ಪಂಚಾಯತ್ ರಾಜ್ ಹರಿಕಾರ ಅಬ್ದುಲ್ ನಜೀರ್ ಸಾಬ್

ರಾಜ್ಯದಲ್ಲಿ ಈಗ ಪಂಚಾಯತಿ ಚುನಾವಣೆ ನಡೆಸುವುದಕ್ಕೆ ಸರ್ಕಾರ ಮತ್ತು ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೇ ಕೇವಲ ರಾಜ್ಯದಲ್ಲೇಕೇ, ಇಡೀ ರಾಷ್ಟ್ರದಲ್ಲಿಯೇ ಗ್ರಾಮೀಣ ಮಟ್ಟಕ್ಕೆ ಅಧಿಕಾರವನ್ನು ವಿಕೇಂದ್ರೀಕರಿಸಿದ ಹಿಂದಿರುವ ಕಥೆ ಬಲು ರೋಚಕವಾಗಿದೆ. ಅದು 1983, ಕರ್ನಾಟಕದ ರಾಜಕೀಯದಲ್ಲಿ ಬದಲಾವಣೆಯ ಪರ್ವ. ಸುಮಾರು 35-37 ವರ್ಷಗಳ ಕಾಲ ಕಾಂಗ್ರೇಸ್ ಆಡಳಿತದಿಂದ ಬೇಸತ್ತಿದ್ದ ಕನ್ನಡಿಗರು ಮೊತ್ತ ಮೊದಲ ಬಾರಿಗೆ ಕಾಂಗ್ರೇಸ್ಸನ್ನು ಧಿಕ್ಕರಿಸಿ, ಜನತಾ ಪಕ್ಷ + ಕ್ರಾಂತಿರಂಗ= ಜನತಾರಂಗವನ್ನು ಬೆಂಬಲಿಸಿದ ಪರಿಣಾಮ ಕರ್ನಾಟಕದಲ್ಲಿ ಪ್ರಪಥಮ ಬಾರಿಗೆ , ಬಿಜೆಪಿಯ ಬಾಹ್ಯ ಬೆಂಬಲದೊಂದಿಗೆ, ರಾಜ್ಯ ಕಂಡ ಅತ್ಯಂತ ಚಾಣಾಕ್ಷ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ನೇತೃತ್ವದಲ್ಲಿ ಕಾಂಗ್ರೇಸ್ಸೇತರ ಸರ್ಕಾರ ಆಡಳಿತಕ್ಕೆ ಬಂದ್ದಿತ್ತು. ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟಿದ್ದ ಕ್ರಾಂತಿರಂಗದ ಬಂಗಾರಪ್ಪ ನಿರಾಶರಾಗಿ ಸರ್ಕಾರದಿಂದ ದೂರ ಉಳಿದಾಗ ಕ್ರಾಂತಿರಂಗದ ಮತ್ತೊಬ್ಬ ಹಿರಿಯರಿಗೆ ಕೇಳಿದ ಖಾತೆಯ ಮಂತ್ರಿಗಿರಿ ಸಿಗುತ್ತಿತ್ತಾದರೂ, ಅವರು ಬಯಸೀ ಬಯಸೀ, ಯಾರೂ ಇಚ್ಛೆ ಪಡದ ಖಾತೆಯಾದ ಪಂಚಾಯತ್‌ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಖಾತೆಯನ್ನು ಕೇಳಿ ಪಡೆದದ್ದಲ್ಲದೇ, ಆ ಖಾತೆಯ ಮೂಲಕವೇ ಜನಸಾಮಾನ್ಯರಿಗೆ ಅದ್ಭುತ ಸೇವೆಯನ್ನು ಮಾಡಿ ಎಲ್ಲರೂ ಮೂಗಿನ ಮೇಲೆ ಬೆರೆಳಿಡುವಂತೆ ಮಾಡಿದ್ದಲ್ಲದೇ ಇಂದಿಗೂ ಹಳ್ಳಿಗಾಡಿನಲ್ಲಿ ಅವರ ಸೇವೆಯಿಂದಾಗಿ ನೀರ್ ಸಾಬ್ ಎಂದೇ ಪ್ರಖ್ಯಾತರಾಗಿರುವ ಅಬ್ದುಲ್ ನಜೀರ್ ಸಾಬ್ ಅವರು ನಮ್ಮ ಇಂದಿನ ಕನ್ನಡದ ಕಲಿಗಳು ಕಥಾನಾಯಕರು.

