ದೋಸೆ, ಇಡ್ಲಿ, ಚಪಾತಿಗಳ ಜೊತೆಗೆ ನೆಂಚಿಕೊಳ್ಳಲು ಸಾಧಾರಣವಾಗಿ ಎಲ್ಲರ ಮನೆಗಳಲ್ಲಿಯೂ ಕಾಯಿ ಚೆಟ್ನಿ, ಶೇಂಗಾ ಚೆಟ್ನಿ ಇಲ್ಲವೇ ಹುರಿಗಡಲೇ ಚೆಟ್ನಿ ಮಾಡುವುದು ಸಹಜ. ಇಂದು ಅದಕ್ಕಿಂತಲೂ ಸ್ವಲ್ಪ ವಿಭಿನ್ನವಾಗಿರುವ ಮತ್ತು ಅರೋಗ್ಯಕರವಾದ ಮಂಗರವಳ್ಳಿ ಚೆಟ್ನಿ ಮಾಡುವ ವಿಧಾನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.
ಸುಮಾರು 4-5 ಜನರು ಸವಿಯಬಹುದಾದಷ್ಟು ಮಂಗರವಳ್ಳಿ ಚೆಟ್ನಿತಯಾರಿಸಲು ಬೇಕಾಗುವ ಸಾಮಗ್ರಿಗಳು
- ಸಿಪ್ಪೆ ತೆಗೆದ ಮಂಗರವಳ್ಳಿ ಕಾಂಡಗಳು- 1 ಬಟ್ಟಲು
- ಹೆಚ್ಚಿದ ಈರುಳ್ಳಿ – 1 ಬಟ್ಟಲು
- ಒಣ ಮೆಣಸಿನಕಾಯಿ – 3-4 ಖಾರಕ್ಕೆ ತಕ್ಕಂತೆ
- ಬೆಳ್ಳುಳ್ಳಿ – 3-4 ಎಸಳು (ಐಚ್ಚಿಕ)
- ತೆಂಗಿನಕಾಯಿ ತುರಿ – 1 ಬಟ್ಟಲು
- ಸಾಸಿವೆ – 1 ಚಮಚ
- ಚಿಟುಕೆ ಇಂಗು
- ಎಣ್ಣೆ -2 ಚಮಚ
- ಕರಿಬೇವು – 8-10 ಎಲೆಗಳು
- ರುಚಿಗೆ ಅನುಗುಣವಾಗಿ ಉಪ್ಪು,
ಮಂಗರವಳ್ಳಿ ಚೆಟ್ನಿ ತಯಾರಿಸುವ ವಿಧಾನ
- ಮಂಗರವಳ್ಳಿಯ ಕಾಂಡವನ್ನು ಕತ್ತರಿಸಿ ಮೇಲಿನ ಸಿಪ್ಪೆ ತೆಗೆದು ತೊಳೆದು ಸ್ವಚ್ಚಗೊಳಿಸಿ ಸಣ್ಣಗೆ ಹೆಚ್ಚಿಕೊಳ್ಳಬೇಕು.
- ಗಟ್ಟಿ ತಳದ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಹೆಚ್ಚಿಟ್ಟುಕೊಂಡ ಈರುಳ್ಳಿಯನ್ನು ಕೆಂಪಗಾಗುವಷ್ಟರವರೆಗೂ ಬಾಡಿಸಿದ ನಂತರ ಬೆಳ್ಳುಳ್ಳಿ, ಕತ್ತರಿಸಿದ ಮಂಗರವಳ್ಳಿಯ ಕಾಂಡ ಮತ್ತು ಒಣಮೆಣಸಿನಕಾಯಿಯನ್ನು ಬಾಣಲೆಗೆ ಹಾಕಿ ಬಾಡಿಸಿಕೊಳ್ಳಬೇಕು
- ಹುರಿದುಕೊಂಡಿದ್ದು ಆರಿದ ನಂತರ ತೆಂಗಿನತುರಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು
- ಸಣ್ಣ ಬಾಣಲಿಯಲ್ಲಿ ಎಣ್ಣೆ ಕಾಯ್ದ ನಂತರ ಸಾಸಿವೆ ಚಟ ಪಟ ಸಿಡಿಸಿಕೊಂಡು, ಚಿಟಿಕೆ ಇಂಗನ್ನು ಮತ್ತು ಒಣಮೆಣಸಿನಕಾಯಿ ಸೇರಿಸಿ ಒಗ್ಗರಣೆ ಮಾಡಿಕೊಂಡು ರುಬ್ಬಿಟ್ಟುಕೊಂಡ ಮಿಶ್ರಣದೊಂದಿಗೆ ಸೇರಿಸಿದಲ್ಲಿ ರುಚಿ ರುಚಿಯಾದ ಮತ್ತು ಆರೋಗ್ಯಕರವಾದ ಮಂಗರವಳ್ಳಿ ಚಟ್ನಿ ಸವಿಯಲು ಸಿದ್ಧ.
ಮೊದಲೇ ತಿಳಿಸಿದಂತೆ ಈ ಚೆಟ್ನಿಯನ್ನು ದೋಸೆ, ಇಡ್ಲಿ, ಚಪಾತಿಗಳಲ್ಲದೇ, ಇಡ್ಲಿ, ವಡೆ ಮತ್ತು ಪೊಂಗಲ್ ಜೊತೆಯಲ್ಲಿಯೂ ಮತ್ತು ಅನ್ನದ ಜೊತೆಗೂ ತಿನ್ನಲು ಚೆನ್ನಾಗಿರುತ್ತದೆ.
ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.
ಏನಂತೀರೀ?
ಮನದಾಳದ ಮಾತು : ಮಂಗರವಳ್ಳಿಯ ಕಾಂಡವನ್ನು ಕತ್ತರಿಸಿ ಮೇಲಿನ ಸಿಪ್ಪೆ ತೆಗೆಯುವಾಗ ಕೈಗೆ ಎಣ್ಣೆ ಹಚ್ಚಿಕೊಂಡಲ್ಲಿ ಕಾಂಡ ಕ್ಷಾರದಿಂದ ಕೈಗಳು ಉರಿಯುವುದನ್ನು ತಪ್ಪಿಸಬಹುದಾಗಿದೆ. ಈ ಚಟ್ನಿ ಕೆಮ್ಮು, ನೆಗಡಿಯಿಂದ ಬಳಲುವವರಿಗೆ ಉತ್ತಮವಾಗಿದೆಯಲ್ಲದೇ, ಈ ಚೆಟ್ನಿ ಪಚನಕಾರಿಗೆ ಸಹಾಯಕಾರಿಯಾಗಿರುವ ಕಾರಣ, ಹಳೇ ಮೈಸೂರಿನ ಕಡೆಯಲ್ಲಿ ಈಗಲೂ ಶ್ರಾದ್ಧ / ವೈದಿಕಗಳಲ್ಲಿ ಮಂಗರವಳ್ಳಿಯ ಚಟ್ನಿಯನ್ನು ಮಾಡುವ ಪದ್ದತಿಯೂ ಇದೆ. ಮಲಬದ್ಧತೆಯಿಂದ ನರಳುತ್ತಿರುವವರಿಗೆ ಈ ಮಂಗರವಳ್ಳಿ ಚೆಟ್ನಿ ರಾಮಬಾಣವಾಗಿದೆ.