ಬಾಲ್ಯ, ಪ್ರೌಢ, ಯೌವನ ಮತ್ತು ವೃದ್ದಾಪ್ಯಗಳು ನಮ್ಮ ಪಯಣದಲ್ಲಿ ಬರುವ ನಿಲ್ದಾಣಗಳು.
ಈ ಸುದೀರ್ಘ ಪಯಣದಲಿ, ನಮ್ಮೊಂದಿಗೆ ಬಂದು ಹೋಗುವ ಬಂಧು-ಮಿತ್ರರೆಲ್ಲರೂ, ಸಹ ಪ್ರಯಾಣಿಕ ರಾಗಿ, ಅವರವರ ನಿಲ್ದಾಣಗಳು ಬಂದಾಗ ನಮ್ಮೀ ಬೋಗಿಯಿಂದ ಇಳಿದು ಹೋಗುವರು.
ಆದರೆ, ನಮ್ಮೀ ಭೋಗಿಯನ್ನು ಸರಾಗವಾಗಿ ಎಳೆದುಕೊಂಡು ಹೋಗುವ ಇಂಜಿನ್ಗಳು, ಬಾಲ್ಯ ಮತ್ತು ಪ್ರೌಢಾವಸ್ಥೆಯಲ್ಲಿ ತಂದೆ-ತಾಯಿಯರಾದರೇ, ಯೌವ್ವನದಲ್ಲಿ, ಬಾಳಸಂಗಾತಿ ಮತ್ತು ವೃದ್ಧಾಪ್ಯದಲ್ಲಿ ಮಕ್ಕಳುಗಳು.
ಈ ಎಂಜೀನ್‌ಗಳು ಸ್ವಲ್ಪ ಆಚೀಚೆಯಾದರೂ ನಮ್ಮ ಪಯಣ ಹಳಿ ತಪ್ಪುವುದು ಖಂಡಿತವಾಗಿಯೂ ನಿಶ್ಚಿತ.
ಆ ಇಂಜೀನ್ ಸರಿ ಇಲ್ಲದಿದ್ದಲ್ಲಿ ನಮ್ಮ ಭೋಗಿಯನ್ನು ರೈಲು ನಿಲ್ದಾಣದ ಬದಿಯೊಂದಕ್ಕೆ ತಳ್ಳಿ ಉಳಿದ ಗಾಡಿಗಳು, ಹಳಿಗಳ ಮೇಲೆ ನೆಮ್ಮದಿಯ ಪಯಣ ನಡೆಸುತ್ತಿರುತ್ತವೆ.

ಕಳೆದ 22 ವರ್ಷಗಳಿಂದಲೂ, ನನ್ನೀ ಬೋಗಿಗೆ ಕಿಂಚಿತ್ ಲೋಪವೂ ಬಾರದಂತೆ, ಇಳಿಜಾರಿನಲ್ಲಿ ಎಚ್ಚರಿಕೆಯಿಂದಲೂ, ಕಷ್ಟಗಳೆಂಬ ಕಠಿಣ ರಸ್ತೆಯಲ್ಲಿ ಹೆಚ್ಚಿನ ಶ್ರಮವಹಿಸಿಯೂ, ಉಳಿದಂತೆ ಸರಾಗವಾಗಿಯೂ, ಮುನ್ನಡೆಸಿಕೊಂಡು ಹೋಗುತ್ತಿರುವ ನನ್ನ ಬಾಳಸಂಗಾತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.
ನಮ್ಮೀ ಅವಿನಾಭಾವ ಸಂಬಂಧ ಮತ್ತು ಅನುಬಂಧಕ್ಕೆ ಯಾವುದೇ, ಯಾರದ್ದೇ ಆದ ಅಡ್ಡಿ ಆತಂಕಗಳು ಬಾರದೇ ಇನ್ನೂ ಹತ್ತಾರು ವರ್ಷಗಳು, ಸುದೀರ್ಘವಾಗಿ ಮತ್ತು ನೆಮ್ಮದಿಯಾಗಿ ಸಾಗುವಂತಾಗಲು ನಿಮ್ಮೆಲ್ಲರ ಶುಭ-ಹಾರೈಕೆಗಳೆಂಬ ಇಂಧನದ ಅವಶ್ಯಕತೆ ನಮಗಿದೆ.
ಸಕಾಲದಲ್ಲಿ, ಸರಿಯಾದ ಪ್ರಮಾಣದಲ್ಲಿ ನಿಮ್ಮೆಲ್ಲರ ಶುಭ ಹಾರೈಕೆಗಳು ನಮ್ಮಿಬ್ಬರ ಮೇಲಿದ್ದು, ಇಂಧನದ ಕೊರತೆಯಾಗದಂತೆ ಮುನ್ನಡೆಸಿಕೊಂಡು ಹೋಗುವ ಗುರುತರ ಜವಾಬ್ದಾರಿ ನಿಮ್ಮದಾಗಿದ್ದು ಅದನ್ನು ನೀವು ಸಮರ್ಥವಾಗಿ ನಿಭಾಯಿಸುತ್ತೀರಿ ಎಂಬ ಆಶಯ ನಮ್ಮದಾಗಿದೆ.

ಮಮತ (ಮಂಜಳ) ಎಂಬ ಹೆಸರಿಗೆ ಅನ್ವರ್ಥದಂತೆ ಮಮತಾಮಯಿ ಆದ ನಿನಗೆ ಮತ್ತು ನಿನ್ನೀ ನಿಸ್ವಾರ್ಥ ಕಾಳಜಿಗೆ ಕೃತಜ್ಞತೆಗಳನ್ನು ಹೇಗೆ ತಿಳಿಸುವುದೆಂದು ತಿಳಿಯಲಾರದೇ ಈ ಒಂದೆರಡು ಸಾಲುಗಳನ್ನು ಪ್ರೀತಿಯಿಂದ ಗೀಚಿದ್ದೇನೆ.
ಆಸ್ತಿಗೆ ಬೆಲೆ ಕಟ್ಟಬಹುದು. ಆದರೆ ನಿನ್ನ ಪ್ರೀತಿಗೆ ಬೆಲೆ ಕಟ್ಟಲಾಗದು ಮತ್ತು ಕಟ್ಟಲೂ ಬಾರದು.ಅಲ್ವೇ?
ಏನಂತೀರೀ?