ಸಾಧಾರಣವಾಗಿ ಬಹುತೇಕ ಎಲ್ಲಾ ದೇವಸ್ಥಾನಗಳಿಗೂ ಬೆಳಗ್ಗೆ ಹೋದಾಗ ತೀರ್ಥದ ರೂಪದಲ್ಲಿ ಪಂಚಾಮೃತ ಕೊಟ್ಟು ಅದನ್ನು ಭಕ್ತಿಯಿಂದ ಸೇವಿಸಿದ ನಂತರ ತುಳಸೀ ಮತ್ತು ಪಚ್ಚ ಕರ್ಪೂರ ಹಾಕಿದ ತೀರ್ಥವನ್ನು ಕೊಡುವುದನ್ನು ನಾವು ನೋಡಿದ್ದೇವೆ. ಪ್ರತೀ ದಿನ ದೇವರ ವಿಗ್ರಹಕ್ಕೆ ಹಾಲು, ಮೊಸರು, ತುಪ್ಪ , ಜೇನುತುಪ್ಪ, ಸಕ್ಕರೆ,ಜೊತೆಗೆ ಬಾಳೆಹಣ್ಣು, ಎಳನೀರು, ನೀರಿನ ಮುಖಾಂತರ ಅಭಿಷೇಕವನ್ನು ಮಾಡಿದ ನಂತರ ಅವೆಲ್ಲವನ್ನೂ ಒಂದು ಶುಭ್ರವಾದ ಬೆಳ್ಳಿ ಇಲ್ಲವೇ ಹಿತ್ತಾಳೆ, ಕಂಚು ಅಥವಾ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿ ಬಂದ ಭಕ್ತಾದಿಗಳಿಗೆ ತೀರ್ಥದ ರೂಪದಲ್ಲಿ ಕೊಡುವುದನ್ನೇ ಪಂಚಾಮೃತ ತೀರ್ಥ ಎನ್ನುತ್ತೇವೆ. ಅಂತಹ ಪಂಚಾಮೃತದ ವಿಶೇಷತೆ ಮತ್ತು ಅದರ ಕುರಿತಾದ ಸ್ವಾರಸ್ಯಕರವಾದ ಪ್ರಸಂಗ ಇದೋ ನಿಮಗಾಗಿ.
ನಮಗೆಲ್ಲರಿಗೂ ತಿಳಿದಿರುವಂತೆ ಶಿವಲಿಂಗ ಅಥವಾ ಸಾಲಿಗ್ರಾಮಗಳು ನೇಪಾಳದ ಗಂಡಕಿ ನದಿ ಮತ್ತು ನರ್ಮದಾ ನದಿಗಳಲ್ಲಿ ಸಿಗುತ್ತದೆ. ಈ ನದಿಯ ನೀರಿನಲ್ಲಿ ಸಿಲಿಕಾ ಹಾಗೂ ಕ್ಯಾಲ್ಸಿಯಂ ಅಂಶಗಳು ಹೆಚ್ಚಾಗಿರುತ್ತದೆ ಮತ್ತು ಈ ಶಿವಲಿಂಗಗಳು ಮತ್ತು ಸಾಲಿಗ್ರಾಮಗಳಲ್ಲಿಯೂ ಔಷಧೀಯ ಗುಣಗಳು ಇರುವುದರಿಂದ ಅವುಗಳೂ ಸಹಾ ನೀರಿನೊಂದಿಗೆ ಬೆರೆತುಕೊಂಡಿರುತ್ತದೆ.
