ನೆನೆದವರ ಮನದಲ್ಲಿ ಪೇಜಾವರ ಶ್ರೀ ಗಳು

ನಮಗೆಲ್ಲಾ ತಿಳಿದಿರುವಂತೆ ಈ ದೇಶ ಕಂಡ ಮಾಹಾ ಯತಿಳಾಗಿದ್ದಂತಹ ಪೇಜಾವರ ಶ್ರೀಗಳು ಕಳೆದ ವರ್ಷ ಇದೇ ಸಮಯದಲ್ಲಿಯೇ ನಮ್ಮನಗಲಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಪೇಜಾವರ ಶ್ರೀಗಳ ಇಚ್ಚೆಯಂತೆಯೇ ಅವರ ವೃಂದಾವನವನ್ನು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನೆನ್ನೆ ಡಿ.17ರಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಪೂರ್ಣಪ್ರಮಾಣದ ವೃಂದಾವನ ಪ್ರತಿಷ್ಠಾಪನೆಯಾಗಿದೆ.

ಶ್ರೀಗಳು ನಿಧನರಾದಾಗ ಅದೇ ಸ್ಥಳದಲ್ಲಿ ಅವರ ಭೌತಿಕ ಶರೀರವನ್ನು ವೃಂದಾವನಸ್ಥಗೊಳಸಿ ತಾತ್ಕಾಲಿಕವಾಗಿ ವೃಂದಾವನವೊಂದನ್ನು ನಿರ್ಮಿಸಿ ನಂತರ ಮಾಧ್ವ ಸಂಪ್ರದಾಯದಂತೆ ಶಿಲಾ ವೃಂದಾವನವನ್ನು ಅವರು ಸ್ವರ್ಗಸ್ಥರಾದ ವರ್ಷದೊಳಗೇ ನಿರ್ಮಿಸಲಾಗಿದ್ದು ಸಕಲ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ವಿಶ್ವಪ್ರಸನ್ನತೀರ್ಥರು ಪ್ರತಿಷ್ಠಾಪನೆ ಮಾಡಿದರು. ಶ್ರೀಗಳ ಪ್ರಥಮ ಆರಾಧನ ಮಹೋತ್ಸವದ ಅಂಗವಾಗಿಯೇ ವಿದ್ಯಾಪೀಠದಲ್ಲಿ ಡಿ.10ರಿಂದಲೇ ವಿಶೇಷ ಪೂಜೆ, ವಿಚಾರಗೋಷ್ಠಿಗಳು ಪ್ರತೀ ದಿನವೂ ನಡೆಯುತ್ತಿತ್ತು. ಈ ವೃಂದಾವನದ ಪಕ್ಕದಲ್ಲಿಯೇ ಸ್ವಾಮೀಜಿಯವರ ವಿದ್ಯಾಗುರುಗಳಾಗಿದ್ದ ಪಲಿಮಾರು- ಭಂಡಾರಕೇರಿ ಮಠದ ಶ್ರೀವಿದ್ಯಾಮಾನ್ಯತೀರ್ಥ ಶ್ರೀಗಳ ಮೃತ್ತಿಕಾ ವೃಂದಾವನವನ್ನೂ ನಿರ್ಮಿಸಲಾಗಿರುವುದು ವಿಶೇಷವಾಗಿದೆ.

