ಮದುವೆ ಮತ್ತು ಸಾಮಾಜಿಕ ಜಾಲತಾಣ

ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ತುಂಬಾನೇ ವೈರಲ್ ಆಗಿತ್ತು. ಈ ವಯಸ್ಸಿನಲ್ಲಿ ಈ ಮುದುಕನಿಗೆ ಅಷ್ಟು ಚಿಕ್ಕ ವಯಸ್ಸಿನ ಹುಡುಗಿಯೊಂದಿಗೆ ಮದುವೆ ಬೇಕಿತ್ತಾ? ಅರವತ್ತಕ್ಕೆ ಮೂವತ್ತರ ಆಸೆಯೇ?, ಚಪಲ ಚೆನ್ನಿಗರಾಯ, ದುಡ್ಡಿದ್ದವರು ಅಮಾಯಕ ಹೆಣ್ಣು ಮಕ್ಕಳ ಮೇಲೆ ಹೇಗೆ ದೌರ್ಜನ್ಯ ಮಾಡುತ್ತಾರೆ? ಹೀಗೇ ಹಾಗೇ ಎಂದು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದರು. ಆದರೆ ಈ ಮದುವೆಯ ಹಿಂದೆ ಇದ್ದ ಅಸಲೀ ಕಾರಣ ತಿಳಿದ ಮೇಲೆ ಬಹುತೇಕರು ಆ ವಯಸ್ಸಾದವರನ್ನು ಹಾಡಿ ಹೊಗಳಿದ ಕಥೆ ಇದೋ ನಿಮಗಾಗಿ

ನಮ್ಮ ದೇಶದಲ್ಲಿ ಹಿಂದಿನ ಕಾಲದಲ್ಲಂತೂ ಮಕ್ಕಳು ಹುಟ್ಟಿದ ಕೂಡಲೇ ತೊಟ್ಟಿಲಲ್ಲೇ ಮದುವೆ ಶಾಸ್ತ್ರ ಮಾಡಿ ಮುಗಿಸುತ್ತಿದ್ದರಂತೆ. ಇನ್ನೂ ಕೆಲವೆಡೆ ಏನನ್ನೂ ತಿಳಿಯದ ಅಪ್ರಾಪ್ತ ವಯಸ್ಸಿನಲ್ಲಿ ಬಾಲ್ಯವಿವಾಹವನ್ನು ಮಾಡುತ್ತಿದ್ದರು. ಈ ಬಾಲ್ಯವಿವಾಹವನ್ನು ತೆಡೆಗಟ್ಟಲು ನಮ್ಮ ಸರ್ಕಾರ, ಮದುವೆಯಾಗಲು ಹೆಣ್ಣುಮಕ್ಕಳಿಗೆ 18 ಮತ್ತು ಗಂಡು ಮಕ್ಕಳಿಗೆ 21 ವರ್ಷಗಳಾದರೂ ಆಗಿರಲೇ ಬೇಕೆಂಬ ನಿಯಮವನ್ನು ಜಾರಿಗೆ ತಂದಿದೆ. ಇಂದಿನ ಹೆಣ್ಣು ಮಕ್ಕಳು ಸಹಾ ಹಿಂದಿನಂತೆ ತಂದೆ ತಾಯಿ ಹೇಳಿದ್ದಕ್ಕೆಲ್ಲಾ ಕೋಲೇ ಬಸವನಂತೆ ತಲೆಯಾಡಿಸದೇ ವಿದ್ಯಾಭ್ಯಾಸ ಮುಗಿಸಿ, ಒಳ್ಳೆಯ ನೌಕರಿಯೊಂದನ್ನು ಗಿಟ್ಟಿಸಿಕೊಂಡ ನಂತರ ಮದುವೆ ಮಾಡಿ ಕೊಳ್ಳುತ್ತಿದ್ದಾರೆ. ಅದೇ ರೀತಿ ಗಂಡು ಹುಡುಗರೂ ಸಹಾ ಹಿಂದಿನಂತೆ ಚಿಕ್ಕ ವಯಸ್ಸಿಗೇ ಮದುವೆಯಾಗದೇ ಓದು ಮುಗಿಸಿ, ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನೌಕರಿ ಗಿಟ್ಟಿಸಿಕೊಂಡು ತಮ್ಮ ಕಾಲಮೇಲೆ ನಿಂತ ಮೇಲೆಯೇ ಮದುವೆ ಮಾಡಿಕೊಳ್ಳುತ್ತಿದ್ದಾರೆ.