ಅದೇ ರೀತಿ ದೇವರುಗಳ ವಿಗ್ರಹಗಳನ್ನು ಪಂಚಲೋಹಗಳಾದ ಚಿನ್ನ, ಬೆಳ್ಳಿ, ತಾಮ್ರ, ಸತು ಹಾಗೂ ಕಬ್ಬಿಣದ ಸಮ ಪ್ರಮಾಣದ ಮಿಶ್ರಣಮಾಡಿ ಮಿಶ್ರಲೋಹದಿಂದ ತಯಾರಿಸುತ್ತಾರೆ. ಕೆಲವೊಮ್ಮೆ ಸತುವಿನ ಬದಲಾಗಿ ತವರ ಅಥವಾ ಸೀಸವನ್ನು ಸಹಾ ಬಳಸಲಾಗುತ್ತದೆ. ಇಂತಹ ಮಿಶ್ರಲೋಹದಿಂದ ತಯಾರಿಸಿದ ವಿಗ್ರಹಗಳ ಮೇಲೆ ಪಂಚಾಮೃತ ಅಭಿಷೇಕ ಮಾಡಿದಲ್ಲಿ ಆ ಲೋಹಗಳ ಸತ್ವವೂ ಅದರಲ್ಲಿ ಸೇರಿಕೊಳ್ಳುವುದರ ಜೊತೆಗೆ, ಬಾಳೆಹಣ್ಣು ಹಾಗೂ ಎಳನೀರಿನಲ್ಲಿ ಇರುವ ಪೊಟ್ಯಾಶಿಯಂ ಕೂಡಾ ಸೇರಿದ ಪರಿಣಾಮವಾಗಿ ಅದೊಂದು ಕೇವಲ ತೀರ್ಥವಾಗಿರದೇ ಅನೇಕ ಖಾಯಿಲೆಗಳಿಗೆ ಪರೋಕ್ಷವಾಗಿ ಔಷಧಿಯಾಗಿರುತ್ತದೆ. ಈಗ ಹೇಳಿದ ಕ್ರಮದಂತೆ ಪಂಚಲೋಹದ ವಿಗ್ರಹದ ಮೇಲೆ ಅಭಿಷೇಕ ಮಾಡಿ ಅದಕ್ಕೆ ಪಚ್ಚಬಾಳೆ, ಸ್ವಲ್ಪ ಪಚ್ಚ ಕರ್ಪೂರ ಮತ್ತು ಎಳನೀರು ಸೇರಿಸಿ ತಯಾರಿಸಿದ ಪಂಚಾಮೃತವನ್ನು ಸೇವಿಸುವ ಮೂಲಕ ಹೃದಯ ಸಂಬಂಧಿತ ಖಾಯಿಲೆಗಳು ಬಾರದಂತೇ ತಡೆಗಟ್ಟಬಹುದಾಗಿದೆ.
ಅದೇ ರೀತಿ ಈ ಪಂಚಲೋಹಗಳಿಂದ ತಯಾರಿಸಿದ ಆಭರಣಗಳನ್ನು ಧರಿಸಿದಲ್ಲಿ ಜೀವನದಲ್ಲಿ ಸಮತೋಲನ, ಆತ್ಮವಿಶ್ವಾಸ, ಉತ್ತಮ ಆರೋಗ್ಯ, ಅದೃಷ್ಟ, ಸಮೃದ್ಧಿ ಹಾಗೂ ಮನಃಶಾಂತಿ ಬರುತ್ತದೆ ಎಂದು ನಂಬಿರುವ ಕಾರಣವೇ ನಮ್ಮ ಪೂರ್ವಜರರು ದೇವರ ಹೆಸರಿನಲ್ಲಿ ಈ ರೀತಿಯ ಸಂಪ್ರದಾಯವನ್ನು ತಂದಿರುವುದು ನಿಜಕ್ಕೂ ಅದ್ಭುತವೆನಿಸುತ್ತದೆ.
ಇನ್ನು ಸಾಲಿಗ್ರಾಮ ಮತ್ತು ಶಿವಲಿಂಗಗಳು ದೃಷ್ಟಿ ಸಂಬಂಧಿತ ನರಗಳ ಬಲವನ್ನು ಹೆಚ್ಚಿಸುತ್ತದೆ ಎಂಬುದು ವೈಜ್ಞಾನಿಕವಾಗಿಯೂ ಇಂದು ಸಾಬೀತಾಗಿದೆ. ಆದರೆ ಈ ಕಾರಣವನ್ನು ಅಂದೇ ತಿಳಿದಿದ್ದ ನಮ್ಮ ಪೂರ್ವಜರು, ಅಭಿಷೇಕವಾದ ನಂತರ ಶುದ್ಧ ನೀರಿನಲ್ಲಿ ಸಾಲಿಗ್ರಾಮ ಅಥವಾ ಶಿವಲಿಂಗಗಳನ್ನು ಒಮ್ಮೆ ತೊಳೆದು ಭಕ್ತಿಪೂರ್ವಕವಾಗಿ ಕಣ್ಣುಗಳಿಗೆ ತಾಗಿಸಿ ನಮಸ್ಕಾರ ಮಾಡುವುದನ್ನು ಸಂಪ್ರದಾಯದ ಹೆಸರನಲ್ಲಿ ರೂಢಿಗೆ ತಂದಿದ್ದರು.
