ಇವತ್ತು ಜನವರಿ 23, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹುಟ್ಟಿದ ದಿನ. ಸಾಧಾರಣವಾಗಿ ಹುಟ್ಟಿದ ಹಬ್ಬ ಆಚರಿಸಿಕೊಳ್ಳುವವರು ಬದುಕಿದ್ದಲ್ಲಿ ಅವರ ಆಯಸ್ಸು ಇನ್ನಷ್ಟು ವೃದ್ದಿಯಾಗಲಿ ಎಂದು ವರ್ಧಂತಿ ಆಚರಿಸುತ್ತೇವೆ. ಅಕಸ್ಮಾತ್ ಆವರು ಮೃತಪಟ್ಟಿದ್ದಲ್ಲಿ ಜಯಂತಿಯನ್ನು ಆಚರಿಸುತ್ತೇವೆ. ಸುಭಾಷ್ ಚಂದ್ರ ಬೋಸ್ ಅವರ 126 ನೇ ಜನ್ಮದಿನದಂದು ಅದನ್ನು ವರ್ಧಂತಿ ಕರೆಯಬೇಕೋ ಇಲ್ಲವೇ ಜಯಂತಿ ಎಂದು ಹೇಳಬೇಕೋ ಎಂಬ ಜಿಜ್ಞಾಸೆ ಬಹಳ ವರ್ಷಗಳಿಂದಲೂ ನನಗೆ ಕಾಡುತ್ತಿತ್ತು. ಬಹುಶಃ ಇಂತಹ ಜಿಜ್ಞಾಸೆ ಹಲವಾರು ಜನರಿಗೆ ಕಾದಿರುವುದನ್ನು ಗಮನಿಸಿದ ಪ್ರಸಕ್ತ ಕೇಂದ್ರ ಸರ್ಕಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹುಟ್ಟಿದ ದಿನವನ್ನು ಪರಾಕ್ರಮ ದಿನವೆಂದು ಆಚರಿಸಲು ನಿರ್ಧರಿಸಿರುವುದು ಅತ್ಯಂತ ಸಮಂಜಸ ಮತ್ತು ಅಪ್ಯಾಯಮಾನ ವೆನಿಸುತ್ತದೆ.
ಈ ವರ್ಷ ದೆಹಲಿಯ ರಾಜಪಥದ ಇಂಡಿಯಾ ಗೇಟ್ ಎದುರಿಗೆ ಒಂದು ಕಾಲದಲ್ಲಿ ಬ್ರಿಟಿಷರ ಕಿಂಗ್ ಜಾರ್ಜ್ ಪ್ರತಿಮೆ ನಿಂತಿದ್ದ ಜಾಗದಲ್ಲಿ ಬ್ರಿಟೀಷರಿಗೆ ಸಿಂಹಸ್ವಪ್ನರಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸರ ಪ್ರತಿಮೆ ನಿಲ್ಲಲಿದೆ ಎಂದು ಪ್ರಧಾನಿ ಮೋದಿ ಘೋಷಿಸುವ ಮೂಲಕ, ಕಡೆಗೂ ನಮ್ಮ ದೇಶದ ಮೊದಲ ಪ್ರಧಾನಿಗೆ ಸಲ್ಲಬೇಕಾದ ಗೌರವ ಈಗಲಾದರೂ ಸಲ್ಲಿಕೆ ಆಗಿರುವುದಕ್ಕೆ ಬಹಳ ಹೆಮ್ಮೆಯಾಗುತ್ತಿದೆ
ರಾಷ್ಟ್ರಕ್ಕೆ ನೇತಾಜಿಯವರ ಅದಮ್ಯ ಮನೋಭಾವ ಮತ್ತು ನಿಸ್ವಾರ್ಥ ಸೇವೆಯನ್ನು ಗೌರವಿಸುವ ಮತ್ತು ಅದನ್ನು ಚಿರಕಾಲವೂ ನೆನಪಿಸಿಕೊಳ್ಳುವ ಸಲುವಾಗಿ, ಅದರಲ್ಲೂ ವಿಶೇಷವಾಗಿ ಇಂದಿನ ಯುವಕರಿಗೆ ಸ್ಫೂರ್ತಿ ನೀಡುವ ಸಲುವಾಗಿ ಈ ವರ್ಷದಿಂದ ಪ್ರತಿ ವರ್ಷವೂ ಜನವರಿ 23 ರಂದು ಪರಾಕ್ರಮ ದಿನ ಎಂದು ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಧೈರ್ಯದಿಂದ ವರ್ತಿಸಿದ ನೇತಾಜಿಯವರ ಮಾದರಿಯಲ್ಲೇ ದೇಶಭಕ್ತಿಯ ಉತ್ಸಾಹವನ್ನು ತುಂಬುವ ಉದ್ದೇಶ ಇದರ ಹಿಂದಿರುವುದು ಸ್ಪಷ್ಟವಾಗಿದೆ.
ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಾವು ಎರಡು ರೀತಿಯ ನಾಯಕರುಗಳನ್ನು ಕಾಣಬಹುದು. ಒಬ್ಬರು ಬ್ರಿಟೀಷರ ವಿರುದ್ಧ ಹಾವೂ ಸಾಯಬಾರದು ಕೋಲೂ ಮುರಿಯಬಾರದು ಎನ್ನುವಂತೆ ಸ್ವತಂತ್ರ್ಯ ಹೋರಾಟದ ಹೆಸರಿನಲ್ಲಿ ಸಾತ್ವಿಕವಾದ ಪ್ರತಿಭಟನೆ ಮಾಡುತ್ತಲೇ ಬ್ರಿಟೀಷ್ ಸರ್ಕಾರದ ಸೆರೆಮನೆಗಳಲ್ಲಿ ಬಂಧಿತರಾಗಿ ಐಶಾರಾಮ್ಯಜೀವನ ನಡೆಸುತ್ತಾ ಹೊರತೆ ತಾವು ದೇಶದ ಸ್ವಾತ್ರಂತ್ರ್ಯಕ್ಕಾಗಿ ತ್ಯಾಗ ಬಲಿದಾನಗಳನ್ನು ಗೈಯ್ಯುತ್ತಿದ್ದೇವೆ ಎಂದು ತೋರಿಸಿಕೊಳ್ಳುವವರು, ದೇಶದಲ್ಲಿ ಬ್ರಿಟೀಷರ ವಿರುದ್ಧವೇ ಹೋರಾಡುತ್ತಿದ್ದರೂ ಮೊದಲನೇ ಮತ್ತು ಎರಡನೇ ಮಹಾಯುದ್ದದ ಸಮಯದಲ್ಲಿ ಪತ್ಯಕ್ಷವಾಗಿಯೇ ಅದೇ ಬ್ರಿಟೀಷರ ಪರವಾಗಿಯೇ ಭಾರತೀಯರು ಹೋರಾಟಬೇಕೆಂದು ಕರೆಕೊಡುವವರು ಒಂದು ರೀತಿಯ ನಾಯಕರುಗಳಾದರೇ, ಮತ್ತೊಬ್ಬರು ದೇಶಕ್ಕಾಗಿ ನಿರ್ಭಿಡೆ ಮತ್ತು ನಿಸ್ವಾರ್ಥ ತ್ಯಾಗಿಗಳು. ಇವರ ಬಳಿ ಒಳಗೊಂದು ಹೊರಗೊಂದು ಮಾತೇ ಇಲ್ಲಾ. ಇವರದ್ದೇನಿದ್ದರೂ ಏಕ್ ಮಾರ್ ದೋ ತುಕುಡಾ ಮಾದರಿಯ ನಾಯಕರುಗಳು. ಶತಾಯಗತಾಯ ಬ್ರಿಟೀಷರನ್ನು ಭಾರತಿಂದ ಹೊರಗೆ ಹಾಕಲು ಉಗ್ರವಾದ ಹೋರಾಟವನ್ನು ಮಾಡಿಕೊಂಡು ಬಂದವರು. ಈ ಹೋರಾಟದಲ್ಲಿೆ ಎಂತಹ ತ್ಯಾಗ ಮತ್ತು ಬಲಿದಾನಕ್ಕೂ ಹೆದರದ ಕೆಚ್ಚದೆಯ ವೀರ ಪರಾಕ್ರಮಿಗಳು. ಈ ರೀತಿಯ ಎರಡನೇ ಸಾಲಿಗೆ ಸೇರುವ ನಾಯಕರುಗಳಲ್ಲಿ ನಿಸ್ಸಂದೇಹವಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಅಗ್ರಗಣ್ಯರಾಗುತ್ತಾರೆ ಹಾಗಾಗಿ ಅವರ ಜನ್ಮದಿನವನ್ನು ಪರಾಕ್ರಮ ದಿನ ಎಂದು ಕರೆದಿರುವುದು ಅತ್ಯಂತ ಸೂಕ್ತ ಮತ್ತು ವಸ್ತುನಿಷ್ಟ ಎನಿಸುತ್ತದೆ.
ಇಂತಹ ಲಕ್ಷಾಂತರ ವೀರ ಶೂರ ಪರಾಕ್ರಮಿಗಳ ಉಗ್ರ ಹೋರಾಟಗಳನ್ನು ತಾಳಲಾರದ ಬ್ರಿಟೀಷರು ಕಡೆಗೂ ಭಾರತದಿಂದ ಹೊರಹೋಗಲು ನಿರ್ಧರಿಸಿದರು. ದುರದೃಷ್ಟವಶಾತ್ ಕೆಲ ಪಟ್ಟಭದ್ರ ಸ್ವಹಿತಾಸಕ್ತಿ ನಾಯಕರುಗಳು ಬಾರೀ ಶ್ರಮವಹಿಸಿ ಗೆದ್ದಲು ಕಟ್ಟಿದ ಹುತ್ತದಲ್ಲಿ ಹಾವೊಂದು ಬಂದು ಸೇರಿಕೊಂಡು ಅದೇ ಗೆದ್ದಲು ಹುಳವನ್ನು ತಿಂದು ನಾಶ ಪಡಿಸಿಕೊಂಡು ಹುತ್ತವನ್ನೇ ತನ್ನದೆಂದು ಆಕ್ರಮಣ ಮಡಿಸಿಕೊಳ್ಳುವಂತೆ ಈ ಎಲೆಮರೆಕಾಯಿಗಳ ಉಗ್ರ ಹೋರಾಟವನ್ನೇ ಅತಿಕ್ರಮಣ ಮಾಡಿ ಸ್ವಾತಂತ್ರ್ಯ ಬಂದಿದ್ದೇ ನಮ್ಮಂತಹವರ ಹೋರಾಟದ ಫಲ ಎಂದೇ ಬಿಂಬಿಸಿ, ಜನರನ್ನು ನಂಬಿಸಿ ಸ್ವಾತಂತ್ರ್ಯಾನಂತರ ಎಲ್ಲಾ ರೀತಿಯ ಅಂತಸ್ತು ಮತ್ತು ಅಧಿಕಾರವನ್ನು ಅನುಭವಿಸಿದ್ದು ಅಕ್ಷಮ್ಯ ಅಪರಾಧ ಎಂದರೂ ತಪ್ಪಾಗಲಾರದು.
