ಈಗೆ ಕಿತ್ತಳೇ ಹಣ್ಣಿನ ಸೀಜನ್. ಎಲ್ಲಾ ಕಡೆಯಲ್ಲಿಯೂ ಸುಲಭವಾಗಿ ಕೆಜಿಗೆ 30-40 ರೂಪಾಯಿಗಳಿಗೆಲ್ಲಾ ಕಿತ್ತಳೆ ಹಣ್ಣು ಸಿಗುತ್ತಿದೆ. ವಿಟಮಿನ್ ಸಿ ಹೇರಳವಾಗಿರುವ ಕಿತ್ತಳೇ ಹಣ್ಣಿನ ನಿಯಮಿತ ಸೇವನೆಯಿಂದ ಅಧಿಕ ರಕ್ತದೊತ್ತಡ ಹತೋಟಿಗೆ ಬರುತ್ತದೆ ಮತ್ತು ರಕ್ತ ಪರಿಶುದ್ಧಗೊಳಿಸುತ್ತದೆ ಜಠರದ ಆರೋಗ್ಯವನ್ನೂ ಕಾಪಾಡುತ್ತದೆ. ಸಾಮಾನ್ಯವಾಗಿ ನಾವೆಲ್ಲರೂ ಕಿತ್ತಳೇ ಹಣ್ಣನ್ನು ಮಾತ್ರವೇ ತಿಂದು ಇಲ್ಲವೇ ಅದರ ಜ್ಯೂಸ್ ಮಾಡಿಕೊಂಡು ಸೇವಿಸುತ್ತೇವೆಯೇ ಹೊರತೂ ಅದರ ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ ನಿಜವಾದ ಸತ್ವ ಇರುವುದೇ ಕಿತ್ತಳೇ ಸಿಪ್ಪೆಯಲ್ಲಿಯೇ ಎಂದರೆ ಆಶ್ಚರ್ಯವಾಗುತ್ತದೆ. ಹಾಗಾಗಿಯೇ ನಾವಿಂದು ನಮ್ಮ ನಳಪಾಕ ಮಾಲಿಕೆಯಲ್ಲಿ ಕಿತ್ತಳೇಹಣ್ಣಿನ ಸಿಪ್ಪೆಯ ಗೊಜ್ಜು ಮಾಡುವುದನ್ನು ತಿಳಿಸಿಕೊಡುತ್ತಿದ್ದೇವೆ.
ಕಿತ್ತಳೇಹಣ್ಣಿನ ಸಿಪ್ಪೆಯ ಗೊಜ್ಜು ಮಾಡಲು ಬೇಕಾಗುವ ಸಾಮಗ್ರಿಗಳು
- ಕಿತ್ತಳೇ ಹಣ್ಣಿನ ಸಿಪ್ಪೆ – 2-3 ಹಣ್ಣಿನದ್ದು
- ಕಡಲೇಬೇಳೆ – 1 ಚಮಚ
- ಉದ್ದಿನಬೇಳೆ – 1 ಚಮಚ
- ಬೆಲ್ಲ- ½ ಅಚ್ಚು
- ಒಣಕೊಬ್ಬರಿ/ತೆಂಗಿನಕಾಯಿ ತುರಿ – 1 ಬಟ್ಟಲು
- ಒಣಮೆಣಸಿನಕಾಯಿ – 5-6
- ಕಾಳು ಮೆಣಸು – 4-6
- ಸಾಸಿವೆ – 1 ಚಮಚ
- ಚಿಟುಕಿ ಅರಿಶಿನ
- ಚಿಟುಕಿ ಇಂಗು
- ಹುಣಸೇಹಣ್ಣು ನಿಂಬೇ ಗಾತ್ರದ್ದು
- ರುಚಿಗೆ ತಕ್ಕಷ್ಟು ಉಪ್ಪು
- ಒಗ್ಗರಣೆಗೆ ಸ್ವಲ್ಪ ಎಣ್ಣೆ
- ಕರಿಬೇವು – 8-10 ಎಲೆಗಳು
- ಸ್ವಲ್ಪ ಕತ್ತರಿಸಿದ ಕೊತ್ತಂಬರಿ
ಕಿತ್ತಳೇ ಹಣ್ಣಿನ ಸಿಪ್ಪೆಯ ಗೊಜ್ಜು ಮಾಡುವ ವಿಧಾನ
ಕಿತ್ತಳೇ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಸಣ್ಣ ಚೂರುಗಳನ್ನಾಗಿ ಕತ್ತರಿಸಿಕೊಳ್ಳಿ
- ಒಂದು ಬಾಣಲೆಗೆ ಉದ್ದಿನಬೇಳೆ, ಕಡಲೆಬೇಳೆ, ಮೆಣಸಿನ ಕಾಳು, ಒಣಮೆಣಸಿನಕಾಯಿ ಮತ್ತು ಕಾಯಿ ತುರಿಯನ್ನು ಒಂದಾದ ನಂತರ ಒಂದನ್ನು ಹಾಕಿಕೊಂಡು ಚೆನ್ನಾಗಿ ಕೆಂಪಗೆ ಬರುವ ಹಾಗೆ ಹುರಿದುಕೊಳ್ಳಿ.
