ಭಾರತೀಕಂಠ ಗಂಗೂಬಾಯಿ ಹಾನಗಲ್

ಅದೊಂದು ದೇವಾಲಯದಲ್ಲಿ ಸಂಗೀತ ಕಛೇರಿ ನಡೆಯುತ್ತಿತ್ತು. ದೇವಸ್ಥಾನದ ಆರ್ಚಕರು ಪೂಜೆ ಪುನಸ್ಕಾರಗಳಲ್ಲಿ ನಿರತರಾಗಿದ್ದ ಕಾರಣ ಖುದ್ದಾಗಿ ಸಂಗೀತ ಕಛೇರಿಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೂ ಕಛೇರಿಯಿಂದ ಸುಶ್ರಾವ್ಯವಾಗಿ ಗಂಡು ಧ್ವನಿಯಲ್ಲಿ ಕೇಳಿಬರುತ್ತಿದ್ದ ಸಂಗೀತವನ್ನು ಆಲಿಸುತ್ತಲೇ, ದೇವಸ್ಥಾನದ ಮಹಾಮಂಗಳಾರತಿ ಮುಗಿಸಿ ಸಂಗೀತ ಕಛೇರಿಗೆ ಬಂದು ನೋಡಿದರೆ, ಅಲ್ಲಿ ಹಾಡುತ್ತಿದ್ದವರು ಗಂಡಸಾಗಿಲ್ಲದೇ, ಹೆಂಗಸಾಗಿದ್ದಿದ್ದನ್ನು ನೋಡಿ ಆಶ್ವರ್ಯಚಕಿತರಾಗಿದ್ದರು. ಅಂತಹ ವೈಶಿಷ್ಟ್ಯವಾದ ಧ್ವನಿಯಲ್ಲಿ ಐದಾರು ದಶಕಗಳ ಕಾಲ ಹಿಂದೂಸ್ಥಾನೀ ಸಂಗೀತ ಪ್ರಿಯರ ಮನವನ್ನು ಗೆದ್ದಂತಹ ಶ್ರೀಮತಿ ಗಂಗೂಬಾಯಿ ಹಾನಗಲ್ ಅವರೇ ನಮ್ಮ ಕನ್ನಡದ ಕಲಿಗಳು ಮಾಲಿಕೆಯ ಇಂದಿನ ಕಥಾನಾಯಕಿ.

ಹಾನಗಲ್ಲಿನ ಚಿಕ್ಕೂರಾವ್ ನಾಡಗೀರ್ ಮತ್ತು ಅಂಬಾಬಾಯಿ ದಂಪತಿಗಳಿಗೆ 1915 ರ ಮಾರ್ಚ್ 5ರಂದು ಜನಿಸಿದ ಹೆಣ್ಣುಮಗುವಿಗೆ ಗಾಂಧಾರೀ ಎಂದು ಹೆಸರಿಸಿ ಪ್ರೀತಿಯಿಂದ ಗಂಗೂಬಾಯಿ ಎಂದು ಕರೆಯಲಾರಂಭಿಸಿದರು. ನಂತರ ಆವರ ಕುಟುಂಬ ಧಾರವಾಡಕ್ಕೆ ತಮ್ಮ ವಸತಿಯನ್ನು ಬದಲಿಸುತ್ತಾರೆ. ಈ ಕುಟುಂಬ ಹಾನಗಲ್ಲಿಗೆ ಬಂದಿದ್ದೇ ಒಂದು ರೋಚಕವಾದ ಕಥೆ. ಇವರ ಅಜ್ಜ ನರಗುಂದದ ಬಾಬಾಸಾಹೇಬರ ಆಳ್ವಿಕೆಯಲ್ಲಿ ಕೋರ್ಟಿನ ಮುನ್ಸೀಫರಾಗಿದ್ದಂತೆ. ಸ್ವಾತಂತ್ರ್ಯ ಸಮರದ ಸಮಯದಲ್ಲಿ ಬ್ರಿಟಿಷರು ಬಾಬಾಸಾಹೇಬರ ವಿರುದ್ಧ ಯುದ್ದವನ್ನು ಮಾಡಲು ಹೊರಟಾಗ ಇವರ ಕುಟುಂಬ ಬ್ರಿಟಿಷ್ ಸೈನಿಕರ ಕೈಸೆರೆಯಿಂದ ತಪ್ಪಿಸಿಕೊಂಡು, ಹಾನಗಲ್ಲಿಗೆ ಓಡಿ ಬಂದು ನೆಲೆಸಿದ ಕಾರಣ ಇವರ ಮನೆ ಹೆಸರು ಹಾನಗಲ್ ಎಂದಾಯಿತು.