ಇನ್ನು ಚಿನ್ನದ ಆಭರಣಗಳ ಜೊತೆ ಬಿಸಿ ನೀರು ತಾಗಿದಲ್ಲಿ ಅದು ಆರೋಗ್ಯಕ್ಕೆ ಒಳ್ಳೆಯದೆಂಬ ಕಾರಣಕ್ಕಾಗಿಯೇ ಸ್ತ್ರೀ ಪುರುಷರಾದಿ, ಮೈಮೇಲೆ, ಚಿನ್ನದ ಆಭರಣಗಳನ್ನು ಧರಿಸಿ ಸ್ನಾನ ಮಾಡುವಾಗ ಅದರ ನೀರು ಮೈ ಮೇಲೆ ಬೀಳುವ ರೂಢಿಯನ್ನು ತಂದಿದ್ದಲ್ಲದೇ, ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುವುದರ ಮೂಲಕ ಸತು ದೇಹಕ್ಕೆ ಸೇರಿದರೆ, ತಾಮ್ರದ ಲೋಟಗಳಲ್ಲಿ ನೀರು ಕುಡಿಯುವ ಮೂಲಕ ಮೈಲುತುತ್ತ ದೇಹಕ್ಕೆ ಸೇರುವ ಮೂಲಕ ದೇಹದ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡಬಹುದೆಂಬ ಸತ್ಯವನ್ನು ನಮ್ಮ ಹಿರಿಯರು ಚೆನ್ನಾಗಿಯೇ ಅರಿತಿದ್ದರು.
ಸುಮಾರು ಹದಿನೈದು ವರ್ಷಗಳ ಹಿಂದೆ ನಮ್ಮ ಮಾವನವರು ಇದ್ದ ಮನೆಯ ಸಮೀಪವೇ ಗಣೇಶನ ದೇವಸ್ಥಾನವಿತ್ತು. ಪ್ರತೀ ದಿನವೂ ನಮ್ಮ ಅತ್ತೇ ಮಾವನವರು ಆ ದೇವಸ್ಥಾನಕ್ಕೆ ಶ್ರದ್ಧಾ ಭಕ್ತಿಗಳಿಂದ ಹೋಗುತ್ತಿದ್ದ ಕಾರಣ ಇಡೀ ದೇವಸ್ಥಾನದವರೆಲ್ಲರೂ ನಮ್ಮ ಕುಂಟಬಕ್ಕೆ ಆತ್ಮೀಯರಾಗಿದ್ದರು. ಕೆಲವೊಮ್ಮೆ ಅಜ್ಜ ಅಜ್ಜಿಯರ ಜೊತೆ ನಮ್ಮ ಪುಟಾಣಿ ಮಕ್ಕಳೂ ದೇವಸ್ಥಾನಕ್ಕೆ ಹೋಗುತ್ತಿದ್ದರು. ನೋಡಲು ತುಂಬಾನೇ ಮುದ್ದಾಗಿದ್ದು ಅ ಸಣ್ಣ ವಯಸ್ಸಿಗೇ ಅಮ್ಮ ಮತ್ತು ತಾತ ಹೇಳಿಕೊಟ್ಟ ಶ್ಲೋಕಗಳನ್ನು ಪಟ ಪಟನೆ ಹೇಳುತ್ತಿದ್ದ ನಮ್ಮ ಮಗ ಸಾಗರ್ ಬಲು ಬೇಗನೆ ಆಕರ್ಷಣೀಯ ಕೇಂದ್ರ ಬಿಂದುವಾಗುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಎಂದರೂ ತಪ್ಪಾಗಲಾರದು. ಹಾಗಾಗಿ ಪ್ರತೀ ಬಾರೀ ಆ ಗಣೇಶನ ದೇವಸ್ಥಾನಕ್ಕೆ ಹೋದಾಗಲೂ ಪೂಜೆಯಾದ ನಂತರ ನಮ್ಮ ಮಕ್ಕಳಿಗೆ ಅರ್ಚಕರು ಸಣ್ಣ ಸಣ್ಣ ಲೋಟದ ಭರ್ತಿ ಪಂಚಾಮೃತವನ್ನು ಕೊಡುವ ರೂಢಿ ಮಾಡಿ ಬಿಟ್ಡಿದ್ದರು. .ಹಾಗಾಗಿಯೇ ಕೆಲವೊಮ್ಮೆ ನಮ್ಮ ಮಕ್ಕಳೇ ಆ ದೇವಾಲಯಕ್ಕೆ ಹೋಗುವಾಗ ಮನೆಯಿಂದಲೇ ಲೋಟವನ್ನು ಕೊಂಡೊಯ್ದು ಲೋಟದ ಭರ್ತಿ ದೇವರ ಅಭಿಷೇಕವಾದ ಪಂಚಾಮೃತವನ್ನು ಲೋಟಕ್ಕೆ ಹಾಕಿಸಿಕೊಂಡು ಮನೆಗೆ ಬಂದು ನಿಧಾನವಾಗಿ ಸೇವಿಸುತ್ತಿದ್ದದ್ದೂ ಉಂಟು.
