ದೀಪಾವಳಿ ಪಟಾಕಿಯ ಸಂಬಂಧ ಮತ್ತು ಅನುಬಂಧ

ಆಶ್ವಯುಜ ಮಾಸದ ಕೊನೆಯ ಮೂರು ದಿನಗಳು ಮತ್ತು ಕಾರ್ತೀಕ ಮಾಸದ ಆರಂಭದ ಎರಡು ದಿನಗಳು ಹೀಗೆ ಒಟ್ಟು ಐದು ದಿನಗಳು ಆಚರಿಸುವ ಬೆಳಕು, ಶಬ್ಧ ಮತ್ತು ರಂಗು ರಂಗಿನ ಚಿತ್ತಾರಗಳಿಂದ ಆವರಿಸುವ ಹಬ್ಬವೇ ದೀಪಾವಳಿ. ತಮಸೋಮ ಜ್ಯೋತಿರ್ಗಮಯ ಎನ್ನುವಂತೆ ಅಂಧಕಾರವನ್ನು ದೂರ ಮಾಡಿ ಬೆಳಕಿನೆಡೆಗೆ ಕರೆದೊಯ್ಯುವಂತಹ ಹಬ್ಬ. ಪ್ರತಿ ವರ್ಷಕ್ಕೊಮ್ಮೆ ಆಚರಿಸಲಾಗುವ ಈ ವಿಶೇಷ ಹಬ್ಬದಲ್ಲಿ ದೀಪಗಳ ಬೆಳಕಿನ ಜೊತೆ ಜೊತೆಯಲ್ಲಿಯೇ ಪಟಾಕಿಗೂ ಅಷ್ಟೇ ಮಹತ್ವವಿದೆ. ವರ್ಷವಿಡೀ ಆಚರಿಸುವ ಉಳಿದೆಲ್ಲಾ ಹಬ್ಬಗಳಿಗಿಂತಲೂ ದೀಪಾವಳಿ ಹಬ್ಬ ಬಂತೆಂದರೆ ಆಬಾಲಾವೃದ್ದರಾದಿ ಎಲ್ಲರಿಗೂ ಸಂಭ್ರಮವೇ ಸಂಭ್ರಮ. ಏಕೆಂದರೆ ಈ ಹಬ್ಬದಲ್ಲಿ ಉಳಿದ ಹಬ್ಬಗಳಂತೆ ಹೆಚ್ಚಿನ ಅಚಾರ ಮಡಿ ಹುಡಿಗಳಿಲ್ಲದೇ, ಮೋಜು ಮಸ್ತಿ, ಹೊಸ ಬಟ್ಟೆ, ಸಿಹಿ ತಿಂಡಿಗಳ ಜೊತೆಗೆ ಪಟಾಕಿ ಹೊಡೆಯುವ ಅವಕಾಶ ವಿರುವ ಕಾರಣ ಇಡೀ ಭಾರತಾದ್ಯಂತ ಸಂಭ್ರಮ ಸಡಗರಗಳಿಂದ ಆಚರಿಸುವ ಹಬ್ಬವಾಗಿದೆ.

ಆದರೆ ಇತ್ತೀಚೆಗೆ ಕೆಲವು ಬುದ್ಧಿಜೀವಿಗಳು ದೀಪಾವಳಿ ಹಬ್ಬ ಎಂದರೆ ಕೇವಲ ಬೆಳಕಿನ ಹಬ್ಬ. ಈ ಹಬ್ಬಗಳಲ್ಲಿ ಪಟಾಕಿ ಸಿಡಿಸುವುದು ನಮ್ಮ ಸಂಪ್ರದಾಯದಲ್ಲಿ ಇರಲಿಲ್ಲ. ಪಟಾಕಿ ಹೊಡೆಯುವ ಆಚರಣೆ ಕೆಲವೇ ವರ್ಷಗಳ ಹಿಂದೆ ಪಟಾಕಿ ವ್ಯಾಪಾರಿಗಳ ಕುತಂತ್ರದಿಂದಾಗಿ ರೂಢಿಗೆ ಬಂದಿದೆ ಅದೂ ಅಲ್ಲದೇ, ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿ ಸಿಡಿಸುವುದರಿಂದ ಪರಿಸರದ ಮೇಲೆ ಹಾನಿಯಾಗುತ್ತದೆ ಎಂದು ಹಸೀ ಸುಳ್ಳನ್ನು ಹೇಳುತ್ತಾ ನಮ್ಮ ಸಂಪ್ರದಾಯ ಮತ್ತು ಸಂಭ್ರಮಗಳಿಗೆ ಅಡ್ಡಿ ಬರುವಂತಹ ಕಾರ್ಯದಲ್ಲಿ ನಿರತರಾಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಹಾಗಾಗಿ ನಮ್ಮ ಸಂಪ್ರದಾಯದಲ್ಲಿ ಪಟಾಕಿಗಳ ಕುರಿತಂತೆ ಏನು ಹೇಳಿದ್ದಾರೆ ಮತ್ತು ದೀಪಾವಳಿ ಹಬ್ಬದಲ್ಲೇ ಪಟಾಕಿಗಳನ್ನು ಏಕೆ ಹೊಡೆಯಬೇಕು? ಎಂಬುದನ್ನು ವಿವರವಾಗಿ ತಿಳಿಯೋಣ.

