ನಾವು ಚಿಕ್ಕವರಿದ್ದಾಗ ಪುರಾಣ ಪುಣ್ಯಕಥೆಗಳಲ್ಲಿ ರಾಜರ್ಷಿ ಎಂದರೆ ಸದಾಕಾಲವು ಧರ್ಮಾತ್ಮನಾಗಿದ್ದು, ಲೋಕ ಕಲ್ಯಾಣಕ್ಕಾಗಿ ವಿವಿಧ ರೀತಿಯ ಸಮಾಜಮುಖೀ ಸೇವೆಗಳಲ್ಲಿ ನಿರತರಾಗಿರುವುದಲ್ಲದೇ, ಜನರು ತಮ್ಮ ಸಂಕಷ್ಟಗಳನ್ನೋ ಇಲ್ಲವೇ ವ್ಯಾಜ್ಯಗಳೊಂದಿಗೆ ಬಂದಾಗ ಅವರಿಗೆ ಸೂಕ್ತ ಪರಿಹಾರವನ್ನು ನೀಡುವವರಾಗಿರುತ್ತಾರೆ ಎಂದು ಕೇಳಿಯೋ ಇಲ್ಲವೇ ಓದಿ ತಿಳಿದಿದ್ದೇವೆ.ಈ ಕಲಿಯುಗದಲ್ಲಿಯೂ ಅಂತಹ ರಾಜರ್ಷಿಯವರು ಇದ್ದಾರೆಯೇ ಎಂದು ಯೋಚಿಸುತ್ತಿದ್ದಲ್ಲಿ, ಅವರೇ ನಮ್ಮ ಇಂದಿನ ಕನ್ನಡದ ಕಲಿಗಳು ಕಥಾನಾಯಕರಾದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೆಂದ್ರ ಹೆಗ್ಗಡೆಯವರ ಯಶೋಗಾಥೆಯನ್ನು ನೋಡಿದಲ್ಲಿ ತಿಳಿಯುತ್ತದೆ.
ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿಯ ತಟದಲ್ಲಿರುವ ಪುರಾಣ ಪ್ರಸಿದ್ಧ ಹಿಂದೂಗಳ ಧಾರ್ಮಿಕ ಕ್ಷೇತ್ರವೇ ಧರ್ಮಸ್ಥಳ. ಧರ್ಮಸ್ಥಳದ ಮಂಜುನಾಥನ ಭಕ್ತಾದಿಗಳು ಇಡೀ ದೇಶಾದ್ಯಂತ ಇದ್ದು ಬಹಳ ನಂಬಿಕೆಗೆ ಹೆಸರುವಾಸಿಯಾಗಿದೆ. ಸ್ವತಃ ಜೈನರಾಗಿಯೂ 21 ತಲೆಮಾರುಗಳಿಂದ ಹೆಗ್ಗಡೆ ಕುಟುಂಬವು ಧರ್ಮಸ್ಥಳದಲ್ಲಿ ಧಾರ್ಮಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿಧಿವತ್ತಾಗಿ ನಡೆಸಿಕೊಂಡು ಧರ್ಮಸ್ಥಳ ಕ್ಷೇತ್ರಕ್ಕೆ ಧಾರ್ಮಿಕ ಸಹಿಷ್ಣುತೆಯ ಶ್ರೀಕ್ಷೇತ್ರ ಎಂಬ ಹೆಸರು ಬರುವಂತೆ ಮಾಡಿದ್ದಾರೆ ಎಂದರೆ ಅತಿಶಯೋಕ್ತಿಯೇನಲ್ಲ.