ಮೈಸೂರು ಜಿಲ್ಲೆಯ ಗುಂಡ್ಲುಪೇಟೆಯವರಾದ ಅಬ್ದುಲ್ ನಜೀರ್ ಸಾಬ್, 25 ಡಿಸೆಂಬರ್ 1932, ತಮಿಳು ನಾಡಿನ ಬಯನಾಪುರಂ ಎಂಬಲ್ಲಿ ಜನಿಸಿದರೂ ಬೆಳೆದದ್ದೆಲ್ಲಾ ಗುಂಡ್ಲುಪೇಟೆಯಲ್ಲಿಯೇ. ಮನೆಯ ಆರ್ಥಿಕ ದುಸ್ಥಿತಿಯ ಪರಿಣಾಮವಾಗಿ ಹೈಸ್ಕೂಲ್ ವರೆಗೂ ಓದಿದ್ದ ನಜೀರ್ ಸಾಬ್, ಕೃಷಿ ಕಾರ್ಮಿಕರನ್ನು ಸಂಘಟಿಸುವುದು ಮತ್ತು ದೀನ ದಲಿತರ ಉನ್ನತಿಗಾಗಿ ಕೆಲಸ ಮಾಡುತ್ತಲೇ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದರು. ಗುಂಡ್ಲು ಪೇಟೆಯ ಅಂದಿನ ಶಾಸಕಿಯಾಗಿದ್ದ ಕೆ.ಎಸ್ ನಾಗತ್ನಮ್ಮ ಅವರ ಗರಡಿಯಲ್ಲಿಯೇ ಪಳಗಿ ,ಗುಂಡ್ಲು ಪೇಟೆ ಪಟ್ಟಣದ ಮುನ್ಸಿಪಲ್ ಕೌನ್ಸಿಲರ್ ಆಗಿ ನಂತರ ಅಧ್ಯಕ್ಷರು ಆಗಿ, ಕ್ರಾಂಗ್ರೇಸ್ ಪಕ್ಷದ ಕಟ್ಟಾಳುವಾಗಿದ್ದರು. ಆಗ ಕಾಂಗ್ರೇಸ್ಸಿನಲ್ಲಿ ಕೋಲಾರದ ಶ್ರೀನಿವಾಸಪುರದ ರಮೇಶ್ ಕುಮಾರ್ ಮತ್ತು ಆಂಧ್ರ ಮೂಲದವರಾಗಿದ್ದರೂ ಬೆಂಗಳೂರಿನ ಮಲ್ಲೇಶ್ವರದ ಶಾಸಕರಾಗಿದ್ದ ರಘುಪತಿ ಮತ್ತು ನಜೀರ್ ಸಾಬ್ ಅಮರ್ ಅಕ್ವರ್ ಆಂಥೋಣಿಯವರಂತೆ ತ್ರಿಮೂರ್ತಿಗಳೆಂದೇ ಖ್ಯಾತರಾಗಿದ್ದರು.. ಇನ್ನೂ ಬಿಸಿರಕ್ತದ ಚುರುಕಾದ ಆ ಯುವಕರ ಬಗ್ಗೆ, ಅದೇಕೋ ಏನೋ ಕಾಂಗ್ರೇಸ್ ಆಸಕ್ತಿ ತೋರದೇ, ಮೂಲೆ ಗುಂಪು ಮಾಡಿತ್ತು. ಸಾಮಾನ್ಯವಾಗಿ ಯಾವ ರಾಜಕಾರಣಿಗಳನ್ನೂ ಹೊಗಳದ ಲಂಕೇಶ್ ರವರು ತಮ್ಮ ಪತ್ರಿಕೆಯಲ್ಲಿ ನಜೀರ್ ಸಾಬ್ ಅವರ ವ್ಯಕ್ತಿತ್ವದ ಬಗ್ಗೆ ಒಂದು ವಾಸ್ತವಿಕ ಚಿತ್ರಣದ ಲೇಖನವೊಂದನ್ನು ಬರೆದು ಅದಕ್ಕೆ ನೀಡಿದ್ದ ಶೀರ್ಷಿಕೆ ಕಾಂಗೈ ಕೊಚ್ಚೆಯಲ್ಲೊಂದು ಕಮಲ – ನಜೀರ್ ಸಾಬ್‌ ಎಂಬುದು ಎಷ್ಟು ಅರ್ಥಗರ್ಭಿತವಾಗಿತ್ತು ಎಂದೆನಿಸುತ್ತದೆ.