ಈ ಗುರು ಶಿಷ್ಯರಿಬ್ಬರ ವೃಂದಾವನವನ್ನು ವಿದ್ವಾಂಸರುಗಳು ಸೂಚಿಸಿದ ಕ್ರಮದಲ್ಲಿ ಮುರುಡೇಶ್ವರ, ಎಲ್ಲೂರು, ಕಾರ್ಕಳದಲ್ಲಿ ಶಿಲ್ಪಿಗಳು ಸಿದ್ಧಪಡಿಸಿದರೆ, ವಾಸ್ತು ತಜ್ಞರು ಅದಕ್ಕೊಪ್ಪುವಂತೆ ವೃಂದಾವನವನ್ನು ಅತ್ಯಂತ ಸುಂದರವಾಗಿ ನಿರ್ಮಾಣ ಮಾಡಿದ್ದಾರೆ. ಒಟ್ಟು ಏಳು ಹಂತದ ಶಿಲ್ಪ ಕಲೆಗಳನ್ನು ಒಳಗೊಂಡಿರುವ ಈ ವೃಂದಾವನದ ಮೇಲ್ಭಾಗದಲ್ಲಿ ಉಡುಪಿ ಶ್ರೀಕೃಷ್ಣ ಮತ್ತು ಮಧ್ವಾಚಾರ್ಯರು ಪೇಜಾವರ ಮಠಕ್ಕೆ ನೀಡಿರುವ ರಾಮ, ವಿಠ್ಥಲ ದೇವರ ಮೂಲ ಪ್ರತಿಮೆಗಳ ಪ್ರತೀಕವನ್ನು ಚಿತ್ರಿಸಲಾಗಿದೆ. ವಾಯುದೇವರ ಅವತಾರತ್ರಯಗಳನ್ನು, ವೇದವ್ಯಾಸರ ಪ್ರತೀಕಗಳನ್ನು ಕಲಾತ್ಮಕವಾಗಿ ಚಿತ್ರಿಸುವ ಮೂಲಕ ಶ್ರೀಗಳು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಭಾವನಾತ್ಮಕವಾಗಿ ನಮ್ಮೊಂದಿಗೆ ಇರುವಂತೆಯೇ ಭಾಸವಾಗುವಂತಿದೆ.

ಭಾವನಾತ್ಮಕ ಎಂದಾಗ ನೆನದವರ ಮನದಲ್ಲಿ ಎನ್ನುವಂತೆ ಪೇಜಾವರ ಶ್ರೀಗಳ ಕುರಿತಾದ ಒಂದು ಸುಂದರ ಪ್ರಸಂಗವನ್ನು ಹೇಳಲೇ ಬೇಕು. ಅದು ತೊಂಭತ್ತರ ದಶಕ ಪೇಜಾವರರು ಉಡುಪಿಯಿಂದ ಬೆಂಗಳೂರಿಗೆ ಬಂದಿದ್ದು ಭಕ್ತರ ಮನೆಗಳಿಗೆ ಪಾದ ಪೂಜೆಗೆ ಬರುತ್ತಿದ್ದ ಕಾಲ. ಅದೇ ಕಾರ್ಯಕ್ರಮದ ಅಡಿಯಲ್ಲಿ ನಮ್ಮ ಮನೆಯಿಂದ ಮೂರು ಮನೆಯಾಚೆಯಿದ್ದವರ ಮನೆಯವರು ಸ್ವಾಮೀಜಿಗಳ ಪಾದ ಪೂಜೆಗೆ ಕರೆದಿದ್ದರೂ ನಮಗೆ ಆ ವಿಷಯ ತಿಳಿದಿರಲಿಲ್ಲ. ಸ್ವಾಮೀಜಿಗಳು ಬರುವಾಗ ಪೂರ್ಣಕುಂಭ ಸ್ವಾಗತಕ್ಕೆ ಬರುವಂತೆ ಹಿಂದಿನ ದಿನ ಸ್ವಾಮೀಜಿಗಳ ಶಿಷ್ಯರೊಬ್ಬರು ನಮ್ಮ ಮನೆಗೆ ಬಂದು ನಮ್ಮ ತಂದೆಯವರನ್ನು ಆಹ್ವಾನಿಸಿದಾಗಲೇ, ಸ್ವಾಮೀಜಿಯವರು ಬರುವ ವಿಷಯ ನಮ್ಮ ತಂದೆಯವರಿಗೆ ತಿಳಿಯಿತು.

