ಇಡೀ ದೇಶದಲ್ಲಿ ಕಮಲವನ್ನು ಅರಳಿಸುವುದು ಒಂದು ರೀತಿಯಾದರೇ, ದಕ್ಷಿಣ ಭಾರತದ ಕೇರಳ ಮತ್ತು ಪೂರ್ವ ಭಾಗದ ಪಶ್ಚಿಮ ಬಂಗಳದ್ದೇ ಒಂದು ಸಾಹಸ ಗಾಥೆ. ಕೇರಳದಲ್ಲಿ ಕಮ್ಯೂನಿಷ್ಟರ ಕಾಟವಾದರೇ ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಷ್ಟರ ತದ್ರೂಪಾಗಿರುವ ತೃಣಮೂಲ ಕಾಂಗ್ರೇಸ್ಸಿಗರ ಜೊತೆಗಿನ ಹೋರಾಟ. ತಲೆ ತಲಾಂತರಗಳಿಂದಲೂ ಎರಡೂ ರಾಜ್ಯಗಳಲ್ಲಿ ಯಾವುದೇ ಸರ್ಕಾರ ಆಡಳಿತಕ್ಕೆ ಬಂದರೂ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಮತ್ತೊಂದು ಘನ ಘೋರ ದುರ್ದೈವವೇ ಸರಿ. ಈ ಎರಡೂ ರಾಜ್ಯಗಳಲ್ಲಿರುವ ಹಿಂದೂಗಳು ಪರಮ ದೈವ ಭಕ್ತರಾದರೂ, ರಾಜಕೀಯವಾಗಿ ಅದೇಕೋ ಕಮ್ಯೂನಿಷ್ಟರನ್ನು ಬೆಂಬಲಿಸುತ್ತಲೇ ಬಂದಿರುವುದು ನಿಜಕ್ಕೂ ಅಚ್ಚರಿಯೇ ಸರಿ. ಕರ್ನಾಟಕ ಹಾಗೂ ಇತರ ಯಾವುದೇ ರಾಜ್ಯದ ತರಹ ಬಿಜೆಪಿ ಬೆಳೆದು ಬೇಗನೆ ಫಸಲು ಬರಲು ಸಾಧ್ಯವಾಗದೇ ಇರುವಂತಹ ಮಣ್ಣು ಈ ಎರಡೂ ರಾಜ್ಯಗಳದ್ದು ಎಂದರೂ ತಪ್ಪಲ್ಲ. ಇಂತಹ ಕೇರಳ ರಾಜ್ಯದಲ್ಲಿ ಇತ್ತೀಚೆಗೆ ನಡೆದ ನಗರ ಸಭೆ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಮಲದ ಕಲರವವನ್ನು ಎಬ್ಬಿಸಿದ ಕುತೂಹಲಕಾರಿ ಮತ್ತು ಅಷ್ಟೇ ಯಾಥನಾಮಯವಾದ ಕಥೆ ಇದೋ ನಿಮಗಾಗಿ. ಅದರಲ್ಲೂ ಕಾಸರಗೋಡಿನಲ್ಲಿ ಕಮಲವನ್ನು ಅರಳಿಸಿದ ಕನ್ನಡಿಗರ ಯಶೋಗಾಥೆಯೇ ಮತ್ತೊಂದು ರೋಚಕವಾದ ಸಂಗತಿ.