ಗಂಗೂಬಾಯಿಯವರ ಪ್ರಾಥಮಿಕ ಶಿಕ್ಷಣ ಧಾರವಾಡದಲ್ಲಿ ಆಲೂರು ವೆಂಕಟರಾಯರು ಸ್ಥಾಪಿಸಿದ ರಾಷ್ಟ್ರೀಯ ಶಾಲೆಯಲ್ಲಿ ಐದನೆಯ ತರಗತಿಯಲ್ಲಿ ಓದಿದ್ದರು. ಆ ಶಾಲೆಯಲ್ಲಿ ವರಕವಿ ದ.ರಾ.ಬೇಂದ್ರೆಯವರು ಇವರ ಗುರುಗಳಾಗಿದ್ದ ಕಾರಣ, ಈ ಗುರು ಶಿಷ್ಯೆಯ ಸಂಬಂಧ ಬೇಂದ್ರೆಯವರ ಜೀವಿತಾವಧಿಯ ವರೆಗೂ ಮುಂದುವರಿಸಿಕೊಂಡು ಹೋಗಿದ್ದದ್ದು ಗಮನಾರ್ಹವಾಗಿತ್ತು.

ಗಂಗೂಬಾಯಿಯವರ ತಾಯಿ ಅಂಬಾಬಾಯಿಯವರು ಅತ್ಯುತ್ತಮವಾದ ಕರ್ನಾಟಕ ಸಂಗೀತದ ಗಾಯಕಿಯಾಗಿದ್ದರೂ ಅವರಿಗೆ ಹಿಂದೂಸ್ಥಾನಿ ಹಾಡುಗಾರಿಕೆಯ ಮೇಲೆ ಇಚ್ಛೆ ಇದ್ದ ಕಾರಣ ತಮ್ಮ ಮಗಳಿಗೆ ಉತ್ತಮವಾದ ಸಂಗೀತಭ್ಯಾಸವನ್ನು ಮಾಡಿಸಲೆಂದೇ ಅವರ ಕುಟುಂಬ ಹಾನಗಲ್ಲಿನಿಂದ ಧಾರವಾಡಕ್ಕೆ ವಾಸ್ತವ್ಯವನ್ನು ಬದಲಿಸಿದ್ದರು. ಖ್ಯಾತ ಹಿಂದುಸ್ತಾನಿ ಸಂಗೀತ ಗಾಯಕರಾದ ಹೀರಾಬಾಯಿ ಬಡೋದೆಕರ, ಅಬ್ದುಲ್ ಕರೀಮ ಖಾನರು ಧಾರವಾಡ ಮತ್ತು ಹುಬ್ಬಳ್ಳಿಗೆ ಬಂದ್ದಿದ್ದಾಗ, ಅಂಬಾಬಾಯಿಯವರ ಮನೆಗೆ ಬಂದು ಅವರ ಹಾಡುಗಾರಿಕೆ ಕೇಳುತ್ತಿದ್ದರು. ಅದೇ ಸಂದರ್ಭದಲ್ಲಿಯೇ ಪುಟ್ಟ ಹುಡುಗಿ ಗಂಗೂಬಾಯಿಯವರ ಮುದ್ದು ಮುದ್ದಾದ ಹಾಡುಗಾರಿಕೆಯನ್ನೂ ಮೆಚ್ಚಿ, ಈಕೆಗೆ ಶಾಸ್ತ್ರೀಯವಾಗಿ ಸಂಗೀತ ಕಲಿಸಿದಲ್ಲಿ ಉಜ್ವಲ ಭವಿಷ್ಯವಿದೆ ಎಂದು ಹರಸಿದ್ದರಂತೆ. ಹಾಗಾಗಿ ಬಾಲಕಿ ಗಂಗೂಬಾಯಿಯರಿಗೆ ಆರಂಭದಲ್ಲಿ ದತ್ತೋಪಂತ ದೇಸಾಯಿ ಮತ್ತು ಕೃಷ್ಣಾಚಾರ್ಯ ಹುಲಗೂರ ಇವರಿಂದ ಸಂಗೀತ ಶಿಕ್ಷಣ ಆರಂಭಿಸಿ, ಬಳಿಕ ಸುಪ್ರಸಿದ್ಧ ಕಿರಾನಾ ಘರಾನಾ ಗಾಯಕರಾದ ಸವಾಯಿ ಗಂಧರ್ವ ಅರ್ಥಾತ್ ರಾಮಭಾವು ಕುಂದಗೋಳಕರ ಅವರ ಶಿಷ್ಯೆಯಾಗಿ ಹಿಂದೂಸ್ಥಾನ ಸಂಗೀತದಲ್ಲಿ ಪ್ರಬುದ್ಧೆಯಾಗುತ್ತಿದ್ದ ಸಮಯದಲ್ಲಿ ತಮ್ಮ ಮಗಳಿಗೆ ತಮ್ಮ ಕರ್ನಾಟಕ ಸಂಗೀತ ಪದ್ಧತಿಯು ಪರಿಣಾಮ ಬೀರಬಾರದೆಂಬ ಉದ್ದೇಶದಿಂದ ಅಂಬಾಬಾಯಿಯವರು ಹಾಡುವದನ್ನೇ ನಿಲ್ಲಿಸಿದ್ದು ತಮ್ಮ ಮಗಳ ಮೇಲಿದ್ದ ಅಪರಿಮಿತ ಪ್ರೇಮವನ್ನು ತೋರಿಸುತ್ತದೆ.