ಈ ಚಿತ್ರದಲ್ಲಿ ಕಾಣಿಸುತ್ತಿರುವ ಮಧುಮಗನ ಹೆಸರು ಶ್ರೀ ಮಾಧವ ಪಾಟೀಲ್. ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಉರನ್ ತಾಲ್ಲೂಕ್ಕಿನವರು. ವೃತಿಯಲ್ಲಿ ಪತ್ರಕರ್ತರಾಗಿದ್ದು, ಕಳೆದ 36 ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದು, ರಾಯಗಢ ಜಿಲ್ಲೆಯಲ್ಲಿ ಉತ್ತಮ ಪತ್ರಕರ್ತರೆಂಬ ಕೀರ್ತಿಗೆ ಪಾತ್ರರಾಗಿ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದರೂ ಬ್ರಹ್ಮಚಾರಿಗಳಾಗಿಯೇ ಇದ್ದವರು, ಈಗ ತಮ್ಮ 66 ನೇ ವಯಸ್ಸಿನಲ್ಲಿ ಮದುವೆ ಮಾಡಿಕೊಂಡು ಮತ್ತಷ್ಟು ಪ್ರಸಿದ್ಧಿಯನ್ನು ಪಡೆದಿದ್ದಾರೆ ಎನ್ನುವುದು ಕಠು ಸತ್ಯವೇ ಸರಿ.

ನಿಜ ಹೇಳಬೇಕೆಂದರೆ, ಅವರಿಗೆ 30 ವರ್ಷಗಳಾಗಿದ್ದಾಗಲೇ ಒಂದು ಹುಡುಗಿಯೊಂದಿಗೆ ನಿಶ್ಚಿತಾರ್ಥವಾಗಿತ್ತಾದರೂ, ಅದಾವುದೋ ಕಾರಣಗಳಿಂದಾಗಿ ಆ ನಿಶ್ಚಿತಾರ್ಥ ಮುರಿದುಬಿದ್ದು, ಅವರ ಮದುವೆ ನಿಂತು ಹೋಯಿತ್ತು. ಮದುವೆಯಾಗಿ ಸುಂದರ ಸಂಸಾರವನ್ನು ನಡೆಸ ಬೇಕೆಂದು ಆಶಿಸುತ್ತಿದ್ದವರಿಗೆ ಇದ್ದಕ್ಕಿದ್ದಂತಯೇ ಮದುವೆಯೇ ನಿಂತು ಹೋದಾಗ, ಆವರಿಗೆ ಮದುವೆಯ ವ್ಯವಸ್ಥೆಯ ಬಗ್ಗೆಯೇ ವಿಶ್ವಾಸ ಹೋಗಿ, ಜೀವನವಿಡೀ ಮದುವೆಯಾಗದೆ ಬ್ರಹ್ಮಚಾರಿಯಾಗಿಯೇ ಉಳಿಯುತ್ತೇನೆ ಎಂಬ ಭೀಷ್ಮ ಪ್ರತಿಜ್ಞೆ ಮಾಡಿ ಅದನ್ನು ಅನೂಚಾನವಾಗಿ ಇದುವರೆವಿಗೂ ನಡೆಸಿಕೊಂಡು ಹೋಗುತ್ತಿದ್ದರು. ಮಗನ ಈ ರೀತಿಯ ನಿರ್ಧಾರದಿಂದ ವಿಚಲಿತರಾದ ಅವರ ಪೋಷಕರು ಪದೇ ಪದೇ ಮದುವೆಯಾಗುವಂತೆ ಪರಿ ಪರಿಯಾಗಿ ಕೇಳಿಕೊಂಡಾರೂ ಮಾಧವ ಪಾಟೀಲ್ ಅದಕ್ಕೆ ಒಪ್ಪಿರಲಿಲ್ಲ. ಆದರೆ ಈ ಮಹಾಮಾರಿ ಕರೋನಾ ಲಾಕ್ ಡೌನ್ ಪರಿಸ್ಥಿತಿ ಅವರ ಬದುಕಿನಲ್ಲೊಂದು ಮಹತ್ತರ ತಿರುವೊಂದನ್ನು ತಂದಿದೆ.

ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ 66 ವಯಸ್ಸಿನ ಮಾಧವ ಪಾಟೀಲ್ ಹೊರಗೆಲ್ಲೂ ಹೊಗಲಾರದೇ ಮನೆಯಲ್ಲಿಯೇ ಕುಳಿತು ಕಾಲ ಕಳೆಯಬೇಕಾದಂತಹ ಪರಿಸ್ಥಿತಿ ಉಂಟಾದಾಗ ಅವರಿಗೆ ಏಕಾಂಗಿತನ ಕಾಡತೊಡಗಿದೆ. ತಮ್ಮ ಭಾವನೆಗಳನ್ನು ಹಂಚಿಕೊಳ್ಳಲಾದರೂ ಯಾರಾದರೂ ಇರಬೇಕು ಎಂದೆನಿಸಿದೆ. ಅದೂ ಅಲ್ಲದೇ, 88 ವಯಸ್ಸಿನವರಾದ ಅವರ ತಾಯಿಯನ್ನು ನೋಡಿಕೊಂಡು ಮನೆಯ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಹೋಗಲು ಒಂದು ಹೆಣ್ಣಿನ ಅವಶ್ಯಕತೆಯನ್ನು ಮನಗಂಡಿದ್ದಾರೆ. ಆದರೇ ಈ ಇಳೀ ವಯಸ್ಸಿನಲ್ಲಿ ನನಗೆ ಯಾರು ಹೆಣ್ಣು ಕೊಡುತ್ತಾರೆ? ಈ ವಯಸ್ಸಿನಲ್ಲಿ ಮದುವೆಯಾದರೇ ಸಮಾಜ ಹೇಗೆ ನೋಡುತ್ತದೆ ? ಎಂದೂ ಅಳುಕಿದ್ದಾರೆ.

ಆದರೇ ಆ ಬ್ರಹ್ಮ ಒಂದು ಗಂಡಿಗೆ ಒಂದು ಹೆಣ್ಣನ್ನು ಸೃಷ್ಟಿಸಿಯೇ ಇರುತ್ತಾನೆ ಎಂದು ಎಲ್ಲರೂ ನಂಬುವಂತೆ, ಪಾಟೀಲರಿಗೆ ಹೆಣ್ಣು ಹುಡುಕುತ್ತಿದ್ದ ಸಮಯದಲ್ಲಿ ಸಂಜನಾ ಎಂಬಾಕೆಯ ಬಗ್ಗೆ ಸುದ್ದಿ ತಿಳಿದು ಬಂದಿದೆ. ಸುಮಾರು 45 ವಯಸ್ಸಿನ ಸಂಜನಾರವರಿಗೆ ಬಾಲ್ಯದಲ್ಲಿಯೇ ಮದುವೆಯಾಗಿದ್ದು, ಯಾವುದೋ ವಯಕ್ತಿಕ ಕಾರಣಗಳಿಂದ ವಿವಾಹ ವಿಚ್ಛೇದಿತರಾಗಿ ತಮ್ಮ ಅಣ್ಣನ ಮನೆಯಲ್ಲಿ ಬಹಳ ವರ್ಷಗಳಿಂದ ವಾಸಿಸುತ್ತಿರುತ್ತಾರೆ. ದುರದೃಷ್ಟದಂತೆ ಆಕೆಗೆ ಆಸರೆಯಾಗಿದ್ದ ಅವರ ಅಣ್ಣ, ಕೊರೋನಾ ಸೋಂಕಿನಿಂದಾಗಿ ಮೃತ ಪಟ್ಟಾಗ ದಿಕ್ಕಿಲ್ಲದೇ ಅನಾಥರಾಗಿ ಒಬ್ಬಂಟಿಯಾಗುತ್ತಾರೆ. ಹೀಗಾಗೇ ತಮಗಿಂತಲೂ ಸುಮಾರು 20 ವರ್ಷ ವಯಸ್ಸಿನಲ್ಲಿ ದೊಡ್ಡವರಾದ ಮಾಧವ್ ಪಾಟೀಲ್ ಅವರನ್ನು ಮದುವೆಯಾಗಲೂ ಸ್ವಪ್ರೇರಣೆಯಿಂದ ಒಪ್ಪಿಕೊಂಡ ಪರಿಣಾಮವಾಗಿ ಈ ಮದುವೆ ನಡೆದಿದೆ. ಇದರಿಂದ ಪರಸ್ಪರ ಆಸರೆ ಇಲ್ಲದಿದ್ದ ಒಂದು ಗಂಡು ಮತ್ತು ಹೆಣ್ಣು ಒಂದಾಗಿ ಬಾಳುವ ಅವಕಾಶವನ್ನು ಈ ಕೂರೋನಾ ತಂದುಕೊಟ್ಟಿದೆ.

