ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯ

ಇತ್ತೀಚಿನ ಕೆಲವು ವರ್ಷಗಳಿಂದ ಡಿಸೆಂಬರ್ ತಿಂಗಳು ಬಂದಿತೆಂದರೆ, ಒಂದು ರೀತಿಯ ಆಳುಕು. ಅದಕ್ಕೆ ಕಾರಣವಿಷ್ಟೇ, ವಿಷ್ಣುವರ್ಧನ್, ಸಿ ಅಶ್ವಥ್ ಮುಂತಾದವರೆಲ್ಲರೂ ಮೃತಪಟ್ಟಿದ್ದೇ ಡಿಸೆಂಬರ್ ತಿಂಗಳಿನಲ್ಲಿ ಈಗ ಅದಕ್ಕೆ ಮತ್ತೊಂದು ಸೇರ್ಪಡೆಯೆಂದರೆ ನಾಡಿನ ಹಿರಿಯ ವಿದ್ವಾಂಸರು, ಆಧ್ಯಾತ್ಮ ಗುರುಗಳಗಿದ್ದಂತಹ ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರು.

ಆಗಸ್ಟ್ 3, 1936ರಂದು ದೇವಾಲಯಗಳ ನಗರಿ ಉಡುಪಿಯ ಬಳಿ ಇರುವ ಬನ್ನಂಜೆ ಎಂಬ ಗ್ರಾಮದಲ್ಲಿ ವಿದ್ವಾಂಸರಾದ ತರ್ಕಕೇಸರಿ ಶ್ರೀ ನಾರಾಯಣಾಚಾರ್ಯರ ಸುಪುತ್ರರಾಗಿ ಗೋವಿಂದಾಚಾರ್ಯರು ಜನಿಸುತ್ತಾರೆ. ಶಾಲೆಯಲ್ಲಿ ಶೈಕ್ಷಣಿಕವಾಗಿ ಅವರ ವಿದ್ಯಾಭ್ಯಾಸ ಕೇವಲ ಪ್ರಾಥಮಿಕ ಶಾಲೆಗೆ ಸೀಮಿತವಾಗಿದ್ದರೂ, ಬಾಲ್ಯದಿಂದಲೂ ಅವರಿಗೆ ಅಧ್ಯಾತ್ಮ ಮತ್ತು ವೈದಿಕ ಶಿಕ್ಷಣ ಅವರ ತಂದೆಯಿಂದಲೇ ದೊರೆತ ಪರಿಣಾಮವಾಗಿ ಕನ್ನಡ, ಸಂಸ್ಕೃತ ಮತ್ತು ಇಂಗ್ಲೀಷ್ ಭಾಷೆಯಲ್ಲಿ ನಿರರ್ಗಳರಾಗುತ್ತಾರೆ. ಅಲ್ಲಿಂದ ಮುಂದೆ ತಮ್ಮ ಆಧ್ಯಾತ್ಮಿಕ ವಿದ್ಯಾರ್ಜನೆಯನ್ನು ಶ್ರೀ ಶ್ರೀ ವಿದ್ಯಾಮಾನ್ಯ ತೀರ್ಥಸ್ವಾಮೀಜಿ, ಕಲಿಯೂರು ಮಠ ಮತ್ತು ಹರಿಪಾದೈರ್ಯಗ ಶ್ರೀ ಶ್ರೀ ವಿದ್ಯಾ ಸಮುದ್ರ ತೀರ್ಥರು, ಕಾಣಿಯೂರು ಮಠ ಇವರಿಂದ ಪಡೆಯುತ್ತಿದ್ದಾಗಲೇ ಹಲವಾರು ಲೇಖನಗಳನ್ನು ಬರೆಯುವ ಮೂಲಕ ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವುದನ್ನು ಅಕ್ಷರಶಃ ತೋರ್ಪಡಿಸುವುದಲ್ಲದೇ ಉಡುಪಿಯ ಅಷ್ಟ ಮಠಗಳ ಪೀಠಾಧಿಪತಿಗಳನ್ನೂ ತನ್ನತ್ತ ಸೆಳೆಯುವುದರಲ್ಲಿ ಸಫಲರಾಗಿದ್ದದ್ದು ಗಮನಾರ್ಹ.