ಮುಂದೆ ಇಂದಿರಾಗಾಂಧಿಯವರೊಂದಿಗಿನ ಭಿನ್ನಾಭಿಪ್ರಾಯದಿಂದ ದೇವರಾಜ ಅರಸು ರವರು ಕ್ರಾಂಗ್ರೇಸ್ಸಿನಿಂದ ಹೊರಬಂದು ಶ್ರೀ ಬಂಗಾರಪ್ಪನವರ ಸಹಕಾರದೊಂದಿಗೆ ಕ್ರಾಂತಿರಂಗ ಪಕ್ಷವನ್ನು ಕಟ್ಟಿದಾಗ ನಜೀರ್ ಸಾಬ್ ಆರಸು ಅವರನ್ನೇ ಅನುಸರಿಸಿ, ಅರಸು ಅವರ ನಿಧನರಾದ ನಂತರ ಕ್ರಾಂತ್ರಿರಂಗದ ಅಧ್ಯಕ್ಷರೂ ಆಗಿದ್ದರು. 1983ರಲ್ಲಿ ಜನತಾ-ರಂಗದ ಭಾಗವಾಗಿ ಹೆಗಡೆ ಸರ್ಕಾರದ ಮಂತ್ರಿಗಳಾಗಿದ್ದು ಈಗ ಇತಿಹಾಸ.

ಗ್ರಾಮೀಣಾಭಿವೃದ್ಧಿ ‍ಸಚಿವರಾಗಿ ಅಧಿಕಾರವಹಿಸಿಕೊಂಡು ಮೈಮರೆಯದೇ ತಕ್ಷಣವೇ ಕಾರ್ಯ ಪ್ರವೃತ್ತರಾಗಿ, ಆ ಸಮಯದಲ್ಲಿ ನಾಡಿನಾದ್ಯಂತ ಸುಮಾರು ಮೂರ್ನಾಲ್ಕು ವರ್ಷಗಳ ಕಾಲ ಸರಿಯಾಗಿ ಮಳೆಯೂ ಬಾರದೇ ಬರಗಾಲದಿಂದ ಕೆರೆ ಕಟ್ಟೆ, ಭಾವಿಗಳೆಲ್ಲವೂ ಬರಿದಾಗಿ ಕುಡಿಯಲೂ ನೀರಿಲ್ಲದಿದ್ದಂತಹ ಪರಿಸ್ಥಿತಿ ಇದ್ದದ್ದನ್ನು ಗಮನಿಸಿ ಕೂಡಲೇ ಸರ್ಕಾರದ ವತಿಯಿಂದ ಅಂತಹ ಪ್ರತೀ ಬರದ ಪೀಡಿತ ಹಳ್ಳಿಗಳಲ್ಲಿಯೂ ಕೊಳವೇ ಭಾವಿಗಳನ್ನು ಕೊರೆಸಿ, ಕೈ ಪಂಪ್ ಹಾಕಿಸಿ ಕೊಡುವ ಮೂಲಕ ಜನರಿಗೆ ನೀರನ್ನು ಒದಗಿಸಿದ ಆಧುನಿಕ ಭಗೀರಥ ಎಂದೆನಿಸಿದ ಕಾರಣ ಜನರು ಅವರನ್ನು ನೀರ್ ಸಾಬ್ ಎಂದೇ ಪ್ರೀತಿಯಿಂದ ಕರೆಯತೊಡಗಿದರು.

