ಮಂಗರವಳ್ಳಿ, ಔಷಧೀಯ ಗುಣವುಳ್ಳ, ಅಲಂಕಾರಿಕ ಗಿಡ

ಈ ಚಿತ್ರವನ್ನು ನೋಡಿದ ತಕ್ಷಣ ಅರೇ ಈ ಗಿಡವನ್ನು ಎಲ್ಲೋ ನೋಡಿದ್ದೇವಲ್ಲಾ ಎಂದೆನಿಸಿ ಸ್ವಲ್ಪ ಕಾಲ ಯೋಚಿಸುತ್ತಿದ್ದಂತೆಯೇ, ಹಾಂ! ಅವರ ಮನೆಯಲ್ಲಿ ಕಾಂಪೌಂಡ್ ಮೇಲೆ ಸುಂದರವಾಗಿ ಹಬ್ಬಿಸಿದ್ದಾರಲ್ವಾ ಎಂದು ನೆನಪಿಸಿಕೊಂಡರೇ ಮತ್ತೊಬ್ಬರ ಮನೆಯ ಹೂಕುಂಡದಲ್ಲಿಯೂ ಬೆಳೆಸಿರುತ್ತಾರೆ ಬಹುತೇಕ ಉದ್ಯಾನವನಗಳ ಬೇಲಿಗಳ ಮೇಲೆ ಈ ಮಂಗರವಳ್ಳಿಯ ಬಳ್ಳಿಯನ್ನು ಕಾಣಬಹುದಾಗಿದೆ. ಪುನುಗು ಬೆಕ್ಕಿಗೆ ತನ್ನ ದೇಹದಿಂದಲೇ ಒಸರುವ ಸುಂಗಂಧ ತನಗೇ ಗೊತ್ತಿಲ್ಲದಿರುವ ಹಾಗೇ ಆಲಂಕಾರಿಕವಾಗಿ ತಮ್ಮ ಮನೆಗಳಲ್ಲಿ ಬೆಳೆಸುವ ಬಹುತೇಕರಿಗೆ ಔಷಧೀಯ ಗುಣಗಳುಳ್ಳ ಬಹುಪಯೋಗಿ ಈ ಮಂಗರವಳ್ಳಿಯ ಮಹತ್ವವೇ ತಿಳಿದಾಗಿರುವುದು ಒಂದು ರೀತಿಯ ವಿಪರ್ಯಾಸವೇ ಸರಿ.

ಈ ಮಂಗರವಳ್ಳಿಯನ್ನು ಅಚ್ಚ ಕನ್ನಡದಲ್ಲಿ ನೆರಲೆಕುಡಿ ಅಂತಲೂ ಕರೆಯುತ್ತಾರೆ. ಇದು ಕ್ಯಾಕ್ಟಸ್ ಜಾತಿಯ ಬಹಳ ಮೃದುವಾದ ಬಳ್ಳಿಯ ಗಿಡವಾಗಿದ್ದು ಸಾಧಾರವಾಗಿ ಬೇರೇ ಯಾವುದಾದರೂ ಗಿಡ, ಮರ ಅಥವಾ ಗೋಡೆಗಳನ್ನು ಆಶ್ರಯಿಸಿ ಹದಿನೈದರಿಂದ ಇಪ್ಪತ್ತು ಅಡಿ ಉದ್ದ ಬೆಳೆಯುತ್ತದೆ. ಕಡು ಹಸಿರು ಬಣ್ಣದ ಎರಡರಿಂದ ಮೂರು ಅಂಗುಲ ಅಂತರದಲ್ಲಿ ಚಪ್ಪಟ್ಟೆ ಅಥವಾ ಚೌಕೋನದಂತೆ ಇರುವ ಕಾಂಡಗಳ ಮಧ್ಯೆ ಒಂದು ಸಣ್ಣದಾದ ಎಲೆಗಳು ಇದ್ದು, ಅವುಗಳ ನಡುವೆಯೇ ಹೂವು ಸಹಾ ಬಿಡುತ್ತವೆ. ವೈಜ್ಞಾನಿಕವಾಗಿ ಈ ಸಸ್ಯವು ವೈಟೇಸಿ ಎಂಬ ಕುಟುಂಬಕ್ಕೆ ಸೇರಿದ್ದು ಇದಕ್ಕೆ ಕ್ವಾಡ್ರಾಂಗ್ಯುಲ್ಯಾರಿಸ್ ಎಂದು ಕರೆಯಲಾಗುತ್ತದೆ.

