ಜ್ಞಾನಚೂರ್ಣ ನಶ್ಯ

ಬಹುಶಃ ಇಂದಿನ ಕಾಲದಲ್ಲಿ ಯಾವುದೇ ಚಟವಿಲ್ಲದವರು ಸಿಗುವುದೇ ಅಪರೂಪ ಎಂದರೂ ತಪ್ಪಾಗಲಾರದೇನೋ?. ಇಂದಿನ ಬಹುತೇಕ ಹುಡುಗರು ಕಾಲೇಜು ಮೆಟ್ಟಿಲು ಹತ್ತುವುದರೊಳಗೇ ಬೀಡಿ ಇಲ್ಲವೇ ಸಿಗರೇಟ್ ಈ ರೀತಿ ಯಾವುದಾದರೂಂದು ತಂಬಾಕಿನ ಉತ್ಪನ್ನಕ್ಕೆ ದಾಸರಾಗಿ ಹೋಗುತ್ತಿರುವುದು ನಿಜಕ್ಕೂ ಬೇಸರ ಸಂಗತಿ. ಆದರೆ ಇವೆರೆಡರ ಹೊರತಾಗಿಯೂ ತಂಬಾಕಿನಿಂದ ತಯಾರಾದ ಹೊಗೆರಹಿತ ಸಣ್ಣದಾಗಿ ನಶೆ ಏರಿಸುವ ವಸ್ತುವೇ ನಶ್ಯ ಇಲ್ಲವೇ ನಸ್ಯ ಎಂದೂ ಕರೆಯುತ್ತಾರೆ.. ಇಂತಹ ನಶ್ಯದ ಕುರಿತಾದ ಕೆಲವು ಮೋಜಿನ ಪ್ರಸಂಗಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ನನಗೆ ತಿಳಿದಂತೆ, ನಶ್ಯಕ್ಕೂ ನಮ್ಮ ಕುಟುಂಬಕ್ಕೂ ಸುಮಾರು ಒಂದು ಶತಮಾನಗಳ ನಂಟು. 1900-1983ರ ವರೆಗಿದ್ದ ನಮ್ಮ ತಾತ ಮತ್ತು 1937-2017ರ ವರೆಗೆ ಇದ್ದ ನಮ್ಮ ತಂದೆಯವರು ನಶ್ಯ ಹಾಕುತ್ತಿದ್ದ ಕಾರಣ ನಮ್ಮ ಇಡೀ ಕುಟುಂಬದವರಿಗೆ ನಶ್ಯ ಒಂದು ರೀತಿಯ ಕಾಫೀ ಪುಡಿ ಇದ್ದ ಹಾಗಿತ್ತು. ನಾವೆಲ್ಲರೂ ಚಿಕ್ಕವರಿದ್ದಾಗ ಪ್ರತೀ ಬಾರಿ ನಮ್ಮೂರಿಗೆ ಹೋಗುವಾಗಲೂ ಅಜ್ಜಿಯವರಿಗೆ ಹೇಗೆ ಒಂದು ಕೆಜಿ ಕಾಫೀ ಪುಡಿ ತೆಗೆದುಕೊಂಡು ಹೋಗಿ ಕೊಡುತ್ತಿದ್ದೆವೆಯೋ ಹಾಗೆಯೇ ನಮ್ಮ ತಾತನವರಿಗೆ ಕಾಲು ಕೆಜಿ ಕೊಡೇ ಮಾರ್ಕ್ ನಶ್ಯ ತೆಗೆದುಕೊಂಡು ಹೋಗಲೇ ಬೇಕೆಂಬ ಅಲಿಖಿತ ನಿಯಮ ನಮ್ಮ ಕುಟುಂಬದಲ್ಲಿತ್ತು. ಬೆಂಗಳೂರಿನಿಂದ ಯಾರೇ ಊರಿಗೆ ಹೋದ ಕೂಡಲೇ ನಶ್ಯ ತಂದ್ಯಾ? ಅಂತಾ ಕೇಳುತ್ತಿದ್ದ ನಮ್ಮ ತಾತನವರಿಗೆ ಅಯ್ಯೋ, ಮರ್ತೇ ಹೋಯ್ತು ಅಂತಂದ್ರೇ ಸಾಕು. ಛೇ.. ಛೇ.. ಛೇ.. ಇಷ್ಟು ಚಿಕ್ಕವಯಸ್ಸಿಗೇ ಅದೆಂತಾ ಮರೆವೋ ನಿಮಗೆಲ್ಲಾ ಅಂತಾ ಬೇಸರಿಸಿಕೊಂಡು ಬಾಲ ಸುಟ್ಟ ಬೆಕ್ಕಿನಂತೆ ಓಡಾಡುತ್ತಿದ್ದವರಿಗೆ ಮೆಲ್ಲಗೇ ತೆಗೋಳ್ಳಿ ನಶ್ಯ ಎಂದು ಕಾಲು ಕೆಜಿ ಡಬ್ಬಿ ಕೈಗಿಟ್ಟೊಡನೆಯೇ ನಿಧಿ ಸಿಕ್ಕಂತಹ ಅನುಭವ ನಮ್ಮ ತಾತನವರದಾಗಿರುತ್ತಿತ್ತು. ಅಂದು ಸಂಜೆ ಮನೆಯ ಜಗಲಿಯ ಮೇಲೆ ಕುಳಿತು ಅವರ ಸಹ ವಯಸ್ಕರೊಡನೆ ಫ್ರೆಷ್ ನಶ್ಯದ ನಶೆ ಏರಿಸಿಕೊಂಡು ಸಂಭ್ರಮಿಸುತ್ತಿದ್ದ ಪರಿ ನಿಜಕ್ಕೂ ವರ್ಣಿಸಲಸದಳ.

