ಹಬ್ಬದ ಹರಿದಿನಗಳಲ್ಲಿ ದೇವರ ಪೂಜೆಯಷ್ಟೇ ಊಟಕ್ಕೂ ಮಹತ್ವವಿದ್ದೇ ಇರುತ್ತದೆ. ಹಬ್ಬದ ಊಟ ಎಂದರೆ ಸಿಹಿ ಭಕ್ಷಗಳೇ ಪ್ರಾಧ್ಯಾನ್ಯವಾದದರು ಎಲೆ ಕೊನೆಗೇ ಪಾಯಸ ಬಡಿಸಲೇ ಬೇಕೆಂಬ ಶಾಸ್ತ್ರ ಮತ್ತು ನಮ್ಮ ಊಟ ಆರಂಭವಾಗುವುದೇ ಪಾಯಸದಿಂದ. ಇಂದೆಲ್ಲಾ ಬಾಣಸಿಗರು ಬಗೆ ಬಗೆಯ ಪಾಯಸಗಳನ್ನು ಮಾಡುತ್ತಾರಾದರೂ, ಹಿಂದಿನ ಕಾಲದಲ್ಲಿ ಶ್ಯಾವಿಗೆ ಪಾಯಸ ಇಲ್ಲವೇ ಗಸಗಸೆ ಪಾಯಸಕ್ಕೇ ಹೆಚ್ಚಿನ ಪ್ರಾಶಸ್ತ್ರ್ಯ. ಅಂತಹ ಗಸಗಸೆ ಪಾಯಸದ್ದೇ ಕುರಿತಾದ ಮೋಜಿನ ಸಂಗತಿ ಇದೋ ನಿಮಗಾಗಿ.
ಚಿಕ್ಕ ವಯಸ್ಸಿನಿಂದಲೂ ನಾನು ಗಸಗಸೆ ಪಾಯಸ ಪ್ರಿಯ. ಬಹುಶಃ ಈ ಆಭ್ಯಾಸ ನಮ್ಮ ತಾತನಿಂದ ಬಂದಿರಬಹುದೆಂದೇ ನನ್ನ ಅನಿಸಿಕೆ. ನಮ್ಮ ತಾತಾ ಖ್ಯಾತ ವಾಗ್ಗೇಯಕರರು, ಗಮಕಿಗಳು ಮತ್ತು ಹರಿಕಥಾ ವಿದ್ವಾಂಸರಾಗಿದ್ದರು. ರಾಮೋತ್ಸವ, ಗಣೇಶೋತ್ಸವ, ಇಲ್ಲವೇ ದಸರಾ ಸಮಯದಲ್ಲಿ ಒಂದರ ಹಿಂದೆ ಒಂದು ನಿರಂರವಾದ ಕಾರ್ಯಕ್ರಮಗಳಿದ್ದು, ಹಳ್ಳಿ ಹಳ್ಳಿಗಳಲ್ಲಿ ಈಗಿನಂತೆ ಸೌಂಡ್ ಸಿಸ್ಟಮ್ ಇಲ್ಲದಿದ್ದ ಕಾರಣದಲ್ಲಿ ಎಲ್ಲರಿಗೂ ಕೇಳಬೇಕು ಎಂದು ಗಟ್ಟಿ ಧನಿಯಲ್ಲಿ ಹಾಡುತ್ತಿದ್ದ ಕಾರಣ ಅಗಾಗ ಗಂಟಲು ಕಟ್ಟಿಬಿಡುತ್ತಿತ್ತು. ಹಾಗೆ ಗಂಟಲು ಕಟ್ಟಿದಾಗಲೆಲ್ಲಾ ಅದಕ್ಕೆ ರಾಮಬಾಣವಾಗಿ ಮೆಣಸಿನಸಾರು ಉಪಯೋಗಿಸುತ್ತಿದ್ದು ಮತ್ತು ಮುಂದೆ ಗಂಟಲು ಕಟ್ಟಬಾರದು ಎಂಬ ಎಚ್ಚರಿಕೆಯ ಸಲುವಾಗಿ ಗಸಗಸೆ ಪಾಯಸ ಮಾಡುತ್ತಿದ್ದರು.
