ಮೈಸೂರಿನಲ್ಲೊಂದು ನವಗ್ರಹ/ರಾಶಿ/ನಕ್ಷತ್ರ/ಔಷಧ ವನ

ದಿನಕಳೆದಂತೆ ಜನಸಂಖ್ಯೆ ಹೆಚ್ಚುತ್ತಿದ್ದಂತೆಯೇ ಮನುಷ್ಯರಿಗೆ ಭೂಮಿಯ ಮೇಲಿನ ಆಸೆ ಹೆಚ್ಚಾದಂತೆಲ್ಲಾ ನಮ್ಮ ಪೂರ್ವಜರು ನೆಟ್ಟು ಹೋಗಿದ್ದ ಅಥವಾ ಸ್ವಾಭಾವಿಕವಾಗಿಯೇ ನೆಟ್ಟಿದ್ದ ಗಿಡ, ಮರ ಮತ್ತು ಕಾಡುಗಳನ್ನೆಲ್ಲಾ ಕಡಿದು ನಾಡು ಮಾಡುತ್ತಿದ್ದಂತೆಯೇ ಪ್ರಾಕೃತಿಕ ವ್ಯವಸ್ಥೆಗಳು ವೆತ್ಯಾಸವಾಗಿ ಕಾಲ ಕಾಲಕ್ಕೆ ಮಳೆ ಬೆಳೆ ಸರಿಯಾಗಿ ಆಗದೇ ಇದ್ದಾಗ ಗಿಡಿ ನೆಡಿ, ಮರ ಬೆಳೆಸಿ ವನ್ಯ ಸಂಪತ್ತನ್ನು ಉಳಿಸಿ ಎನ್ನುತ್ತಾ ಆಗ್ಗಾಗ್ಗೇ ಕೋಟಿ ಕೋಟಿ ಹಣವನ್ನು ನೀರಿನಂತೆ ಖರ್ಚುಮಾಡಿ ವನ ಮಹೋತ್ಸವ ಮಾಡಿ ಕಾಟಾಚಾಕಕ್ಕೆ ಕೆಲವೊಂದು ಗಿಡಗಳನ್ನು ನೆಟ್ಟು ಫೋಟೋಗಳನ್ನು ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಫೋಟೋಗಳನ್ನು ಹಾಕಿಸಿಕೊಂಡು ಪ್ರಚಾರಪಡೆಯುವುದಕ್ಕೇ ಸೀಮಿತವಾಗಿದೆ. ಕಾಟಾಚಾರಕ್ಕೆ ನೆಟ್ಟ ಗಿಡಗಳಿಗೆ ನೀರನ್ನು ಹಾಕದೇ, ಸರಿಯಾಗಿ ಪೋಷಿಸದೆ, ಬೀಡಾಡಿಗಿಡಗಳು ಮತ್ತು ಪುಂಡು ಪೋಕರಿಗಳು ಮುರಿದು ಹಾಕುವುದರಲ್ಲಿಯೇ ಸೀಮಿತವಾಗಿದೆ.

