ಕಾರ್ತಿಕ್ ಸಾಹುಕಾರ್

ಬಿಹಾರದ ಗಯಾ ಜಿಲ್ಲೆಯ ಗೆಹ್ಲಾರ್‌ ಎಂಬ ಕುಗ್ರಾಮದಲ್ಲಿನ ಒಬ್ಬಾಕೆಗೆ ಆರೋಗ್ಯ ಸರಿ ಇಲ್ಲದಿದ್ದಾಗ ಚಿಕಿತ್ಸೆಗೆಂದು ಗುಡ್ಡ ಹಿಂದಿರುವ ಊರಿಗೆ ತಲುಪಲು ಸುಮಾರು 40 ಕಿಮೀ ಹೋಗಲಾರದೇ, ಸಕಾಲಕ್ಕೆ ವೈದ್ಯಕೀಯ ಚಿಕಿತ್ಸೆ ಸಿಗದೇ ಮೃತಪಟ್ಟಾಗ ಆಕೆಯ ಪತಿ ದಶರಥ್‌ ಮಾಂಝಿ ಸುತ್ತಿಗೆ, ಹಾರೆಗಳಿಂದ ಏಕಾಂಗಿಯಾಗಿ ಸುಮಾರು 22 ವರ್ಷಗಳ ಕಾಲ ಕಡಿದು ಆ ಎರಡೂ ಊರುಗಳ ನಡುವಿನ ಅಂತರವನ್ನು ಕೆಲವೇ ಕೆಲವು ನಿಮಿಷಗಳಷ್ಟು ದೂರಕ್ಕೆ ತಂದಾಗ ಇಡೀ ಪ್ರಪಂಚವೇ ನಿಬ್ಬೆರಗಾಗಿತ್ತು. ಅದೇ ರೀತಿ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಆನವಟ್ಟಿ ಗ್ರಾಮದಲ್ಲಿ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಒಳ್ಳೆಯ ಶಾಲೆಯು ಇರದಿದ್ದದ್ದನ್ನು ಗಮನಿಸಿ ತಮ್ಮ ಮಕ್ಕಳಿಗೆ ಆದ ಕಷ್ಟ ಊರಿನ ಇತರೇ ಮಕ್ಕಳಿಗೆ ಆಗಬಾರದೆಂದು ನಿರ್ಧರಿಸಿ ಅನವಟ್ಟಿಯ ಪಕ್ಕದಲ್ಲೇ ಇರುವ ಕೋಟಿಪುರ ಎಂಬ ಹಳ್ಳಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಶಾಲೆಯನ್ನು ಆರಂಭಿಸಿದ ಆದರ್ಶಮಯ ಸಮಾಜ ಸೇವಕರಾದ ಹೆಸರಿಗೆ ಅನ್ವರ್ಥದಂತೆ ಅರ್ಥಿಕವಾಗಿಯೂ ಮತ್ತು ಹೃದಯ ಶ್ರೀಮಂತಿಕೆಯಲ್ಲಿಯೂ ಸಾಹುಕಾರರೇ ಆಗಿರುವ ಕಾರ್ತಿಕ್ ಸಾಹುಕಾರ್ ನಮ್ಮ ಈ ದಿನದ ಕನ್ನಡದ ಕಲಿಗಳು ಮಾಲಿಕೆಯ ಕಥಾ ನಾಯಕರು.

