ಹದಿಮೂರನೇ ಶತಮಾನದಲ್ಲಿ ಗುರು ವಿದ್ಯಾರಣ್ಯರ ಪ್ರೇರಣೆಯಿಂದ ಹಕ್ಕ ಬುಕ್ಕರ ಸಾರಥ್ಯದಲ್ಲಿ ಮುಸಲ್ಮಾನರ ದಬ್ಬಾಳಿಕೆಯನ್ನು ಮೆಟ್ಟಿನಿಂತು ವಿಜಯನಗರ ಹಿಂದವೀ ಸಾಮ್ರಾಜ್ಯವನ್ನು ಸ್ಥಾಪಿಸಿದ ಕಥೆ. ನಮಗೆಲ್ಲರಿಗೂ ತಿಳಿದಂತಹ ವಿಷಯ. ಇದೇ ವಿಜಯನರಗರದ ರಾಜಧಾನಿಯಾಗಿದ್ದ ಹಂಪೆ ಮುಂದೆ ಕೃಷ್ಣದೇವರಾಜನ ಆಳ್ವಿಕೆಯ ಸಮಯದಲ್ಲಿ ಮುತ್ತು ರತ್ನಗಳನ್ನು ರಸ್ತೆಯ ಬದಿಯಲ್ಲಿ ಬಳ್ಳ ಬಳ್ಳಗಳಲ್ಲಿ ಅಳೆದು ಮಾರುತ್ತಿದ್ದಂತಹ ಸಮೃದ್ಧ ಸಾಮ್ರಾಜ್ಯವಾಗಿತ್ತು ಎಂದು ಕೇವಲ ನಮ್ಮ ಇತಿಹಾಸಕಾರರಲ್ಲದೇ, ವಿದೇಶೀ ಇತಿಹಾಸಕಾರರೂ ನಮೂದಿಸಿದ್ದಾರೆ. ಇಂತಹ ಕೇವಲ ಆರ್ಥಿಕವಾಗಲ್ಲದೇ ಶಿಲ್ಪಕಲೆ. ಸಂಗೀತ, ಸಾಹಿತ್ಯಗಳಲ್ಲಿಯೂ ಸಮೃದ್ಧವಾಗಿದ್ದಂತಹ ನಾಡಾಗಿತ್ತು.
ವಿಜಯನಗರ ಸಾಮ್ರಾಜ್ಯದ ಉಚ್ಫ್ರಾಯ ಸ್ಥಿತಿಯಲ್ಲಿದ್ದಾಗ ಹಂಪಿಯ ಸುತ್ತಮುತ್ತಲೂ ನೂರಾರು ಕಲಾತ್ಮಕ ದೇವಸ್ಥಾನಗಳನ್ನು ಮತ್ತು ಕಲಾ ಕುಟೀರಗಳನ್ನು ಅಂದಿನ ಸಾಮ್ರಾಜ್ಯದ ಖ್ಯಾತ ಶಿಲ್ಪಿಗಳು ರಾಜಾಶ್ರಯದಲ್ಲಿ ನಿರ್ಮಿಸಿದ್ದರು. ಆದರೆ ಕೃಷ್ಣದೇವರಾಯರ ನಂತರ ಆಳ್ವಿಕೆಗೆ ಬಂದ ಅರಸರು ಬಲಾಢ್ಯರಾಗಿಲ್ಲದಿದ್ದ ಕಾರಣ ಮುಸಲ್ಮಾನರು ವಿಜಯನಗರ ಸಾಮ್ರಾಜ್ಯದ ಮೇಲೆ ಆಕ್ರಮಣ ಸಾಮ್ರಾಜ್ಯವನ್ನು ಲೂಟಿ ಮಾಡಿದ್ದಲ್ಲದೇ ಸಿಕ್ಕ ಪಕ್ಕ ದೇವಾಲಯಗಳನ್ನೂ ಮತ್ತು ಅದರೊಳಗಿದ್ದ ವಿಗ್ರಹಗಳನ್ನು ಭಂಗ ಗೊಳಿಸಿದ ಕಾರಣ ಅನೇಕ ದೇವಾಲಯಗಳಲ್ಲಿ ನಿತ್ಯ ಪೂಜೆಯೇ ನಡೆಯದಂತಾಯಿತು. ಅಂತಹ ಭಂಗಗೊಂಡ ದೇವಸ್ಥಾನಗಳ ಸಾಲಿನಲ್ಲಿ ಬಡವಿ ಲಿಂಗದ ದೇವಾಲಯವೂ ಒಂದಾಗಿ ಸುಮಾರು ಶತಮಾನಗಳ ಕಾಲ ನಿತ್ಯಪೂಜೆಯಿಂದ ಹೊರತಾಗಿತ್ತು.