ನಮ್ಮ ಪಕ್ಕದ ರಾಜ್ಯವಾದ ಕೇರಳದ ಹಿಂದೂಗಳ ಪಾಡು ನಿಜಕ್ಕೂ ಹೇಳ ತೀರದು. ಒಂದು ಕಡೆ ಸಿಪಿಎಂ ಅಟ್ಟಹಾಸವಾದರೇ, ಮತ್ತೊಂದು ಕಡೆ ಜಿಹಾದಿಗಳ ನಿರಂತರ ಆಕ್ರಮಣದಿಂದಾಗಿ ಪ್ರತಿದಿನವೂ ಹಿಂದೂ ಕಾರ್ಯಕರ್ತರ ಜೀವನ ಹೈರಾಣಾಗಿ ಹೋಗಿದೆ. ನಾವು ಇಲ್ಲಿ ಪ್ರತಿದಿನವೂ ಕ್ರೈಂ ಡೈರಿ ಅಥವಾ ಶಾಂತಂ ಪಾಪಂ ಕಾರ್ಯಕ್ರಮದಲ್ಲಿ ತೋರಿಸುವ ಕೊಲೆ ಮತ್ತು ಅತ್ಯಾಚಾರಗಳಿಗೇ ಚೆಚ್ಚಿ ಬಿದ್ದು ರಾತ್ರಿ ಹಾಸಿಗೆ ಒದ್ದೇ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಅದೇ ಕೇರಳದಲ್ಲಿ ಪ್ರತೀ ದಿನವೂ ಹಿಂದೂ ಕಾರ್ಯಕರ್ತರ ರೀಲ್ ಅಲ್ಲದೇ ರಿಯಲ್ಲಾಗಿ ಹಲ್ಲೆಗಳು ನಿರಂತರವಾಗಿ ಮೇಲಿಂದ ಮೇಲೆ ನಡೆಯುತ್ತಲೇ ಬಂದಿದೆ. ಹಿಂದೂ ಕಾರ್ಯಕರ್ತರು ಪ್ರತೀ ದಿನ ಮನೆಯಿಂದ ಹೊರಗಿ ಹೋಗಿ ಪುನಃ ರಾತ್ರಿ ಮನೆಗೆ ಸುರಕ್ಷಿತವಾಗಿ ಬಂದರೆ ಅದು ಪುನರ್ಜನ್ಮ ಪಡೆದಂತೆಯೇ ಸರಿ. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿಯೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರುಗಳು ಧೈರ್ಯದಿಂದ ಕೆಚ್ಚದೆಯಿಂದ ಮುನ್ನುಗ್ಗಿ ಕಮಲವನ್ನು ಅರಳಿಸಿದ ರೀತಿ ನಿಜಕ್ಕೂ ರೋಚಕವೇ ಸರಿ. ದಿನದಿಂದ ದಿನಕ್ಕೆ ತನ್ನ ಪ್ರಭಾವವನ್ನು ಬೆಳಸಿಕೊಳ್ಳುತ್ತಿರುವ ಬಿಜೆಪಿಯನ್ನು ಎದುರಿಸಲು ಶತ್ರುಗಳ ಶತ್ರು ಮಿತ್ರ ಎನ್ನುವಂತೆ ಕೇರಳದ ಎಲ್ಲಾ ರಾಜಕೀಯ ಪಕ್ಷಗಳು ಬಿಜೆಪಿಯನ್ನು ಬಗ್ಗು ಬಡಿಯಲು ಅನೈತಿಕ ಒಂಡಬಡಿಕೆ ಮಾಡಿಕೊಳ್ಳುವಂತಹ ಸಂಧರ್ಭದಲ್ಲಿ ಅಲ್ಲಿನ ಪ್ರತಿಯೊಬ್ಬ ಕಾರ್ಯಕರ್ತರೂ ಸುರಿಸಿದ ಬೆವರು, ರಕ್ತದ ಫಲ ಮತ್ತು ಅವರು ಪ್ರತೀದಿನವೂ ಎದುರಿಸಬೇಕಾದಂತಹ ನೂರೊಂದು ಸವಾಲುಗಳಿಗೆ ಎದೆಗುಂದುವ ಬದಲು ಎದೆಯುಬ್ಬಿಸಿ, ಎದೆಯನ್ನೇ ಗುರಾಣಿಯನ್ನಾಗಿ ಮಾಡಿಕೊಂಡು ಮುನ್ನುಗ್ಗಿ ಶತೃಗಳ ಮೇಲೇ ಆಕ್ರಮಣ ಮಾಡಿದ ಪರಿ ನಿಜಕ್ಕೂ ದೇಶದ ಎಲ್ಲಾ ಕಾರ್ಯಕರ್ತರಿಗೂ ಮಾದರಿ ಎಂದರೂ ತಪ್ಪಾಗಲಾರದು.
ನಡೆ ಮುಂದೆ, ನಡೆ ಮುಂದೆ ನುಗ್ಗಿ ನಡೆ ಮುಂದೆ ! ಜಗ್ಗದಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ !
ಭಾರತ ಖಂಡದ ಹಿತವೇ ನನ್ನ ಹಿತ ಎಂದು! ಭಾರತ ಮಾತೆಯ ಮತವೇ ನನ್ನ ಮತ ಎಂದು !
ಭಾರತಾಂಬೆಯ ಸುತರೆ ಸೋದರರು ಎಂದು! ಭಾರತಾಂಬೆಯ ಮುಕ್ತಿ ಮುಕ್ತಿ ನನಗೆಂದು!
ಎಂಬ ಕುವೆಂಪುರವರ ಕವಿತೆಯಂತೆ ಅಲ್ಲಿನ ಕಾರ್ಯಕರ್ತರು ಫಲಿತಾಂಶ ನಮ್ಮ ನಿರೀಕ್ಷೆಯಷ್ಟು ಬರಲೀ, ಬಾರದೇ ಇರಲೀ, ತಮ್ಮ ತನು ಮನ ಧನವನ್ನು ಅರ್ಪಿಸಿ, ದಣಿವರಿಯದೇ, ಶ್ರಮ ಪಡುವ ಕಾರ್ಯಕರ್ತರ ದಂಡನ್ನು ಸಜ್ಜು ಮಾಡಿರುವುದು ನಿಜಕ್ಕೂ ಅಚ್ಚರಿಯಾಗಿದೆ. ಉಳಿದೆಲ್ಲಾ ರಾಜ್ಯಗಳಲ್ಲಿ ಕಾಸಿದ್ದವನೇ ಬಾಸು ಎಂದು ದುಡ್ಡು ಕೊಟ್ಟವರಿಗೇ ಪಕ್ಷದಲ್ಲಿ ಸ್ಥಾನ ಮಾನ ಕಲ್ಪಿಸುವ ಕೆಟ್ಟ ಸಂಪ್ರದಾಯವನ್ನು ರೂಢಿಯಲ್ಲಿ ಇಟ್ಟುಕೊಂಡಿದ್ದರೇ, ಇಲ್ಲಿ ಮಾತ್ರಾ, ಅದಕ್ಕೆ ತದ್ವಿರುದ್ಧವಾಗಿ ಪಕ್ಷದ ಕಷ್ಟದ ಸಮಯದಲ್ಲಿ ಪಕ್ಷದ ಪರವಾಗಿ ನಿಂತು ಪಕ್ಷವನ್ನು ಕಟ್ಟಿ ಬೆಳಸಿದ ನಿಜವಾದ ನಿಸ್ವಾರ್ಥ ಕಾರ್ಯಕರ್ತರನ್ನು ಗುರುತಿಸಿ ಅವರನ್ನು ಬೆಳಸುತ್ತಿರುವ ಪರಿ ಉಳಿದೆಲ್ಲಾ ರಾಜ್ಯಗಳಿಗೂ ಮಾದರಿಯಾಗಿದೆ. ತಮ್ಮ ಜಾತೀ, ತಮ್ಮ ಸಂಬಂಧೀಕರ ತಂಡವನ್ನು ಕಟ್ಟಿಕೊಂಡು ಪಕ್ಷ ಕಟ್ಟುತ್ತೆನೆಂಬ ಭ್ರಮೆಯಲ್ಲಿ ಓಲಾಡುವ ಇತರೇ ರಾಜ್ಯಗಳ ನಾಯಕರು ಇಲ್ಲಿನ ಬಿಜೆಪಿ ನಾಯಕರ ಮತ್ತು ಕಾರ್ಯಕರ್ತರ ದಿಟ್ಟತನವನ್ನು ನೋಡಿ ಕಲಿತುಕೊಳ್ಳಲೇ ಬೇಕು. ನಾವು ಕಟ್ಟುವುದು ಕೇವಲ ಪಕ್ಷವಲ್ಲ. ಅಥವಾ ನಮ್ಮ ಆಶೆಗಳನ್ನು ತೀರಿಸಿಕೊಳ್ಳುವ ಗುಂಪಂತೂ ಅಲ್ಲವೇ ಅಲ್ಲ. ನಮ್ಮದು ಅವಿಚ್ಛಿನ ನಿಸ್ವಾರ್ಥ ದೇಶಪರ ಸಂಘಟನೆ. ಅದು ರಾಜಕೀಯದ ಬಿಸಿಲು, ಮಳೆ, ಗುಡುಗು, ಸಿಡಿಲು ಮತ್ತು ಮಿಂಚುಗಳಿಗೆ ಕುಗ್ಗದೆ ಅಧಿಕಾರ ಬಂದಾಗ ಹಿಗ್ಗದೇ ನಡೆಯುವ ಸಂಘಟನೆ ಎಂಬುದನ್ನು ಪ್ರತ್ಯಕ್ಷವಾಗಿ ರೂಡಿಯಲ್ಲಿ ತರುವ ಮೂಲಕ ಎಲ್ಲರಿಗೂ ತೋರಿಸಿಕೊಟ್ಟಿದ್ದಾರೆ.
ಒಂದು ಕುಟುಂಬ ಅಥವಾ ಒಬ್ಬ ವ್ಯಕ್ತಿ ಹಿಂದೂಪರ ಸಂಘಟನೆಗೆ ಒಲವು ತೋರುತ್ತಿದ್ದಾನೆ ಎಂದು ತಿಳಿದು ಬಂದ ಕೂಡಲೇ ಆತನ ಮನೆಯ ಮೇಲೆ ಏಕಾಏಕಿ ಕಲ್ಲಿನ ಸುರಿಮಳೆಗೈಯ್ಯುವ ಕಮ್ಯೂನಿಸ್ಟರು, ಅದಕ್ಕೂ ಜಗ್ಗದಿದ್ದಲ್ಲಿ ಮನೆಯ ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆ. ಇದರ ವಿರುದ್ಧ ಪೋಲಿಸರಿಗೆ ದೂರು ದಾಖಲಿಸಲು ಹೋಗುವಷ್ಟರಲ್ಲಿ ಹಲ್ಲೆ ಒಳಗಾದವನ ವಿರುದ್ಧವೇ ದೂರು ದಾಖಲಾಗಿರುವ ಅಟ್ಟಹಾಸ ಒಂದು ಕಡೆಯಾದರೆ, ವಯಸ್ಸಿಗೆ ಬಂದ ಹೆಣ್ಣುಮಕ್ಕಳು ಹೊರಗೆ ಬಂದೊಡನೆಯೇ ಬಣ್ಣಬಣ್ಣದ ಬೆರಗು ಮಾತುಗಳಿಂದ ಬುಟ್ಟಿಗೆ ಹಾಕಿಕೊಂಡು ಸದ್ದಿಲ್ಲದೆ ಮನೆಯಿಂದ ಆಕೆಯನ್ನು ಕರೆದೊಯ್ದು ಮತಾಂತರಗೊಳಿಸಿ, ಯಾರೋ ತಿರುಬೋಕಿಯ ಭೋಗದ ವಸ್ತುವಂತೆ ಮೂರನೇ ಇಲ್ಲವೇ ನಾಲ್ಕನೇ ಹೆಂಡತಿಯಾಗಿಸುವ ಲವ್ ಜಿಹಾದ್ ಕ್ರೌರ್ಯ ಮತ್ತೊಂದೆಡೆ. ಇದನ್ನೆಲ್ಲಾ ಆಕೆ ತಿಳಿಯವ ಹೊತ್ತಿಗೆ ನ ಘರ್ ಕಾ, ನ ಘಾಟ್ ಕಾ ಎನ್ನುವ ಘೋರವಾದ ವಿಷವರ್ತುದ ಸಂಕೋಲೆಯಲ್ಲಿ ಸಿಕ್ಕಿ ನಲುಗಿಹೋದ ಹಿಂದೂ ಹೆಣ್ಣು ಮಕ್ಕಳ ನಿತ್ಯ ಸಂಕಟ ನಿಜಕ್ಕೂ ಅಸಹನೀಯವಾಗಿದೆ.