ಭೌಗೋಳಿಕವಾಗಿ ಶಿವಮೊಗ್ಗ ಜಿಲ್ಲೆಯ ಸೊರಬಾ ತಾಲ್ಲೂಕಿನ ಭಾಗವಾಗಿದ್ದರೂ ಸಾಂಸ್ಕೃತಿಕವಾಗಿ ಉತ್ತರ ಕರ್ನಾಟಕದ ಸಿರ್ಸಿಯ ಜೊತೆಗೆ ಜೋಡಿಸಿಕೊಂಡಿದೆ ಇನ್ನು ವ್ಯಾಪಾರ ವಹಿವಾಟುಗಳಿಗೆ ಹಾವೇರಿಯ ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಈ ಆನವಟ್ಟಿಯ ವ್ಯಾಪಾರಿ ಕುಟುಂಬದ ಸದಸ್ಯರಾದ ಕಾರ್ತಿಕ್ ಸಾಹುಕಾರ್ ಬಹುಮುಖ ಪ್ರತಿಭೆ. ಬೆಂಗಳೂರಿನಲ್ಲಿ ತಮ್ಮ ವಕೀಲೀ ಪದವಿಯನ್ನು ಪಡೆದು ಅವರ ಸಹಪಾಠಿಗಳಂತೆ ಬೆಂಗಳೂರಿನಲ್ಲಿ ಕಾನೂನು ಆಭ್ಯಾಸ ಮಾಡುತ್ತಾ ನೆಮ್ಮದಿಯ ಜೀವನ ಸಾಗಿಸಬಹುದಾಗಿತ್ತು. ಆದರೆ ಸದಾಕಾಲವೂ ನಮ್ಮೂರು, ನಮ್ಮ ಮನೆ ಎಂದೇ ಯೋಚಿಸುತ್ತಿದ್ದ ಕಾರ್ತಿಕ್ ತಮ್ಮ ಅನೇಕ ವರ್ಷಗಳಿಂದ ತಮ್ಮ ಪೂರ್ವಜರು ನಡೆಸಿ ಕೊಂಡು ಬರುತ್ತಿರುವ ಸಗಟು ಮತ್ತು ಚಿಲ್ಲರೇ ದಿನಸೀ ವ್ಯಾಪರವನ್ನೇ ಮುಂದುವರಿಸಿಕೊಂಡು ಜನರಿಗೆ ದವಸ ಧ್ಯಾನದಿಂದ ಹಿಡಿದು, ಪಶುಗಳಿಗೆ ಬೂಸ, ಹಿಂಡಿ, ಸೂಜಿ ಬಲ್ಬ್ ಹೀಗೇ ಏನೇ ಬೇಕಾದರೂ ಜನಾ, ಅವರ ಅಂಗಡಿಗೇ ಬಂದು ಕೊಳ್ಳಬೇಕು ಎನ್ನುವಷ್ಟರ ಮಟ್ಟಿಗೆ ಜನಾನುರಾಗಿಯಾಗಿ ನೆಮ್ಮದಿಯ ಜೀವನವನ್ನು ಸಾಗಿಸುತ್ತಿದ್ದರು.

ಸದಾಕಾಲವೂ ಒಂದಲ್ಲಾ ಒಂದು ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂಬ ತುಡಿತದಿಂದಾಗಿಯೇ ಅಲ್ಲಿಯ ಆರ್ಯವೈಶ್ಯ ಸಂಘದ ಅಧ್ಯಕ್ಷರಾಗಿ ಅನೇಕ ಸಮಾಜಮುಖೀ ಕೆಲಸಗಳನ್ನು ಆರಂಭಿಸಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಲ್ಲದೇ, ಸೊರಬ ತಾಲೂಕಿನಲ್ಲಿ ಸುಮಾರು 800 ಸದಸ್ಯರ ಸೊರಬ ತಾಲೂಕು ಯುವಜನ ಸಂಘ ಸ್ಥಾಪನೆ ಮಾಡಿ ಅದರ ಮುಂದಾಳತ್ವವನ್ನು ತಾವೇ ಹೊತ್ತು ಯುವ ಶಕ್ತಿಯನ್ನು ಒಗ್ಗೂಡಿಸಿ ಆ ಸಂಘದ ಮೂಲಕ ತಾಲೂಕಿನ ನೂರಾರು ಸರ್ಕಾರೀ ಶಾಲೆಗಳ ಬಡ ಮಕ್ಕಳಿಗೆ ಒಂದು ಲಕ್ಷಕ್ಕೂ ಅಧಿಕ ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಿದ್ದಲ್ಲದೇ, ರಾಜ್ಯಮಟ್ಟದ ಸಂಗೀತೋತ್ಸವ, ರಸಪ್ರಶ್ನೆಗಳನ್ನು ಏರ್ಪಡಿಸಿ ಮಕ್ಕಳ ಬೌದ್ಧಿಕ ಮಟ್ಟವನ್ನು ಬೆಳೆಯಲು ಸಹಕರಿಸಿದ್ದಾರೆ. ಅದೇ ರೀತಿ ಸರ್ಕಾರೀ ಶಾಲೆಯ ಮಕ್ಕಳಿಗೂ ಕಂಪ್ಯೂಟರ್ ಕಲಿಯಲಿ ಎಂಬ ಅಪೇಕ್ಷೆಯಿಂದ ಅನೇಕ ಶಾಲೆಗಳಿಗೆ ಉಚಿತವಾಗಿ ಕಂಪ್ಯೂಟರ್ ಕೂಡಾ ದಾನ ಮಾಡಿದ್ದಾರೆ.