ನಮ್ಮ ಪೌರಾಣಿಕ ಹಿನ್ನಲೆಯಲ್ಲಿ ದೀಪಾವಳಿ ಆಚರಿಸುವ ಹಿಂದೆ ಈ ಐದು ಪ್ರಮುಖ ಪ್ರಸಂಗಗಳಿವೆ.

14 ವರ್ಷಗಳ ಕಾಲ ರಾಮ, ಸೀತೇ ಮತ್ತು ಲಕ್ಷ್ಮಣರು ವನವಾಸ ಮಾಡುತ್ತಿದ್ದಾಗ ರಾವಣನು ಸೀತೆಯನ್ನು ಅಪಹರಿಸಿಕೊಂಡು ಲಂಕೆಯ ಅಶೋಕವನದಲ್ಲಿ ಬಂಧನದಲ್ಲಿಟ್ಟಿದ್ದಾಗ, ರಾಮ ಮತ್ತು ಲಕ್ಷ್ಮಣರು ಸುಗ್ರೀವ, ಜಾಂಬುವಂತ, ಹನುಮಂತ ಮತ್ತು ಲಕ್ಷಾಂತರ ಕಪಿ ಸೇನೆಯ ಸಹಾಯದೊಂದಿಗೆ ರಾವಣನ್ನು ಸಂಹರಿಸಿ, ಶ್ರೀರಾಮ ಚಂದ್ರನು ಪುಷ್ಪಕ ವಿಮಾನದಲ್ಲಿ ಸೀತೆ ಮತ್ತು ಲಕ್ಷ್ಮಣನೊಂದಿಗೆ ಲಂಕೆಯಿಂದ ಅಯೋಧ್ಯೆಗೆ ಇದೇ ಸಮಯದಲ್ಲಿಯೇ ಮರಳಿದಾಗ ಅಲ್ಲಿಯ ಜನರು ದೀಪಗಳನ್ನು ಹಚ್ಚಿ ಆರತಿ ಮಾಡಿ ಪಟಾಕಿಗಳನ್ನು ಸಿಡಿಸುವ ಮುಖಾಂತರ ಶ್ರೀ ರಾಮಚಂದ್ರನನ್ನು ಸ್ವಾಗತಿಸಿ ಸಂಭ್ರಮಿಸಿದ ದಿನವು ಇದೇ ಆಗಿದೆ.

ಶ್ರೀ ಕೃಷ್ಣ ಮತ್ತು ಅವನ ಪತ್ನಿ ಸತ್ಯಭಾಮೆ, ಪ್ರಜೆಗಳಿಗೆ ಕಂಟಕಪ್ರಾಯನಾಗಿದ್ದ ನರಕಾಸುರ ಎಂಬ ರಾಕ್ಷಸನನ್ನು ಆಶ್ಚಯುಜ ಬಹುಳ ಚತುರ್ದಶಿಯಂದು ಸಂಹರಿಸುತ್ತಾನೆ. ನರಕಾಸುರನು ಹೀಗೆ ಶ್ರೀ ಕೃಷ್ಣನ ಕೈಯಿಂದ ಸಾಯುವ ಮೊದಲು ಶ್ರೀ ಕೃಷ್ಣನಿಗೆ ಸಂಪೂರ್ಣ ಶರಣಾಗಿ ಕ್ಷಮೆಯಾಚಿಸಿ, ತನ್ನದೊಂದು ಕಡೆಯ ಆಸೆಯನ್ನು ನೆರವೇರಿಸಿ ಕೊಡಬೇಕೆಂದು ಕೋರಿಕೊಳ್ಳುತ್ತಾನೆ. ಅದರ ಪ್ರಕಾರ ತನ್ನ ರಾಜ್ಯದ ಪ್ರಜೆಗಳು ಪ್ರತೀ ವರ್ಷವೂ ತನ್ನ ಸಾವಿನ ದಿನದಂದು ಹೊಸ ಬಟ್ಟೆಗಳನ್ನು ಧರಿಸಿ, ಬಂಧು ಮಿತ್ರರೊಡನೆ ಸಿಹಿ ಹಂಚಿಕೊಳ್ಳುತ್ತಾ ಪಟಾಕಿ ಸಿಡಿಸುವ ಮೂಲಕ ಬಹಳ ಸಂಭ್ರಮದಿಂದ ಆಚರಿಸಬೇಕು ಎಂದಿದ್ದಕ್ಕೇ ಶ್ರೀ ಕೃಷ್ಣ ಪರಮಾತ್ಮನೂ ತಥಾಸ್ತು ಎಂದು ಒಪ್ಪಿಕೊಂಡಿರುತ್ತಾನೆ.