ಎಂಭತ್ತರ ದಶಕದಲ್ಲಿ ಕರ್ನಾಟಕದ ಮೂಲದವರೇ ಆಗಿದ್ದ ಕಂಚಿ ಕಾಮಕೋಟಿ ಪೀಠಾಧಿಪತಿಗಳಾಗಿದ್ದ ಶ್ರೀ ಶ್ರೀ ಶ್ರೀ ಚಂದ್ರಶೇಖರೇಂದ್ರ ಸರಸ್ವತೀ ಅವರ ಆಶಯದಂತೆ ಅಂದಿನ ಕಿರಿಯ ಶ್ರೀಗಳಾಗಿದ್ದ ಜಯೇಂದ್ರ ಸರಸ್ವತಿಯವರು ಕರ್ನಾಟಕದಲ್ಲಿ ಅವರ ಶಾಖಾಮಠಕ್ಕೆ ಪ್ರಶಸ್ಥವಾದ ಜಾಗವನ್ನು ಹುಡುಕುತ್ತಿದ್ದರು (ಅದೇ ಸಮಯದಲ್ಲಿಯೇ ಗುರು ವಿದ್ಯಾರಣ್ಯರ ಜನ್ಮ ಸ್ಥಳವೆಂದೇ ಪ್ರತೀತವಾಗಿರುವ ನಮ್ಮೂರು ಬಾಳಗಂಚಿಗೂ ಬಂದು ನಮ್ಮೂರಿನಲ್ಲಿ ನದಿ ಇಲ್ಲದಿದ್ದ ಕಾರಣ ಮಠ ಸ್ಥಾಪಿಸಲು ಮುಂದಾಗಲಿಲ್ಲ) ಅದೇ ಹುಡುಕಾಟದಲ್ಲಿಯೇ 1986ರಲ್ಲಿ ಶ್ರೀಗಳು ಹಂಪೆಗೂ ಭೇಟಿಕೊಟ್ಟ ಸಮಯದಲ್ಲಿ ಈ ಬಡವಿ ಲಿಂಗದ ದರ್ಶನ ಮಾಡಿದಾಗ ಒಂದು ಚೂರೂ ಭಿನ್ನವಾಗದೇ ಪರಿಶುದ್ಧಗಿರುವ ಈ ದೇವರಿಗೆ ಏಕೆ ನಿತ್ಯ ಪೂಜೆ ನಡೆಯುತ್ತಿಲ್ಲ? ಎಂದು ಕೇಳಿದಾಗ, ಅವರ ಜೊತೆಯಲ್ಲಿಯೇ ಇದ್ದ ಆನೆಗುಂದಿ ರಾಜವಂಶದವರು ಅದರ ಹೊಣೆಗಾರಿಕೆಯನ್ನು ಹೊತ್ತು ಕೊಂಡು ಸುಮಾರು ಹತ್ತು ಅಡಿಗಷ್ಟು ಎತ್ತರ ಇರುವ ಆ ಮಹಾಶಿವನಿಗೆ ಪ್ರತಿ ದಿನವೂ ಪೂಜೆ ಮಾಡಲು ಕೆಲವು ಅರ್ಚಕರು ನೇಮಕಗೊಂಡರೂ, 1995ರಲ್ಲಿ ದೈನಂದಿನ ನೈವೇದ್ಯಕ್ಕೆಂದು 2–3 ತಿಂಗಳಿಗೆ 30 ಕೆಜಿ ಅಕ್ಕಿ ಮತ್ತು ತಿಂಗಳಿಗೆ 300ರೂ ಸಂಭಾವನೆಯೊಂದಿಗೆ ನಿಯುಕ್ತರಾದವರೇ, ಶ್ರೀಯುತ ಕೃಷ್ಣ ಭಟ್ಟರು. ಅಂದಿನಿಂದ ಇಂದಿನವರೆಗೂ ವಯಸ್ಸು ಸುಮಾರು 90ರ ಆಸುಪಾಸಿನಲ್ಲಿ ಇದ್ದರೂ ಶರೀರವೆಲ್ಲಾ ಜರ್ಜರಿತವಾಗಿ ಸೊಂಟ ಬಾಗಿದ್ದರೂ, ಚಳಿ, ಮಳೆ, ಗುಡುಗು ಸಿಡಿಲು ಇದಾವುದನ್ನೂ ಲೆಖ್ಖಿಸದೇ ಪ್ರತೀದಿನವೂ ನಿರಂತರವಾಗಿ ಪೂಜಾವಿಧಿವಿಧಾನಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ ಶ್ರೀ ಕೃಷ್ಣ ಭಟ್ಟರು.
