ಹೇಳೀ ಕೇಳಿ ಇದು ಮಾಗಿಯ ಕಾಲ. ಬೆಳ್ಳಂಬೆಳಿಗ್ಗೆ ಮಂಜಿನ ವಾತಾವರಣವಿದ್ದು ಚೆನ್ನಾಗಿ ಇಬ್ಬನಿ ಬೀಳುತ್ತಿರುತ್ತದೆ. ಅಂತಹ ಇಬ್ಬನಿಯನ್ನೇ ಹೀರಿಕೊಂಡು ಚೆನ್ನಾಗಿ ಬೆಳೆದ ಘಮ್ಮನೆಯ ಸೊಗಡಿನ ಮಣಿ ಮಣಿ ಅವರೇಕಾಳು ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುತ್ತದೆ. ಅಂತಹ ಅವರೇಕಾಳಿನ ಘಮ್ಮತ್ತಾದ ಉಪ್ಪಿಟ್ಟು ಮಾಡುವುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.
ಸುಮಾರು 4-5 ಜನರು ಸವಿಯಬಹುದಾದಷ್ಟು ಅವರೇಕಾಳು ಉಪ್ಪಿಟ್ಟು ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಉಪ್ಪಿಟ್ಟು ರವೆ – 1/2 ಕಪ್
- ಅವರೇಕಾಳು – 1/2 ಕಪ್
- ಸಾಸಿವೆ – 1/2 ಚಮಚ
- ಕಾಳು ಮೆಣಸು – 1 ಚಮಚ
- ಜೀರಿಗೆ – 1 ಚಮಚ
- ಉದ್ದಿನಬೇಳೆ – 1 ಚಮಚ
- ಕಡ್ಲೆಬೇಳೆ – 1 ಚಮಚ
- ಸಣ್ಣಗೆ ತುರಿದ ಶುಂಠಿ – 1 ಚಮಚ
- ಹಸಿರು ಮೆಣಸಿನಕಾಯಿ – 2-3
- ಹೆಚ್ಚಿದ ಕೊತ್ತಂಬರಿ ಸೊಪ್ಪು- 1 ಚಮಚ
- ಕರಿ ಬೇವಿನ ಎಲೆ 4-5
- ಅರಶಿನ ಪುಡಿ – 1/4 ಚಮಚ
- ತೆಂಗಿನತುರಿ – 1/2 ಬಟ್ಟಲು
- ಉಪ್ಪು- ರುಚಿಗೆ ತಕ್ಕಷ್ಟು
- ತುಪ್ಪ – 3-4 ಚಮಚ
- ಅಡುಗೆ ಎಣ್ಣೆ 1/2 ಬಟ್ಟಲು
ಅವರೇಕಾಳು ಉಪ್ಪಿಟ್ಟು ತಯಾರಿಸುವ ವಿಧಾನ
- ಮೊದಲು ಅವರೆಕಾಳನ್ನು ಸುಲಿದು ಅದಕ್ಕೆ ಸ್ವಲ್ಪ ಉಪ್ಪನ್ನು ಬೆರೆಸಿ ಬೇಯಿಸಿಟ್ಟುಕೊಳ್ಳಿ
- ಒಂದು ಗಟ್ಟಿ ತಳದ ಬಾಣಲೆಯಲ್ಲಿ ಒಂದು ಚಮಚ ತುಪ್ಪಾ ಇಲ್ಲವೇ ಎಣ್ಣೆಯನ್ನು ಹಾಕಿ ಅದಕ್ಕೆ ರವೆಯನ್ನು ಸೇರಿಸಿ, ರವೆಯ ಘಮ ಘಮ ಸುವಾಸನೆ ಮತ್ತು ಕೆಂಪಗಾಗುವ ವರೆಗೂ ಹುರಿದು ತಣ್ಣಗಾಗಲು ಬಿಡಿ
- ಅದೇ ಬಾಣಲಿಗೆ ಎರಡು ಚಮಚ ಎಣ್ಣೆಯನ್ನು ಹಾಕಿ, ಎಣ್ಣೆ ಕಾದ ನಂತರ ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ, ಜೀರಿಗೆ ಮತ್ತು ಪುಡಿ ಮಾಡಿದ ಕಾಳುಮೆಣಸು ಮತ್ತು ಚಿಟಿಕೆ ಇಂಗನ್ನು ಹಾಕಿ ಸಿಡಿಸಿ ಕೊಳ್ಳಿ
- ಬಾಣಲೆಗೆ ಕತ್ತರಿಸಿದ ಹಸೀಮೆಣಸಿನಕಾಯಿ, ತುರಿದ ಶುಂಠಿ ಮತ್ತು ಕತ್ತರಿಸಿದ ಕರಿಬೇವು ಸೇರಿಸಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿಯಿರಿ.