ಇದೇ ಸಮಯದಲ್ಲಿ ಬೆಂಗಳೂರಿನ ಚರಿತ ಎಂಬಾಕಿಯೊಂದಿಗೆ ವಿವಾಹವಾಗಿ ಮುದ್ದಾದ ಅವಳೀ ಜವಳೀ ಮಕ್ಕಳ ತಂದೆಯಾಗಿದ್ದಾರೆ.

ಕೆಲ ವರ್ಷಗಳ ಹಿಂದೆ ಸಿರ್ಸಿಯಲ್ಲಿ ನನ್ನ ಸಹೋದ್ಯೋಗಿಯ ಮದುವೆಯ ನಿಮಿತ್ತ ಸಿರ್ಸಿಗೆ ಬರುತ್ತಿದ್ದೇವೆ ಎಂಬ ವಿಷಯ ತಿಳಿದ ನಮ್ಮಾಕಿಯ ಸಹಪಾಠಿ, ಶ್ರೀಮತಿ ‍ಕಾರ್ತೀಕ್, ಸಿರ್ಸಿಗೆ ಹೋಗುವ ದಾರಿಯಲ್ಲೇ ನಮ್ಮ ಆನವಟ್ಟಿಗೆ ಬಂದು ಹೋಗಿ ಎಂದ ಬಲವಂತ ಪಡಿಸಿದಾಗ, ಗೊತ್ತಿಲ್ಲದವರ ಮನೆಗೆ ಹೋಗುವುದು ಹೇಗೋ ಏನೋ ಎಂಬ ಅಳುಕಿನಲ್ಲಿಯೇ ಮಟ ಮಟ ಮಧ್ಯಾಹ್ನ ಅವರ ಮನೆಗೆ ಕಾಲಿಟ್ಟಿದ್ದೆವು ಕೆಳಗೆ ಅಂಗಡಿ ಮೇಲೆ ವಿಶಾಲವಾದ ಮನೆ. ಹತ್ತಾರು ಅತಿಥಿಗಳು ಬಂದರೂ ಎಲ್ಲರಿಗೂ ಸಾಲುವಷ್ಟು ಸುಸಜ್ಜಿತ ಕೊಠಡಿಗಳನ್ನು ನೋಡಿ ನಾವು ನಗರದಲ್ಲೇ ಇದ್ದೀವೇನೋ ಎಂಬಂತೆ ಭಾಸವಾದದ್ದು ಸುಳ್ಳಲ್ಲ. ಸರಿ ಸುಮಾರು ನಮ್ಮ ಮಕ್ಕಳ ವಯಸ್ಸಿನವರೇ ಅದ ಅವರ ಮಕ್ಕಳೊಡನೆ ನಮ್ಮ ಮಕ್ಕಳು ಬೆರೆಯಲು ಹೆಚ್ಚಿನ ಸಮಯವೇನೂ ಆಗಲಿಲ್ಲ. ಅತ್ಯಂತ ರುಚಿಕರವಾದ ಭೋಜನವನ್ನು ಮಾಡಿ ಸ್ವಲ್ಪ ಹೊತ್ತು ಭುಕ್ತಾಯಾಸ ಪರಿಹರಿಸಿಕೊಂಡು ಸಂಜೆ ಅವರ ತೋಟಕ್ಕೆ ಹೋಗಲು ಎಲ್ಲರೂ ಸಿದ್ಧರಾಗಿ ಮನೆಯ ಹೊರೆಗೆ ಬಂದು ಎಲ್ಲರೂ ನಮ್ಮ ಕಾರಿನಲ್ಲಿಯೇ ಒಟ್ಟಿಗೇ ಹೋಗೋಣ ಎನ್ನುವಷ್ಟರಲ್ಲಿಯೇ, ಅತ್ಯಾಧುನಿಕ ಟಾಟಾ ಕಾರನ್ನು ತಂದ ಕಾರ್ತಿಕ್ ನೋಡಿ ನಾನು ತುಸು ಕಸಿವಿಸಿಯಾಗಿದ್ದಂತೂ ಸತ್ಯ. ಕೋಟಿ ಪುರದ ವರದಾ ನದಿಯ ತಟದಲ್ಲಿಯೇ ಇರುವ ಅವರ ತೋಟಕ್ಕೆ ಹೋದಾಗಲೇ ಅವರ ಬಹುಮುಖ ಪ್ರತಿಭೆಯ ಒಂದೊಂದೇ ಮುಖ ಅನಾವರಣ ಗೊಳ್ಳತೊಡಗಿತು.