ಮಂಗರವಳ್ಳಿಯನ್ನು ಇತರೇ ಭಾಷೆಗಳಲ್ಲಿ ಹೀಗೆ ಕರೆಯುತ್ತಾರೆ

  • ಸಂಸ್ಕೃತ – ಅಸ್ಥಿಸಂಹಾರಕ, ಅಸ್ಥಿಶೃಂಖಲ, ವಜ್ರವಲ್ಲಿ
  • ಹಿಂದಿ – ಹಡ್ಜೋಡ್
  • ಮರಾಠಿ – ನಾದೇನ
  • ತಮಿಳು – ಪಿಂಡೈ
  • ತೆಲುಗು – ನಲ್ಲೇರು
  • ಇಂಗ್ಲೀಷ್ – edible stemmed vine; bone setter
  • ವೈಜ್ಞಾನಿಕ ಹೆಸರು – cissus quadrangularis

ಸಾಧರಣವಾಗಿ ಎಲ್ಲಾ ರೀತಿಯ ಮಣ್ಣಿನಲ್ಲಿ ಸುಲಭವಾಗಿ ಬೆಳೆಯುವ ಈ ಗಿಡ ಕೇವಲ 2-3 ಗಿಣ್ಣುಗಳಿರುವ ಕಾಂಡವನ್ನು ಮಣ್ಣಿನಲ್ಲಿ ನೆಟ್ಟರೂ ಒಂದೆರಡು ವಾರಗಳಲ್ಲಿ ಚೆನ್ನಾಗಿ ಚಿಗುರಿ ಬಿಡುತ್ತದೆ. ಕಾಂಡಗಳ ನಡುವೆ ಎಲೆಗಳು ನೋಡಲು ಬಹಳ ಅಂದವಾಗಿ ಕಾಣುವ ಕಾರಣ ಬಹುತೇಕರು ಈ ಗಿಡವನ್ನು ಮನೆಗಳ ಬೇಲಿಯ ಮೇಲೆಯೋ ಅಥವಾ ಕಾಂಪೌಂಡಿನ ಮೇಲೆಯೋ ಅಥವಾ ತೂಗುಕುಂಡಗಳಲ್ಲಿ ಜೋತು ಬೀಳುವಂತೆ ಆಲಂಕಾರಿಕವಾಗಿ ಬೆಳೆಸುತ್ತಾರೆ. ನೀರು ಸಿಕ್ಕಾಗ ತನ್ನ ಕಾಂಡಗಳಲ್ಲಿ ನೀರನ್ನು ಸಂರಕ್ಷಿಸಿಕೊಳ್ಳುವ ಕಾರಣ ಈ ಗಿಡಗಳಿಗೆ ಒಂದು ವಾರ ಅಥವಾ ಹತ್ತು ದಿನಗಳಿಗೊಮ್ಮೆ ನೀರುಣಿಸಿದರೂ ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾಂಡಗಳ ರಸವು ಸ್ವಲ್ಪ ಕ್ಷಾರವಾಗಿರುವ ಕಾರಣ ಈ ಗಿಡಗಳಿಗೆ ಯಾವುದೇ ರೀತಿಯ ಕೀಟ ಅಥವಾ ರೋಗಬಾಧೆ ಕಂಡುಬರುವುದಿಲ್ಲರಿರುವುದು ಗಮನಾರ್ಹವಾಗಿದೆ.

ಮಂಗರವಳ್ಳಿ ಗಿಡಕ್ಕೆ ಮುರಿದ ಮೂಳೆಗಳನ್ನು ಜೋಡಿಸುವ ಗುಣವಿರುವುದರಿಂದ ಈ ಗಿಡಕ್ಕೆ ಆಯುರ್ವೇದ ಮತ್ತು ನಾಟೀ ಔಷಧಿಗಳಲ್ಲಿ ಅಪಾರವಾಗಿ ಬಳಸುತ್ತಾರೆ. ಮೂಳೆ ಜೋಡಿಸುವ ಶಕ್ತಿ ಇರುವುದರಿಂದಲೇ ಈ ಗಿಡಕ್ಕೆ ಸಂಸ್ಕೃತದಲ್ಲಿ ಅಸ್ಥಿಶೃಂಖಲ ಎಂದೇ ಕರೆಯಲಾಗುತ್ತದೆ. ಇದೊಂದು ಎಲ್ಲೆಂದರಲ್ಲಿ ಹಬ್ಬುವ ಬಳ್ಳಿ ಗಿಡವಾಗಿರುವ ಕಾರಣ ಸಂದು ಬಳ್ಳಿ ಅಥವಾ ಸಂದಕದ ಗಿಡ ಎಂದೂ ಕರೆಯುತ್ತಾರೆ.