ಹೇಳೀ ಕೇಳೀ ಭಾರತ ಕೃಷಿ ಪ್ರಧಾನವಾಗಿರುವ ಹಳ್ಳಿಗಳಿಂದ ಕೂಡಿರುವ ರಾಷ್ಟ್ರ. ಬ್ರಿಟೀಷರು ನಮ್ಮನ್ನು ಆಕ್ರಮಿಸಿಕೊಳ್ಳುವವರೆಗೂ ಬಹುತೇಕ ಹಳ್ಳಿಗಳ ಆಡಳಿತ ಆಯಾಯಾ ಪಂಚಾಯ್ತಿ ಕಟ್ಟೆಗಳಲ್ಲಿಯೇ ಮುಗಿದು ಹೋಗುತ್ತಿತ್ತು. ಆದರೇ ಬದಲಾದ ರಾಜಕೀಯ ಕಾರಣಗಳಿಂದಾಗಿ, ಪ್ರಜಾಪ್ರಭುತ್ವ ಬಂದರೂ ಆಡಳಿತವೆಲ್ಲವೂ ಹಳ್ಳಿಯಿಂದ ಕೈ ಜಾರಿ ದಿಲ್ಲಿಯಲ್ಲಿ ಕೇಂದ್ರೀಕೃತವಾಗಿತ್ತು. ಬಡತನ ಮತ್ತು ಶೋಷಣೆಗಳನ್ನು ಖುದ್ದಾಗಿ ಅನುಭವಿಸಿದ್ದ ಸಮಾಜವಾದಿ ಹಿನ್ನಲೆಯುಳ್ಳ ನಜೀರ್ ಸಾಬ್ ತಾವು ಅಧಿಕಾರ ವಹಿಸಿಕೊಂಡ ಕೂಡಲೇ ಮಹಾತ್ಮಾ ಗಾಂಧಿಯವರ ಕನಸಿನ ಕೂಸಾಗಿದ್ದ ಸ್ವರಾಜ್ಯ ಕಲ್ಪನೆಯ ಭಾಗವಾಗಿ ಗ್ರಾಮ ಪಂಚಾಯಿತಿ ಮತ್ತು ಮಂಡಲ ಪಂಚಾಯಿತಿಯನ್ನು ಭಾರೀ ವಿರೋಧಗಳನ್ನು ಎದುರಿಸಿಯೂ ಜಾರಿಗೆ ತರುವ ಮೂಲಕ ಅಧಿಕಾರವನ್ನು ಪುನಃ ಹಳ್ಳಿಗಳತ್ತ ತರುವುದರಲ್ಲಿ ಯಶಸ್ವಿಯಾದರು.

ಜನ್ಮತಃ ಮುಸ್ಲಿಂ ಆಗಿದ್ದರೂ, ಹಿಂದೂಗಳೊಂದಿಗೆ ಬಹಳ ಸ್ನೇಹ ಸೌಹಾರ್ದಗಳೊಂದಿಗೆ ಗೌರವಾದರಗಳನ್ನು ಪಡೆದುಕೊಂಡು ನಿಜವಾದ ಅರ್ಥದಲ್ಲಿ ಅಪರೂಪದ ಜಾತ್ಯತೀತ ವ್ಯಕ್ತಿಯಾಗಿದ್ದರು. ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ತೀವ್ರ ಕೊರತೆಯನ್ನು ಎದುರಿಸುತ್ತಿರುವಾಗ ರಾಜ್ಯದಾದ್ಯಂತ ಕೊಳವೇ ಭಾವಿ‌ಗಳನ್ನು ತೆಗೆಸಿದ್ದನ್ನೇ ಮುಂದು ಮಾಡಿಕೊಂಡು ಬಹಳಷ್ಟು ಜನರು ತಮ್ಮಷ್ಟಕ್ಕೆ ತಾವು ಎಗ್ಗಿಲ್ಲದೇ ಕೊಳವೇ ಭಾವಿ‌ಗಳನ್ನು ತೆಗೆಸಿ ಅಂತರ್ಜಲ ಬರಿದು ಮಾಡುತ್ತಿರುವುದನ್ನು ಗಮನಿಸಿದ ನಜೀರ್ ಸಾಬ್, ಎರಡು ಬೋರ್‌ವೆಲ್‌ಗಳ ನಡುವೆ ಕಡ್ಡಾಯವಾಗಿ 500 ಮೀಟರ್ ಗಳ ಅಂತರವನ್ನು ಕಾಪಾಡಿಕೊಳ್ಳಬೇಕು ಎಂಬ ಕಾನೂನನ್ನು ಜಾರಿಗೆ ತಂದು ಅಂತರ್ಜಲದ ಬಗ್ಗೆ ಕಾಳಜಿ ವಹಿಸಿದ್ದರು.

