ಬ್ರಿಟೀಷರು ಭಾರತವನ್ನು ಬಿಟ್ಟು ಹೋದರೂ, ಭಾರತೀಯರು ಬ್ರೀಟಿಷರಿಂದ ಕಲಿತ ಇಂಗ್ಲೀಷ್ ಭಾಷೆ, ಅವರ ವೇಷ ಭೂಷಣ ಮತ್ತು ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಅವರು ಕಲಿಸಿಕೊಟ್ಟ ಕ್ರಿಕೆಟ್ ಆಟವನ್ನು ಅಪ್ಪಿ ಮುದ್ದಾಡುತ್ತಿದ್ದೇವೆ. ಇತ್ತೀಚೆಗಂತೂ ಭಾರತದಲ್ಲಿ ಕ್ರಿಕೆಟ್ ಎನ್ನುವುದು ಒಂದು ರೀತಿಯ ಧರ್ಮವಾಗಿದೆ ಎಂದರೂ ತಪ್ಪಾಗಲಾರದು. ಈ ರೀತಿಯ ಬದಲಾವಣೆಯಾದದ್ದು ಕಪಿಲ್ ದೇವ್ ಅವರ ತಂಡ 1983ರ ವರ್ಲ್ಡ್ ಕಪ್ ಗೆದ್ದ ನಂತರ ಎನ್ನುವುದು ಗಮನಿಸಬೇಕಾದ ಅಂಶ ಅದಕ್ಕೂ ಮೊದಲು ಕ್ರಿಕೆಟ್ ವಿಶ್ವ ಕ್ರಿಕೆಟ್ ಜಗತ್ತಿನಲ್ಲಿ ಭಾರತ ಆಟಕ್ಕುಂಟು ಲೆಕ್ಕಕ್ಕಿಲ್ಲ. ಎಪ್ಪತ್ತರ ದಶಕದಲ್ಲಿ ಭಾರತದಲ್ಲಿ ಕ್ರಿಕೆಟ್ ಎಂದರೆ ಪುರುಷ ಪ್ರಧಾನವಾದ ಆಟ ಎಂದೇ ಪ್ರಖ್ಯಾತವಾಗಿದ್ದಾಗ ಬೆಂಗಳೂರಿನ ಎತ್ತರದ ಒಬ್ಬ ದಿಟ್ಟ ಹೆಣ್ಣು ಮಗಳು ಗಂಡು ಮಕ್ಕಳ ಜೊತೆ ಕ್ರಿಕೆಟ್ ಅಭ್ಯಾಸವನ್ನು ಮಾಡಿದ್ದಲ್ಲದೇ, ಫಾಲ್ಕನ್‌ನ ಮಹಿಳಾ ಕ್ರಿಕೆಟ್ ತಂಡವನ್ನು ಸ್ಥಾಪಿಸಿದ್ದಲ್ಲದೇ, ಬೆಂಗಳೂರಿನಲ್ಲಿಯೂ ಮಹಿಳಾ ಕ್ರಿಕೆಟ್ ತಂಡ ಕಟ್ಟುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೇ ನಂತರ ದೇಶಾದ್ಯಂತ ಮಹಿಳಾ ಕ್ರಿಕೆಟ್ ಈ ಪರಿಯಾಗಿ ಬೆಳೆಯಲು ಕಾರಣೀಭೂತರಾದ ಶಾಂತಾ ರಂಗಸ್ವಾಮಿಯವರೇ ನಮ್ಮ ಇಂದಿನ ಕನ್ನಡದ ಕಲಿಗಳು ಕಥಾನಾಯಕಿ.