ಉತ್ತಮ ನೀರಾವರಿ ಇರುವ ತೋಟದ ಸುತ್ತಲೂ ದೂರದೃಷ್ಟಿಯಿಂದ ತೇಗದ ಮರಗಳನ್ನು ನೆಟ್ಟಿದ್ದರು. ಕೇವಲ ಒಂದೇ ಬೆಳೆಗೆ ಸೀಮಿತಗೊಳಿಸದೇ ಕೃಷಿ ತಜ್ಞ ಪಾಲೇಕರ್ ಅವರ ಸಲಹೆಯಂತೆ ಬಹು ಬೆಳೆಯ ತೋಟ ಅವರದ್ದಾಗಿತ್ತು. ಅಲ್ಲಿ ಅಲ್ಪಾವದಿಯ ಬೆಳೆಯಾದರೂ ದಿಢೀರ್ ಎಂದು ಹಣ ಗಳಿಸಬಹುದಾದ ಪಪ್ಪಾಯ ಮತ್ತು ಬಾಳೆ ಇದ್ದರೇ. ವರ್ಷದ ಬೆಳೆಯಾಗಿ ಮಾವು ಮತ್ತು ಅಡಿಕೆಗಳಿದ್ದವು. ಅಡಿಕೆ ಮರಗಳಿಗೆ ಪೂರಕವಾಗಿ ವಿಳ್ಳೇದಲೆ, ಮೆಣಸು ಮತ್ತು ಏಲಕ್ಕಿಗಳೂ ಇದ್ದವು. ಇವೆಲ್ಲಕ್ಕಿಂತಲೂ ದೊಡ್ಡಮಟ್ಟದಲ್ಲಿ ಅಡಿಕೆ ಸಸಿಗಳ ನರ್ಸರಿಯಿಂದಲೇ ಪ್ರತೀ ವರ್ಷ ಸಾವಿರಾರು ಸಸಿಗಳನ್ನು ಮಾರುವ ಮೂಲಕ ಅತ್ಯಂತ ಯಶಸ್ವೀ ಕೃಷಿಕರಾಗಿರುವುದನ್ನು ತೋರಿಸಿ ನಮ್ಮೆಲ್ಲರನ್ನೂ ಮೂಕವಿಸ್ಮಿತರನ್ನಾಗಿ ಮಾಡಿದ್ದರು ಕಾರ್ತಿಕ್ ಸಾಹುಕಾರ್.