ಮೈಸೂರಿನ ಶ್ರೀರಾಮಪುರದ ಬಿ.ಇ.ಎಂ.ಎಲ್ ಬಡಾವಣೆಯಲ್ಲಿ ಉದ್ಯಾನವನಗಳಿಗೆ ಸಾಕಷ್ಟು ಜಾಗವನ್ನು ಮೀಸಲಿಟ್ಟು ಅದಕ್ಕೆ ಸೂಕ್ತವಾದ ಕಾಂಪೌಂಡ್ ಹಾಕಿಸಿದ್ದರೂ ಅಲ್ಲಿ ಯಾವುದೇ ಗಿಡ ಮರಗಳನ್ನು ನೆಡದೇ ಪಾಳು ಬಿದ್ದಂತಿತ್ತು. ಅದೇ ರೀತಿ ಬಿ.ಇ.ಎಂ.ಎಲ್ ಬಡಾವಣೆಯ ತುತ್ತ ತುದಿಯಲ್ಲಿದ್ದ ಉದ್ಯಾನವನವೂ ಇದಕ್ಕೆ ಹೊರತಾಗಿರಲಿಲ್ಲ. ಕೆಲವರ್ಷಗಳ ಹಿಂದೆ ಪತಂಜಲಿ ಯೋಗ ಶಿಕ್ಷಣ ಸಮಿತಿಯವರು ಯೋಗದವರ ಚೈತ್ರ ಶಾಖೆ ಆರಂಭಿಸಿ ಅಲ್ಲಿಯ ಸ್ಥಳೀಯರಿಗೆ ಯೋಗಾಭ್ಯಾಸವನ್ನು ಮಾಡಿಸುತ್ತಾ, ಆರೋಗ್ಯ ಮತ್ತು ಸ್ವಸ್ಥ್ಯವನ್ನು ಕಾಪಾಡುತ್ತಲೇ ಯಾವುದಾರೂ ಸಮಾಜಮುಖೀ ಕಾರ್ಯಕ್ರಮವನ್ನು ಮಾಡಬೇಕೆಂದು ಯೋಚಿಸಿ ಆ ಉದ್ಯಾವನದ ಸುತ್ತಲೂ ಮಾವು, ಹಲಸು, ನೇರಳೇ, ಸೀಬೇ ಮುಂತಾದ ಹಣ್ಣುಗಳ ಗಿಡಗಳನ್ನು ನೆಟ್ಟು ಅದಕ್ಕೆ ಹನಿ ನೀರಾವರಿ ಪದ್ದತಿಯನ್ನು ಅಳವಡಿಸಿ ಜತನದಿಂದ ಕಾಪಾಡುತ್ತಿದ್ದ ಕಾರಣ ಆ ಮರಗಳೆಲ್ಲವೂ ಚೆನ್ನಾಗಿ ಆಳತ್ತರಕ್ಕೆ ಬೆಳೆದು ನಿಂತಿವೆ.