ತೆಂಗಿನ ಕಾಯಿ ತುರಿ, ಹುರಿದ ಗಸಗಸೆ, ಬೆಲ್ಲ ಮತ್ತು ಏಲಕ್ಕಿಯ ಜೊತೆ, ಹದವಾಗಿ ತುಪ್ಪದಲ್ಲಿ ಹುರಿದ ದ್ರಾಕ್ಷಿ ಮತ್ತು ಗೋಡಂಬಿಯನ್ನು ಹಾಕಿದ ಬಿಸಿ ಬಿಸಿಯಾದ ಗಸಗಸೆ ಪಾಯಸ ಕುಡಿಯುತ್ತಿದ್ದರೆ, ಉತ್ತಮ ಪೋಷಕಾಂಷದ ಜೊತೆ ದೇಹಕ್ಕೆ ತಂಪನ್ನು ಕೊಡುವು ನೀಡುವದರ ಜೊತೆ, ಬಾಯಿ ಹುಣ್ಣು ಮತ್ತು ನಿದ್ರಾಹೀನತೆಯನ್ನೂ ತಡೆಯುತ್ತದೆ. ಹಾಗಾಗಿ ನಮ್ಮ ಮನೆಯಲ್ಲಿ ನೆನಸಿಕೊಂಡಾಗಲೆಲ್ಲಾ ಗಸಗಸೆ ಪಾಯಸವನ್ನೇ ಹೆಚ್ಚಾಗಿ ಮಾಡುತ್ತಿದ್ದರಿಂದ ನಾನೂ ಸಹಾ ಗಸಗಸೆ ಪಾಯಸ ಪ್ರಿಯನಾಗಿದ್ದರಲ್ಲಿ ಅತಿಶಯೋಕ್ತಿಯೇನಾಗಿರಲಿಲ್ಲ.
ಮದುವೆಯಾದ ನವ ದಂಪತಿಗಳನ್ನು ಸ್ನೇಹಿತರ ಮತ್ತು ಸಂಬಂಧೀಕರ ಮನೆಗಳಲ್ಲಿ ಊಟಕ್ಕೆ ಕರೆಯುವುದು ನಮ್ಮಲ್ಲಿ ಬಂದಿರುವ ಸಂಪ್ರದಾಯ. ಹಾಗೆಯೇ ತೊಂಭತ್ತರ ದಶಕದಲ್ಲಿ ನನ್ನ ಮದುವೆಯಾದ ಸುಮಾರು ಆರು ತಿಂಗಳುಗಳ ಕಾಲ ವಾರಾಂತ್ಯವೆಲ್ಲಾ ಈ ರೀತಿಯ ಊಟಕ್ಕೇ ಮೀಸಲಾಗಿತ್ತು. ಅಪ್ಪಾ ಮತ್ತು ಅಮ್ಮ ಇಬ್ಬರ ಕಡೆಯೂ ದೊಡ್ಡದಾದ ಕುಟುಂಬವರ್ಗ. ಮೇಲಾಗಿ ಎರಡೂ ಕಡೆಯೂ ಅವರಿಬ್ಬರೂ ಹಿರಿಯವರಾಗಿದ್ದ ಕಾರಣ, ಗಂಡು ಮಕ್ಕಳ ಮೊದಲನೇ ಮದುವೆ ನನ್ನದೇ ಆದ ಕಾರಣ ಎಲ್ಲರೂ ದಂಪತಿಗಳ ಜೊತೆ ಅಪ್ಪಾ ಅಮ್ಮನನ್ನೂ ಕರೆದು ಅತಿಥಿ ಸತ್ಕಾರ ಮಾಡುತ್ತಿದ್ದರು. ಅದೇ ರೀತಿ ಇಂದಿರಾನಗರದಲ್ಲಿದ್ದ ನಮ್ಮ ಚಿಕ್ಕಮ್ಮನ ಮನೆಯಲ್ಲಿ ಅದೊಂದು ಶನಿವಾರ ಸಂಜೆ ನಮ್ಮನ್ನು ಊಟಕ್ಕೆ ಕರೆದಿದ್ದರು. ಮಧ್ಯಾಹ್ನವೇ ನಮ್ಮ ತಂದೆ ಮತ್ತು ತಾಯಿ ಇಬ್ಬರೂ ನಮ್ಮ ಚಿಕ್ಕಮ್ಮನ ಮನೆಗೆ ಹೋಗಿದ್ದು, ನಾನು ಸಂಜೆ ನಮ್ಮಾಕಿಯನ್ನು ಆಕೆಯ ಕಛೇರಿಯಿಂದ ಕರೆದುಕೊಂಡು ಚಿಕ್ಕಮ್ಮನ ಮನೆಗೆ ಹೋದಾಗ ಗಂಟೆ ಆರು ಅಥವಾ ಆರುವರೆಯಗಿತ್ತು. ಹೋದ ತಕ್ಷಣ ಕೈಕಾಲು ಮುಖ ತೊಳೆದುಕೊಳ್ಳುವಷ್ಟರಲ್ಲಿಯೇ ಬಿಸಿ ಬಿಸಿ ಜಾಮೂನು ಮತ್ತು ಬೊಂಡದ ಸಮಾರಾಧನೆ ಸಿದ್ಧವಾಗಿತ್ತು.