- ಹುರಿದುಕೊಂಡ ಮಿಶ್ರಣಕ್ಕೆ ನೀರನ್ನು ಸೇರಿಸಿ ಬೇಯಿಸಿಟ್ಟುಕೊಂಡ ಅವರೇಕಾಳು, ಚಿಟಿಕಿ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಸ್ವಲ್ಪ ಕುದಿಯಲು ಬಿಡಿ
- ನೀರು ಕುದಿಯುತ್ತಿದ್ದ ಹಾಗೇ, ನಿಧಾನವಾಗಿ ಹುರಿದಿಟ್ಟು ಕೊಂಡಿದ್ದ ರವೆಯನ್ನು ಸ್ವಲ್ಪ ಸ್ವಲ್ಪವೇ ಬೆರೆಸುತ್ತಾ ರವೆ ಗಂಟಾಗದಂತೆ ತಿರುವುತ್ತಿರಿ
- ರವೆ ಚೆನ್ನಾಗಿ ನೀರಿನೊಂದಿಗೆ ಬೆರೆತು ಗಟ್ಟಿಯಾಗುತ್ತಿದ್ದಂತೆಯೇ ಅದಕ್ಕೆ ಎರಡು ಮೂರು ಚಮಚ ತುಪ್ಪಾ, ನಿಂಬೇಹಣ್ಣಿನ ರಸ, ತೆಂಗಿನತುರಿ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಬೆರೆಸಿ ಚೆನ್ನಾಗಿ ತಿರುವಿ, ಒಲೆಯ ಉರಿಯನ್ನು ಸಣ್ಣಗೆ ಮಾಡಿ ಅದರ ಮೇಲೊಂದು ತಟ್ಟೆಯನ್ನು ಮುಚ್ಚಿ ಮೂರ್ನಾಲ್ಕು ನಿಮಿಷ ಬೇಯಿಸಿದರೆ
ರುಚಿ ರುಚಿಯಾದ ಘಮ ಘಮವಾದ ಅವರೇಕಾಳಿನ ಉಪ್ಪಿಟ್ಟು ಸವಿಯಲು ಸಿದ್ದ.
ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.
ಏನಂತೀರೀ?
ಮನದಾಳದ ಮಾತು : ಸಾಧಾರಣವಾಗಿ ಅವರೇಕಾಳು ತಿಂದರೆ ವಾಯು ಎಂದೋ ಇಲ್ಲವೇ ಯಾರಪ್ಪಾ ಅದನ್ನು ಬಿಡಿಸುವರು ಎಂದು ತಿನ್ನಲು ಇಷ್ಟ ಪಡದವರೇ ಹೆಚ್ಚು. ಅದರೆ, ಅವರೆಕಾಯಿಯ ಉಪಯೋಗಗಳನ್ನು ತಿಳಿದಲ್ಲಿ ಖಂಡಿತವಾಗಿಯೂ ಇಷ್ಟ ಪಡುತ್ತೇವೆ. ಅವರೆಕಾಳಿನಲ್ಲಿ ಕಬ್ಬಿಣಾಂಶ, ಮೆಗ್ನೀಶಿಯಂ, ಫಾಸ್ಫರಸ್, ಸತು ಮತ್ತು ಹೇರಳವಾದ ವಿಟಮಿನ್ ಬಿ ಮತ್ತು ಸಿ ಗಳನ್ನು ಹೊಂದಿದೆ. ಹೊಟ್ಟೆ ತೊಳಸುವಿಕೆ, ಭೇದಿ, ಅಥವಾ ಹೊಟ್ಟೆ ಉಬ್ಬರಕ್ಕೆ ಅವರೇಕಾಳು ರಾಮಬಾಣವಿದ್ದಂತೆ. ವಿಪರೀತ ತಲೇ ನೋವು ಇದ್ದಲ್ಲಿ, ಅವರೇ ಎಲೆಗಳನ್ನು ಜಜ್ಜಿ ಅದರ ವಾಸನೆ ನೋಡಿದರೆ ಸಾಕು ತಲೆ ನೋವು ಕಡಿಮೆಯಾಗುತ್ತದೆ.
ಅವರೇಕಾಳನ್ನು ಕೇವಲ ತರಕಾರಿಯಂತೆ ಪಲ್ಯ, ಹುಳಿ ಅಥವಾ ಸಾರಿನಲ್ಲಿ ಬಳಸುವುದಲ್ಲದೇ, ಅದನ್ನು ಹಾಗೆಯೇ, ಉಪ್ಪನ್ನು ಬೆರೆಸಿ,ಬೇಯಿಸಿಯೋ ಇಲ್ಲವೇ ಹುರಿದು ಇಲ್ಲವೇ ಕರಿದು ಅದಕ್ಕೆ ಉಪ್ಪು ಖಾರ ಸೇರಿಸಿ ಹುರಿಗಾಳಿನಂತೆಯೂ ಸೇವಿಸಬಹುದಾಗಿದೆ.
,ಖಂಡಿತ ತಯಾರಿಸುತ್ತೇನೆ
LikeLiked by 1 person
ನನಗೆ ಅವರೆಕಾಳಿನ ಯಾವುದೇ ತಿಂಡಿ-ತಿನಿಸು ತುಂಬಾ ಇಷ್ಟ
LikeLike