ಆಶ್ವಯುಜ ಮಾಸದ ಅಮಾವಾಸ್ಯೆ ಸಿರಿ ಸಂಪತ್ತಿನ ಒಡತಿ ಲಕ್ಷ್ಮೀ ದೇವಿಯ ಹುಟ್ಟು ಹಬ್ಬವೆಂದು ಹೇಳಲಾಗುತ್ತದೆ. ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀ ದೇವಿಯು ಪ್ರತಿಯೊಬ್ಬರ ಮನೆಗೂ ಭೇಟಿ ನೀಡಿ, ಆರೋಗ್ಯ, ಐಶ್ವರ್ಯ, ಸಂತೋಷ, ಸಿರಿ ಮತ್ತು ಸಂಪತ್ತನ್ನು ಕರುಣಿಸುವಳು ಎಂದು ನಂಬಿರುವ ಕಾರಣ ಈ ದಿನದಂದು ಎಲ್ಲರ ಮನೆಗಳಲ್ಲಿಯೂ ಭಕ್ತಿ ಪೂರ್ವಕವಾಗಿ ಲಕ್ಷ್ಮೀ ಪೂಜೆಯನ್ನು ಮಾಡಲಾಗುತ್ತದೆ. ಹೀಗೆ ಶ್ರದ್ಧೆಯಿಂದ ಲಕ್ಷ್ಮೀ ಪೂಜೆ ಮಾಡಿದಲ್ಲಿ ಪೂಜೆ ಮಾಡಿದವರ ಅಹಂ, ದುರಾಸೆ ಮತ್ತು ಇತರ ದುಷ್ಟಶಕ್ತಿಗಳ ನಿವಾರಣೆಯನ್ನು ಲಕ್ಷ್ಮೀ ದೇವಿ ಮಾಡುತ್ತಾಳೆ ಎಂಬ ನಂಬಿಕೆಯಿದೆ

ಅತ್ಯಂತ ಬಲಶಾಲಿ ಮತ್ತು ಪ್ರಜೆಗಳ ಉಪಕಾರಿಯಾಗಿದ್ದರೂ, ಬಹಳ ಅಂಹಕಾರಿಯಾಗಿದ್ದ ಬಲಿ ಚಕ್ರವರ್ತಿಯನ್ನು ಸಂಹರಿಸ ಬೇಕೆಂದು ದೇವಾನು ದೇವತೆಗಳು ಭಗವಾನ್ ವಿಷ್ಣುವಿನಲ್ಲಿ ಕೋರಿದಾಗ, ವಿಷ್ಣು ವಟು ರೂಪಿ ವಾಮನ ವೇಷದಲ್ಲಿ ಬಂದು ಮೂರು ಹೆಜ್ಜೆಗಳ ಬಿಕ್ಷೆ ಬೇಡಿ, ಬೃಹದಾಕಾರವಾಗಿ ತ್ರಿವಿಕ್ರಮ ರೂಪದಲ್ಲಿ ಬೆಳೆದು ಮೊದಲ ಹೆಜ್ಜೆಯನ್ನು ಇಡೀ ಭೂಮಂಡಲದ ಮೇಲೂ, ಎರಡನೇ ಹೆಜ್ಜೆಯನ್ನು ಆಕಾಶದಲ್ಲಿ ಮೇಲೆ ಇಟ್ಟು ಮೂರನೇ ಹೆಜ್ಜೆ ಎಲ್ಲಿಡಲಿ ಎಂದು ಕೇಳಿದಾಗ, ವಿಧಿ ಇಲ್ಲದೇ, ನನ್ನ ತಲೆಯ ಮೇಲೆ ಇಡು ಎಂದು ಹೇಳಿದಾಗ, ವಾಮನ ಬಲಿ ಚಕ್ರವರ್ತಿಯ ತಲೆ ಮೇಲೆ ಕಾಲಿಟ್ಟು ಆತನನ್ನು ಪಾತಾಳಕ್ಕೆ ದೂಡಿದ್ದೂ ಕಾರ್ತೀಕ ಮಾಸದ ಪಾಡ್ಯದಂದು. ಅದರೆ ಪರಮ ದೈವ ಭಕ್ತನಾಗಿದ್ದ ಕಾರಣ, ಪ್ರತೀ ವರ್ಷಕ್ಕೊಮ್ಮೆ ಆತ ಪಾತಾಳ ಲೋಕದಿಂದ ಭೂಲೋಕಕ್ಕೆ ಕಾರ್ತೀಕ ಮಾಸದ ಪಾಡ್ಯದಂದು ಬಂದು ತನ್ನ ಪ್ರಜೆಗಳೊಂದಿಗೆ ಬೆರೆತು ಅವರ ಯೋಗಕ್ಷೇಮಗಳನ್ನು ವಿಚಾರಿಸುವುದಲ್ಲದೇ ಅವರ ದುಷ್ಟತನವನ್ನು ಹೋಗಲಾಡಿಸು ಎಂದು ಆಶೀರ್ವದಿಸುತ್ತಾನೆ.