ಶ್ರೀ ಕೃಷ್ಣ ಭಟ್ಟರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿಗೆ ಸೇರಿರುವ ಕಾಸರವಳ್ಳಿ ಎಂಬ ಗ್ರಾಮದವರು. 1978ರಲ್ಲಿ ರಾಮಭಟ್ ಎನ್ನುವರು ಇವರನ್ನು ಹಂಪಿಯ ಸತ್ಯನಾರಾಯಣ ದೇವಾಲಯದ ಅರ್ಚಕರಾಗುವಂತೆ ಕರೆತಂದರಂತೆ. ಹಾಗೆ ಮಲೆನಾಡಿನಿಂದ ಬಿಸಿಲು ನಾಡಿಗೆ ಬಂದ ಶ್ರೀ ಕೃಷ್ಣ ಭಟ್ಟರು ಕೆಲಕಾಲ ವಿರೂಪಾಕ್ಷ ದೇವರ ಅರ್ಚಕರೂ ಆಗಿದ್ದು, ಕಾಲ ಕ್ರಮೇಣ ಇಲ್ಲಿಯರೇ ಆಗಿಹೋಗಿದ್ದಾರೆ. ವಯಸ್ಸಾಗಿದೆ. ಇನ್ನಾದರೂ ಮನೆಯಲ್ಲಿರಿ ಎಂದು ಕುಟುಂಬದವರು ಹೇಳುತ್ತಲೇ ಇದ್ದರೂ, ನನಗೆ ಶಿವನ ಆರಾಧನೆಯೇ ಸರ್ವಸ್ವ. ಮುಪ್ಪು ದೇಹಕ್ಕೆ ಬಂದಿರಬಹುದು. ನನ್ನ ಸಂಕಲ್ಪ, ಭಕ್ತಿಗೆ ಮುಪ್ಪಾಗಿಲ್ಲ ಎಂದು ಇದೇ ಬಡವಿ ಲಿಂಗನ ಸೇವೆಯಲ್ಲಿಯೇ ತಮ್ಮ ಜೀವನ ಅಂತ್ಯವಾಗಿ ಹೋಗಲಿ ಎಂದು ದಿನ ಕಳೆಯುತ್ತಿದ್ದೇನೆ ಎನ್ನುತ್ತಾರೆ ಭಟ್ಟರು.
ಈ ದೇವಸ್ಥಾನದ ವಿಶೇಷವೇನೆಂದರೆ, ಈ ಬಡವಿ ಲಿಂಗಕ್ಕೆ ಚಾವಣಿಯೇ ಇಲ್ಲ. ಅರ್ಥಾತ್ ಇದಕ್ಕೆ ಆಕಾಶವೇ ಅಂಬರ. ಇದಕ್ಕೆ ಸೂರಿಲ್ಲ ಮತ್ತು ನೆರಳಿಲ್ಲ. ಸುಮಾರು 9 ಅಡಿ ಎತ್ತರದ ಏಕಶಿಲೆಯ ಲಿಂಗಕ್ಕೆ ಬೇಸಿಗೆಯಲ್ಲಿ ಸೂರ್ಯನ ಬಿಸಿಲು, ಚಳಿಗಾಲದಲ್ಲಿ ಮಂಜಿನ ಇಬ್ಬನಿಗಳು ಮತ್ತು ಮಳೆಗಾಲದಲ್ಲಿ ವರುಣನ ನಿರಂತರ ಅಭಿಷೇಕವಾಗುತ್ತಲೇ ಇರುತ್ತದೆ. ಹಂಪೆಯಲ್ಲಿ ಹರಿಯುವ ತುಂಗಾಭದ್ರ ನದಿಯ ತುರ್ತು ಕಾಲುವೆಯಿಂದ, ಒಂದು ಸಣ್ಣ ಕಾಲುವೆಯ ನೀರು, ಈ ಬಡವಿಲಿಂಗ ಇರುವ ಗರ್ಭಾಂಗಣದ ಮೂಲಕವೇ ಹರಿದುಕೊಂಡು ಮುಂದಿರುವ ಹೊಲಗದ್ದೆಗಳಿಗೆ ಹೋಗುತ್ತದೆ. ಹೀಗಾಗಿ ವರ್ಷವಿಡೀ ಬಡವಿಲಿಂಗದ ಪೀಠದಿಂದ 3 ಅಡಿಗಳು ಸದಾ ಜಲಾವೃತವಾಗಿರುತ್ತದೆ. ಬೇಸಿಗೆಯಲ್ಲಿ ನದಿಯ ನೀರು ಬತ್ತಿದ್ದರೂ ಯಾವುದೋ ನೀರಿನ ಸೆಲೆಯಿಂದಾಗಿ ಈ ದೇವಾಲಯದ ಒಳಾಂಗಣ ವರ್ಷವಿಡೀ ನೀರಿನಿಂದ ಆವೃತವಾಗಿರುತ್ತದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಇನ್ನೂ ದೇವಾಲಯಕ್ಕೆ ಬಡವಿ ಲಿಂಗ ಎಂದು ಹೆಸರಾಗುವುದಕ್ಕೂ ಒಂದೆರಡು ದಂತ ಕಥೆಗಳಿವೆ. ಶೈವ ಮತ್ತು ವೈಷ್ಣವರ ನಡುವೆ ಸಾಮರಸ್ಯ ಏರ್ಪಡಿಸುವ ದೃಷ್ಟಿಯಿಂದ ಶಿವಲಿಂಗ ಮತ್ತು ಉಗ್ರ ನರಸಿಂಹ ಎರಡೂ ಒಂದೇ ಕಡೇ ಇರುವ ಈ ದೇವಾಲಯದಲ್ಲಿ ಈ ಶಿವಲಿಂಗವನ್ನು ಒಬ್ಬ ಬಡ ರೈತ ಮಹಿಳೆ ಪ್ರತಿಷ್ಠಾಪಿಸಿದ್ದರಿಂದ, ಇದನ್ನು ಬಡವಿಲಿಂಗ ಎಂದು ಕರೆಯುತ್ತಾರೆ ಎಂದರೆ ಮತ್ತೊಂದು ಕಥೆಯ ಪ್ರಕಾಋಅ, ಬುಡಕಟ್ಟು ಜನಾಂಗದವನೊಬ್ಬ ತನ್ನ ಆಸೆಗಳನ್ನು ಈಡೇರಿಸಿದರೆ, ಒಂದು ಶಿವಲಿಂಗವನ್ನು ಕಟ್ಟುತ್ತೇನೆಂದು ಶಪಥಗೈದನಂತೆ. ಅವನಿಚ್ಛೆಯಂತೆಯೇ ಅವನ ಆಸೆಗಳೆಲ್ಲವೂ ಈಡೇರಿದಾಗ, ಆತ ತನ್ನ ಕೈಯಿಂದಲೇ ಈ ಶಿವ ಲಿಂಗವನ್ನು ಸ್ಥಾಪಿಸಿಕೊಂಡನಂತೆ ಎನ್ನುತ್ತದೆ ಮತ್ತೊಂದು ಕಥೆ.. ವಿಜಯ ನಗರದ ಅರಸರ ಕಾಲದಲ್ಲಿ ನಿತ್ಯವೂ ಈ ಲಿಂಗಕ್ಕೆ ವಿಶೇಷ ಪೂಜೆಗಳು ಸಲ್ಲುತ್ತಿದ್ದು ಕ್ರಮೇಣ ಪೂಜೆ ಇಲ್ಲದ್ದಾಗಿತ್ತು. ಈಗ ಕೃಷ್ಣ ಭಟ್ಟರ ಅರ್ಚಕತ್ವದಲ್ಲಿ ನಿತ್ಯ ಪೂಜೆ ನಡೆದು, ಹಂಪಿಗೆ ಬರುವ ಪ್ರವಾಸಿಗರಿಗೆ ವಿರೂಪಾಕ್ಷ ದೇವಾಲಯ, ತಾಯಿ ಭುವನೇಶ್ವರಿ, ಯಂತ್ರೋದ್ಧಾರ ಆಂಜನೇಯಮ್ ಸಾಸಿವೇ ಕಾಳು ಗಣೇಶ, ಕಲ್ಲಿನ ರಥದ ಜೊತೆ ಈ ಬಡವಿ ಲಿಂಗವೂ ಆಕರ್ಷಣೀಯ ದೇವಾಲಯವಾಗಿದೆ. ಶಿವರಾತ್ರಿಯಂದು ಈ ಬೃಹದೀಶ್ವರ, ಜಲಕಂಠನಿಗೆ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತದೆ.