ಇಷ್ಟೆಲ್ಲಾ ಕಷ್ಟ ಕಾರ್ಪಣ್ಯಗಳ ನಡುವೆಯೂ ಹಿಂದೂಗಳ ಅಸ್ಮಿತೆ ಮತ್ತು ಅಸ್ಥಿತ್ವಕ್ಕಾಗಿ ಕೆಚ್ಚದೆಯ ಕಾರ್ಯಕರ್ತರ ಸಂಘಟಿತ ಹೋರಾಟದ ಫಲವಾಗಿ ಇಂದು ಕೇರಳ ರಾಜ್ಯದಲ್ಲಿ ಭಾಜಪ ಮೂರನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದಲ್ಲದೇ, 23 ಗ್ರಾಮ ಪಂಚಾಯಿತಿಗಳು ಮತ್ತು 3 ನಗರ ಸಭೆಗಳ ಮೇಲೆ ಬಾಜಪದ ಕಮಲವನ್ನು ಅರಳಿಸಿವುದು ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ. ಶಬರಿಮಲೈ ಐಯ್ಯಪ್ಪನ ದಿವ್ಯಸನ್ನಿಧಿ ಇರುವ ಪಂದಳಂ ನಗರ ಸಭೆಯನ್ನು ಪ್ರಥಮಬಾರಿಗೆ ಮತ್ತು ಆದಿ ಗುರು ಶಂಕರಾಚಾರ್ಯರ ಜನ್ಮಸ್ಥಳದ ಹತ್ತಿರದ ಪಾಲಾಕ್ಕಾಡ್ ನಗರ ಸಭೆಯನ್ನು ಎರಡನೇ ಬಾರಿಗೆ ಗೆದ್ದದ್ದಲ್ಲದೇ, ಕನ್ನಡಿಗರೇ ಹೆಚ್ಚಾಗಿದ್ದರೂ ಭಾಷಾವಾರು ಪ್ರದೇಶಗಳ ವಿಂಗಡನೆಯ ಸಮಯದಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡದಿಂದ ಕೇರಳದ ಪರವಾದ ಕಾಸರುಗೋಡಿನಲ್ಲಿ 14 ಜನಪ್ರತಿನಿಧಿಗಳು ಆಯ್ಕೆಯಾಗಿ ಎರಡನೇ ಅತೀ ದೊಡ್ಡ ಪಕ್ಷವಾಗಿ ಹೊಮ್ಮಿರುವುದು ಶ್ಲಾಘನೀಯವಾಗಿದೆ. ಕನ್ನಡಿಗರೂ ಹೆಮ್ಮೆ ಪಡಬೇಕಾದಂತಹ ಮತ್ತೊಂದು ವಿಷಯವೇನೆಂದರೆ, ಅಲ್ಲಿ ಗೆದ್ದಿರುವ 14ಕ್ಕೂ ಜನಪ್ರತಿನಿಧಿಗಳು ಕನ್ನಡಿಗರೇ ಆಗಿರುವುದು ವಿಶೇಷ.
ಕೇರಳದ ಬಿಜೆಪಿ ನಾಯಕರುಗಳ ಅಭ್ಯರ್ಥಿಗಳ ಆಯ್ಕೆ ಹೇಗಿರುತ್ತದೆ ಎಂಬುದಕ್ಕೆ ಕಾಸರುಗೋಡಿನ ವಾರ್ಡ್ ನಂ 10 ವಿದ್ಯಾನಗರದ ಅಭ್ಯರ್ಥಿ ಸವಿತಾ ಟೀಚರ್ ಅವರ ಉದಾಹರಣೆ ಸೂಕ್ತವೆನಿಸುತ್ತದೆ.