ಇಂದ್ರನ ಅಹಂನಿಂದಾಗಿ ಗೋಕುಲದ ಮೇಲೆ ಸುರಿದ ಅಕಾಲಿಕ ಮಳೆಯಿಂದ ತತ್ತರಿಸಿ ಹೋಗಿದ್ದ ಜನರನ್ನು ರಕ್ಷಿಸುವ ಸಲುವಾಗಿ ಶ್ರೀ ಕೃಷ್ಣ ಪರಮಾತ್ಮ ಗೋವರ್ಧನಗಿರಿಯನ್ನು ತನ್ನ ಕಿರುಬೆರಳಿನಲ್ಲಿ ಎತ್ತಿ, ಜನರು, ಗೋವುಗಳಿಗೆ ಅದರಡಿ ಆಶ್ರಮ ನೀಡಿದ ದಿನವೂ ಇದೇ ದಿನವಾಗಿದೆ.

ಇನ್ನು ಬಂಗಾಳಿಗಳ ಪುರಾಣದ ಪ್ರಕಾರ ಈ ದೀಪಾವಳಿಯ ಅಮಾವಾಸ್ಯೆಯಂದು ತುಂಬಾ ಕತ್ತಲೆಯಾಗಿರುವುದರಿಂದ ಅದೇ ಸಮಯ ಬಳಸಿಕೊಂಡು ದುಷ್ಟ ಶಕ್ತಿಗಳು ಭೂಮಿಗೆ ಬರುತ್ತವೆ. ದೀಪಾವಳಿಯ ಸಂದರ್ಭದಲ್ಲಿ ಸಿಡಿಸುವ ಪಟಾಕಿಗಳ ಶಬ್ಧ ಮತ್ತು ಬೆಳಕುಗಳು ಈ ದುಷ್ಟಶಕ್ತಿಗಳನ್ನು ತಡೆಯುವ ಕಾರಣ, ಆ ದುಷ್ಟ ಶಕ್ತಿಗಳು ಜನರ ಮೇಲೆ ಆಕ್ರಮಣ ಮಾಡುವುದರಿಂದ ದೂರವಿರುತ್ತಾರೆ ಎಂದೇ ಎಂದೇ ನಂಬುತ್ತಾರೆ.

ಈ ಎಲ್ಲಾ ಕಾರಣಗಳಿಗಾಗಿಯೇ, ದೀಪಾವಳಿಯನ್ನು ಗೆಲುವಿನ ಸಂಭ್ರಮವಾಗಿ ಆಚರಿಸಲಾಗುತ್ತದೆ. ಇದು ದುಷ್ಟಶಕ್ತಿ ವಿರುದ್ಧ ಒಳ್ಳೆಯತನದ ಗೆಲುವು ಎಂದೇ ಭಾವಿಸಲಾಗಿದೆ. ದೀಪಾವಳಿ ಆಚರಣೆಗಳ ಪದ್ದತಿ ಮತ್ತು ರೂಡಿಗಳು ದೇಶಾದ್ಯಂತ ಭಿನ್ನವಾಗಿದ್ದರೂ ಸಂಭ್ರಮ ಮಾತ್ರ ಎಲ್ಲಡೆಯೂ ಒಂದೇ ರೀತಿಯಲ್ಲಿರುವುದು ಗಮನರ್ಹವಾಗಿದೆ. ಪಟಾಕಿಯ ಜೋರಾದ ಸದ್ದು ಸ್ವರ್ಗದಲ್ಲಿರುವ ದೇವಾನು ದೇವತೆಗಳಿಗೆ ನಮ್ಮ ಅಭೀಷ್ಟೆಗಳು ತಲುಪುವುದು ಮತ್ತು ಜನರು ದುಷ್ಟಶಕ್ತಿ ವಿರುದ್ಧ ಒಳ್ಳೆಯತನದ ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ ಎಂದು ದೇವದೇವತೆಗಳು ಭಾವಿಸುವರು ಎಂದೇ ಹಿರಿಯರು ಹೇಳುತ್ತಾರೆ.