  • ಗ್ರಾಮೀಣ ಪ್ರದೇಶಗಳಲ್ಲಿ ಮೂಳೆ ಮುರಿದಾಗ ನಾಟೀ ವೈದ್ಯರು ಮಂಗರವಳ್ಳಿಯ ಕಾಂಡವನ್ನು ಜಜ್ಜಿ ಮುರಿದ ಸ್ಥಳದಲ್ಲಿ ಪಟ್ಟು ಹಾಕುತ್ತಾರೆ.
  • ಆಯುರ್ವೇದದಲ್ಲಿ ಮಂಗರವಳ್ಳಿಯ ಜೊತೆಯಲ್ಲಿ ಹುಣಸೆಹಣ್ಣು ಮತ್ತು ಅಡುಗೆಗೆ ಬಳಸುವ ಉಪ್ಪಿನೊಂದಿಗೆ ಚೆನ್ನಾಗಿ ಚೆಚ್ಚಿ ಅದನ್ನು ಮೂಳೆ ಮುರಿದ ಜಾಗದಲ್ಲಿ ಕಟ್ಟನ್ನು ಕಟ್ಟಿ ಒಂದು ವಾರದ ನಂತರ ಇದರ ರಸವನ್ನು ಮೂಳೆ ಮುರಿದ ಜಾಗದಲ್ಲಿ ಹಚ್ಚುತ್ತಾ ಬಂದಲ್ಲಿ ಮುರಿದ ಮೂಳೆಗಳು ಬಹುಬೇಗನೆ ಕೂಡಿಕೊಳ್ಳುತ್ತವೆ.
  • ಅದೇ ರೀತಿ ತರಚು ಗಾಯಗಳಾದಾಗ ಮಂಗರವಳ್ಳಿ ಜಜ್ಜಿ ಲೇಪಿಸಿದಲ್ಲಿ ಗಾಯ ಬೇಗನೇ ಮಾಯುತ್ತದೆ.
  • ಚರ್ಮರೋಗಗಳಿಂದ ಬಳಲುವವರು ಮಂಗರವಳ್ಳಿ ಜಜ್ಜಿ ರಸ ತೆಗೆದು ಎರಡು ಚಮಚ ರಸವನ್ನು ಸೇವಿಸುವುದರ ಜೊತೆಗೆ ಅದರ ರಸವನ್ನು ಲೇಪಿಸುವುದರಿಂದ ಚರ್ಮ ರೋಗ ವಾಸಿಯಾಗುತ್ತದೆ.
  • ಮೂಲವ್ಯಾಧಿಯಿಂದ ಬಳಲುತ್ತಿರುವವರು ಮಂಗರವಳ್ಳಿಯನ್ನು ಜಜ್ಜಿ ತೆಗೆದ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸುವುದರ ಜೊತೆಗೆ ಅದರ ರಸವನ್ನು ಮೂಲವ್ಯಾಧಿಯ ಮೊಳಕೆಗೆ ಲೇಪಿಸಿದಲ್ಲಿ ಮೂಲವ್ಯಾದಿ ಶೀಘ್ರವಾಗಿ ಗುಣಮುಖವಾಗುತ್ತದೆ.
  • ಸಂಧಿ‌ ನೋವಿಗೂ ಇದರ‌ ಕಾಂಡದ ರಸ ರಾಮಬಾಣವಾಗಿದೆ.
  • ಮಲಬದ್ಧತೆಯಿಂದ ನರಳುತ್ತಿದ್ದವರು ಮಂಗರವಳ್ಳಿಯ ಒಣಗಿದ ಕಾಂಡದ ಪುಡಿಯಿಂದ ಕಷಾಯ ತಯಾರಿಸಿ ಕುಡಿಯುವುದರಿಂದ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.

ಕೇವಲ ಔಷಧಿಗಾಗಿ ಮಾತ್ರವಲ್ಲದೇ, ಭಾರತೀಯ ಆಹಾರ ಪದ್ದತಿಯಲ್ಲಿಯೂ ಮಂಗರವಳ್ಳಿಯ ಬಳಸುವ ಪದ್ದತಿ ರೂಡಿಯಲ್ಲಿದ್ದು, ಈಗಾಗಲೇ ತಿಳಿಸಿರುವಂತೆ ಇದರ ರಸವು ಬಹಳ ಖಾರವಾಗಿರುವುದರಿಂದ ಹಪ್ಪಳ ತಯಾರಿಸುವಾಗ ಖಾರಕ್ಕಾಗಿ ಇದನ್ನು ಬಳಸುತ್ತಾರೆ.
ಹಳೇ ಮೈಸೂರಿನ ಕಡೆಯಲ್ಲಿ ಶ್ರಾದ್ಧ / ವೈದಿಕಗಳಲ್ಲಿ ಮಂಗರವಳ್ಳಿಯ ಚಟ್ನಿಯನ್ನು ಮಾಡುವ ಪದ್ದತಿಯೂ ಇದೆ.

ಇಷ್ಟೆಲ್ಲಾ ಔಷಧೀಯ ಗುಣಗಳಿರುವ ಆಲಂಕಾರಿಕ ಗಿಡವಾದ ಮಂಗರವಳ್ಳಿಯನ್ನು ನಮ್ಮ ನಮ್ಮ ಮನೆಗಳಲ್ಲಿ ಯಥೇಚ್ಚವಾಗಿ ಬೆಳೆಸೋಣ, ಮನೆಮದ್ದಾಗಿ ಬಳಸೋಣ ಮತ್ತು ನಮ್ಮ ಮುಂದಿನ ಪೀಳಿಗೆಯವರಿಗೂ ಉಳಿಸೋಣ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s