ಅದು ಈಗಿನಂತೆಯೇ ಡಿಸೆಂಬರ್ ಮಾಸವಾಗಿದ್ದ ಕಾರಣ ಚಳಿಯೊಂದಿಗೆ ಬಿಸಿ ಬಿಸಿ ಬೊಂಡ ಮನಸ್ಸಿಗೆ ಹಿಡಿಸಿದ ಕಾರಣ ನಾಲ್ಕಾರು ಬೊಂಡಗಳು ಹೆಚ್ಚಾಗಿಯೇ ತಿಂದು ಹಾಗೇ ಲೋಕಾಭಿರಾಮವಾಗಿ ಮಾತನಾಡುತ್ತಿದ್ದೆವು. ನನ್ನ ನಾಲ್ಕು ಚಿಕ್ಕಮ್ಮಂದಿರಲ್ಲಿ ಈ ಚಿಕ್ಕಮ್ಮನೆಂದರೆ ನನಗೆ ತುಸು ಹೆಚ್ಚಿನ ಪ್ರೀತಿ. ಮದುವೆಗೆ ಮುಂಚೆ ನಮ್ಮ ಮನೆಯಲ್ಲಿಯೇ ಕೆಲವು ವರ್ಷಗಳ ಕಾಲ ಇದ್ದ ಕಾರಣ ನನಗೆ ಅವರು ಚಿಕ್ಕಮ್ಮನಿಗಿಂತ ಅಕ್ಕ ಇಲ್ಲವೇ ಉತ್ತಮವಾದ ಗೆಳತಿಯಂತಿದ್ದರು. ಮದುವೆಗೆ ಮುಂಚೆ ಮತ್ತು ಮದುವೆಯಾದ ಎಷ್ಟೋ ವರ್ಷಗಳ ಕಾಲ ನನ್ನ ಬಟ್ಟೆ ಬರೆಗಳನ್ನು ತೆಗೆದುಕೊಳ್ಳಲ್ಲು ನಾನು ವಿದ್ಯಾರಣ್ಯಪುರದಿಂದ ಇಂದಿರಾನಗರಕ್ಕೆ ಬಂದು ಚಿಕ್ಕಮ್ಮನನ್ನೇ ಆಶ್ರಯಿಸುತ್ತಿದ್ದೆ ಎಂದರೆ ನಮ್ಮಿಬ್ಬರ ಅವಿನಾಭಾವ ಸಂಬಂಧ ಎಷ್ಟಿತ್ತು ಎಂದು ತಿಳಿಯುತ್ತದೆ. ಇನ್ನೂ ನಮ್ಮ ಚಿಕ್ಕಪ್ಪನವರೂ ಸಹಾ ಅದೇ ರೀತಿ ಗೆಳಯನಂತೇ ಇರುತ್ತಿದ್ದ ಕಾರಣ ಎಷ್ಟೋ ದಿವಸ ಕಾಲೇಜಿನಿಂದ ಸೀದಾ ಚಿಕ್ಕಮ್ಮನ ಮನೆಗೆ ಹೋಗಿ ಮಾರನೇ ದಿನ ಚಿಕ್ಕಪ್ಪನ ಶರ್ಟ್ ಇಲ್ಲವೇ ಟಿ-ಶರ್ಟ್ಗಳನ್ನು ಕಾಲೇಜಿಗೆ ಹಾಕಿಕೊಂಡು ಹೋಗುವಷ್ಟು ಆತ್ಮೀಯ ಸಂಬಂಧ ನಮ್ಮಿಬ್ಬರಲ್ಲಿತ್ತು.
