ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಅಭಿಯಾನ

ನಾವೆಲ್ಲರೂ ಕೇಳಿ, ಓದಿ, ನೋಡಿ ತಿಳಿದಿರುವಂತೆ ಅಯೊಧ್ಯೆ ಪ್ರಭು ಶ್ರೀರಾಮ ಚಂದ್ರನ ಜನ್ಮಸ್ಥಳ. ಆತ ತನ್ನ ಆದರ್ಶಗಳಿಂದಾಗ ಮರ್ಯಾದಾ ಪುರುಶೋತ್ತಮ ಎನಿಸಿಕೊಂಡಿದ್ದಲ್ಲದೇ, ಸಕಲ ಹಿಂದೂಗಳ ಆರಾಧ್ಯ ದೈವವಾಗಿ ಪ್ರತಿನಿತ್ಯವೂ ಪ್ರಪಂಚಾದ್ಯಂತ ಕೋಟ್ಯಾಂತರ ಮನ ಮತ್ತು ಮನೆಗಳಲ್ಲಿ ಪೂಜೆಗೆ ಪಾತ್ರರಾಗುತ್ತಿದ್ದಾನೆ. ವಾಲ್ಮೀಕಿ ವಿರಚಿತ ರಾಮಯಣ ಪ್ರಪಂಚದ ಅತ್ಯಂತ ಪುರಾತನ ಗ್ರಂಥವಾಗಿದ್ದು ಇಂದಿಗೂ ಅನೇಕ ಮುಸ್ಲಿಂ ರಾಷ್ಟ್ರಗಳೂ ಸೇರಿದಂತೆ ಪ್ರಪಂಚಾದ್ಯಂತ ಹಲವಾರು ದೇಶಗಳಲ್ಲಿ ಪ್ರಭು ಶ್ರೀರಾಮ ಆಡಳಿತಾತ್ಮಕವಾಗಿ ಆದರ್ಶ ಪುರುಷನಾಗಿ ಆರಾಧಿಸುತ್ತಾರೆ.

ಇಂತಹ ಪ್ರಭು ಶ್ರೀರಾಮನ ಮಂದಿರ ಕೆಲವು ಮತಾಂಧರ ಆಕ್ರಮಣದಿಂದಾಗಿ ಐದು ನೂರು ವರ್ಷಗಳ ಹಿಂದೆ ಧ್ವಂಸಗೊಂಡಾಗಿನಿಂದಲೂ ರಾಮಮಂದಿರವನ್ನು ಪುನರ್ನಿರ್ಮಾಣ ಮಾಡಲು ಹೋರಾಟ ನಡೆಯುತ್ತಲೇ ಇದ್ದು ಈ ಪ್ರಕ್ರಿಯೆಯಲ್ಲಿ ಲಕ್ಶಾಂತರ ಹಿಂದೂಗಳು ತಮ್ಮ ಪ್ರಾಣವನ್ನೇ ಕಳೆದು ಕೊಂಡಿದ್ದಾರೆ. ಕಳೆದ ಏಳೆಂಟು ದಶಕಗಳಲ್ಲಿ ಈ ಪ್ರಕರಣದ ಕುರಿತಂತೆ ನ್ಯಾಯಾಲಯದಲ್ಲೂ ವಿವಿಧ ಹಿಂದೂಪರ ಸಂಘಟನೆಗಳು ನಡೆಸಿದ ಹೋರಾಟದ ಫಲವಾಗಿ ಫೆಬ್ರವರಿ 5, 2020 ರಂದು ಸರ್ವೋಚ್ಚನ್ಯಾಯಾಲಯದ ತೀರ್ಪು ಪ್ರಭುರಾಮನ ಪರವಾಗಿದ್ದ ಕಾರಣ ಆಗಸ್ಟ್ 5, 2020 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಇದ್ದ ಸ್ಥಳದಲ್ಲಿಯೇ ಮಂದಿರದ ಶಿಲಾನ್ಯಾಸ ಪ್ರಧಾನ ಮಂತ್ರಿಗಳ ಸಾರಥ್ಯದಲ್ಲಿ ನಡೆದು, ಟೆಂಟ್ ನಲ್ಲಿ ಇದ್ದ ರಾಮ ಲಲ್ಲಾನ ಮೂರ್ತಿ ಮರದ ತಾತ್ಕಾಲಿಕ ದೇವಸ್ಥಾನಕ್ಕೆ ಸ್ಥಳಾಂತರಗೊಂಡಿದ್ದಲ್ಲದೇ, ಅದೇ ಜಾಗದಲ್ಲಿ ಭವ್ಯವಾದ ಮಂದಿರವನ್ನು ಕಟ್ಟಲು ತೀರ್ಮಾನಿಸಲಾಗಿದೆ.