ಹೀಗೆ ಸಂಭ್ರಮದ ಕ್ಷಣಗಳನ್ನು ಹೆಚ್ಚಿನ ಶಬ್ಧದೊಂದಿಗೆ ಮತ್ತು ರಂಗು ರಂಗಿನ ಬೆಳಕಿನೊಂದಿಗೆ ಆಚರಿಸುವುದ ಪದ್ದತಿ ಅಂದಿನ ಕಾಲದಿಂದಲೂ ರೂಢಿಯಲ್ಲಿದ್ದ ಕಾರಣ ದೀಪಾವಳಿಯ ಐದೂ ದಿನಗಳೂ ತರ ತರಹದ ಪಟಾಕಿಗಳನ್ನು ಸಿಡಿಸುವುದು ನಮ್ಮ ಸಂಪ್ರದಾಯದ ಅವಿಭಾಜ್ಯ ಅಂಗವಾಗಿದೆ. ಪಟಾಕಿಗಳನ್ನು ಸಿಡಿಸದೇ ಇದ್ದಲ್ಲಿ ದೀಪಾವಳಿ ಹಬ್ಬವು ಪೂರ್ಣವಾಗುವುದಿಲ್ಲ. ಹಾಗಾಗಿ ಚಿಕ್ಕ ವಯಸ್ಸಿನ ಮಕ್ಕಳು, ಯುವಕರು ವಯೋವೃದ್ಧರಾದಿಯಾಗಿ ಹೆಣ್ಣು ಮಕ್ಕಳ ಸಹಿತ ಪ್ರತಿಯೊಬ್ಬರು ಅವರವರ ಇಚ್ಚೆ ಮತ್ತು ಧೈರ್ಯಕ್ಕೆ ಅನುಗುಣವಾದ ಪಟಾಕಿಗಳನ್ನು ಸಿಡಿಸುವ ಮೂಲಕ ಹಬ್ಬದ ಸಂಭ್ರಮಾಚರಣೆಯನ್ನು ಇಮ್ಮಡಿಗೊಳಿಸುತ್ತಾರೆ.

ನಮ್ಮ ದೇಶದಲ್ಲಿ ಪಟಾಕಿ ಮತ್ತು ಅದರ ಬಳಕೆಯ ನಮ್ಮ ಕುರಿತಂತೆ ಅನೇಕ ಉಲ್ಲೇಖಗಳಿವೆ ಅವುಗಳಲ್ಲಿ ಪ್ರಮುಖವಾದವೆಂದರೆ,