ಆಲ್ಲಿಂದ ಸ್ವಲ್ಪವೇ ದೂರದಲ್ಲೇ ಕೋಟೀಪುರದಲ್ಲಿ ಅವರ ಪೂರ್ವಜರು ಮಾಡಿದ್ದ ಮಾವಿನ ತೋಟಕ್ಕೆ ಕರೆದೊಯ್ದಾಗ ನಮಗೆ ಆಶ್ಚರ್ಯದ ಮೇಲೆ ಆಶ್ವರ್ಯ ಕಾದಿತ್ತು. ಮೊದಲು ಅವರ ತೋಟದಲ್ಲಿ ಜಗಿ ಜಗಿಯುತ್ತಿದ್ದ ಮಾವಿನಹಣ್ಣುಗಳನ್ನು ವರ್ಣಿಸುವುದಕ್ಕಿಂತ ಅನುಭವಿಸಿದರೇ ಚೆಂದ. ನೆಲಕ್ಕೇ ತಾಗುವಷ್ಟು ಜೋತಾಡುತ್ತಿದ್ದ ಮಾವಿನ ಹಣ್ಣುಗಳನ್ನು ಕಂಡು ನಮ್ಮ ಮಕ್ಕಳು ಸಡಗರ ಪಟ್ಟಿದ್ದು ಇನ್ನೂ ಮಮ್ಮ ಮನಸ್ಸಿನಲ್ಲಿ ಹಚ್ಚ ಹಸಿರಾಗಿದೆ. ಅದೇ ತೋಟದ ಅವರಣದಲ್ಲಿಯೇ ಅವರ ಮಹತ್ವಾಕಾಂಕ್ಷೆಯ Everon ಶಾಲೆಯನ್ನು ಹೆಮ್ಮೆಯಾಗಿ ತೋರಿಸಿದರು. ನಗರ ಪ್ರದೇಶಗಳಲ್ಲಿ ಕೇವಲ 60×40 ಇಲ್ಲವೇ, 50×80 ವಿಸ್ತೀರ್ಣದ ಜಾಗದಲ್ಲಿ ಶಾಲೆಗಳನ್ನು ಕಟ್ಟಿ International Public School ಎಂದು ಕರೆಯುವುದನ್ನು ನೋಡಿದ್ದೇವೆ. ಅದರೆ ಕೋಟೀ ಪುರದಂತಹ ಸಣ್ಣ ಹಳ್ಳಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಶಾಲೆಯನ್ನು ಆರಂಭಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯವೇ ಸರಿ. ಅವರು ಈ ಶಾಲೆಯ ಆರಂಭಿಸಿದ ಕಾರಣವೂ ರೋಚಕವಾದದ್ದೇ. ಅವರ ಅವಳೀ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಸುಸಜ್ಜಿತವಾದ ಒಳ್ಳೆಯ ಶಾಲೆಯು ಅವರ ಊರಿನ ಆಸುಪಾಸಿನಲ್ಲಿ ಇರದಿದ್ದದ್ದನ್ನು ಗಮನಿಸಿ, ತಮ್ಮೂರಿನ ಮಕ್ಕಳಿಗೆ ಅಂತರಾಷ್ಟ್ರೀಯ ಮಟ್ಟದ ವಿದ್ಯಾಭ್ಯಾಸ ಕೈಗೆಟುಕುವ ಬೆಲೆಯಲ್ಲಿ ಲಭಿಸಬೇಕು ಎನ್ನುವ ಧೃಢ ನಿರ್ಧಾರವನ್ನು ತೆಗೆದುಕೊಂಡು ತಮ್ಮ ತೋಟದಲ್ಲೇ ವಿಶಾಲವಾದ ಗಾಳಿ ಮತ್ತು ಬೆಳಕುಗಳಿರುವ ಕೊಠಡಿಗಳ ಶಾಲೆಯನ್ನು ಆರಂಭಿಸಿದ್ದಾರೆ. ಕೇವಲ ಪಠ್ಯವಲ್ಲದೇ, ಮಕ್ಕಳಿಗೆ ಪಠ್ಯೇತರ ಚಟುವಟಿಗೆಗಳಲ್ಲಿಯೂ ಆಸಕ್ತಿ ಮೂಡಿಸುವ ಸಲುವಾಗಿ, ಭಗವದ್ಗೀತೆ, ಶಾಸ್ತ್ರೀಯ ಸಂಗೀತ, ತಬಲ, ಕರಾಟೆಗಳಲ್ಲದೇ, ತಮ್ಮ ತೋಟದಲ್ಲಿಯೇ ಚಿಕ್ಕದಾದ ಈಜುಕೊಳದ ರೀತಿಯಲ್ಲಿ ತೊಟ್ಟಿಯನ್ನು ಕಟ್ಟಿ ತಮ್ಮ ಶಾಲೆಯ ಮಕ್ಕಳಿಗೆ ಈಜುವುದನ್ನೂ ಕಲಿಸುತ್ತಿರುವುದು ಅಭಿನಂದನಾರ್ಹವಾಗಿದೆ. ಈ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರೀಯ ಕ್ರೀಡಾ ಸ್ಪರ್ಥೆಗಳಲ್ಲಿ ಅನೇಕ ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಪಡೆದು ತಮ್ಮ ಶಾಲೆಯ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ.

