ಆಧುನಿಕ ಭಗೀರಥ ರಾಜಶೇಖರ್(ರಾಜಾ)

ಅದು ಎಂಭತ್ತರ ದಶಕದ ಸಮಯ. ನನ್ನ ವಿದ್ಯಾಭ್ಯಾಸದ ಸಲುವಾಗಿ ನಾವು ನೆಲಮಂಗಲದಿಂದ ಬೆಂಗಳೂರಿನ ಬಿಇಎಲ್ ಕಾರ್ಖಾನೆ ಹಿಂದಿನ ಲೊಟ್ಟೇಗೊಲ್ಲಹಳ್ಳಿ ಗ್ರಾಮಕ್ಕೆ ಸ್ಥಳಾಂತರಗೊಂಡು ಬಿಇಎಲ್ ಪ್ರಾಥಮಿಕ ಶಾಲೆಗೆ ಸೇರಿಕೊಂಡಿದ್ದೆ. ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಹೋಗುತ್ತಿದ್ದ ನನಗೆ ನಮ್ಮ ಮನೆಯ ಬಳಿ ಯಾವುದೇ ಶಾಖೆ ಇರದಿದ್ದದ್ದು ತುಸು ಬೇಸರವೆನಿಸಿತ್ತು, ನಮ್ಮ ಶಾಲೆ ಮಧ್ಯಾಹ್ನನದ ಪಾಳಿಯಲ್ಲಿದ್ದು 1 – ಸಂಜೆ 5:30ಕ್ಕೆ ಮುಗಿಯುತ್ತಿತ್ತು. ಅದೊಂದು ದಿನ ನಮ್ಮ ಶಾಲೆಯ ಹಿಂಬಾಗದಲ್ಲಿದ್ದ ಬಿಇಎಲ್ ಸೊಸೈಟಿಯ ಪಕ್ಕದಲ್ಲಿ ಶಾಖೆ ನಡೆಯುವುದನ್ನು ನೋಡಿ ಆನಂದವಾಗಿ ಶಾಲೆಯ ನಂತರ ಅಲ್ಲಿಗೆ ಹೋದಾಗ ಒಂದಷ್ಟು ಸಣ್ಣ ವಯಸ್ಸಿನ ಹುಡುಗರನ್ನು ಎತ್ತರದ ಧೃಢ ಕಾಯದ ಒಬ್ಬರು ಆಟವಾಡಿಸುತ್ತಿದ್ದರು. ನಾನೇ ಧ್ವಜ ಪ್ರಣಾಮ್ ಮಾಡಿ ಅವರ ಬಳಿ ನನ್ನ ಪರಿಚಯ ಮಾಡಿಕೊಂಡೇ. ಅವರು ಸಹಾ ಬಹಳ ಸೌಜನ್ಯತೆಯಿಂದ ಮಾತನಾಡಿಸಿ ತಮ್ಮ ಹೆಸರು ರಾಜ ಎಂದು ಪರಿಚಯಮಾಡಿಕೊಂಡರು. ಹೀಗೆ ನನ್ನ ಮತ್ತು ರಾಜ ಅವರ ಪರಿಚಯ ಭಗತ್ ಸಾಯಂ ಶಾಖೆಯಲ್ಲಾಗಿತ್ತು.

ಶಾಲೆ ಮುಗಿಸಿಕೊಂಡು ಶಾಖೆ ಮುಗಿಸಿಕೊಂಡು ಮನೆಗೆ ಹೋಗುವಷ್ಟರಲ್ಲಿ ಸಂಜೆ 7 ಘಂಟೆಯಾಗುತ್ತಿದ್ದರಿಂದ ಬಹಳಷ್ಟು ಕತ್ತಲಾಗಿರುತ್ತಿತ್ತು. ಈಗಿನಂತೆ ಸುವ್ಯಸ್ಥಿತ ರಸ್ತೆಗಳಾಗಲೀ, ಸಾಲು ದೀಪಗಳಾಗಲೀ ಇಲ್ಲದ ಕಾರಣ ಬಹಳಷ್ಟು ದಿನಗಳು ನನಗೆ ಶಾಖೆಗೆ ಹೋಗಲಾಗುತ್ತಿರಲಿಲ್ಲ. ನನ್ನ ಈ ಪರಿಸ್ಥಿತಿಯನ್ನು ಮನಗೊಂಡ ಜಾಲಹಳ್ಳಿ ನಗರದ ಅಗಿನ ನಗರ ಕಾರ್ಯವಾಹರಾಗಿದ್ದ ಇದೇ ರಾಜ ನಮ್ಮ ಮನೆಯ ಬಳಿಯೇ ಪ್ರಾಥಃ ಶಾಖೆ ಆರಂಭಿಸಿ ಅದಕ್ಕೆ ಅವಿನಾಶ್ ಶಾಖೆ ಎಂದು ನಾಮಕರಣ ಮಾಡಿದರು. ಜಾಲಹಳ್ಳಿ‌ ನಗರದ ಸಂಘದ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಲ್ಲದೇ, ನನ್ನ ಮೊದಲ ಬಾಲಶಿಬಿರದ ಶಿಭಿರಾಧಿಕಾರಿಯಾಗಿಯೂ ಜವಾಬ್ಧಾರಿಯನ್ನು ನಿಭಾಸಿದ್ದರು ರಾಜ.