ಪೇಜಾವರ ಶ್ರೀಗಳ ಬಗ್ಗೆ ಅಪಾರ ಗೌರವವಿದ್ದರೂ ಭಾರತ ಪಾಕೀಸ್ಥಾನದಂತೆ ಪರಸ್ಪರ ಕೆಸರು ಎರಚಾಡುವ ಸ್ಮಾರ್ಥ ಮತ್ತು ಮಾಧ್ವರಂತೆ ನಮ್ಮ ತಂದೆಯವರು ಅಂದೇಕೋ ಏನೋ, ಒಳ್ಳೆಯ ಮನಸ್ಥಿತಿಯಲ್ಲಿ ಇಲ್ಲದ ಕಾರಣ, ಹೌದು ಸ್ವಾಮೀ ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಅಂತ ಪೇಜಾವರರು ಹೇಳ್ತಾರೇ. ಅದ್ರೇ, ಪೂಜೆ ಪುನಸ್ಕಾರ ಮತ್ತು ಪಾದಪೂಜೆಗಳಿಗೆ ಮಾತ್ರಾ ಮಾಧ್ವರ ಮನೆಗೆ ಮಾತ್ರವೇ ಬರುತ್ತಾರೆ ಎಂದು ಸ್ವಲ್ಪ ಜೋರು ಧನಿಯಲ್ಲಿಯೇ ಹೇಳಿದರು. ಹೇ.. ಹೇ.. ಹಾಗೇನಿಲ್ಲಾ ಸ್ವಾಮಿಗಳು ದಲಿತರ ಕೇರಿಗೇ ಹೋಗಿ ಸಹಪಂಕ್ತಿ ಭೋಜನವನ್ನೇ ಮಾಡಿಲ್ಲವೇ ಎಂದು ಸಮಜಾಯಿಷಿ ಕೊಡಲು ನಮ್ಮ ತಂದೆಯ ಸ್ನೇಹಿತರು ಮತ್ತು ಪೇಜಾವರ ಶ್ರೀಗಳ ಪರಮಭಕ್ತರು ಪ್ರಯತ್ನಿಸಿದರಾದರೂ ಕೇಳುವ ಮನಸ್ಥಿತಿಯಲ್ಲಿ ನಮ್ಮ ತಂದೆಯವರು ಇಲ್ಲದಿದ್ದ ಕಾರಣ ಅಲ್ಲಿಗೇ ಸುಮ್ಮನಾಗಿ ನಾಳೆ ಸಂಜೆ ಆರು ಗಂಟೆಗೆ ಸ್ವಾಮಿಗಳು ಬರುವವರಿದ್ದಾರೆ. ನೀವು ಮತ್ತು ನಿಮ್ಮ ಕುಟುಂಬದವರೆಲ್ಲರೂ ಅಗತ್ಯವಾಗಿ ಬರಬೇಕು ಎಂದು ತಿಳಿಸಿ ಹೋರಟು ಹೋದರು.