ಈ ಕರೋನಾ ಲಾಕ್ಡೌನ್ ಮುಗಿದು ದಿನಾಂಕ 5.6.2020 ರಂದು ವಿಶ್ವ ಪರಿಸರ ದಿನಾಚರಣೆಯ ದಿನದಂದು ಮತ್ತಿನ್ನೇನಾದರೂ ಮಾಡಬೇಕೆಂದು ಯೋಚಿಸುತ್ತಿರುವಾಗಲೇ ಹಬ್ಬ ಹರಿದಿನಗಳಲ್ಲಿ ಕೇದಿಗೆ, ಸಂಪಿಗೆ, ಕಕ್ಕೆ, ಬಕುಲ್, ಉತ್ತರಾಣಿ, ಬನ್ನಿ, ಕದಂಬ ಈ ರೀತಿಯ ಎಲ್ಲಾ ಹೂವುಗಳು ಮತ್ತು ಪತ್ರೆಗಳನ್ನು ಮಂತ್ರದಲ್ಲಿ ಮಾತ್ರವೇ ಹೇಳುವುದನ್ನು ಕೇಳುತ್ತಿದ್ದರೇ ಹೊರತು ಅವುಗಳನ್ನು ಈಗಿನ ಕಾಲದಲ್ಲಿ ನೋಡಲು ಸಾಧ್ಯವಿಲ್ಲದಿದ್ದದ್ದು ನೆನಪಾಗಿ, ಈ ಎಲ್ಲಾ ಗಿಡಗಳನ್ನು ಒಳಗೊಂಡ ನವಗ್ರಹ/ರಾಶಿ/ಔಷಧ ವನವನ್ನೇಕೆ ಬೆಳಸಬಾರದು? ಎಂಬ ಯೋಚನೆ ಹೊಳದದ್ದೇ ತಡಾ, ಕೂಡಲೇ ಪುರೋಹಿತರನ್ನು ಸಂಪರ್ಕಿಸಿ, ವೇದಗಳಲ್ಲಿರುವ ಉಲ್ಲೇಖದಂತೆ 9 ಗ್ರಹಗಳಿಗೆ ಅನುಗುಣವಾಗಿ ಯಾವ ಯಾವ ಗ್ರಹಕ್ಕೆ, ಯಾವ ಯಾವ ಗಿಡವನ್ನು ಹೋಲುತ್ತದೆ ಎಂಬ ಮಾಹಿತಿಯನ್ನು ಸಂಗ್ರಹಿಸಿ, ರಾಹು-ಬಕುಲ, ಕುಜ-ತೆರೆ, ಚಂದ್ರ-ಮುತ್ತುಗ, ಶನಿ-ಬನ್ನಿ, ರವಿ- ಬಿಳಿಎಕ್ಕೆ, ಶುಕ್ರ- ಬತ್ತಿ, ಬುಧ-ಉತ್ತರಾಣಿ, ಗುರು-ಅರಳಿ, ಕೇತು-ದರ್ಭಿಹುಲ್ಲುಗಳನ್ನು ಅಯಾಯಾ ನವಗ್ರಹಗಳ ದಿಕ್ಕಿಗೆ ಅನುಗುಣವಾಗಿ ನೆಡುವ ನಿರ್ಧಾರವನ್ನು ಮಾಡಿದ್ದಾರೆ,

