹೀಗೆ ಸುಮಾರು ಇನ್ನೂರೈವತ್ತಕ್ಕೂ ಹೆಚ್ಚಿನ ಚಿತ್ರಗಳಲ್ಲಿ ತಮ್ಮ ಅಮೋಘ ನಟನೆಯ ಮೂಲಕ ಇಂದಿಗೂ ನಮ್ಮೆಲ್ಲರ ಹೃದಯಗಳಲ್ಲಿ ಶಾಶ್ವತವಾಗಿದ್ದಾರೆ ನರಸಿಂಹರಾಜು.
ಮದ್ರಾಸಿನಿಂದ ಕನ್ನಡ ಚಿತ್ರಗಳ ನಿರ್ಮಾಣ ಚಟುವಟಿಕೆಗಳು ಬೆಂಗಳೂರಿಗೆ ಸ್ಥಳಾಂತರವಾದಾಗ, ಎಲ್ಲರಂತೆ ನರಸಿಂಹರಾಜು ಅವರೂ ಸಹಾ ತಮ್ಮ ವಾಸ್ತವ್ಯವನ್ನು ಬೆಂಗಳೂರಿಗೆ ಬದಲಿಸಿ, ತಮ್ಮ ಸಂಸಾರದೊಂದಿಗೆ ನೆಮ್ಮದಿಯಿಂದಿದ್ದಾಗ ಅದೊಮ್ಮೆ ತಿಪಟೂರಿನ ನಾಟಕದ ಕ್ಯಾಂಪಿನಲ್ಲಿ ಅವರ ಮಕ್ಕಳೆಲ್ಲರೂ ಆಟವಾಡುತ್ತಿದ್ದ ಸಮಯದಲ್ಲಿ ಅಚಾನಕ್ಕಾಗಿ ಅವರ ಪ್ರೀತಿ ಪಾತ್ರನಾದ ಮಗ ಶ್ರೀಕಾಂತ ಬೆಂಕಿಯ ಅಪಘಾತಕ್ಕೀಡಾಗುತ್ತಾನೆ. ಅಂದಿನ ಕಾಲಕ್ಕೆ ತಕ್ಕಂತೆ ಸೂಕ್ತ ಚಿಕಿತ್ಸೆ ನೀಡಿದರೂ ಆತ ಗತಿಸಿಹೋಗಿದ್ದು ನರಸಿಂಹ ರಾಜು ಅವರ ಮೇಲೆ ಬಹಳವಾದ ಪರಿಣಾಮ ಬೀರಿ, ಪುತ್ರ ಶೋಕಂ ನಿರಂತಂ ಎನ್ನುವಂತೆ ಎಷ್ಟೇ ಮರೆಯಲು ಪ್ರಯತ್ನಿಸಿದರೂ ಬಾರಿ ಬಾರಿ ಅವರನ್ನು ಕಾಡುತ್ತಲೇ ಇರುತ್ತದೆ, ಜುಲೈ 20, 1979 ರಂದು ಎಂದಿನಂತೆ ರಾತ್ರಿಯ ಊಟ ಮುಗಿಸಿ ಎಲ್ಲರೊಂದಿಗೂ ಸಹಜವಾಗಿ ಮಾತನಾಡಿ ಮಲಗಿದ್ದ ನರಸಿಂಹರಾಜು ಅವರಿಗೆ ಮುಂಜಾನೆ 4.30ರ ವೇಳೆಗೆ ತೀವ್ರ ಹೃದಯಾಘಾತವಾಗಿ ತಮ್ಮ 56ನೇ ವಯಸ್ಸಿಗೇ ನಿಧನರಾಗುವ ಮೂಲಕ ಕನ್ನಡ ಚಿತ್ರರಂಗದ ಧೃವತಾರೆ, ನಕ್ಷತ್ರ ಮಂಡಲದಿಂದ ಕಳಚಿ ಹೋಗುತ್ತದೆ.
ನಗಬೇಕು ನಗಿಸಬೇಕು, ಇದೇ ನನ್ನ ಧರ್ಮ ನಗಲಾರೆ ಅಳುವೇ ಎಂದರೆ ಅದೇ ನಿನ್ನ ಕರ್ಮ ಎಂದು ನಕ್ಕರೆ ಅದೇ ಸ್ವರ್ಗ ಚಿತ್ರದ ಹಾಡಿನಲ್ಲಿ ಅಭಿನಯಿಸಿದ್ದ ನರಸಿಂಹ ರಾಜುರವರು ಈ ಹಾಡಿನ ಸಾರವನ್ನೇ ಚಾಚೂ ತಪ್ಪದೇ ತಮ್ಮ ಬಾಳಿನ ತಿರುಳನ್ನಾಗಿ ಮಾಡಿಕೊಂಡಿದ್ದರು. ಅವರು ಯಾರ ಬಗ್ಗೆಯೂ ಕೆಟ್ಟ ಮಾತನ್ನು ಆಡಿದ್ದಾಗಲೀ ಅಥವಾ ಅವರ ಬಗ್ಗೆ ಯಾರೂ ಕೆಟ್ಟದಾಗಿ ಆಡಿದ್ದಾಗಲೀ ಎಂದಿಗೂ ಕಾಣದು. ಸುಮಾರು 5 ದಶಕಕ್ಕೂ ಹೆಚ್ಚು ಕಾಲ ಕನ್ನಡ ರಂಗಭೂಮಿ, ಚಿತ್ರರಂಗದದಲ್ಲಿ ಬಾಲ ನಟನಾಗಿ, ಪ್ರಬುದ್ಧ ನಟನಾಗಿ, ಹಾಸ್ಯ ನಟನಾಗಿ, ಕಡೆಗೆ ಪೋಷಕ ನಟನಾಗಿ, ಕನ್ನಡ ಚಿತ್ರರಂಗ ಅಳಿವಿನಂಚಿನಲ್ಲಿದ್ದಾಗ, ಸಹ ನಿರ್ಮಾಪಕನಾಗಿ, ನಿರ್ಮಾಪಕನಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ನರಸಿಂಹರಾಜು ಇಂದು ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಪಾತ್ರಗಳ ಮೂಲಕ ಆಚಂದ್ರಾರ್ಕವಾಗಿ ಕನ್ನಡಿಗರ ಮನ ಮತ್ತು ಮನೆಗಳಲ್ಲಿ ಶಾಶ್ವತವಾದ ನೆಲೆಯನ್ನು ಗಳಿಸಿಕೊಂಡು ಎಲ್ಲರನ್ನೂ ತಮ್ಮ ಸದಭಿರುಚಿಯ ಹಾಸ್ಯ ಪಾತ್ರಗಳ ಮೂಲಕ ನಗಿಸುತ್ತಲೇ ಇರುವುದರಿಂದ ಅವರು ಖಂಡಿತವಾಗಿಯೂ ನಮ್ಮ ಕನ್ನಡ ಕಲಿಗಳೇ ಸರಿ.
ಏನಂತೀರೀ?