ಶಾಂತರವರು ಎಲ್ಲರೂ ಸುಲಭವಾಗಿ ನೆನಪಿಡುವಂತೆ ಜನವರಿ 01, 1954 ರಂದು ಶ್ರೀ ಸಿ.ವಿ.ರಂಗಸ್ವಾಮಿ ಮತ್ತು ರಾಜಲಕ್ಷ್ಮಿ ದಂಪತಿಗಳಿಗೆ ಬೆಂಗಳೂರಿನಲ್ಲಿ ಏಳು ಜನ ಹೆಣ್ಣು ಮಕ್ಕಳಲ್ಲಿ ಮೂರನೆಯವರಾಗಿ ಜನಿಸುತ್ತಾರೆ. ಹೆಣ್ಣು ಮಗಳಾಗಿದ್ದರೂ ಅವರ ಸ್ವಭಾವವೆಲ್ಲಾ ಗಂಡು ಮಕ್ಕಳ ರೀತಿಯಲ್ಲಿಯೇ ಇದ್ದು ಕ್ರಿಕೆಟ್ ಆಟದ ಬಗ್ಗೆ ಅವರಿಗಿದ್ದ ಅಮಿತೋತ್ಸಾಹದ ಪರಿಣಾಮವಾಗಿಯೇ ಅವರ ಅವಿಭಕ್ತ ಕುಟುಂಬ ಹಿರಿಯ-ಕಿರಿಯ ಸೋದರ ಸಂಬಂಧಿಗಳಾದ ಹುಡುಗರು ಮತ್ತು ಹುಡುಗಿಯರು ಎಂಬ ಭೇಧವಿಲ್ಲದೇ, ಸರಿಸಮಾನವಾಗಿ ಸುಮಾರು 20 ಜನರನ್ನು ಒಟ್ಟು ಗೂಡಿಸಿ, ತಮ್ಮ ಮನೆಯ ದೊಡ್ಡ ಹಿತ್ತಲಿನಲ್ಲಿ, ಟೆನಿಸ್ ಬಾಲ್ ಕ್ರಿಕೆಟ್ ಆಟವಾಡುತ್ತಾ ಉತ್ತಮ ಅಲ್ರೌಂಡರ್ ಅಗಿ ರೂಪುಗೊಳ್ಳುತ್ತಾರೆ. ರಾಜ್ಯದ ಪರ ಕ್ರಿಕೆಟ್ ಆಡುವ ಮೊದಲೇ ಆಕೆ ಬಾಲ್ ಬ್ಯಾಡ್ಮಿಂಟನ್ ಮತ್ತು ಸಾಫ್ಟ್‌ಬಾಲ್‌ನಂತಹ ಆಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುತ್ತಾರೆ. ಕೇವಲ ಕ್ರೀಡೆಯಲ್ಲದೇ, ಓದಿನಲ್ಲೂ ಚುರುಕಿನ ವಿದ್ಯಾರ್ಥಿನಿಯಾಗಿ ಬಿಎಂಎಸ್ ಮಹಿಳಾ ಕಾಲೇಜಿನಿಂದ ತಮ್ಮ ಪದವಿ ಗಳಿಸಿ, ಕ್ರೀಡಾ ಕೋಟಾದಡಿಯಲ್ಲಿ ಕೆನರಾ ಬ್ಯಾಂಕಿನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಾರೆ. ದುರಾದೃಷ್ಟವಷಾತ್ ತಮ್ಮ 12 ನೇ ವಯಸ್ಸಿನಲ್ಲಿಯೇ ಅವರ ತಂದೆಯವರ ಅಕಾಲಿಕ ಮರಣದ ನಂತರ, ಅವರ ತಾಯಿಯವರು ಇಡೀ ಕುಟುಂಬದ ಜವಾಬ್ದಾರಿಯನ್ನು ನೋಡಿ ಕೊಂಡಿದ್ದಲ್ಲದೇ ಶಾಂತಾರವರ ಕ್ರಿಕೆಟ್ ಆಸಕ್ತಿಗೆ ಸಂಪೂರ್ಣವಾಗಿ ಆಸರೆಯಾಗಿ ನಿಂತರು. ಅವರ ಉಳಿದ ಆರು ಸಹೋದರಿಯಲ್ಲಿ ನಾಲ್ವರು ಎಂಜಿನಿಯರ್‌ಗಳು ಒಬ್ಬರು ಪಿಎಚ್‌ಡಿ, ಮತ್ತೊಬ್ಬರು ಸ್ನಾತಕೋತ್ತರ ಪದವೀಧರಾದರೇ, ಇವರು ಕ್ರಿಕೆಟ್ಟಿನಲ್ಲೇ ಮಗ್ನರಾದ ಕಾರಣ ಕೇವಲ ಪದವಿಯನ್ನು ಮುಗಿಸಿದರಾದರೂ, ತಮ್ಮೆಲ್ಲಾ ಸಾಧನೆಗಳನ್ನು ಕ್ರಿಕೆಟ್ಟಿನಲ್ಲಿಯೇ ತೋರಿಸುವ ಮುಖಾಂತರ ಎಲ್ಲರನ್ನೂ ಮೆಟ್ಟಿ ನಿಂತು ದೇಶದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದರು. ತಮ್ಮ ಸರ್ವಸ್ವವನ್ನೂ ಕ್ರಿಕೆಟ್ಟಿಗೇ ಅರ್ಪಿಸಿಕೊಂಡ ಕಾರಣ ಅವಿವಾಹಿತರಾಗಿಯೇ ಉಳಿದರೂ ಭಾವನಾತ್ಮಕವಾಗಿ ಕ್ರಿಕೆಟ್ಟಿನೊಂದಿಗೇ ವಿವಾಹಿತರಾಗಿದ್ದಾರೆ ಎಂದರೂ ತಪ್ಪಾಗಲಾರದು.