ಸುಮಾರು 2.7 ಎಕರೆಯಷ್ಟು ಜಾಗದಲ್ಲಿ, 57,400 ಚದುರ ಅಡಿಯಷ್ಟು ವಿಸ್ತಾರದ ,3 ಅಂತಸ್ಥಿನ 161 ಅಡಿ ಎತ್ತರದ ಭವ್ಯವಾದ ಮಂದಿರವನ್ನು ಕಟ್ಟಲು ನೀಲ ನಕ್ಷೆಯನ್ನು ಸಿದ್ಧ ಪಡಿಸಿ ಈಗಾಗಲೇ ಸಿದ್ಧವಾಗಿರುವ ನೂರಾರು ಕೆತ್ತನೆಯ ಕಂಬಗಳು, 1989ರಲ್ಲೇ ಸಂಗ್ರಹಿಸಿದ ಶ್ರೀರಾಮ ಇಟ್ಟಿಗೆಗಳು ಮತ್ತು ಅಂದು ಸಂಗ್ರಹಿಸಿದ ಹಣದಿಂದ ಕೊಂಡಂತಹ ಅಮೃತಶಿಲೆಯ ನೆಲಹಾಸುಗಳನ್ನು ಬಳಸಿಕೊಂಡು ಮಂದಿರ ನಿರ್ಮಿಸಲು ನಿರ್ಧರಿಸಲಾಗಿದೆ. ಸಕಲ ಹಿಂದೂಗಳ ಶ್ರದ್ಧಾ ಕೇಂದ್ರ ಮತ್ತು ಕಾಶೀ ರಾಮೇಶ್ವರ, ಚಾರ್ ಧಾಮ್ ಗಳಂತೆ ಹಿಂದೂಗಳ ಪವಿತ್ರ ತೀರ್ಥಕ್ಷೇತ್ರವಾಗ ಬಹುದಾದ ಈ ಭವ್ಯ ಮಂದಿರವನ್ನು ತಮ್ಮ ಸ್ವಂತ ಹಣದಿಂದ ನಿರ್ಮಾಣ ಮಾಡಲು ಕೆಲ ಶ್ರೀಮಂತ ವ್ಯಕ್ತಿಗಳು ಮುಂದೆ ಬಂದರೂ ಅದನ್ನು ಸಾರಾಸಗಟಾಗಿ ನಿರಾಕರಿಸಿ, ಪ್ರಭು ಶ್ರೀರಾಮನ ಮಂದಿರ ಪ್ರಪಂಚಾದ್ಯಂತ ನೆಲಸಿರುವ ಭಕ್ತಾದಿಗಳ ತನು ಮನ ಮತ್ತು ಧನಗಳ ಸಹಾಯದಿಂದಲೇ ಆಗುವುದೆಂದು ಸಂಕಲ್ಪ ಮಾಡಿ 2021 ಜನವರಿ15 ರಿಂದ ಫೆಬ್ರವರಿ 05 ರವರೆಗೆ ನಿಧಿ
೨೦ ದಿನಗಳ ಕಾಲ ನಿಧಿ ಸಂಗ್ರಹಣ ಅಭಿಯಾನವನ್ನು ಮಾಡುವ ನಿರ್ಥಾರ ಕೈಗೊಳ್ಳಲಾಗಿದೆ.