ಇದರ ಜೊತೆಯಲ್ಲಿಯೇ 12 ರಾಶಿಯವರಿಗೆ ರಾಶೀ ಮತ್ತು 27 ನಕ್ಷತ್ರಗಳಿಗೆ ಅನುಗುಣವಾಗಿ ಹೊಂದುವ ಗಿಡಗಳಾದ ಮೇಷ- ರಕ್ತಚಂದನ, ಕನ್ಯಾ-ಮಾವು, ತುಲಾ-ಬಕುಲಾ, ಮೀನ- ಆಲ, ಕುಜ-ಬನ್ನಿ, ವಶ್ಚಿಕ -ಕಕ್ಕೆ, ಸಿಂಹ-ಉದಯ, ವಷಭ-ಮರಾಲೆ, ಮಿಥುನ-ಹಲಸು, ಕರ್ಕಾಟಕ-ಮುತ್ತುಗ, ಧನಸ್ಸು-ಅರಳಿ, ಮಕರ- ಬೀಟೆ ಸಸ್ಯಗಳಲ್ಲದೇ,
ನಕ್ಷತ್ರಗಳಿಗೆ ಅನುಗುಣವಾಗಿ
ಅಶ್ವಿನಿ, ಮಖ, ಮೂಲಾ :ಅರಳಿ ಹಾಗೂ ಜಾಜಿ ಹೂವಿನ ಗಿಡ
ಭರಣಿ, ಪುಬ್ಬ , ಪೂರ್ವಾಷಾಢ: ಅತ್ತಿ (ಔದುಂಬರ) ಹಾಗೂ ಕಮಲದ ಹೂವಿನ ಗಿಡ
ಕೃತ್ತಿಕಾ, ಉತ್ತರೆ, ಉತ್ತರಾಷಾಢ : ಹೊಂಗೆ ಹಾಗೂ ಕನಕಾಂಬರ ಹೂವಿನ ಗಿಡ
ರೋಹಿಣಿ, ಹಸ್ತ, ಶ್ರವಣ : ಮುತ್ತುಗದ ಮರ ಹಾಗೂ ಬಿಳಿ ತಾವರೆ
ಮೃಗಶಿರಾ, ಚಿತ್ತ, ಧನಿಷ್ಠ : ಕಗ್ಗಲಿ ಹಾಗೂ ದತ್ತೂರಿ ಹೂವಿನ ಗಿಡ
ಆರಿದ್ರ, ಸ್ವಾತಿ, ಶತಭಿಷ : ಮಾವು ಹಾಗೂ ಬೆಟ್ಟದ ತಾವರೆ ಹೂವಿನ ಗಿಡ
ಪುನರ್ವಸು, ವಿಶಾಖ, ಪೂರ್ವಾಭಾದ್ರ : ಗಂಧದ ಮರ ಹಾಗೂ ಪಾರಿಜಾತ ಹೂವಿನ ಮರ
ಪುಷ್ಯ, ಅನುರಾಧ, ಉತ್ತರಾಭಾದ್ರ : ಶಮೀ ವೃಕ್ಷ ಹಾಗೂ ತುಳಸಿ ಸಸಿ
ಆಶ್ಲೇಷ, ಜ್ಯೇಷ್ಠ , ರೇವತಿ : ಸಂಪಿಗೆ ಮತ್ತು ಮಲ್ಲಿಗೆ ಹೂವಿನ ಗಿಡಗಳಲ್ಲದೇ,
ಬಿಲ್ವ ಪತ್ರೆ, ಧೂಪ, ಶ್ರೀಗಂಧ, ಹಾಲೆ, ಪಚಾಲಿ, ಉದಯ, ದಿಂಡಲ್, ಸೋಮೆ, ಸಣ್ಣ ಬಿದಿರು, ಬೇವುಗಳನ್ನೂ ಅಯಾಯಾ ದಿಕ್ಕುಗಳಿಗೆ ಅನುಗುಣವಾಗಿ ಬೆಳೆಸಿದ್ದಾರೆ. ಇದೆಲ್ಲದರ ಜೊತೆಗೆ ಪ್ರತೀ ಗಿಡಗಳ ಮಂದೆಯೂ ಆ ಗಿಡಗಳ ನಾಮಫಲಕವನ್ನು ಅಳವಡಿಸುವ ಮೂಲಕ ನೋಡುಗರಿಗೆ ಥಟ್ ಅಂತಾ ಆ ಗಿಡಗಳ ಹೆಸರು ತಿಳಿಯುವಂತೆ ಮಾಡಿದ್ದಾರೆ. ಬಹಳ ಅಪರೂಪವಾಗಿ ಕಾಣ ಸಿಗುವ ಕಂದಂಬ ಗಿಡವನ್ನೂ ಸಹಾ ಇಲ್ಲಿ ನೆಟ್ಟಿರುವುದು ಗಮನಾರ್ಹವಾಗಿದೆ.