ಅಕ್ಟೋಬರ್ 1976 ರಲ್ಲಿ ಬೆಂಗಳೂರಿನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ತಂಡದ ನಾಯಕಿಯಾಗಿಯೇ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಮತ್ತು ಅಂತರಾಷ್ಟ್ರೀಯ ಪಂದ್ಯಾವಳಿಗೆ ಪದಾರ್ಪಣೆ ಮಾಡಿದ ಶಾಂತಾರವರು ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಯೇ ಲೀಲಾ ಜಾಲವಾಗಿ ಸೊಗಸಾದ 74 ರನ್ ಗಳಿಸುವ ಮೂಲಕ ತಮ್ಮಲ್ಲಿ ಹುದುಗಿದ್ದ ಕ್ರಿಕೆಟ್ ಆಟವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸುತ್ತಾರೆ. ಅಂದು ಆಕೆ ಗಳಿಸಿದ 74 ರನ್ ನಾಯಕಿಯಾಗಿ ಮೊದಲ ಪಂದ್ಯದಲ್ಲಿ ಗಳಿಸಿರುವ ಅತ್ಯಧಿಕ ಸ್ಕೋರ್ ಆಗಿ ಇಂದಿಗೂ ಮುರಿಯದ ದಾಖಲೆಯಾಗಿದೆ. ಆಕೆ ಕೇವಲ ಅಧ್ಭುತ ಬ್ಯಾಟಿಂಗ್ ಅಲ್ಲದೇ, ಅಷ್ಟೇ ಉತ್ತಮವಾಗಿ ಬೋಲಿಂಗ್ ಕೂಡಾ ಮಾಡುತ್ತಾ ಭಾರತದ ಮಹಿಳಾ ಕ್ರಿಕೆಟ್ ತಂಡದ ಶ್ರೇಷ್ಟ ಆಲ್ರೌಂಡರ್ ಆಗಿದ್ದರು. ಶಾಂತಾರವರನ್ನು ಹೆಣ್ಣು ಮಕ್ಕಳ ಕಪಿಲ್ ದೇವ್ ಎಂದರೂ ತಪ್ಪಾಗಲಾರದು. ಚಿನ್ನಸ್ವಾಮೀ ಕ್ರೀಡಾಂಗಣದಲ್ಲಿ ಆಕೆ ಹೊಡೆಯುತ್ತಿದ್ದ ಸಿಕ್ಸರ್ಸ್ಗಳು ಕೆಲವೊಮ್ಮೆ ಕ್ರೀಡಾಂಗಣವನ್ನೂ ದಾಟಿ ಕಬ್ಬನ್ ಪಾರ್ಕಿನ ಕಡೆ ಬೀಳುತ್ತಿತ್ತು ಎಂದರೆ ಅವರ ಭರ್ಜರಿ ಹೊಡೆತದ ಸಾಮರ್ಥ್ಯದ ಅರಿವಾಗುತ್ತದೆ.