1939ರಲ್ಲಿ ಇಂತಹ ತ್ಯಾಗಮಯಿ ತಾಯಿ ತೀರಿಕೊಂಡರೇ ಅದೇ ದುಃಖದಲ್ಲಿ ಕೆಲವೇ ತಿಂಗಳುಗಳ ಅಂತರದಲ್ಲಿ ಅವರ ತಂದೆಯನ್ನೂ ಕಳೆದುಕೊಂಡಾಗ ಅಗಲಿದ ತಂದೆತಾಯಿಯರಿಗೆ ಕನ್ಯಾದಾನದ ಪುಣ್ಯಫಲ ದೊರೆಯಲೆಂದು ಅದೇ ವರ್ಷದಲ್ಲಿಯೇ ಹುಬ್ಬಳ್ಳಿಯ ಗುರುನಾಥ ಕೌಲಗಿ ಎಂಬ ವಕೀಲರೊಂದಿಗೆ ಗಂಗೂಬಾಯಿಯವರ ವಿವಾಹವನ್ನು ಅವರ ಮಾವ ಮಾಡಿಸುತ್ತಾರೆ.

ಮದುವೆಯಾದ ನಂತರವೂ ತಮ್ಮ ಸಂಗೀತಾಭ್ಯಾಸವನ್ನು ಮುಗಿಸಿ ತಮ್ಮ ವಿಶಿಷ್ಟ ಮಾಧುರ್ಯದ ಕಂಠದಿಂದ ಸುಪ್ರಸಿದ್ಧರಾಗುತ್ತಿದ್ದಂತೇ, ಧಾರವಾಡದ ಆಕಾಶವಾಣಿಯೂ ಸೇರಿದಂತೆ ಎಲ್ಲೆಡೆಯಲ್ಲಿಯೂ ಆವರ ಖ್ಯಾತಿ ಹರಡಿ, ಖ್ಯಾತ ಎಚ್.ಎಮ್.ವಿ. ಗ್ರಾಮಾಫೋನ್ ಕಂಪನಿಯವರು ಗಂಗೂಬಾಯಿಯವರನ್ನು ಮುಂಬಯ್ಯಿಗೆ ಕರೆಸಿಕೊಳ್ಳುವ ಮೂಲಕ ಗಂಗೂಬಾಯಿಯವರ ಸಂಗೀತ ದಿಗ್ವಿಜಯ ಪ್ರಾರಂಭವಾಗುತ್ತದೆ. ಮುಂಬಯಿಯಲ್ಲಿ ನಾನಾ ಕಛೇರಿಗಳನ್ನು ನೀಡಿದ್ದಲ್ಲದೇ, ಮುಂಬಯಿ ಆಕಾಶವಾಣಿಯಲ್ಲಿಯೂ ಹಾಡತೊಡಗುತ್ತಾರೆ. ಹುಬ್ಬಳ್ಳಿಯಿಂದ ಬಂದಿದ್ದ ಗಂಗೂಬಾಯಿಯವರನ್ನು ಎಚ್.ಎಮ್.