ತಮ್ಮ ಕನ್ನಡ, ಸಂಸ್ಕ್ರತ, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿನ್ನ ಪಾಂಡಿತ್ಯದಿಂದ ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಅನೇಕ ಸಂಸ್ಕೃತ ಗ್ರಂಥಗಳನ್ನು ಅನುವಾದಿಸಿದ್ದಲ್ಲದೇ ತಮ್ಮ ಅಧ್ಭುತ ವಾಗ್ಝರಿಯಿಂದ ಅತ್ಯಂತ ಸರಳ ಮತ್ತು ಸುಲಲಿತವಾಗಿ ಪ್ರವಚನಗಳನ್ನು ಮಾಡುವ ಮೂಲಕ ಆಧ್ಯಾತ್ಮಿಕ ಸುಧೆ ಹರಿಸುತ್ತಿದ್ದ, ರಾಷ್ಟ್ರದ ಪ್ರಮುಖ ವಿದ್ವಾಂಸರಲ್ಲಿ ಶ್ರೀ ಬನ್ನಂಜೆ ಗೋವಿಂದಚಾರ್ಯರು ಒಬ್ಬರಾಗಿದ್ದರು ಎಂದರೆ ಅತಿಶಯೋಕ್ತಿಯೇನಲ್ಲ. ತಮ್ಮ ಅಪಾರವಾದ ಜ್ಞಾನ ಸಂಪತ್ತಿನಿಂದಾಗಿ ಅನೇಕರ ಆಧ್ಯಾತ್ಮಿಕ ಜಿಜ್ಞಾಸುಗಳಿಗೆ ಸೂಕ್ತವಾದ ಪರಿಹಾರವನ್ನು ನೀಡುವುದರಲ್ಲಿ ಎತ್ತಿದ ಕೈ ಅವರಾಗಿದ್ದರು. ಇದೇ ಕಾರಣದಿಂದಾಗಿ ಖ್ಯಾತ ಚಿತ್ರನಟ ವಿಷ್ಣುವರ್ಧನ್ ಸೇರಿದಂತೆ ಅನೇಕ ಖ್ಯಾತನಾಮರು ಇವರನ್ನು ತಮ್ಮ ಆಧ್ಯಾತ್ಮಕ ಗುರುಗಳೆಂದು ಸ್ವೀಕರಿಸಿದ್ದರು ಎಂದರೆ ಅವರ ಖ್ಯಾತಿಯನ್ನು ತೋರಿಸುತ್ತದೆ.

ಕಾಳಿದಾಸನ ಶಾಕುಂತಲಾ, ಬಾಣಭಟ್ಟನ ಕಾದಂಬರಿ, ವೇದ, ಉಪನಿಷತ್ತುಗಳ ನಿಗೂಢ ಸಾರ, ಶ್ರೀಮದ್ಭಗವದ್ಗೀತೆ, ಶ್ರೀ ಸೂಕ್ತ, ಶಿವ ಸೂಕ್ತ, ತಂತ್ರಸಾರ ಸಂಗ್ರಹ ಸೇರಿದಂತೆ ಅನೇಕ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದಗೊಳಸಿರುವ ಶ್ರೀ ಬನ್ನಂಜೆ ಗೋವಿಂದಚಾರ್ಯರ ಪ್ರವಚನಗಳು ಡಿಜಟಲೀಕರಣಗೊಂಡು ಅಂದಿಗೂ ಇಂದಿಗೂ ಮತ್ತೆ ಮುಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿದೆ. ಕೇವಲ ಪ್ರವಚನಗಳಲ್ಲದೇ, ಗೋವಿಂದಾಚಾರ್ಯರು ನೂರಾರು ಬೃಹತ್ ಗ್ರಂಥಗಳನ್ನು ರಚಿಸಿರುವುದರ ಜೊತೆಗೆ ವಿವಿಧ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ಅಂಕಣಗಳ ಮೂಲಕ ಸಹಸ್ರಾರು ಲೇಖನಗಳನ್ನು ಬರೆದಿದ್ದಾರೆ. ಎಪ್ಪತ್ತರ ದಶಕದಲ್ಲಿ ಮಣಿಪಾಲಿನಲ್ಲಿ ಆರಂಭವಾದ ಉದಯವಾಣಿ ಪತ್ರಿಕೆಯ ಸಾಪ್ತಾಹಿಕ ಪುರವಾಣಿಗೆಯ ಸುಮಾರು ವರ್ಷಗಳ ಕಾಲ ಉಪ ಸಂಪಾದಕರಾಗಿಯೂ ನಂತರ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದರು.

