ಶತಾವಧಾನಿ ಡಾ. ಆರ್. ಗಣೇಶ್

ಇಂದಿನ ಕಾಲದಲ್ಲಿ ನಮಗೆ ಯಾವುದೇ ಸಮಸ್ಯೆಗಳಿಗೆ ಪರಿಹಾರ ಬೇಕಿದ್ದಲ್ಲಿ ಥಟ್ ಅಂತಾ Google ನಲ್ಲಿ ಹುಡುಕ್ತೀವಿ. ಅದೇ ಧರ್ಮಶಾಸ್ತ್ರದ ಬಗ್ಗೆ ಯಾವುದೇ ಪರಿಹಾರಗಳು ಬೇಕಿದ್ದಲ್ಲಿ ಧರ್ಮಗ್ರಂಥಗಳನ್ನೋ ಇಲ್ಲವೇ ಪುರಾಣಗಳು, ರಾಮಾಯಣ, ಮಹಾಭಾರತ, ಭಾಗವರ ಭಗವದ್ಗೀತೆಗಳಲ್ಲಿ ಅದಕ್ಕೆ ಯಾವ ರೀತಿಯ ಪರಿಹಾರವನ್ನು ಸೂಚಿಸಿದ್ದಾರೆ ಎಂದು ತಡಕಾಡುತ್ತೇವೆ. ಇಲ್ಲೊಬ್ಬ ಮಹಾನುಭಾವರು ತರ್ಕ, ಶಾಸ್ತ್ರ, ಲೌಕಿಕ, ಅಲೌಕಿಕ, ರಾಜಕೀಯ, ಸಂಗೀತ, ನೃತ್ಯ, ಸಾಹಿತ್ಯ ಮುಂತಾದ ಲಲತಕಲೆ, ತಂತ್ರಜ್ಞಾನ, ಪ್ರಸಕ್ತ ವಿಷಯಗಳು ಹೀಗೆ ಯಾವುದರ ಬಗ್ಗೆ ಕೇಳಿದರೂ ಥಟ್ ಅಂತಾ ಉತ್ತರಿಸಬಲ್ಲ ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿರುವ ಶತಾವಧಾನಿಗಳಾಗಿರುವ ಶ್ರೀ ಡಾ. ಆರ್. ಗಣೇಶ್ ಅವರೇ ನಮ್ಮ ಇಂದಿನ ಕನ್ನಡದ ಕಲಿಗಳು ಕಥಾನಾಯಕರು.