ನಜೀರ್ ಸಾಬ್ ಅಂತಿಮ ದಿನಗಳು ಬಹಳ ಯಾತನಾಮಯವಾಗಿತ್ತು. ಪುಪ್ಪುಸ ಕ್ಯಾನ್ಸರ್ ನಿಂದ ಉಲ್ಬಣಾವಸ್ಥೆಗೆ ತಲುಪಿದ್ದ ನಜೀರ್ ಸಾಬ್ ಕಿಡ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರು ಸಹಾ ಅವರು ಹೆಚ್ಚು ದಿನ ಬದುಕುವುದಿಲ್ಲ ಎಂದು ತಿಳಿಸಿದ್ದ ಕಾರಣ ಅವರ ಬಹುತೇಕ ಸಂಬಂಧಿಗಳು ಮತ್ತು ಹಿತೈಷಿಗಳು ನೋಡಿಕೊಂಡು ಹೋಗಲು ಆಸ್ಪತ್ರೆಗೆ ಬರುತ್ತಿದ್ದರು. ಇಡೀ ರಾಷ್ಟ್ರಕ್ಕೆ ಮಾದರಿಯಾಗಬಲ್ಲ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ಜಾರಿ ತಂದಿದ್ದನ್ನು ನೋಡಿ ಸಂತೋಷವಾಗಿದ್ದ ಅಂದಿನ ಪ್ರಧಾನಿಗಳಾಗಿದ್ದ ರಾಜೀವ್ ಗಾಂಧಿಯವರು ನಜೀರ್ ಸಾಬ್ ಅವರ ಆರೋಗ್ಯವನ್ನು ವಿಚಾರಿಸಲು ಅವರ ಆಪ್ತ ಮಿತ್ರ ಸ್ಯಾಮ್ ಪಿತ್ರೋಡ ಅವರನ್ನು ಕಳುಹಿಸಿದ್ದರು. ಅದೇ ಸಮಯದಲ್ಲಿ ಒಂದಿಬ್ಬರು ಪ್ರಗತಿ ಪರರೂ ಆಸ್ಪತ್ರೆಗೆ ಬಂದಿದ್ದು ಅವರು ಏನು ಸಾಹೇಬ್ರೇ ನಿಮ್ಮ ಆರೋಗ್ಯ ಹೇಗಿದೆ? ಎಂದು ವಿಚಾರಿಸಿದಾಗ, ಕ್ಯಾನ್ಸರಿನಿಂದ ವಿಷಮಸ್ಥಿತಿಯನ್ನು ತಲುಪಿದ್ದ ಸಮಯದಲ್ಲೂ, ನನ್ನ ಆರೋಗ್ಯದ ವಿಚಾರ ಬಿಡಿ. ಈ ವರ್ಷ ರಾಜ್ಯದಲ್ಲಿ ಸಿಕ್ಕಾಪಟ್ಟೆ ಮಳೆ ಸುರಿದು ರಾಜ್ಯದಲ್ಲೆಲ್ಲಾ ಬಹುತೇಕ ಕೆರೆಗಳು ತುಂಬಿ ತುಳುಕುತ್ತಿರುವ ಕಾರಣ, ಚೀನಾದಿಂದ ಒಳನಾಡು ಮೀನುಗಾರಿಕೆಯ ಹೊಸ ವಿಧಾನಗಳ ಕುರಿತಂತೆ ಮಾಹಿತಿ ಪಡೆದು ಬ್ಲೂಪ್ರಿಂಟ್ ಮಾಡಿಸ್ತಾ ಇದ್ದೀನಿ. ಅದು ಆದಷ್ಟು ಬೇಗ ಜಾರಿಗೆಯಾಗಿ ನಮ್ಮ ಹಳ್ಳಿಗಾಡಿನ ರೈತರಿಗೆ ನೆಮ್ಮದಿ ತರಲಿ ಅನ್ನೋದೆ ನನ್ನ ಉದ್ದೇಶ ಎಂದಿದ್ದರಂತೆ.

