ನಮ್ಮ ಜೀವನದಲ್ಲಿ ಯಾವುದಾದರೂ ಕೆಲಸ ಇನ್ನೇನು ಆಗಿಯೇ ಬಿಡುತ್ತದೆ ಎಂದೇ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿರುವಾಗ ಆ ಕೆಲಸ ಆಗದಿದ್ದಾಗ ಛೇ! ಎಂತಹ ದುರಾದೃಷ್ಟ. ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎಂದು ಎಂದು ಹಳಿಯುತ್ತೇವೆ. ನಮ್ಮ ಜೊತೆಯಲ್ಲೇ ಇದ್ದವರು ಇದ್ದಕ್ಕಿದ್ದಂತೆಯೇ ಉತ್ತಮ ಸ್ಥಾನ ಗಳಿಸುವುದಾಗಲೀ ಅಥವಾ ಐಶ್ವರ್ಯವಂತರಾದರೆ ಛೇ ನಮಗೆಲ್ಲಿದೆ ಅಂತಹ ಅದೃಷ್ಟ ಎನ್ನುತ್ತೇವೆ. ಅದೇ ರೀತಿ ಬಯಸದೇ ಭಾಗ್ಯ ಬಂದರೇ ಹೇಗಿದೆ ನೋಡಿ ನಮ್ಮ ಅದೃಷ್ಟ ಎಂದು ಹೆಮ್ಮೆಯಿಂದ ಬೀಗುತ್ತೇವೆ. ಮೊನ್ನೆ ಡಿಸೆಂಬರ್ 4ನೇಯ ತಾರೀಖು ಇದೇ ಆದೃಷ್ಟ ಒಬ್ಬರ ಪಾಲಿಗೆ ಬಯಸದೇ ಬಂದ ಭಾಗ್ಯವಾದರೆ ಮತ್ತೊಬ್ಬರ ಪಾಲಿಗೆ ಅದೃಷ್ಟ ದುರಾದೃಷ್ಟವಾದ ರೋಚಕ ಕತೆ ಇದೋ ನಿಮಗಾಗಿ.
ಕಳೆದ ವಾರ ತೆಲಂಗಾಣದ ರಾಜಧಾನಿ ಹೈದರಾಬಾದಿನ ಮಹಾನಗರ ಪಾಲಿಕೆಯ ಚುನಾವಣೆ ನಡೆದು ಆಡಳಿತ ಪಕ್ಷವಾದ TRS, ಓವೈಸಿಯ AIMIMS, BJP ಮತ್ತು congress ಪಕ್ಷಗಳು ಜಿದ್ದಾಜಿದ್ದಿಗೆ ಬಿದ್ದು ಪ್ರತಿಷ್ಠೆಯ ಕಣವನ್ನಾಗಿಸಿದ್ದರು. ಬಿಜೆಪಿ ಗೆದ್ದಲ್ಲಿ ಹೈದರಾಬಾದನ್ನು ಭಾಗ್ಯನಗರವನ್ನಾಗಿಸುವ ಭರವಸೆಯೊಂದಿಗೆ ಹಿಂದೂಗಳನ್ನು ಒಗ್ಗೂಡಿಸಲು ಪ್ರಯತ್ನಿಸಿದರೆ ಅಂತಹ ಪ್ರಯತ್ನವನ್ನು ವಿರೋಧಿಸುತ್ತಲೇ ಮುಸ್ಲಿಂ ಮತಗಳನ್ನು ಒಟ್ಟುಗೂಡಿಸುವುದರಲ್ಲಿ ಓವೈಸಿ ನಿರತರಾಗಿದ್ದರು.
