ತಂಗರಸು ನಟರಾಜನ್

ಇತ್ತೀಚೆಗೆಷ್ಟೇ ಮುಗಿದ ಐಪಿಲ್ ಪಂದ್ಯಾವಳಿಯಲ್ಲಿ ಹೈದರಾಬಾದ್ ತಂಡದ ಪರ ತಮ್ಮ ಏಡಗೈ ವೇಗ ಮತ್ತು ಯಾರ್ಕರ್ ಬೋಲಿಂಗ್ ಮುಖಾಂತರ ಎಲ್ಲರ ಗಮನದ ಸೆಳೆದ ತಮಿಳುನಾಡು ಮೂಲದ ತಂಗರಸು ನಟರಾಜನ್ ಅರ್ಹತೆಯ  ತಮ್ಮ ಅರ್ಹತೆಯ ಮೇರೆಗೆ ಭಾರತಪರ ಟಿ20 ಪಂದ್ಯವನ್ನಾಡಲು ಆಯ್ಕೆಯಾಗುತ್ತಾರೆ. ಆದರೆ ಅದೃಷ್ಟದ ಮೇರೆಗೆ ಕಡೆಯ ಒಂದು ದಿನದ ಅಂತರಾಷ್ಟ್ರೀಯ ಪಂದ್ಯದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ.  ಅವರು ಆಡಿದ್ದು ಭಾರತ ತಂಡದ ಪ್ರಮುಖ ಬೌಲರ್ ಜಸ್ಪ್ರೀತ್ ಬೂಮ್ರಾ ಬದಲಾಗಿ. ಇದರಲ್ಲೇನು ವಿಶೇಷ ಅಂತೀರಾ? ಕಾಕತಾಳೀಯವೋ ಏನೋ? ತಂಗರಸು ನಟರಾಜನ್ ಮತ್ತು ಜಸ್ಪ್ಪ್ರೀತ್ ಬೂಮ್ರಾ ಅವರಿಬ್ಬರ ಆರಂಭದ ಪಂದ್ಯಾವಳಿಯಲ್ಲಿ ಸಾಕಷ್ಟು ಸಾಮ್ಯತೆ ಇದ್ದು ಅದನ್ನೇ ಇಲ್ಲಿ ತಿಳಿಸಲು ಹೊರಟಿದ್ದೇನೆ.

  • ಈ ಇಬ್ಬರೂ ಆಟಗಾರರೂ, ಮೂಲತಃ ಆಯ್ಕೆ ಮಾಡಿದ ಆಟಗಾರರಿಗೆ ಗಾಯವಾದ ಕಾರಣ ಬದಲಿ ಆಟಗಾರನಾಗಿ ಭಾರತೀಯ ತಂಡದಲ್ಲಿ ಕಡೆಯ ಕ್ಷಣದಲ್ಲಿ ಆಡುವ ಅವಕಾಶವನ್ನು ಪಡೆಯುತ್ತಾರೆ.
  • ಈ ಇಬ್ಬರೂ ತಮ್ಮ ಟಿ20 ಮತ್ತು ಏಕದಿನ ಅಂತರಾಷ್ಟ್ರೀಯ ಪಂದ್ಯಾವಳಿಯನ್ನು ಆಸ್ಟ್ರೇಲಿಯಾದಲ್ಲಿಯೇ, ಅವರ ವಿರುದ್ಧವೇ ಪಾದಾರ್ಪಣೆ ಮಾಡುತ್ತಾರೆ.
  • ಇಬ್ಬರ ಪಾದಾರ್ಪಣೆಯೂ ಆ ಏಕದಿನ ಸರಣಿಯ ಕಡೆಯ ಪಂದ್ಯಾವಳಿ ಎನ್ನುವುದು ವಿಶೇಷ.
  • ಆ ಇಬ್ಬರ ಚೊಚ್ಚಲ ಪಂದ್ಯದಲ್ಲಿ ಭಾರತಕ್ಕೆ ಅ ಸರಣಿಯಲ್ಲಿ ದೊರೆತ ಏಕೈಕ ಜಯವಾಗಿದೆ.
  • ಚೊಚ್ಚಲ ಏಕದಿನ  ಪಂದ್ಯದಲ್ಲಿ ಇಬ್ಬರೂ 2 ವಿಕೆಟ್ ಪಡೆದಿದ್ದಾರೆ.
  • ಚೊಚ್ಚಲ ಟಿ20 ಪಂದ್ಯದಲ್ಲಿ ಇಬ್ಬರೂ ಸಹಾ 3 ವಿಕೆಟ್ ಪಡೆದಿದ್ದಾರೆ.
  • ಇಬ್ಬರೂ ಸಹಾ ಓವರಿನ ಆರೂ ಎಸತಗಳನ್ನೂ ಯಾರ್ಕರ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ತಂಗರಸು ನಟರಾಜನ್ ವ್ಯಕ್ತಿ ಪರಿಚಯ

ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿರುವ ಚಿನ್ನಪ್ಪಂಪಟ್ಟಿ ಎಂಬ ಸಣ್ಣ ಹಳ್ಳಿಯಲ್ಲಿ ಮೇ 27, 1991ರಲ್ಲಿ ತಂಗರಸು ನಟರಾಜನ್ ಜನಿಸುತ್ತಾರೆ. ಮನೆಯಲ್ಲಿ ಕಡುಬಡತನ. ಸಂಸಾರವನ್ನು ನಡೆಸುವ ಸಲುವಾಗಿ ತಂದೆ ಸೀರೆ ತಯಾರಿಕಾ ಕಂಪೆನಿಯಲ್ಲಿ ದುಡಿಯುತ್ತಿದ್ದರೆ, ತಾಯಿ ದಿನಗೂಲಿ ನೌಕರರಾಗಿ ಕೆಲಸಮಾಡುತ್ತಿರುತ್ತಾರೆ. ಬಾಲ್ಯದಿಂದಲೂ ನಟರಾಜ್ ಅವರಿಗೆ ಕ್ರಿಕೆಟ್ ಎಂದರೆ ಪಂಚಪ್ರಾಣ ಅದಕ್ಕಾಗಿಯೇ ತಮ್ಮ ಊರಿನಲ್ಲಿ ಹುಡುಗರ ತಂಡವನ್ನು ಕಟ್ಟಿಕೊಂಡು ಟಿನಿಸ್ ಬಾಲ್ ಕ್ರಿಕೆಟ್ ಆಡುತ್ತಿರುತ್ತಾರೆ. ಟಿನ್ನಿಸ್ ಬಾಲಿನಲ್ಲಿಯೇ ವೇಗವಾಗಿ ಯಾರ್ಕರ್ ಬಾಲ್ ಗಳನ್ನು ಎಸೆಯುತ್ತಿದ್ದದ್ದನ್ನು ಚೆನೈನಲ್ಲಿ ಡಿವಿಜಿನಲ್ ಕ್ರಿಕೆಟ್ ಆಟವಾಡುತ್ತಿದ್ದ ಶ್ರೀ ಜಯಪ್ರಕಾಶ್ ಎಂಬುವರು ಗಮನಿಸಿ ನಟರಾಜ್ ಅವರನ್ನು ಚನ್ನೈಗೆ ಕರೆದುಕೊಂಡು ಹೋಗಿ ಸ್ಥಳೀಯ ಲೀಗ್ ಪಂದ್ಯಗಳಲ್ಲಿ ಚರ್ಮದ ಚೆಂಡಿನಲ್ಲಿ ಆಡುವ ಆಭ್ಯಾಸ ನಡೆಸುತ್ತಿದ್ದಾಗಲೇ,  2014-15ರಲ್ಲಿ ಅವರಿಗೆ ತಮಿಳುನಾಡು ರಣಜಿ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿ ಅಲ್ಲಿಯೂ ಸಹಾ ಒಹೋ ಎನ್ನುವಂತಿದ್ದರೂ ಉತ್ತಮ ಪ್ರದರ್ಶನ ನೀಡುವುದರಲ್ಲಿ ಸಫಲರಾಗುತ್ತಾರೆ.

2017ರಲ್ಲಿ ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‌ಪಿಎಲ್) ಆರಂಭವಾಗುತ್ತಿದ್ದ ಸಮಯದಲ್ಲಿ ಇವರ ಎತ್ತರ, ವೇಗ ಮತ್ತು ಕರಾರುವಾಕ್ ಆಗಿ ಯಾರ್ಕರ್ ಎಸೆಯುವುದನ್ನು ನೋಡಿ  ಡಿಂಡಿಗಲ್ ಡ್ರ್ಯಾಗನ್ಸ್ ತಂಡ ಇವರನ್ನು ಆಯ್ಕೆ ಮಾಡಿಕೊಳ್ಳುತ್ತದೆ.  ಆ ತಂಡದ ಪರ ಆರು ಪಂದ್ಯಗಳಲ್ಲಿ 5.4ರ ಎಕಾನಮಿಯಲ್ಲಿ 9 ವಿಕೆಟ್  ಕೀಳುವ ಮುಖಾಂತರ ಗಮನ ಸೆಳೆದ ಕಾರಣ ಮುಂದಿನ ವರ್ಷ ಲಿಕಾ ಕೋವೈ ಕಿಂಗ್ಸ್ ತಂಡ ಅವರನ್ನು ಆಯ್ಕೆ ಮಾಡಿಕೊಳ್ಳುತ್ತದೆ.