  • ಪಟಾಕಿಗಳ ಬಂದೂಕುಗಳು ಮತ್ತು ಪ್ರದರ್ಶನಗಳ ಕುರಿತಂತೆ 1400 ವರ್ಷಗಳ ಹಿಂದಿನ ಸಂಸ್ಕೃತ ಕೃತಿಯಾದ ಅಕಾಶ ಭೈರವ-ಕಲ್ಪದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ, ಇದರಲ್ಲಿ ರಾಜರು ಪೂಜಿಸಬೇಕಾದ 32 ಶಸ್ತ್ರಾಸ್ತ್ರಗಳಲ್ಲಿ ಬಂದೂಕು ಕೂಡ ಒಂದು, ಪಟಾಕಿ ಪ್ರದರ್ಶನ ಮತ್ತು ರಾಕೆಟ್ ಗಳ ಕುರಿತಾಗಿ ತಿಳಿಸಲಾಗಿದೆ.
  • ಸಂತ ಏಕನಾಥರ (1570) ಮರಾಠಿ ಕವಿತೆ ರುಕ್ಮಿಣಿ-ಸ್ವಯಂವರದಲ್ಲಿಯೂ ರಾಕೆಟ್ಸ್, ಪಟಾಕಿ ಹೂಮಾಲೆಗಳನ್ನು ಉಲ್ಲೇಖಿಸುತ್ತದೆ
  • ಇನ್ನೊಬ್ಬ ಮಹಾರಾಷ್ಟ್ರ ಲೇಖಕ ಸಂತ ರಾಮದಾಸರೂ ಸಹಾ (1608–82) ಗುಡುಗು ಶಬ್ದಗಳನ್ನು ಉತ್ಪಾದಿಸಲು ನಿರ್ದಿಷ್ಟ ರೀತಿಯ ಪಟಾಕಿ, ಫಿರಂಗಿ, ಮತ್ತು ಸಣ್ಣ ಸಿಡಿಮದ್ದುಗಳ ಪ್ರದರ್ಶನವನ್ನು ಸಹ ಉಲ್ಲೇಖಿಸಿದ್ದಾರೆ. ಬಾಣವನ್ನು ರಾಕೆಟ್ ಎಂದು ಕರೆಯಲಾಗಿದ್ದರೂ, 1656 – 68 ರಲ್ಲಿ ಭಾರತದಲ್ಲಿದ್ದ ಫ್ರೆಂಚ್ ವೈದ್ಯ ಮತ್ತು ಪ್ರಯಾಣಿಕ ಬರ್ನಿಯರ್ ಇದನ್ನು ಕೋಲಿಗೆ ಜೋಡಿಸಲಾದ ಗ್ರೆನೇಡ್ ಎಂದು ಕರೆಯುತ್ತಾರೆ ಮತ್ತು ಚೆರ್ಕಿಗಳೊಂದಿಗೆ ಆನೆಗಳನ್ನು ಹೆದರಿಸುವ ಬಗ್ಗೆಯೂ ತಿಳಿಸಿದ್ದಾರೆ. ಇದನ್ನೇ ಬಂಗಾಳದಲ್ಲಿ ಮತ್ತಿತರ ಪ್ರದೇಶಗಳಲ್ಲಿ ಕಾರ್ಕಿ ಎಂದು ಕರೆಯಲಾಗುತ್ತದೆ ಮತ್ತು ಈ ಹೆಸರು ಸಂಸ್ಕೃತ ಕಾಕ್ರಾದಿಂದ ಬಂದಿರಬಹುದು ಎಂದು ಹೇಳಲಾಗುತ್ತಿದೆ.
  • 1676 ರಲ್ಲಿ ರಘುನಾಥ್ ಪಂಡಿತ್ ಅವರು ಬರೆದ ಸಂಸ್ಕೃತೇತರ ಪದಗಳ ನಿಘಂಟುವಿನಲ್ಲಿ ಬಾಣ ಎಂದರೆ ಸಿಡಿಮದ್ದುಗಳನ್ನು ತುಂಬಿದ ಕೊಳವೇ ಎಂದೇ ತಿಳಿಸಿದ್ದಾರೆ.
  • 17 ನೇ ಶತಮಾನದ ಫ್ರೆಂಚ್ ರತ್ನ ವ್ಯಾಪಾರಿ ಮತ್ತು ಭಾರತಕ್ಕೆ ಪ್ರವಾಸಿಗರಾಗಿ ಬಂದಿದ್ದ ಜೀನ್-ಬ್ಯಾಪ್ಟಿಸ್ಟ್ ಟಾವೆರ್ನಿಯರ್, ಎಂಬುವರು 1676 ರಲ್ಲಿ ಭಾರತದಲ್ಲಿ ಪಟಾಕಿ ಮತ್ತು ಸಿಡಿಮದ್ಧುಗಳ ಪ್ರದರ್ಶನವನ್ನು ಉಲ್ಲೇಖಿಸಿದ್ದಾರೆ.
  • 18 ನೇ ಶತಮಾನದ ಅಂತ್ಯದ ವೇಳೆಗೆ ಪಟಾಕಿ ಪ್ರದರ್ಶನಗಳು ಭಾರತದಲ್ಲಿ ಜನಪ್ರಿಯವಾಗಿದ್ದವು ಮತ್ತು ಮನರಂಜನೆಯಲ್ಲಿ ರೂಪದಲ್ಲಿ ಬಳಸಲ್ಪಡುತ್ತಿದ್ದವು.
  • ಶತ ಶತಮಾನಗಳಿಂದಲೂ ಕೇರಳದ ಪುರಾಣ ಪ್ರಸಿದ್ಧ ದೇವಾಲಗಳಲ್ಲಿ ಲಕ್ಷಾಂತರ ರೂಪಾಯಿಗಳ ಪಟಾಕಿ ಮತ್ತು ಸಿಡಿಮದ್ದುಗಳ ಪ್ರದರ್ಶನವನ್ನು ದೇವರ ಸೇವೆ ಎಂದೇ ಅನೂಚಾನವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ಈ ಎಲ್ಲಾ ಇತಿಹಾಸವನ್ನು ಗಮನಿಸಿದಲ್ಲಿ, ಪಟಾಕಿಗಳ ಬಳಕೆ ನಮ್ಮ ಹಬ್ಬ ಹರಿದಿನಗಳು ಮತು ಸಂಭ್ರದ ಕ್ಷಣದ ಭಾಗವಾಗಿದೆ. ಯಾವುದೇ ಧರ್ಮ, ಜಾತಿ, ಮತ ಮತ್ತು ಲಿಂಗಗಳನ್ನೂ ಮೀರಿದ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ ಎಂದು ಸಾಬೀತುಪಡಿಸುತ್ತಿವೆ.