ಇನ್ನು ಬೆಂಗಳೂರಿನ ಮಲ್ಲೇಶ್ವರ, ಚಿಕ್ಕ ಪೇಟೆ, ಇಲ್ಲವೇ ಸಿಟಿ ಮಾರ್ಕೆಟ್ ಇಲ್ಲವೇ ಮೈಸೂರಿನ ದೇವರಾಜ ಮಾರ್ಕೆಟ್ ಕಡೆಗೆ ನಾನಾಗಲೀ, ನಮ್ಮ ಚಿಕ್ಕಪ್ಪನವರಾಗಲೀ ಇಲ್ಲವೇ ನಮ್ಮ ತಂಗಿ-ಭಾವಂದಿರು ಹೋಗಿರುವ ಸುದ್ದಿ ನಮ್ಮ ತಂದೆಯವರಿಗೆ ಗೊತ್ತಾಗುತ್ತಿದ್ದಂತೆಯೇ, ನಶ್ಯಾ ತಂದ್ರಾ? ಅಂತ ಅವರ ತಂದೆಯವರಂತೆಯೇ ಕೇಳುತ್ತಿದ್ದರು. ಅಪ್ಪಿ ತಪ್ಪಿ ಅಯ್ಯೋ ಮರ್ತು ಹೋಯ್ತು ಅಂತಾನೋ ಇಲ್ಲಾ ಪುರುಸೊತ್ತೇ ಆಗ್ಲಿಲ್ಲ ಅಂತಾನೋ ಹೇಳಿದ್ರೇ ಸಾಕು. ಥೇಟ್ ನಮ್ಮ ತಾತನ ತರಹಾನೇ ಬೇಸರ ಮಾಡಿಕೊಂಡಿರುವಾಗ ಅವರ ಕೈಯಲ್ಲಿ 100 ಗ್ರಾಂ ಕೊಡೇ ಮಾರ್ಕ್ (70 Strong + 30 lite) ನಶ್ಯ ಕೈಗೆ ಕೊಟ್ಟಾಕ್ಷಣವೇ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಷ್ಟು ಸಂತೋಷ ಪಡುತ್ತಿದ್ದದ್ದು ಇನ್ನೂ ಹಚ್ಚ ಹಸಿರಾಗಿಯೇ ಇದೆ.

ಇನ್ನು ನಾವೆಲ್ಲಾ ಚಿಕ್ಕವರಿದ್ದಾಗಾ, ಬಿದ್ದು ಗಾಯ ಮಾಡಿಕೊಂಡು ರಕ್ತ ಸೋರಿಸಿಕೊಂಡು ಬಂದರೆ ನಶ್ಯವೇ ನಮಗೆಲ್ಲಾ ದಿವ್ಯೌಷಧ. ಆರಂಭದಲ್ಲಿ ಉರಿ ಹತ್ತಿದರೂ, ರಕ್ತಸ್ರಾವ ಕೂಡಲೇ ‌ನಿಂತು ಹೋಗಿ ಕೆಲವೇ ದಿನಗಳಲ್ಲಿ ಗಾಯ‌ ವಾಸಿಯಾಗುತ್ತಿತ್ತು.