ವಿ. ಕಂಪನಿಯವರು ತಮ್ಮ ಗ್ರಾಮಫೋನ್ ಗಾನಮುದ್ರಿಕೆಯಲ್ಲಿ ಪರಿಚಯಿಸುವಾಗ ಗಂಗೂಬಾಯಿ ಹುಬ್ಬಳೀಕರ್ ಎಂದು ಮುದ್ರಿಸಿದ್ದರು. ಆದರೆ ತಮ್ಮ ಪೂರ್ವಜವರ ಊರಾದ ಹಾನಗಲ್ಲಿನ ಹೆಸರನ್ನೇ ಖ್ಯಾತಿಗೊಳಿಸುವ ಸಲುವಾಗಿ ಅವರ ಸೋದರ ಮಾವನ ಅಪೇಕ್ಷೆಯ ಮೇರೆಗೆ ಗಂಗೂಬಾಯಿ ಹಾನಗಲ್ ಎಂದು ಮರು ಮುದ್ರಣ ಮಾಡುತ್ತಾರೆ.

ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮಾ ಗಾಂಧೀಜಿಯವರ ಸಮ್ಮುಖದಲ್ಲಿ ಸ್ವಾಗತವು ಸ್ವಾಗತವು ಸಕಲ ಜನ ಸಂಕುಲಕೆ ಎಂಬ ಸ್ವಾಗತಗೀತೆಯನ್ನು ಹಾಡಿ ಗಾಂಧೀಜಿಯವರ ಹಾಗೂ ಸಭಿಕರ ಮೆಚ್ಚುಗೆಯನ್ನು ಗಳಿಸಿದ್ದಲ್ಲದೇ, ಮುಂದೇ, ಆ ಕಾಲದ ಎಲ್ಲಾ ಉದ್ದಾಮ ಸಂಗೀತಕಾರರಾದ ಬಡೆ ಗುಲಾಮ ಅಲಿ ಖಾನ್, ಉಸ್ತಾದ್ ಫಯಾಜ್ ಖಾನ್, ಪಂಡಿತ್ ಓಂಕಾರನಾಥ್, ಶಹನಾಯಿ ಮಾಂತ್ರಿಕ ಬಿಸ್ಮಿಲ್ಲಾ ಖಾನ್ ಮುಂತಾದ ಘಟಾನುಘಟಿಗಳೇ ಮೆಚ್ಚಿ ಕೊಂಡಾಡುತ್ತಾರೆ ಖ್ಯಾತ ಚಿತ್ರನಟಿ ನರ್ಗೀಸಳ ತಾಯಿಯಾದ ಜದ್ದನಬಾಯಿಯವರು ಗಂಗೂಬಾಯಿಯವರ ಹಾಡುಗಾರಿಕೆಯನ್ನು ಮೆಚ್ಚಿ ಅವರಿಗೆ ಕಲ್ಕತ್ತಾದ ಅಖಿಲ ಭಾರತ ಸಂಗೀತ ಸಮ್ಮೇಳನಕ್ಕೆ ಕಳುಹಿಸಿಕೊಡುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದರು.