ಕರ್ನಾಟಕದಲ್ಲಿಯೇ ಕನ್ನಡ ಮಾಧ್ಯಮಗಳ ಶಾಲೆಗಳು ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಕಾಸರುಗೋಡಿನ ಶಾಲೆಯೊಂದರಲ್ಲಿ ಕನ್ನಡ ಅಧ್ಯಾಪಕಿಯಾಗಿದ್ದ ಸವಿತಾ ಟೀಚರ್ ಇಡೀ ಕಾಸರುಗೋಡಿನವರಿಗೇ ಚಿರಪರಿಚಿತವಾದ ಹೆಸರು. ಕಾಸರಗೋಡಿನ ಕನ್ನಡಿಗರಿಗಂತೂ ಆಕೇ ಮಾತೃ ಸ್ವರೂಪೀ ಎಂದರೂ ಅತಿಶಯೋಕ್ತಿಯೇನಲ್ಲ. ನಗರದ ಮಧ್ಯ ಭಾಗದಲ್ಲಿರುವ ಬಿಇಎಂ ಹೈಸ್ಕೂಲ್ ಕನ್ನಡ ಶಾಲೆಯ ಅಧ್ಯಾಪಕರಾಗಿದ್ದ ಅವರು ಸಾವಿರಾರು ಮಕ್ಕಳಿಗೆ ಪ್ರೀತಿಯಿಂದ ಕನ್ನಡವನ್ನು ಕಲಿಸಿದ ಮಮತಾಮಯಿ. ಅವರಿಂದ ಕಲಿತ ನೂರಾರು ಶಿಷ್ಯಂದಿರು ಇಂದು ಪ್ರಪಂಚಾದ್ಯಂತ ಉನ್ನತ ಸ್ಥಾನಮಾನಗಳನ್ನು ಪಡೆದಿದ್ದಾರೆ. ತಮ್ಮ ಕೆಲಸದ ನಡುವೆಯೂ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ, ಯಾವುದೇ ಜಾತೀ, ಭಾಷೇ ಮತ್ತು ಧರ್ಮದ ಹಂಗಿಲ್ಲದೇ ಜನಾನುರಾಗಿಯಾಗಿ ಅಲ್ಲಿನ ಜನರ ಒಡನಾಡಿಯಿಗಿದ್ದವರು. ಚಿಕ್ಕಂದಿನಿಂದಲೂ ಅವರ ಕುಟುಂಬಕ್ಕೆ ಸಂಘ ಪರಿವಾರದ ನಂಟಿತ್ತು. ಅವರು ಕೆಲಸ ಮಾಡುತ್ತಿದ್ದ ಬಿಇಎಂ ಶಾಲೆಯ ತಮ್ಮ ಸಹೋದ್ಯೋಗಿಯಾಗಿದ್ದ ಶ್ರೀಮತಿ ಜಲಜಾಕ್ಷಿ ಟೀಚರ್ ಜೊತೆಯೊಂದಿಗೆ ಮತ್ತು ತಮ್ಮ ಬಡಾವಣೆಯ ಸುತ್ತಮುತ್ತಲಿನ ಅನೇಕ ಮಹಿಳೆಯರನ್ನು ಒಗ್ಗೂಡಿಸಿ ಅದರಲ್ಲೂ ಹಿಂದೂ ಮಹಿಳೆಯರ ಜಾಗೃತಿಗಾಗಿ ನಿರಂತರವಾಗಿ ಹೋರಾಟ ಮಾಡಿದ ದಿಟ್ಟ ಮಹಿಳೆಯಾಗಿದ್ದರು. ಕನ್ನಡದ ಅಧ್ಯಾಪಕಿಯಾಗಿದ್ದ ಕಾರಣ ಕನ್ನಡಪರ ಹೋರಾಟಗಳಲ್ಲೂ ಆವರದ್ದೇ ಮುಂದಾಳತ್ವ. ತಮ್ಮ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದ ಮೇಲಂತೂ ತಮ್ಮ ಮುಂದಿನ ಬದಕನ್ನು ಸಂಪೂರ್ಣವಾಗಿ ಸಂಘ ಪರಿವಾರಕ್ಕೇ ಮೀಸಲಿಟ್ಟರು. ಅದರಲ್ಲೂ ವಿಶ್ವ ಹಿಂದೂ ಪರಿಷತ್ ಮತ್ತು ರಾಷ್ಟ್ರ ಸೇವಿಕಾ ಸಮಿತಿಗಳ ಮೂಲಕ ಜನರಿಗೆ ಸಲ್ಲಿಸಿದ್ದ ಸೇವೆ ಮತ್ತು ತಮ್ಮ ಸಾಧ್ವಿ ಮನೋಭಾವದೊಂದಿಗೆ ಎಲ್ಲರೊಂದಿಗೆ ಬೆರೆಯುವ ಗುಣವನ್ನು ಗುರುತಿಸಿದ ಅಲ್ಲಿನ ಜಿಲ್ಲೆಯ ಭಾಜಪ ನಾಯಕರು