ಮೂಲತಃ ದೇವರಾಯ ಸಮುದ್ರಂ ಕಡೆಯಿಂದ ಕಾಲಾನಂತರ ಕೋಲಾರದಲ್ಲಿ ನೆಲಸಿದ್ದ ಆರ್.ಶಂಕರನಾರಾಯಣ ಅಯ್ಯರ್ ಹಾಗೂ ಅಲಮೇಲಮ್ಮ ದಂಪತಿಗಳ ಮಗನಾಗಿ ಡಿಸೆಂಬರ್ 4, 1962ರಲ್ಲಿ ಕೋಲಾರದ ಸಾಂಪ್ರದಾಯಕ ಕುಟುಂಬದಲ್ಲಿ ಜನಿಸಿದರು. ಮನೆಯ ಮಾತೃಭಾಷೆ ತಮಿಳು, ನೆರೆಹೊರೆಯಲ್ಲಿ ತೆಲುಗು ಭಾಷೆಯ ಪ್ರಭಾವ, ಶಾಲೆಯಲ್ಲಿ ಕಲಿತಿದ್ದು ಕನ್ನಡ ಮತ್ತು ಇಂಗ್ಲೀಷ್ ಅದರ ಜೊತೆಗೆ ಸಾಂಪ್ರದಾಯಸ್ಥ ಮನೆಯಲ್ಲಿ ಸಂಸ್ಕೃತ, ಹೀಗೆ ಕನ್ನಡ, ಸಂಸ್ಕೃತ, ತಮಿಳು, ತೆಲುಗು ಮತ್ತು ಇಂಗ್ಲೀಷ್ ಬಾಷೆಯ ಮೇಲಿನ ಪಾಂಡಿತ್ಯ ಅವರಿಗೆ ಬಾಲ್ಯದಿಂದಲೂ ಲಭಿಸಿತ್ತು. ಇದರ ಜೊತೆಗೆ ಸಂಗೀತ, ನೃತ್ಯ ಮತ್ತು ಸಾಹಿತ್ಯದಂತಹ ಲಲಿತಕಲೆಗಳಲ್ಲಿಯೂ ಅವರಿಗೆ ಅಪರಿಮಿತ ಆಸಕ್ತಿ. ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಯ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ಮುಗಿಸಿ, ಅವಿಭಜಿತ ಕೋಲಾರ ಜಿಲ್ಲೆಗೆ ಸೇರಿದ್ದ ಗೌರಿಬಿದನೂರಿನಲ್ಲಿ ಪ್ರೌಢ ಶಾಲಾಭ್ಯಾಸ ಮುಗಿಸಿದರು. ಓದಿನಲ್ಲಿಯೂ ಬಹಳಷ್ಟು ಚುರುಗಾಗಿದ್ದ ಗಣೇಶರು, ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ (UVCE), ದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದ ನಂತರ ಬೆಂಗಳೂರಿನ ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಸೈನ್ಸ್ (TATA institute)ನಲ್ಲಿ ಮೆಟೀರಿಯಲ್ ಸೈನ್ಸ್ ಹಾಗೂ ಮೆಟಲರ್ಜಿಯಲ್ಲಿ ಎಂ.ಎಸ್ಸಿ. ಪದವಿ ಗಳಿಸಿದರು. ಇದರ ಜೊತಯಲ್ಲಿಯೇ ಮೈಸೂರು ವಿಶ್ವವಿದ್ಯಾಲಯದ ಮೂಲಕ ಸಂಸ್ಕೃತದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದರು. ತಮ್ಮ ತಾಂತ್ರಿಕ ವಿದ್ಯಾಭ್ಯಾಸದ ಅರ್ಹತೆಯ ಮೇರೆಗೆ ಆರ್.ವಿ ಕಾಲೇಜು ಮತ್ತು ಎಂ.ಎಸ್ ರಾಮಯ್ಯ ಇಂಜೀನಿಯರಿಂಗ್ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದರಾದರೂ ಅವರ ಮನಸ್ಸೆಲ್ಲಾ ಆಧ್ಯಾತ್ಮಿಕ ಸಾಹಿತ್ಯದ ಕಡೆಯೇ ಇದ್ದ ಕಾರಣ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

ತಂದೆ ತಾಯಿಯರ ಆಭೀಪ್ಸೆಯಂತೆ ತಾಂತ್ರಿಕ ಶಿಕ್ಷಣ ಪಡೆದು ಎಂಜಿನಿಯರಿಂಗ್‌ ಕಲಿತರೂ, ಬಾಲ್ಯದಿಂದಲೂ ಒಬ್ಬ ಕನ್ನಡದ ಹೆಸರಾಂತ ಕವಿಯಾಗಬೇಕೆನ್ನುವ ತುಡಿತವಿದ್ದ ಪರಿಣಾಮ ಶಾಸ್ತ್ರಿದಿಂದ ಹಿಡಿದು ತತ್ವಶಾಸ್ತ್ರದವರೆಗೆ, ಸಂಗೀತ, ರಾಜಕೀಯ, ಪ್ರಸಕ್ತ ವಿಷಯ ಹೀಗೆ ಅನೇಕ ವಿಷಯಗಳಲ್ಲಿ ಪರಿಣತಿಯನ್ನು ಪಡೆದ ಶ್ರೀ ಗಣೇಶ್ ಅವರು ಅತೀ ಶೀಘ್ರದಲ್ಲಿಯೇ ಕನ್ನಡ ಸಾರಸ್ವತ ಲೋಕದಲ್ಲಿ ಅತ್ಯಂತ ಪ್ರತಿಭಾಪೂರ್ಣ ವ್ಯಕ್ತಿಯಾಗಿ ಪ್ರವಧಮಾನಕ್ಕೆ ಬಂದರು. ಅದೊಮ್ಮೆ ಲೇಪಾಕ್ಷಿ ಮೆದಾವರಂ ಮಲ್ಲಿಕಾರ್ಜುನ ಶರ್ಮರವರ ಅಶ್ಟಾವಧಾನವನ್ನು ನೋಡಿ ಅದರಿಂದ ಸಾಕಷ್ಟು ಪ್ರಭಾವಿತರಾಗಿ ಅವಧಾನ ಕಲೆಯತ್ತ ತಮ್ಮ ಪೂರ್ಣ ಗಮನವನ್ನು ನೀಡಿ, ಅದನ್ನು ಸಂಪೂರ್ಣವಾಗಿ ಕರಗತ ಮಾಡಿಕೊಂಡರು.

