ಹೊಟ್ಟೇ ತುಂಬಾ ಊಟ ಮಾಡಿ, ಇಷ್ಟ ಬಂದಷ್ಟು ಹಣ ಕೊಡಿ.

ಸಾಮಾನ್ಯವಾಗಿ ಬಹುತೇಕ ಮಧ್ಯಮವರ್ಗದ ಜನರು ಹೋಟೇಲ್ಲಿಗೆ ಹೋದ ತಕ್ಷಣ ಸರ್ವರ್ ಮೆನು ಕಾರ್ಡ್ ಕೈಗೆ ಕೊಟ್ಟೊಡನೆಯೇ ಅದರಲ್ಲಿ ಯಾವ ಯಾವ ಖಾದ್ಯಗಳಿವೆ ಎಂಬುದನ್ನು ನೋಡುವುದಕ್ಕಿಂತಲೂ ಯಾವುದರ ಬೆಲೆ ಎಷ್ಟಿದೆ? ನಮ್ಮಬಳಿ ಇರುವ ಬೆಲೆಗೆ ಯಾವ ತಿಂಡಿ ಸರಿ ಹೊಂದಬಹುದು ಎಂದೇ ಲೆಖ್ಖಾಚಾರ ಹಾಕುವುದು ಸರ್ವೇ ಸಾಮಾನ್ಯ. ಕೆಲವು ವರ್ಷಗಳ ಹಿಂದೆ ನಮ್ಮ ಮಕ್ಕಳನ್ನು ಒಂದು ದೊಡ್ಡ ಹೊಟೇಲ್ ಒಂದಕ್ಕೆ ಕರೆದುಕೊಂಡು ಹೋಗಿದ್ದಾಗ ನಮ್ಮ ಮಗಳು ಆ ಹೋಟೇಲ್ಲಿನ ಖಾದ್ಯಗಳ ಬೆಲೆಯನ್ನು ನೋಡಿದ ಕೂಡಲೇ ಅಪ್ಪಾ, ಈ ಹೋಟೇಲ್ ಬೇಡಾ, ಬೇರೇ ಯಾವುದಾದರೂ ಹೋಟೆಲ್ಲಿಗೆ ಹೋಗೋಣ ನಡೀರಿ ಎಂದಾಗಾ, ಯಾಕೋ ಪುಟ್ಟಾ ಎಂದು ಕೇಳಿದ್ದಕ್ಕೇ, ಅಯ್ಯೋ ರಾಮ ಇಲ್ಲಿನ ಒಂದು ತಿಂಡಿಯ ಬೆಲೆಯಲ್ಲಿಯೇ ಹೊರಗಡೇ, ನಾವೆಲ್ಲರೂ ಹೊಟ್ಟೇ ತುಂಬಾ ತಿನ್ನಬಹುದು ಎಂದು ತನ್ನ ಕಕ್ಕುಲತಿಯನ್ನು ತೋರಿದ್ದಳು. ಊಟಕ್ಕೆ ಬಂದಾಗ ಬೆಲೆಯನ್ನೆಲ್ಲಾ ನೋಡಬಾರದು. ಇಲ್ಲಿಯ ಬೆಲೆಯೆಲ್ಲಾ ತಿಳಿದೇ, ಇಲ್ಲಿಗೆ ಕರೆದುಕೊಂಡು ಬಂದಿದ್ದೀನಿ. ಸುಮ್ಮನೇ ಉತ್ತಮವಾದ ಆಹಾರ ಸವಿಯಿರಿ ಎಂದಿದ್ದೆ.

ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ ಅಂದ್ರೇ, ದೂರದ ಸಿಂಗಾಪುರದಲ್ಲಿರುವ ಅನ್ನಲಕ್ಷ್ಮಿ ಎಂಬ ಭಾರತೀಯರ ಹೋಟೇಲ್, ಅದರಲ್ಲೂ ದಕ್ಷಿಣ ಭಾರತೀಯ ತಿಂಡಿ ತಿನಿಸುಗಳ ಈ ಹೋಟೇಲ್ಲಿನಲ್ಲಿ ಈ ಲೇಖನ ಶೀರ್ಷಿಕೆಯಂತೆ ಹೊಟ್ಟೇ ತುಂಬಾ ಊಟ ಮಾಡಿ ಮನಸ್ಸಿಗೆ ಇಷ್ಟ ಬಂದಷ್ಟು ಹಣ ಕೊಡುಬಹುದಾಗಿದೆ. ಆ ಹೋಟೇಲ್ ಬಗ್ಗೆಯೇ ನಾನಿಂದು ನಿಮಗೆ ತಿಳಿಸಿಕೊಡಲು ಇಚ್ಚಿಸುತ್ತಿದ್ದೇನೆ.