ಮಳೇ ನಿಂತೂ ಹೋದ ಮೇಲೂ ಮರದಡಿಯಲ್ಲಿ ಹನಿ ಬೀಳುವಂತೆ ನಮ್ಮ ತಂದೆಯವರ ಬುಸು ಬುಸು ಗುಟ್ಟುವಿಕೆ ಸ್ವಲ್ಪ ಕಾಲ ಇದ್ದು ನಂತರ ತಣ್ಣಗಾಗಿ ಮಾರನೇ ದಿನ ಯಥಾ ಪ್ರಕಾರ ಕಾರ್ಖಾನೆಗೆ ಹೋಗಿ ಸಂಜೆ ಮನೆಗೆ ಬಂದು ಸ್ವಾಮೀಜಿಗಳ ಬರುವಿಕೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾಗಲೇ ಮನೆಯ ಮುಂದೆ ಕಾರ್ ನಿಂತ ಶಬ್ಧವಾಯಿತು. ಅರೇ ಈ ಸಮಯದಲ್ಲಿ ಯಾರಪ್ಪಾ ಬಂದಿದ್ದು ಎಂದು ನೋಡ ನೋಡುತ್ತಿದ್ದಂತೆಯೇ ಪೇಜಾವರ ಶ್ರೀಗಳು ಕಾರಿನಿಂದ ಇಳಿದು ನಮ್ಮ ಮನೆಯ ಗೇಟ್ ಮುಂದೆ ನಿಂತಿದ್ದನ್ನೂ ನೋಡಿದಾಕ್ಷಣ ನಮ್ಮ ತಂದೆಯವರ ಜಂಘಾಬಲವೇ ಇಳಿದು ಹೋಗಿತ್ತು. ಯಾವುದೇ ಪೂರ್ವನಿರ್ಧಾರಿತವಾಗಿರದೇ ಸ್ವಾಮಿಗಳು ಇದ್ದಕ್ಕಿಂದ್ದಂತೆಯೇ ನಿಗಧಿತ ಮನೆಯವರ ಮನೆಗೆ ಹೋಗುವ ಮುಂಚೆಯೇ ನಮ್ಮ ಮನೆಗೆ ಬಂದಿದ್ದ ಕಾರಣ ನಾವೆಲ್ಲರೂ ಒಂದು ಕ್ಷಣ ದಿಗ್ರಾಂಭತರಾಗಿದ್ದಂತೂ ಸತ್ಯ. ಎಲ್ಲವನ್ನೂ ಸಾವರಿಸಿಕೊಂಡು ಕೂಡಲೇ ಮನೆಯೊಳಗೆ ಕರೆದುಕೊಂಡು ಅವರಿಗೆ ಯಥಾಶಕ್ತಿ ಸತ್ಕರಿಸಿ ಕಾಣಿಕೆಯನ್ನು ನೀಡಿ ಧನ್ಯತಾಭವವನ್ನು ಅರ್ಪಿಸಿದ್ದೆವು. ಶ್ರೀಗಳೂ ಸಹಾ ತುಂಬು ಹೃದಯದಿಂದ ನಮ್ಮೆಲ್ಲರನ್ನೂ ಅಶೀರ್ವದಿಸಿ, ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಎಂದು ನನಗೆ ಆಶೀರ್ವದಿಸಿದ್ದಲ್ಲದೇ ಅಲ್ಲಿಯೇ ಇದ್ದ ನನ್ನ ತಂಗಿಯ ಮಗಳಿಗೆ ತಮ್ಮ ಕೈಯ್ಯಾರೆ ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಏನನ್ನೂ ಅರಿಯದ ಆ ಪುಟ್ಟ ಕಂದ ಕೂಡಲೇ ಬಾಳೇಹಣ್ಣನ್ನು ಸುಲಿದು ಸ್ವಾಮಿಗಳ ಮುಂದೆಯೇ ತಿನ್ನುತ್ತಿರುವುದನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ.
ಎಲ್ಲವೂ ಕಣ್ಣು ರೆಪ್ಪೆ ಮುಚ್ಚಿ ಬಿಡುವಷ್ಟರಲ್ಲಿ ನಡೆದು ಹೋದ ನಂತರ ಮನೆಯವರೆಲ್ಲರೂ ಸಂತೋಷದಿಂದ ನಮ್ಮ ನೆರೆಯ ಮನೆಯಲ್ಲಿ ಮತ್ತೊಮ್ಮೆ ಶ್ರೀಗಳ ಪಾದಪೂಜೆಯಲ್ಲಿ ಭಾಗವಹಿಸಿ ಸಂಭ್ರಮಿಸಿದೆವು. ಅಲ್ಲಿಯೇ ಸಿಕ್ಕ ಅವರ ಸ್ನೇಹಿತರು, ಏನು ರಾಯರೇ ಹೋಡೆದ್ರಲ್ಲಾ ಚಾನ್ಸೂ.. ಈಗ ಸಮಾಧಾನವಾಯ್ತೇ? ಎಂದು ವಿಚಾರಿಸಿದರು. ಅದಕ್ಕೆ ನಮ್ಮ ತಂದೆಯವರು, ನಾನೇನೋ ನೆನ್ನೆ ಬೇಸರದಲ್ಲಿ ಸ್ಮಾರ್ತರ ಮನೆಗಳಿಗೆ ಶ್ರೀಗಳು ಬರುವುದಿಲ್ಲ ಎಂದು ಹೇಳಿದ್ದನ್ನು ನೀವು ಶ್ರೀಗಳ ಬಳಿ ಹೇಳುವುದೇ? ಎಂದು‌ ಕೇಳಿದಾಗ, ಅವರು ಇಲ್ಲಾ ರಾಯರೇ, ನಾನೂ ಕೂಡಾ ಸ್ವಾಮಿಗಳನ್ನು ಈಗಲೇ ಭೇಟಿಯಾಗಿದ್ದು. ನಮ್ಮ ನಿಮ್ಮ ಸಂಭಾಷಣೆ ಅವರಿಗೆ ಹೇಗೆ ತಿಳಿಯಿತೋ ಗೊತ್ತಿಲ್ಲಾ ಎಂದಾಗ , ಶ್ರೀಗಳು ನಮ್ಮ ಮನೆಗೆ ಬರಬೇಕೆಂಬ ನಮ್ಮ ಮನದಾಳದ ಮಾತು ಅವರಿಗೆ ಹೇಗೆ ತಿಳಿಯಿತು ಎಂಬ ಯಕ್ಷ ಪ್ರಶ್ನೆ ಮನದಲ್ಲಿ ಮೂಡಿ ರೋಮಾಂಚನವಾದರೂ, ಈ ಅದ್ಭುತವಾದ ರಸಗಳಿಗೆಯಿಂದಾಗಿ ನಮ್ಮ ಮನೆಯವರೆಲ್ಲರಿಗೂ ಶ್ರೀಗಳ ಮೇಲಿದ್ದ ಭಕ್ತಿ ಇನ್ನೂ ಹೆಚ್ಚಾಯಿತು ಎಂದೇನೂ ಹೇಳ ಬೇಕಿಲ್ಲವೇನೋ?