ತನ್ನ 15 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದಲ್ಲಿ ಆಡಿದ 16 ಟೆಸ್ಟ್‌ಗಳಲ್ಲಿ 12 ಪಂದ್ಯಗಳಲ್ಲಿ ನಾಯಕಿಯಾಗಿಯೇ ತಂಡವನ್ನು ಮುನ್ನಡೆಸಿದ್ದಲ್ಲದೇ, ಒಂದು ಶತಕ ಸೇರಿದಂತೆ ಆರು ಅರ್ಧಶತಕಗಳ ಸಹಿತ 32.6 ಸರಾಸರಿಯಲ್ಲಿ ಒಟ್ಟು 750 ಓಟಗಳನ್ನು ಗಳಿಸಿರುವದಲ್ಲದೇ 108 ಓಟಗಳು ಅವರ ಗರಿಷ್ಟವಾಗಿದೆ. ಅದೇ ರೀತಿ 19 ಏಕದಿನ ಪಂದ್ಯವಳಿಯಲ್ಲಿ 15.1 ಸರಾಸರಿಯಲ್ಲಿ 1 ಅರ್ಧ ಶತಕ ಸೇರಿದಂತೆ 250 ಓಟಗಳನ್ನು ಗಳಿಸಿರುವುದಲ್ಲದೇ 50 ಓಟಗಳು ಗರಿಷ್ಟ ಮೊತ್ತದ್ದಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ತಮ್ಮ ಮೊದಲು ಸರಣಿಯ ಆರು ಪಂದ್ಯಗಳಲ್ಲಿ ನಾಲ್ಕು ಅರ್ಧಶತಕಗಳೊಂದಿಗೆ 42.33 ಸರಾಸರಿಯಲ್ಲಿ 381 ರನ್ ಗಳಿಸಿ ಅಗ್ರ ಸ್ಕೋರಿಂಗ್ ಮಾಡುವ ಮೂಲಕ ತಂಡವನ್ನು 1-0 ಅಂತರದ ಗೆಲುವನ್ನು ತಂದು ಕೊಟ್ಟಿದ್ದಾರೆ.
ಭಾರತಕ್ಕೆ ಮೊದಲ ವಿದೇಶೀ ತಂಡವಾಗಿ ಪ್ರವಾಸ ಮಾಡಿದ ನ್ಯೂಜಿಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳಲ್ಲಿ ಒಂದು ಶತಕವೂ ಸೇರಿದಂತೆ 527 ರನ್ ಗಳಿಸಿದ್ದರು. ನಂತರದ 1975ರ ಆಸ್ಟ್ರೇಲಿಯಾ ಪ್ರವಾಸದ ಮೂರು ಟೆಸ್ಟ್ ಪಂದ್ಯಗಳಲ್ಲಿ 203 ರನ್ ಗಳಿಸಿದ್ದರು. ದುರದೃಷ್ಟವಶಾತ್ ಆ ಎರಡೂ ಟೆಸ್ಟ್ ಸರಣಿಗಳನ್ನು ಅನಧಿಕೃತವೆಂದು ಪರಿಗಣಿಸಲಾದ ಕಾರಣ ಅವರು ಗಳಿಸಿದ ಆ ರನ್‌ಗಳನ್ನು ಅವರ ದಾಖಲೆಯಲ್ಲಿ ಪರಿಗಣಿಸಲಿಲ್ಲ. ಪೂನಾ ಟೆಸ್ಟ್‌ನಿಂದ ಅವರು ಗಳಿಸಿದ ಶತಕಕ್ಕೆ ಪಂದ್ಯ ಪುರುಶೋತ್ತಮೆ ಪ್ರಶಸ್ತಿಗಳಿಸಿದ್ದಲ್ಲದೇ, ಅಂದಿನ ಕಾಲದ ಪ್ರಖ್ಯಾತ ದ್ವಿಚಕ್ರವಾಹನವಾದ ಲೂನಾವನ್ನು ಬಹುಮಾನವಾಗಿ ಪಡೆದರು. ಆಶ್ಚರ್ಯದ ಸಂಗತಿಯೆಂದರೆ, ಹಾಗೆ ಬಹುಮಾನವಾಗಿ ಪಡೆದ ಲೂನಾ ದ್ವಿಚಕ್ರವಾಹನ ಅವರ ಪ್ರಪ್ರಥಮ ವಾಹನವಾಗಿತ್ತು ಅಲ್ಲಿಯವರೆಗೂ ಕ್ರಿಕೆಟ್ ಅಭ್ಯಾಸಗಳಿಗೆ ಶಾಂತ ರಂಗಸ್ವಾಮಿಯವರು ವಾಡಿಕೆಯಂತೆ 10 ಕಿ.ಮೀ ಗಿಂತಲೂ ಹೆಚ್ಚು ದೂರ ನಡೆದು ಹೋಗುತ್ತಿದ್ದರು ಇಲ್ಲವೇ ಸ್ಥಳೀಯ ಬಸ್ಸಗಳನ್ನೇ ಆಶ್ರಯಿಸುತ್ತಿದ್ದರು. ಅದಲ್ಲದೇ ತಮ್ಮ ಕ್ರೀಡಾ ವಸ್ತುಗಳಿಗೆ ಮತ್ತು ಪ್ರವಾಸಗಳಿಗಾಗಿ ತಮ್ಮ ಜೇಬಿನಿಂದಲೇ ಖರ್ಚು ಮಾಡುತ್ತಿದ್ದರು. ಎಂದರೆ ಅವರಿಗೆ ಕ್ರಿಕೆಟ್ ಮೇಲಿದ್ದ ಅಪರಿಮಿತ ಪ್ರೇಮದ ಅರಿವಾಗುತ್ತದೆ.