ಹೀಗೇ ಲೋಕಾಭಿರಾಮವಾಗಿ ಹರಟುತ್ತಾ ಮದುವೆಯ ಅಲ್ಬಮ್ ನೋಡುತ್ತಾ ಅಲ್ಲಿಯ ಕೆಲವು ಮೋಜಿನ ಸಂಗತಿ ಇಲ್ಲವೇ ಪಜೀತಿಯ ಪ್ರಸಂಗಗಳನ್ನು ಮೆಲುಕು ಹಾಕುತ್ತಾ ಹೋಗಿ ಗಂಟೆ ಒಂಭತ್ತಾಗಿದ್ದೇ ಗೊತ್ತಾಗಲಿಲ್ಲ. ಸರಿ ಕಲಹಈಗಾಗಲೇ ತಡಾವಾಗಿದೆ ಮತ್ತೆ ಅಲ್ಲಿಂದ ಅಷ್ಟು ದೂರದ ನಮ್ಮ ಮನೆಗೆ ಹೋಗುವುದಕ್ಕೆ ತಡವಾಗಬಹುದೆಂಬ ಕಾರಣ ಎಲ್ಲರೂ ಊಟಕ್ಕೆ ಕುಳಿತುಕೊಂಡೆವು. ನಿಜ ಹೇಳಬೇಕೇಂದರೆ, ಬೋಂಡ ತಿಂದ್ದಿದ್ದ ಕಾರಣ ಊಟ ಮಾಡಲು ಮನಸ್ಸೇ ಇಲ್ಲದಿದ್ದರೂ ಶಾಸ್ತ್ರಕ್ಕಾದರೂ ಊಟ ಮಾಡೋಣ ಎಂದು ನಾನು ಮತ್ತು ನನ್ನ ಮಡದಿ ನಿರ್ಧರಿಸಿಕೊಂಡಿದ್ದೆವು. ಊಟದ ಸಮಯದಲ್ಲಿ ಎಷ್ಟು ಬೇಕೋ ಅಷ್ಟು ಹಾಕಿಸಿಕೊಂಡು ಕೋಳಿ ಕೆದಕಿದಂತೆ ಊಟ ಮಾಡುವುದನ್ನು ಗಮನಿಸಿದ ನಮ್ಮ ಚಿಕ್ಕಮ್ಮ, ಸಿರೀ (ನಮ್ಮ ಚಿಕ್ಕಮ್ಮ ಪ್ರೀತಿಯಿಂದ ಹಾಗೆಯೇ ಕರೆಯುವುದು) ಯಾಕೋ ಊಟ ಸರಿಯಾಗಿ ಮಾಡ್ತಿಲ್ಲಾ? ಅಡುಗೆ ಚೆನ್ನಾಗಿಲ್ವಾ? ಎಂದು ಕೇಳಿ ಸರಿ ಸರಿ ನಿನಗೆ ಇಷ್ಟವಾದ ಗಸಗಸೆ ಪಾಯಸ ಮಾಡಿದ್ದೀನಿ ಅದನ್ನಾದರೂ ಕುಡಿ ಎಂದು ಹೇಳಿ ಎಲ್ಲರಿಗೂ ದೊಡ್ಡ ದೊಡ್ಡ ಲೋಟದ ಭರ್ತಿ ಗಸಗಸೆ ಪಾಯಸ ತಂದು ಕೊಟ್ಟರು. ಘಮ ಘಮವಾದ ಏಲಕ್ಕಿ ಪರಿಮಳ ಬರುತಿದ್ದ ಗಸಗಸೆ ಪಾಯಸವನ್ನು ಗಟಗಟನೇ ಕುಡಿದು ಲೋಟವನ್ನು ಕೆಳಗೆ ಇಡುತ್ತಾ ಬಾಯಿ ಚಪ್ಪರಿಸುತ್ತಿದ್ದಂತೆಯೇ ಚಿಕ್ಕಪ್ಪ ಮತ್ತೊಮ್ಮೆ ಲೋಟಕ್ಕೆ ಪಾಯಸ ಬಡಿಸಿಯೇ ಬಿಟ್ಟರು.