ರಾಜಾ ಅವರ ತಂದೆ ಜಿ.ಕೆ.ರಾವ್ ನಿವೃತ್ತ ಸೈನ್ಯಾಧಿಕಾರಿಗಳು ಮತ್ತು ನಮ್ಮ ತಂದೆ ಶಿವಮೂರ್ತಿಗಳು ಇಬ್ಬರೂ ಬಿಇಎಲ್ ಕಾರ್ಖಾನೆಯಲ್ಲಿ ಸಹೋದ್ಯೋಗಿಗಳು. ರಾಜಾಳ ತಂಗಿ ನನ್ನ ಶಾಲೆಯಲ್ಲಿ ಎರಡು ವರ್ಷ ಹಿರಿಯಳು ಹೀಗೆ ನಮ್ಮ ಕುಟುಂಬ ಮತ್ತು ರಾಜಾ ಅವರ ಕುಟಂಬದ ನಡುವಿನ ಸುಮಧುರ ಬಾಂಧವ್ಯ ಇನ್ನೂ ಬೆಳೆಯುತ್ತಾ ಹೋಯಿತು. ಹಬ್ಬ ಹರಿದಿನಗಳಲ್ಲಿ ಅರಿಶಿನ ಕುಂಕುಮಕ್ಕೂ ಬಂದು ಹೋಗುವಷ್ಟು ಬೆಳೆದಿತ್ತು.

ಕಾಲ ಕಳೆಯುತ್ತಾ ಹೋದಂತೆಲ್ಲಾ ರಾಜಾ ಭೂಗರ್ಭಶಾಸ್ತ್ರದಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರೈಸಿದ ನಂತರ ಹಳ್ಳಿ ಹಳ್ಳಿಗೂ ಹೋಗಿ ರೈತರಿಗೆ ಕೊಳವೇ ಭಾವಿಗಳನ್ನು ತೋಡಲು ನೀರಿನ ಸೆಲೆಯನ್ನು ತೋರಿಸಿ ಕೊಡುವ ಕಾಯಕವನ್ನು ಆರಂಭಿಸಿದ ಕಾರಣ, ಹೊತ್ತಲ್ಲದ ಹೊತ್ತಿನಲ್ಲಿ ಯಾವುದೋ ಊರಿನಲ್ಲಿ ಇರುತ್ತಿದ್ದ ಕಾರಣ ನಿತ್ಯ ಶಾಖೆಯ ಸಂಪರ್ಕ ಕಡಿಮೆಯಾದರೂ, ಉತ್ಸವ ಮೂರ್ತಿಯಂತೆ, ಸಂಘದ ಪ್ರತೀ ಉತ್ಸವಗಳಲ್ಲಿಯೂ ತಪ್ಪದೇ ಭಾಗವಹಿಸುತ್ತಿದ್ದರು.

ಈಗಿನಂತೆ ಅ ಸಮಯದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯೂಸಿ ಮಕ್ಕಳಿಗೆ ಸರಿಯಾಗಿ ಪಾಠ ಹೇಳಿಕೊಡುವವರು ಇಲ್ಲದಿದ್ದ ಕಾರಣ, ಇದೇ ರಾಜ, ಮೋಹನ್, ಗೋವಿಂದ, ಶ್ರೀನಿವಾಸಮೂರ್ತಿ, ಆರ್ ಆಶೋಕ್ (ಮಾಜೀ ಉಪಮುಖ್ಯಮಂತ್ರಿಗಳು ಮತ್ತು ಹಾಲೀ ಸಚಿಚರು) ಮುಂತಾದ ಉತ್ಸಾಹೀ ಸ್ವಯಂಸೇವಕರು ಆರಂಭಿಸಿದ್ದೇ ಉಚಿತ ಪಾಠ ಪ್ರವಚನಮಾಡುವ ಆರ್ಯಭಟ ಸಂಸ್ಥೆ. ಆರ್ಯಭಟ ಸಂಸ್ಥೆಯ ಮೂಲಕ ಹಲವಾರು ವರ್ಷ ಮಕ್ಕಳಿಗೆ ಉಚಿತವಾಗಿ ಪಾಠವನ್ನು ಹೇಳಿಕೊಡುವ ಮೂಲಕ ನೂರಾರು ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ಅಂಕಗಳನ್ನು ಗಳಿಸುವುದರಲ್ಲಿ ಮಹತ್ತರ ಪಾತ್ರವಹಿಸಿದ್ದವರು ನಮ್ಮ ರಾಜ.