ಅವರನ್ನು ಮಹಿಳಾ ಧುರೀಣೆಯಾಗಿಟ್ಟು ಕೊಂಡು ಜನಪರ ಹೋರಾಟಗಳಲ್ಲಿ ಅವರನ್ನು ಮುಂಚೂಣಿಯಲ್ಲಿರಿಸಿದ್ದಲ್ಲದೇ, ಅಲ್ಲಿನ ವಿದ್ಯಾನಗರ ವಾರ್ಡಿನ ಬಿಜೆಪಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರು. ನಗರದ ಕನ್ನಡ ವಿಧ್ಯಾರ್ಥಿಗಳ ನೆಚ್ಚಿನ ಅಧ್ಯಪಕಿಯಾಗಿ, ಜನಪರ, ಲವ್ ಜಿಹಾದಿ ವಿರುದ್ಧ ಹಿಂದೂಪರ ಮತ್ತು ಕನ್ನಡಪರ ಹೋರಾಟಗಳಿಂದ ಪ್ರಖ್ಯಾತರಾಗಿದ್ದ ಸವಿತಾ ಟೀಚರ್ ಸತತವಾಗಿ ನಾಲ್ಕುಬಾರಿ ಸ್ಪರ್ಧಿಸಿ ಈ ಬಾರಿಯೂ ಸೇರಿದಂತೆ ಮೂರು ಬಾರಿ ಆನಾಯಾಸವಾಗಿ ಕಾಸರಗೋಡಿನ ನಗರ ಪಾಲಿಕೆಗೆ ಆಯ್ಕೆಯಾಗಿರುವುದಲ್ಲದೇ, ತಮ್ಮೊಂದಿಗೆ ಬಿಜೆಪಿಯಿಂದ 14 ಕನ್ನಡಿಗರ ಗೆಲುವಿನಲ್ಲಿ ಸವಿತಾ ಟೀಚರ್ ಅವರ ಪಾತ್ರವೂ ಇದೆ. ಪಕ್ಷದ ಹಿರಿಯ ಸದಸ್ಯೆಯಾಗಿರುವ ಸವಿತಾ ಟೀಚರ್ ಅವರನ್ನು ಆಯ್ಕೆಯಾದ ಸದಸ್ಯರು ತಮ್ಮ ನಾಯಕಿಯಾಗಿ ಆಯ್ಕೆ ಮಾಡಿಕೊಂಡು ಅವರ ಮಾರ್ಗದರ್ಶನದಲ್ಲಿ ಕಾಸರುಗೋಡು ನಗರ ಸಭೆಯಲ್ಲಿ ಪ್ರಭಲ ವಿರೋಧ ಪಕ್ಷವಾಗಿ ಹೋರಾಡಲು ಸಜ್ಜಾಗಿದೆ. ಸವಿತಾ ಟೀಚರ್ ಅಧ್ಯಾಪಕಿಯಾಗಿ ಮತ್ತು ಶಿಸ್ತಿನ ಸಿಪಾಯಿಯಾಗಿರುವುದರಿಂದ ಪಕ್ಷಾತೀತವಾಗಿ ಅವರ ವಿರೋಧಿಗಳೂ ಕೂಡಾ ಗೌರವ ಕೊಡುವ ವ್ಯಕ್ತಿತ್ವವನ್ನು ಹೊಂದಿರುವ ಕಾರಣ ಕಾಸರಗೋಡು ಬಿಜೆಪಿಗೆ ಕಳೆ ಬಂದಿರುವುದಲ್ಲದೇ, ಕಳೆದ ಬಾರೀ ಕೆಲವೇ ಮತಗಳ ಅಂತರದಲ್ಲಿ ಕಾಸರುಗೋಡು ವಿಧಾನ ಸಭೆ ಚುನಾವಣೆಯನ್ನು ಸೋತಿದ್ದನ್ನು ಛಲವಾಗಿ ಸ್ವೀಕರಿಸಿ ಈ ಬಾರಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಫಣವನ್ನು ಸ್ವೀಕರಿಸಿ ಅದನ್ನು ಸಫಲಗೊಳಿಸುವ ಹಾದಿಯಲ್ಲಿದ್ದಾರೆ.
ಅದೇ ರೀತಿ ತಿರುವಂತಪುರದಲ್ಲಿ ಸಣ್ಣ ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿಗಳ ವ್ಯಾಪಾರ ಮಾಡುತ್ತಲೇ ಜನಪರ ಮತ್ತು ಹಿಂದೂ ಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಗಿರಿಜಾರವರು ನಗರ ಸಭೆಗೆ ಆಯ್ಕೆಯಾಗಿರುವುದು ಸಂತಸದ ವಿಷಯವಾಗಿದೆ.