ಇಂತಹ ನಿಧಿ ಸಂಗ್ರಹಣಾ ಅಭಿಯಾನದಲ್ಲಿ ಕಳೆದ ಒಂದು ವಾರಗಳಿಂದಲೂ ತೊಡಗಿಸಿಕೊಂಡು ಮನೆ ಮನೆಗಳಿಗೂ ಶ್ರೀ ರಾಮ ಮಂದಿರದ ಕರಪತ್ರಗಳನ್ನು ನಾವಿರುವ ಪ್ರದೇಶದ ಪ್ರತಿ ಮನೆ ಮನೆಗಳಿಗಊ ತಲುಪಿಸುತ್ತಾ, ಈ ಮಹೋನ್ನತ ಕಾರ್ಯದಲ್ಲಿ ಅಳಿಲು ಸೇವೆಯಂತೆ ಆವರು ಕೊಡುವ ದೇಣಿಗೆಯನ್ನು ಸಂಗ್ರಹಿಸಿ ಅದಕ್ಕೆ ತಕ್ಕಂತೆ ರಶೀದಿಯನ್ನು ಕೊಟ್ಟು ಸಂಗ್ರಹಿಸಿದ ಹಣವನ್ನು ತಪ್ಪದೇ ಮಾರನೆಯ ದಿನ ನಿಗಧಿತ ಬ್ಯಾಂಕಿನಲ್ಲಿ ರಾಮ ಮಂದಿರದ ಅಕೌಂಟಿಗೆ ಹಾಕುವ ಪುಣ್ಯಕಾರ್ಯದಲ್ಲಿ ಭಾಗಿಯಾಗುವ ಅವಕಾಶ ದೊರೆತಿರುವುದು ನಮ್ಮ ಪೂರ್ವ ಜನ್ಮದ ಸುಕೃತವೇ ಸರಿ. ಇಷ್ಟು ದಿನ ನಮ್ಮ ಪೂರ್ವಜರು ನಿರ್ಮಾಣ ಮಾಡಿದ ದೇವಸ್ಥಾನಗಳನ್ನು ಹೆಮ್ಮೆಯಿಂದ ನೋಡಿ ಬೆಳೆದಿದ್ದೆವು. ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ಅಯೋಧ್ಯೆಯಲ್ಲಿ ಭವ್ಯವಾದ ಪ್ರಭು ಶ್ರೀರಾಮ ಮಂದಿರ ನಿರ್ಮಾಣವಾದಾಗ ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಕರೆದುಕೊಂಡು ಹೋಗಿ ಈ ಮಂದಿರ ನಮ್ಮ ಕಾಲದಲ್ಲಿ ನಿರ್ಮಾಣವಾಗಿದೆ. ಈ ಪವಿತ್ರ ಕಾರ್ಯದಲ್ಲಿ ನಮ್ಮದೂ ಅಳಿಲು ಸೇವೆಯಿದೆ. ಇದು ನಮ್ಮ ಮಂದಿರ ಎಂದು ಹೆಮ್ಮೆಯಿಂದ ಹೇಳುವ ಸುವರ್ಣಾವಕಾಶ ಲಭಿಸಿರುವುದು ನಿಜಕ್ಕೂ ಅವರ್ಣನೀಯವೇ ಸರಿ.

ನಾಲ್ಕೈದು ಜನರ ಮೂರ್ನಾಲ್ಕು ಸನ್ಣ ಸಣ್ಣ ತಂಡಗಳನ್ನು ಮಾಡಿಕೊಂಡು ಯಾವುದೇ ಗೌಜು ಗದ್ದಲವಿಲ್ಲದೇ ಹಿಂದು, ಮುಸಲ್ಮಾನ ಮತ್ತು ಕ್ರೈಸ್ತ ಎನ್ನುವ ಧರ್ಮ ತಾರತಮ್ಯವಿಲ್ಲದೇ, ಮೇಲು, ಕೀಳು, ಉಚ್ಚ, ನೀಚ ಎನ್ನುವ ಯಾವುದೇ ಜಾತಿಯ ತಾರತಮ್ಯವಿಲ್ಲದೇ ಪ್ರತೀ ಮನೆಮನೆಗಳಿಗೂ ಹೋಗಿ ರಾಮ ಮಂದಿರದ ವಿಷಯವನ್ನು ತಿಳಿಸುವಾಗ ಬಹುತೇಕ ಜನರು, ಹೌದು ನಾವು ಈ ಅಭಿಯಾನದ ಕುರಿತಂತೆ ಈಗಾಗಲೇ ಟಿವಿಯಲ್ಲಿಯೋ, ವೃತ್ತ ಪತ್ರಿಕೆಗಳಲ್ಲಿಯೋ ಇಲ್ಲವೇ ಸಾಮಾಜಿಕ ಜಾಲ ತಾಣಗಳಲ್ಲಿ ಓದಿ ತಿಳಿದಿದ್ದೇವೆ. ಇಂತಹ ಪವಿತ್ರ ಕಾರ್ಯದಲ್ಲಿ ಭಾಗಿಯಾಗುವ ಅವಕಾಶ ನಮಗೆ ದೊರೆತಿರುವುದು ನಿಜಕ್ಕೂ ನಮ್ಮ ಸೌಭಾಗ್ಯ ಎಂದು ತುಂಬು ಹೃದಯದಿಂದ ಹೇಳಿ, ಮನೆಯೊಳಗೆ ಬರಮಾಡಿಕೊಂಡು ಯಥಾಶಕ್ತಿ ಕಾಣಿಕೆಯನ್ನು ಅರ್ಪಿಸಿ ಧನ್ಯತಾಭಾವದಿಂದ ಕೃತಾರ್ಥರಾಗುವ ಪರಿಯನ್ನು ವರ್ಣಿಸಿವುದಕ್ಕಿಂತಲೂ, ಅಭಿಯಾನದಲ್ಲಿ ಭಾಗಿಗಳಾಗಿ ಅನುಭವಿಸಿದರೇ ಆನಂದವಾಗುತ್ತದೆ.