ಸುಮಾರು ಆರರಿಂದ ಆರೂವರೇ ಅಡಿ ಎತ್ತರ. ಎತ್ತರಕ್ಕೆ ತಕ್ಕಂತೆ ದೇಹಧಾಡ್ಯ ಅದಕ್ಕೆ ತಕ್ಕಂತೆ ಧ್ವನಿಯನ್ನು ಹೊಂದಿದ್ದ ರಾಜಾ, ಯಾವ ಸ್ವಯಂಸೇವಕರನ್ನೇ ಆಗಲೀ ಎಷ್ಟು ಹೊತ್ತಿನಲ್ಲೇ ಆಗಲೀ ಏಕವಚನದಲ್ಲಿ ಕರೆದು ಮಾತಾನಾಡಿಸುವಷ್ಟು ಸೌಜನ್ಯ ಮತ್ತು ಜನಾನುರಾಗಿ. ಸದಾಕಾಲವೂ ಹಸನ್ಮುಖಿ ಮತ್ತು ಅಗಾಧವಾದ ನೆನಪಿನ ಶಕ್ತಿ ಹೊಂದಿದ್ದ ವ್ಯಕ್ತಿ. ಒಮ್ಮೆ ಒಬ್ಬ ವ್ಯಕ್ತಿಯನ್ನು ಪರಿಚಯ ಮಾಡಿಕೊಂಡರೆ ಎಷ್ಟೇ ವರ್ಷಗಳದಾರೂ ಆ ವ್ಯಕ್ತಿ ಸಿಕ್ಕಾಗ ಬಹಳ ಅತ್ಮೀಯತೆಯಿಂದ ಮತ್ತು ಅಷ್ಟೇ ಸಲುಗೆಯಿಂದ ಮಾತನಾಡಿಸುವ ಸಹೃದಯಿ. ಬಹುಶಃ ಆಡು ಮುಟ್ಟದ ಸೊಪ್ಪಿಲ್ಲ ರಾಜಾ ಹೋಗದ ಹಳ್ಳಿ ಇಲ್ಲಾ ಎಂದರೂ ಅತಿಶಯೋಕ್ತಿಯೇನಲ್ಲ.

ಯಾವ ಊರಿನಲ್ಲಿ ಕೆರೆ ಕಟ್ಟೆಗಳು ಬತ್ತಿಹೋಗಿವೆ. ಕೊಳವೇ ಭಾವಿಗಳನ್ನು ಕೊರೆಸಬೇಕು ಎಂದು ಯೋಚಿಸುತ್ತಿದ್ದಂತೆಯೇ, ಅಲ್ಲಿ ರಾಜ ಪ್ರತ್ಯಕ್ಷ. ತಮ್ಮ ತಾಮ್ರದ ಕಡ್ಡಿಗಳನ್ನು ಹಿಡಿದುಕೊಂಡು ಕರಾರುವಾಕ್ಕಾಗಿ ಇಷ್ಟೇ ಅಡಿಗಳಲ್ಲಿ ಇಷ್ಟೇ ಇಂಚಿನ ನೀರು ಸಿಗುತ್ತದೆ ಎಂದು ತಿಳಿಸುವಷ್ಟು ಪಾಂಡಿತ್ಯ. ತನ್ನ ಕೆಲಸ ಮುಗಿಸಿದ ನಂತರ ಇಷ್ಟೇ ಹಣ ಕೊಡಬೇಕು ಎಂದು ಯಾರನ್ನೂ ಎಂದೂ ಒತ್ತಾಯ ಮಾಡಿದವರೇ ಅಲ್ಲಾ. ಹಾಗಾಗಿ ಬೆಂಗಳುರು, ಕೋಲಾರ, ತುಮಕೂರು, ಚಿತ್ರದುರ್ಗ, ಹಾಸನ, ಮಂಡ್ಯ, ರಾಮನಗರ ಹೀಗೆ ರಾಜ್ಯದ ಬಹುತೇಕ ಬರ ಪೀಡಿತ ಜಿಲ್ಲೆಗಳಲ್ಲಿ ಸಾವಿರಾರು ಕೊಳವೇ ಭಾವಿಗಳಿಗೆ ನೀರಿನ ಸೆಲೆಯನ್ನು ತೋರಿಸಿಕೊಟ್ಟು ಬೋರ್ ವೆಲ್ ರಾಜಾ ಎಂದೇ ಪ್ರಖ್ಯಾತರಾಗಿ ಹೋಗಿಬಿಟ್ಟರು ನಮ್ಮ ರಾಜ.