ಆ ಸರಣಿಯ ನಂತರ 1976 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಭಾರತದಲ್ಲಿ ಅಧಿಕೃತ ಟೆಸ್ಟ್ ಗೆಲುವು, ಮತ್ತು 45 ದಿನಗಳ ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ ತಂಡವು ಅಜೇಯವಾಗಿ ಉಳಿದದ್ದೇ ಸಾಧನೆಯಾಯಿತು. ಡುನೆಡಿನ್‌ನಲ್ಲಿ, ರಂಗಸ್ವಾಮಿ ತಮ್ಮ ಮೊದಲ ಅಧಿಕೃತ ಟೆಸ್ಟ್ ಶತಕವನ್ನು ಗಳಿಸುವ ಮೂಲಕ ಭಾರತದಲ್ಲಿನ ಹೆಣ್ಣುಮಕ್ಕಳಿಗೆ ಕ್ರಿಕೆಟ್ ಆಟದ ಬಗ್ಗೆ ಆಸ್ತಕ್ತಿ ಮೂಡಿಸುವುದರಲ್ಲಿ ಸಪಲರಾಗಿದ್ದಲ್ಲದೇ ಅನೇಕ ಆಟಗಾರ್ತಿಯರಲ್ಲಿ ಕ್ರಿಕೆಟ್ ಜ್ವಾಲೆಯನ್ನು ಹತ್ತಿಸುವುದರಲ್ಲಿ ಯಶಸ್ವಿಯಾದರು.
ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತೆ ಶಾಂತಾರಂಗಸ್ವಾಮಿಯವರು ಹುಟ್ಟಿದ್ದೂ ಜನವರಿ 1ನೇ ತಾರೀಖು ಅದರಂತೆಯೇ ಅವರು, ಅನೇಕ ವಿಷಯಗಳಲ್ಲಿ ಮೊದಲಿಗರಾಗಿದ್ದಾರೆ.
- ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಮುನ್ನಡೆಸಿದ ಮೊದಲ ಮಹಿಳೆ
- ಟೆಸ್ಟ್ ಸರಣಿಯನ್ನು ಗೆದ್ದ ಮೊದಲ ನಾಯಕಿ
- ನಾಯಕಿಯಾಗಿ ತನ್ನ ಚೊಚ್ಚಲು ಪಂದ್ಯದಲ್ಲಿಯೇ ಅರ್ಧ ಶತಕ ಬಾರಿಸಿದ ಮೊದಲ ಆಟಗಾರ್ತಿ
- 1977 ರ ಜನವರಿಯಲ್ಲಿ ಡುನೆಡಿನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 108 ರನ್ ಗಳಿಸುವ ಮೂಲಕ, ಭಾರತ ಪರ ಶತಕ ಗಳಿಸಿದ ಮೊದಲ ಆಟಗಾರ್ತಿ
- ಭಾರತ ಪರ ಸಿಕ್ಸರ್ ಬಾರಿಸಿದ ಮೊದಲ ಆಟಗಾರ್ತಿ
- ದೇಶದ ಅರ್ಜುನ ಪ್ರಶಸ್ತಿ ಪಡೆದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ
- ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಪುರುಷರ ಟೆಸ್ಟ್ ಪಂದ್ಯಗಳಲ್ಲಿ ಕ್ರಿಕೆಟ್ ವೀಕ್ಷಕ ವಿವರಣೆ ನೀಡಿದ ಮೊತ್ತ ಮೊದಲ ಮಹಿಳೆ
- ಬಿಸಿಸಿಐನಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದ ಮೊದಲ ಮಹಿಳೆ.