ನಾವು ಹೋಗುವ ಮನೆಯವರಿಗೆ ನಾವು ಪರಿಚಿತರಲ್ಲ. ನಮಗೆ ಅವರ ಪರಿಚಯವಿರುವುದಿಲ್ಲ. ಆದರೆ ಪ್ರಭು ಶ್ರೀರಾಮನ ಹೆಸರನ್ನು ಹೇಳಿದ ಕೂಡಲೇ, ನಮ್ಮಿಬ್ಬರ ನಡುವೆ ಅದೇನೋ ಒಂದು ಅವಿನಾಭಾವ ಬೆಸುಗೆ ಬೆಳೆದು ಓ ನೀವಾ, ಬನ್ನಿ ಬನ್ನೀ, ಇನ್ನೂ ಯಾಕೆ ನಮ್ಮ ಮನೆಗೆ ಬಂದಿಲ್ಲಾ ಎಂದು ಎದಿರು ನೋಡುತ್ತಿದ್ದೆವು ಎಂದು ಆತ್ಮೀಯವಾಗಿ ಮನೆಯ ಒಳಗೆ ಕರೆದು ದೇಣಿಗೆಯನ್ನು ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರೂ ಅದೆಷ್ಟೋ.

ಪಕ್ಕದ ಮನೆಯಲ್ಲಿ ನಿಧಿ ಸಂಗ್ರಹಣೆ ಮಾಡುತ್ತಿದ್ದದ್ದನ್ನು ಗಮನಿಸಿ ಅದೆಷ್ಟೋ ಮಂದಿ ಕೂಡಲೇ ಮನೆಯೊಳಗೆ ಹೋಗಿ ತಮ್ಮ ಕಾಣಿಕೆಯನ್ನು ಹಿಡಿದುಕೊಂಡು ನಮ್ಮ ಆಗಮನಕ್ಕಾಗಿಯೇ ಕಾಯುವ ಮಂದಿ ಅದೆಷ್ಟೋ?

ಅಯ್ಯೋ ಬಿಸಿಲಿನಲ್ಲಿ ಬಂದಿದ್ದೀರಿ. ಬನ್ನೀ ಕುಳಿತುಕೊಳ್ಳಿ, ನೀರು ಕುಡಿತೀರಾ? ಕಾಫೀ ಟೀಿ ಇಲ್ಲಾ ಮಜ್ಜಿಗೆ ಕೊಡ್ಲಾ ಅಂತ ಕೇಳಿ ಬಲವಂತ ಮಾಡಿ ಕೊಡುವವರು ಅದೆಷ್ಟೋ?

ಇನ್ನೂ ಕೆಲವರು ಮನೆಗಳಲ್ಲಿ ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು ಕಜ್ಜಾಯ ಇಲ್ಲವೇ ಸಿಹಿತಿಂಡಿಗಳನ್ನು ಕೊಟ್ಟು ಕಳುಹಿಸಿದ್ದಾರೆ. ಅಯ್ಯೋ ಇದೆಲ್ಲಾ ಏನೂ ಬೇಡ ಎಂದರೆ, ಸರಿ ಈ ಬಾಳೇ ಹಣ್ಣಾದರೂ ತೆಗೆದುಕೊಳ್ಳಿ ಇಲ್ಲವೇ, ಈ ಖರ್ಜೂರವನ್ನಾದರೂ ಬಾಯಿಗೆ ಹಾಕಿಕೊಳ್ಳಿ ಎಂದು ಬಲವಂತದಿಂದ ಕೊಟ್ಟು ಕಳುಹಿಸಿದ ಮಂದಿ ಅದೆಷ್ಟೋ?