28 ವರ್ಷಗಳ ಹಿಂದೆ ರಾಜ ಬರೆದು ಕೊಟ್ಟಿದ್ದ ನೀರಿನ ಸೆಲೆ

ಬೆಂಗಳೂರಿನಲ್ಲಿಯೂ ಅಂತರ್ಜಲ ಕಡಿಮೆಯಾಗಿ ಎಗ್ಗಿಲ್ಲದೆ ಸಾವಿರಾರು ಕೊಳವೆಭಾವಿಗಳನ್ನು ತೋಡಿಸಿದಾಗ ಅದರಲ್ಲಿ ಬಹುತೇಕ ಕೊಳವೆ ಭಾವಿಗಳಿಗೆ ಇವರದ್ದೇ ಸಾರಥ್ಯ. ಬಿಇಎಲ್ ಕಾರ್ಖಾನೆ ಮತ್ತು ಸರ್ಕಾರೀ ಪ್ರಾಜೆಕ್ಟ್ಗಳಲ್ಲಿ ಇವರದ್ದೇ ಪೌರೋಹಿತ್ಯ. ಬಿಎಇಲ್ ಸುತ್ತ ಮುತ್ತಲು ಹತ್ತು ಇಪ್ಪತ್ತು ವರ್ಷಗಳ ಹಿಂದೆ ತೋಡಿರುವ ಬಹುಶಃ ಎಲ್ಲಾ ಕೊಳವೇ ಭಾವಿಗಳ ಹಿಂದೆ ರಾಜಾ ಅವರ ಪರಿಶ್ರಮವಿತ್ತು. ಪರಿಚಯಸ್ಥರು ಮತ್ತು ಸಂಘಪರಿವಾರದವರ ಬಳಿ ಹಣ ತೆಗೆದುಕೊಂಡದ್ದನ್ನು ನಾನು ಕೇಳೇ ಇಲ್ಲ. ಅವರ ಕೆಲಸ ಬಾಹುಳ್ಯದಿಂದ ಹೇಳಿದ ಸಮಯಕ್ಕೆ ಸರಿಯಾಗಿ ಬಾರಲು ಆಗದಿದ್ದರೂ, ಎಷ್ಟೇ ದೂರವಾದರೂ ಬಂದು ನೀರಿನ ಸೆಲೆ ತೋರಿಸಿಕೊಟ್ಟ ನಂತರ ದುಡ್ಡು ಎಷ್ಟಾಯಿತು ಎಂದು ಕೇಳಿದರೇ, ಸುಮ್ಮನೇ ದೇಶಾವರಿ ನಗೆ ನಕ್ಕು, ಮುಂದಿನ ಸಾರಿ ಕೊಡುವಿರಂತೆ ಎಂದು ಹೇಳಿ ಬಿರ ಬಿರನೇ ಹೋರಟೇ ಹೋಗುತ್ತಿದ್ದ ವ್ಯಕ್ತಿ. ತುಂಬಾ ಬಲವಂತ ಮಾಡಿದರೇ, ಒಂದು ಒಳ್ಳೆಯ ತಿಂಡಿ ಕಾಫೀ ಕೊಡಿಸಿಬಿಡಿ ಸಾಕು ಎಂದು ಕೇಳಿ ಹೊಟ್ಟೇ ತುಂಬಾ ತಿಂಡಿ ತಿಂದು ಕಾಫೀ ಕುಡಿದು ಹೋಗುತ್ತಿದ್ದ ಸ್ನೇಹಜೀವಿ ನಮ್ಮ ರಾಜಾ.

ಸುಮ್ಮನೇ ಯಾವುದೋ ಕೆಲಸಕ್ಕೆಂದು ನಮ್ಮ ಮನೆಗೆ ಬಂದಿದ್ದಾಗ, ರಾಜಾ ನಮ್ಮ ಮನೆಯ ಭಾವಿಯೂ ಬತ್ತಿ ಹೋಗಿದೆ ಬೋರ್ವೆಲ್ ತೋಡಿಸಬೇಕು ಎಷ್ಟಾಗುತ್ತದೆ ಎಂದು ನಮ್ಮ ತಂದೆಯವರು ಕೇಳಿದಾಗ, ಕೂಡಲೇ ನಮ್ಮ ಮನೆಯಲ್ಲಿಯೇ ಇದ್ದ ಕಣಗಲೇ ಗಿಡದ ಕಡ್ಡಿಯನ್ನು Y ಆಕಾರದಲ್ಲಿ ಮುರಿದುಕೊಂಡು ಥಟ್ ಅಂತಾ ಕೆಲವೇ ಕ್ಷಣಗಳಲ್ಲಿ ನೀರಿನ ಸೆಲೆ ತೋರಿಸಿ, ಒಂದು ರೂಪಾಯಿ ಹಣವನ್ನೂ ತೆಗೆದುಕೊಳ್ಳದೇ, ತಮ್ಮದೇ ಪರಿಚಯಸ್ಥ ಬೋರ್ವೆಲ್ ಕಂಪನಿಯ ಮುಖಾಂತರ ಬಹಳ ಕಡಿಮೆ ಬೆಲೆಗೆ ನಮಗೆ ಕೊಳವೇ ಭಾವಿಯನ್ನು ತೋಡಿಸಿಕೊಟ್ಟಿದ್ದಂತಹ ಮಹಾನುಭಾವ ನಮ್ಮ ರಾಜ.