ಅದೇ ವರ್ಷ  ನಡೆದ ಐಪಿಎಲ್ ಹರಾಜಿನಲ್ಲಿ ವೀರೇಂದ್ರ ಶೇಹ್ವಾಗ್ ತಮ್ಮ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ 3 ಕೋಟಿ ರೂ ನೀಡಿ ಅವರನ್ನು ಖರೀದಿಸಿದಾಗ ಎಲ್ಲರ ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತಾರೆ. ತಂಡಕ್ಕೆ ಆಯ್ಕೆ ಆದರೂ ಕೇವಲ ಆರು ಪಂದ್ಯಗಳಲ್ಲಿ ಆಡಲು ಆವಕಾಶ ಸಿಕ್ಕಿ 9ರ ಎಕಾನಮಿಯಲ್ಲಿ ಕೇವಲ ಎರಡು ವಿಕೆಟ್‌ಗಳನ್ನು ಮಾತ್ರ ಪಡೆದ ಕಾರಣ ಅಷ್ಟೇನೂ ಬೆಳಕಿಗೆ ಬರುವುದಿಲ್ಲವಾದರೂ ಅಂತರಾಷ್ಟ್ರೀಯ ದೇಶ ವಿದೇಶೀ ಆಟಗಾರೊಂದಿಗೆ ಆಟವಾಡಿ ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ಮತ್ತಷ್ಟು ತಿದ್ದಿಕೊಂಡು ಮೊನವಾಗಿ ಯಾರ್ಕರ್  ಬೋಲಿಂಗ್ ಮಾಡುವುದನ್ನು ಕರಗತ ಮಾಡಿಕೊಳ್ಳುತ್ತಾರೆ.

ಅ ವರ್ಷ ಆಟದಲ್ಲಿ ಅಷ್ಟೇನೂ ಪ್ರಭಾವ ಬೀರದಿದ್ದರೂ ಐಪಿಎಲ್ ನಲ್ಲಿ ದೊರತ ಹಣದಲ್ಲಿ  ತಮ್ಮ ಜೀವನದ ಕನಸನ್ನೆಲ್ಲಾ ನನಸು ಮಾಡಿಕೊಳ್ಳುತ್ತಾರೆ. ಅದುವರೆವಿಗೂ ತಾನು ಈ ಮಟ್ಟಕ್ಕೆ ಏರಲು ತಮ್ಮೆಲ್ಲಾ ತನು ಮನ ಧನವನ್ನು ಧಾರೆಯಾಗಿ ಎರೆದಿದ್ದ ತಮ್ಮ ಕುಟುಂಬಕ್ಕೆ ಒಂದು ಸುಂದರವಾದ ಮನೆಯನ್ನು ಕಟ್ಟಿಕೊಡುವುದಲ್ಲದೇ, ಅದುವರೆವಿಗೂ ದುಡಿದು ದಣಿದಿದ್ದ ಅವರ ಪೋಷಕರನ್ನು ಕೆಲಸದಿಂದ ವಿಶ್ರಾಂತಿ ಕೊಡಿಸಿದ್ದಲ್ಲ್ದೇ, ಅವರ ಸಹೋದರಿಯರಿಗೆ ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳುವಂತೆ ಉತ್ತಮ ಶಿಕ್ಷಣ ಕೊಡಿಸುವುದಕ್ಕೆ ಬೇಕಾದ ಸೌಲಭ್ಯಗಳನ್ನು ಕಲಿಸಿಕೊಡುತ್ತಾರೆ.