ಈಗ ಪೌರಾಣಿಕ ಕೋನವನ್ನು ಹೊರತುಪಡಿಸಿ, ವೈಜ್ಞಾನಿಕವಾಗಿ ಮತ್ತು ಪ್ರಾಯೋಗಿಕವಾಗಿ ಅವಲೋಕಿಸಿದಲ್ಲಿ, ದೀಪಾವಳಿಯ ಸಮಯವು ಮಳೆ ಮತ್ತು ಚಳಿಗಾಲದ ನಡುವಿನ ಪರಿವರ್ತನೆಯ ಕಾಲವಾಗಿದೆ. ಸತತವಾದ 4 ತಿಂಗಳ ಮಳೆಯ ಅಂತ್ಯದಿಂದ ತೇವದಿಂದಾಗಿ ಗಾಳಿಯು ಬ್ಯಾಕ್ಟೀರಿಯಾ ಮತ್ತು ವೈರಸ್‌ನಿಂದ ದಟ್ಟವಾಗಿರುವ ಸಮಯವಾಗಿದೆ, ಈ ಚಳಿಗಾಲದ ಆರಂಭವು ಅದರೊಂದಿಗೆ ಬಹಳಷ್ಟು ಸಮಸ್ಯೆಗಳನ್ನು ತರುತ್ತದೆ. ನೀರು ನಿಶ್ಚಲವಾಗಿರುವುದರಿಂದ, ಸೊಳ್ಳೆಗಳು ಮತ್ತು ಇತರ ಕೀಟಗಳು ಸಾಕಷ್ಟು ಸಂತಾನೋತ್ಪತ್ತಿ ಮಾಡುತ್ತವೆ ಮತ್ತು ಅದರೊಂದಿಗೆ ರೋಗಗಳನ್ನು ಹರಡುವ ಸಂಭವವೇ ಹೆಚ್ಚಾಗಿರುತ್ತದೆ. ಹಿಂದಿನ ದಿನಗಳಲ್ಲಿ ಇಂದಿನ ದಿನಗಳಂತೆ ಇಂದಿನಂತೆ ಸ್ವಚ್ಚತಾ ಔಷಧಗಳು ಅಷ್ಟೊಂದು ಇಲ್ಲದಿದ್ದಾಗ ಪಟಾಕಿಗಳನ್ನು ಸಿಡಿಸುವುದರ ಮೂಲಕ ಗಂಧಕದ ಹೊಗೆಯು ವಾತಾವರಣದಲ್ಲಿ ಇರಬಹುದಾದ ವೈರಾಣುಗಳನ್ನು ತೊಡೆದು ಹಾಕಿ, ಸುತ್ತಲಿನ ದೋಷಗಳನ್ನು ಕೊಲ್ಲಲು ಬಳೆಸಲಾಗುತ್ತಿತ್ತು. ಇದೇ ಸಮಯದಲ್ಲಿ ಅನೇಕ ಕೀಟಗಳ ಸಂತಾನೋತ್ಪತ್ತಿ ತುಂಬಾ ಏರು ಗತಿಯಲ್ಲಿರುತ್ತದೆ. ಪಟಾಕಿ ಸಿಡಿಸುವ ವೇಳೆ ಹೊರಬರುವಂತಹ ಗಂಧಕದ ಹೊಗೆಯಿಂದಾಗಿ ಕೀಟಗಳ ಸಂತಾನೋತ್ಪತ್ತಿ ತಡೆಯಬಹುದಲ್ಲದೇ ಈ ಕೀಟಗಳಿಂದ ಹರಡಬಹುದಾದಂತಹ ಕಾಯಿಲೆಗಳನ್ನು ತಡೆಯಬಹುದು. ಅದೂ ಅಲ್ಲದೇ, ಮೂರ್ನಾಲ್ಕು ತಿಂಗಳುಗಳ ಕಾಲ ಸತತವಾಗಿ ಕೃಷಿಯಲ್ಲಿ ನಿರತರಾಗಿದ್ದ ರೈತರಿಗೆ ದೀಪಾವಳಿಯಲ್ಲಿ ಪಟಾಕಿ ಸಿಡಿಸುವ ಮೂಲಕ ಮನೋರಂಜನೆಯೂ ದೊರೆತಂತಾಗುತ್ತದೆ.

ವಿಜ್ಞಾನಿಗಳ ಪ್ರಕಾರ ಪಟಾಕಿ ಸದ್ದಿನಿಂದ ಸ್ಥಿತಪ್ರಜ್ಞೆಯ ಎಚ್ಚರಿಸುವುದು ಮತ್ತು ಜಾಗೃತಿಗೊಳಿಸುವುದು. ಇದರಿಂದ ವ್ಯಕ್ತಿಯು ತುಂಬಾ ಸಂಭ್ರಮದಲ್ಲಿರುವನು ಮತ್ತು ಸಂಭ್ರಮಾಚರಣೆಯ ವಾತಾವರಣ ನಿರ್ಮಾಣ ಮಾಡುವನು ಎಂದು ಹೇಳುತ್ತಾರೆ. ಕಾರಣಗಳು ಏನೇ ಇರಲಿ, ಎಲ್ಲರೂ ಎಚ್ಚರಿಕೆಯಿಂದ ಪಟಾಕಿ ಸಿಡಿಸಿ ಸಂಭ್ರಮಿಸೋಣ.