ಶ್ರೀ ವೀರೇಂದ್ರ ಹೆಗ್ಗಡೆಯವರು ನವೆಂಬರ್ 25,1948 ಅಂದಿನ ಧರ್ಮಾಧಿಕಾರಿಗಳಾಗಿದ್ದ ಶ್ರೀ ರತ್ನವರ್ಮ ಹೆಗ್ಗಡೆಯವರ ಮಗನಾಗಿ ಜನಿಸುತ್ತಾರೆ. ತಮ್ಮ ಪ್ರಾಥಮಿಕ ಶಿಕ್ಷವನ್ನು ಬಂಟ್ವಾಳದ ಬೋರ್ಡ್ ಶಾಲೆಯಲ್ಲಿ ಮುಗಿಸಿ, ಉಜಿರೆಯಲ್ಲಿ ಮಾಧ್ಯಮಿಕ ಶಿಕ್ಷಣದ ಜೊತೆ ಜೊತೆಯಲ್ಲಿ ಸಿದ್ಧವನ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡಿ ನಂತರ ಬೆಂಗಳೂರಿನ ಶೇಷಾದ್ರಿಪುರಂ ಪ್ರೌಢಶಾಲೆ ಮತ್ತು ಸೈಂಟ್ ಜೋಸೆಫ್ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಿ 1963ರಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಮುಗಿಸಿ, ನಂತರ ಬಿ.ಎ ಪದವೀಧರರಾಗಿ ಕಾನೂನು ಪದವಿಧರಾಗಬೇಕು ಎಂದು ಯೋಚಿಸುತ್ತಿರುವಾಗಲೇ, ಅವರ ತಂದೆಯವರಾದ ಮತ್ತು ಅಂದಿನ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿದ್ದ ಶ್ರೀ ರತ್ನವರ್ಮ ಹೆಗ್ಗಡೆ ಅವರು ಅನಾರೋಗ್ಯಕ್ಕೆ ತುತ್ತಾಗಿ ಅವರ ಆರೈಕೆಯಲ್ಲಿ ವೀರೇಂದ್ರ ಹೆಗ್ಗಡೆ ಟೊಂಕ ಕಟ್ಟಿ ನಿಂತರೂ, 1968ರಲ್ಲಿ ಅವರು ವಿಧಿವಶರಾದ ಕಾರಣ, ತಮ್ಮ 20ನೇ ವಯಸ್ಸಿಗೇ ಅದೇ ವರ್ಷದ ಅಕ್ಟೋಬರ್ 24ರಂದು ಶ್ರೀವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರದ 21ನೇ ಧರ್ಮಾಧಿಕಾರಿಗಳಾಗಿ ಜವಾಬ್ಧಾರಿಯನ್ನು ವಹಿಸಿಕೊಂಡು ಇಲ್ಲಿಯವರೆಗೂ ಅತ್ಯಂತ ಯಶ್ವಸಿಯಾಗಿ ಮುಂದುವರೆಸಿಕೊಂಡು ಬಂದಿರುವುದಲ್ಲದೇ, ತಮ್ಮ ದೇವಸ್ಥಾನದ ಕಾರ್ಯಗಳೊಂದಿಗೆ ಸಮಾಜ ಸೇವೆ, ಆರೋಗ್ಯ ವಿಕಾಸ, ಶಿಕ್ಷಣ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಶ್ರೀ ಕ್ಷೇತ್ರಕ್ಕೆ ಯಾತ್ರಾರ್ಥಿಗಳು ಸುಲಭವಾಗಿ ಬರುವಂತೆ ಸೂಕ್ತವಾದ ರಸ್ತೆಗಳು, ಬಂದವರು ಕ್ಷೇತ್ರದಲ್ಲಿ ಉಳಿದು ಕೊಳ್ಳಲು ಅತಿಥಿ ಗೃಹಗಳು ಅವರ ಹಸಿವನ್ನು ನೀಗಿಸಲು ಭೋಜನಾ ಶಾಲೆಗಳನ್ನು ಆವರ ಪೂರ್ವಜರು ನಿರ್ಮಿಸಿದ್ದನ್ನು ವೀರೇಂದ್ರ ಹೆಗ್ಗಡೆಯವರು ಅಧುನೀಕರಣಗೊಳಿಸಿದ್ದಲ್ಲದೇ 1979ರಿಂದ ಆರಂಭಿಸಿದ ಸಾಮೂಹಿಕ ವಿವಾಹ ಸಮಾಜದಲ್ಲಿ ಅತ್ಯಂತ ಕ್ರಾಂತಿಕಾರಿ ಬೆಳವಣಿಗೆ ತಂದಿದಲ್ಲದೇ, ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ಅಳವಡಿಸಿಕೊಂಡು ಅತ್ಯಂತ ಸರಳವಾಗಿ ಕಂಡರೂ, ಲಕ್ಷಾಂತರ ಜನರಿಗೆ ಸಂಭ್ರಮ ತರಿಸುವಂತಾಯಿತು. ಇದೇ ಕಾರ್ಯವನ್ನು ರಾಜ್ಯಾದ್ಯಂತ ಅನೇಕ ಧಾರ್ಮಿಕ ಕ್ಷೇತ್ರಗಳು ಮುಂದುವರೆಸಿಕೊಂಡು ಹೋಗುವ ಹಾಗೇ ಪ್ರೇರೇಪಣೆ ನೀಡುವಂತಾಯಿತು. ಇಂದಿಗೂ ಶ್ರೀಕ್ಷೇತ್ರದಲ್ಲಿ ಪ್ರತೀವರ್ಷವು 500ಕ್ಕೂ ಹೆಚ್ಚು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಧರ್ಮಸ್ಥಳದ ಸುತ್ತಮುತ್ತಲಿನ ಬಹುತೇಕರು ಇನ್ನು ಸಾಂಪ್ರದಾಯಕ ಕೃಷಿಯನ್ನೇ ಆಶ್ರಯಿಸಿಕೊಂಡಿರುವುದನ್ನು ಗಮನಿಸಿ, ಅಂತಹವರಿಗೆ ನೆರವಾಗಲೆಂದು ಖಾವಂದರು 1982ರಲ್ಲಿ ಆರಂಭಿಸಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿಯಲ್ಲಿ ಬೆಳ್ತಂಗಡಿ ತಾಲ್ಲೂಕಿನ 81 ಗ್ರಾಮಗಳಲ್ಲಿ ಹಲವಾರು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ 18,000 ಮನೆಗಳು ಇದರಿಂದ ಉಪಕೃತರಾಗಿದ್ದಲ್ಲದೇ ಇದೇ ಕಾರ್ಯವನ್ನು ರಾಜ್ಯದ ಇತರೇ ಭಾಗಗಳಲ್ಲದೇ ಪಕ್ಕದ ಕೇರಳ ರಾಜ್ಯಕ್ಕೂ ವಿಸ್ತರಿಸಿರುವುದು ನಿಜಕ್ಕೂ ಅಭಿನಂದನೀಯವಾಗಿದೆ.
ಆರೋಗ್ಯವೇ ಭಾಗ್ಯ ಎಂಬುದನ್ನು ಬಹಳವಾಗಿ ನಂಬಿದ್ದಂತಹ ಹೆಗ್ಗಡೆಯವರು ತಮ್ಮ ಶ್ರೀ ಕ್ಷೇತ್ರದ ಸುತ್ತಮುತ್ತಲಿನ ಜನರ ಆರೋಗ್ಯ ಸುಧಾರಣೆಗಾಗಿ ಸಂಚಾರಿ ಆಸ್ಪತ್ರೆಗಳನ್ನು ಹಳ್ಳಿ ಹಳ್ಳಿಗಳಿಗೆ ತೆಗೆದುಕೊಂಡು ಹೋದದ್ದಲ್ಲದೇ, ಉಡುಪಿ ಹಾಸನ ಮತ್ತು ಬೆಂಗಳೂರಿನಲ್ಲಿ ಆಯುವೇದ ಆಸ್ಪತ್ರೆಗಳನ್ನು ಸ್ಥಾಪಿಸಿರುವುದಲ್ಲದೇ, ಮಂಗಳೂರಿನ ಎಸ್ ಡಿ ಎಮ್ ಕಣ್ಣಿನ ಆಸ್ಪತ್ರೆ ಮತ್ತು ದಂತ ಚಿಕಿತ್ಸಾಲಯ, ಕ್ಷಯರೋಗ ಚಿಕಿತ್ಸಾಲಯವಲ್ಲದೇ, ಉಜಿರೆಯಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಿ ಅಲ್ಲಿ ನಿರಂತರವಾಗಿ, ಪಾರಂಪರವಾದ ಪ್ರಾಕೃತಿಕ ಚಿಕಿತ್ಸೆಯ ಜೊತೆ, ಯೋಗ ಮತ್ತು ಪ್ರಾಣಾಯಾಮಗಳ ಆರೋಗ್ಯವನ್ನು ಕಾಪಾಡುತ್ತಾ ಬಂದಿರುವುದು ಅನನ್ಯವಾದ ಕಾರ್ಯವಾಗಿದೆ.
