ಈ ಚಿತ್ರವನ್ನು ನೋಡಿದಾಕ್ಷಣವೇ, ಅರೇ ಇದೇನಿದು ಅಶ್ಲೀಲ ಚಿತ್ರವನ್ನು ಹಾಕಿದ್ದಾರಲ್ಲಾ ಎಂದು ಯೋಚಿಸಬಹುದು. ಇಲ್ವೇ, ಇದೇನಿದು? ಸೆರೆಮನೆಯಲ್ಲಿರುವ ಈ ಇಳೀ ವಯಸ್ಸಿನವ ಸಣ್ಣ ವಯಸ್ಸಿನ ಹುಡುಗಿಯೊಂದಿಗೆ ಕಾಮಕೇಳಿಯಲ್ಲಿ ತೊಡಗಿದ್ದಾರಲ್ಲಾ? ಎಂಬ ಅನುಮಾನವೂ ಮೂಡಿ ಬರಬಹುದು ಆದರೆ ಈ ಪ್ರಸಂಗದ ಹಿಂದಿನ ಐತಿಹಾಸಿಕ ಕರಾಳ ಕಥನವನ್ನು ತಿಳಿದರೇ ಎಲ್ಲರಿಗೂ ಬೇಸರವಾಗುವುದಲ್ಲದೇ ಮಮ್ಮಲ ಮರುಗದೇ ಇರುವುದಿಲ್ಲ.
ಫ್ರಾನ್ಸ್‌ನಲ್ಲಿ ಲೂಯಿಸ್ XIV ಆಳ್ವಿಕೆಯ ಕಾಲದಲ್ಲಿ ವಯಸ್ಸಾದ ವೃದ್ಧರೊಬ್ಬರು ಹಸಿವಿನಿಂದಾಗಿ ರೊಟ್ಟಿಯನ್ನೂ ಕೊಳ್ಳಲೂ ಹಣವಿಲ್ಲದಿದ್ದ ಕಾರಣ ಅಂಗಡಿಯೊಂದರಲ್ಲಿ ರೊಟ್ಟಿಯೊಂದನ್ನು ಕದ್ದಿದ್ದಕ್ಕಾಗಿ ಆ ಬಡ ವೃದ್ಧರನ್ನು ಸರೆಮನೆಗೆ ತಳ್ಳಿ ವಿಶಿಷ್ಟವಾದ ಮರಣದಂಡನೆಯಾದ ಹಸಿವಿನಿಂದಲೇ ಮರಣ ಎಂಬ ಶಿಕ್ಷೆಯನ್ನು ವಿಧಿಸಲಾಯಿತು. ಈ ಶಿಕ್ಷೆಯ ಪ್ರಕಾರ ಆ ವೃದ್ಧರಿಗೆ ಸೆರೆಮನೆಯಲ್ಲಿ ಯಾವುದೇ ಆಹಾರವನ್ನು ಕೊಡದೇ ಸಾಯಬೇಕಾಗಿತ್ತು. ಅಪ್ಪನಿಗೆ ಈ ರೀತಿಯ ಶಿಕ್ಷೆಯನ್ನು ವಿಧಿಸಿದ್ದದ್ದನ್ನು ಆತನ ಆಸರೆಯಾಗಿ ಅವರ ಮಗಳಿಗೆ ತಡೆಯಲಾಗಲಿಲ್ಲ. ಹಾಗಾಗಿ ಅಪ್ಪ ಸಾಯುವವರೆಗೂ ಪ್ರತೀ ದಿನವೂ ಸೆರೆಮನೆಯಲ್ಲಿ ಅಪ್ಪನನ್ನು ನೋಡಲು ಅವಕಾಶ ಕೊಡಬೇಕೆಂದೆಂದು ಆ ವೃದ್ಧರ ಏಕೈಕ ಮಗಳು ಸೆರೆಮನೆಯ ಅಧಿಕಾರಿಗಳಲ್ಲಿ ಕೇಳಿಕೊಂಡಳು. ಆರಂಭದಲ್ಲಿ ಒಪ್ಪಿಕೊಳ್ಳದಿದ್ದರೂ, ಹಸಿವಿನಿಂದ ಇನ್ನೆಷ್ಟು ದಿನ ಬದುಕಬಹುದು ಎಂದೆಣಿಸಿದ ಆ ಅಧಿಕಾರಿಗಳು, ಮಾನವೀಯತೆಯ ದೃಷ್ಟಿಯಿಂದ ಆಕೆಗೆ ಪ್ರತಿದಿನವೂ ಅವಳ ತಂದೆಯನ್ನು ಭೇಟಿ ಮಾಡಲು ಷರತ್ತು ಬದ್ಧ ಅನುಮತಿ ನೀಡಲಾಗಿತ್ತು. ಆ ಷರತ್ತಿನ ಪ್ರಕಾರ ತಂದೆಯನ್ನು ನೋಡಲು ಹೋಗುವಾಗ ಆಕೆ ಯಾವುದೇ ಆಹಾರವನ್ನು ತೆಗೆದುಕೊಂಡು ಹೋಗಬಾರದಾಗಿತ್ತು. ಹಾಗಾಗಿ ಪ್ರತೀ ದಿನವವೂ ಆಕೆ ತನ್ನ ತಂದೆಯನ್ನು ಭೇಟಿ ಮಾಡಲು ಬರುವಾಗಲೆಲ್ಲಾ ಆಕೆಯನ್ನು ಪರೀಕ್ಷೆ ಮಾಡಿ ಒಳಗೆ ಕಳುಹಿಸಲಾಗುತ್ತಿತ್ತು. ಇಷ್ಟೆಲ್ಲಾ ಕಠಿಣ ಪರಿಸ್ಥಿತಿಯಲ್ಲಿಯೂ ಆಕೆಯ ತಂದೆ 4 ತಿಂಗಳ ನಂತರವೂ ಜೀವಂತವಾಗಿ ಮತ್ತು ಆರೋಗ್ಯವಾಗಿ ಇರುವುದನ್ನು ನೋಡಿ ಸೆರೆಮನೆಯ ಅಧಿಕಾರಿಗಳು ಗೊಂದಲಕ್ಕೊಳಗಾದರು. ಅವರ ಆರೋಗ್ಯದ ಹಿಂದಿನ ರಹಸ್ಯದ ಕುರಿತಂತೆ ಕಂಡು ಹಿಡಿಯಲು ಅವಳ ಹಿಂದೆ ಬೇಹುಗಾರಿಕೆಯೊಂದನ್ನು ನಿಯೋಜಿಸಿದ ನಂತರ ಅದರ ಹಿಂದಿನ ವಿಷಯ ತಿಳಿದ ನಂತರ ಅವರು ಅಚ್ಚರಿಗೆ ಒಳಗಾಗಿದ್ದಂತೂ ಸುಳ್ಳಲ್ಲ.
ಆಕೆ ಆಗಷ್ಟೇ ಬಾಣಂತಿಯಾಗಿದ್ದು ತನ್ನ ಮಗುವಿಗೆ ಹಾಲುಣಿಸುವ ತಾಯಿಯಾಗಿರುತ್ತಾಳೆ. ಅಂತಹ ಬಾಣಂತೀ ಮಗಳು ಮೊದಲ ದಿನ ಉಪವಾಸದಿಂದ ಸೊರಗಿ ಹೋಗಿದ್ದ ತನ್ನ ತಂದೆಯನ್ನು ಸೆರೆಮನೆಯಲ್ಲಿ ನೋಡಿದಾಗ ಆಕೆಯ ಕರುಳು ಚುರುಕ್ ಎನಿಸುತ್ತದೆ. ಅಯ್ಯೋ ಮಗಳಾಗಿ ತಾನು ತಂದೆಗೆ ಸಹಾಯ ಮಾಡಲು ಆಗುತ್ತಿಲ್ಲವಲ್ಲಾ ಎಂಬ ಯೋಜನೆಯಲ್ಲಿಯೇ ಆಕೆಗೆ ಇಡೀ ರಾತ್ರಿ ನಿದ್ದೆಯೇ ಬಾರದೇ ಬೆಳಗಿನ ಜಾವದಲ್ಲಿ ಆಕೆಗೆ ಒಂದು ಅದ್ಭುತವಾದ ಅಲೋಚನೆ ಹೊಳೆಯುತ್ತದಾದರೂ, ಅದಕ್ಕೆ ತನ್ನ ತಂದೆಯವರ ಪ್ರತಿಕ್ರಿಯೆ ಹೇಗಿರ ಬಹುದು? ತನ್ನ ಅಲೋಚನೆಗೆ ತಂದೆ ಒಪ್ಪಿಕೊಳ್ಳುತ್ತಾರಾ? ಎಂಬ ಯೋಚನೆಯಲ್ಲಿಯೇ ಮಾರನೆಯ ದಿನ ತಂದೆಯನ್ನು ನೋಡಲು ಲಗು ಬಗನೇ ಹೋಗುತ್ತಾಳೆ. ಎರಡು ದಿನಗಳಿಂದ ಒಂದು ಚೂರೂ ಆಹಾರವಿಲ್ಲದೇ ನಿತ್ರಾಣರಾಗಿದ್ದ ತನ್ನ ತಂದೆಯವರನ್ನು ತನ್ನ ಹತ್ತಿರ ಕರೆದು ಅವರ ತಲೆಯನ್ನು ನೀವಳಿಸಿ, ನೀವು ಈ ರೀತಿಯಲ್ಲಿ ಹಸಿವಿನಿಂದ ಸಾಯುವುದನ್ನು ನೋಡಲಾರೆ ಹಾಗಾಗಿ ದಯವಿಟ್ಟು ತನ್ನ ಸ್ತನಪಾನ ಮಾಡಿ ಎಂದು ಬೇಡಿಕೊಳ್ಳುತ್ತಾಳೆ. ಆಕೆಯ ಕೋರಿಕೆಯನ್ನು ಕೇಳಿ ಅಂತಹ ನಿತ್ರಾಣ ಸ್ಥಿತಿಯಲ್ಲಿಯೂ ಹೌರಾರುತ್ತಾರೆ. ಮಗಳ ಪರಿ ಪರಿಯಾದ ಬೇಡಿಕೆಯ ನಂತರ ಉದರ ನಿಮಿತ್ತಂ ಬಹುಕೃತವೇಶಂ ಎನ್ನುವಂತೆ ಬಹಳ ನೋವಿನಿಂದಲೇ ಒಪ್ಪಿಕೊಂಡು ಪ್ರತೀ ದಿನವೂ ಆಕೆ ಅವರನ್ನು ನೋಡಲು ಬಂದಾಗ ತನ್ನ ಮಗಳ ಸ್ತನಪಾನ ಮಾಡುತ್ತಾ ಸುಮಾರು ನಾಲ್ಕು ತಿಂಗಳಗಳ ಕಾಲ, ಕಾಲ ತಳ್ಳಿರುತ್ತಾರೆ.
ಆ ಸೆರೆಮನೆ ಅಧಿಕಾರಿಗಳು ತಂದೆಯೊಂದಿಗೆ ಆಕೆಯನ್ನೂ ಬಂಧಿಸಿ, ಅವಳನ್ನು ನ್ಯಾಯಾಧೀಶರ ಬಳಿಗೆ ಕೊಂಡೊಯ್ಯುತ್ತಾರೆ. ತನ್ನ ತಂದೆಯ ಪ್ರಾಣವನ್ನು ಉಳಿಸಿಕೊಳ್ಳಲು ತನ್ನ ಮಗುವಿನ ಹಾಲನ್ನು ತಂದೆಯೊಂದಿಗೆ ಹಂಚಿಕೊಳ್ಳುತ್ತಿದ್ದ ವಿಷಯವನ್ನು ಕೇಳಿ ನ್ಯಾಯಾಧೀಶರು ಆಶ್ವರ್ಯ ಚಕಿತರಾಗಿದ್ದಲ್ಲದೇ, ತನ್ನ ತಂದೆಯ ಬಗ್ಗೆ ಮಹಿಳೆಯ ಕರುಣೆ ಮತ್ತು ಪ್ರೀತಿಯನ್ನು ಅರಿತು ಮತ್ತೆ ಮಾನವೀಯತೆಯಿಂದ ಆಕೆಯನ್ನೂ ಮತ್ತು ಅವಳ ತಂದೆಯನ್ನೂ ಕ್ಷಮಿಸಿ ಅವರಿಬ್ಬರನ್ನೂ ಬಂಧನದಿಂದ ಮುಕ್ತಗೊಳಿಸುತ್ತಾರೆ.
ತಂದೆ ಮತ್ತು ಮಗಳ ನಡುವಿನ ಈ ರೀತಿಯ ನಡವಳಿಕೆಯು ಅನೇಕರಿಗೆ ಕೋಪ ತರಿಸಿದ್ದಲ್ಲದೇ, ಅನೇಕರು ಇದೊಂದು ಅನೈತಿಕ ಸಂಬಂಧದ ರೀತಿ ಇದೆ ಎಂದೇ ವಿರೋಧಿಸುವವರೂ ಇದ್ದರು. ಇಷ್ಟೆಲ್ಲಾ ವಿರೋದಾಭಾಸಗಳ ನಡುವೆಯೂ, ಈ ಪ್ರಸಂಗ ಅನೇಕ ಯುರೋಪಿಯನ್ ಚಿತ್ರಕಾರರಿಗೆ ಪ್ರೇರಣೆ ನೀಡಿದ್ದಲ್ಲದೇ 17 ಮತ್ತು 18 ನೇ ಶತಮಾನಗಳ ಇತರ ಯುರೋಪಿಯನ್ ಕಲಾವಿದರು ಸೇರಿದಂತೆ ಪೀಟರ್ ಪಾಲ್ ರುಬೆನ್ಸ್, ಹ್ಯಾನ್ಸ್ ಸೆಬಾಲ್ಡ್ ಬೆಹಮ್, ರೆಂಬ್ರಾಂಡ್ ಪೀಲೆ ಮತ್ತು ಕ್ಯಾರಾವಾಜಿಯೊ ಈ ಕಥೆಯನ್ನು ವರ್ಣಚಿತ್ರಗಳ ಮೂಲಕ ಚಿತ್ರಿಸಿದ್ದಾರೆ.
ಇತ್ತೀಚೆಗೆ ಸೆರೆಮನೆಯಲ್ಲಿರುವ ವೃದ್ಧರೊಬ್ಬರಿಗೆ ಯುವತಿಯೊಬ್ಬಳು ಹಾಲುಣಿಸುವ ಈ ವರ್ಣಚಿತ್ರವು 30 ದಶಲಕ್ಷಕ್ಕೆ ಮಾರಾಟವಾಗಿದೆ ಎಂದು ತಿಳಿದುಬಂದಿದೆ. ನೋಡಲು ಈ ಚಿತ್ರಕಲೆ ವಿಕೃತವಾಗಿ ಮತ್ತು ಅಶ್ಲೀಲವಾಗಿ ಕಾಣಿಸಿದರೂ ಆದರ ಹಿಂದಿನ ಐತಿಹಾಸಿಕ ಕಥೆ ತಿಳಿದ ಮೇಲೆ ಎಲ್ಲರೂ ಮರುಗಿ ಈ ಚಿತ್ರವನ್ನು ಇಷ್ಟ ಪಟ್ಟಿದ್ದಲ್ಲದೇ, ನಮ್ಮ ದೈನಂದಿನ ಜೀವನದಲ್ಲಿ ಮಹಿಳೆಯ ಸಹಾನುಭೂತಿ ಎಷ್ಟು ಆಳವಾಗಿದೆ ಮತ್ತು ಆಕೆ ಕ್ಷಮಯಾಧರೀತ್ರೀ ಎಂಬುದಕ್ಕೆ ಜ್ವಲಂತ ಉದಾಹರಣೆಯಾಗಿದೆ ಈ ಪ್ರಸಂಗ. ಅದಕ್ಕೇ ಹೇಳೋದು ಪ್ರತ್ಯಕ್ಷಿಸಿ ನೋಡಿದರೂ ಪ್ರಮಾಣಿಸಿ ನೋಡಬೇಕು ಮತ್ತು ಪ್ರತಿಯೊಂದನ್ನೂ ಪ್ರಶ್ನಿಸಬೇಕು ಮತ್ತು ಪರಿಹರಿಸಿಕೊಳ್ಳಬೇಕು. ಎಲ್ಲದ್ದಕ್ಕಿಂತಲೂ ಮೊದಲು ಧನಾತ್ಮಕವಾದ ಚಿಂತನೆಯಿಂದ ನೋಡುವ ಮನಸ್ಥಿತಿಯನ್ನು ಬೆಳೆಸಿಕೊಂಡಾಗ ಈ ಚಿತ್ರ ಅಶ್ಲೀಲವೆನಿಸುವುದಿಲ್ಲ ಅಲ್ಲವೇ?
ಏನಂತೀರೀ?
ಮನಕಲಕುವಂತಹ ಕಥೆ. ಅಪರೂಪದ ಕಥೆಯನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು.
LikeLiked by 1 person
ಧನ್ಯೋಸ್ಮಿ
LikeLike