- ಕರ್ನಾಟಕ ಸರ್ಕಾರದಿಂದಲೂ ನವೆಂಬರ್ 2020ರಲ್ಲಿ ಕ್ರಿಕೆಟ್ ಆಟಕ್ಕೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದ ಮೊದಲ ಮಹಿಳೆ
ಇಂದಿನ ಯುವಜನತೆ ಶಾಂತಾ ರಂಗಸ್ವಾಮಿಯವರ ದಾಖಲೆಗಳನ್ನು ಗಮನಿಸಿ ಅವರೇನು ಮಹಾ ಎಂದು ಅಲ್ಲಗಳಿಯ ಬಹುದು ಆದರೆ ಅವರು ಆಡುತ್ತಿದ ಕಾಲದಲ್ಲಿ ಮಹಿಳಾ ಅಂತರರಾಷ್ಟ್ರೀಯ ಪ್ರವಾಸಗಳ ಕೊರತೆಯಿಂದಾಗಿ ಅವರು ತಮ್ಮ ಅನೇಕ ವರ್ಷಗಳ ಕ್ರೀಡಾ ಭವಿಷ್ಯವನ್ನು ಕಳೆದುಕೊಂಡಿದ್ದಾರೆ. 1977 ರಿಂದ 1984 ರವರೆಗೆ ಕೆಲವು ಬೆರಳೆಣಿಕೆಯ ಅಧಿಕೃತ ಅಂತರರಾಷ್ಟ್ರೀಯ ಸರಣಿಗಳು ನಡೆದ ನಂತರ 1986 ರಿಂದ 1991 ರವರೆಗೆ ಯಾವುದೇ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಸಾಧ್ಯವಾಗಲೇ ಇಲ್ಲ. ಇದೇ ಕಾರಣದಿಂದಾಗಿಯೇ ಭಾರತ ಮಹಿಳಾ ಕ್ರಿಕೆಟ್ ತಂಡ 1988 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್ ಅನ್ನು ಸಹ ತಪ್ಪಿಸಿಕೊಂಡಿತ್ತು. ರಂಗಸ್ವಾಮಿ ಮತ್ತು ಭಾರತೀಯ ತಂಡವು ಸ್ವಲ್ಪ ಧೈರ್ಯ ಮಾಡಿ ಅಂದಿನ ಪ್ರಧಾನಿಗಳಾಗಿದ್ದ ಶ್ರೀ ರಾಜೀವ್ ಗಾಂಧಿಯನ್ನು ಭೇಟಿಯಾಗಿ ಅವರ ಮಧ್ಯಪ್ರವೇಶದಿಂದ ಪ್ರವಾಸಕ್ಕೆ ಇದ್ದ ಅಡ್ಡಿ ಆತಂಕಗಳನ್ನೆಲ್ಲಾ ತೆರವುಗೊಳಿಸಿದರೂ, ಪ್ರಭಲ ಭಾರತವನ್ನು ಆತಿಥೇಯ ಆಸ್ಟ್ರೇಲಿಯಾ ತಂಡ ವಿಕೃತ ಮನಸ್ಸಿನಿಂದ ತನ್ನೆಲ್ಲಾ ಶಕ್ತಿ ಸಾಮರ್ಥ್ಯ ಬಳಸಿ ಭಾರತದ ತಂಡಕ್ಕೆ ಆಸ್ಟ್ರೇಲಿಯಾ ಪ್ರವೇಶವನ್ನು ನಿರಾಕರಿಸಿ ಭಾರತ ವಿಶ್ವಕಪ್ಪಿನಲ್ಲಿ ಆಡದಂತೆ ಮಾಡಿದ್ದು ನಿಜಕ್ಕೂ ದುರ್ದೈವದ ಸಂಗತಿ. 1991ರಲ್ಲಿ ಶಾಂತ ರಂಗಸ್ವಾಮಿಯವರು ತಮ್ಮ 37ನೇ ವಯಸ್ಸಿನಲ್ಲಿ ತನ್ನ ಕೊನೆಯ ಅಂತರರಾಷ್ಟ್ರೀಯ ಆಟವನ್ನು ಆಡಿ ಅಂತಾರಾಷ್ಟ್ರೀಯ ಕ್ರಿಕೆಟ್ಟಿನಿಂದ ನಿವೃತ್ತರಾದರು.