ಅವಧಾನವೆಂದರೆ, ಚಿತ್ತೈಕಾಗ್ರ್ಯಮವಧಾನಂ ಎಂದು ವಾಮನನು ಹೇಳಿರುವಂತೆ, ಮನಸ್ಸಿನ ಏಕಾಗ್ರತೆಯೇ ಅವಧಾನ. ಸ್ಮರಣೆ, ಸದ್ಯಸ್ಸ್ಫೂರ್ತಿ, ಬುದ್ಧಿ ಮತ್ತು ಆಶುಕವಿತ್ವ ಶಕ್ತಿಗಳಿಂದ ನಡೆಸುವ ಒಂದು ವಿದ್ವತ್ಕಲೆಯೇ ಅವಧಾನಕಲೆ. ಅವಧಾನಿಯು ಪೃಚ್ಛಕ ಪಂಡಿತರು ಒಡ್ಡುವ ವಿವಿಧ ಸಮಸ್ಯೆಗಳಿಗೆ ಯಥೋಚಿತವಾಗಿ, ಆಶುವಾಗಿ, ಯಾವುದೇ ಲೇಖನ ಸಾಮಗ್ರಿಯಿಲ್ಲದೆ, ಛಂದೋಬದ್ಧ ಪದ್ಯಗಳ ರೂಪದಲ್ಲಿ ಪರಿಹಾರ ನೀಡುವುದು ಈ ಕಲೆಯ ವಿಶೇಷ. ಧಾರಣ ಹಾಗೂ ಪೂರಣ ಅವಧಾನದ ಮೂಲಧಾತುಗಳು. ಸಮಸ್ಯೆಗಳನ್ನು ನಾಲ್ಕು ಸುತ್ತುಗಳಲ್ಲಿ ಸ್ವಾರಸ್ಯಕರವಾಗಿ ಪರಿಹರಿಸುವುದು ಪೂರಣವಾದರೆ, ಸಮಸ್ಯೆ ಮತ್ತು ಹಿಂದಿನ ಸುತ್ತುಗಳಲ್ಲಿ ನೀಡಿರುವ ಪರಿಹಾರಪಾದಗಳನ್ನು ನೆನಪಿನಲ್ಲಿಟ್ಟು, ಮುಂದುವರಿಸುವುದು ಧಾರಣೆ. ಇವೆಲ್ಲವುಗಳ ಮಧ್ಯೆ ಅಪ್ರಸ್ತುತ ಪುಚ್ಛಕರು ಅವರ ಆಲೋಚನೆಗಳನ್ನು ಭಂಗ ಪಡಿಸಲು ನಾನಾ ರೀತಿಯ ಪ್ರಶ್ನೆಗಳನ್ನು ಹಾಕುತ್ತಾ ಕುಚೇಷ್ಟೆಗಳನ್ನು ಮಾಡುತ್ತಿದ್ದರೂ ಶಾಂತ ಚಿತ್ತವಾಗಿ ಎಲ್ಲರಿಗೂ ಉತ್ತರಿಸುವುದೇ ಅವಧಾನದ ಕಲೆ. ಅವಧಾನಗಳಲ್ಲಿ ಅನೇಕ ವಿಧಗಳಿದ್ದರೂ, ಅಷ್ಟಾವಧಾನ ಮತ್ತು ಶತಾವಧಾನಗಳು ಪ್ರಚುರವಾಗಿವೆ. ಅಷ್ಟಾವಧಾನದಲ್ಲಿ, ಎಂಟು ಸಮಸ್ಯೆಗಳನ್ನೂ, ಶತಾವಧಾನದಲ್ಲಿ ನೂರನ್ನೂ ಏಕಕಾಲದಲ್ಲಿ ಪರಿಹರಿಸುವುದಾಗುತ್ತದೆ. ಕೊನೆಯಲ್ಲಿ, ಪೃಚ್ಛಕರ ಪರಿಹಾರಗಳೊಡನೆ ಅವಧಾನವು ಪೂರ್ಣವಾಗುತ್ತದೆ.