ಇಂತಹ ಪುರಾಣ ಪ್ರಸಿದ್ಧ ದೇವಸ್ಥಾನದ ವಯೋವೃದ್ಧ ಅರ್ಚಕರಾದ ಶ್ರೀಕೃಷ್ಣ ಭಟ್ಟರ ದಿನಚರಿ ಬೆಳಿಗ್ಗೆ 6 ಗಂಟೆಗೆಲ್ಲಾ ಆರಂಭವಾಗುತ್ತದೆ. ಬೆಳಗ್ಗೆ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿ, ಸ್ನಾನ ಸಂಧ್ಯಾವಂದನೆಗಳ ನಂತರ ಮನೆಯಲ್ಲಿ ನಿತ್ಯಪೂಜಾ ವಿಧಿವಿಧಾನಗಳನ್ನು ಅಚ್ಚುಕಟ್ಟಾಗಿ ಪೂರೈಸಿದ ನಂತರ ಮನೆಯ ಮುಂದಿನ ಜಗುಲಿಯಲ್ಲಿ ಕುಳಿತು ಲೋಕಾಭಿರಾಮವಾಗಿ ಬಂದು ಹೋದವರೊಡನೇ ಮಾತಾನಾಡುತ್ತಲೇ, ಸೂರ್ಯ ನೆತ್ತೀ ಮೇಲೆ ಬರುವುದನ್ನೇ ಕಾಯುತ್ತಿರುತ್ತಾರೆ. ಗಂಟೆ ಒಂದಾಗುತ್ತಿದ್ದಂತೆಯೇ, ಕೈಯ್ಯಲ್ಲೊಂದು ಬಕೇಟು ಹಿಡಿದುಕೊಂಡು ಅದರಲ್ಲಿ ವಿಭೂತಿ, ಅರಿಶಿನ-ಕುಂಕುಮ, ನೈವೇದ್ಯಕ್ಕೆಂದು ಒಂದಿಷ್ಟು ಅಕ್ಕಿ ಇಟ್ಟುಕೊಂಡು, ಬಾಗಿದ ಬೆನ್ನುಗಳಿಗೆ ಆಸರೆಯಾಗಿ ಊರುಗೋಲನ್ನು ಊರಿಕೊಂಡು ದೇವಸ್ಥಾನದ ಹಾದಿಯಲ್ಲಿ ಸಿಗುವ ಗಂಟೆ ಹೂಗಳೋ ಇಲ್ಲವೇ ಕಾಡು ಹೂವುಗಳನ್ನು ಕಿತ್ತುಕೊಂಡು ನಿಧಾನವಾಗಿ ಬಡವಿ ದೇವಸ್ಥಾನವನ್ನು ತಲುಪುತ್ತಾರೆ.
ಹೀಗೆ ಕಷ್ಟ ಪಟ್ಟು ದೇವಸ್ಥಾನಕ್ಕ ಬರುವ ಭಟ್ಟರಿಗೆ ಬಡವಿ ಲಿಂಗವನ್ನು ನೋಡಿದ ತಕ್ಷಣವೇ ಅದೆಲ್ಲಿಂದ ಬರುತ್ತದೋ ಅಧಮ್ಯ ಚೇತನಾ ಶಕ್ತಿ. ನಡುಗುವ ದೇಹಕ್ಕೆ ಒಂದು ತುಂಡು ಪಂಚೆಯನ್ನು ಸುತ್ತಿಕೊಂಡು ಅವರ ಮಂಡಿವರೆಗೂ ಇರುವ ನೀರಿಗೆ ಇಳಿದು, 3 ಅಡಿ ನೀರಿನಲ್ಲಿ ಮಳುಗಿರುವ ಲಿಂಗದ ಪೀಠಕ್ಕೆ ಕಾಲೂರಿ, 9 ಅಡಿಯ ಲಿಂಗದ ಮೇಲ್ಭಾಗವನ್ನು ಶುಚಿಗೊಳಿಸುವ ಅವರ ಸಾಹಸನ್ನು ನೋಡುವುದಕ್ಕೇ ಒಂದು ರೋಮಾಂಚನ. ಇನ್ನೇನು ಬಿದ್ದು ಬಿಡುವರೇನೋ ಎಂಬಂತೆ ತೂರಾಡುತ್ತಿದ್ದರೂ ಅಷ್ಟು ಎತ್ತರದ ಲಿಂಗದ ಮೇಲೆ ಹತ್ತಿ ಹಿಂದಿನ ದಿನದ ಹೂಗಳನ್ನು ಮತ್ತು ಭಕ್ತರು ಎಸೆದ ನಾಣ್ಯಗಳನ್ನು ಹೆಕ್ಕಿ ತೆಗೆದು, ನಂತರ ಬಕೀಟಿನಿಂದ ನೀರನ್ನು ಲಿಂಗ ಸಂಪೂರ್ಣ ನೆನೆಯುವಷ್ಟು ಎರಚಿ, ಆ ಬೃಹತ್ ಲಿಂಗವನ್ನು ಶುದ್ಧೀಕರಿಸಿ, ಹೂವು, ವಿಭೂತಿ ಅರಿಶಿನ ಕುಂಕುಮವಿಟ್ಟು, ನೈವೇದ್ಯ ಅರ್ಪಿಸಿ ಓಂ ನಮಃ ಶಿವಾಯ ಎಂಬ ಮಂತ್ರವನ್ನು ಪಠಿಸುತ್ತಲೇ, ಪೂಜೆ ಸಲ್ಲಿಸುವ ಪರಿ ನಿಜಕ್ಕೂ ಅದ್ಭುತ ಮತ್ತು ಅನನ್ಯವೇ ಸರಿ. ಬಡವಿಲಿಂಗನನ್ನು ನೋಡಲು ಬರುವ ವಿದೇಶಿಗರ ಬಾಯಿಯಲ್ಲೂ, ಓಂ ನಮಃ ಶಿವಾಯ ಮಂತ್ರೋಚ್ಚಾರ ಮಾಡಿಸುವುದೂ, ಭಟ್ಟರ ವೈಶಿಷ್ಟ್ಯಗಳಾಗಿದೆ.