ಪಾರಂಪರಿಕವಾಗಿ ಪಟಾಕಿಗಳನ್ನು ತಯಾರಿಸಲು ಬಳೆಸುತ್ತಿದ್ದ ಕಚ್ಚಾ ವಸ್ತುಗಳೆಂದರೆ, ಕಬ್ಬಿಣದ ಅದಿರಿನ ಪುಡಿ, ಗಂಧಕದ ಸಿಡಿ ಮದ್ದು ಮತ್ತು ಇದ್ದಿಲು. ಈ ವಸ್ತುಗಳಿಂದ ತಯಾರಿಸುತ್ತಿದ್ದ ಪಟಾಕಿಗಳು ಮನುಷ್ಯರ ಆರೋಗ್ಯದ ಮೇಲೆ ಅಷ್ಟೋಂದು ದುಷ್ಪರಿಣಾಮ ಬೀರುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ತರ ತರಹದ ಬಣ್ಣಗಳು ಮತ್ತು ಶಬ್ಧಗಳನ್ನು ಹೆಚ್ಚಿಸುವ ಸಲುವಾಗಿ ನಾನಾ ರೀತಿಯ ರಾಸಾಯನಿಕ ವಸ್ತುಗಳನ್ನು ಬಳಸುತ್ತಿರುವ ಕಾರಣ ಆರೋಗ್ಯಕ್ಕೆ ದುಷ್ಪರಿಣಾಮ ಬೀರುತ್ತಿರುವುದಂತೂ ಸತ್ಯ. ಇದೇ ಕಾರಣವನ್ನು ನೆಪ ಮಾಡಿಕೊಂಡು ಪಟಾಕಿಗಳನ್ನು ಸಿಡಿಸುವುದನ್ನೇ ನಿಷೇಧಿಸುವ ಮೂಲಕ ಹಿಂದೂಗಳ ಹಬ್ಬದ ಸಂಭ್ರಮ ಮತ್ತು ವೈಜ್ಞಾನಿಕ ಉಪಯೋಗಗಳನ್ನೇ ದೂರಮಾಡುವುದು ಎಷ್ಟು ಸರಿ? ಪಟಾಕೀ ಹೋಡೆಯುವುದನ್ನು ನಿಷೇಧಿಸುವ ಬದಲು ಪಟಾಕಿ ತಯಾರಿಸುವ ಕಾರ್ಖಾನೆಗಳಿಗೆ ಕಟ್ಟು ನಿಟ್ಟಿನ ಎಚ್ಚರಿಕೆ ನೀಡಿ ರಾಸಾಯನಿಕ ವಸ್ತುಗಳನ್ನು ಬಳಸದೇ ಸಾಂಪ್ರದಾಯಿಕ ರೀತಿಯ ಪಟಾಕಿಗಳನ್ನು ತಯಾರಿಸುವಂತೆ ಆಜ್ಞೆಮಾಡಿದರೆ, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಂತಾಗಿ ಪರಿಸರವೂ ಸಂರಕ್ಷಣೆಯಾಗುತ್ತದೆ ಮತ್ತು ಹಿಂದೂಗಳೂ ಸಹಾ ನೆಮ್ಮದಿಯಿಂದ ದೀಪಾವಳಿಯನ್ನು ಸಂಭ್ರಮಿಸ ಬಹುದಲ್ಲವೇ?

ಏನಂತೀರೀ?

ಈ ಲೇಖಕನವನ್ನು ಬರೆಯಲು ಆಗ್ರಹ ಪೂರ್ವಕ ಸ್ಪೂರ್ತಿಯನ್ನು ನೀಡಿದ ಗೆಳೆಯ ವಿನೋದ್ ಆಚಾರ್ಯರಿಗೆ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ.

One thought on “ದೀಪಾವಳಿ ಪಟಾಕಿಯ ಸಂಬಂಧ ಮತ್ತು ಅನುಬಂಧ

  1. ನಾನು ಈ ಬಗ್ಗೆ ನನ್ನ ಅಭಿಪ್ರಾಯಗಳನ್ನು ಕಳಿಸಲು ಪ್ರಯತ್ನಿಸಿದೆ. ಯಾಕೊ ಹೋಗಲಿಲ್ಲ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s