ಇನ್ನು ಶಾಲಾ ಶಿಕ್ಷಕರಾಗಿದ್ದ ನಮ್ಮ ಅಮ್ಮನ ಸೋದರಮಾವ ರಾಮ ಅವರೂ ಕೂಡಾ ನಶ್ಯ ಹಾಕುತ್ತಿದ್ದರಂತೆ. ವಾರಾಂತ್ಯದಲ್ಲಿ ನಮ್ಮ ಅಜ್ಜಿ (ಅವರ ಅಕ್ಕ) ಮನೆಗೆ ಬಂದಾಗ, ಅವರ ಪ್ರೀತಿಯ ಸೋದರ ಸೊಸೆ ನಮ್ಮ ತಾಯಿಯವರಿಗೆ ಅವರಿಗಿಷ್ಟವಾದ ಸಿಹಿ ತಿಂಡಿಯನ್ನೆಲ್ಲವನ್ನೂ ತಂದು ಕೊಟ್ಟು ಸ್ವಲ್ಪ ಸಮಯದ ನಂತರ ಅವರ ನಶ್ಯದ ಕರ್ಚೀಫ್ ಕೊಟ್ಟು, ಮಣಿಯಾ ಸ್ವಲ್ಪ ಈ ಕರ್ಚೀಫ್ ಒಗೆದು ಹರವು ಹಾಕಿ ಬಿಡೋ, ನಾಳೆ ಊರಿಗೆ ಹೋಗುವಷ್ಟರಲ್ಲಿ ಒಣಗಿ ಬಿಡುತ್ತದೆ ಎನ್ನುತ್ತಿದ್ದರಂತೆ. ಅವರು ತಂದು ಕೊಟ್ಟ ಸಿಹಿ ತಿಂಡಿಗಳನ್ನು ತಿನ್ನುವುದರಲ್ಲಿ ಮಗ್ನರಾಗಿರುತ್ತಿದ್ದ ಸಣ್ಣ ವಯಸ್ಸಿನ ನಮ್ಮಮ್ಮ, ಛೀ.. ನಾನು ಒಗೆಯೋದಿಲ್ಲಪ್ಪಾ.. ಅಸಹ್ಯ ಆಗುತ್ತದೆ ಎನ್ನುತ್ತಿದ್ದರಂತೆ. ಅದಾದ ನಂತರ ಬಲವಂತದಿಂದ ಆ ಕರ್ಚೀಫನ್ನು ಕೈಯ್ಯಿಂದ ತಿಕ್ಕದೇ ಕಾಲಿನಿಂದ ಓಗೆಯುತ್ತಿದ್ದನ್ನು ಗಮನಿಸಿದ ನಮ್ಮಮ್ಮನ ರಾಮ ಮಾವಾ, ಮಣಿಯಾ.. ನಾನು ಬದುಕಿದ್ರೇ, ನಿನಗೆ ನಶ್ಯ ಹಾಕೋ ಗಂಡನನ್ನೇ ಹುಡುಕ್ತೀನಿ ನೋಡು ಎಂದು ಹಾಸ್ಯ ಮಾಡುತ್ತಿದ್ದರಂತೆ. ದುರಾದೃಷ್ಟವಶಾತ್ ನಮ್ಮ ಅಮ್ಮನ ಮದುವೆಯಾಗುವಷ್ಟರಲ್ಲಿ ಅವರ ಮುದ್ದಿನ ಸೋದರ ಮಾವ ಬದುಕಿಲ್ಲದಿದ್ದರೂ, ಕಾಕತಾಳೀಯವೋ ಎನ್ನುವಂತೆ, ರಾಮ ಮಾವನ ಆಸೆಯಂತೆಯೇ ನಮ್ಮಮ್ಮನಿಗೆ ನಶ್ಯ ಹಾಕುವ ಗಂಡ ಮತ್ತು ಮಾವನವರೇ ಸಿಕ್ಕಿದ್ದನ್ನು ಅದೆಷ್ಟೋ ಬಾರಿ ಅಮ್ಮ ನಮ್ಮೊಂದಿಗೆ ಹೇಳುತ್ತಿದ್ದಿದ್ದಲ್ಲದೇ, ಇಂತಹ ಪರಿಪಾಟಲು ನನ್ನ ಸೊಸೆಗೆ ಬಾರದಿರಲಿ ಎಂದು ನನ್ನನ್ನು ನೋಡಿ ಎಚ್ಚರಿಸುತ್ತಿದ್ದರು. ಅಮ್ಮ ಮದುವೆಯಾದ ಹೊಸದರಲ್ಲಿ ಮನೆಯ ಕೆಲಸದವಳು ನಮ್ಮ ತಂದೆಯವರ ನಶ್ಯದ ಕರ್ಚೀಫನ್ನು ಅಸಹ್ಯದಿಂದ ಕಾಲಿನಿಂದ ಒಗೆಯುತ್ತಿದ್ದನ್ನು ಗಮನಿಸಿದ ನಮ್ಮಮ್ಮ ಕೂಡಲೇ ಅವಳನ್ನು ಕೆಲಸದಿಂದ ಬಿಡಿಸಿದ್ದಲ್ಲದೇ, ಅಮ್ಮಾ ಸಾಯುವ ವರೆಗೂ ನಮ್ಮ ತಂದೆಯವರ ನಶ್ಯದ ಕರ್ಚೀಫ್ ಅನ್ನು ಅವರೇ ಒಗೆಯುತ್ತಿದ್ದರು. ಅಮ್ಮಾ ಹೋದ ನಂತರ ಸಾಯುವ ದಿನದ ವರೆಗೂ ನಮ್ಮ ತಂದೆಯವರೇ ಖುದ್ದಾಗಿ ಅವರ ನಶ್ಯದ ಕರ್ಚೀಫ್ ಒಗೆದುಕೊಳ್ಳುತ್ತಿದ್ದರು.

ನಮ್ಮ ತಂದೆ ಮತ್ತು ನಮ್ಮ ತಾತ ಇಬ್ಬರೂ ಸಹಾ ನಶ್ಯ ಮೂಗಿಗೆ ಏರಿಸುವಾಗ ತಮ್ಮ ಶರ್ಟ್ ಮೇಲೆ ಚೆಲ್ಲಿಕೊಂಡಿದ್ದ ನಶ್ಯವನ್ನು ಹಾಗೆಯೇ ಒರೆಸಿಕೊಳ್ಳುತ್ತಿದ್ದರಿಂದ ಆವರ ಬಟ್ಟೆಗಳೆಲ್ಲಾ ನಶ್ಯದ ವಾಸನೆಯಾಗಿರುತ್ತಿತ್ತು. ಅದೊಮ್ಮೆ ನವೆಂಬರ್ ಚಳಿಗಾಲ. ಅಮ್ಮಾ ಒಗೆದು ಹಾಕಿದ್ದ ನನ್ನ ಸ್ವೆಟರ್ ಇನ್ನೂ ಒಣಗಿರಲಿಲ್ಲ. ಕಾಲೇಜಿಗೆ ಸೈಕಲ್ಲಿನಲ್ಲಿ ಹೋಗುತ್ತಿದ್ದ ಕಾರಣ ‍ಚಳಿ ಎಂದು ಬೇಡ ಬೇಡ ಎಂದರೂ ಅಪ್ಪನ ಸ್ವೆಟರ್ ಹಾಕಿಕೊಂಡು ಹೋಗಲು ಅಮ್ಮಾ ಒತ್ತಾಯ ಪಡಿಸಿದ ಕಾರಣ, ವಿಧಿ ಇಲ್ಲದೇ ಅಪ್ಪನ ಸ್ವೆಟರ್ ಹಾಕಿಕೊಂಡು ಕಾಲೇಜಿಗೆ ಹೋದೆ. ನಮಗೆಲ್ಲಾ ನಶ್ಯದ ವಾಸನೆ ಅಭ್ಯಾಸವಾಗಿದ್ದ ಕಾರಣ ನನಗೇನೂ ಅನ್ನಿಸುತ್ತಿರಲಿಲ್ಲ. ಆದರೇ ನನ್ನ ಸ್ನೇಹಿತರಿಗೆಲ್ಲಾ ನಶ್ಯದ ಘಮಲು ಅವರ ಮೂಗಿಗೆ ಬಡಿದು, ಇದೇನಿದು ಹೊಗೇಸೊಪ್ಪಿನ ವಾಸನೇ? ಎಂದರೆ ಮತ್ತೊಬ್ಬ ಇದು ನಶ್ಯದ ವಾಸನೆ ಹಾಗೆ ಬರುತ್ತಿದೆಯಲ್ಲಾ? ಎಂದಾಗ ನನಗೇನೂ ಗೊತ್ತಿಲ್ಲದ ಹಾಗೆ ಸುಮ್ಮನಿದ್ದು ಸ್ವಲ್ಪ ಸಮಯದ ನಂತರ ಛಳಿಯನ್ನೂ ಲೆಕ್ಕಿಸದೇ, ಸದ್ದಿಲ್ಲದೇ ಸ್ವೆಟರ್ ತೆಗೆದು ಬ್ಯಾಗಿನಲ್ಲಿ ಇಟ್ಟುಕೊಂಡು ಮನೆಗೆ ಬಂದು ಅಮ್ಮನೊಂದಿಗೆ ನಡೆದ ವಿಷಯವನ್ನೆಲ್ಲಾ ಹೇಳಿ ಅಮ್ಮನ ಮೇಲೆ ರೇಗಾಡಿದ್ದೆ.

ಇನ್ನು ನಮ್ಮ ಮನೆಗೆ ಅಡುಗೆಗೆಂದು ಬರುತ್ತಿದ್ದ ನಾಗರಾಜ್ ಆವರಿಗೂ ನಶ್ಯದ ಆಭ್ಯಾಸ. ಅವರ ಮದುವೆ ದೂರದ ವಿದುರಾಶ್ವಥದಲ್ಲಿ ನಡೆದಾಗ ಮದುವೆಗೆಂದು ಹೋಗಿದ್ದ ಐದಾರು ಜನರ ಬಳಿ ನಶ್ಯದ ಡಬ್ಬಿಯನ್ನು ಕೊಟ್ಟಿಟ್ಟು, ನಮ್ಮನ್ನು ನೋಡಿದ ತಕ್ಷಣವೇ, ಸದ್ದಿಲ್ಲದೇ ಅವರಿಗೆ ನಶ್ಯ ಕೊಟ್ಟಿದ್ದನ್ನು ನೆನಸಿಕೊಂಡರೇ ಇನ್ನೂ ನಗು ಬರುತ್ತದೆ.

ನಮ್ಮ ಭಾವನವರ ತಾತ ತೊಂಭತ್ತು ವರ್ಷಕ್ಕೂ ಹೆಚ್ಚಿನ ವಯಸ್ಸಿನವರಾಗಿದ್ದಾಗ ಮೂಗಿನಲ್ಲಿ‌ ನಶ್ಯ ಏರಿಸಿಕೊಳ್ಳಲು ಅಶಕ್ತರಾದಗಲೂ ಚಿಟುಕಿ ನಶ್ಯವನ್ನು‌ಬಾಯಿಗೆ ಹಾಕಿಕೊಳ್ಳುವಷ್ಟರ ಮಟ್ಟಿಗೆ ಚಟ ಬೆಳೆಸಿಕೊಂಡಿದ್ದರು.

ಅದೇ ರೀತಿ ನನ್ನ ಆಪ್ತ ಸ್ನೇಹಿತನ ತಾಯಿಯವರಿಗೂ ನಶ್ಯ ಸೇವಿಸುವ ಚಟ ಇದ್ದ ಕಾರಣ, ಅವರ ಮನೆಗೆ ಹೋಗುವಾಗ ಹೂವು ಹಣ್ಣು ತೆಗೆದುಕೊಂಡು ಹೋಗುವುದರ ಜೊತೆಗೆ ನಶ್ಯವನ್ನೂ ತೆಗೆದುಕೊಂಡು ಹೋಗುವ ರೂಢಿಯನ್ನು ಮಾಡಿಕೊಂಡಿದ್ದು ವಿಪರ್ಯಾಸ.