2018ರ ಟಿಎನ್‌ಪಿಎಲ್‌ನಲ್ಲಿ ಲಿಕಾ ಕೋವೈ ಕಿಂಗ್ಸ್ ಪರ ಆಡಿದ ನಟರಾಜನ್, ಎಂಟು ಪಂದ್ಯಗಳಿಂದ 12 ವಿಕೆಟ್ ಕಬಳಿಸಿದ್ದನ್ನು ಗಮನಿಸಿದ  ಸನ್ ರೈಸರ್ಸ್ ಹೈದರಾಬಾದ್ ತಂಡ ಅವರನ್ನು ಖರೀದಿಸಿ, ಬೌಲಿಂಗ್ ಕೋಚ್ ಮುತ್ತಯ್ಯ ಮುರಳೀಧರನ್ ನೇತೃತ್ವದಲ್ಲಿ ಮತ್ತಷ್ಟು ಪಳಗುತ್ತಾರೆ. ದುರಾದೃಷ್ಟವಶಾತ್ 2018 ಮತ್ತು 2019ರ ಎರಡು ಆವೃತ್ತಿಗಳಲ್ಲಿಯೂ ಒಂದೇ ಒಂದು ಪಂದ್ಯವನ್ನೂ ಆಡುವ ಅವಕಾಶ ಸಿಕ್ಕದಿದ್ದರೂ ಬೇಸರಿಕೊಳ್ಳದೇ, ತಮಿಳುನಾಡಿನ ಪರ ರಣಜಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟೂರ್ನಿಗಳಲ್ಲಿ  ಉತ್ತಮ ಪ್ರದರ್ಶನ ನೀಡುತ್ತಲೇ ಬಂದು ಈ ವರ್ಷ ಸನ್ ರೈಸರ್ಸ್ ಹೈದರಾಬಾದ್ ಪರ ಆರಂಭದಲ್ಲಿಯೇ ಭುವನೇಶ್ವರ್ ಕುಮಾರ್ ಗಾಯಗೊಂಡ ಪರಿಣಾಮ ಆಡಲು ಸಿಕ್ಕ ಅವಕಾಶವನ್ನು ಎರಡೂ ಕೈಗಳಲ್ಲಿ ಬಾಚಿಕೊಂಡು ತಂಡದ ಪರ ಪ್ರಮುಖ ಬೌಲರ್ ಆಗಿದ್ದಲ್ಲದೇ, ಡೆತ್ ಬೋಲಿಂಗ್ ಸ್ಪೆಷಲಿಸ್ಟ್ ಎಂಬ ಖ್ಯಾತಿಗೆ ಪಾತ್ರರಾಗಿ ಎಲ್ಲರ ಗಮನವನ್ನು ಸೆಳೆದ ಕಾರಣ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದು ಈಗ ಎಲ್ಲರಿಗೂ ತಿಳಿದ ವಿಷಯವಾಗಿದೆ. ಇಂತಹ ಪ್ರತಿಭಾವಂತ ಆಟಗಾರನಿಗೆ ಪ್ರೋತ್ಸಾಹಿಸಲೆಂದೇ ತನಗೆ ದೊರೆತ ಸರಣಿ ಪುರುಶೋತ್ತಮ ಪ್ರಶಸ್ತಿಯನ್ನು ಹಾರ್ಧಿಕ್ ಪಾಂಡ್ಯ ನಟರಾಜನ್ ಅವರಿಗೆ ನೀಡಿರುವುದು ಭಾರತ ತಂಡದಲ್ಲಿರುವ ಸೌಹಾರ್ಧತೆಯನ್ನು ತೋರಿಸುತ್ತದೆ.

ತಮ್ಮ ಈ ರೀತಿಯ ಬೆಳವಣಿಗೆಗೆ ಸಹಕರಿಸಿದವರನ್ನು ಮತ್ತು ಮತ್ತು ತಮ್ಮೂರಿನ ಗೆಳೆಯರನ್ನು ಸದಾಕಾಲ ಸ್ಮರಿಸುತ್ತಾ ಅವರಿಗೆ ಕೃತಜ್ಞತೆ ಸಲ್ಲಿಸುವ ಅವರ ಹೃದಯವೈಶಾಲ್ಯತೆ ನಿಜಕ್ಕೂ ಅಭಿನಂದನಾರ್ಹ. ಐಪಿಎಲ್‌ನಲ್ಲಿ ನಟರಾಜನ್ ತಮ್ಮ  ಜೆರ್ಸಿ ಮೇಲೆ ಜೆಪಿ ನಟ್ಟು ಎಂದೇ ಹಾಕಿಕೊಳ್ಳುತ್ತಾರೆ. ಜೆಪಿ ಎನ್ನುವುದು ಅವರ ಸ್ನೇಹಿತ ಜಯಪ್ರಕಾಶ್ ಹೆಸರಿನ ಸಂಕ್ಷಿಪ್ತ ರೂಪವಾದರೇ, ನಟ್ಟು ಎಂದೇ ಅವರ ಊರಿನಲ್ಲಿ ಎಲ್ಲರೂ ಅವರನ್ನು ಪ್ರೀತಿಯಿಂದ ಕರೆಯುತ್ತಾರೆ. ಈ ರೀತಿಯಾಗಿ ತಮ್ಮ  ಗೆಳೆಯ ಮತ್ತು ತಮ್ಮೂರಿನ ಜನರಿಗೆ ಗೌರವ ಕೊಡುವುದು ಅರ್ಥವಾಗುತ್ತದೆ.