ಮನೆಯಲ್ಲಿ ದುಡಿಯುವವರು ತಮ್ಮ ಕೈಲಾದಷ್ಟು ನಿಧಿಯನ್ನು ಅರ್ಪಣೆ ಮಾಡಿದರೆ, ಅದರಿಂದ ಸಮಾಧಾನವಾಗದ ಮನೆಯ ಹಿರಿಯರು ತಮ್ಮ ಸಂಗ್ರಹದಿಂದಲೂ ಒಂದಷ್ಟು ಹಣವನ್ನು ಕೊಟ್ಟು ಸಾರ್ಥಕತೆ ಪಡೆದವರೆಷ್ಟೋ?

ಮನೆಗಳಿಗೆ ಹೋಗಿ ರಾಮ ಮಂದಿರದ ಬಗ್ಗೆ ಹೇಳುವುದನ್ನೇ ಬೆರೆಗು ಕಣ್ಣುಗಳಿಂದ ನೋಡುತ್ತಾ ಕೇಳಿ, ಮನೆಯ ಹಿರಿಯರು ನಿಧಿ ಸಂಗ್ರಹದಲ್ಲಿ ಭಾಗಿಗಳಾಗಿದ್ದದ್ದನ್ನು ಗಮನಿಸಿ, ನಾನು ನನ್ನ ಪಾಕೆಟ್ ಮನಿಯಿಂದ ರಾಮ ಮಂದಿರಕ್ಕೆ ಕೊಡ್ತೀನಿ ಎಂದು ರಾಮ ಮಂದಿರದ ನಿರ್ಮಾಣಕ್ಕೆ ನಿಧಿ ಸಮರ್ಪಿಸಿದ ಮಕ್ಕಳೆಷ್ಟೋ?

ನಾವು ಅವರ ಮನೆಗಳಿಗೆ ಹೋದಾಗ ತಿಂಡಿ ತಿನ್ನುತ್ತಲೋ ಇಲ್ಲವೇ ಊಟ ಮಾಡುತ್ತಿದ್ದರೆ, ನಾವು ಅಪರಿಚಿತರು ಬಂದು ಭಾವಿಸದೇ, ಬನ್ನೀ ಅಣ್ಣಾ ಊಟ ಮಾಡೋಣ ಎನ್ನುವಾಗ ಕರುಳು ಚುರುಕ್ ಎನಿಸಿ, ರಾಮಾ ಏನಪ್ಪಾ ನಿನ್ನ ಮಹಿಮೆ ಅಂದುಕೊಂಡ ಪ್ರಸಂಗಳೆಷ್ಟೋ?

ಒಂದು ಒಳ್ಳೆಯ ಕೆಲಸಕ್ಕೆ ನೂರೆಂಟು ವಿಘ್ನಗಳು ಎನ್ನುವಂತೆ, ಇಂತಹ ಪವಿತ್ರ ಕಾರ್ಯದಲ್ಲೂ ಹುಳುಕು ಹುಡುಕುವ ಮಂದಿಗೇನೂ ಕಡಿಮೆ ಇಲ್ಲ. ನಿಂದಕರು ಇರಬೇಕು. ಕೇರಿಯಲ್ಲಿ ಹಂ… ಇದ್ದಾ ಹಾಂಗ ಎಂದು ಪುರಂದರೇ ಹೇಳಿದಂತೆ ಮೊರರಿನಲ್ಲೂ ಕಲ್ಲು ಹುಡುಕುವ ಬೆರಳೆಣಿಕೆಯ ಮಂದಿಗಳ ಅನುಭವವೂ ಆಗಿದೆ.

ಪೂರ್ವಾಗ್ರಹ ಪೀಡಿತರಾಗಿ, ನಾವೇಕೇ ಕೊಡ್ಬೇಕು? ನಿಮ್ಮ ಮೋದಿ ಇದ್ದಾನಲ್ಲಾ ಅವ್ನಿಗೆ ಹೇಳಿ ಅವ್ನತ್ರ ಕಟ್ಸಿ ಎಂದರೆ, ಎಷ್ಟೋ ಜನ ಹೊಟ್ಟೆಗೆ ಹಿಟ್ಟಿಲ್ಲಾ ಅಂತಾ ಸಾಯ್ತಾ ಇದ್ದಾರೆ ಅವರಿಗೆ ಮೊದ್ಲು ಊಟ ಹಾಕ್ರೀ.. ಆಮೇಲೆ ಮಂದಿರನಾದ್ರೂ ಕಟ್ಟಿ ಮಸೀದೀನಾದ್ರೂ ಕಟ್ಟಿ ಅಂತ ದಬಾಯಿಸಿ ಕಳಿಸುವವರೂ ಇದ್ದಾರೆ.