ನಮ್ಮ ತಂದೆಯವರು ಬಿ.ಇ.ಎಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಕಾರ್ಖಾನೆಯೊಳಗೇ ಬೀಡೀ ಸಿಗರೇಟ್ ತೆಗೆದುಕೊಂಡು ಹೋಗುವುದು ನಿಷಿಧ್ಧವಾಗಿದ್ದರೂ ನಶ್ಯ ತೆಗೆದುಕೊಂಡು ಹೋಗಲು ಯಾವುದೇ ನಿರ್ಭಂಧವಿರಲಿಲ್ಲ. ಅದಕ್ಕೇ ನಮ್ಮ ತಂದೆ ಯಾವಾಗಲೂ ಹಾಸ್ಯವಾಗಿ ನೋಡು ಈ ಜ್ಞಾನಚೂರ್ಣಕ್ಕೆ ಎಷ್ಟೊಂದು ರಾಜ ಮರ್ಯಾದೆ. ಯಾರೂ ಕೂಡಾ ಇದನ್ನು ತಡೆಯಲಾರರು. ರಾಜರ ವಿದ್ವತ್ ಸಭೆಯಲ್ಲೂ ನಿರಾಯಾಸವಾಗಿ ನಶ್ಯವನ್ನು ಮೂಗಿಗೆ ಏರಿಸಿಕೊಳ್ಳಬಹುದು ಎಂದು ಹೇಳುತ್ತಿದ್ದರು. ತಾವೂ ನಶ್ಯ ಹಾಕುತ್ತಿದ್ದದ್ದಲ್ಲದೇ ಅವರ ಸಹೋದ್ಯೋಗಿಗಳಿಗೂ ನಶ್ಯದ ದುರಾಭ್ಯಾಸ ಮಾಡಿಸಿದ್ದರು. ಆದರೆ ಅವರ್ಯಾರು ನಮ್ಮ ತಂದೆಯಂತೆ ನಶ್ಯದ ಡಬ್ಬಿಯನ್ನು ಇಟ್ಟುಕೊಳ್ಳದೇ, ಕೇವಲ ನಮ್ಮ ತಂದೆಯವರನ್ನು ಕಂಡಾಕ್ಷಣವೇ ಅವರಿಗೆ ನಶ್ಯ ಹಾಕುವ ಖಯಾಲು ಬರುತ್ತಿತ್ತು. ಅಣ್ಣಾ ಕೋತಿ ತಾನು ಕೆಡುವುದಲ್ಲದೇ, ಇಡೀ ವನವನ್ನೆಲ್ಲಾ ಕೆಡಿಸಿತು ಎನ್ನುವಂತೆ ನೀವೂ ನಶ್ಯ ಹಾಕುವುದಲ್ಲದೇ, ನಿಮ್ಮ ಸ್ನೇಹಿತರಿಗೂ ನಶ್ಯ ದಾನ ಮಾಡಿ ಅವರನ್ನೇಕೆ ಕೆಡುಸುತ್ತೀರೀ? ಎಂದರೆ, ನೋಡು ಮಗು ಬೇರೆ ಎಲ್ಲಾ ವಸ್ತುಗಳನ್ನು ಕೊಡುವಾಗ ದಾನ ಕೊಡುವವರ ಕೈ ಮೇಲಿದ್ದರೆ, ದಾನ ತೆಗೆದುಕೊಳ್ಳುವವರ ಕೈ ಕೆಳಗಿರುತ್ತದೆ. ಆದರೆ ನಶ್ಯ ಕೊಡುವಾಗ ಮಾತ್ರಾ ತದ್ವಿರುದ್ಧವಾಗಿ ನಶ್ಯ ಕೊಡುವವರ ಕೈ ಕೆಳಗಿದ್ದರೆ, ನಶ್ಯ ತೆಗೆದುಕೊಳ್ಳುವವರ ಕೈ ಮೇಲಿರುತ್ತದೆ ಎಂದು ಹೇಳುತ್ತಾ ಈ ಶ್ಲೋಕದ ಉದಾಹರಣೆ ನೀಡುತ್ತಿದ್ದರು.

ನಸ್ಯದಾನಂ ಮಹಾದಾನಂ, ಅನ್ನ ದಾನಂ ಚ ಮಧ್ಯಮಂ|
ಅಧಮಂ ವಸ್ತ್ರದಾನಂಚ, ಕನ್ಯಾದಾನಂಚ ನಿಷ್ಪಲಂ||

ಇಬ್ಬರು ನಶ್ಯ ಹಾಕುವವರು ಎದುರು ಬದಿರಾದಾಗ ಬಲಗೈನಲ್ಲಿ ಹಸ್ತಲಾಘವ ಮಾಡಿದರೇ ಅವರಿಗೇ ಅರಿವಿಲ್ಲದಂತೆ ಅವರ ಎಡಗೈಯಲ್ಲಿರುವ ನಶ್ಯದ ಡಬ್ಬಿ ಪರಸ್ಪರ ವಿನಿಮಯವಾಗಿ ಒಂದು ಬಾರಿ ನಶ್ಯ ಏರಿಸಿಯೇ ಅವರ ನಡುವಿನ ಸಂಭಾಷಣೆ ಆರಂಭವಾಗುವುದು ಸೋಜಿಗವೆನಿಸುತ್ತದೆ.