ತೆಲುಗಿನ ಪಿಸುಪಾಟಿ ಚಿದಂಬರ ಶಾಸ್ತ್ರಿಗಳ ಪ್ರೇರಣೆಯಿಂದ, ಕನ್ನಡದ ಹಿರಿಯ ಶ್ರೇಷ್ಠ ಕವಿಗಳಾಗಿದ್ದ ಬೆಳ್ಳಾವೆ ನರಹರಿಶಾಸ್ತ್ರಿಗಳು, 1933-36ರ ಸಮಯದಲ್ಲಿ ಅವಧಾನವೊಂದನ್ನು ಮಾಡಿ ತೋರಿಸಿದರು. ಅಲ್ಲಿಯವರೆಗೂ ಕನ್ನಡದ ಇತಿಹಾಸದಲ್ಲಿಯೇ ಅವಧಾನ ಕಲೆಯ ಬಗ್ಗೆ ಉಲ್ಲೇಖಗಳು ಇದ್ದರೂ ಅವಧಾನ ಮಾಡುವ ಪ್ರತಿಭೆಯುಳ್ಳವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. 1980ರಿಂದ ನಂತರ ಶ್ರೀ ಗಣೇಶ್ ಆವರು ಅವಧಾನವನ್ನು ಕರಗತ ಮಾಡಿಕೊಂಡು 1982ರಲ್ಲಿ ಮೊದಲು ತಮ್ಮ ಗೆಳೆಯರ ಸಮ್ಮುಖದಲ್ಲಿ ಮೊದಲಬಾರಿಗೆ ಅವಧಾನಕಲೆಯನ್ನು ಪ್ರಚುರ ಪಡಿಸಿದ ನಂತರ ಎಲ್ಲೆಡೆಯಲ್ಲಿಯೂ ಇದಕ್ಕೆ ಮಾನ್ಯತೆ ದೊರೆತು ಕನ್ನಡಿಗರೂ ಈ ಕಲೆಯತ್ತ ಆಕರ್ಷಿತರಾಗ ತೊಡಗಿದರು. ತಮ್ಮ ಹುಟ್ಟೂರಾದ ಕೋಲಾರದಲ್ಲಿಯೇ ಡಾ. ಡಿ.ವಿ.ಜಿಯವರ ನೂರನೆಯ ವರ್ಧಂತ್ಯುತ್ಸವದ ಸುಸಂದರ್ಭದಲ್ಲಿ, ಸಾವಿರಾರು ಜನ ನೆರೆದಿದ್ದ ಸಭಾಂಗಣದಲ್ಲಿ 100 ನೆಯ ಅಷ್ಟಾವಧಾನವನ್ನು ನಡೆಸಿಕೊಟ್ಟಿದ್ದಲ್ಲದೇ, ತಮ್ಮ 200 ನೆಯ ಅಷ್ಟಾವಧಾನವನ್ನೂ ಕೋಲಾರದಲ್ಲಿಯೇ ನೆರವೇರಿಸಿದ್ದದ್ದು ಗಮನಾರ್ಹ. ಅಂದು ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಬಂದ ನೆರದಿದ್ದ ಸಹಸ್ರಾರು ಜನರ ಸಮ್ಮುಖದಲ್ಲಿ 8 ಭಾಷೆಗಳಲ್ಲಿ ಸಂಸ್ಕೃತ, ಕನ್ನಡ, ತೆಲುಗುಗಳಲ್ಲಿ ಅವಧಾನವನ್ನು ಪ್ರಸ್ತುತಪಡಿಸಿದ್ದರು. ಅದರಲ್ಲಿ ಚಿತ್ರಕಾವ್ಯ ಗಣೇಶ್ ರವರ ವಿಶೇಷತೆಗಳಲ್ಲೊಂದು.

ಕೇವಲ ಕರ್ನಾಟಕವಲ್ಲದೇ, ದೇಶಾದ್ಯಂತ ಹಲವಾರು ಅವಧಾನದ ಕಾರ್ಯಕ್ರಮಗಳನ್ನು ನಡೆಸಿದ್ದಲ್ಲದೇ, ವಿದೇಶಗಳಾದ ಅಮೇರಿಕ ಮತ್ತು ಯೂರೋಪ್ ದೇಶಗಳಿಗೆ ಭೇಟಿ ಕೊಟ್ಟ ಸಮಯದಲ್ಲಿ 20ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿದರು. ಹೀಗೆ ನೂರಾರು ಅಷ್ಟಾವಧಾನದಿಂದ ಪ್ರಭಾವಿತರಾದ ನಂತರ 1991 ರ ಡಿಸೆಂಬರ್, 15 ರಂದು ಮೊದಲ ಬಾರಿಗೆ ಬೆಂಗಳೂರಿನ ಭಾರತೀಯ ವಿದ್ಯಾಭವನದ ಪ್ರಾಂಗಣದಲ್ಲಿ ಶತಾವಧಾನ ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಿದ್ದಲ್ಲದೇ, ಅದಾದ ಕೇವಲ 15 ದಿನಗಳಲ್ಲೇ ಮತ್ತೊಂದು ಶತಾವಧಾನವನ್ನು ನಡೆಸಿಕೊಟ್ಟು ಶತಾವಧಾನಿ ಗಣೇಶ್ ಎಂಬ ಖ್ಯಾತಿಗೆ ಪಾತ್ರರಾದರು.