ಶಾಂತರಂಗಸ್ವಾಮಿಯವರು ತಮ್ಮ ತಾಯಿಯವರ ದೂರದೃಷ್ಟಿ ಮತ್ತು ಅವರ ಪ್ರೋತ್ಸಾಹ ಮತ್ತು ಸಹಕಾರದಿಂದ ಅಂದಿನ ಪುರುಷ ಪ್ರಾಬಲ್ಯದ ಕ್ರಿಕೆಟ್ ಆಟದ ಭಾಗವಾಗಿ ಆಕೆ ಭಾರತದಲ್ಲಿ ಮಹಿಳಾ ಕ್ರಿಕೆಟ್ ಆಟ್ಟಕ್ಕೆ ಮಾತೃಪ್ರಧಾನಳಾಗಿ ಬೆಳೆದ ಪರಿ ನಿಜಕ್ಕೂ ಅಮೋಘ ಮತ್ತು ಅವರ್ಣನೀಯ. ಕೆಲ ವರ್ಷಗಳ ಹಿಂದೆ ಕೆನರಾ ಬ್ಯಾಂಕಿನ ಜನರಲ್ ಮ್ಯಾನೇಜರ್ ಆಗಿ ನಿವೃತ್ತರಾದ ಮೇಲಂತೂ ತಮ್ಮನ್ನು ತಾವು ಸಂಪೂರ್ಣವಾಗಿ ಕ್ರಿಕೆಟ್ಟಿಗೆ ಅರ್ಪಿಸಿಕೊಂಡಿದ್ದಲ್ಲದೇ, ರಾಜ್ಯದಲ್ಲಿ under-16, 19 & 23 ಮಹಿಳಾ ತಂಡಕ್ಕೆ ರಾಜ್ಯಾಂದ್ಯತ ಪಯಣಿಸಿ ಅಲ್ಲಿಂದ ಸಮರ್ಥ ಆಟಗಾರ್ತಿಯರನ್ನು ಹೆಕ್ಕಿ ತಂದು ಒಂದು ಸಮರ್ಥ ತಂಡವನ್ನು ಕಟ್ಟುವುದರಲ್ಲಿ ನಿರತರಾಗಿರುವುದು ಅಭಿನಂದನಾರ್ಹ ಮತ್ತು ಅನನ್ಯವಾಗಿದೆ. ಕ್ರಿಕೆಟ್ ಆಟವಾಡುವ ಸಾಮಥ್ಯವಿದ್ದರೂ ಆರ್ಥಿಕವಾಗಿ ಸಭಲರಾಗಿಲ್ಲದ ಕಾರಣ ಕ್ರಿಕೆಟ್ಟಿಗೆ ತಿಲಾಂಜಲಿ ನೀಡಿರುವ ಅದೆಷ್ಟೋ ಹೆಣ್ಣುಮಕ್ಕಳನ್ನು ಗುರುತಿಸಿ ಅವರಿಗೆ, ಕೇವಲ ಕ್ರಿಕೆಟ್ ಕೋಚ್ ಆಗಿರುವುದಲ್ಲದೇ ತಮ್ಮ ಕೈಯಿಂದಲೋ ಅಥವಾ ಅವರಿಗೆ ಸೂಕ್ತವಾದ ಪ್ರಾಯೋಜಕರನ್ನು ಹುಡುಕಿಕೊಡುವ ಮೂಲಕ ಅವರು ರಾಜ್ಯದ ಮಹಿಳಾ ಕ್ರಿಕೆಟ್ ಸ್ಥಾಪಕ ತಾಯಂದಿರಲ್ಲಿ ಒಬ್ಬರಾಗಿದ್ದಾರೆ ಎಂದರೂ ಅತಿಶಯೋಕ್ತಿಯೇನಲ್ಲ.
ಇಂದಿನ ಆಟಗಾರ್ತಿಯರು ಆಟವನ್ನು ಆಡಲು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಲು AC car or Bus ಗಳಾಗಲೀ ಇಲ್ಲವೇ ದೂರದ ಊರುಗಳಿಗೆ ಹೋಗಲು flights ಬಳಸುವುದು ಸರ್ವೇ ಸಾಮಾನ್ಯವಾಗಿದೆ. ಆದರೇ ಶಾಂತಾರವರೇ ಸಾಕಷ್ಟು ಬಾರೀ ತಮ್ಮ ಉದಯೋನ್ಮುಖ ಆಟಗಾರ್ತಿಯರಿಗೆ ಬಳಿ ಹೇಳಿಕೊಂಡಂತೆ ಅವರು ಆಡುತ್ತಿದ್ದ ಸಮಯದಲ್ಲಿ ರೈಲುಗಳ unreserved compartments ಗಳಲ್ಲಿ ಕೂರಲೂ ಜಾಗವಿಲ್ಲದೇ ಹಾಗೇ ನೆಲದ ಮೇಲೆಯೇ ಬೆಡ್ ಶೀಟುಗಳನ್ನು ಹಾಸಿಕೊಂಡು ಪ್ರಯಾಣಿಸಿ ಆಟವಾಡಿ ಗೆದ್ದು ಬಂದಂತಹ ಅನೇಕ ಉದಾಹರಣೆಗಳಿವೆ.