ಸಾವಿಗೆ ಒಂದೆರಡು ಗಂಟೆಗಳ ಮುಂಚೆ ಆ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಎಸ್. ಆರ್. ಬೊಮ್ಮಾಯಿಯವರು ಕೆಲ ಸಚಿವರೊಂದಿಗೆ ನಜೀರ್ ಸಾಬ್ ಆವರ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಲು ಬಂದು, ಉಭಯ ಕುಶಲೋಪರಿ ವಿ‍ಚಾರಿಸಿದ ನಂತರ ನಜೀರ್ ಸಾಬ್ ಅವರ ಹೆಗಲು ಮೇಲೆ ಕೈಇರಿಸಿ, ಸಾಹೇಬ್ರೇ ನೀವೇನೂ ಕಾಳಜಿ ಮಾಡಿಕೊಳ್ಳಬೇಡಿ, ಇಲ್ಲಿನ ಒಳ್ಳೆಯ ಔಷಧೋಪಚಾರದಿಂದ ಅತೀ ಶೀಘ್ರವಾಗಿಯೇ ಗುಣಮುಖರಾಗುತ್ತೀರಿ. ನಿಮಗೇನಾದರೂ ಸಮಸ್ಯೆ ಇದ್ದಲ್ಲಿ ನನ್ನೊಂದಿಗೆ ಹೇಳಿ, ನಾನು ಪರಿಹರಿಸುತ್ತೇನೆ ಎಂದು ಹೇಳಿದಾಗ ನಜೀರ್ ಸಾಬ್ ಅವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಾರದಿದ್ದಾಗ ಮತ್ತೊಮ್ಮೆ ಸ್ವಲ್ಪ ಎತ್ತರದ ಧ್ವನಿಯಲ್ಲಿ ಸಾಹೇಬ್ರೇ, ನಿಮ್ಮ ಕುಟುಂಬದಲ್ಲಿ ಯಾವುದಾದರೂ ಸಮಸ್ಯೆ ಇದ್ಯೇ? ಎಂದು ವಿಚಾರಿಸಿದಾಗ,

ತಮಗೆ ಹಾಕಿದ್ದ ಮಾಸ್ಕ್ ಸರಿಸಿ, ಸರ್, ನನ್ನ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇಲ್ಲ. ನಿರ್ವಸತಿಕರಿಗೆಂದು ಸಾವಿರ ಮನೆಗಳ ಹೊಸಾ ಕಾರ್ಯಕ್ರಮವೊಂದನ್ನು ರೂಪಿಸಿದ್ದೇನೆ. ಅದರಂತೆ ಪ್ರತೀ ತಾಲೂಕಿನ ಬಡವರಿಗೆ ವರ್ಷಕ್ಕೆ ಒಂದು ಸಾವಿರ ಮನೆಗಳನ್ನು ಕಟ್ಟಿಸಿತ್ತಾ ಹೋದ್ರೇ, ಇನ್ನೈದು ವರ್ಷಗಳಲ್ಲಿ ಇಡೀ ರಾಜ್ಯದ ವಸತಿರಹಿತರ ಸಮಸ್ಯೆಯೆ ಬಗೆಹರಿದು, ರಾಜ್ಯಕ್ಕೂ ಮತ್ತು ನಿಮಗೂ ಒಳ್ಳೆಯ ಹೆಸರು ಬರುತ್ತದೆ. ಇದಕ್ಕೆಂದೇ ಐರ್‌ಡಿಪಿಯಲ್ಲಿ ಹೆಚ್ಚುವರಿಯಾಗಿ ಮಿಕ್ಕಿರುವ 13 ಕೋಟಿ ರೂಪಾಯಿಗಳನ್ನು ಬಳಸಿಕೊಂಡು ಆದಷ್ಟು ಬೇಗನೇ ಕೆಲಸ ಶುರು ಮಾಡಿಸಿ ಬಿಡಿ ನಮ್ಮ ಸರಕಾರಕ್ಕೆ ಪುಣ್ಯ ಬರುತ್ತದೆ ಎಂದ್ದಿದ್ದರಂತೆ.