ಇದುವರೆವಿಗೂ ಸುಮಾರು ಮುನ್ನೂರಕ್ಕೂ ಹೆಚ್ಚು ಕನ್ನಡ ಅಷ್ಟಾವಧಾನಗಳು, ಹಾಗೂ ಕನ್ನಡದಲ್ಲಿ ಮೂರು, ತೆಲುಗು ಮತ್ತು ಸಂಸ್ಕೃತದಲ್ಲಿ ಒಂದೊಂದು ಶತಾವಧಾನಗಳನ್ನು ಯಶಸ್ವಿಯಾಗಿ ನಡೆಸಿರುವ ಗಣೇಶ್, ಇದೀಗ ತಮ್ಮ ಸಹಸ್ರಾವಧಾನ ಮಾಡುವುದಕ್ಕೆ ಸಿದ್ಧರಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕೇವಲ ಕನ್ನಡವಲ್ಲದೇ, ತೆಲುಗು, ತಮಿಳಿನಲ್ಲಿ ಹಾಗೂ ಸಂಸ್ಕೃತದಲ್ಲಿ ಅಷ್ಟಾವಧಾನ ನಡೆಸಿದ ಕೀರ್ತಿಗೆ ಭಾಜನರಾಗಿರುವುದಲ್ಲದೇ, ಈ ರೀತಿಯಾಗಿ ನಾಲ್ಕು ಭಾಷೆಗಳಲ್ಲಿಯೂ ಅವಧಾನವನ್ನು ನಡೆಸಿರುವ ಸಾಧನೆ ಮಾಡಿರುವ ಏಕೈಕ ಭಾರತೀಯರಾಗಿದ್ದಾರೆ ಡಾ. ಗಣೇಶ್.

ಕಾವ್ಯಮೀಮಾಂಸೆ, ಛಂದಶ್ಯಾಸ್ತ್ರ, ವೇದಾಂತ, ಉಪನಿಷತ್, ಧರ್ಮಶಾಸ್ತ್ರ, ಇತಿಹಾಸ, ಸಂಸ್ಕೃತಿ, ಕಲೆ, ಭಾರತೀಯ ತತ್ವಶಾಸ್ತ್ರ, ವ್ಯಾಕರಣ, ಅಲಂಕಾರ ಶಾಸ್ತ್ರ ಹೀಗೆ ಹತ್ತು ಹಲವು ವಿವಿಧ ಕ್ಷೇತ್ರಗಳಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿರುವುದಲ್ಲದೇ, ಲಲಿತ ಕಲೆಗಳಾದ ಸಂಗೀತ, ನೃತ್ಯ, ಚಿತ್ರಕಲೆ ಮುಂತಾದುವುಗಳಲ್ಲಿಯೂ ಸಹಾ ಪ್ರಾವೀಣ್ಯವನ್ನು ಪಡೆದಿದ್ದಾರೆ. ಭರತ ನಾಟ್ಯಕ್ಕಾಗಿಯೇ ಅನೇಕ ತಿಲ್ಲಾನಗಳನ್ನೂ ರಚಿಸಿದ್ದಾರೆ. 22 ಭಾಷೆಗಳಲ್ಲಿ ಪ್ರಾವೀಣ್ಯತೆಯನ್ನು ಹೊಂದಿದ್ದ ಕನ್ನಡ ಪ್ರಪ್ರಥಮ ರಾಷ್ಟ್ರಕವಿಗಳಾಗಿದ್ದ ಡಾ. ಗೋವಿಂದ ಪೈ ರವರನ್ನು ತಮ್ಮ ಆದರ್ಶವನ್ನಾಗಿಟ್ಟು ಕೊಂಡಿರುವ ಗಣೇಶರು, ಭಾರತೀಯ ಭಾಷೆಗಳಾದ ಕನ್ನಡ, ಸಂಸ್ಕೃತ, ತೆಲುಗು, ತಮಿಳು, ಹಿಂದಿ, ಪಾಳಿ, ಶೌರಸೇನಿ, ಮರಾಠೀ, ಬಂಗಾಲೀ, ಮುಂತಾದುವುಗಳಲ್ಲದೇ ವಿದೇಶೀಯ ಭಾಷೆಗಳಾದ ಇಂಗ್ಲೀಷ್, ಗ್ರೀಕ್, ಲ್ಯಾಟಿನ್, ಇಟಾಲಿಯನ್ ಹೀಗೆ ಒಟ್ಟು 18 ಭಾಷೆಗಳಲ್ಲಿ ಪರಿಣತಿಯನ್ನು ಹೊಂದಿದ್ದಾರೆ.