ಕೇವಲ ಆಧ್ಯಾತ್ಮಿಕ ಮತ್ತು ಸಾರಸ್ವತ ಲೋಕವಲ್ಲದೇ ಚಲನಚಿತ್ರ ಲೋಕದಲ್ಲಿಯೂ ಗೋವಿಂದಾಚಾರ್ಯರು ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಶ್ರೀ ಜಿ.ವಿ. ಅಯ್ಯರ್ ಅವರು ಸಂಸ್ಕೃತದಲ್ಲಿ ನಿರ್ಮಿಸಿದ ಚಲನಚಿತ್ರ ಶ್ರೀ ಶಂಕರಾಚಾರ್ಯ, ಕನ್ನಡದ ಶ್ರೀ ಮಧ್ವಾಚಾರ್ಯ ಮತ್ತು ತಮಿಳಿನ ಶ್ರೀ ರಾಮಾನುಜಾಚಾರ್ಯ ಚಲನಚಿತ್ರಗಳಿಗೆ ಮೂಲ ಕಥೆಯನ್ನು ಒದಗಿಸಿದ್ದರು.

ಮಾಧ್ವ ಸಂಪ್ರದಾಯಗಳನ್ನು ಎತ್ತಿ ಹಿಡಿಯುವ ಭರದಲ್ಲಿ ಅನೇಕ ಬಾರಿ ಅನಾವಶ್ಯಕವಾಗಿ ಆದಿಗುರು ಶಂಕರರನ್ನು ವಾಚಾಮಗೋಚರವಾಗಿ ಟೀಕಿಸಿ ಅನೇಕ ವಿದ್ವಾಂಸರ ಕೆಂಗಣ್ಣಿಗೆ ಗುರಿಯಾಗಿದ್ದರೂ, ಕನ್ನಡ ಹಾಗೂ ಸಂಸ್ಕೃತ ಸಾರಸ್ವತ ಲೋಕಕ್ಕೆ ಅವರು ಕೊಡುಗೆ ಅಪಾರ. ಕೇವಲ ಕರ್ನಾಟಕ ರಾಜ್ಯವಲ್ಲದೇ, ದೇಶ, ವಿದೇಶಗಳಲ್ಲಿ ಸಂಚರಿಸಿ ಭಾರತೀಯ ಸಾಂಸ್ಕೃತಿಕ ರಾಯಭಾರಿಯಾಗಿ ನಮ್ಮ ದೇಶೀಯ ಪರಂಪರೆಗಳ ಶ್ರೇಷ್ಠತೆಯನ್ನು ಎಲ್ಲೆಡೆ ಪಸರಿಸುವಲ್ಲಿ ಆಚಾರ್ಯರು ಮನೋಜ್ಞವಾದ ಕೆಲಸ ಮಾಡಿದ್ದಾರೆ. ಸುಮಾರು 30,000ಕ್ಕೂ ಅಧಿಕ ಗಂಟೆಗಳ ಕಾಲ ಪ್ರವಚನಮಾಡಿರುವ ಹೆಗ್ಗಳಿಕೆಯೂ ಗೋವಿಂದಾಚಾರ್ಯ ಅವರದ್ದಾಗಿದೆ. ಉಡುಪಿಯ ಅಷ್ಟಮಠಗಳ ಅಚಾರ್ಯರಿಗೂ ಇವರ ಕುರಿತಂತೆ ಅಪಾರ ಗೌರವವಿದ್ದು ಅನೇಕ ಜಿಜ್ಞಾಸೆಗಳನ್ನು ಪರಿಹರಿಸಿಕೊಳ್ಳಲು ಇವರನ್ನೇ ಸಂಪರ್ಕಿಸುತ್ತಿದ್ದರು ಎಂದರೆ, ಅವರ ಶ್ರೇಷ್ಠತೆ ಎಷ್ಟಿತ್ತು ಎನ್ನುವುದು ತಿಳಿಯುತ್ತದೆ.

ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ್ದ ಆಚಾರ್ಯರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಅರಸಿಕೊಂಡು ಬಂದಿದ್ದವು. ಅವುಗಳಲ್ಲಿ ಪ್ರಮುಖವಾದವು ಎಂದರೆ, ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಶ್ರೇಷ್ಠ ಅನುವಾದಕ್ಕಾಗಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಣಿಪಾಲದ ಪ್ರತಿಷ್ಠಿತ ವಿದ್ಯಾ ಸಮೂಹದ ಫೆಲೋಷಿಪ್ ಮುಂತಾದ ಪ್ರತಿಷ್ಠಿತ ಗೌರವಗಳಲ್ಲದೇ, ಅದಮಾರು ಪೀಠದ ವಿದ್ಯಾವಚಸ್ಪತಿ ಬಿರುದು, ಫಲಿಮಾರು ಮಠವು ಪ್ರತಿಭಾಂಬುದಿ ಬಿರುದು, ಪೇಜಾವಾರ ಮಠವು, ಶ್ರೀಕೃಷ್ಣಾನುಗ್ರಹ ಪ್ರಶಸ್ತಿ, ಕಬೀರಾನಂದ ಆಶ್ರಮದ ಆರೂಢಶ್ರೀ ಪ್ರಶಸ್ತಿ, ಅಖಿಲ ಭಾರತ ಮಾಧ್ವ ಮಹಾ ಮಂಡಲದ ಶಾಸ್ತ್ರ ಸವ್ಯಸಾಚಿ ಎಂಬ ಪುರಸ್ಕಾರವಲ್ಲದೇ, ವೈದಿಕ ಕ್ಷೇತ್ರದಲ್ಲಿನ ಅವರ ಕೊಡುಗೆಗಾಗಿ ಕರ್ನಾಟಕ ಸರಕಾರವೂ ಸಹಾ ಪುರಸ್ಕರಿಸಿತ್ತು. ಇದಲ್ಲದೇ, aವಿವಿಧ ಸಂಘ ಸಂಸ್ಥೆಗಳಿಂದ ಸಾಹಿತ್ಯ ಸಾರ್ವಭೌಮ, ಸಂಶೋಧನ ವಿಚಕ್ಷಣ, ಪಂಡಿತ ಶಿರೋಮಣಿ, ಪಂಡಿತರನ್ನ, ವಿದ್ಯಾರತ್ನಾಕರ ಇತ್ಯಾದಿ ಇನ್ನೂ ಅನೇಕಾನೇಕ ಪ್ರಶಸ್ತಿಗಳು ಬಿರುದುಗಳಿಗೆ ಆವರು ಪಾತ್ರರಾಗಿದ್ದರು.

ಹಿರಿಯ ವಿದ್ವಾಂಸರು, ಪತ್ರಕರ್ತರು, ಸಾಹಿತಿಗಳು, ಸಂಶೋಧಕರು, ಕವಿಗಳು, ಅನುವಾದಕರು, ಉಪನ್ಯಾಸಕರು, ಪ್ರವಚನಕಾರರು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ, ಒಂದು ರೀತಿಯಲ್ಲಿ ಆಡು ಮುಟ್ಟದ ಸೊಪ್ಪಿಲ್ಲ ಬನ್ನಂಜೆ ಗೋವಿಂದಾಚಾರ್ಯರು ಕೈಯಾಡಿಸದ ಕ್ಷೇತ್ರವಿಲ್ಲ ಎಂದರೂ ತಪ್ಪಗಲಾರದು. ಅಂತಹ ಹಿರಿಯ ಜೀವ ಇಂದು ತಮ್ಮ ಅಂಬಲಪಾಡಿ ಮನೆಯಲ್ಲಿ ವಯೋಸಹಜ ಅನಾರೋಗ್ಯದ ಪರಿಣಾಮವಾಗಿ ನಮ್ಮನ್ನು ಅಗಲಿರುವುದು ನಿಜಕ್ಕೂ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

ಕೇವಲ ಒಂದು ವಾರದ ಹಿಂದೆಯಷ್ಟೇ ತಮ್ಮ ಕಿರಿಯ ಮಗನನ್ನು ಕಳೆದುಕೊಂಡ್ಡಿದ್ದೂ ಅವರ ಮನಸ್ಸಿನ ಮೇಲೆ ಪರಿಣಾಮ ಬಿದ್ದಿರ ಬಹುದೋ ಎನೋ? ಅವರ ಮನೆಯಲ್ಲಿ ಸೂತಕ ಕಳೆಯುವ ಮುನ್ನ ಮತ್ತೊಂದು ಸೂತಕದ ಛಾಯೆಯನ್ನು ಮೂಡಿಸಿದ ಆ ಭಗವಂತನ ಮೇಲೆ ತುಸು ಕೋಪವೇ ಬಂದರೂ, ಜಾತಸ್ಯ ಮರಣಂ ಧೃವಂ ಎನ್ನುವಂತೆ ಹುಟ್ಟಿದವರು ಸಾಯಲೇ ಬೇಕೆಂಬ ಜಗದ ನಿಯಮದಂತೆ ನಮ್ಮನ್ನು ಅಗಲಿರುವ ಆ ಹಿರಿಯ ಜೀವಕ್ಕೆ ಇಲ್ಲಿಂದಲೇ ಹೃತ್ಪೂರ್ವಕ ಶ್ರದ್ಧಾಂಜಲಿಯನ್ನು ಅರ್ಪಿಸೋಣ ಅಲ್ಲವೇ ?

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s