ಇದೇ ರೀತಿಯ ಅಭಿಮಾನಕ್ಕೆ ಮತ್ತೊಂದು ಪ್ರಸಂಗವನ್ನು ಹೇಳಲೇ ಬೇಕು. ಅವರ ಪತಿ ಶ್ರೀ ಗುರುನಾಥ ಕೌಲಗಿಯವರ ವ್ಯವಹಾರದ ಸಮಯದಲ್ಲಿ ಹುಬ್ಬಳ್ಳಿಯಲ್ಲಿದ್ದ ಅವರ ಮನೆಯನ್ನು ಒತ್ತೆ ಇಟ್ಟು ಸಾಲ ಪಡೆದಿದ್ದು, ಅದನ್ನು ಹಿಂದಿರುಗಿಸಲಾಗದೇ ಮನೆಯ ಹರಾಜಿಗೆ ಬಂದಿತ್ತು. ಅದೃಷ್ಟವಶಾತ್ ಆ ಮನೆಯನ್ನು ಹರಾಜಿನಲ್ಲಿ ಕೊಂಡುಕೊಂಡ ಉಪೇಂದ್ರ ನಾಯಕ್ ಎನ್ನುವರರು ಇವರ ಸಂಗೀತಾಭಿಮಾನಿಯಾಗಿದ್ದ ಕಾರಣ, ನಿಮಗೆ ಅನುಕೂಲವಾದಾಗ ಹಣವನ್ನು ಕೊಡಿ ಎಂದು ಅವರ ಮನೆಯಯನ್ನು ಅವರಿಗೇ ಹಿಂದಿರುಗಿಸಿದ್ದು ಅಭಿಮಾನಿಗಳ ಪರಾಕಾಷ್ಟೆ ಎಂದರೂ ತಪ್ಪಾಗಲಾರದು.

ಗಂಗೂಬಾಯಿ ಹಾನಗಲ್ ಅವರು ತಮ್ಮ ಮಗಳು ಖ್ಯಾತ ಸಂಗೀತ ವಿದೂಷಿ ಕೃಷ್ಣಾ ಹಾನಗಲ್ ಮತ್ತು ಆವರ ಸಹೋದರ ಖ್ಯಾತ ತಬಲಾವಾದಕ ಶೇಷಗಿರಿ ಹಾನಗಲ್ ಅವರ ಜೊತೆಗೂಡಿ ಲೆಖ್ಖವಿಲ್ಲದಷ್ಟು ಸಂಗೀತ ಕಛೇರಿಗಳನ್ನು ಆಕಾಶವಾಣಿ, ದೂರದರ್ಶನ ಮತ್ತು ಭಾರತಾದ್ಯಂತವಲ್ಲದೇ, ನೆರೆರಾಷ್ಟ್ರಗಳಾದ ನೇಪಾಳ, ಪಾಕೀಸ್ಥಾನ, ಜರ್ಮನಿ, ಫ್ರಾನ್ಸ್ ಅಲ್ಲದೇ ಅಮೇರಿಕಾ ಮತ್ತು ಕೆನಡಾಗಳಲ್ಲಿಯೂ ನಡೆದು ಸಂಗೀತಾಸಾಕ್ತರ ಹೃನ್ಮನಗಳನ್ನು ಗೆದ್ದಿದ್ದಲ್ಲದೇ ಅವರ ಸಂಗೀತ ಸವಿಯನ್ನು ಉಣಬಡಿಸಿದ್ದರು. ಹೀಗೆ ಒಮ್ಮೆ ಸಂಗೀತ ಕಾರ್ಯಕ್ರಮಕ್ಕಾಗಿ ದೆಹಲಿಗೆ ಹೋಗಿರುವಾಗಲೇ ಅಸ್ವಸ್ಥರಾಗಿ ಅಸ್ಪತ್ರೆ ಸೇರಿದ್ದ ಅವರ ಪತಿ ಶ್ರೀ ಗುರುನಾಥ ಕೌಲಗಿಯವರು 1966ರಲ್ಲಿ ಕೊನೆಯುಸಿರೆಳೆಯುತ್ತಾರೆ.

ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣುಮಗಳ ತಾಯಿಯಾಗಿದ್ದ ಗಂಗೂಬಾಯಿಯವರು ತಮ್ಮ ಸಂಗೀತ ಸಾಧನೆಯನ್ನು ತಮ್ಮ ಅಪಾರ ಶಿಷ್ಯರಿಗೆ ಧಾರೆ ಎರೆದು ನೂರಾರು ಶಿಷ್ಯರನ್ನು ಬೆಳಸಿದ್ದಾರೆ. ಅವರುಗಳಲ್ಲಿ ಪ್ರಮುಖರೆಂದರೆ ಅವರ ಮಗಳು ಕೃಷ್ಣಾ, ಸೀತಾ ಹಿರೇಬೆಟ್ಟ, ಸುಲಭಾ ನೀರಲಗಿ, ನಾಗನಾಥ್ ಒಡೆಯರ್ ಇನ್ನು ಮುಂತಾದವರು.

ಸಂಗೀತ ಕ್ಷೇತ್ರದಲ್ಲಿ ಗಂಗೂಬಾಯಿ ಹಾನಗಲ್ಲರ ಸಾಧನೆಗೆ ಸಂದ ಪ್ರಶಸ್ತಿ ಪುರಸ್ಕಾರಗಳನ್ನು ಹೇಳುತ್ತಾ ಹೋದರೆ ದಿನವೆಲ್ಲಾ ಸಾಲದೇನೋ ಅವುಗಳಲ್ಲಿ ಪ್ರಮುಖವಾದವುಗಳೆಂದರೆ,

1969—ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
1971—ಪದ್ಮಭೂಷಣ ಪ್ರಶಸ್ತಿ
1973—ಕೇಂದ್ರ ಸಂಗೀತ ನಾಟಕ ಅಕಾಡೆಮಿ
1984—ಮಧ್ಯಪ್ರದೇಶ ಸರಕಾರದಿಂದ ತಾನಸೇನ್ ಪ್ರಶಸ್ತಿ
1992—ಕರ್ನಾಟಕ ಸರಕಾರದಿಂದ ಕನಕ-ಪುರಂದರ ಪ್ರಶಸ್ತಿ
1993—ಅಸ್ಸಾಂ ಸರಕಾರದಿಂದ ಶ್ರೀಮಂತ ಶಂಕರದೇವ ಪ್ರಶಸ್ತಿ
1994-95 -೯೫—ಸಂಗೀತರತ್ನ ಟಿ.ಚೌಡಯ್ಯ ಸ್ಮಾರಕ ರಾಷ್ಟ್ರ ಪ್ರಶಸ್ತಿ
1997—ದೀನಾನಾಥ ಮಂಗೇಶಕರ್ ಪ್ರಶಸ್ತಿ
1997—ಗಾನಯೋಗಿ ಪಂಚಾಕ್ಷರಿ ಪ್ರಶಸ್ತಿಗಳಲ್ಲದೇ
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ,ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪದವಿಯಲ್ಲದೇ, ಕೇಂದ್ರ ಸರಕಾರದ ಸಂಗೀತ ನಾಟಕ ಅಕಾಡೆಮಿ ಫೆಲೊಶಿಪ್ ವಾರಣಾಸಿಯಲ್ಲಿ ಭಾರತೀಕಂಠ ಬಿರುದು, ಪ್ರಯಾಗದಲ್ಲಿ ಸ್ವರಶಿರೋಮಣಿ ಬಿರುದು, ಬೆಂಗಳೂರು ಗಾಯನ ಸಮಾಜ ನೀಡಿದ ಸಂಗೀತ ಕಲಾರತ್ನ ಬಿರುದು, ತ್ಯಾಗರಾಜ ಉತ್ಸವ ಸಮಿತಿ, ತಿರುಪತಿ ನೀಡಿದ ಸಪ್ತಗಿರಿ ಸಂಗೀತ ವಿದ್ವನ್ಮಣಿ ಬಿರುದು ಹೀಗೆ ಹಲವಾರು ಬಿರುದು ಬಾವಲಿಗಳಿಗೆ ಪಾತ್ರರಾಗಿದ್ದಾರೆ.