ಕೇವಲ 29ನೇ ವಯಸ್ಸಿನಲ್ಲಿಯೇ ತಮ್ಮೂರಿನಲ್ಲಿ ತಮ್ಮದೇ ಆದ ಕ್ರಿಕೆಟ್ ಅಕಾಡೆಮಿಯೊಂದನ್ನು ಸ್ಥಾಪಿಸಿ ತಮ್ಮೂರಿನ ಸುತ್ತಮುತ್ತಲೂ ಟೆನ್ನಿಸ್ ಬಾಲ್ ಕ್ರಿಕೆಟ್ ಆಡುವ ಪ್ರತಿಭಾವಂತ ಹುಡುಗರನ್ನು  ತಮ್ಮ ಅಕಾಡೆಮಿಗೆ ಸೇರಿಸಿಕೊಂಡು ಅವರಿಗೆ ಉಚಿತವಾಗಿ ಲೆದರ್ ಬಾಲ್ ತರಬೇತಿ ನೀಡುವ ಮೂಲಕ ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವಂತೆ ತಾವು ಕ್ರಿಕೆಟ್ಟಿನಲ್ಲಿ ಸಂಪಾದಿಸಿದ ಹಣವನ್ನು ಇಲ್ಲಿಗೇ ಸುರಿಯುತ್ತಿದ್ದಾರೆ. ಇದೇ ಅಕಾಡೆಮಿಯಿಂದ ಈಗಾಗಲೇ ಪೆರಿಯಾಸ್ವಾಮಿ ಎಂಬ ಉದಯೋನ್ಮುಖ ಬೌಲರ್ ಟಿಎನ್‌ಪಿಎಲ್‌ನಲ್ಲಿ ಆಡಿದ್ದಲ್ಲದೆ, ಸದ್ಯಕ್ಕೆ ಕೆಕೆಆರ್ ತಂಡದ ನೆಟ್ ಪ್ರಾಕ್ಟೀಸ್ ಬೌಲರ್ ಕೂಡಾ ಆಗಿರುವುದು ಗಮನಾರ್ಹವಾಗಿದೆ. ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಮಾಡಿದ ಸಾಧನೆ ಮೂಲಕ ತಮ್ಮ ಊರಿಗೆ ಕೀರ್ತಿ ತಂದಿದ್ದಲ್ಲದೇ,  ತನ್ನೆಲ್ಲಾ ಅನುಭವಗಳನ್ನು ಧಾರೆ ಎರೆದು ತಮ್ಮೂರಿನ ಪ್ರತಿಭೆಗಳಿಗೆ ಸ್ಫೂರ್ತಿಯಾಗಿ ಅನೇಕ ಕ್ರಿಕೆಟಗರನ್ನು ಸುತ್ತಮುತ್ತಲ ಹಳ್ಳಿಗಳಲ್ಲಿ ಬೆಳೆಯುವಂತೆ ಮಾಡುತ್ತಿರುವ ನಟರಾಜ್ ತನ್ನ ಹೆಸರಾದ ತಂಗರಸುವಿಗೆ ಅನ್ವರ್ಥದಂತೆ ಚಿನ್ನದ ರಾಜನಾಗಿದ್ದಾರೆ ಎಂದರೂ ತಪ್ಪಾಗಲಾರದು.

ತಂಗರಸು ನಟರಾಜನ್ ಕೂಡಾ ಬೂಮ್ರಾರಂತೆಯೇ ಅಂತರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಯಶಸ್ವಿಯಾಗಿ ಪರಿಣಾಮಕಾರಿಯಾಗಿ ಯರ್ಕರ್ ಬೋಲಿಂಗ್ ಮತ್ತು ಡೆತ್ ಓವರ್ ಸ್ಪೆಷಲಿಸ್ಟ್ ಆದಲ್ಲಿ ಭಾರತ ತಂಡದ ವೇಗದ ಬೋಲಿಂಗ್ ಪಡೆ ಮತ್ತಷ್ಟೂ ಬಲಿಷ್ಟವಾಗಿ ತಂಡದ ದಿಗ್ವಿಜಯಕ್ಕೆ ಕಾರಣೀಭೂತರಾಗಲಿ ಎಂದು ಹಾರೈಸೋಣ ಅಲ್ಲವೇ?

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s