ಮದುವೆ ಎನ್ನುವುದು ಕೇವಲ ಗಂಡು ಮತ್ತು ಹೆಣ್ಣುಗಳ ನಡುವಿನ ದೇಹದ ವಾಂಛೆಯಲ್ಲದೇ ಅದು ಎರಡು ಮನಸ್ಸುಗಳ ನಡುವಿನ ಸುಂದರ ಬೆಸುಗೆ ಮತ್ತು ಪರಸ್ಪರ ಒಬ್ಬರಿಗೊಬ್ಬರು ಸಾಮಾಜಿಕ ಮತ್ತು ಆರ್ಥಿಕ ಆಶ್ರಯವನ್ನು ಮತ್ತು ಆಸರೆಯನ್ನು ಕೊಡುವುದಾಗಿದೆ ಎನ್ನುವುದನ್ನು ಅರಿಯದ ಇಂದಿನ ಸಾಮಾಜಿಕ ಜಾಲತಾಣದಲ್ಲಿ ಅಂಡಲೆಯುವ ಅಂಡುಪಿರ್ಕೆಗಳು ತಮಗೆ ತಿಳಿದಂತೆ ಟ್ರೋಲ್ ಮಾಡುತ್ತಿದ್ದರೇ, ಅದಕ್ಕೆ ತಾಳ ಹಾಕುವಮಂದಿಯೇ ಹೆಚ್ಚಾಗಿರುವುದು ವಿಯರ್ಯಾಸವೇ ಸರಿ.

ಅದಕ್ಕೇ ನಮ್ಮ ಹಿರಿಯರು ಹೇಳಿರುವುದು ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಿ ನೋಡು ಎಂದು. ಈಗ ನಮಗೆಲ್ಲರಿಗೂ ವಿಷಯ ತಿಳಿದಿರುವಾಗ ಇಲ್ಲಿಂದಲೇ ಅವರ ದಾಂಪತ್ಯ ಜೀವನ ಅನ್ಯೋನ್ಯವಾಗಿ ಮತ್ತು ಸುಂದರವಾಗಿರಲಿ ಎಂದು ಹಾರೈಸೋಣ ಅಲ್ಲವೇ?

ಏನಂತೀರೀ?

Author: ಶ್ರೀಕಂಠ ಬಾಳಗಂಚಿ

ಶ್ರೀಕಂಠ ಬಾಳಗಂಚಿ ಎಂಬ ನಾಮದೇಯನಾದ ನಾನು, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿ ಗ್ರಾಮದ ಖ್ಯಾತ ವಾಗ್ಗೇಯಕಾರರೂ, ಗಮಕಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಗಮಕಿ ದಿ. ಶ್ರೀ ನಂಜುಂಡಯ್ಯನವರ ಮೊಮ್ಮಗ ಮತ್ತು ಗಮಕಿ ದಿ. ಶ್ರೀ ಶಿವಮೂರ್ತಿಗಳ ಸುಪುತ್ರ. ಪ್ರಸ್ತುತ ಬೆಂಗಳೂರಿನ ವಿಶ್ವವಿಖ್ಯಾತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಹವ್ಯಾಸಿ ಬರಹಗಾರ. ಕ್ರೀಡೆ, ಸಾಮಾಜಿಕ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಲೇಖನ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದೇನೆ. ಕನ್ನಡ ನಾಡು, ಭಾಷೆ, ನುಡಿಗಳ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೇಮ ಇರುವವ. ಜಿ.ಪಿ.ರಾಜರತ್ನಂರವರ ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ಅಂತಾ ಹೇಳಿರುವುದನ್ನು ಅಕ್ಷರಶಃ ಪಾಲಿಸುತ್ತಿರುವವನು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s