ಅನ್ನಲಕ್ಷ್ಮಿ ಎಂಬ ಸಸ್ಯಾಹಾರಿ ರೆಸ್ಟೋರೆಂಟ್‌ಗಳು ಒಂದು ಅಂತರರಾಷ್ಟ್ರೀಯ ಹೋಟೆಲ್ಲುಗಳ ಸರಪಳಿಯಾಗಿದ್ದು, ಮಾನವೀಯತೆಯ ಮೇಲಿನ ನಂಬಿಕೆಗಳ ಮೇಲೆ ಮತ್ತು ಅನ್ನದಾತೋ ಸುಖೀಭವ ಎಂಬ ಅಸಾಮಾನ್ಯ ತತ್ತ್ವದ ಮೇಲೆ ಕಾರ್ಯನಿರ್ವಹಿಸುವ ಲಾಭರಹಿತ ಸಂಸ್ಥೆಯಾದ ಟೆಂಪಲ್ ಆಫ್ ಫೈನ್ ಆರ್ಟ್ಸ್ (ಟಿಎಫ್‌ಎ)ನ ಪಾಕಶಾಲೆಯ ಒಂದು ವಿಭಾಗವಾಗಿದೆ. 1984ರಲ್ಲಿ ಮಲೇಷ್ಯಾದಲ್ಲಿ ಮೊತ್ತ ಮೊದಲಬಾರಿಗೆ ಈ ಅನ್ನಲಕ್ಷ್ಮಿ ಹೋಟೇಲ್ ಆರಂಭವಾಗಿ ನಂತರ ಆಸ್ಟ್ರೇಲಿಯಾ, ಸಿಂಗಾಪುರದಲ್ಲಿ ಆರಂಭವಾದ ನಂತರ ಭಾರತದ ಕೊಯಮತ್ತೂರಿನಲ್ಲಿ 1989 ರಲ್ಲಿ ಪ್ರಾರಂಭವಾಗಿ, ಚೆನ್ನೈ ಸೇರಿದಂತೆ ಅನೇಕ ಕಡೆ ಇದರ ಶಾಖೆಗಳು ಆರಂಭವಾಗಿವೆ.

ಈ ಹೋಟೆಲ್ಲಿನ ಇನ್ನೂ ಒಂದು ಮಹತ್ವದ ವಿಷಯವೇನೆಂದರೆ, ಇಲ್ಲಿನ ಅಹಾರ ಪದ್ದತಿ ಶುದ್ಧ ಭಾರತೀಯ ಸಸ್ಯಹಾರವಾದರೂ ಈ ಹೋಟೆಲ್ಲಿನ ಪರಿಸರ ಮಾತ್ರಾ ಆಯಾಯಾ ಪ್ರದೇಶದ ಕಲಾವಿದರುಗಳನ್ನು ಬಳಸಿಕೊಂಡು ಪ್ರಾದೇಶಿಕ ಲಲಿತಕಲೆಗಳನ್ನು ಬೆಂಬಲಿಸುತ್ತಾ ಬಂದಿದೆ. ಇದೇ ಕಾರಣಕ್ಕಾಗಿ 2013 ರಲ್ಲಿ, ಚೆನ್ನೈ ಶಾಖೆಯು ಅತ್ಯುತ್ತಮ ದಕ್ಷಿಣ ಭಾರತೀಯ ರೆಸ್ಟೋರೆಂಟ್ (ಸ್ಟ್ಯಾಂಡ್-ಅಲೋನ್) ವಿಭಾಗದಲ್ಲಿ ಟೈಮ್ಸ್ ಫುಡ್ ಅಂಡ್ ನೈಟ್ ಲೈಫ್ ಪ್ರಶಸ್ತಿಯನ್ನೂ ಪಡೆದು ಕೊಂಡಿರುವುದು ಗಮನಾರ್ಹವಾದ ವಿಷಯವಾಗಿದೆ.