ನಮ್ಮ ತಂದೆಯವರ ಅಪ್ತ ಸ್ನೇಹಿತರಾದ ಶೇಷಗಿರಿ ಅವರು ನಮ್ಮ ತಂದೆಯವರಿಗೆಂದೇ surgical steel ನಿಂದ ಲೇಥ್ ಮಿಷಿನ್ನಿನಲ್ಲಿ ವಿಶೇಷವಾಗಿ ಮಾಡಿಸಿದ ಎರಡು ನಶ್ಯದ ಡಬ್ಬಿಯನ್ನು ಉಡುಗೊರೆಯನ್ನಾಗಿ ನೀಡಿದ್ದರು. ಹಾಗಾಗಿ ಆ ನಶ್ಯದ ಡಬ್ಬಿ ಕರ್ಣನ ವಜ್ರ ಕವಚದಂತೆ 24 ಗಂಟೆಯೂ ದೇಹದ ಅವಿಭಾಜ್ಯ ಅಂಗವಾಗಿ ನಮ್ಮ ತಂದೆಯವರ ಜೊತೆಯಲ್ಲಿಯೇ ಸದಾಕಾಲವೂ ಇರುತ್ತಿತ್ತು. ಸಣ್ಣ ವಯಸ್ಸಿನಲ್ಲಿ ನನ್ನ ಮಗ ತಾತನನ್ನು ಆಟವಾಡಿಸ ಬೇಕಾದರೆ ಆಥವಾ ತಾತನಿಂದ ಏನಾದರೂ ಪಡೆದು ಕೊಳ್ಳಬೇಕಾದರೇ ಸದ್ದಿಲ್ಲದೇ ನಶ್ಯದ ಡಭ್ಭಿಯನ್ನು ಮುಚ್ಚಿಟ್ಟು ಬಿಡುತ್ತಿದ್ದ. ಲೋ. ಲೋ.. ಮಗೂ ನಶ್ಯದ ಡಬ್ಬಿ ಕೊಡೋ.. ನನಗೆ ಗೊತ್ತು ನೀನೇ ಎಲ್ಲೋ ಮುಚ್ಚಿಟ್ಟಿದ್ದೀಯಾ ಎಂದು ಗೋಪಿಕಾ ಸ್ತ್ರೀಯರು ದೈನೇಸಿಯಾಗಿ ತಮ್ಮ ಬಟ್ಟೆಯನ್ನು ಕೇಳುತ್ತಿರುವಂತೆ ಇದ್ದರೇ, ಇನ್ನು ತನಗೇನೂ ಸಂಬಂಧವೇ ಇಲ್ಲದಂತೇ ಇರುತ್ತಿದ್ದ ಕೃಷ್ಣನಂತೇ ನನ್ನ ಮಗ ಇರುತ್ತಿದ್ದದ್ದು ಈಗಲೂ ನೆನಪಾಗುತ್ತದೆ.

ಕೆಲ ವರ್ಷದ ಹಿಂದೆ ಅಪ್ಪನನ್ನೂ ಕರೆದುಕೊಂಡು ಕುಟುಂಬ ಸಮೇತ ಸಿಂಗಾಪೂರ್ ಮತ್ತು ಮಲೇಷ್ಯಾಗೆ ಎರಡು ವಾರಗಳ ಕಾಲ ಪ್ರವಾಸಕ್ಕೆ ಹೋಗಿದ್ದೆವು. ಎರಡು ವಾರಗಳಿಗಾಗುವಷ್ಟು ನಶ್ಯವನ್ನು ಎರಡು ಬ್ಯಾಗಿನಲ್ಲಿ ತೆಗೆದುಕೊಂಡು ಬಂದಿದ್ದರು. ಅಪ್ಪ. ಸಿಂಗಾಪೂರಿನಲ್ಲಿ Snow Worldಗೆ ಹೋಗಿದ್ದಾಗ ಅಲ್ಲಿ ಎಲ್ಲರೂ ಛಳಿಯನ್ನು ತಡೆಯುವಂತಹ ಕೋಟು ಕೈಗವಸು ಮತ್ತು ಮಂಜುಗಡ್ಡೆಯ ಮೇಲೆ ನಡೆಯಬಹುದಾದಂತಹ ಬೂಟುಗಳನ್ನು ಖಡ್ಡಾಯವಾಗಿ ಧರಿಸಲೇ ಬೇಕಿತ್ತು. ಸುಮಾರು ಎರಡು ಗಂಟೆಗಳ ಕಾಲ ಅಲ್ಲಿ ನಾವೆಲ್ಲರೂ ಚೆನ್ನಾಗಿ ಆಟವಾಡಿ ಸಂತೋಷದಿಂದ ಹೊರಬಂದು ಕೋಟು ಸೂಟುಗಳನ್ನೆಲ್ಲಾ ಬಿಚ್ಚಿಕೊಟ್ಟು ಅಲ್ಲಿಯೇ ಇದ್ದ ಕಾಫೀ ಬಾರಿನಲ್ಲಿ ಬಿಸಿ ಬಿಸಿ ಕಾಫೀ ಹೀರುತ್ತಿದ್ದಾಗ ತಂದೆಯವರಿಗೆ ಇದ್ದಕ್ಕಿದ್ದಂತಯೇ ತಮ್ಮ ನಶ್ಯದ ದಬ್ಬಿಯ ನೆನಪಾಗಿ ಚೆಡ್ಡಿಯ ಜೋಬು, ಶರ್ಟಿನ ಜೋಬನ್ನೆಲ್ಲಾ ತಡಕಾಡುತ್ತಿರುವಾಗ ನಶ್ಯದ ಡಬ್ಬಿಯನ್ನು ತಾವು ಹಾಕಿಕೊಂಡಿದ್ದ ಕೋಟಿನಲ್ಲಿ ಬಿಟ್ಟಿರುವ ನೆನಪಾಗಿದೆ. ತಿರುಪತಿಯಲ್ಲಿ ಗುಂಡು ಹೊಡೆಸಿಕೊಂಡವರನ್ನು ಹುಡುಕುವಂತೆ ಅಲ್ಲಿದ್ದ ನೂರಾರು ಕೋಟುಗಳನ್ನು ಒಂದೊಂದಾಗಿ ಸುಮಾರು ಹತ್ತು ಹದಿನೈದು ನಿಮಿಷಗಳ ಕಾಲ ತಡಕಾಡಿದ ನಂತರ ನಶ್ಯದ ಡಬ್ಬಿ ಸಿಕ್ಕಾಗ ಅವರ ಮುಖದಲ್ಲಿ ಕಂಡ ನಗು ಇನ್ನೂ ಮರೆಯಲೇ ಆಗುತ್ತಿಲ್ಲ. ಕಡೆಗೆ ಅಲ್ಲಿದ್ದವರಿಗೆಲ್ಲಾ ಚೂರು ಚೂರು ನಶ್ಯದ ಘಮಲನ್ನು ಹತ್ತಿಸಿ ಅವರೆಲ್ಲರಿಗೂ ಸೀನು ಬರಿಸಿ ಬರುವಷ್ಟರಲ್ಲಿ ಸುಮಾರು ಅರ್ಧ ಮುಕ್ಕಾಲು ಗಂಟೆ ಕಳೆದು ಹೋಗಿದ್ದೇ ಗೊತ್ತಾಗಿರಲಿಲ್ಲ.

