ಶ್ರೀ ಸುಬ್ರಹ್ಮಣ್ಯ ಭಾರತಿ

ಶ್ರೀ ಸುಬ್ರಹ್ಮಣ್ಯ ಭಾರತಿಯವರು ಖಡ್ಗಕ್ಕಿಂತ ಲೇಖನಿಯೇ ಹರಿತ ಎಂದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ತಮ್ಮ ಉಗ್ರ ಲೇಖನಗಳು ಮತ್ತು ಕವಿತೆಗಳ ಮೂಲಕ ಇಡೀ ತಮಿಳು ನಾಡಿನ ಜನರನ್ನು ಜಾಗೃತಗೊಳಿಸಿದ ನಮ್ಮ ದೇಶ ಕಂಡ ಅಪ್ರತಿಮ ರಾಷ್ಟ್ರಭಕ್ತ ಕವಿ ಎಂದರೆ ಅತಿಶಯೋಕ್ತಿಯಾಗಲಾರದು. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತಾದ್ಯಂತ ತಾಂಡವವಾಡುತ್ತಿದ್ದ ಜಾತಿ ಪದ್ದತಿಯ ವಿರುದ್ಧ ಆಮೂಲಾಗ್ರ ಬದಲಾವಣೆಯಾಗುವಂತೆ ತಮ್ಮ ಕವನಗಳ ಮೂಲಕ ಜನರನ್ನು ಬಡಿದೆಬ್ಬಿಸಿದ್ದಲ್ಲದೇ, ಸ್ವತಃ ಮೇಲ್ವಾತಿಯಲ್ಲಿ ಹುಟ್ಟಿದ್ದರೂ ಅದರ ಹಮ್ಮು ಬಿಮ್ಮು ಇಲ್ಲದ್ದೇ ತಮಿಳುನಾಡಿನಲ್ಲಿನ ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೂ ತಮ್ಮ ಕವಿತೆಗಳ ಮೂಲಕ ತಲುಪಿ ಅವರಲ್ಲಿ ಸ್ವಾತಂತ್ರದ ಕಿಚ್ಚನ್ನು ಹಚ್ಚಿಸಿ ಇಡೀ ದಕ್ಷಿಣ ಭಾರತ ಬ್ರಿಟಿಷರನ್ನು ಸಮರ್ಥವಾಗಿ ಎದುರಿಸುವಲ್ಲಿ ಸಮರ್ಥರಾಗಿದ್ದಲ್ಲದೇ, ಲಾಲಾ ಲಜಪತ್ ರಾಯ್, ಅರವಿಂದ ಘೋಷ್, ಬಾಲಗಂಗಾಧರ ತಿಲಕ್ ರಂತಹ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ ಸಹವರ್ತಿಯಾಗಿ ಸಕ್ರೀಯವಾಗಿ ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ತಮಿಳುನಾಡಿನ ಹಲ್ವಾಗೆ ಪ್ರಖ್ಯಾತವಾಗಿರುವ ತಿರುನಲ್ವೇಲಿ ಜಿಲ್ಲೆಯ ಎಟ್ಟಯಪುರಮಿ ಎಂಬ ಗ್ರಾಮದ ಶ್ರೀ ಚಿನ್ನಸ್ವಾಮಿ ಅಯ್ಯರ್ ಮತ್ತು ಲಕ್ಷ್ಮೀಅಮ್ಮಾಳ್ ಎಂಬ ದಂಪತಿಗಳಿಗೆ 1882ರ ಡಿಸೆಂಬರ್ 11ರಂದು ಶ್ರೀ ಸುಬ್ರಹ್ಮಣ್ಯರು ಜನಿಸುತ್ತಾರೆ. ದುರದೃಷ್ಟವಾಶಾತ್, ಅವರ ಐದನೇ ವಯಸ್ಸಿಗೇ ತಮ್ಮ ತಾಯಿಯವರನ್ನು ಕಳೆದುಕೊಂಡು ತಬ್ಬಲಿಯಾಗುತ್ತಾರೆ. ಬಾಲ್ಯದಿಂದಲೇ ಆಟ ಪಾಠಗಳಲ್ಲಿ ಬಹಳ ಚುರುಕಗಿದ್ದ ಸುಬ್ರಹ್ಮಣ್ಯರು, ತಮ್ಮ ಏಳನೆಯ ವಯಸ್ಸಿನಲ್ಲಿಯೇ ಆಶುಕವಿಗಳಾಗಿ ರಚಿಸುತ್ತಿದ್ದ ಕವಿತೆಗಳು ಎಲ್ಲರ ಮೆಚ್ಚುಗೆಗಳಿಸಿರುತ್ತದೆ. ಈ ವಿಷಯ ಎಟ್ಟಯಪುರಮ್ ರಾಜರವರೆಗೂ ತಲುಪಿ ಅವರ ಸಮ್ಮುಖದಲ್ಲಿಯೂ ಅವರ ಆಶುಕವಿತ್ವ ಪ್ರದರ್ಶಿತಗೊಂಡು ಸಂತೃಷ್ಟರಾದ ರಾಜರು ಅವರಿಗೆ ಭಾರತಿ ಎಂಬ ಬಿರುದು ಕೊಟ್ಟ ನಂತರ ಸುಬ್ರಹ್ಮಣ್ಯ ಭಾರತೀ ಎಂದು ಪ್ರಖ್ಯಾತರಾಗುತ್ತಾರೆ. 1897ರಲ್ಲಿ ತಿರುನಲ್ವೇಲಿಯ ಹಿಂದೂ ಪ್ರೌಢ ಶಾಲೆಯಲ್ಲಿ ಓದುತ್ತಿರುವಾಗಲೇ, ಕೇವಲ ಏಳುವರ್ಷದ ಪ್ರಾಯದವರಾದ ಶ್ರೀ ಚೆಲ್ಲಮ್ಮಾಳ್ ಎಂಬ ಪುಟ್ಟ ಹುಡುಗಿಯೊಂದಿಗೆ ಬಾಲ್ಯ ವಿವಾಹವಾಗುತ್ತದೆ.

ಅವರ ಮದುವೆಯಾದ ಮರುವರ್ಷದಲ್ಲಿಯೇ 1898ರಲ್ಲಿ ಅವರ ತಂದೆ ನಿಧನರಾದ ಕಾರಣ ಸುಬ್ರಹ್ಮಣ್ಯ ಭಾರತೀ ದಂಪತಿಗಳು ಅವರ ಸಮೀಪದ ಬಂಧುಗಳಾದ ಶೀಮತಿ ಕುಪ್ಪಮ್ಮಾಳ್ ಎಂಬವರ ಆಶ್ರಯದಲ್ಲಿ ಬೆಳೆಯುತ್ತಾರೆ. ಅವರ ಪ್ರೋತ್ಸಾಹದಿಂದಲೇ ಕಾಶಿಯ ಹಿಂದೂ ಕಾಲೇಜಿನಲ್ಲಿ ತಮ್ಮ ಮೆಟ್ರಿಕ್ಯುಲೇಶನ್ ಮುಸಿಗಿಸಿಕೊಂಡು 1902ರಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯದ ಪದವಿಪೂರ್ವ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗುತ್ತಾರೆ. ಇದೇ ಸಂದರ್ಭದಲ್ಲಿ ಅಲ್ಲಿ ಭಾರತೀ ಅವರು ಸಂಸ್ಕೃತ ಮತ್ತು ಹಿಂದಿಯನ್ನೂ ಕಲಿತಿದ್ದಲ್ಲದೇ, ತಮ್ಮೂರು ಎಟ್ಟಯಪುರಮ್ ರಾಜರ ಅಪೇಕ್ಷೆಯಂತೆ ಅಲಹಾಬಾದಿನಿಂದ ತಮ್ಮೂರಿಗೆ ಹಿಂದಿರುಗಿ, ಕೆಲಕಾಲ ಆ ರಾಜರ ಆಸ್ಥಾನ ಕವಿಯಾಗಿರುತ್ತಾರೆ. 1904ರಲ್ಲಿ ಮದರಾಸಿಗೆ ಬಂದು ಸುದೇಶ ಮಿತ್ರನ್ ದಿನ ಪತ್ರಿಕೆಯ ಉಪ ಸಂಪಾದಕರಾಗಿಯೂ, ಚಕ್ರವರ್ತಿನಿ ಎಂಬ ಮಾಸ ಪತ್ರಿಕೆಯ ಗೌರವ ಸಂಪಾದಕರಾಗಿಯೂ ಕೆಲಸ ಮಾಡಲಾರಂಭಿಸಿದರು.