ಈ ಹೈದರಾಬಾದಿನ ಮಹಾನಗರ ಪಾಲಿಕೆಯ BN ರೆಡ್ಡಿ ನಗರ ವಾರ್ಢಿನಲ್ಲಿ ಕಳೆದ ಬಾರಿ ವಿಜೇತರಾಗಿದ್ದ TRS ಪಕ್ಷದ ಲಕ್ಷ್ಮಿ ಪ್ರಸನ್ನ ಮತ್ತೊಮ್ಮೆ ತಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳುವ ಸಲುವಾಗಿ ಅಭ್ಯರ್ಥಿಯಾಗಿದ್ದರು. ಚುನಾವಣೆ ಮುಗಿದು ಮೊನ್ನೆ ಎಣೆಕೆಯಂದು ಆರಂಭದಲ್ಲಿ ಬಿಜೆಪಿಯ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದರೂ ಅಂತಿಮವಾಗಿ ಅಚ್ಚರಿಯಂತೆ ಬಿಜೆಪಿ ಮತ್ತು ಟಿಆರೆಸ್ ಪಕ್ಷಗಳು ಸಮಬಲ ಸಾಧಿಸಿತು. ಮತ ಎಣಿಕೆಯ ಸಂದರ್ಭದಲ್ಲಿ ಇದೇ ರೀತಿಯ ಹಾವೂ ಏಣಿ ಫಲಿತಾಂಶ BN ರೆಡ್ಡಿ ವಾರ್ಡಿನಲ್ಲಿಯೂ ಇದ್ದು ಅಂತಿಮವಾಗಿ TRS ಅಭ್ಯರ್ಥಿ ಲಕ್ಷ್ಮೀ ಪ್ರಸನ್ನ 10 ಮತಗಳ ಅಂತರದಿಂದ ತಮ್ಮ ಸಮೀಪದ ಬಿಜೆಪಿ ಅಭ್ಯರ್ಥಿಯ ವಿರುದ್ಧ ಗೆದ್ದಿದ್ದಾರೆ ಎಂಬ ಫಲಿತಾಂಶವನ್ನು ಚುನಾವಣಾ ಅಧಿಕಾರಿಗಳು ಘೋಷಿಸಿದರು. ಸೋತ ಬಿಜೆಪಿ ಪ್ರತಿಸ್ಪರ್ಧಿಯೂ ಕೂಡ ಇದಕ್ಕೆ ಯಾವುದೇ ತಕರಾರು ಸಲ್ಲಿಸದೇ ಸೋಲನ್ನು ಒಪ್ಪಿಕೊಂಡು ಮನೆಗೆ ಹೊರಟು ಹೋಗಿದ್ದರು. ಆದರೆ ಇನ್ನೂ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲುವೆನ್ನೆಂಬ ಅತಿಯಾದ ಆತ್ಮವಿಶ್ವಾಸ ಹೊಂದಿದ್ದ ಲಕ್ಷ್ಮೀ ಮರುಎಣಿಕೆಗೆ ಪಟ್ಟು ಹಿಡಿದರು. ಆಕೆಯ ಆಗ್ರಹಕ್ಕೆ ಮಣಿದ ಚುನಾವಣಾ ಅಧಿಕಾರಿಗಳು ಮರು ಎಣಿಕೆ ಮಾಡಿದಾಗ ಲಕ್ಷ್ಮೀ ಪ್ರಸನ್ನ ಹೆಗಲಿಗೆ ದುರಾದೃಷ್ಟವೇರಿ ಆಕೆ 32 ಮತಗಳ ಅಂತರದಿಂದ ತಮ್ಮ ಸಮೀಪದ ಬಿಜೆಪಿ ಅಭ್ಯರ್ಥಿಯ ವಿರುದ್ಧ ಸೋತು ಹೋದರು . ಕೆಲವೊಮ್ಮೆ ಅತಿಯಾದ ವಿಶ್ವಾಸವೂ ಕೆಡುಕಾಗುತ್ತದೆ ಎಂಬುದಕ್ಕೆ ಈ ಪ್ರಸಂಗವೇ ಜ್ವಲಂತ ಉದಾಹರಣೆಯಾಗಿದೆ.
ಇದಕ್ಕೆ ತದ್ವಿರುದ್ಧವಾದ ಪ್ರಸಂಗವೊಂದು ದೂರದ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಎಲ್ಲರಿಗೂ ತಿಳಿದಿರುವಂತೆ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದು ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಭಾರೀ ಹೋರಾಟದ ನಡುವೆಯೂ ಸೋತು ಸುಣ್ಣವಾಗಿತ್ತು. ಭಾರತದ ಪ್ರಮುಖ ಬೌಲರ್ ಯಜುವೇಂದ್ರ ಚಹಲ್ ಎರಡೂ ಪಂದ್ಯಗಳಲ್ಲಿ ದುಬಾರಿಯಾಗಿದ್ದ ಕಾರಣ ಮೂರನೇ ಏಕದಿನ ಪಂದ್ಯ ಮತ್ತು ಮೊದಲನೇ T20 ಪಂದ್ಯಾವಳಿಯಲ್ಲಿಯೂ ಬೆಂಚ್ ಕಾಯಿಸುವ ಪರಿಸ್ಥಿತಿ ಒದಗಿತ್ತು.
ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ, ಭಾರತದ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದ ರವೀಂದ್ರ ಜಡೇಜಾ ಅವರಿಗೆ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಎಸೆದ ಬೌನ್ಸರ್ ಹೆಲ್ಮೆಟ್‌ಗೆ ಚೆಂಡು ಬಡಿದ ಪರಿಣಾಮ ಅವರು ಪಂದ್ಯದಲ್ಲಿ ಮುಂದುವರೆಯಲು ಸಾಧ್ಯವಾಗಲಿಲ್ಲ. ಮೊದಲೆಲ್ಲಾ ಆಟಗಾರ ಆಡುವ ಸಮಯದಲ್ಲಿ ಗಾಯಗೊಂಡಲ್ಲಿ ಬದಲಿ ಆಟಗಾರ ಕೇವಲ ಕ್ಷೇತ್ರ ರಕ್ಷಣೆ ಮಾತ್ರ ಮಾಡುವ ಅವಕಾಶವಿತ್ತು. ಆದರೆ ಇತ್ತೀಚಿನ ಹೊಸ ನಿಯಮದ ಪ್ರಕಾರ ಬದಲೀ ಆಟಗಾರನಾಗಿ ಕಣಕ್ಕಿಳಿಯುವ ಆಟಗಾರ ಬ್ಯಾಟಿಂಗ್ ಮತ್ತು ಬೌಲಿಂಗ್ ಕೂಡಾ ಮಾಡಬಹುದಾಗಿದೆ. ಆದರೆ ಆ ರೀತಿ ಬದಲೀ ಆಟಗಾರರನ್ನು ತೆಗೆದುಕೊಳ್ಳುವ ಮುನ್ನ ಮ್ಯಾಚ್ ರೆಫ್ರಿಯವರ ಅನುಮತಿ ಪಡೆದಿರಬೇಕು. ಇದೇ ನಿಯಮದಂತೆ ಪಂದ್ಯದ ದ್ವಿತೀಯಾರ್ಧದಲ್ಲಿ ಅಚಾನಕ್ಕಾಗಿ ಜಡೇಜಾ ಅವರ ಸ್ಥಾನದಲ್ಲಿ ಯಜುವೇಂದ್ರ ಚಹಲ್ ಮೈದಾನಕ್ಕಿಳಿಯುವ ಅದೃಷ್ಟ ಪಡೆದರು.
ಈ ರೀತಿಯಾಗಿ ಪಡೆದ ಅದೃಷ್ಟವನ್ನು ಸದುಪಯೋಗ ಪಡಿಸಿಕೊಂಡ ಚಹಲ್ ತಮ್ಮ ಸ್ಪಿನ್ ಮೋಡಿಯಿಂದ ಆಸ್ಟ್ರೇಲಿಯಾ ಆಟಗಾರರನ್ನು ಕಟ್ಟಿ ಹಾಕಿದ್ದಲ್ಲದೇ 25 ರನ್ಗಳಿಗೆ 3 ವಿಕೆಟ್ಗಳನ್ನು ಪಡೆಯುವ ಮೂಲಕ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡಕ್ಕೆ 11 ರನ್ಗಳ ರೋಚಕ ಜಯ ಸಾಧಿಸುವುದರಲ್ಲಿ ಮಹತ್ತರ ಪಾತ್ರವಹಿಸಿ, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಲ್ಲದೇ ಮುಂದಿನ ಪಂದ್ಯದಲ್ಲಿ ತಮ್ಮನ್ನು ಅವಶ್ಯವಾಗಿ ತಂಡದಲ್ಲಿ ಸೇರಿಸಿಕೊಳ್ಳಲೇ ಬೇಕಾದಂತಹ ಅನಿವಾರ್ಯ ಪರಿಸ್ಥಿತಿಯನ್ನು ಸೃಷ್ಟಿಸಿದ್ದಾರೆ.
ಇದಕ್ಕೇ ಏನೋ ನಮ್ಮ ಹಿರಿಯರು ಹೇಳಿರುವುದು ಹಣೆ ಬರಹಕ್ಕೇ ಹೊಣೆ ಯಾರು ಎಂದು. ಅದೃಷ್ಟ ಮತ್ತು ದುರಾದೃಷ್ಟ ಎಂದು ಯೋಚಿಸುತ್ತಲೇ ಸಮಯವನ್ನು ಹಾಳು ಮಾಡದೇ, ಪಾಲಿಗೆ ಬಂದದ್ದು ಪಂಚಾಮೃತ ಎಂದು ಬಂದ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವುದೇ ಜಾಣತನ ಅಲ್ವೇ?
ಏನಂತೀರೀ?