ಬಹಳ ದಿನಗಳ ನಂತರ ಅವರು ಸಿಕ್ಕಿದ್ದಾಗ ಅವರನ್ನು ಏಕವಚನದಲ್ಲಿ ಮಾತನಾಡಿಸಲು ಮುಜುಗರವಾಗಿ ಹೇಗಿದ್ದೀರಿ ರಾಜಾಶೇಖರ್ ಎಂದಾಗಾ, ಏಯ್ ಏನಂದೇ? ಅದೇನೂ ರಾಜಶೇಖರ್? ಮುಂಚೆ ಏನೆಂದು ಕರೆಯುತ್ತಿದ್ದೇ ಎಂದು ಗದರಿದರು. ನಾನು ಭಯದಿಂದ ಆಗೆಲ್ಲಾ ರಾಜಾ ಎಂದೇ ಕರೆಯುತ್ತಿದ್ದೆವು ಎಂದೇ. ಅವಾಗಲೇ ರಾಜ ಅಂತ ಕರೀತಿದ್ದವರು ಈಗೇನು ರಾಜಶೇಖರ್? ಮುಚ್ಕೊಂಡ್ ರಾಜಾ, ಹೋಗೂ, ಬಾ ಅಂತ ಮಾತನಾಡಿಸು ಎಂದು ಕಕ್ಕುಲತೆಯಿಂದ ಹೇಳಿದ ನಿಗರ್ವಿ ನಮ್ಮ ರಾಜ.

ಅಪರೂಪಕ್ಕೊಮ್ಮೆ ಮನೆಗೆ ಬಂದಾಗ, ಒಂದೆರಡು ಘಂಟೆಗಳ ಕಾಲ ಮೆನೆಯಲ್ಲಿ ಇರುವವರನ್ನೆಲ್ಲರನ್ನೂ ಬಾಯಿ ತುಂಬಾ ಮಾತನಾಡಿಸಿ, ಹೊಟ್ಟೆ ಹುಣ್ಣಾಗುವಂತೆ ನಗಿಸಿ ಹೋಗುತ್ತಿದ್ದರು ನಮ್ಮ ರಾಜ. ಕೆಲ ವರ್ಷಗಳ ಹಿಂದೆ ಸಣ್ಣ ವಯಸ್ಸಿನ ನನ್ನ ಮಗನೊಂದಿಗೆ ಮಾತನಾಡುತ್ತಾ, ಈ ಸಮಾಜಕ್ಕೆ ಅತ್ಯಂತ ಮುಖ್ಯವಾದ ವ್ಯಕ್ತಿ ಯಾರು? ಎಂದು ಪ್ರಶ್ನೆ ಮಾಡಿದರು ಅದಕ್ಕೆ ನನ್ನ ಮಗ, ಡಾಕ್ಟರ್, ಇಂಜೀನಿಯರ್, ಶಿಕ್ಷಕರು ಎಂದು ತನಗೆ ತೋಚಿದ್ದನ್ನು ಹೇಳಿದಾಗ ಅವನನ್ನು ತಮ್ಮ ತೊಡೆಯ ಮೇಲೆ ಕುಳ್ಳರಿಸಿಕೊಂಡು ದೇಶಕ್ಕೆ ಅತ್ಯಂತ ಮುಖ್ಯವಾದವರು ರೈತರು ಮತ್ತು ದೇಶ ಕಾಯುವ ಸೈನಿಕರು. ರೈತ ಆಹಾರ ಬೆಳೆಯದಿದ್ದರೆ ನಾವು ಹಸಿವಿನಿಂದ ನರಳುತ್ತೇವೆ. ಸೈನಿಕ ದೇಶವನ್ನು ರಕ್ಷಣೆ ಮಾಡದೇ ಇದ್ದಲ್ಲಿ ಶತ್ರುಗಳು ನಮ್ಮನ್ನು ಆಕ್ರಮಿಸಿಕೊಳ್ಳುತಾರೆ, ಹಾಗಾಗಿ ರೈತರು ಮತ್ತು ಸೈನಿಕರು ಅತ್ಯಂತ ಮುಖ್ಯವಾದ ವ್ಯಕ್ತಿಗಳು ಎಂದು ತಿಳಿಸಿಕೊಟ್ಟಿದ್ದನ್ನು ಇಂದಿಗೂ ನನ್ನ ಮಕ್ಕಳು ಮರೆತಿಲ್ಲ.