ಇನ್ನು ಶೀರ್ಷಿಕೆಯಲ್ಲಿ ತಿಳಿಸಿರುವಂತೆ ಸಿಂಗಾಪುರದ ಅನ್ನಲಕ್ಷ್ಮಿ ಹೋಟೆಲ್ಲಿನ ಬಗ್ಗೆ ಹೇಳಬೇಕೆಂದರೆ, ಇಲ್ಲಿ ಇತರೇ ಹೋಟೆಲ್ಲಿನಂತೆ ಯಾವುದೇ ಮೆನುವನ್ನು ನೀಡುವುದಿಲ್ಲ. ಬದಲಾಗಿ ಇಲ್ಲಿ ಆಹಾರವನ್ನು ಬಫೆ-ಶೈಲಿಯಲ್ಲಿ ಬಡಿಸಲಾಗುತ್ತದೆ. ಒಂದು ಕಡೆಯಲ್ಲಿ ಸ್ನೇಹಪರ ಬಾಣಸಿಗರು ನಮ್ಮ ಕಣ್ಣ ಮುಂದೆಯೇ ಬಿಸಿ ಬಿಸಿಯಾದ ಗರಿ ಗರಿಯಾದ ಅಷ್ಟೇ ರುಚಿ ರುಚಿಯಾದ ದೋಸೆಗಳನ್ನು ಮಾಡಿಕೊಡಲು ಸಿದ್ದರಿರುತ್ತಾರೆ. ಖಾಲೀ ದೋಸೆ, ತುಪ್ಪದ ದೋಸೆ, ಮಸಾಲಾ ದೋಸೆಯ ಜೊತೆಗೆ ಜಾಫ್ನಾ ದೋಸೆ (ಶ್ರೀಲಂಕಾ ರೀತಿಯದ್ದು) ಹೀಗೆ ನಾಲ್ಕೈದು ರೀತಿಯ ದೋಸೆಗಳನ್ನು ಎರಡು ಮೂರು ರೀತಿಯ ಚಟ್ನಿ ಮತ್ತು ಸಾಂಬಾರ್ ಒಟ್ಟಿಗೆ ಸವಿಯ ಬಹುದಾಗಿದೆ.

ಪರಿಮಳಯುಕ್ತ ಬಾಸ್ಮತಿ ಅಕ್ಕಿಯಿಂದ ಮಾಡಿದ ಬಗೆ ಬಗೆಯ ಅನ್ನದ ಭಕ್ಷಗಳು ಜೊತೆಗೆ ದಾಲ್ ವಿವಿಧ ರೀತಿಯ ಪಲ್ಯಗಳು, ದಕ್ಷಿಣ ಭಾರತೀಯ ತಿಳೀ ಸಾರು, ಹುಳಿ ಹೀಗೆ ಪ್ರತಿಯೊಂದು ಭಕ್ಷ್ಯಗಳಿಂದ ಹೊರಹೊಮ್ಮುವ ಪರಿಮಳವೇ ನಮ್ಮ ಹೊಟ್ಟೆಯನ್ನು ತುಂಬಿಸಿಬಿಡುತ್ತವೆ ಎಂದರೂ ಅತಿಶಯೋಕ್ತಿಯಾಗಲಾರದು. ಇದರ ಜೊತೆಗೆ ರೋಟೀ, ನಾನ್ ಮತ್ತು ಮೂಂಗ್ ಧಾಲ್ ನೆನಸಿಕೊಂಡರೇನೇ ಬಾಯಿಯಲ್ಲಿ ನೀರೂರಿಸುತ್ತದೆ. ಸ್ಥಳೀಯವಾಗಿಯೇ ಬಹಳ ವಿಶಿಷ್ಟವಾದ ನಾನಾ ರೀತಿಯ ಮಸಾಲೆಗಳ ರುಚಿಕರವಾದ ಮಿಶ್ರಣದಿಂದ ತಯಾರು ಮಾಡಿ ಉಣಬಡಿಸುವ ಆಹಾರವನ್ನು ವರ್ಣಿಸುವುದಕ್ಕಿಂದಲೂ ಸವಿದರೇ ಬಲು ಮಜವಾಗಿರುತ್ತದೆ.

ಊಟದ ನಂತರ ಹದವಾದ ಪರಿಮಳಯುಕ್ತ ಕೆನೆ ಮೊಸರಿಗೆ ದ್ರಾಕ್ಷಿ ಮತ್ತು ಅಲ್ಲಲ್ಲಿ ಬಾಯಿಗೆ ಸಿಕ್ಕಿ ರುಚಿಯನ್ನು ಹೆಚ್ಚಿಸುವ ಹುರಿದ ಗೋಡಂಬಿಯ ತುಣುಕಿನೊಂದಿಗೆ ಸರಿ ಪ್ರಮಾಣದಲ್ಲಿ ಸಕ್ಕರೆಯನ್ನು ಬೆರೆಸಿದ ಲಸ್ಸಿ ಕುಡಿದ ಮೇಲಂತೂ ಸ್ವರ್ಗಕ್ಕೆ ಮೂರೇ ಗೇಣು ಎನಿಸುವಂತೆ ಮಾಡುತ್ತದೆ. ನಿಜ ಹೇಳಬೇಕೆಂದರೆ ಇಲ್ಲಿನ ಆಹಾರ ಇತರೇ ಹೋಟೆಲ್ಲಿನಲ್ಲಿ ತಿನ್ನುವ ಆಹಾರದಂತೆ ಇರದೇ, ಮನೆಯಲ್ಲಿ ಪ್ರೀತಿ ಪೂರ್ವಕವಾಗಿ ಅಮ್ಮ ಮಾಡಿದ ಅಡುಗೆಯನ್ನು ತಿಂದಂತೆಯೇ ಒಂದು ರೀತಿಯ ಅನನ್ಯವಾದ ಅನುಭವವನ್ನು ಕೊಡುತ್ತದೆ.

ಅನ್ನಂ ಪರಬ್ರಹ್ಮ ಎನ್ನುವ ತತ್ವದಡಿಯಲ್ಲಿ ಹಸಿದವರಿಗೆ ಉತ್ಕೃಷ್ಟವಾದ ಆಹಾರವನ್ನು ಅನ್ನಲಕ್ಷ್ಮಿ ಹೋಟೆಲ್ಲಿನ ಸ್ವಯಂಸೇವಕರು ನೀಡಲು ಕಟಿ ಬದ್ಧರಾಗಿರುವ ಕಾರಣದಿಂದಲೇ ಇಷ್ಟು ಸುವ್ಯವಸ್ಥಿತವಾಗಿ ಈ ಹೋಟೇಲ್ ನಡೆದುಕೊಂಡು ಹೋಗುತ್ತಿದೆ. ಹೆಚ್ಚಿನವರು ತಮ್ಮ ಬಿಡುವಿನ ಸಮಯವನ್ನು ಈ ರೆಸ್ಟೋರೆಂಟಿನಲ್ಲಿ ಅಡುಗೆಗೆ ಸಹಾಯ ಮಾಡುವುದು, ತರಕಾರಿ ಹೆಚ್ಚುವುದು. ಆಹಾರ ಬಡಿಸುವುದು, ಪಾತ್ರೆ ತೊಳೆಯುವುದು ಹೀಗೆ ಹೋಟೆಲ್ ಸಂಬಂಧ ಪಟ್ಟ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದಲೇ, ಅನ್ನಲಕ್ಷ್ಮಿಯ ಮಾಲಿಕರು ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು ಒದಗಿಸುವುದರತ್ತ ಗಮನ ಹರಿಸುತ್ತಾರೆಯೇ ವಿನಃ ಲಾಭದ ಮೇಲೆ ಹೆಚ್ಚಿನ ಒತ್ತಡವನ್ನು ಹೇರುವುದಿಲ್ಲ. ಈ ರೆಸ್ಟೋರೆಂಟ್ ಹೆಚ್ಚಾಗಿ ಸ್ವಯಂಸೇವಕರ ನಿಸ್ವಾರ್ಥ ಮತ್ತು ಸಹಾನುಭೂತಿಯ ಸೇವೆಯ ಮುಖಾಂತರ ನಡೆಯುವ ಕಾರಣ ಇಲ್ಲಿನ ಆಹಾರಕ್ಕೆ ಬೆಲೆಯನ್ನು ನಿಗದಿಪಡಿಸುವುದು ಕಠಿಣವಾಗಿದೆ. ಇದೆಲ್ಲವನ್ನೂ ಅರಿತಿರುವ ಗ್ರಾಹಕರೂ ಸಹಾ ಹೊಟ್ಟೇ ತುಂಬಾ ತಿಂದು ಸುಮ್ಮನೇ ಖಾಲೀ ಕೈ ಬೀಸಿಕೊಂಡು ಹೋಗದೇ ಯಥೆಚ್ಚವಾಗಿ ಹಣವನ್ನು ಪಾವತಿಸಿಯೇ ಹೋಗುತ್ತಾರೆ. ಕನಿಷ್ಠ ಪಕ್ಷ 5- 10 $ ಪಾವತಿಸಿಯೇ ಹೋಗುವುದರಿಂದಾಗಿ ಈ ಹೋಟೆಲ್ ಇದುವರೆಗೂ ಚೆನ್ನಾಗಿ ನಡೆದುಕೊಂಡು ಹೋಗುತ್ತಿದೆ.