ನಮ್ಮೊಂದಿಗೆ ನಮ್ಮ ಚಿಕ್ಕಮ್ಮ ಮತ್ತು ಚಿಕ್ಕಪ್ಪ ಎಷ್ಟೇ ಆತ್ಮೀಯರಾಗಿದ್ದರೂ ಊಟ ತಿಂಡಿ ವಿಷಯದಲ್ಲಿ ಆವರಿಬ್ಬರೂ ಸ್ವಲ್ಪ ಶಿಸ್ತಿನವರು. ಅವರ ಮನೆಯಲ್ಲಿ ಊಟಕ್ಕೆ ಎಲ್ಲರೂ ಒಟ್ಟಿಗೇ ಕುಳಿತುಕೊಳ್ಳಬೇಕು. ಊಟಕ್ಕೆ ಮುಂಚೆ ಎಲ್ಲರೂ ತಟ್ಟೇ ಲೋಟ ಮತ್ತು ಪಾತ್ರೆಗಳನ್ನು ಅಡುಗೆ ಮನೆಯಿಂದ ಊಟದ ಮನೆಗೆ ತಂಡಿಡಬೇಕು ಊಟಕ್ಕೆ ಚಾಪೇ ಮತ್ತು ನೀರನ್ನು ಬಡಿಸಿಕೊಂಡು ಬಡಿಸಿದಷ್ಟೂ ಊಟವನ್ನು ಒಂದಗಳೂ ಚೆಲ್ಲದಂತೆ ತಿಂದಾದ ನಂತರ ಎಲ್ಲರೂ ಅವರವರು ಉಂಡ ತಟ್ಟೆಗಳನ್ನು ಆವರೇ ತೊಳೆಯಬೇಕು. ಈ ರೀತಿಯ ಅಲಿಖಿತ ನಿಮಯ ಗೊತ್ತಿದ್ದ ಕಾರಣ ಅಯ್ಯೋ ಚಿಕ್ಕಪ್ಪಾ, ಹೊಟ್ಟೇ ತುಂಬಿಹೋಗಿದೆ ಮತ್ತೆ ಏಕೆ ಬಡಿಸಿದ್ರೀ ಎಂದು ಹುಸಿ ಮುನಿಸು ತೋರಿಸಿದ್ದನ್ನು ಗಮನಿಸಿದ ಚಿಕ್ಕಮ್ಮ. ಊಟ ಸರಿಯಾಗಿ ಮಾಡಿಲ್ಲ. ಪಾಯಸವನ್ನಾದರೂ ಕುಡಿ ಎಂದು ಬಲವಂತ ಮಾಡಿದ ಕಾರಣ ವಿಧಿ ಇಲ್ಲದೇ ಹಾಗೂ ಹೀಗೂ ಪಾಯಸ ಕುಡಿಯುತ್ತಿದ್ದ ಹಾಗೇ ಸಂಜೆ ಕರಿದ ಬೊಂಡಾ ತಿಂದ ಪರಿಣಾಮವೋ ಏನೋ ಹೊಟ್ಟೇ ಉಬ್ಬರಿಕೊಳ್ಳ ತೊಡಗಿತು. ತೇಗು ಬರ್ತಾ ಇಲ್ಲಾ, ಉಳಿದ ಪಾಯಸ ಕುಡಿಯುವುದಕ್ಕೇ ಆಗ್ತಾ ಇಲ್ಲಾ. ಹಾಗೂ ಹೀಗೂ ಮಾಡಿ ಪಾಯಸ ಕುಡಿದು ಖಾಲೀ ಮಾಡಿ ನಮ್ಮಮ್ಮ ಮತ್ತು ನಮ್ಮಾಕಿ ಕುಂಕುಮ ಮತ್ತು ಉಡುಗೊರೆಯನ್ನು ಪಡೆದುಕೊಂಡು ಇಂದಿರಾನಗರವನ್ನು ಬಿಟ್ಟಾಗ ಗಂಟೆ ಹತ್ತಾಗಿತ್ತು.