ಅಷ್ಟರಲ್ಲಾಗಲೇ ದೇಶದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಚಳವಳಿಯ ಕಡೆ ಆಕರ್ಷಿತರಾಗಿ 1905ರಲ್ಲಿ ಕಲ್ಕತ್ತದಲ್ಲಿ ದಾದಾಬಾಯಿ ನೌರೋಜಿ ಅವರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಮಹಾಸಭೆಯಲ್ಲಿ ಭಾಗವಹಿಸಿಸುವ ಮೂಲಕ ಅಧಿಕೃತವಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಇಳಿಯುತ್ತಾರೆ. ಅಲ್ಲಿಯೇ ಸ್ವಾಮಿ ವಿವೇಕಾನಂದರ ಪರಮ ಶಿಷ್ಯೆಯಾಗಿದ್ದ ಸೋದರಿ ನಿವೇದಿತಾರನ್ನು ಭೇಟಿಯಾಗಿ ಅವರ ಪಾಂಡಿತ್ಯ ಮತ್ತು ವಿದೇಶದಿಂದ ಬಂದಿದ್ದರೂ ಭಾರತದ ಸ್ವಾತಂತ್ಯ್ರಕ್ಕಾಗಿ ಮತ್ತು ಭಾರತೀಯರ ಉದ್ದಾರಕ್ಕಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದನ್ನು ಕಂಡು ಮೂಕವಿಸ್ಮಿತರಾಗಿ ಅವರನ್ನೇ ತಮ್ಮ ಜ್ಞಾನಗುರುವಾಗಿ ಸ್ವೀಕರಿಸುತ್ತಾರೆ. 1907ರಲ್ಲಿ ಇಂಡಿಯಾ ಎಂಬ ತಮಿಳು ವಾರಪತ್ರಿಕೆ ಮತ್ತು ಬಾಲ ಭಾರತಮ್ ಎಂಬ ಆಂಗ್ಲವಾರ ಪತ್ರಿಕೆಯನ್ನು ಆರಂಭಿಸಿ ನಿಧಾನವಾಗಿ ಜನರನ್ನು ಸ್ವಾತಂತ್ರ್ಯದ ಕಡೆಗೆ ಬಡಿದೆಬ್ಬಿಸುವ ಉಗ್ರವಾದ ಲೇಖನಗಳನ್ನು ಬರೆಯಲಾರಂಭಿಸಿದರು. ಅದೇ ವರ್ಷ ಸೂರತ್‍ನಲ್ಲಿ ಲೋಕಮಾನ್ಯ ತಿಲಕ್, ಅರವಿಂದರು, ಲಾಲಾ ಲಜಪತರಾಯ್ ಮೊದಲಾದವರನ್ನು ಭೇಟಿಯಾದ ನಂತರ ಅವರ ಬರಹದ ಓಘ ಮತ್ತಷ್ಟೂ ತೀವ್ರವಾಯಿತು.