ಚುನಾವಣೆ ಬಂದಿತೆಂದರೆ ರಾಜನಿಗೆ ಅಮಿತೋತ್ಸಾಹ. ತಮ್ಮ ಕೈಲಾದ ಮಟ್ಟಿಗೆ ಚುನಾವಣಾ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಲ್ಲದೇ, ಅದೆಷ್ಟೋ ಬಾರಿ ನಮ್ಮೊಂದಿಗೆ ಮನೆ ಮನೆಯ ಪ್ರಚಾರಕ್ಕೆ ಬಂದಿದ್ದಾರೆ. ಬಿಇಎಲ್ ಸುತ್ತಮುತ್ತಲಿನ ಬಹುತೇಕರಿಗೆ ರಾಜಾ ಪರಿಚಯವಿದ್ದ ಕಾರಣ ನಮ್ಮ ಪ್ರಚಾರ ಬಲು ಸುಲಭವಾಗುತ್ತಿತ್ತು.

ಇನ್ನು ನಮ್ಮ ಅನೇಕ ಕಾರ್ಯಕ್ರಮಗಳಿಗೆ ಹಣದ ಕೊರತೆಯಾದಾಗ ನಮಗೆಲ್ಲಾ ರಾಜಾ ಅಪತ್ಭಾಂಧವನೇ ಸರಿ. ಹೇಳದೇ ಕೇಳದೇ ಅವರ ಮನೆಗೆ ಹೋಗಿ ರಾಜಾ ಇಂತಹ ಕಾರ್ಯಕ್ರಮ ಮಾಡ್ತಾ ಇದ್ದೀವಿ. ನಿಮ್ಮಿಂದ ಸಹಾಯ ನಿರೀಕ್ಷಿಸಿತ್ತಿದ್ದೇವೆ ಮೊದಲೆಲ್ಲಾ ಕೇಳುತ್ತಿದ್ದೆವು. ಈಗೆಲ್ಲಾ ಸುಮ್ಮನೇ ಅವರ ಮನೆಗೆ ಹೋದರೇ ಸಾಕು ಏನು ಸಮಾಚಾರ? ಯಾವ ಕಾರ್ಯಕ್ರಮ ಮಾಡುತ್ತಿದ್ದೀರಿ? ನನ್ನಿಂದ ಎಷ್ಟು ನಿರೀಕ್ಷೆ ಮಾಡುತ್ತಿದ್ದೀರಿ ಎಂದು ಅವರೇ ಖುದ್ದಾಗಿ ವಿಚಾರಿಸಿ ಇಂತಹ ದಿನ ಬಂದು ತೆಗೆದುಕೊಂಡು ಹೋಗಿ ಎಂದು ಹೇಳಿ ಮಾತಿಗೆ ತಕ್ಕಂತೆ ಯಥೇಚ್ಚವಾಗಿ ಸಮಾಜಮುಖೀ ಕೆಲಸಗಳಿಗೆ ದಾನ ಮಾಡುತ್ತಿದ್ದ ದಾರಾಳಿ ನಮ್ಮ ರಾಜ.

ನನ್ನ ಲೇಖನಗಳ ಖಾಯಂ ಓದುಗರಾಗಿದ್ದ ರಾಜಾ. ಅವರಿಗೆ ನನ್ನ ಯಾವುದಾದರೂ ಲೇಖನ ಇಷ್ಟವಾಗಿದ್ದಲ್ಲಿ ಕೂಡಲೇ ಕರೆ ಮಾಡೀ ತಮ್ಮ ಎತ್ತರದ ಧ್ವನಿಯಲ್ಲಿ ಶ್ರೀಕಂಠಾ ಎಲ್ಲಿದ್ದೀಯಾ? ಏನ್ಮಾಡ್ತಾ ಇದ್ದಿಯಾ? ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ? ನಿಮ್ಮ ಅಕ್ಕತಂಗಿಯರು ಹೇಗಿದ್ದಾರೇ? ಎಂದೇ ಉಭಯ ಕುಶಲೋಪರಿ ವಿಚಾರಿಸಿ, ನಂತರ ನನ್ನ ಲೇಖನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ನನ್ನನ್ನು ಹುರಿದುಂಬಿಸುತ್ತಿದ್ದಿದ್ದಲ್ಲದೇ ಅನೇಕ ಬಾರಿ ಸೂಕ್ತ ಸಲಹೆಗಳನ್ನೂ ಕೊಡುತ್ತಿದ್ದನ್ನು ಖಂಡಿತವಾಗಿಯೂ ಮರೆಯಲು ಸಾಧ್ಯವೇ ಇಲ್ಲ.