ಇಂದೋ ನಾಳೆಯೋ ಸಾವಿನ ಮನೆಯ ಕದ ತಟ್ಟುತ್ತಿದ್ದ ವ್ಯಕ್ತಿಯು ಸ್ವಂತಕ್ಕೇನೂ ಕೇಳದೇ, ನಾಡಿನ ವಸತಿ ರಹಿತರಿಗೋಸ್ಕರ ಮನೆಕಟ್ಟಿಸಿ ಕೊಡಬೇಕೆಂಬ ಕೋರಿಕೆ ಕೇಳಿದ ಮುಖ್ಯಮಂತ್ರಿಗಳು ಮತ್ತು ನಜೀರ್ ಸಾಹೇಬರ ರಾಜಕೀಯ ಒಡನಾಡಿಗಳಾದ ರಮೇಶ್ ಕುಮಾರ್ ಮತ್ತು ಎಂ.ರಘುಪತಿ, ಪತ್ರಕರ್ತ ಮಿತ್ರರಾದ ಇಮ್ರಾನ್ ಖುರೇಶಿ,ಇ.ರಾಘವನ್ ಮತ್ತು ರವೀಂದ್ರ ರೇಷ್ಮೆಯವರು ಮಮ್ಮಲ ಮರುಗಿದ್ದರೆ, ರ ಮುಖ್ಯಮಂತ್ರಿಗಳು ಕೊಠಡಿಯಿಂದ ಹೊರಬಂದು ಚಿಕ್ಕ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟಿದ್ದರಂತೆ. ಈ ಘಟನೆ ನಡೆದ ಒಂದೆರಡು ಗಂಟೆಗಳಲ್ಲಿಯೇ ಅತ್ಯಂತ ಕ್ರಿಯಾಶೀಲ ಹಾಗೂ ಮಾನವೀಯ ಸಂವೇದನೆಯುಳ್ಳ, ಪ್ರಾಮಾಣಿಕ ರಾಜಕಾರಣಿ ನಜೀರ್ ಸಾಬ್ ಮತ್ತೆ ಬಾರದ ಲೋಕಕ್ಕೆ ಹೋಗಿಬಿಟ್ಟರು.

ನಜೀರ ಸಾಬ್ ಅವರ ನಿಧನರಾದ ನಂತರ 1989ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಪಕ್ಷಭೇದವೆಣಿಸದೆ ಅತ್ಯಂತ ಪ್ರಾಂಜಲ ಮನಸ್ಸಿನಿಂದ ಸಂಸತ್ತಿನಲ್ಲಿ ಸಂವಿಧಾನದ 64ನೇ ತಿದ್ದುಪಡಿ ಮಸೂದೆಯನ್ನು ಮಂಡಿಸಿ, ಇದು ಕರ್ನಾಟಕದ ಜನತಾದಳ ರಾಜ್ಯ ಸರಕಾರದ ಮಾದರಿ ಎಂದು ತಿಳಿಸಿದ್ದರು. ಕಾರಣಾಂತರಗಳಿಂದ ಆಗ ಆ ಮಸೂದೆ ಅಂಗಿತವಾಗದಿದ್ದರೂ, ನಂತರ ಪಿ.ವಿ. ನರಸಿಂಹರಾವ್ ಸರ್ಕಾರದಲ್ಲಿ ಸಂವಿಧಾನದ 73ನೇ ಹಾಗೂ 74ನೇ ತಿದ್ದುಪಡಿಕಾಯ್ದೆಗಳು ನಜೀರ್ ಸಾಬ್ ರಾಜ್ಯದಲ್ಲಿ ತಂದ ಸುಧಾರಣೆಗಳು ಅಂದು ಇಡೀ ದೇಶಾದ್ಯಂತ ಜಾರಿಗೆಯಾಗಿ ನಜೀರ್ ಸಾಬ್ ಅವರ ಕನಸು ದೇಶಾದ್ಯಂತ ನನಸಾಯಿತು.