ಇದೇ ರೀತಿ ಎಪ್ಪತ್ತರ ದಶಕದಲ್ಲಿಯೂ ನನ್ನ ಚೌಲದ ಹಿಂದಿನ ದಿನ ದೇವರ ಸಮಾರಾಧನೆಯ ದಿನದಂದು ನೆಲಮಂಗಲದಲದಲ್ಲಿ ಯಾವುದೋ ಒಂದು ಕಾರ್ಯಕ್ರಮಕ್ಕೆ ಬಂದಿದ್ದಾಗ ಅವರನ್ನು ಭೇಟಿಯಾಗಿ ಅವರ ಮುಂದೆ ಭಗವದ್ಗೀತೆ ಧ್ಯಾನ ಶ್ಕೋಕ ಹೇಳಿ ಅವರಿಂದ ಆಶೀರ್ವಾದ ರೂಪದಲ್ಲಿ ಫಲ ಮಂತ್ರಾಕ್ಷತೆ ಪಡೆದ ಸೌಭಾಗ್ಯ ನನ್ನದಾಗಿತ್ತು. ಅದಲ್ಲದೇ ಸಂಘ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮಗಳಲ್ಲಿ ಅವರ ಆಶೀರ್ವಚನಗಳನ್ನು ಕೇಳಿದ್ದನಾದರೂ ಅಷ್ಟು ಹತ್ತಿರದಲ್ಲಿ ಅದೂ ನಮ್ಮ ಮನೆಯಲ್ಲಿಯೇ ಈ ರೀತಿಯಾಗಿ ಅಚಾನಕ್ಕಾಗಿ ಅವರ ಆಶೀರ್ವಾದ ಪಡೆದದ್ದನ್ನು ವಿವರಿಸುವುದಕ್ಕಿಂದಲೂ ಅನುಭವಿಸಿದ್ದೇ ಮಹದಾನಂದ ಎಂದರೂ ಅತಿಶಯೋಕ್ತಿಯೇನಲ್ಲ.

ಪೇಜಾವರ ಶ್ರೀಗಳ ಆಶೀರ್ವಾದದಂತೆಯೇ, ಕೆಲವೇ ಕೆಲವು ತಿಂಗಳುಗಳಲ್ಲಿ ನನ್ನ ಮದುವೆಯೂ ಆಗಿದ್ದೂ ವಿಶೇಷವೇ ಸರಿ. ಪುರಾಣ ಕತೆಗಳಲ್ಲಿ ಭಕ್ತರು ನೆನೆದಾಗಲೆಲ್ಲಾ ಭಗವಂತ ಪ್ರತ್ಯಕ್ಷರಾಗುತ್ತಿದ್ದಂತೆ ಈ ಕಲಿಯುಗದಲ್ಲಿ ಸಾಕ್ಷಾತ್ ದೇವರ ಪ್ರತಿರೂಪವಾಗಿದ್ದ ಶ್ರೀಗಳು ಎರಡು ಬಾರಿ ಕರೆಯದೇ ನಮ್ಮ ಮನೆಗೆ ಬಂದಿದ್ದ ವಿಷಯ ಅವರ ವೃಂದಾವನ ಅನಾವರಣವಾದ ದಿನ ನೆನಪಿಗೆ ಬಂದಿತು. ಪೇಜಾವರ ಶ್ರೀಗಳು ನಮ್ಮೊಂದಿಗೆ ಭೌತಿಕವಾಗಿ ಇಲ್ಲದಿದ್ದರೂ ಅವರ ಮಾಡಿದ ಕಾರ್ಯಗಳ ಮೂಲಕ ಅಚಂದ್ರಾರ್ಕವಾಗಿ ನಮ್ಮೊಂದಿಗೆ ಇದ್ದೇ ಇರುತ್ತಾರೆ. ಅವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ನಡೆದ ಹೋರಾಟದ ಫಲವಾಗಿ ಪ್ರಭು ರಾಮಚಂದ್ರನ ಭವ್ಯವಾದ ದೇವಾಲಯ ಇನ್ನೇನು ಕೆಲವೇ ವರ್ಷಗಳಲ್ಲಿ ನಿರ್ಮಾಣವಾದ ಮೇಲಂತೂ ಪ್ರಭು ರಾಮಚಂದ್ರನ ರೂಪದಲ್ಲಿಯೇ ಪೇಜಾವರ ಶ್ರೀಗಳು ಅಜರಾಮರವಾಗಿರುತ್ತಾರಲ್ಲವೇ?