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಹಾಗಾಗಿ ಆ ಮಕ್ಕಳಿಗೆ ಉತ್ತಮವಾದ ಶಿಕ್ಷಣ ದೊರೆಯಬೇಕೆಂದು ನಿರ್ಧರಿಸಿ, ರಾಜ್ಯಾದ್ಯಂತ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಹೆಸರಿನಲ್ಲಿ ಹಲವಾರು ಪ್ರಾಥಮಿಕ, ಪ್ರೌಢ ಶಾಲೆಗಳು ಮತು ವಿವಿಧ ಪದವಿಗಳು, ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣವಲ್ಲದೇ, ಶ್ರೀ ಮಂಜುನಾಥೇಶ್ವರ ಸಾಂಸ್ಕೃತಿಕ ಸಂಶೋಧನಾ ಕೇಂದ್ರದ ಮೂಲಕ ಧರ್ಮ, ಸಾಹಿತ್ಯ ಮತ್ತು ಕಲೆಯ ವಿಷಯಗಳ ಬಗ್ಗೆ ಸಂಶೋಧನೆಯನ್ನು ನಡೆಸುತ್ತಾ ಬಂದಿದೆ.
ಇನ್ನು ದೇಶ ಮತ್ತು ರಾಜ್ಯದಲ್ಲಿ ಪ್ರಾಕೃತಿಕ ವಿಕೋಪಗಳಿಗೆ ಶ್ರೀಕ್ಷೇತ್ರದ ಕಡೆಯಿಂದ ಹಲವಾರು ರೀತಿಯ ಧನಕನ ಸಹಾಯಗಳನ್ನು ಮಾಡುತ್ತಿರುವುದಲ್ಲದೇ, ರಾಜ್ಯದ ವಿವಿದೆಡೆಯಲ್ಲಿ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡವರಿಗೆ ಗ್ರಾಮ ಮತ್ತು ಮನೆಗಳ ಪುನರ್ನಿಮಾಣದಲ್ಲಿ ಪ್ರತ್ಯಕ್ಷವಾಗಿಯೂ ಮತ್ತು ಪರೋಕ್ಷವಾಗಿ ಸಹಾಯ ಮಾಡುತ್ತಲೇ ಬಂದಿರುವುದು ನಿಜಕ್ಕೂ ಅನುಕರಣಿಯವಾದ ವಿಷಯವೇ ಸರಿ.
ಇನ್ನು ಧಾರ್ಮಿಕವಾಗಿ ಕಾರ್ಕಳದ ಶಿಲ್ಪಿ ರಂಜಾಳ ಗೋಪಾಲ ಶಣೈ ಅವರ ನೇತೃತ್ವದಲ್ಲಿ ಗೊಮ್ಮಟೇಶ್ವರನ ವಿಗ್ರಹವನ್ನು ಧರ್ಮಸ್ಥಳದಲ್ಲಿ ಸ್ಥಾಪಿಸುವ ಮೂಲಕ ಅಭಿನವ ಚಾವುಂಡರಾಯ ಎಂಬು ಬಿರುದಾಂಕಿತಕ್ಕೆ ಪಡೆದಿರುವ ಖಾವಂದರು, ದಕ್ಷಿಣ ಕರ್ನಾಟಕದ ವಿಶಿಷ್ಟವಾದ ಜನಪದ/ಶಾಸ್ತ್ರೀಯ ನೃತ್ಯ ಪದ್ಧತಿಯಾದ ಯಕ್ಷಗಾನದ ಬೆಳವಣಿಗಾಗಿ ಸಾಕಷ್ಟು ಶ್ರಮಿಸಿದ್ದಲ್ಲದೇ ತಮ್ಮ ದೇವಸ್ಥಾನದ ವತಿಯಿಂದಲೇ ಯಕ್ಷಗಾನದ ತಂಡವನ್ನು ಕಟ್ಟಿ ನಾಡಿನಾದ್ಯಂತ ಪ್ರವಾಸ ಮಾಡುತ್ತಾ ಯಕ್ಷಗಾನ ಕಲೆಯನ್ನು ಎಲ್ಲೆಡೆಯಲ್ಲೂ ಪರರಿಸುತ್ತಿದ್ದಾರೆ.