ಮನೆಯ ಕರೆಗಂಟೆ ಹೊಡೆದಾಗ ನಮ್ಮನ್ನು ಕಿಟಕಿಯಿಂದಲೇ ನೋಡಿ ಎಷ್ಟು ಹೊತ್ತಾದರೂ ಬಾಗಿಲು ತೆಗೆಯದೇ ಇರುವವರಿಗೇನೂ ಕಡಿಮೆ ಇಲ್ಲಾ. ಅದೇ ರೀತಿ ದುಡ್ಡು ಕೇಳೋದಿಕ್ಕೆ ಮತ್ರಾ ಬರ್ತೀರಿ, ನಮ್ಮ ರಸ್ತೆ ಸರಿ ಇಲ್ಲಾ, ಚರಂಡಿ ಉಕ್ಕಿ ಹರಿಯುತ್ತಿದೆ, ನೀರು ಬರ್ತಿಲ್ಲ ಅಂತ ಗೋಳು ಹೇಳುವವರೂ ಇದ್ದಾರೆ.

ಬಾಗಿಲು ತೆಗೆದು ನಮ್ಮೊಂದಿಗೆ ಮಾತನಾಡುತ್ತಿದ್ದ ಮನೆಯವರನ್ನು ನಮ್ಮ ಮುಂದೆಯೇ ಬೈದು, ನಾವು ದುಡ್ಡು ಕೊಡೋದಿಲ್ಲಾ ಅಂತಾ ಖಡಾ ಖಂಡಿತವಾಗಿ ಹೇಳಿ ರಪ್ ಅಂತಾ ಬಾಗಿಲು ಹಾಕಿ ಕೊಂಡವರೂ ಇದ್ದಾರೆ.

ನೋಟ್ ಬ್ಯಾನ್ ಮಾಡಿ ಎಲ್ಲರೂ ಡಿಜಿಟಲ್ ವ್ಯವಹಾರ ಮಾಡಿ ಎಂದಾಗ ಬೊಬ್ಬಿರಿದು ನೋಟೇ ಇಲ್ಲದೇ ಅದು ಹೇಗೆ ವ್ಯವಹಾರ ಮಾಡೋದಿಕ್ಕೆ ಆಗುತ್ತೇ ಅಂತ ಬೀದಿಗೆ ಬಂದು ಪ್ರತಿಭಟನೆ ಮಾಡಿದವರೇ, ಈಗ ರಾಮ ಮಂದಿರಕ್ಕೆ ಹಣ ಕೊಡಲು ಮನಸ್ಸಿಲ್ಲದೇ, ಹಾವೂ ಸಾಯಬಾರದು ಕೋಲೂ ಮುರಿಯಬಾರದು ಎನ್ನುವಂತೆ, ಅಯ್ಯೋ ಈಗೆಲ್ಲಾ ನಾವು ಮನೆಲಿ ದುಡ್ಡೇ ಇಟ್ಟು ಕೊಳ್ಳಲ್ಲಾ, Google Pay, PhonePe, Online transfer ಮಾಡ್ತೀವಿ ಅಂತಾ ಹೇಳಿ ಚಿಲ್ರೇ ಇಲ್ಲಾ ಮುಂದೇ ಹೋಗಯ್ಯಾ ಎಂದು ಭಿಕ್ಶೇ ಬೇಡುವವರನ್ನು ಸಾಗ ಹಾಕಿದ ಹಾಗೆ ಸಾಗಹಾಕುವವರೂ ಇದ್ದಾರೆ.