ಗಂಗೂಬಾಯಿಯವರು ಕರ್ನಾಟಕ ವಿಧಾನ ಪರಿಷತ್ತಿಗೆ ನಾಮಕರಣಗೊಂಡ ಸದಸ್ಯೆಯಾಗಿ ಮೇಲ್ಕನೆಯ ಶಾಸಕಿಯೂ ಆಗಿದ್ದಾಗ, ಶಾಸ್ತ್ರೀಯ ಸಂಗೀತವನ್ನು ಪ್ರಾಥಮಿಕ ಶಿಕ್ಷಣದದ ಹಂತದಿಂದಲೇ ಮಕ್ಕಳಿಗೆ ಕಲಿಸುವ ಮೂಲಕ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸುವ ಆಸೆಯಿಂದ ಅನೇಕ ಸಮಾರಂಭಗಳಲ್ಲಿ ಮತ್ತು ಮೇಲ್ಮನೆಯಲ್ಲಿಯೂ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು ಮತ್ತಿತರ ಅಧಿಕಾರಿಗಳ ಮೇಲೆ ಹೇರಿದ ಒತ್ತಡಕ್ಕೆ ಮಣಿದು ಉಣಕಲ್ ಹತ್ತಿರ ಗುರುಕುಲದ ಮಾದರಿಯ ಸಂಗೀತ ವಿದ್ಯಾಲಯವನ್ನು ನಿರ್ಮಿಸುವ ಕಾರ್ಯ ಆರಂಭವಾದರೂ ಅದನ್ನು ನೋಡುವ ಸೌಭಾಗ್ಯ ಗಂಗೂಬಾಯಿಯವರಿಗೆ ಇಲ್ಲವಾಗಿ ಹೋದದ್ದು ದೌರ್ಭಾಗ್ಯವೇ ಸರಿ.

ವಯೋಸಹಜ ಹೃದಯ ಸಂಬಂಧೀ ಖಾಲಿಯಿಂದ ದೀರ್ಘಕಾಲ ಬಳಲುತ್ತಿದ್ದ ಅವರು ತಮ್ಮ 97ನೇ ವಯಸ್ಸಿನಲ್ಲಿ 21, ಜುಲೈ, 2009 ರಂದು ಹುಬ್ಬಳ್ಳಿಯಲ್ಲಿ ನಿಧನರಾದಾಗ ಇಡೀ ದೇಶವೇ ಒಬ್ಬ ಅತ್ಯದ್ಛುತ ಸಂಗೀತ ಕಣ್ಮಣಿಯನ್ನು ಕಳೆದುಕೊಂಡಿದ್ದಕ್ಕಾಗಿ ಸಂತಾಪ ವ್ಯಕ್ತ ಪಡಿಸಿತು. ಅವರ ಇಚ್ಚೆಯಂತೆಯೇ, ನಿಧನದ ನಂತರ ಅವರ ಎರಡೂ ಕಣ್ಣುಗಳನ್ನು ದಾನ ಮಾಡುವುದರ ಮೂಲಕ ಮತ್ತೆರಡು ಜೀವಗಳ ಬಾಳಿನಲ್ಲಿ ಬೆಳಕನ್ನು ಮೂಡಿಸಿದ ಸಾರ್ಥಕತೆ ಅವರದ್ದಾಗಿದೆ.

ಭಾರತ ಸರ್ಕಾರ ಖ್ಯಾತ ಹಿಂದೂಸ್ತಾನಿ ಗಾಯಕಿ ದಿವಂಗತ ಡಾ.ಗಂಗೂಬಾಯಿ ಹಾನಗಲ್ ಅವರ ಭಾವಚಿತ್ರ ಇರುವ ಅಂಚೆ ಚೀಟಿಯನ್ನು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಮುಖಾಂತರ ಬಿಡುಗಡೆಗೊಳಿಸುವ ಮೂಲಕ ಆ ಮಹಾನ್ ಗಾಯಕಿಗೆ ತನ್ನ ಗೌರವನ್ನು ತೋರಿಸಿದೆ.

ಹೀಗೆ ತಮ್ಮ ಹಿಂದೂಸ್ಥಾನೀ ಸಂಗೀತದ ಮೂಲಕ ಕೋಟ್ಯಂತರ ಸಂಗೀತಾಸಕ್ತರ ಹೃದಯಗಳನ್ನು ಗೆದ್ದು ಆ ಮೂಲಕ ಕರ್ನಾಟಕದ ಘನತೆ ಮತ್ತು ಸಾಂಸ್ಕೃತಿಕ ಪರಂಪರೆಗಳನ್ನು ಜಗತ್ಪ್ರಸಿದ್ಧವನ್ನಾಗಿ ಮಾಡಿದ ಮತ್ತು ಸಂಗೀತವನ್ನೇ ತಮ್ಮ ಉಸಿರಾಗಿಸಿಕೊಂಡಿದ್ದ ಸಂಗೀತ ಕಲಾರತ್ನ ಗಂಗೂಬಾಯಿ ಹಾನಗಲ್ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s