ವಿಜಯ ಎಂಬ ದಿನಪತ್ರಿಕೆ, ಸೂರ್ಯೋದಯ ಎಂಬ ತಮಿಳು ವಾರಪತ್ರಿಕೆ ಮತ್ತು ಕರ್ಮಯೋಗಿ ಎಂಬ ಇಂಗ್ಲಿಷ್ ಪತ್ರಿಕೆ ನಡೆಸುತ್ತಿದ್ದದ್ದಲ್ಲದೇ, ಚಿತ್ರಾವಳಿ ಎಂಬ ತಮಿಳು ಮತ್ತು ಆಂಗ್ಲ ಭಾಷೆಗಳ ಕಾರ್ಟೂನು ಪತ್ರಿಕೆಗಳನ್ನು ತರಲು ಯತ್ನಿಸಿದರು. ತಮ್ಮ ಉಗ್ರ ಸಂಪಾದಕೀಯ ಲೇಖನಗಳ ಮೂಲಕ ಜನರನ್ನು ಎತ್ತಿ ಕಟ್ಟುತ್ತಿದ್ದ ಕಾರಣ ಬ್ರಿಟೀಷರಿಗೆ ಇವರ ಮೇಲೆ ಸದಾ ಕಣ್ಣಿತ್ತು. ಅವರ ಉಗ್ರ ಲೇಖನಗಳು ಮತ್ತು ಕವಿತೆಗಳನ್ನು ಓದಿದ ನಂತರ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಕೈಲದ ಮಟ್ಟಿಗೆ ತಾವೂ ಕೂಡಾ ಭಾಗವಹಿಸಲೇ ಬೇಕು ಎಂದು ಹೋರಾಟದಲ್ಲಿ ಧುಮುಕುತ್ತಿದ್ದದ್ದನ್ನು ಗಮನಿಸಿದ ಅಂದಿನ ಬ್ರಿಟೀಷ್ ಸರ್ಕಾರ ಭಾರತೀ ಅವರು ಇಲ್ಲಿದ್ದರೆ ತಮಗೆ ಮತ್ತಷ್ಟು ಅಪಾಯ ಎಂದು ಭಾವಿಸಿ ಅವರನ್ನು ತಮಿಳುನಾಡಿನಿಂದಲೇ ಬಹಿಷ್ಕರಿಸಿದ ಕಾರಣ, ಅಂದಿನ ಫ್ರೆಂಚ್ ಆಳ್ವಿಕೆಯಲ್ಲಿದ್ದ ಪಾಂಡಿಚೇರಿಗೆ ತಮ್ಮ ವಾಸ್ತವ್ಯವನ್ನು ಬದಲಿದ ನಂತರವಂತೂ ಸ್ವಾತಂತ್ರ ಹೋರಾಟಕ್ಕೆ ಪ್ರೇರಣೆ ನೀಡುವಂತಹ ಅನೇಕ ಕವಿತೆಗಳು, ಲೇಖನಗಳು, ಭಾಷಣಗಳನ್ನು ಎಗ್ಗಿಲ್ಲದೇ ಮುಂದುವರಿಸುತ್ತಾರೆ. ಅವರು ರಚಿಸುತ್ತಿದ್ದ ಕವಿತೆಗಳ ಪ್ರಖರತೆ ಎಷ್ಟಿತ್ತೆಂದರೆ, ಆಗಿನ ಯುವಕರು ಅವರ ಇಡೀ ಕವಿತೆಗಳನ್ನೇ ತಮ್ಮ ಮೈಮೇಲೆ ಹಚ್ಚೇಹಾಕಿಸಿಕೊಂಡು ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಪೊಲೀಸರಿಗೆ ಸಿಕ್ಕಿಹಾಕಿಕೊಂಡಾಗ ಆ ಹಚ್ಚೆಯನ್ನು ತೋರಿಸಿ ಬ್ರಿಟಿಷರನ್ನು ಕಿಚಾಯಿಸಿದ ಘಟನೆಗಳೂ ತಮಿಳುನಾಡಿನಲ್ಲಿ ನಡೆದಂತಹ ಉದಾಹರಣೆಗಳನ್ನು ಇಂದಿಗೂ ಅವರನ್ನು ಹತ್ತಿರದಿಂದ ಬಲ್ಲ ಹಿರಿಯರು ಹೇಳುವುದನ್ನು ಕೇಳಿದರೆ ಅವರ ಲೇಖನಗಳ ತೀವ್ರತೆ ಮತ್ತು ಜನರ ಮೇಲೆ ಉಂಟಾಗುತ್ತಿದ್ದ ಪ್ರಭಾವವನ್ನು ತಿಳಿಸುತ್ತದೆ.