ಇಂದು ಬೆಳಿಗ್ಗೆ ತಮ್ಮ ಎಂದಿನ ವೈದ್ಯಕೀಯ ತಪಾಸಣೆಗೆಂದು ಆಸ್ಪತ್ರೆಗೆ ಹೋದವರು ಅಲ್ಲಿ ಉಸಿರಾಟದ ಸಮಸ್ಯೆಯನ್ನು ಎದುರಿಸಿ ಅಲ್ಲಿಂದ ಕೂಡಲೇ ರಾಮಯ್ಯ ಆಸ್ಪತ್ರೆಗೆ ಆಂಬ್ಯುಲೆನ್ಸಿನಲ್ಲಿ ಸಾಗಿಸುತ್ತಿರುವಾಗಲೀ ತೀವ್ರವಾದ ಹೃದಯ ಸ್ಥಂಭನವಾಗಿ ನಮ್ಮನ್ನು ಅಗಲಿದ್ದಾರೆ. ಕಾಕತಾಳೀಯ ಎಂದರೆ ಶಿವಮೂರ್ತಿಗಳೇ ಹೇಗಿದ್ದೀರಿ ಎಂದು ಜೋರಾಗೀ ಹೊರಗಿನಿಂದಲೇ ನಮ್ಮ ತಂದೆಯವರನ್ನು ವಿಚಾರಿಸುತ್ತಲೇ ಮನೆಗೆ ಬರುತ್ತಿದ್ದ ರಾಜಾ, ಮೂರು ವರ್ಷಗಳ ಹಿಂದೇ ಇದೇ ಆಶ್ವಯುಜ ಶುದ್ಧ ದ್ವಾದಶಿಯ ಬೆಳಿಗ್ಗೇ ಇದೇ ರೀತಿ ಉಸಿರಾಟದ ಸಮಸ್ಯೆಯಿಂದ ಇದೇ ರಾಮಯ್ಯ ಅಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ಮಾರ್ಗದ ಮಧ್ಯದಲ್ಲೇ ನಮ್ಮ ತಂದಯವರೂ ಆಂಬ್ಯುಲೆನ್ಸಿನಲ್ಲಿ ತೀವ್ರ ಹೃದಯ ಸ್ಥಂಭನದಿಂದಾಗಿ ಇಹಲೋಕ ತ್ಯಜಿಸಿದ್ದರು.

ನಮ್ಮ ತಂದೆಯವರ ಮೂರನೇ ವರ್ಷದ ಪುಣ್ಯತಿಥಿಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವಾಗಲೇ ಸ್ನೇಹಿತರು ಕರೆ ಮಾಡಿ, ವಿಷ್ಯಾ ಗೊತ್ತಾಯ್ತಾ? ಬೋರ್ವೆಲ್ ರಾಜಾ ಹೋಗ್ಬಿಟ್ರಂತೇ ಎಂದಾಗ, ಒಂದು ಕ್ಷಣ ತಬ್ಬಿಬ್ಬಾಗಿ ಹೋದೆ. ತಂದೆಯವರ ಶ್ರಾದ್ಧ ಕರ್ಮಗಳನ್ನು ಮುಗಿಸಿಕೊಂಡು ರಾಜಾ ಅವರ ಮನೆಗೆ ಹೋದಾಗ ನಮ್ಮ ತಂದೆಯವರ ರೀತಿಯಲ್ಲಿಯೇ ನಮ್ಮನ್ನಗಲಿದ ರೀತಿ ಕೇಳಿ ಮನಸ್ಸಿಗೆ ಬಹಳಷ್ಟು ಸಂಕಟವಾಯಿತು.

ಮನುಷ್ಯ ಹಣ, ಆಸ್ತಿ, ಸಂಪತ್ತು ಎಷ್ಟೇ ಮಾಡಿದರೂ ಸತ್ತಾಗ ಅದನ್ನು ಆತ ತನ್ನ ಜೊತೆಗೆ ತೆಗೆದುಕೊಂಡು ಹೋಗಲಾರ. ಆದರೆ ಆತ ಮಾಡಿದ ಪುಣ್ಯಫಲಗಳು ಆತನ ಜೊತೆಗೇ ಬರುತ್ತದೆ ಎನ್ನುವುದಕ್ಕೆ, ರಾಜಾ ಅವರ ಅಂತಿಮ ದರ್ಶನ ಪಡೆಯಲು ಬಂದಿದ್ದವರಲ್ಲಿ, ಅವರ ನೆಂಟರಿಷ್ಟರಿಗಿಂತಲೂ ಅವರ ಸ್ನೇಹಿತರು ಮತ್ತು ಅವರಿಂದ ಉಪಕೃತರಾದವರ ಸಂಖ್ಯೆಯೇ ಹೆಚ್ಚಾಗಿದ್ದದ್ದು ಜ್ವಲಂತ ಉದಾಹರಣೆ.