ಆರಂಭದಲ್ಲಿ ಸಣ್ಣದಾಗಿ ಕೆಲವೇ ಕೆಲವು ಕೊಠಡಿಗಳಿಂದ ಆರಂಭವಾದ ಅವರ ಶಾಲೆ, ವರ್ಷಾನು ವರ್ಷ ಜನಪ್ರಿಯವಾಗಿ ಸುಸಜ್ಜಿತವಾದ ಕೊಠಡಿಗಳು, Science Labs, Computer Labs & Conference room ಒಳಗೊಂಡಂತೆ ಸದ್ಯಕ್ಕೆ 9ನೇ ತರಗತಿವರೆಗೆ ಇದ್ದು ಮುಂದಿನ ವರ್ಷ ತಮ್ಮ ಶಾಲೆಯಿಂದ 10ನೇ ತರಗತಿಯ ಮೊತ್ತ ಮೊದಲಿನ ತಂಡ ಅವರ ಶಾಲೆಯಿಂದ ಹೊರಬೀಳಲಿದೆ. ಕಾರ್ತಿಕ್ ಅವರ ಶಾಲೆ ವರ್ಷಾನು ವರ್ಷ ಬೆಳೆಯುತ್ತಿರುವ ವೇಗವನ್ನು ನೋಡಿದಲ್ಲಿ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಪದವಿ ಪೂರ್ವ ಕಾಲೇಜು ಗಳಲ್ಲದೇ ವಿವಿಧ ಪದವಿಗಳ ಕಾಲೇಜು ಸಹಾ ಆರಂಭವಾಗಿ ಆನವಟ್ಟಿಯ ಸುತ್ತಮುತ್ತಲಿನ ವಿಧ್ಯಾರ್ಥಿಗಳು ತಮ್ಮೂರಿನಲ್ಲಿಯೇ ಅತ್ತ್ಯುತ್ತಮ ವಿದ್ಯಾಭ್ಯಾಸವನ್ನು ಪಡೆದು ನಾಡಿನ ಹೆಮ್ಮೆಯ ಪ್ರಜೆಗಳಾಗುವುದನ್ನು ನೋಡಬಹುದಾಗಿದೆ.