dun2ಎಲ್ಲೋ ತುಂಬಾ ಹಿಂದೆ ಓದಿದಂತೆ, ಖ್ಯಾತ ಸಾಹಿತಿಗಳಾದ ಕೀ. ರಂ. ನಾಗರಾಜ್ ಮತ್ತು ಚುಟುಕು ಕವಿ ದುಂಡಿರಾಜ್ ಇಬ್ಬರೂ ಗಳಸ್ಯ ಗಂಠಸ್ಯ ಸ್ನೇಹಿತರಾಗಿದ್ದರಂತೆ. ಅವರಿಬ್ಬರ ಬರವಣಿಗೆ ಶೈಲಿ ವಿಭಿನ್ನವಾಗಿದ್ದರೂ ಅವರಿಬ್ಬರ ಮಧ್ಯೆ ಸಾಮ್ಯದ ಸಂಗತಿಯೆಂದರೆ ನಶ್ಯ. ಅದೊಮ್ಮೆ ಕೀರಂ ಮಂಗಳೂರಿಗೆ ಬಂದಿದ್ದಾಗ ಡುಂಡಿಯವರು, ಅವರಿಗೆ ಕೃಷ್ಣ ನಶ್ಯದ ಡಬ್ಬಿ ಕೊಟ್ಟಿದ್ದರಂತೆ. ಕೆಲವು ದಿನಗಳ ನಂತರ ಕೀರಂ, ಡುಂಡಿಗೆ ಪತ್ರ ಬರೆದು- ಕೃಷ್ಣ ನಶ್ಯ ತುಂಬಾ ಚೆನ್ನಾಗಿತ್ತು ಎಂದು ಹೊಗಳಿದ್ದೇ ತಡಾ,. ಕೂಡಲೇ ನಶ್ಯದ ಕುರಿತೇ ಡುಂಡಿ ಹನಿಗವನವೊಂದು ಬರೆದಿದ್ದಾರೆ.

ಸಸ್ಯ ತಿನ್ನುವವ ಸಸ್ಯಾಹಾರಿ, ಮಾಂಸ ತಿನ್ನುವವ ಮಾಂಸಾಹಾರಿ
ಮೂಗಿನ ತುಂಬಾ ತಂಬಾಕಿನ ಪುಡಿ/ ತುಂಬಿಸಿಕೊಳ್ಳುವವ ನಶ್ಯಾಹಾರಿ ಎಂದಿದ್ದಲ್ಲದೇ,

ದೇಗುಲದ ಗರ್ಭಗುಡಿಯೊಳಗೆ ಸಿಗರೇಟು ಪ್ರವೇಶಿಸದು, ಮದ್ಯದ ಬಾಟಲಿಗೂ ಅನುಮತಿ ಇಲ್ಲ. ನಶ್ಯ ಮಾತ್ರ ಒಳಹೋಗಬಹುದು. ಅದಕ್ಕೆ ಪುರೋಹಿತರ ಬೆಂಬಲವೂ ಇರುತ್ತದೆ ಎಂದು ಹಾಸ್ಯಮಯವಾಗಿ ವಾಸ್ತವವನ್ನು ಡುಂಡಿಯವರು ಬರೆದಿದ್ದಾರೆ.

ಹೊಗೇ ಸೊಪ್ಪಿನ ಉತ್ಪನ್ನಗಳಾದ ಹೊಗೆಸೊಪ್ಪು, ಜರ್ದಾ, ಕಡ್ಡೀ ಪುಡಿ, ಬೀಡಿ, ಸಿಗರೇಟ್ ಸೇದುವುದನ್ನು ಇಂದೆಲ್ಲಾ ನೋಡುತ್ತೇವೆಯಾದರೂ ನಶ್ಯ ಹಾಕುವವರ ಸಂಖ್ಯೆ ಬಹುತೇಕ ಕಡಿಮೆಯಾಗಿದೆ ಎಂದೇ ಹೇಳಬಹುದು. ಒಂದಾನೊಂದು ಕಾಲದಲ್ಲಿ ನಶ್ಯ ಅತ್ಯಂತ ಜನಪ್ರಿಯವಾಗಿತ್ತು ಮತ್ತು ನಶ್ಯ ಹಾಕುವವರು ಅತ್ಯಂತ ಬುದ್ಧಿವಂತರೆಂದೇ ಪರಿಗಣಿಸಿದ್ದರಿಂದ ನಶ್ಯವನ್ನು ಜ್ಞಾನಚೂರ್ಣವೆಂದೇ ಕರೆಯುತ್ತಿದ್ದರು.