ಉತ್ತಮ ಕವಿ, ಅತ್ಯುತ್ತಮ ಉಪನ್ಯಾಸಕ ಮತ್ತು ಖ್ಯಾತ ಚಿಂತಕರೂ ಆಗಿರುವ ಡಾ. ಗಣೇಶ್ ಇದುವರೆವಿಗೂ ಕನ್ನಡ, ಸಂಸ್ಕೃತ ಹಾಗೂ ತೆಲುಗು ಭಾಷೆಗಳಲ್ಲಿ ಸಾಹಿತ್ಯ, ತತ್ವಶಾಸ್ತ್ರ, ನೀತಿಶಾಸ್ತ್ರ, ಅಲಂಕಾರ ಶಾಸ್ತ್ರ, ವಿಮರ್ಶೆ,ಯಕ್ಶಗಾನ, ನೃತ್ಯ, ತಂತ್ರಜ್ಞಾನ, ವಿಜ್ಞಾನ ಮುಂತಾದ ವಿಷಯಗಳಿಗೆ ಸಂಬಂಧಪಟ್ಟ ಅಪೂರ್ವವಾದ ಹಾಗೂ ಆಸಕ್ತಿದಾಯಕವಾದ ವಿಚಾರಗಳ ನೂರಕ್ಕೂ ಹೆಚ್ಚಿನ ಲೇಖನಗಳನ್ನು ಬರೆದಿದ್ದಾರಲ್ಲದೇ ಅವುಗಳ ಕುರಿತಂತೆ ಚರ್ಚೆಗಳಲ್ಲಿಯೂ ಭಾಗವಹಿಸಿದ್ದಾರೆ. ಇದರ ಜೊತೆಗೆ ಉತ್ತಮ ಸಂಶೋಧಕರೂ ಆಗಿರುವ ಗಣೇಶರು, ಪ್ರಾಚೀನ ಭಾರತದ ವಾಸ್ತುಶಾಸ್ತ್ರ ಹಾಗೂ ತಂತ್ರಜ್ಞಾನವೂ ಸೇರಿದಂತೆ ವೇದಗಳ ಇತಿಹಾಸ ಮುಂತಾದ ವಿರಳ ವಿಷಯಗಳ ಬಗ್ಗೆ ಅನೇಕ ಸಂಶೋಧನಾ ಲೇಖನಗಳನ್ನು ಮಂಡಿಸಿದ್ದಾರೆ. ಸಂಸ್ಕೃತದಲ್ಲಿ ಹನ್ನೆರಡಕ್ಕೂ ಹೆಚ್ಚಿನ ನಾಟಕಗಳನ್ನೂ, ಸುಮಾರು ಹದಿನಾರು ಕಾವ್ಯಗಳನ್ನೂ ರಚಿಸಿರುವ ಇವರು ಕನ್ನಡದಲ್ಲಿ ಎಂಟು ಕಾವ್ಯಗಳನ್ನು, ಮೂರು ಕಾದಂಬರಿಗಳನ್ನು ಹಾಗೂ ಆರು ಅನುವಾದಗಳನ್ನು ಮಾಡಿದ್ದಾರೆ.