ಏನಂತೀರೀ?

5 thoughts on “ನೆನೆದವರ ಮನದಲ್ಲಿ ಪೇಜಾವರ ಶ್ರೀ ಗಳು

   1. ದೈವಂ ಮಾನುಷರೂಪೇಣ ಎಂಬಂತೆ ನಡೆದಾಡುವ ದೇವರ ಬಗ್ಗೆ ಒಂದು ಘಟನೆ ನೆನಪಿಗೆ ಬರುತ್ತೆ. ಒಮ್ಮೆ ಕಾವಲ ಬೈರಸಂದ್ರದ ರಾಯರ ಮಠದಲ್ಲಿ ಶ್ರೀರಾಘವೇಂದ್ರ ಗುರುಗಳ ಆರಾಧನಾ ಮಹೋತ್ಸವ ನಡೆಯುತ್ತಿತ್ತು. ಅಲ್ಲಿಗೆ ಶ್ರೀಗಳು ಆಗಮಿಸಿದ್ದರು. ಆಶೀರ್ವಚನ ನೀಡಿ ಹೊರಟರು. ನನ್ನ ತಂಗಿ ಅಮೇರಿಕಾದಿಂದ ಬಂದಿದ್ದವಳು ಶ್ರೀಗಳ ದರುಶನಕ್ಕೆ ತನ್ನ ಆರುವರ್ಷದ ಮಗನನ್ನು ಕರೆದುಕೊಂಡು ಹೋಗಿದ್ದು, ಅವನಿಗೆ ಶ್ರೀಗಳ ಪರಿಚಯಮಾಡಿಕೊಡುತ್ತಾ ಅವರು ದೇವರು, ಅವರು ಹೇಳಿದ್ದೆಲ್ಲಾ ಆಗುತ್ತೆ ಎಂದಳು. ಶ್ರೀಗಳು ಕಾರುಹತ್ತುತ್ತಿರುವಾಗ ಜನಗಳ ಮಧ್ಯದಾರಿಮಾಡಿಕೊಂಡು ನುಸುಳಿ ಹೇ ಗುರು ಹೇ ಗುರು ಸ್ಟಾಪ್ ಎಂದು ಕೂಗುತ್ತಾ ಗುರುಗಳ ಮುಂದೆ ನಿಂತು ಆರ್ ಯು ಗಾಡ್ ನನ್ನಮ್ಮ ಹೇಳಿದ್ರು ದೆನ್ ಬ್ಲೆಸ್ ಮೀ ಎಂದು ಗುರುಗಳ ಪಾದಕ್ಕೆ ನಮಿಸಿದಾಗ ಮುಗುಳ್ನಗುತ್ತಾ ಹರಸಿದ್ದಲ್ಲದೆ , ಇವನ ವರ್ತನೆಗೆ ಕಂಗಾಲಾಗಿದ್ದ ನನ್ನ ತಂಗಿಗೆ ಫಲಮಂತ್ರಾಕ್ಷತೆ ಕೊಟ್ಟು ಹರಸಿದ್ದರು.

    Liked by 1 person

  1. ಎಂಥ ಸುದ್ದಿ ಹೇಳಿ ದ್ದೀರಿ .Really great.!!ಅದಕ್ಕೇ ಹೇಳುವುದು ತುಂಬಿದ ಕೊಡ ತುಳುಕುವುದಿಲ್ಲ ಅಂತ.ಅವರು ಅವರೇ ನಾವು ನಾವೇ. ಅದಕ್ಕೆ ನೀವೂ ಸಹ ಸರಳ ಮನಸ್ಸು ಉಳ್ಳವರಾಗಿರುವುದು.great keep it up.

   Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s