ಸುಮಾರು ಅರ್ಧ ಗಂಟೆಗಳ ಕಾಲ ನಡೆಯುವ ಈ ಪೂಜಾ ಕೈಂಕರ್ಯವನ್ನು ಒಂದು ದಿನವೂ ತಪ್ಪಿಸದೇ ನಡೆಸಿಕೊಂಡು ಹೋಗುತ್ತಿರುವ ಈ ತೊಂಬ್ಬತ್ತರ ವಯೋವೃದ್ಧರ ದೈವಭಕ್ತಿಯನ್ನು ಎಷ್ಟು ಹೊಗಳಿದರೂ ಸಾಲದು. ಈ ಇಳೀ ವಯಸ್ಸಿನಲ್ಲಿಯೂ ಛಾವಣಿ ಇಲ್ಲದ ಆ ದೇವಾಲಯದಲ್ಲಿ ಅರ್ಧಗಂಟೆಗಳ ಕಾಲ ತಣ್ಣನೆಯ ನೀರಲ್ಲಿ ನಿಂತು ನಡೆಸುವ ಪೂಜೆ ಭಕ್ತಾದಿಗಳ ಮುದವನ್ನು ಹೆಚ್ಚಿಸುವುದಲ್ಲದೇ, ಯಾವುದೇ ಸ್ವಾರ್ಥವಿಲ್ಲದೇ, ಕೇವಲ ಭಗವಂತನ ಸೇವಾ ಮನೋಭಾವದಿಂದ ಪೂಜೆ ಮಾಡುವ ಕೃಷ್ಣ ಭಟ್ಟರ ಮೇಲಿನ ಗೌರವವನ್ನು ಹೆಚ್ಚಿಸುತ್ತದೆ. ಇದಕ್ಕಿಂತಲೂ ಗಮನಾರ್ಹವಾದ ಅಂಶವೆಂದರೆ, ಶ್ರೀಯುತರು ಯಾರೊಂದಿಗೂ ಕಾಣಿಕೆಯನ್ನಾಗಲೀ, ದಕ್ಷಿಣೆಯನ್ನಾಗಲೀ ಕೇಳುವುದೂ ಇಲ್ಲ ಮತ್ತು ಬಯಸುವುದೂ ಇಲ್ಲ. ಹಾಗೊಮ್ಮೆ ಪ್ರವಾಸಿಗಳು ಮತ್ತು ಭಕ್ತಾದಿಗಳು ಸ್ವಯಂಪ್ರೇರಿತರಾಗಿ ಒಂದಷ್ಟು ಕಾಣಿಕೆ ಸಲ್ಲಿಸಿದರೆ, ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವಂತೆ ಆ ಕಾಣಿಕೆಯ ಬಹುಪಾಲು ಮೊತ್ತವನ್ನು ಗೋಪೂಜೆ ಮತ್ತಿತರ ಧಾರ್ಮಿಕ ಕಾರ್ಯಗಳಿಗೆ ವಿನಿಯೋಗಿಸುವುದು ನಿಜಕ್ಕೂ ಅಭಿನಂದನಾರ್ಹ ಮತ್ತು ದೇವರ ಹೆಸರಿನಲ್ಲಿ ದುಡ್ಡನ್ನು ಮಾಡುವವರಿಗೆ ಅನುಕರಣಿಯವೇ ಆಗಿದೆ.
