ಮಂಗರವಳ್ಳಿ ಚೆಟ್ನಿ

ದೋಸೆ, ಇಡ್ಲಿ, ಚಪಾತಿಗಳ ಜೊತೆಗೆ ನೆಂಚಿಕೊಳ್ಳಲು ಸಾಧಾರಣವಾಗಿ ಎಲ್ಲರ ಮನೆಗಳಲ್ಲಿಯೂ ಕಾಯಿ ಚೆಟ್ನಿ, ಶೇಂಗಾ ಚೆಟ್ನಿ ಇಲ್ಲವೇ ಹುರಿಗಡಲೇ ಚೆಟ್ನಿ ಮಾಡುವುದು ಸಹಜ. ಇಂದು ಅದಕ್ಕಿಂತಲೂ ಸ್ವಲ್ಪ ವಿಭಿನ್ನವಾಗಿರುವ ಮತ್ತು ಅರೋಗ್ಯಕರವಾದ ಮಂಗರವಳ್ಳಿ ಚೆಟ್ನಿ ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.

ಸುಮಾರು 4-5 ಜನರು ಸವಿಯಬಹುದಾದಷ್ಟು ಮಂಗರವಳ್ಳಿ ಚೆಟ್ನಿತಯಾರಿಸಲು ಬೇಕಾಗುವ ಸಾಮಗ್ರಿಗಳು

  • ಸಿಪ್ಪೆ ತೆಗೆದ ಮಂಗರವಳ್ಳಿ ಕಾಂಡಗಳು- 1 ಬಟ್ಟಲು
  • ಹೆಚ್ಚಿದ ಈರುಳ್ಳಿ – 1 ಬಟ್ಟಲು
  • ಒಣ ಮೆಣಸಿನಕಾಯಿ – 3-4 ಖಾರಕ್ಕೆ ತಕ್ಕಂತೆ
  • ಬೆಳ್ಳುಳ್ಳಿ – 3-4 ಎಸಳು (ಐಚ್ಚಿಕ)
  • ತೆಂಗಿನಕಾಯಿ ತುರಿ – 1 ಬಟ್ಟಲು
  • ಸಾಸಿವೆ – 1 ಚಮಚ
  • ಚಿಟುಕೆ ಇಂಗು
  • ಎಣ್ಣೆ -2 ಚಮಚ
  • ಕರಿಬೇವು – 8-10 ಎಲೆಗಳು
  • ರುಚಿಗೆ ಅನುಗುಣವಾಗಿ ಉಪ್ಪು,

ಮಂಗರವಳ್ಳಿ ಚೆಟ್ನಿ ತಯಾರಿಸುವ ವಿಧಾನ

  • ಮಂಗರವಳ್ಳಿಯ ಕಾಂಡವನ್ನು ಕತ್ತರಿಸಿ ಮೇಲಿನ ಸಿಪ್ಪೆ ತೆಗೆದು ತೊಳೆದು ಸ್ವಚ್ಚಗೊಳಿಸಿ ಸಣ್ಣಗೆ ಹೆಚ್ಚಿಕೊಳ್ಳಬೇಕು.
  • ಗಟ್ಟಿ ತಳದ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಹೆಚ್ಚಿಟ್ಟುಕೊಂಡ ಈರುಳ್ಳಿಯನ್ನು ಕೆಂಪಗಾಗುವಷ್ಟರವರೆಗೂ ಬಾಡಿಸಿದ ನಂತರ ಬೆಳ್ಳುಳ್ಳಿ, ಕತ್ತರಿಸಿದ ಮಂಗರವಳ್ಳಿಯ ಕಾಂಡ ಮತ್ತು ಒಣಮೆಣಸಿನಕಾಯಿಯನ್ನು ಬಾಣಲೆಗೆ ಹಾಕಿ ಬಾಡಿಸಿಕೊಳ್ಳಬೇಕು
  • ಹುರಿದುಕೊಂಡಿದ್ದು ಆರಿದ ನಂತರ ತೆಂಗಿನತುರಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು
  • ಸಣ್ಣ ಬಾಣಲಿಯಲ್ಲಿ ಎಣ್ಣೆ ಕಾಯ್ದ ನಂತರ ಸಾಸಿವೆ ಚಟ ಪಟ ಸಿಡಿಸಿಕೊಂಡು, ಚಿಟಿಕೆ ಇಂಗನ್ನು ಮತ್ತು ಒಣಮೆಣಸಿನಕಾಯಿ ಸೇರಿಸಿ ಒಗ್ಗರಣೆ ಮಾಡಿಕೊಂಡು ರುಬ್ಬಿಟ್ಟುಕೊಂಡ ಮಿಶ್ರಣದೊಂದಿಗೆ ಸೇರಿಸಿದಲ್ಲಿ ರುಚಿ ರುಚಿಯಾದ ಮತ್ತು ಆರೋಗ್ಯಕರವಾದ ಮಂಗರವಳ್ಳಿ ಚಟ್ನಿ ಸವಿಯಲು ಸಿದ್ಧ.

ಮೊದಲೇ ತಿಳಿಸಿದಂತೆ ಈ ಚೆಟ್ನಿಯನ್ನು ದೋಸೆ, ಇಡ್ಲಿ, ಚಪಾತಿಗಳಲ್ಲದೇ, ಇಡ್ಲಿ, ವಡೆ ಮತ್ತು ಪೊಂಗಲ್ ಜೊತೆಯಲ್ಲಿಯೂ ಮತ್ತು ಅನ್ನದ ಜೊತೆಗೂ ತಿನ್ನಲು ಚೆನ್ನಾಗಿರುತ್ತದೆ.

ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.

ಏನಂತೀರೀ?

ಮನದಾಳದ ಮಾತು : ಮಂಗರವಳ್ಳಿಯ ಕಾಂಡವನ್ನು ಕತ್ತರಿಸಿ ಮೇಲಿನ ಸಿಪ್ಪೆ ತೆಗೆಯುವಾಗ ಕೈಗೆ ಎಣ್ಣೆ ಹಚ್ಚಿಕೊಂಡಲ್ಲಿ ಕಾಂಡ ಕ್ಷಾರದಿಂದ ಕೈಗಳು ಉರಿಯುವುದನ್ನು ತಪ್ಪಿಸಬಹುದಾಗಿದೆ. ಈ ಚಟ್ನಿ ಕೆಮ್ಮು, ನೆಗಡಿಯಿಂದ ಬಳಲುವವರಿಗೆ ಉತ್ತಮವಾಗಿದೆಯಲ್ಲದೇ, ಈ ಚೆಟ್ನಿ ಪಚನಕಾರಿಗೆ ಸಹಾಯಕಾರಿಯಾಗಿರುವ ಕಾರಣ, ಹಳೇ ಮೈಸೂರಿನ ಕಡೆಯಲ್ಲಿ ಈಗಲೂ ಶ್ರಾದ್ಧ / ವೈದಿಕಗಳಲ್ಲಿ ಮಂಗರವಳ್ಳಿಯ ಚಟ್ನಿಯನ್ನು ಮಾಡುವ ಪದ್ದತಿಯೂ ಇದೆ. ಮಲಬದ್ಧತೆಯಿಂದ ನರಳುತ್ತಿರುವವರಿಗೆ ಈ ಮಂಗರವಳ್ಳಿ ಚೆಟ್ನಿ ರಾಮಬಾಣವಾಗಿದೆ.

Leave a comment