ಇಷ್ಟೆಲ್ಲಾ ಗಿಡಗಳನ್ನು ನೆಟ್ಟಮೇಲೆ ಉಳಿದಿದ್ದ ಜಾಗದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚಿನ ತುಳಸೀ ಸಸಿಗಳನ್ನು ನೆಡುವುದರ ಮೂಲಕ ಸುಂದರವಾದ ತುಳಸೀ ತೋಟವನ್ನೂ ಮಾಡಿದ್ದಾರೆ. ಅದೇ ಬಡಾವಣೆಯಲ್ಲಿರುವ ಶ್ರೀ ಗಣೇಶನ ದೇವಸ್ಥಾನದಲ್ಲಿ ವಿಶೇಷ ದಿನಗಳಂದು ಲಕ್ಷಕ್ಕೂ ಹೆಚ್ಚಿನ ತುಳಸೀ ದಳ ಇದೇ ತೋಟದಿಂದ ಸರಬರಾಜಾಗುತ್ತದೆ ಎನ್ನುವುದು ಮೆಚ್ಚಬೇಕಾದ ಅಂಶವಾಗಿದೆ.

ಪತಂಜಲಿ ಯೋಗ ಶಾಖೆಯ ಬಹುತೇಕ ಸದಸ್ಯರು ಈ ಕಾರ್ಯಕ್ಕೆ ಶ್ರಮದಾನ ಮಾಡಿದರೆ, ಸ್ಥಳೀಯರಾದ ಶ್ರೀ ಚಂದ್ರುರವರ ಆರ್ಥಿಕ ನೆರವಿನೊಂದಿಗೆ ಸ್ಥಳೀಯ ನಗರ‌ಪಾಲಿಕೆ ಸದಸ್ಯೆಯಾದ ಶ್ರೀಮತಿ‌ ಗೀತಾ‌ಯೋಗಾನಂದ್ ಅವರ ಸಹಕಾರ ಮತ್ತು ಈ ಉದ್ಯಾನವನದ ಎದುರು ಮನೆಯವರಾದ ಮತ್ತು ಯೋಗ ಬಳಗದ ಸಕ್ರೀಯ ಸದಸ್ಯರೇ ಆದ ಶ್ರೀ ಬಿ. ಎನ್. ಮುರಳೀಧರ ಅವರ ಜತನದಿಂದ ಆರೈಕೆ ಮಾಡುತ್ತಿರುವ ಸಲುವಾಗಿ ಈ ನವಗ್ರಹ/ರಾಶಿ/ಔಷಧ ವನ ಎಲ್ಲರ ಹೃನ್ಮನಗಳು ಮತ್ತು ಕಣ್ಮನಗಳನ್ನು ತಣಿಸುತ್ತಿವೆ ಎಂದರೂ ತಪ್ಪಾಗಲಾರದು. ಈ ಉದ್ಯಾನವನದಲ್ಲಿ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಬಂದವರಿಗೆ ಉತ್ತಮವಾದ ಔಷಧೀಯಗುಣವುಳ್ಳ ತಂಗಾಳಿಯೂ ಸಹಾ ಅವರ ಆರೋಗ್ಯವನ್ನು ವೃದ್ಧಿಸುತ್ತಿದೆ.

ಒಂದು ಒಳ್ಳೆಯ ಕೆಲಸಕ್ಕೆ ದೇವರ ಕೃಪಾಶೀರ್ವಾದವೂ ಇರುತ್ತದೆ ಎನ್ನುವಂತೆ ಪತಂಜಲಿ ಯೋಗ ಶಾಖೆಯವರು ಈ ಗಿಡಗಳನ್ನು ನೆಟ್ಟಿರುವುದು ವರಣ ದೇವರಿಗೂ ಇಷ್ಟವಾಗಿ ಆತನೂ ಸಹ ಆಕಾಲಿಕವಾಗಿ ಮಳೆಯನ್ನು ಸುರಿಸುತ್ತಾ ಈ ಎಲ್ಲಾ ಗಿಡಗಳು ಸುಂದರವಾಗಿ ಬೆಳೆಯಲು ಅನುವು ಮಾಡಿಕೊಡುತ್ತಿರುವುದು ನಿಜಕ್ಕೂ ಮೆಚ್ಚುಗೆಯ ವಿಷಯವಾಗಿದೆ.

ಈ ಎಲ್ಲಾ ಉದ್ಯಾನವನಗಳನ್ನೂ ಸರ್ಕಾರವೋ ಇಲ್ಲವೇ ನಗರ ಪಾಲಿಕೆಯೇ ನಿಭಾಯಿಸಬೇಕು ಎಂದು ಬಯಸದೇ ಸುಖಾ ಸುಮ್ಮನೆ ಉದ್ಯಾನವನ್ನು ಪಾಳು ಬಿಡದೆ, ಸ್ಥಳೀಯರೇ ಆಸ್ಥೆವಹಿಸಿ ತಮ್ಮ ಕೈಲಾದ ಮಟ್ಟಿಗೆಯೋ ಇಲ್ಲವೇ ಯಾವುದೇ ಸ್ವಯಂಸೇವಾ ಸಂಘ ಸಂಸ್ಥೆಗಳ ಮೂಲಕ ಆರ್ಥಿಕ ಸಹಾಯವನ್ನು ಪಡೆದು ಈ ರೀತಿಯ ಔಷಧೀಯ ಗಿಡಗಳನ್ನು ಬೆಳೆಸುವ ಮೂಲಕ ಒಳ್ಳೆಯ ವಾತಾವರಣವನ್ನು ನಿರ್ಮಿಸಬಹುದಲ್ಲವೇ?

ಏನಂತೀರೀ?

One thought on “ಮೈಸೂರಿನಲ್ಲೊಂದು ನವಗ್ರಹ/ರಾಶಿ/ನಕ್ಷತ್ರ/ಔಷಧ ವನ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s