ಕೃಷ್ಣಭಟ್ಟರು ತಮ್ಮೀ ಈ ನಿಸ್ವಾರ್ಥ ಸೇವೆ ಮತ್ತು ಪರಿಶ್ರಮದಿಂದಾಗಲೇ ಸ್ಥಳೀಯವಾಗಿ ಅಪಾರ ಗೌರವವನ್ನು ಗಳಿಸಿರುವುದಲ್ಲದೇ ಅನೇಕ ಯುವಕರಿಗೆ ಮಾರ್ಗದರ್ಶಿಗಳಾಗಿದ್ದಾರೆ. ಹಾಗಾಗಿ ಹಂಪೆಯ ಪ್ರವಾಸಿಗರಿಗೆ ಹಂಪೆಯ ಪರಿಚಯ ಮಾಡಿಕೊಡುವ ಪ್ರವಾಸಿ ಗೈಡ್‍ಗಳೂ ಖಡ್ಡಾಯವಾಗಿ ಪ್ರವಾಸಿಗರಿಗೆ ಈ ಬಡವಿ ಲಿಂಗದ ದರ್ಶನ ಮಾಡಿಸಿ ಇಲ್ಲಿಯ ಐತಿಹ್ಯದೊಂದಿಗೆ ಈ ವಯೋವೃದ್ದ ಕೃಷ್ಣ ಭಟ್ಟರ ಸೇವಾ ಕೈಂಕರ್ಯಗಳ ಬಗ್ಗೆ ಮೆಚ್ಚುಗೆ ಮಾತನಾಡಿಯೇ ಮುಂದುವರೆಯುತ್ತಾರೆ.
ದೇಶಾದ್ಯಂತ ಮುಸ್ಲಿಮ್ಮರು ಹಿಂದೂಗಳ ಮೇಲೆ ಒಂದಲ್ಲಾ ಒಂದು ಕ್ಷುಲ್ಲಕ ಕಾರಣಕ್ಕೆ ಬಡಿದಾಡುತ್ತಿದ್ದರೆ, ಕೃಷ್ಣ ಭಟ್ಟರು ಮತ್ತು ಅವರ ಮುಸ್ಲಿಂ ಅನುಯಾಗಿಗಳಾದ ಪೀರ್‌ಸಾಬ್ ಮತ್ತು ಅಬ್ಬಾಸ್ ಅವರ ಗೆಳೆತನ ಭಾವೈಕ್ಯ ಸಂಗಮಕ್ಕೆ ಮುನ್ನುಡಿಯಾಗಿದೆ. ಕೃಷ್ಣಭಟ್ಟರು ಮನೆಯಿಂದ ಸ್ವಲ್ಪವೇ ದೂರದ ರಸ್ತೆ ಬದಿಯಲ್ಲಿ ಸಣ್ಣದಾದ ಟೀ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿರುವ ಪೀರ್‌ಸಾಬ್ ಮಟ ಮಟ ಮಧ್ಯಾಹ್ನ ದೇವಸ್ಥಾನಕ್ಕೆ ಹೋಗಲು ಕೋಲೂರಿಕೊಂಡು ನಡುಗುತ್ತಾ ಇವರ ಅಂಗಡಿಯ ಮುಂದೆ ಹಾದು ಹೋಗುತ್ತಿದ್ದಂತೆಯೇ, ತಮ್ಮೆಲ್ಲಾ ಕೆಲಸಗಳನ್ನು ಬದಿಗೊತ್ತಿ ತಮ್ಮ ಬೈಕಿನಲ್ಲಿ ಶ್ರೀ ಕೃಷ್ಣಭಟ್ಟರನ್ನು ಕೂರಿಸಿಕೊಂಡು ದೇವಾಲಯದ ದ್ವಾರದ ಬಳಿ ಇಳಿಸಿಹೋಗುತ್ತಾರೆ. ಪೂಜೆಗಳೆಲ್ಲವೂ ನಿರ್ವಿಘ್ನವಾಗಿ ಮುಗಿಸಿ, ದೇವಾಲಯದ ಹೊರಗೆ ಒಂದೆರೆಡು ಕಲ್ಲುಗಳನ್ನು ಇಟ್ಟು ಮಾಡಿರುವ ಮಾಡಿರುವ ಜಗುಲಿಯ ಮೇಲೇ ಶಿವನಾಮ ಸ್ಮರಣೆ ಮಾಡುತ್ತಲೋ ಇಲ್ಲವೇ ಪುರಾಣ ಪುಣ್ಯಕಥೆಗಳನ್ನು ಓದುತ್ತಲೂ ಕುಳಿತುಕೊಳ್ಳುವ ಕೃಷ್ಣಭಟ್ಟರು ಬರುವ ಪ್ರವಾಸಿಗರಿಗೆ ಮತ್ತು ಭಕ್ತಾದಿಗಳಿಗೆ ಅಭಿಷೇಕದ ತೀರ್ಥವನ್ನು ಪ್ರೋಕ್ಷಿಸಿ ಆಶೀರ್ವಾದಿಸುತ್ತಾರೆ ಸಂಜೆ ಪುರಾತತ್ವ ಇಲಾಖೆಯ ಸಿಬ್ಬಂದಿ, ಬಾಗಿಲು ಮುಚ್ಚುತ್ತಿದ್ದಂತೆಯೇ ಇವರೂ ಸಹಾ ಮನೆಗೆ ಹೊರಡಲು ಸಿದ್ಧರಾದಾಗ, ಅದೇ ದೇವಸ್ಥಾನದ ಬಳಿ ಕಬ್ಬಿನ ಹಾಲು ಮತ್ತು ಸೋಡಾದ ಮೂಲಕ ಪ್ರವಾಸಿಗರ ದಾಹವನ್ನು ತೀರಿಸುವ ಕಾಯಕ ಮಾಡಿಕೊಂಡಿರುವ ಅಬ್ಬಾಸ್ ತಮ್ಮ ಬೈಕಿನಲ್ಲಿ ಕೃಷ್ಣಭಟ್ಟರನ್ನು ನಿಧಾನವಾಗಿ ಹತ್ತಿಸಿಕೊಂಡು ಮನೆಗೆ ಕರೆದುಕೊಂಡು ಬಂದು ಬಿಡುತ್ತಾರೆ. ಇದೇ ಅಬ್ಬಾಸ್ ದೇವರ ಪೂಜೆಗೆಂದು ಹೂವು ಮತ್ತು ಬಾಳೆಎಲೆಯನ್ನೂ ಹಲವಾರು ಬಾರಿ ತಂದು ಕೊಡುತ್ತಾರೆ. ಕೃಷ್ಣ ಭಟ್ಟರ ಬಡವಿಲಿಂಗನ ಪ್ರತೀದಿನದ ಸೇವಾ ಕೈಕಂರ್ಯದಲ್ಲಿ ಅಬ್ಬಾಸ್ ಮತ್ತು ಪೀರ್ ಸಾಬ್ ಅವರ ಈ ಅಳಿಲು ಸೇವೆಯೂ ಸೇರಿಕೊಂಡಿದೆ. ಎಲ್ಲೋ ಕೆಲವೊಮ್ಮೆ ಪರಿಚಯಸ್ಥರು ಮತ್ತು ಕೆಲ ಆಟೊ ಚಾಲಕರೂ ಈ ಸೇವೆಯಲ್ಲಿ ಪಾಲ್ಕೊಳ್ಳುವ ಮೂಲಕ ಒಂದು ರೀತಿಯಲ್ಲಿ ಅಲ್ಲಿನವರಿಗೆ ಮೆಚ್ಚಿನ ಅಜ್ಜನಾಗಿದ್ದಾರೆ ಶ್ರೀ ಕೃಷ್ಣಭಟ್ಟರು ಎಂದರೂ ತಪ್ಪಾಗಲಾರದು.
ಬಾಗಿದ ದೇಹ, ನಡುಗುವ ಕೈ ಕಾಲು, ಮಂದವಾಗಿರುವ ಕಿವಿ, ಮಂಜಾಗಿರುವ ಕಣ್ಣು ಇಷ್ಟೆಲ್ಲಾ ಇದ್ದರೂ ಪ್ರತಿನಿತ್ಯವೂ ಮಳೆ-ಗಾಳಿ-ಬಿಸಲು ಯಾವುದನ್ನೂ ಲೆಕ್ಕಿಸದೇ ಬಡವಿ ಲಿಂಗಕ್ಕೆ ತಪ್ಪಿಸದೇ ಪೂಜೆ ಸಲ್ಲಿಸುತ್ತಿರುವ ಶ್ರೀ ಕೃಷ್ಣ ಭಟ್ಟರನ್ನು ಮತ್ತು ಬಡವಿ ಲಿಂಗವನ್ನು ಮುಂದಿನ ಬಾರಿ ಹಂಪೆಗೆ ಹೋದಾಗ ನೋಡಲು ಮರೆಯದಿರೋಣ. ಅಲ್ಲಿಯ ವರೆಗೂ ಆ ಬಡವಿ ಲಿಂಗನೇ ಅವರ ಪರಮಾಪ್ತ ಭಕ್ತರಾದ ಶ್ರೀ ಕೃಷ್ಣ ಭಟ್ಟರಿಗೆ ಆಯುರಾರೋಗ್ಯ ನೀಡಿ ಇನ್ನೂ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸುವ ಭಾಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ ಅಲ್ಲವೇ?
ಏನಂತೀರೀ?
ದಿ.25.04.2021 ಭಾನುವಾರದಂದು ಶ್ರೀ ಕೃಷ್ಣ ಭಟ್ಟರು ನಿಧನರಾಗಿದ್ದಾರೆ. ಭಗವಂತ ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಎಂದು ಪ್ರಾರ್ಥಿಸೋಣ.
ಚಿತ್ರಗಳು: ಅಂತರ್ಜಾಲದಿಂದ ಎರವಲು ಪಡೆದದ್ದು.