ಈ ರೀತಿಯಾಗಿ ಕಾರ್ತಿಕ್ ಸಾಹುಕಾರ್ ತಮ್ಮ ಕಾರ್ಯ ಚಟುವಟಿಕೆಗಳನ್ನು ಕೇವಲ ತಮ್ಮ ವಂಶ ಪಾರಂಪರ್ಯ ದಿನಸೀ ವ್ಯಾಪಾರಕ್ಕೆ, ಆಧುನಿಕ ಕೃಷಿಗೆ, ಶಿಕ್ಷಣ ಸಂಸ್ಥೆಯೊಂದರ ಸ್ಥಾಪಕ ಅಧ್ಯಕ್ಷರಾಗಿರುವುದಕ್ಕೇ ಮಾತ್ರವೇ ಸೀಮಿತ ಗೊಳಿಕೊಳ್ಳದೇ ತಮ್ಮ ಸಂಘಟನಾ ಚತುರತೆಯ ಮೂಲಕ ಸೊರಬ ತಾಲ್ಲೂಕಿನ ಅನೇಕ ಸಂಘ ಸಂಸ್ಥೆಗಳ ಹತ್ತಾರು ಜವಾಬ್ಧಾರಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಸಾವಿರಾರು ಯುವಕರಿಗೆ ಮಾರ್ಗದರ್ಶಿಗಳಾಗಿ, ಉದ್ಯೋಗದಾತರಾಗಿದ್ದಾರೆ. ಆಶುದ್ಧವಾದ ನೀರಿನ ಸೇವನೆಯಿಂದ ತಮ್ಮೂರಿನ ಜನರು ಒಂದಲ್ಲಾ ಒಂದು ಖಾಯಿಲೆಗೆ ತುತ್ತಾಗುತ್ತಿರುವುದನ್ನು ಮನಗೊಂಡು ತಮ್ಮೂರಿನ ನೀರಿನ ಟ್ಯಾಂಕಿಗೆ ಸುಮಾರು ಎರಡು ಲಕ್ಷ ರೂಪಾಯಿಯ ವೆಚ್ಚದಲ್ಲಿ ಅಕ್ವಾ ಪ್ಯೂರಿಫೈಯರ್ ಅಳವಡಿಸಿ, ಶುದ್ಧ ಕುಡಿಯುವ ನೀರು ದೊರೆಯುವಂತೆ ಮಾಡಿದ್ದಾರೆ. ತಮ್ಮೂರೂ ಸೇರಿದಂತೆ ಸುತ್ತಮುತ್ತಲಿನ ಊರುಗಳಲ್ಲಿ ಅನೇಕ ರಕ್ತದಾನ ಶಿಬಿರ ಆಯೋಜನೆ ಮಾಡಿರುವುದಲ್ಲದೇ, ಸ್ವತಃ 30ಕ್ಕೂ ಹೆಚ್ಚಿನ ಬಾರಿ ರಕ್ತದಾನ ಮಾಡುವ ಮೂಲಕ ಎಲ್ಲರಿಗೂ ಪ್ರೇರಣಾದಾಯಕರಾಗಿದ್ದಾರೆ. ಅದೇ ರೀತಿ ಸೊರಬ ತಾಲ್ಲೂಕ್ಕಿನ ಜನರಿಗೆ ತ್ವರಿತ ಗತಿಯಲ್ಲಿ ಆರೋಗ್ಯದ ಸೇವೆ ದೊರಕಲು ಅನುವಾಗುವಂತೆ ಉಚಿತ ಆಂಬುಲೆನ್ಸ್ ಸೇವೆಗೆ ನೆರವನ್ನೂ ನೀಡಿದ್ದಾರೆ. ಇದಲ್ಲದೇ ಆಗ್ಗಿಂದ್ದಾಗ್ಗೇ ಆರೋಗ್ಯ ತಪಾಸಣಾ ಶಿಬಿರಗಳು ಮತ್ತು ಕಣ್ಣಿನ ಚಿಕಿತ್ಸಾ ಶಿಬಿರಗಳನ್ನು ತಮ್ಮ ಮುಂದಾಳತ್ವದಲ್ಲಿ ನಡೆಸಿ ಸಾವಿರಾರು ಬಡಜನರ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮಾಡಿಸುವ ಮೂಲಕ ಅವರುಗಳ ಬಾಳಲ್ಲಿ ಮತ್ತೆ ಹೊಸ ಬೆಳಕು ಮೂಡುವಂತೆ ಮಾಡಿರುವುದು ಶ್ಲಾಘನೀಯವೇ ಸರಿ.

ತಮ್ಮದೇ ಶಾಲೆ ಇದ್ದರೂ, ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾನಿಧಿಯನ್ನು ಸ್ಥಾಪನೆಯನ್ನು ಮಾಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದಲ್ಲದೇ, ಆವರ ಪ್ರತಿಭೆಗಳನ್ನು ಅನಾವರಣಗೊಳಿಸುವ ಸಲುವಾಗಿ ಪ್ರತೀ ವರ್ಷವೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಿ ಪ್ರತಿಭಾನ್ವಿತ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಕಾಯ೯ವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ಮಾತೃ ಭಾಷೆ ತೆಲುಗು ಆದರೂ, ಕನ್ನಡ ಭಾಷೆ, ನೆಲ, ಜಲ ರಕ್ಷಣೆಯಲ್ಲಿ ಸದಾಕಾಲವೂ ಮುಂಚೂಣಿಯಲ್ಲಿರುವ ಕಾರ್ತೀಕ್ ಸಾಹುಕಾರ್ ಅವರು ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆಯ ಹಾಲಿ ಗೌರವಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸುತ್ತಿರುವುದಲ್ಲದೇ, ತಾಲ್ಲೂಕ್ಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸ್ವತಃ ಉತ್ತಮ ಕ್ರೀಡಾಪಟುವಾಗಿದ್ದ ಕಾರ್ತಿಕ್ ಅವರು, ತಮ್ಮೂರಿನ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ರಾಜ್ಯಮಟ್ಟದ ವಾಲಿಬಾಲ್, ಕ್ರಿಕೆಟ್ ಪಂದ್ಯಾವಳಿಗಳಲ್ಲದೇ, ಗ್ರಾಮೀಣ ಕ್ರೀಡಾಕೂಟ,ಮತ್ತು ದಸರಾ ಕ್ರೀಡಾಕೂಟವನ್ನೂ ಆಯೋಜಿಸುವ ಮೂಲಕ, ಪ್ರತಿಭಾವಂತ ಮತ್ತು ಉಜ್ವಲ ಕ್ರೀಡಾಪಟುಗಳಿಗೆ ಆ ಕ್ರೀಡಾಕೂಟಗಳಲ್ಲಿ ಸ್ಪರ್ಧೆಸಿ ಅತ್ಯುತ್ತಮವಾದ ಅನುಭವ ದೊರಕಿಸಿಕೊಡುವಂತಹ ಉತ್ತಮ ವೇದಿಕೆಯನ್ನು ರೂಪಿಸಿಕೊಡುತ್ತಿದ್ದಾರೆ.