ಕೇವಲ ಹಿಂದೂ ಧರ್ಮವಲ್ಲದೇ ಭಾರತೀಯ ಇತರೇ ಧರ್ಮಗಳ ಕುರಿತಂತೆಯೂ ಅಪಾರವಾದ ಜ್ಞಾನವನ್ನು ಹೊಂದಿರುವ ಗಣೇಶರ ಕುರಿತಂತೆ ಒಂದು ಪ್ರಸಂಗವನ್ನು ತಿಳಿಸಿದರೆ ಅರ್ಥವಾಗುತ್ತದೆ.

ಅವರೊಂದು ಸಲಾ ರಾಜಸ್ಥಾನದ ಮೌಂಟ್ ಅಬುಗೆ ಹೋಗಿದ್ದಾಗ, ಅಲ್ಲಿನ ಜೈನ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ದುರಾದೃಷ್ಟವಷಾತ್, ಸಾರ್ವಜನಿಕರ ಭೇಟಿಯ ಸಮಯ ಮುಗಿದ ನಂತರ ಕೇವಲ ಜೈನರಿಗೆ ಮಾತ್ರ ಆ ದೇವಾಲಯಕ್ಕೆ ಪ್ರವೇಶವಿದ್ದ ಕಾರಣ ಅಲ್ಲಿಯ ದ್ವಾರಪಾಲಕ ಗಣೇಶರು ಮತ್ತು ಅವರ ಸ್ನೇಹಿತರನ್ನು ತಡೆಯುತ್ತಾನೆ. ಹೀಗೇಕೆ ಎಂದು ಪ್ರಶ್ನಿಸಿದಾಗ, ಈ ನಿರ್ಧಿಷ್ಟ ಸಮಯದಲ್ಲಿ ಪೂಜೆ ನಡೆಯುವ ಕಾರಣ ಅಲ್ಲಿ ಜೈನರಿಗೆ ಮಾತ್ರ ಪ್ರವೇಶ ಎನ್ನುತ್ತಾರೆ. ಹಾಗಾದರೇ, ಬಂದವರು ಜೈನರು ಹೌದೋ ಅಲ್ಲವೋ ಎಂದು ಹೇಗೆ ಗುರುತಿಸುತ್ತೀರಿ? ಎಂದು ಗಣೇಶ್ ಪ್ರಶ್ನಿಸಿದಾಗ, ಜೈನರ ಶ್ಲೋಕದವೊಂದ್ನ್ನು ಹೇಳಿ, ಜೈನರಾದವರಿಗೆ ಈ ಶ್ಲೋಕ ಸಂಪೂರ್ಣ ಗೊತ್ತಿರುತ್ತದೆ ಹಾಗಾಗಿ ಅದನ್ನು ಹೇಳಿದವರಿಗೆ ಮಾತ್ರವೇ ಈ ಸಮಯದಲ್ಲಿ ಒಳಗೆ ಪ್ರವೇಶ ದೊರೆಯುತ್ತದೆ ಎನ್ನುತ್ತಾರೆ ದ್ವಾರಪಾಲಕರು. ಮರುಕ್ಷಣವೇ ನಿರರ್ಗಳವಾಗಿ ಶ್ಲೋಕ ಮತ್ತು ಅದರ ತಾತ್ಪರ್ಯವನ್ನು ಗಣೇಶರು ಹೇಳಿದ್ದನ್ನು ಕೇಳಿದ ದ್ವಾರಪಾಲಕ ಮೂಕವಿಸ್ಮಿತನಾಗಿ ಅವರಿಗೆ ವಂದಿಸಿ ದೇವಾಲಯದ ಪ್ರವೇಶಕ್ಕೆ ಅನುವು ಮಾಡಿಕೊಡುತ್ತಾರೆ.

ಗಣೇಶ್ ಅವರ ಪಾಂಡಿತ್ಯ ಮತ್ತು ಸಾಧನೆಗಾಗಿ ಅನೇಕ ಪ್ರಶಸ್ತಿ ಮತ್ತು ಪುರಸ್ಕಾರಗಳ ಲಭಿಸಿದ್ದು ಅವುಗಳಲ್ಲಿ ಪ್ರಮುಖವಾದವು