ಪುದುಚರಿಯಲ್ಲಿ ತಲೆಮರಿಸಿಕೊಂಡಿದ್ದಾಗಲೇ ಸುಬ್ರಹ್ಮಣ್ಯ ಭಾರತೀ ಅವರಿಗೆ ಸ್ವಾಮೀ ಅರವಿಂದರು ಮತ್ತು ವಿ.ವಿ.ಎಸ್. ಅಯ್ಯರ್ ಅವರ ಸಾನ್ನಿಧ್ಯದಿಂದ ದೊರತ ಕಾರಣ ಅವರ ಬದುಕಿನಲ್ಲಿ ಹೊಸ ತಿರುವನ್ನು ಪಡೆದುಕೊಳ್ಳುತ್ತದೆ. ಸತತವಾದ ಅಧ್ಯಯನ, ಚಿಂತನಶೀಲ ಬರವಣಿಗೆಗಳು ಅವರ ಬದುಕನ್ನು ತುಂಬುತ್ತದೆ. ಅಲ್ಲಿದ್ದ ಅಲ್ಪಾವಧಿಯಲ್ಲಿಯೇ ಅವರ ಸೃಜನಶೀಲತೆಯ ಪರ್ವತದ ಕಾಲವಾಗಿದ್ದು ಕ್ರಾಂತಿಕಾರಿ ಬರವಣಿಗೆಯೊಂದಿಗೆ ಆಧ್ಯಾತ್ಮಿಕವಾದ ಬರಹಗಳತ್ತಲೂ ಹರಿಸುತ್ತಾರೆ ಅವರ ಚಿತ್ತ. ಅದೇ ಸಮಯದಲ್ಲಿಯೇ 1908ರಲ್ಲಿ ತಮ್ಮ ಚೊಚ್ಚಲ ಕವನ ಸಂಕಲನ ಸ್ವದೇಶ ಗೀತಂಗಳ್ ಹಾಗೂ 1909ರಲ್ಲಿ ಅವರ ಎರಡನೇ ಕವನ ಸಂಕಲನ ಜನ್ಮಭೂಮಿ ಪ್ರಕಟವಾಗಿ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿಸುವುದರಲ್ಲಿ ಸಫಲವಾದವು. ಅದಲ್ಲದೇ, ಸಂಸ್ಕೃತದಲ್ಲಿದ್ದ ಭಗವದ್ಗೀತೆಯನ್ನು ಸರಳ ತಮಿಳಿಗೆ ಭಾಷಾಂತರಿಸಿ ಎಲ್ಲರೂ ಓದುವಂತೆ ಮಾಡುತ್ತಾರೆ. ಇದೇ ಸಮಯದಲ್ಲಿಯೇ ಕಣ್ಣನ್ ಪ್ಪಾಟ್ಟು, ಕಯಿಲ್‍ಪ್ಪಾಟ್ಟು, ಪಾಂಚಾಲಿ ಶಪಥಮ್ ಮುಂತಾದ ಕೃತಿಗಳನ್ನು ರಚಿಸುತ್ತಾರೆ. ಅವರ ದೇಶಭಕ್ತಿ ಗೀತೆಗಳ ಸಂಕಲನ ಮಾತಾ ಮಣಿ ವಾಚಕಮ್, ದಕ್ಷಿಣ ಆಫ್ರಿಕಾದ ನೆಟಾಲಿನಲ್ಲಿ ಪ್ರಕಟವಾಯಿತು. ಸುಬ್ರಹ್ಮಣ್ಯ ಭಾರತಿ ಅವರನ್ನು ಹೇಗಾದರೂ ಮಾಡಿ ಬಂಧಿಸಲೇ ಬೇಕು ಎಂದು ಹೊಂಚು ಹಾಕುತ್ತಿದ್ದ ಬ್ರಿಟೀಷರಿಗೆ, 1918ರಲ್ಲಿ ಪಾಂಡಿಚೆರಿಯಿಂದ ಬರುತ್ತಿದ್ದಾಗ ಅವರನ್ನು ಬಂಧಿಸಿ, ಕಡಲೂರಿನ ಸೆರೆಮನೆಯಲ್ಲಿ ಕೆಲಕಾಲ ಬಂಧಿಗಳನ್ನಾಗಿ ಮಾಡುತ್ತಾರೆ. ಅಲ್ಲಿಂದ ಬಿಡುಗಡೆಯಾಗಿ ಮದರಾಸಿಗೆ ಮರಳಿದಾಗಲೇ ಅವರಿಗೆ ಮಹಾತ್ಮಗಾಂಧಿ, ರಾಜಾಜಿ ಮುಂತಾದ ಸ್ವಾತ್ರಂತ್ರ್ಯ ಹೋರಾಟಗಾರರ ಭೇಟಿಯಾಗುವ ಸದಾವಕಾಶ ದೊರೆತು ಮತ್ತೆ 1920ರಲ್ಲಿ ಸ್ವದೇಶ ಮಿತ್ರನ್ ಪತ್ರಿಕೆಯ ಉಪ ಸಂಪಾದಕರಾಗುವ ಮೂಲಕ ತಮ್ಮ ಬರವಣಿಗೆಯನ್ನು ಮುಂದುವರೆಸುತ್ತಾರೆ.

1921 ಜುಲೈ ತಿಂಗಳಿನಲ್ಲಿ ತಮ್ಮೂರು ತಿರುನಲ್ವೇಲಿಯ ಶ್ರೀ ಪಾರ್ಥಸಾರಥಿ ದೇವಸ್ಥಾನದ ಆನೆಯ ಹೊಡೆತದಿಂದ ಗಾಯಗೊಂಡ ಶ್ರೀ ಸುಬ್ರಮಣ್ಯ ಭಾರತಿಯವರು ಚೇತರಿಸಿಕೊಳ್ಳಲಾಗದೇ ತಮ್ಮ 39ನೇ ವಯಸ್ಸಿನಲ್ಲಿಯೇ ಸೆಪ್ಟೆಂಬರ್ 12 1921ರಂದು ನಿಧನರಾಗುತ್ತಾರೆ.

ಕೇವಲ 39 ವರ್ಷವಷ್ಟೇ ಬದುಕಿದ್ದರೂ ತಮ್ಮ ಒಟ್ಟು 108 ಲೇಖನಗಳು, 42 ಕಥೆ, ಸುಮಾರು 300ಕ್ಕೂ ಹೆಚ್ಚಿನ ಕವನಗಳು ಹಾಗೂ ಪಾಂಚಾಲಿ ಶಪಥಂ ಎಂಬ ಕಥನ ಕವನ ರಚಿಸಸುವ ಮೂಲಕ ದೇಶ ಭಕ್ತಿ ಮತ್ತು ಆಧ್ಯಾತ್ಮದ ಮೂಲಕ ಕಾವ್ಯಗಳನ್ನು ರಚಿಸಿ ತಮಿಳು ಸಾಹಿತ್ಯವನ್ನು ಜನ ಸಾಮಾನ್ಯರಿಗೂ ಎಟುಕುವಂತೆ ಮಾಡಿದ ಹೆಗ್ಗಳಿಗೆ ಶ್ರೀ ಸುಬ್ರಹ್ಮಣ್ಯ ಭಾರತೀ ಅವರದ್ದಾಗಿದೆ. ಅವರು ಅಂದು ರಚಿಸಿದ ಕವಿತೆಗಳು ಇಂದಿಗೂ ಪ್ರಸ್ತುತವಾಗಿದ್ದು, ಅವರ ಕವಿತಾ ಪ್ರಪಂಚ ಕೇವಲ ತಮಿಳುನಾಡು, ಭಾರತವಷ್ಟೇ ಅಲ್ಲದೇ ಇಡೀ ವಿಶ್ವಕ್ಕೆ ತಲುಪಿದೆ ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಅವರ ಸರಿಸುಮಾರು 90 ಪ್ರತಿಶತ ಕವಿತೆಗಳು, ಲೇಖನಗಳು ಭಾರತದ ಎಲ್ಲಾ ಭಾಷೆಗಳಷ್ಟೇ ಅಲ್ಲದೇ ಇಂಗ್ಲಿಷ್, ಫ್ರೆಂಚ್,ಜರ್ಮನ್, ರಷ್ಯನ್ ಭಾಷೆಗಳಿಗೂ ತರ್ಜುಮೆಯಾಗಿರುವುದು ಅವರ ಸಾಹಿತ್ಯದ ಗರಿಮೆಯನ್ನು ಎತ್ತಿ ತೋರುತ್ತದೆ.