ಅದೊಮ್ಮೆ ಕುಟಂಬವರೆಲ್ಲರೂ ತೀರ್ಥಯಾತ್ರೆಗೆಂದು ದಕ್ಷಿಣ ಕನ್ನಡದ ದೇವಸ್ಥಾನಗಳಿಗೆ ಹೋಗಿದ್ದೆವು. ಯಥಾಪ್ರಕಾರ ದೇವರ ದರ್ಶನವಾದ ನಂತರ ನನ್ನ ಮಗ ಶ್ಲೋಕವನ್ನೆಲ್ಲಾ ಹೇಳಿದ ನಂತರ ಅಲ್ಲಿನ ಅರ್ಚಕರೂ ಸಂತೋಷಗೊಂಡು ಅವನಿಗೆ ದೇವರ ಮೇಲಿದ್ದ ಹಾರವನ್ನು ತಂದು ಅವನ ಕೊರಳಿಗೆ ಹಾಕಿ ಆಶೀರ್ವದಿಸಿ ತೀರ್ಥ ಪ್ರಸಾದವನ್ನು ಕೊಟ್ಟರು. ಪಂಚಾಮೃತವನ್ನು ಲೋಟಗಟ್ಟಲೇ ಕುಡಿಯುವುದನ್ನು ಆಭ್ಯಾಸ ಮಾಡಿಕೊಂಡಿದ್ದ ನನ್ನ ಮಗನಿಗೆ ಉದ್ದರಣೆಯಲ್ಲಿ ಕೊಟ್ಟ ಪಂಚಾಮೃತ ರಾವಣನ ಹೊಟ್ಟೆಗೆ ಅರಕಾಸಿನ ಮಜ್ಜಿಗೆಯಂತಾಗಿತ್ತು. ಕೂಡಲೇ ಲೋಟದಲ್ಲಿ ತೀರ್ಥ ಕೊಡಿ ಎಂದು ಅರ್ಚಕರನ್ನು ಕೇಳಬೇಕೇ? ಅವನ ಮಾತುಗಳು ಅರ್ಚಕರಿಗೆ ತಿಳಿಯದಾದಾಗ ರಚ್ಚೆ ಹಿಡಿಯಲಾರಂಭಿಸಿದ.
ಪರಿಸ್ಥಿತಿಯನ್ನು ಕೂಡಲೇ ಅರ್ಥೈಸಿಕೊಂಡ ನನ್ನ ಮಡದಿ ಅರ್ಚಕರಿಗೆ ಸೂಕ್ಷ್ಮವಾಗಿ ಅವನ ಪಂಚಾಮೃತದ ಪ್ರಲಾಪವನ್ನು ಹೇಳಿದಾಗ ಅಷ್ಟೇನಾ ಎಂದು ಒಂದು ಸಣ್ಣ ಪೇಪರ್ ಕಪ್ಪಿನಲ್ಲಿ ಪಂಚಾಮೃತವನ್ನು ತಂದು ಕೊಟ್ಟಾಗಲೇ ನನ್ನ ಮಗ ಸಮಾಧಾನವಾಗಿದ್ದ. ಅದಾದ ನಂತರ ಅವನಿಗೆ ತಿಳಿ ಹೇಳಿದ ನಮ್ಮಾಕಿ ಆ ಲೋಟ ಭರ್ತಿ ಪಂಚಾಮೃತದ ಅಭ್ಯಾಸವನ್ನು ತಪ್ಪಿಸಿ ಅರ್ಚಕರು ಎಲ್ಲರಿಗೂ ಎಷ್ಟು ತೀರ್ಥ ಪ್ರಸಾದ ಕೊಡ್ತಾರೋ ಅಷ್ಟನ್ನೇ ಎಲ್ಲರೂ ತೆಗೆದುಕೊಳ್ಳಬೇಕು ಎಂಬುದನ್ನು ಹೇಳಿಕೊಟ್ಟಿದ್ದರು.