ನಮ್ಮ ತಂದೆಯವರ ವೈಕುಂಠ ಸಮಾರಾಧನೆಯಂದು ಅವರ ಅಪ್ತ ಗೆಳೆಯರಿಗೆಲ್ಲಾ ನಶ್ಯದ ದಾನವನ್ನೇ ಕೊಟ್ಟಿದ್ದೆವು. ನಮ್ಮ ತಂದೆಯವರಿಗೆ ನಶ್ಯವನ್ನು ತರುವುದಕ್ಕಾಗಿಯೇ ಪ್ರತೀವಾರವೂ ತಪ್ಪದೇ ಮಲ್ಲೇಶ್ವರಕ್ಕೆ ಹೋಗುತ್ತಿದ್ದ ನಾವು ತಂದೆಯವರು ಗತಿಸಿಹೋದ ನಂತರ ಮಲ್ಲೇಶ್ವರಕ್ಕೆ ಹೋಗುವುದೇ ನಿಲ್ಲಿಸಿಬಿಟ್ಟಿದ್ದೇವೆ. ಅಕಸ್ಮಾತ್ ಮಲ್ಲೇಶ್ವರ ನಶ್ಯದ ಅಂಗಡಿಯ ಮುಂದೆ ಹೋಗುವ ಪ್ರಮೇಯ ಬಂದರೆ, ಏನನ್ನು ಕೊಳ್ಳದೇ ಹೋದರೂ, ಸುಮ್ಮನೇ ಒಂದು ಕ್ಷಣ ಅಂಗಡಿಯ ಮುಂದೆ ನಿಂತು ಕೊಂಡರೆ, ಗತಿಸಿ ಹೋದ ನಶ್ಯ ಪ್ರಿಯರಾದ ನಮ್ಮ ತಾತ ಮತ್ತು ತಂದೆಯವರ ನೆನಪಾಗಿ ನಮಗೆ ಅರಿವಿಲ್ಲದಂತೆಯೇ ಕಣ್ಣಿನಲ್ಲಿ ನೀರು ಜಿನುಗುತ್ತದೆ.


WhatsApp Image 2022-02-21 at 8.04.36 AMಇಂದಿಗೂ ಸಹಾ ನನಗೆ ಅಪ್ಪನ ನೆನಪಾದಾಗಲೆಲ್ಲಾ ಬೀರುವಿನಲ್ಲಿ ಭದ್ರವಾಗಿ ಎತ್ತಿಟ್ಟಿರುವ ಅವರ ನಶ್ಯದ ಡಬ್ಬಿಯನ್ನು ತೆಗೆದು ಒಮ್ಮೆ ಮೂಸುತ್ತಿದ್ದಂತೆಯೇ ಅಪ್ಪನ ಘಮಲು ಮೂಗಿಗೆ ಬಡಿದು,ಅವರ ಪ್ರೀತಿಯ ಅಪ್ಪುಗೆಯ ಆಲಿಂಗನದ ಸುಖಃ ದೊರೆತು. ಅಪ್ಪಾ ಇಲ್ಲೇ ಇದ್ದಾರೆ ಎನ್ನುವ ಭಾವನೆ
ಮೂಡುತ್ತದೆ ಎಂದರೆ ಸುಳ್ಳಲ್ಲ. ಹಿರಿಯರು ಉಪಯೋಗಿಸುತ್ತಿದ್ದ ವಸ್ತುಗಳನ್ನು ಜತನದಿಂದ ಕಾಪಾಡಿಕೊಂಡು ಬಂದಲ್ಲಿ ಅದನ್ನು ನೋಡಿದಾಗಲೆಲ್ಲಾ ಅವರ ಸವಿನೆನಪುಗಳು ಕಣ್ಮುಂದೆ ಬಂದು ಮನಸ್ಸಿಗೆ ಮುದನೀಡುವುದಲ್ಲದೇ, ಅಪ್ಯಾಯಮಾನ ಎನಿಸುತ್ತದೆ.

ಏನಂತೀರೀ?
ನಿಮ್ಮವನೇ ಉಮಾಸುತ

ಸೂಚನೆ : ನಶ್ಯ ಸೇವಿಸುವುದು ಆರೋಗ್ಯಕ್ಕೆ ಹಾನಿಕರವಾದ್ದರಿಂದ ಯಾವುದೇ ತಂಬಾಕು ಪದಾರ್ಥಗಳಿದ ದಯವಿಟ್ಟು ದೂರವಿರುವುದು ಉತ್ತಮ

3 thoughts on “ಜ್ಞಾನಚೂರ್ಣ ನಶ್ಯ

  1. ನವಿರಾದ ಹಾಸ್ಯ ಲೇಖನ. ಅಂತ್ಯದಲ್ಲಿ ಮನ ಮುಟ್ಟುವ ಸಾಂದರ್ಭಿಕ ವಿವರಣೆ ತುಂಬಾ ಚೆನ್ನಾಗಿದೆ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s