ಇಂತಹವರಿಗೆಲ್ಲಾ ತಾಳ್ಮೆಯಿಂದಲೇ, ಸಾರ್ ನಾವು ವಂತಿಕೆ ವಸೂಲು ಮಾಡಲು ಬಂದಿಲ್ಲ. ರಾಮಮಂದಿರ ನಿರ್ಮಾಣದ ಕುರಿತಾದ್ ವಿಷಯವನ್ನು ಮನೆ ಮನೆಗೂ ತಿಳಿಸಲು ಅಭಿಯಾನದಲ್ಲಿ ಸ್ವಯಂ ಪ್ರೇರಿತರಾಗಿ ಪಾಲ್ಗೊಂಡಿರುವ ಸ್ವಯಂಸೇವಕರು ನಾವು. ನೀವು ಸ್ವಯಂಪ್ರೇರಿತರಾಗಿ ಸಂತೋಷದಿಂದ ಕೊಟ್ಟ ದೇಣಿಗೆಯನ್ನು ಮಾತ್ರಾ ಸ್ವೀಕರಿಸಿ ಅದನ್ನು ರಾಮ ಮಂದಿರ ನಿರ್ಮಾಣದ ನಿಧಿಗೆ ತಲುಪಿಸುವ ಜವಾಬ್ದಾರಿಯನ್ನು ಹೊತ್ತಿದ್ದೇವೆ ಎಂದು ಹೇಳಿ ಮುಂದಿನ ಮನೆಯತ್ತ ಹೋಗುತ್ತೇವೆ.

ಮನೆಯ ಗಂಡಸರು ಗದರಿಸಿ ಕಳುಹಿಸಿದಾಗ, ಸಾಸಿವೆ ಡಬ್ಬಿಯಲ್ಲಿ ಜತನದಿಂದ ಯಾವುದೋ ಕೆಲಸಕ್ಕೆಂದು ಎತ್ತಿಟ್ಟಿದ್ದ ದುಡ್ಡನ್ನು ಸೆರಿಗಿನಲ್ಲಿ ಮುಚ್ಚಿಟ್ಟುಕೊಂಡು ತಂದು ರಾಮ ಮಂದಿರಕ್ಕೆ ನಮ್ಮದೂ ಪಾಲಿರಲಿ ಎಂದು ತಂದು ಕೊಡುವ ಶ್ರದ್ಧೇಯ ತಾಯಂದಿರು,

ಆ ಇಳೀ ವಯಸ್ಸಿನ ವೃದ್ದಾಪ್ಯದಲ್ಲೂ ತಮ್ಮ ಪಿಂಚಣಿ ಹಣದಲ್ಲಿ ಸ್ವಲ್ಪ ಹಣವನ್ನು ರಾಮ ಮಂದಿರಕ್ಕೆ ದೇಣಿಯಾಗಿ ನೀಡಿ, ತುಂಬಾ ಒಳ್ಲೇ ಕೆಲ್ಸ ಮಾಡ್ತಾ ಇದ್ದೀರಪ್ಪಾ, ಆ ರಾಮ ನಿಮಗೆ ಒಳ್ಳೆಯದನ್ನೂ ಮಾಡಲಿ ಎಂದು ತುಂಬು ಹೃದಯದಿಂದ ನಮ್ಮನ್ನು ಹಾರೈಸುವ ಹಿರಿಯರು,

ಅಬ್ಬಾ ನಮ್ಮ ಕಾಲದಲ್ಲೇ ಶ್ರೀರಾಮನ ದೇವಾಲಯ ಕಟ್ಟುತ್ತಿರುವುದು ನಮ್ಮ ಸೌಭಾಗ್ಯ. ನಾವು ನೂತನ ದೇವಸ್ಥಾನ ನೋಡಿದ ಮೇಲೆಯೇ ನಮನ್ನು ಕರೆಸಿಕೊಳ್ಳಲಪ್ಪಾ ಎನ್ನುವ ತಾಯಂದಿರು,

ರಾಮ ಮಂದಿರಕ್ಕೆ ಹಣ ಎಲ್ಲಿ ಕೊಡ್ಬೇಕು ಯಾರಿಗೆ ಕೊಡ್ಬೇಕು ಅನ್ನೊದು ಗೊತ್ತಿರಲಿಲ್ಲ ಈಗಲೇ ಕೊಡ್ತೀವಿ ಎಂದು ಕೂಡಲೇ Online Transfer ಮಾಡಿ Transaction details ನಮಗೆ ತೋರಿಸುವುದಲ್ಲದೇ ಅವರ ಅಪಾರ್ಟ್ಮೆಂಟ್, ಅವರ ಅಕ್ಕ ಪಕ್ಕದ ಮನೆ ಮತ್ತು ಅವರ ರಸ್ತೆ ಪೂರ್ತಿ ನಮ್ಮ ಜೊತೆ ಸಂತೋಷದಿಂದ ಆಭಿಯಾನದಲ್ಲಿ ಪಾಲ್ಗೊಳ್ಳುವರು,