ನಮ್ಮ ಬಳಿ ಆಗಿನ್ನೂ ಕಾರ್ ಇಲ್ಲದಿದ್ದ ಕಾರಣ ನಾಲ್ಕು ಜನ ಎರಡು ಗಾಡಿಯಲ್ಲಿ ಹೊರಡುತ್ತಿದಂತೆಯೇ ಹೊಟ್ಟೆಯೆಲ್ಲಾ ಉಬ್ಬಸ, ರಸ್ತೆ ಸರಿಯಿಲ್ಲದ ಕಾರಣ ಗಾಡಿ ಕುಲುಕಿದಂತೆಲ್ಲಾ ನನಗೆ ಕಸಿವಿಸಿ ಹೇಳಿಕೊಳ್ಳುವುದಕ್ಕೂ ಆಗದು ಬಿಡಲೂ ಆಗದಂತಹ ಪರಿಸ್ಥಿತಿ ನನ್ನದಾಗಿತ್ತು. ಸ್ವಲ್ಪ ದೂರ ಹೋದ ನಂತರ ಗಾಡಿ ನಿಲ್ಲಿಸಿ ಒಂದೆರಡು ನಿಮಿಷ ವಿಶ್ರಮಿಸಿಕೊಳ್ಳುತ್ತಿದ್ದಾಗ ಅಲ್ಲಿಯೇ ಹತ್ತಿರವಿದ್ದ ಮೆಡಿಕಲ್ಸ್ ಸ್ಟೋರ್ ನಿಂದ ಅಪ್ಪಾ Sprite ತಂದು ಕೊಟ್ಟು ಇದನ್ನು ಕುಡಿ ಸರಿಹೋಗಬಹುದು ಎಂದರು. ಸರಿ ಎಂದು ಅದರ ಒಂದೆರಡು ಗುಟುಕನ್ನು ಬಾಯಿಯೊಳಗೆ ಹಾಕಿಕೊಂಡೆನಾದರೂ ನುಂಗಲು ಆಗುತ್ತಿಲ್ಲ. ಉಗಿಯಲು ಮನಸ್ಸು ಬರುತ್ತಿರಲಿಲ್ಲ. ಕೊಂಡ ತಪ್ಪಿಗೆ ಅತ್ತೇ ಸೊಸೇ ಮತ್ತು ಮಾವ ಎಲ್ಲರೂ ಸೇರಿ ಅದನ್ನು ಕುಡಿದು ಮುಗಿಸಿ ಒಂದೆರಡು ಹಾಜ್ಮೊಲಾ ಚಾಕ್ಲೇಟ್ ತೆಗೆದುಕೊಂಡು ಬಾಯಿಗೆ ಹಾಕಿಕೊಂಡು ಮತ್ತೆ ಗಾಡಿಯನ್ನೇರಿ ನಿಧಾನವಾಗಿ ಗಾಡಿ ಓಡಿಸಿಕೊಂಡು ಹೊರಟೆ.
ಡಿಸೆಂಬರ್ ತಿಂಗಳ ಕೊರೆಯುವ ಚಳಿ ಒಂದೆಡೆಯಾದರೇ ಹೊಟ್ಟೇ ಉಬ್ಬಸ ಮತ್ತೊಂದೆಡೆ. ಯಾವ ಶತ್ರುವಿಗೂ ಬೇಡಪ್ಪಾ ಈ ಪಜೀತಿ. ಎಲ್ಲರೂ ಹಸಿವಿನಿಂದ ನರಳುತ್ತಾರೆ ಎಂದು ಕೇಳಿದ್ದೇ. ಆದರೆ ನಾನಿಂದು ಹೊಟ್ಟೇ ತುಂಬಾ ಉಂಡು ನರಳಾಡುತ್ತಿದ್ದೆ. ಅಂತೂ ಇಂತೂ ಸದಾಶಿವ ನಗರ ಪೋಲೀಸ್ ಠಾಣೆ ದಾಟಿ ಬಿಇಎಲ್ ಹೊಸಾ ರಸ್ತೆ ಕಡೆಗೆ ತಿರುಗಿ ದೇವಸಂದ್ರ ಹತ್ತಿರ ಬರುತ್ತಿದ್ದಂತೆಯೇ ಇದ್ದಕ್ಕಿದ್ದಂತೆಯೇ ಮೈಯೆಲ್ಲಾ ಒಮ್ಮಿಂದೊಮ್ಮೆಲ್ಲೇ ಬಿಸಿಯಾಗಿ ನಾಭಿಯಿಂದ ಹೊರಟು ಜ್ವಾಲಾಮುಖಿ ಸ್ಪೋಟವಾಗುವಂತೆ ಡರ್ ಎಂದು ಜೋರಾಗಿ ತೇಗು ಬರುತ್ತಿದ್ದಂತೆಯೇ ಮನಸ್ಸಿಗೆ ಏನೋ ಉಲ್ಲಾಸ ಮತ್ತು ಉತ್ಸಾಹ.