ಸಾಯಬಾರದ ವಯಸ್ಸಾದ 62 ಕ್ಕೇ ಹಸನ್ಮುಖಿ, ಅಜಾನುಬಾಹು, ಎಲ್ಲದಕ್ಕಿಂತಲೂ ಹೆಚ್ಚಾಗಿ ಆಧುನಿಕ ಭಗೀರಥನಂತೆ, ಸಾವಿರಾರು ರೈತಾಪಿ ಜನರಿಗೆ ಮತ್ತು ನಗರವಾಸಿಗಳಿಗೆ ನೀರಿನ ಸೆಲೆಯನ್ನು ಕಂಡು ಕೊಟ್ಟು ಜನಾನುರಾಗಿದ್ದ ರಾಜಶೇಖರ್ ‌ಎಲ್ಲರ‌ ಪ್ರೀತಿಯ‌ ಲಂಬೂ ರಾಜ, ರಾಜಾ, ಬೋರ್ವೆಲ್ ರಾಜ ಹೀಗೆ ಅಕಾಲಿಕವಾಗಿ ನಮ್ಮನ್ನು ‌ ಅಗಲಿರುವುದು ಕೇವಲ ಅವರ ಕುಟುಂಬಕ್ಕಲ್ಲದೇ ಇಡೀ ಸಮಾಜಕ್ಕೂ ಮತ್ತು ಸಂಘಪರಿವಾರಕ್ಕೂ ತುಂಬಲಾಗದ ನಷ್ಟವಾಗಿದೆ ಎಂದರೂ ತಪ್ಪಾಗಲಾರದು.

ನೆಮ್ಮದಿಯ ಸಂಗತಿ ಎಂದರೆ, ಪ್ರತೀ ದಿನವೂ ಪ್ರಾರ್ಥನೆಯಲ್ಲಿ ಕೇಳಿಕೊಳ್ಳುವಂತೆ ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ ಎನ್ನುವಂತೆ ಯಾರಿಗೂ ತೊಂದರೆ ಕೊಡದೇ, ಯಾರಿಂದಲೂ ಯಾವುದೇ ಸಹಾಯವವನ್ನು ಬಯಸದೇ, ಒಂದು ಚೂರು ನರಳದೇ, ನಿರಾಯಾಸವಾಗಿ ಸದ್ಗತಿಯನ್ನು ಪಡೆದಿದ್ದಾರೆ. ತಮ್ಮ ಬಿಡುವಿಲ್ಲದ ದಣಿವಿಲ್ಲದ ದುಡಿತದ ಮಧ್ಯೆ ತಮ್ಮ ಆರೋಗ್ಯದ ಕಡೆ ಸ್ವಲ್ಪ ಗಮನ ಹರಿಸದಿದ್ದದ್ದೂ ತಪ್ಪಾಯಿತೇನೋ ಎನಿಸುತ್ತದೆ. ಏನೇ ಆಗಲಿ, ಭಗವಂತ ರಾಜ ಅವರ ಆತ್ಮಕ್ಕೆ ಸದ್ಗತಿ ಕೊಡಲಿ ಮತ್ತು ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದಷ್ಟೇ ನಾವು ನೀವು ಪ್ರಾರ್ಥಿಸಬಹುದು.

ಏನಂತೀರೀ?

14 thoughts on “ಆಧುನಿಕ ಭಗೀರಥ ರಾಜಶೇಖರ್(ರಾಜಾ)

 1. ಎಲ್ಲರ ಜೊತೆ ಸ್ನೇಹಮಯಿ ಆಗಿದ್ದ ಹಿರಿಯ ಸ್ನೇಹಿತನಿಗೆ ಸದ್ಗತಿ ದೊರಕಲಿ ಎಂದು ಪ್ರಾರ್ಥನೆ.

  Like

 2. Padhagalu barthayilla. Naanu Abhagyalu ninna darshana padayalu Aagalilla. You are so Great Raja. I wish to call you Ganga Puthra. You.helped and achieved a lot to provide water whoever need especially the villagers. So you are To be called Ganga Puthra. I pray to God for your wonderful soul to stay under His Feet.

  Like

  1. ಎಲ್ಲರ ಮನಸ್ಸನ್ನು ಗೆದ್ದ ರಾಜಶೇಖರ್ ಸರ್ ಕೋಟಿ ನಮನಗಳು ನನ್ನ ನಿಮ್ಮ ಒಡನಾಟ ಜೀವನ ಪರಿಯಂತ ಮರೆಯಲು ಅಸಾಧ್ಯ 🙏🙏🙏
   ನಮ್ಮೆಲ್ಲರ ಮನದಲ್ಲಿ ಸದಾ ಇರುತ್ತಿದ್ದಾರೆ

   Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s