ಪ್ರಧಾನ ಮಂತ್ರಿಗಳ ಸ್ವಾಭಿಮಾನಿ ಮತ್ತು ಸ್ವಾವಲಂಭಿ (ಆತ್ಮನಿರ್ಭರ್) ಕರೆಯಡಿಯಲ್ಲಿ ಮಹಿಳಾ ಸಬಲೀಕರಣದ ಭಾಗವಾಗಿ ನೂರಕ್ಕೂ ಹೆಚ್ಚಿನ ಮಹಿಳೆಯರಿಗೆ ಟೈಲರಿಂಗ್ ತರಬೇತಿಯನ್ನು ಉಚಿತವಾಗಿ ನಡೆಸಿ ತಮ್ಮ ಸಂಸಾರದ ನೊಗವನ್ನು ಹೊರುವಂತೆ ಮಾಡಿದ್ದಾರೆ. ಅದೇ ರೈತರಿಗೆ ನೆರವಾಗಲು ಆಧುನಿಕ ಕೃಷಿ ಪದ್ದತಿಯ ತರಭೇತಿ ಮತ್ತು ಉಚಿತವಾಗಿ ಸಾವಿರಾರು ತೋಟಗಾರಿಕೆ ಸಸಿಗಳ ವಿತರಣೆಯನ್ನು ಮಾಡುವ ಮೂಲಕ ರೈತರ ಬಾಳನ್ನು ಹಸನು ಮಾಡುತ್ತಿದ್ದಾರೆ.

ಪ್ರಸ್ತುತ, ಆನವಟ್ಟಿ ತಾಲ್ಲೂಕು ಹೋರಾಟ ಸಮಿತಿಯ ಕಾರ್ಯದರ್ಶಿಯಾಗಿ, ಸದ್ಯಕ್ಕೆ ಹೋಬಳಿ ಕೇಂದ್ರವಾದ ಆನವಟ್ಟಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಸ್ಥಳೀಯರ ಬೆಂಬಲದೊಂದಿಗೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಇಷ್ಟೇಲ್ಲಾ ಸಾಧನೆಗಳನ್ನು ಮಾಡಿರುವ ಮತ್ತು ಇನ್ನೂ ಹತ್ತು ಹಲವಾರು ಸಮಾಜಮುಖೀ ಕಾರ್ಯಗಳ ಕನಸುಗಳನ್ನು ಕಟ್ಟಿ ಕೊಂಡಿರುವ, ಒಮ್ಮೆ ನಿರ್ಧರಿಸಿದ ಕೆಲಸವನ್ನು ಅತ್ಯುತ್ತಮವಾದ ರೀತಿಯಲ್ಲಿ ಸಾಧಿಸಿಯೇ ತೀರುವ ಛಲದಂಕಮಲ್ಲರಾಗಿರುವ ಕಾರಣದಿಂದಲೇ ಕಾರ್ತಿಕ್ ಸಾಹುಕಾರ್ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?

6 thoughts on “ಕಾರ್ತಿಕ್ ಸಾಹುಕಾರ್

  1. My school is best school and who sir send this information tanks and i appreciate my school and i appreciate my teachers​ and students​ and my friends because my school gives us opportunity for all tank you

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s