ಇಂದು ನಮ್ಮ ಮಗ ಸಾಗರನ 17ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಶಾಶ್ವತ ಪೂಜೆಯ ನಿಮಿತ್ತ ಅದೇ ಗಣೇಶನ ದೇವಸ್ಥಾನಕ್ಕೆ ಹೋಗಿ, ಪೂಜೆ ಮಾಡಿಸಿಕೊಂಡು ಕಣ್ತುಂಬ ದೇವರ ದರ್ಶನ ಪಡೆದು ತೀರ್ಥ ಪ್ರಸಾದ ತೆಗೆದುಕೊಳ್ಳುವಾಗ ಅವನ ಪಂಚಾಮೃತ ಪ್ರಲಾಪ ನೆನಪಿಗೆ ಬಂದಿತು. ಅಂದಿನ ಅರ್ಚಕರು ಇಂದು ಆ ದೇವಸ್ಥಾನದಲ್ಲಿ ಇಲ್ಲದೇ ಇದ್ದರೂ ಅವರು ರೂಢಿ ಮಾಡಿದ್ದ ಪಂಚಾಮೃತ ನನೆಪಾಗಿ ನಾನೂ ಮತ್ತು ನನ್ನ ಮಗ ಇಬ್ಬರೂ ಮನಸಾರೆ ನಕ್ಕಿದ್ದಂತೂ ಸುಳ್ಳಲ್ಲ.
ನಮ್ಮ ಅರೋಗ್ಯ ಸುಧಾರಣೆಗಾಗಿ ನಮ್ಮ ಹಿರಿಯರು ರೂಢಿ ಮಾಡಿರುವ ಪದ್ದತಿಗಳನ್ನು ತಿಳಿದುಕೊಂಡು ಅದನ್ನು ಹಿತ ಮಿತವಾಗಿ ಸೇವಿಸುವ ಮೂಲಕ ಆರೋಗ್ಯವಾಗಿ ಇರುಬಹುದು ಅಲ್ವೇ? ಅದೇ ರೀತೀ ಈ ಲೇಖನ ಓದಿದ ಪ್ರತಿಯೊಬ್ಬರೂ ನಮ್ಮ ಮಗನ ಹುಟ್ಟು ಹಬ್ಬದ ದಿನದಂದು ಹೃದಯಪೂರ್ವಕವಾಗಿ ಹರಸುತ್ತೀರಿ ಅಲ್ವೇ? ನಿಮ್ಮೆಲ್ಲರ ಹಾರೈಕೆಗಳೇ ನಮ್ಮ ಮಗ ಸಾಗರನಿಗೆ ಶ್ರೀ ರಕ್ಷೆ.
ಏನಂತೀರೀ?
ಸೊಗಸಾದ ಬರಹ, ಸಾಗರನಿಗೆ ನಿಮ್ಮೆಲ್ಲರ ಸಾಗರದಷ್ಟು ಹಾರೈಕೆ, ಪ್ರೀತಿ ,ವಿಶ್ವಾಸ ಸದಾ ಇರಲಿ, ಶುಭವಾಗಲಿ. ಮಗು ಸಾಗರ
ಜ್ಞಾನವಾನ್ ಭವ,ಯಶೋವಾನ್ ಭವ..
LikeLiked by 1 person
ನಿಮ್ಮೆಲ್ಲರ ಶುಭ ಹಾರೈಕೆಗಳಿಗೆ ಧನ್ಯವಾದಗಳು. 🙏
ನಿಮ್ಮೆಲ್ಲರ ಪ್ರೀತಿ ಪೂರ್ವಕ ಹಾರೈಕೆಗಳೇ ನಮ್ಮ ಮಗನಿಗೆ ಶ್ರೀರಕ್ಷೆ 🙏🙏
LikeLike
Excellent writeup and informative as well.
Best wishes to Sagar on his birthday ,for a bright,healthy and long life.
LikeLiked by 1 person
ಹೌದೌದು ಅಂತೀನಿ. ಜೊತೆಗೆ ಇನ್ನೂ ಹೆಚ್ಚಿನ ವೈಜ್ಞಾನಿಕ ಅಧ್ಯಯನಗಳ ಅಂಶಗಳನ್ನು ಪ್ರಕಟಿಸಿದರೆ, ಪಂಚಾಮೃತಕ್ಕೆ ಭರಪೂರ ಬೇಡಿಕೆ ಬಂದು, ಮಹತ್ವ ಹೆಚ್ಚಾಗುತ್ತಿದ್ದಂತೆ ಪಾವಿತ್ರ್ಯತೆಯೂ ಹೆಚ್ಚುತ್ತದೆ ಎಂದೆನಿಸುತ್ತಿದೆ.
ಹಾಗೂ ಚಿ.ಸಾಗರನ ಉತ್ತರೋತ್ತರ ಅಭ್ಯುದಯ ಆಗಲೆಂದು ಹಾರೈಸುತ್ತೇನೆ. ನಮಸ್ಕಾರಗಳು
LikeLiked by 1 person
ಖಂಡಿತವಾಗಿ ಪ್ರಯತ್ನಿಸುತ್ತೇನೆ
LikeLike
Happy Birth Day and best wishes to Chi. Sagar. God bless him and full fill all his reasonable desires.
LikeLike