ಹರಿಪ್ಪಾಡಿನ 21ನೇ ವಾರ್ಡ್ ನಿಂದ ಸ್ಪರ್ಧಿಸಿದ್ದ ಶುಭಾಷಿಣಿಯವರು ಸ್ಥಿತಿವಂತರ ಮನೆಗಳಲ್ಲಿ ಕಸಮುಸುರೇ ಕೆಲಸಗಳನ್ನು ಮಾಡುತ್ತಾ ತಮ್ಮ ಜೀವನವನ್ನು ನಡೆಸುತ್ತಿದ್ದದ್ದಲ್ಲದೇ ಸಮಯ ಸಿಕ್ಕಾಗ ತಮ್ಮ ಕೈಲಾದ ಮಟ್ಟಿಗಿನ ಜನಪರ ಹೋರಾಟಗಳಲ್ಲಿ ಪಾಲ್ಕೊಳ್ಳುತ್ತಿರುವುದನ್ನು ಗುರುತಿಸಿ ಅವರನ್ನು ಆಭ್ಯರ್ಥಿಯಾಗಿಸಿ ಗೆಲ್ಲಿಸಿಕೊಂಡು ಬಂದಿರುವ ಅಲ್ಲಿನ ಬಿಜೆಪಿ ಕಾರ್ಯಕರ್ತರ ಉತ್ಸಾಹ ನಿಜಕ್ಕೂ ಅಚ್ಚರಿ ಪಡುವಂತಹದ್ದಾಗಿದೆ. ನಗರ ಸಭಾ ಸದಸ್ಯೆಯಾದ ತಕ್ಷಣವೇ ಬೀಗದ ಆಕೆ, ಬಹಳ ವಿನಮ್ರತೆಯಿಂದ, ನಾನು ಹಿಂದೆಯೂ ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೆ. ಮುಂದೆಯೂ ಅದನ್ನೇ ಮುಂದುವರಿಸಿಕೊಂಡೇ ಜನಪರ ಸೇವೆಗಳನ್ನು ಮಾಡುತ್ತೇನೆಯೇ ಹೊರತು ಎಂದಿಗೂ ವೃತ್ತಿಪರ ರಾಜಕಾರಣಿಯಾಗುವುದಿಲ್ಲ ಎಂದು ಹೇಳಿರುವುದು ನಿಜಕ್ಕೂ ಅಭಿನಂದನೀಯ ಮತ್ತು ಅನುಕರಣೀಯವೇ ಸರಿ.
ಈ ಮೊದಲೇ ತಿಳಿಸಿದಂತೆ ಧಾರ್ಮಿಕ ಭಾವನೆಗಳಲ್ಲಿ ಮತ್ತು ಸ್ಥಳೀಯ ಹೋರಾಟದಲ್ಲಿ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿರುವ ಪಶ್ಚಿಮ ಬಂಗಾಳದ ಬಾಜಪ ನಾಯಕರುಗಳಿಗೆ ಮತ್ತು ಕಾರ್ಯಕರ್ತರಿಗೆ ಕೇರಳದ ಬಾಜಪ ನಾಯಕರು ಮತ್ತು ಕಾರ್ಯಕರ್ತರ ಹೋರಾಟದಿಂದ ಪ್ರೇರಿತರಾಗಿ, ಇಲ್ಲಿ ಆದ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ದುರ್ಗಾ ಮಾತೆಯ ನಾಡಿನಲ್ಲಿಯೂ ಕಮಲದ ಕಲರವವನ್ನು ಪಸರಿಸಲಿ ಎನ್ನುವುದೇ ಎಲ್ಲಾ ಕಾರ್ಯಕರ್ತರ ಆಶಯವೂ ಆಗಿದೆ.
ಏನಂತೀರೀ?
ಈ ಲೇಖನಕ್ಕೆ ಅಗತ್ಯ ಮಾಹಿತಿಗಳನ್ನು ಒದಗಿಸಿದ ಕಾಸರಗೋಡು ಮೂಲದ ಗೆಳೆಯ ಧನಂಜಯ ಅವರಿಗೆ ಹೃತ್ಪೂರ್ವಕ ವಂದನೆಗಳು