ತೇಗು ಬರುತ್ತಿದ್ದಂತೆಯೇ ಘಕ್ಕನೆ ಗಾಡಿಯನ್ನು ನಿಲ್ಲಿಸಿ ಒಂದು ಕ್ಷಣ ಗಾಡಿಯಿಂದ ಇಳಿದು ದೀರ್ಘವಾದ ನಿಟ್ಟುಸಿರು ಬಿಡುತ್ತಿದ್ದಂತೆಯೇ ಅದುವರೆವಿಗೂ ಹೋಗಲು ಗಂಟಲಿನವರೆಗೂ ಸಿದ್ಧವಾಗಿದ್ದ ಪ್ರಾಣ ಮತ್ತೊಮ್ಮೆ ಹೃದಯದೊಳಗೆ ಬೆಚ್ಚಗೆ ಅಡಗಿ ಕುಡಿದಂತಹ ಅನುಭವವಾಗಿದ್ದಂತೂ ಸುಳ್ಳಲ್ಲಾ. ಹೋದ ಪ್ರಾಣ ಮತ್ತೆ ಮರಳಿದಂತಾದ ಮೇಲೆ ನೆಮ್ಮದಿಯಾಗಿ ಮನೆಗೆ ಬಂದ ಕೂಡಲೇ ಚಿಕ್ಕಮ್ಮನಿಗೆ ಕರೆ ಮಾಡಿ ಪ್ರಯಾಸದಿಂದ ಮನೆಗೆ ತಲುಪಿದ್ದದ್ದನ್ನು ಸವಿಸ್ತಾರವಾಗಿ ಹೇಳಿ ಮುಗಿಸಿ ಗಸಗಸೆ ಪಾಯಸ ಕುಡಿದ ಮತ್ತಿಗೆ ಬೆಚ್ಚಗೆ ನಿದ್ದೇ ಹೋಗಿದ್ದೆ. ಇಂದಿಗೂ ಚಿಕ್ಕಮ್ಮ ಮತ್ತು ಚಿಕ್ಕಪ್ಪನವರು ಆಗ್ಗಾಗ್ಗೇ ಕರೆ ಮಾಡೀ ಸಿರೀ ಬಾರೋ ಮನೆಗೆ ನಿನ್ನ ಪ್ರೀತಿಯ ಗಸಗಸೆ ಪಾಯಸ ಮಾಡಿಕೊಡ್ತೀನೀ ಅಂತಾರೆ. ಆಗ ಕುಳಿತಲ್ಲಿಂದಲೇ ಎದ್ದು ನಿಂತು ಒಮ್ಮೆ ಕೈ ಮುಗಿದು ಅಮ್ಮಾ ತಾಯಿ ಸಾಕು ಸಾಕು ನಿಮ್ಮನೆ ಗಸಗಸೆ ಪಾಯಸ ಎಂದು ಈ ಪ್ರಸಂಗವನ್ನು ನೆನೆದು ಎಲ್ಲರೂ ಗಹಹಗಿಸಿ ನಗುತ್ತೇವೆ.
ಈ ಪ್ರಸಂಗದಿಂದ ನಾನು ಕಲಿತ ದೊಡ್ಡ ಪಾಠವೆಂದರೆ, ನೆಂಟರಿಷ್ಟ್ರರು, ಗೆಳೆಯರ ಮನೆ, ಸಭೆ ಸಮಾರಂಭ ಇಲ್ಲವೇ ಹೋಟೇಲ್ಲಿಗೇ ಹೋದಾಗಾ, ನಮಗೆ ಇಷ್ಟಾ ಎಂದು ಎರ್ರಾ ಬಿರ್ರಿ ತಿನ್ನದೇ, ಇನ್ನೂ ನಾಲ್ಕು ತುತ್ತು ತಿನ್ನಲು ಹೊಟ್ಟೆಯಲ್ಲಿ ಜಾಗವಿದೆ ಎನ್ನುವಾಗಲೇ ಊಟವನ್ನು ಮುಗಿಸಿ ಇಂತಹ ಮುಜುಗರದಿಂದ ಪಾರಾಗ ಬಹುದು ಎಂದು. ಆದಕ್ಕೇ ಅಲ್ವೇ ನಮ್ಮ ಹಿರಿಯರು ಹೇಳಿರೋದು ಅತಿಯಾದರೇ ಅಮೃತವೂ ವಿಷ ಎಂದು ಇನ್ನು ಗಸಗಸೆ ಪಾಯಸ ಅದರ ಮುಂದೆ ಯಾವ ಲೆಖ್ಖ ಅಲ್ವೇ?
ಏನಂತೀರೀ?