ಸ್ವಾತ್ರಂತ್ರ್ಯಾ ನಂತರ ನಮ್ಮ ಘನ ಭಾರತ ಸರ್ಕಾರವು ಶ್ರೀ ಸುಬ್ರಹ್ಮಣ್ಯ ಭಾರತಿಗಳ ರಾಷ್ಠ್ರಭಕ್ತಿ ಮತ್ತು ಅವರ ಸಾಹಿತ್ಯ ಕೃಷಿಯನ್ನು ಪರಿಗಣಿಸಿ, ಅವರ ಲೇಖನಗಳು ಪ್ರತೀ ಭಾರತೀಯರಿಗೂ ಮಾರ್ಗದರ್ಶಿ ಯಾಗಿದೆ ಎಂದು ತಿಳಿದು ಅವರಿಗೆ ಮರಣೋತ್ತರವಾಗಿ ರಾಷ್ಟ್ರಕವಿ ಎಂಬ ಗೌರವನ್ನು ನೀಡಿರುವುದಲ್ಲದೇ ಅವರ ಹೆಸರಿನಲ್ಲಿ ಅಂಚೆ ಚೀಟಿಯನ್ನೂ ಸಹಾ ಬಿಡುಗಡೆ ಮಾಡಿದೆ.

ಸುಬ್ರಹ್ಮಣ್ಯ ಭಾರತಿಯವರು, ಒಬ್ಬ ಕವಿಯಾಗಿ, ದೇಶಭಕ್ತರಾಗಿ, ಪತ್ರಕರ್ತರಾಗಿ, ಸಮಾಜ ಸುಧಾರಕರಾಗಿ, ತತ್ತ್ವಶಾಸ್ತ್ರಜ್ಞರಾಗಿ, ರಾಷ್ಟ್ರೀಯ ಭಾವೈಕ್ಯದ ಹರಿಕಾರರಾಗಿ, ಜಾತಿಭೇದವನ್ನು ವಿರೋಧಿಸುವ ಮತ್ತು ಮೂಢನಂಬಿಕೆಗಳನ್ನು ಎದುರಿಸುವ ಮನೋಭಾವ ಜಾತ್ಯತೀತವಾದ ಸಮಾನತೆಯ ಆಧಾರದ ಮೇಲೆ ರಾಷ್ಟ್ರ ಜೀವನದ ಕನಸನ್ನು ಕಂಡಿದ್ದಲ್ಲದೇ ಅದನ್ನು ನನಸು ಮಾಡುವ ಸಾಕಾರವನ್ನು ನಮ್ಮೆಲ್ಲರ ಮೇಲೆ ಬಿಟ್ಟು ಹೋಗಿದ್ದಾರೆ. ಅವರನ್ನು ಕೇವಲ ಒಬ್ಬ ತಮಿಳು ಕವಿ ಎಂದು ಭಾವಿಸದೇ ಅವರ ಕೃತಿಗಳ ಮೂಲಕ ಹೇಳಿದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ ಜನ್ಮದಿನದಂದು ಅವರಿಗೆ ಹೃದಯಪೂರ್ವಕ ನಮನಗಳನ್ನು ಸಲ್ಲಿಸೋಣ ಅಲ್ಲವೇ?

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s