- ಹುರಿದ ಪದಾರ್ಥಗಳು ಆರಿದ ನಂತರ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ ಮಾಡಿಕೊಳ್ಳಿ
- ಪುನಃ ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿಕೊಂಡು, ಎಣ್ಣೆ ಕಾದ ನಂತರ ಸಾಸಿವೆ ಸಿಡಿಸಿ,ಚಿಟಿಕೆ ಅರಿಶಿನ ಮತ್ತು ಇಂಗನ್ನು ಸೇರಿಸಿ ಅದಕ್ಕೆ ಸಣ್ಣಗೆ ಹೆಚ್ಚಿದ ಕಿತ್ತಳೇ ಹಣ್ಣಿನ ಸಿಪ್ಪೆಯನ್ನು ಹಾಕಿ ಚೆನ್ನಾಗಿ ಹಸೀ ಹೋಗುವವರೆಗೂ ಹುರಿಯಿರಿ
- ಈಗ ಹುಣಸೇಹುಳಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ಸ್ವಲ್ಪ ಕುದಿಯಲು ಬಿಡಿ.
- ಕುದಿಯುತ್ತಿರುವ ಮಿಶ್ರಣಕ್ಕೆ ಪುಡಿ ಬೆಲ್ಲವನ್ನು ಸೇರಿಸಿ ಮತ್ತು ಮಾಡಿಕೊಂಡಿರುವ ಮಸಾಲೆ ಪುಡಿಯನ್ನು ಸೇರಿಸಿ ನಾಲ್ಕೈದು ನಿಮಿಷಗಳಷ್ಟು ಕುದಿಸಿ ಅದರ ಮೇಲೆ ಅಲಂಕರಿಕವಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಬೆರೆಸಿದಲ್ಲಿ ರುಚಿ ರುಚಿಯಾದ ಹುಳಿಯಾದ ಮತ್ತು ಅಷ್ಟೇ ಒಗುರಾದ ಮತ್ತು ಸಿಹಿಯಾದ ಕಿತ್ತಳೇ ಹಣ್ಣಿನ ಸಿಪ್ಪೆಯ ಗೊಜ್ಜು ಸಿದ್ಧ.
ಈ ಕಿತ್ತಳೇ ಹಣ್ಣಿನ ಸಿಪ್ಪೆಯ ಗೊಜ್ಜನ್ನು ದೋಸೆ, ಚಪಾತಿ ಜೊತೆಯಲ್ಲಿ ನೆಂಚಿ ಕೊಂಡು ತಿನ್ನಲು ಮಜವಾಗಿರುತ್ತದೆ. ಸ್ವಲ್ಪ ನೀರಾಗಿ ಮಾಡಿಕೊಂಡಲ್ಲಿ ರಾಗಿ ಮುದ್ದೆ ಮತ್ತು ಅನ್ನದ ಜೊತೆಯೂ ಕಲೆಸಿಕೊಂಡು ಸವಿಯ ಬಹುದಾಗಿದೆ.