ನಮ್ಮ ಅನೇಕ ಪ್ರಾಚೀನ ದೇವಾಲಯಗಳ ಸರಿಯಾದ ಆರೈಕೆ ಇಲ್ಲದೇ ಹಾಳಾಗಿ ಹೋಗುತ್ತಿರುವುದನ್ನು ಗಮನಿಸಿ, ಶ್ರೀ ಕ್ಷೇತ್ರದ ವತಿಯಿಂದ ಧರ್ಮೋತ್ಥಾನ ಟ್ರಸ್ಟ್ ಸ್ಥಾಪಿಸಿ ನಾಡಿನಾದ್ಯಂತ ನೂರಾರು ದೇವಾಲಯಗಳ ಜೀರ್ಣೋದ್ಧಾರಕ್ಕೆ ಸಹಾಯ ಮಾಡಿರುವುದಲ್ಲದೇ, ಆ ಎಲ್ಲಾ ದೇವಸ್ಥಾನಗಳಲ್ಲಿ ನಿತ್ಯ ಪೂಜಾವಿಧಿ ವಿಧಾನಗಳು ಸುಗಮವಾಗಿ ನಡೆಯುವಂತೆ ಮಾಡಿದ್ದಾರೆ.
ಹಳ್ಳಿಗಳಲ್ಲಿ ವ್ಯಾಜ್ಯಗಳನ್ನು ಪರಿಹರಿಸಲು ಅರಕ್ಷಕ ಠಾಣೆಗಳು ಮತ್ತು ವಿವಿಧ ನ್ಯಾಯಾಲಯಗಳು ಇದ್ದರೂ ಇಂದಿಗೂ ಬಹುತೇಕ ಜನರು ಧರ್ಮಸ್ಥಳದ ಮಂಜುನಾಥೇಶ್ವರ ಸ್ವಾಮಿಯ ಮೇಲಿನ ಆಣೆ ಪ್ರಮಾಣಕ್ಕೇ ಹೆಚ್ಚಿನ ಪ್ರಾಧನ್ಯತೆ ನೀಡುತ್ತಾ ಅನೇಕ ತಕರುಗಳನ್ನು ಧರ್ಮಾಧಿಕಾರಿ ಹೆಗ್ಗಡೆಯವರ ಬಳಿ ತರುತ್ತಾರೆ. ಸ್ಥಳದ ನಂಬಿಕೆಯ ದೈವ ಅಣ್ಣಪ್ಪ ಸ್ವಾಮಿ ಹಾಗು ಶ್ರೀ ಮಂಜುನಾಥನ ಆದೇಶಗಳನ್ನು ಅನುಸರಿಸಿ ಧರ್ಮದಿಕಾರಿಗಳು ಆ ತಕರಾರುಗಳಿಗೆ ಕೊಡುವ ನ್ಯಾಯವನ್ನು ಎಲ್ಲರೂ ಗೌರವದಿಂದ ಪಾಲಿಸುವುದಲ್ಲದೇ, ಅವರು ಕೊಟ್ಟ ನ್ಯಾಯವನ್ನು ಹಲವಾರು ಬಾರೀ ನ್ಯಾಯಾಲಯವೂ ಪುರಸ್ಕರಿಸಿರುವುದು ಗಮನಾರ್ಹವಾಗಿದೆ.
ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರ ಈ ಎಲ್ಲಾ ಸಾಧನೆಗಳನ್ನು ಗುರುತಿಸಿ ಸರ್ಕಾರ ಮತ್ತು ಅನೇಕ ಸಂಘ ಸಂಸ್ಥೆಗಳಿಂದ ಹಲವಾರು ಗೌರವ ಮತ್ತು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.