ಅಭಿಯಾನದಲ್ಲಿ ಅಚಾನಕ್ಕಾಗಿ ಪರಿಚಯವಾಗಿ ಕಡೆಗೆ ಕಾರ್ಯಕರ್ತರಾಗಿ ನಮ್ಮೊಂದಿಗೆ ಜೋಡಿಸಿಕೊಂಡವರೊಂದಿಗೆ ನಮ್ಮೀ ಈ ಅಭಿಯಾನವನ್ನು ಸಂತೋಷದಿಂದ ಮಂದುವರೆಸಿಕೊಂಡು ಹೋಗುತ್ತಿದ್ದೇವೆ.

ನಮ್ಮಂತಹ ಕಾರ್ಯಕರ್ತರು ನಿಮ್ಮ ಮನೆಗೂ ಬರಬಹುದು. ಅವರಿಗೆ ಇಷ್ಟೇ ಅಷ್ಟೇ ಕೊಡಬೇಕು ಅಂತೇನೂ ಇಲ್ಲಾ. ನಿಮ್ಮಿಷ್ಟ ಬಂದಷ್ಟು ಕೊಡಿ. ಕಡೇ ಪಕ್ಷ ಏನನ್ನೂ ಕೊಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ ಅವರ ಜೊತೆ ಒಂದು ಜೈ ಶ್ರೀರಾಮ್ ಎಂದು ಜಯಕಾರ ಹಾಕಿ ಸಾಕು ನೀವು ಸಹಾ ಅಭಿಯಾನಲ್ಲಿ ಪಾಲ್ಗೊಂಡಂತಾಗುತ್ತದೆ. ಅದಕ್ಕೇ ಏನೋ ನಮ್ಮಮ್ಮ ಚಿಕ್ಕವಯಸ್ಸಿನಲ್ಲಿ ಹೇಳಿ ಕೊಟ್ಟಿದ್ರೂ, ಕಲಿಯುಗದೊಳು ಹರಿನಾಮವ ನೆನೆದರೆ ಕುಲಕೋಟಿಗಳುದ್ಧರಿಸುವುವು.

ರಾಮಸೇತುವಿನಲ್ಲಿ ವಾನರರಾಗುವ ಭಾಗ್ಯ ನಮಗೆ ಸಿಗಲಿಲ್ಲ …

ಸೀತಾನ್ವೇಷಣೆಯಲ್ಲಿ ರಾಮನಿಗೆ ಮಾಹಿತಿ ನೀಡಿದ ಜಟಾಯು ನಾವಾಗಲಿಲ್ಲ …

ಕನಿಷ್ಠ ಪಕ್ಷ ರಾಮ ಮಂದಿರಕ್ಕಾಗಿ ನಡೆದ ಕರಸೇವೆಯಲ್ಲಿ ಭಾಗವಹಿಸುವ ಭಾಗ್ಯವೂ ನಮ್ಮಲ್ಲಿ ಬಹುತೇಕರಿಗೆ ಸಿಗಲಿಲ್ಲ …

ಈಗ ನಿರ್ಮಾಣವಾಗುತ್ತಿರುವ ರಾಮನ ಭವ್ಯ ಮಂದಿರಕ್ಕಾಗಿ ಶ್ರಮಿಸಬಹುದಾದ ಭಾಗ್ಯ ಸಿಕ್ಕಿರುವುದೇ ನಮ್ಮ ಪುಣ್ಯ.

ಹಾಗಾಗಿ ಈ ಐತಿಹಾಸಿಕ ಅಭಿಯಾನದಲ್ಲಿ ಎರಡು ವಾರ ಕಟಿ ಬದ್ಧರಾಗಿ ಪ್ರಭು ಶ್ರೀರಾಮನಿಗಾಗಿ ತನು, ಮನ, ಧನವನ್ನು ಸಮರ್ಪಿಸೋಣ.

ರಾಮ ಸೇವೆದಿಂದ, ರಾಷ್ಟ್ರ ಮಂದಿರ …

ರಾಷ್ಟ್ರ ಮಂದಿರದಿಂದ, ರಾಮರಾಜ್ಯ ಸ್ಥಾಪಿಸೋಣ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s