  • 1992ರ ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯೊತ್ಸವ ಪ್ರಶಸ್ತಿಯನ್ನು 29 ವರ್ಷಕ್ಕೇ ಪಡೆದ ಪ್ರಪ್ರಥಮ ಯುವ ಪ್ರತಿಭೆ ಎಂಬ ಹೆಗ್ಗಳಿಕೆ.
  • 2003ರ ಬಾದರಾಯಣ-ವ್ಯಾಸ ಪುರಸ್ಕಾರ (ರಾಷ್ಟ್ರಪತಿಗಳು ಸಂಸ್ಕೃತದಲ್ಲಿ ಮಾಡಿದ ಕಾರ್ಯಸಾಧನೆಗಳಿಗಾಗಿ ಪ್ರದಾನ ಮಾಡುವ ಪ್ರಶಸ್ತಿ)
  • 2010 ರ ಸಾಲಿನ ಸೇಡಿಯಾಪು ಪ್ರಶಸ್ತಿ
  • 2010 ರ, ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟೊರೇಟ್ ಅಲ್ಲದೇ,
  • ರಾಷ್ಟ್ರೀಯ ಯುವ ಪ್ರತಿಭಾ ಪುರಸ್ಕಾರ. ಕಾವ್ಯಕಾಂತ ಪ್ರಶಸ್ತಿ, ಚಿತ್-ಪ್ರಭಾನಂದ ಪ್ರಶಸ್ತಿ, ಅವರ ಕನ್ನಡದಲ್ಲಿ ಅವಧಾನ ಕಲೆ ಎಂಬ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ತನ್ನ ಪ್ರಪ್ರಥಮ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿದೆ.

ಕನ್ನಡ ಹಿರಿಯ ಸಾಹಿತಿ ಭೈರಪ್ಪನವರ ಕಾದಂಬರಿಯನ್ನು ಸಂಸ್ಕೃತಕ್ಕೆ ಅನುವಾದ ಮಾಡಿರುವ ಗಣೇಶರು, ನನಗೆ ಮರುಜನ್ಮವೇನಾದರೂ ಇದ್ದಲ್ಲಿ ಆಗ ಡಾ.ಎಸ್.ಎಲ್. ಭೈರಪ್ಪನವರ ಮಗನಾಗಿ ಹುಟ್ಟಬೇಕು ಎಂದಿದ್ದಾರೆ. ಜನರಲ್ಲಿ ದಿನೇ ದಿನೇ ಕುಸಿಯುತ್ತಿರುವ ಭಾಷೆ ಮತ್ತು ಸಾಹಿತ್ಯಗಳ ಆಸಕ್ತಿಯ ನಡುವೆ ಅವುಗಳ ಪುನರುಜ್ಜೀವನಕ್ಕಾಗಿ ಆಜೀವ ಬ್ರಹ್ಮಚಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಗಣೇಶರು ನಶಿಸಿಯೇ ಹೋಗಿದ್ದ ಅಷ್ಟಾವಧಾನದ ಕಲೆಗೆ ಜೀವ ತುಂಬಿ ಇನ್ನೂ ಅನೇಕ ಯುವಕರು ಆ ಕಲೆಯತ್ತ ಆಸಕ್ತಿ ಬೆಳೆಸುವ ಮೂಲಕ ಪ್ರಪಂಚಾದ್ಯಂತ ಕನ್ನಡದ ಕಂಪನ್ನು ಹರಡುತ್ತಿರುವ ಶ್ರೀ ಶತಾವಧಾನಿ ಗಣೇಶ್ ಆವರು ನಮ್ಮ ಹೆಮ್ಮೆಯ ಕನ್ನಡ ಕಲಿಗಳೇ ಸರಿ

ಏನಂತೀರೀ?

3 thoughts on “ಶತಾವಧಾನಿ ಡಾ. ಆರ್. ಗಣೇಶ್

  1. ಅಪರೂಪ…ಅನುರೂಪ…ಅದ್ಭುತ…ವ್ಯಕ್ತಿತ್ವದ ದೈತ್ಯ ಪ್ರತಿಭೆ! ಆದರೆ ಅಷ್ಟೇ ನೆಲಕ್ಕಂಟಿದ (down to earth) ಸಹಜೀವಿ. “ಅವಿಳಂಬ ಸರಸ್ವತಿ” ” ವಿದ್ವಲ್ಲೋಕದ ವಿಸ್ಮಯ!” ಎಂದ ಮಾತುಗಳಿಗೆ ಅನ್ವರ್ಥವಾದ ವ್ಯಕ್ತಿತ್ವ. ಇಂದಿನ ಕನ್ನಡನಾಡಿನ ಏಕೈಕ ಶತಾವಧಾನಿಯೆಂಬುದೇ ಸಾಕು ಅವರ ಸಾಧನೆಗೆ. 🙏

    Liked by 1 person

Leave a comment