ರುಚಿಕರವಾದ ಕಿತ್ತಳೇ ಹಣ್ಣಿನ ಸಿಪ್ಪೆಯ ಗೊಜ್ಜನ್ನು ಮಾಡುವ ವಿಧಾನವನ್ನು ತಿಳಿಸಿ ಕೊಟ್ಟಿದ್ದೇವೆ. ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ
ಏನಂತೀರೀ?
ಮನದಾಳದ ಮಾತು : ಕಿತ್ತಳೇ ಸಿಪ್ಪೆಯ ಗೊಜ್ಜನ್ನು ಸೇವಿಸಿದ ನಂತರ ಸುಮಾರು ಅರ್ಧ ಮುಕ್ಕಾಲು ಗಂಟೆಯವರೆಗೂ ಅದರ ಒಗರಿನ ರುಚಿಯು ನಾಲಿಗೆಯ ಮೇಲೆಯೇ ಇದ್ದು ಬಹಳ ಅಹ್ಲಾದಕರ ಅನುಭವವನ್ನು ಕೊಡುತ್ತದೆ.
ಇನ್ನು ಕಿತ್ತಳೇ ಸಿಪ್ಪೆಯ ಉಪಯೋಗಳು ಈ ರೀತಿಯಾಗಿವೆ.
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿಟ್ಟುಕೊಂಡು ಸ್ವಲ್ಪ ಮೊಸರಿನೊಂದಿಗೆ ಬೆರೆಸಿ ಅದಕ್ಕೆ ಅರ್ಧ ಚಮಚ ನಿಂಬೇಹಣ್ಣಿನ ರಸವನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆಯ ನಂತರ ಮುಖವನ್ನು ತೊಳೆಯುತ್ತಾ ಬಂದಲ್ಲಿ ಮುಖದಲ್ಲಿರುವ ಕಪ್ಪುಕಲೆ, ಮೊಡವೆಗಳು ನಿವಾರಣೆಯಾಗುತ್ತದೆ. ವಾರಕ್ಕೊಮ್ಮೆ ಇಲ್ಲವೇ ಎರಡು ಬಾರಿ ಈ ರೀತಿ ಮಾಡುವುದು ಉತ್ತಮ ಫಲಕಾರಿಯಾಗಿದೆ.
ಹಸೀ ಕಿತ್ತಳೆ ಸಿಪ್ಪೆಯೊಂದಿಗೆ ಓಟ್ಸ್ ಸೇರಿಸಿ ಅದನ್ನು ನುಣ್ಣಗೆ ರುಬ್ಬಿಕೊಂಡು ಅದಕ್ಕೆ ಸ್ವಲ್ಪ ಹಾಲನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದಲೂ ಮುಖವ ಮೇಲಿನ ಮೊಡವೆಗಳು ಮತ್ತು ಕಲೆಗಳನ್ನು ನಿವಾರಿಸ ಬಹುದಾಗಿದೆ.
ಕಿತ್ತಳೆ ಸಿಪ್ಪೆಯೊಂದಿಗೆ, ಅರ್ಧ ನಿಂಬೇ ಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಂಡು ತಲೆಗೆ ಹಚ್ಚಿಕೊಂಡು ಅರ್ಧ ಗಂಟೆಯಾದ ನಂತರ ತಲೆ ಸ್ನಾನ ಮಾಡಿದಲ್ಲಿ ತಲೆ ಹೊಟ್ಟಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.
ಕಿತ್ತಳೆ ಸಿಪ್ಪೆಯನ್ನು ಇಡೀ ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮಾರನೇಯ ದಿನ ಅದನ್ನು ಚೆನ್ನಾಗಿ ರುಬ್ಬಿ ಕೊಂಡು ಆ ಮಿಶ್ರಣವನ್ನು ನೆತ್ತಿಗೆ ಮತ್ತು ಕೂದಲಿಗೆ ಚೆನ್ನಾಗಿ ಹಚ್ಚಿಕೊಂಡು ಅರ್ಧ ಗಂಟೆಯ ನಂತರ ಸ್ನಾನ ಮಾಡಿದಲ್ಲಿ ಕೂದಲು ಸ್ವಚ್ಛವಾಗುವುದಲ್ಲದೇ, ಫಳ ಫಳಾ ಎಂದು ಹೊಳೆಯುತ್ತದೆ.