ಮುಂದಿನ ಬಾರಿ ಸಿಂಗಾಪುರಕ್ಕೆ ಹೋದಾಗ ತಪ್ಪದೇ ಈ ಕೆಳಕಂಡ ವಿಳಾಸದಲ್ಲಿರುವ ಅನ್ನಲಕ್ಷ್ಮಿ ಹೋಟೆಲ್ಲಿಗೆ ಹೋಗಿ ಶುಚಿ ರುಚಿಯಾದ ಊಟವನ್ನು ಸವಿದು. ಆ ಸಹಾನುಭೂತಿಯ ಸ್ವಯಂಸೇವಕರು ಮತ್ತು ಅವರ ಸೇವೆಗೆ ಒಂದು ಧನ್ಯವಾದಗಳನ್ನು ಅರ್ಪಿಸಿ ಬರುತ್ತೀರಲ್ಲವೇ?

Annalakshmi Restaurant
#01, 20 Havelock Rd,
04 Central Square, Singapore 059765
Tel: +65 6339 9993
Mon: 11am – 3pm
Tue to Sun: 11am – 3pm, 6.15pm – 9.30pm
Nearest Station: Chinatown/Clarke Quay

ಏನಂತೀರೀ?
ಇಂತಿ ನಿಮ್ಮ ಉಮಾಸುತ

5 thoughts on “ಹೊಟ್ಟೇ ತುಂಬಾ ಊಟ ಮಾಡಿ, ಇಷ್ಟ ಬಂದಷ್ಟು ಹಣ ಕೊಡಿ.

 1. This does not make sense as the customers woud probably can pay the cost. Here what is required is chain that provides not nesessarily exotic menu but basic food of carbohydrates + protienes + minerals at ‘pay your capacity’ type. There are many here who do this in by charging 20 – 30 rupees per plate. That needs some kind of standardisation in terms of menu. Well there are many things that require improvement. Also artices that touch such woud help a lot I think !

  Enathieriee siraa….

  Liked by 1 person

  1. ಬಹುತೇಕವಾಗಿ ಹೋಟೆಲ್ಲಿಗೆ ಹೋಗುವುದು, ಮನೆಯ ಊಟದ ಏಕನಾತೆಯಿಂದ ಹೊರತುಪಡಿಸಿ ‌ರುಚಿ ರುಚಿಯಾದ ಆಹಾರವನ್ನು ಸವಿಯಲು.‌ ಹಾಗಾಗಿ ಅಲ್ಲಿ ಪೌಷ್ಟಿಕಾಂಶಕ್ಕಿಂತ ರುಚಿಯೇ ಅತ್ಯಂತ ಮಹತ್ವದ್ದಾಗಿದೆ.

   ಲೋಕೋ‌ಭಿನ್ನ ರುಚಿಃ. ನೀವೇಕೇ ನಿಮ್ಮ ಅಭಿರುಚಿಗೆ ತಕ್ಕಂತೆ ಒಂದು ಹೋಟೆಲ್ ಆರಂಭಿಸಬಾರದು. ಇದೇ ರೀತಿ ನಿಮ್ಮ ಹೋಟೆಲ್ಲಿನ ಲೇಖನವನ್ನೂ ಬರೆಯೋಣವಂತೆ.

   ಏನಂತೀರೀ?

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s