- 1985 ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ
- 1993 ರಲ್ಲಿ ರಾಷ್ಟ್ರಪತಿಗಳಿಂದ ರಾಜರ್ಷಿ ಗೌರವ
- 1994 ರಲ್ಲಿ ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ
- 2004 ರಲ್ಲಿ ವರ್ಷದ ಕನ್ನಡಿಗ ಗೌರವ
- 2011 ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ
- 2012 ರಲ್ಲಿ ಲಂಡನ್‌ನ ಪ್ರತಿಷ್ಠಿತ ಆಶ್ಡೆನ್ ಸಂಸ್ಥೆಯ ಜಾಗತಿಕ ಹಸಿರು ಆಸ್ಕರ್ ಎಂದೇ ಪರಿಗಣಿಸಲಾದ ಆಶ್ಡೆನ್ ಸುಸ್ಥಿರ ಇಂಧನ ಪ್ರಶಸ್ತಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ದೊರೆತಿದೆ.
- 2013 ರಲ್ಲಿ ಮಧ್ಯಪ್ರದೇಶದ ಇಂದೋಂದಿನ ದೇವಿ ಅಹಲ್ಯಾಬಾಯಿ ರಾಷ್ಟ್ರೀಯ ಪುರಸ್ಕಾರ.
- 2015 ರಲ್ಲಿ ಭಾರತ ಸರಕಾರದಿಂದ ಪದ್ಮವಿಭೂಷಣ ಪ್ರಶಸ್ತಿ
- 2022ರಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಸೇವೆಗಳ ಆಧಾರದ ಮೇಲೆ ರಾಜ್ಯಸಭೆಯಗೆ ನಾಮಕರಣ ಸದಸ್ಯರಾಗಿದ್ದಾರೆ.
ಇದಲ್ಲದೇ, ಅನೇಕ ಧಾರ್ಮಿಕ ಮಠ ಮಾನ್ಯಗಳಿಂದ ಧರ್ಮರತ್ನ, ಧರ್ಮಭೂಷಣ. ಅಭಿನವ ಚಾವುಂಡರಾಯ, ಪರೋಪಕಾರ ಧುರಂಧರ ಮೊದಲಾದ ಬಿರುದುಗಳಲ್ಲದೇ, ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಜೀ ಕನ್ನಡ ವಾಹಿನಿಯ ಹೆಮ್ಮೆಯ ಕನ್ನಡಿಗ ಪ್ರಶಸ್ತಿಯೂ ಇವರಿಗೆ ಲಭಿಸಿದೆ.
ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಶ್ರೀ ಮಂಜುನಾಥೇಶ್ವರ ದೇವಸ್ಥಾನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವುದರ ಜೊತೆಯಲ್ಲಿಯೇ ಅನ್ನ ದಾನ, ಔಷಧ ದಾನ, ವಿದ್ಯಾ ದಾನ ಮತ್ತು ಅಭಯ ದಾನವಲ್ಲದೇ, ಸಾಮೂಹಿಕ ವಿವಾಹ, ಗ್ರಾಮೀಣಾಭಿವೃದ್ಧಿ, ಶೈಕ್ಷಣಿಕ ಸಂಸ್ಥೆಗಳು ಮುನ್ನಡೆಸಿಕೊಂಡು ಹೋಗುತ್ತಾ ಕರ್ನಾಟಕದ ಹೆಮ್ಮೆಯನ್ನು ಇಡೀ ವಿಶ್ವಕ್ಕೇ ಪಸರಿಸಿರುವ ಕಾರಣ ಅವರು ನಮ್ಮ ಹೆಮ್ಮೆಯ ರಾಜರ್ಷಿಯೂ ಹೌದು ಮತ್ತು ಕನ್ನಡದ ಹೆಮ್ಮೆಯ ಕಲಿಗಳೇ ಸರಿ
ಏನಂತೀರೀ?
ನಿಮ್ಮವನೇ ಉಮಾಸುತ
🙏🙏ಖಂಡಿತಾ ಕರ್ನಾಟಕದ ಕಣ್ಮಣಿ.
ಇವರ ಸೇವೆಗಳ ಮುಂದೆ ಪ್ರಶಸ್ತಿ ಗಳು ನಗಣ್ಯ.
LikeLiked by 1 person
[…] […]
LikeLike