ಭಾರತೀಯ ಕ್ರಿಕೆಟಿಗರ ಸಂಘದ (ಐಸಿಎ) ನಿರ್ದೇಶಕರಾಗಿಯೂ ಮತ್ತು ಕಪಿಲ್ ದೇವ್, ಗಾಯಕ್ವಾಡ್ ಮತ್ತು ಶಾಂತಾ ರಂಗಸ್ವಾಮಿಯವರು. ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ)ಯ ಸದಸ್ಯರಾಗಿ ಭಾರತದ ಕ್ರಿಕೆಟ್ಟಿನಲ್ಲಿ ಸುಧಾರಣೆಗಳನ್ನು ತರಲು ಯತ್ನಿಸುತ್ತಿರುವಾಗಲೇ, ಒಬ್ಬರು ಒಂದೇ ಹುದ್ದೆಯನ್ನು ನಿರ್ವಹಿಸಬೇಕು ಎಂಬ ಲೋಧಾ ಸಮಿತಿಯ ಪ್ರಮುಖ ಶಿಫಾರಸ್ಸಿನಂತೆ ಅವರ ವಿರುದ್ಧ ಆರೋಪ ಬಂದು ಸಂಘರ್ಷದ ಹಿತಾಸಕ್ತಿಯ ನೋಟಿಸ್ ಅವರ ಕೈ ತಲುಪಿದ ಕೂಡಲೇ ಹಿಂದೂ ಮುಂದೇ ನೋಡದೇ, ನಾನು ಯಾವುದೇ ಅನಗತ್ಯ ವಿವಾದಕ್ಕೆ ಸಿಲುಕುವುದನ್ನು ಬಯಸಲಿಲ್ಲ. ವಿವಾದವಿದ್ದಲ್ಲಿ ಆಟಕ್ಕೆ ಸೇವೆ ಸಲ್ಲಿಸಲು ಅಸಾಧ್ಯ. ಪಾರದರ್ಶಕವಾಗಿ ಇರಬೇಕೆಂದು ಬಯಸಿದ್ದ ಕಾರಣ ನಾನು ಆ ಎರಡೂ ಸ್ಥಾನಗಳನ್ನೂ ತೊರೆಯುತ್ತಿದ್ದೇನೆ ಎಂದು ಸ್ಪಷ್ಟ ಪಡಿಸಿ ಎರಡೂ ಹುದ್ದೆಗಳಿಗೆ ಆ ಕ್ಷಣವೇ ರಾಜೀನಾಮೆ ನೀಡಿದ ದಿಟ್ಟ ಆಟಗಾರ್ತಿ ಶಾಂತ ರಂಗಸ್ವಾಮಿಯವರು.
ಹೀಗೆ ಕ್ರಿಕೆಟ್ ಮೇಲಿನ ತಮ್ಮ ಆಸಕ್ತಿಯಿಂದಾಗಿ ಸಮರ್ಥವಾದ ರಾಜ್ಯ ಮತ್ತು ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡವನ್ನು ಕಟ್ಟಿದ್ದಲ್ಲದೇ ಅದರ ಭಾಗವಾಗಿ ನಾನಾ ರೀತಿಯ ಮೊದಲಿಗೆ ಕಾರಣೀಭೂತರಾಗಿದ್ದಲ್ಲದೇ, ಇಂದಿಗೂ ಸಹಾ ಕ್ರಿಕೆಟ್ಟನ್ನೇ ತಮ್ಮ ಉಸಿರಾಗಿಸಿಕೊಂಡಿರುವ ಶಾಂತಾ ರಂಗಸ್ವಾಮಿಯವರು ನಮ್ಮ ಹೆಮ್ಮೆಯ ಕನ್ನಡತಿಯೇ ಸರಿ
ಏನಂತೀರೀ?