ನಜೀರ್ ಸಾಬ್ ಅವರ ನಿಧನರಾದ ನಂತರ ಅವರ ಹೆಸರು ಚಿರಸ್ಥಾಯಿಯಾಗಿರುವಂತೆ ಮಾಡಲು ಮೈಸೂರಿನಲ್ಲಿರುವ ರಾಜ್ಯ ಸರಕಾರದ ಆಡಳಿತ ತರಬೇತಿ ಸಂಸ್ಥೆಯ ಆವರಣದಲ್ಲಿ, ಅಂದಿನ ಮಹಾ ನಿರ್ದೇಶಕರಾಗಿದ್ದ ಐಎಎಸ್ ಅಧಿಕಾರಿ ಚಿರಂಜೀವಿಸಿಂಗ್ ಆವರ ಉಸ್ತುವಾರಿಯಲ್ಲಿ ಅಬ್ದುಲ್ ನಜೀರ್‌ಸಾಬ್ ‌ಗ್ರಾಮೀಣಾಭಿವೃದ್ಧಿ ಅಧ್ಯಯನ ಮತ್ತು ತರಬೇತಿ ಸಂಸ್ಥೆಯನ್ನು ಆರಂಭಿಸುವ ಮೂಲಕ ಗ್ರಾಮರಾಜ್ಯದ ಪರಿಕಲ್ಪನೆಗೆ ನಜೀರ ಸಾಬ್ ಅವರು ನೀಡಿದ ಕೊಡುಗೆಯ ಐತಿಹಾಸಿಕ ಸ್ಮಾರಕವನ್ನಾಗಿಸಿದರು.

ಸರಿ ಸುಮಾರು ಐದೂವರೆ ವರ್ಷಗಳ ಕಾಲ ರಾಜ್ಯದ ಮಂತ್ರಿಯಾಗಿ, ಅಧಿಕಾರ ವಿಕೇಂದ್ರೀಕರಣ ಮಾಡಿದ್ದಲ್ಲದ್ದೇ, ಬರ‌ ಪೀಡಿತ ಪ್ರದೇಶಗಳಲ್ಲಿ ಕೊಳವೇ ಭಾವಿಗಳನ್ನು ಕೊರೆಸಿ, ಜನರ ಬಾಯಾರಿಕೆಯನ್ನು ನಿವಾರಿಸಿದ ಆಧುನಿಕ ಭಗೀರಥ ಎನಿಸಿಕೊಂಡವರು. ಕೇವಲ ಮಂತ್ರಿಯಾಗಿಯೇ, ರಾಜ್ಯದ ಯಾವುದೇ ಮುಖ್ಯಮಂತ್ರಿಗಿಂತಲೂ ಹೆಚ್ಚಿನ ಜನ ಮನ್ನಣೆಯನ್ನು ಗಳಿಸಿದ್ದಲ್ಲದೇ, ಇಂದಿಗೂ ರಾಜ್ಯದ ಕೆಲವೆಡೆ ಕೊಳವೆ ಬಾವಿಯ ಹ್ಯಾಂಡ್ ಪಂಪಿನ ಮೇಲೆ ನಜೀರ್ ಸಾಬ್ ಕೃಪೆ ಎಂಬ ಕೆತ್ತನೆಯೊಂದಿಗೆ ಜನರ ಮನಗಳಲ್ಲಿ ಅಚ್ಚೊತ್ತಿರುವುದನ್ನು ಕಾಣಬಹುದು.

ಇಂತಹ ನಿಸ್ವಾರ್ಥ, ಅಪ್ಪಟ ಪ್ರಾಮಾಣಿಕ ರಾಜಕಾರಣಿಯಾಗಿಯೂ, ಅಪರೂಪದ ಜನಸೇವಕ ಮತ್ತು ಜನನಾಯಕರಾಗಿದ್ದ ನೀರ್ ಸಾಬ್ ಅರ್ಥಾತ್ ಅಬ್ದುಲ್ ನಜೀರ್ ಸಾಬ್ ಆವರು ನಮ್ಮ ಹೆಮ್ಮೆಯ ಕನ್ನಡ ಕಲಿಗಳೇ ಸರಿ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s