ನೀವು ನನಗೆ ರಕ್ತ ಕೊಡಿ… ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ. ಎಂದು ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಕರೆ ನೀಡುವ ಮೂಲಕ ಅದೆಷ್ಟೋ ಯುವಕರಿಗೆ ಸ್ಫೂರ್ತಿ ತುಂಬಿದಲ್ಲದೇ, ತಮ್ಮ ಈ ರೀತಿಯ ಸಿಡಿಲಬ್ಬರದ ಮಾತುಗಳಿಂದ ದೇಶದ ಪ್ರತಿಯೊಬ್ಬ ನಾಗರೀಕರಲ್ಲೂ ದೇಶ ಪ್ರೇಮದ ಕಿಚ್ಚು ಜಾಗೃತಗೊಳಿಸಿದ ಕೆಚ್ಚೆದೆಯ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ 1897 ಜನವರಿ 23ರಂದು ಒಡಿಶಾದ ಕಟಕ್ ನಗರದಲ್ಲಿ ಜಾನಕಿನಾಥ್ ಬೋಸ್ ಮತ್ತು ಪ್ರಭಾವತೀ ದೇವಿ ದಂಪತಿ ಪುತ್ರನಾಗಿ ಜನಿಸಿ. ಬಾಲ್ಯದಲ್ಲಿಯೇ ಸ್ವಾಮೀ ವಿವೇಕಾನಂದರ ಆದರ್ಶಗಳಿಗೆ ಮನಸೋತು ತಮ್ಮ ಪದವಿಯ ನಂತರ ಐ.ಸಿ.ಎಸ್ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪಯಣಿಸಿ, ನಾಲ್ಕನೇ ಸ್ಥಾನಿಗರಾಗಿ ಐ.ಸಿ.ಎಸ್ ಪದವಿಯನ್ನು ಗಳಿಸಿದರೂ.ವಿದೇಶೀ ನೌಕರಿ ಒಲ್ಲೆ ಎಂದು ಗಳಿಸಿದ್ದ ಐ.ಸಿ.ಎಸ್. ಪದವಿಯನ್ನು ದಿಕ್ಕರಿಸಿ ಮಹಾತ್ಮಾ ಗಾಂಧಿಯವರನ್ನು ಭೇಟಿ ಮಾಡಿ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಾಲ್ಲಿ ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಲ್ಲದೇ, ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿ ಹೊರಹೊಮ್ಮಿದ್ದರು.
ಆದರೆ ನೆಹರು ಮತ್ತು ಬೋಸರ ಆಯ್ಕೆಯಲ್ಲಿ ಗಾಂಧಿಯವರು ತಮ್ಮ ಅಜ್ಞಾಪಾಲಕರು ಮತ್ತು ನಸುಗುನ್ನಿಯಂತಹ ಸ್ವಭಾವದವರಾಗಿದ್ದ ನೆಹರು ಅವರನ್ನು ಆಯ್ಕೆ ಮಾಡಿಕೊಂಡಿದ್ದು ಈ ದೇಶದ ದೌರ್ಭ್ಯಾಗ್ಯವಾಗಿ ಇದೇ ನೆಹರೂವಿನ ಸ್ವಾರ್ಥ ಮತ್ತು ದ್ವೇಷಕ್ಕೆ ಬಲಿಯಾದ ಅಂಬೇಡ್ಕರ್, ಸಾವರ್ಕರ್, ಪಟೇಲ್ ಮುಂತಾದ ನಾಯಕರುಗಳ ಪಟ್ಟಿಯಲ್ಲಿ ಸುಭಾಷರು ಸೇರಿಹೋದದ್ದು ಈ ದೇಶದ ದೌರ್ಭಾಗ್ಯವೇ ಸರಿ. ಗಾಂಧಿಯವರನ್ನು ತಮ್ಮ ಪರಮೋಚ್ಚ ನಾಯಕ ಎಂದು ಒಪ್ಪಿಕೊಂಡಿದ್ದರೂ, ಗಾಂಧಿಯವರ ಅಹಿಂಸಾ ತತ್ವವನ್ನು ಬಹಳವಾಗಿ ವಿರೋಧಿಸುತ್ತಾ ತಮ್ಮ ಆಕ್ರಮಣಕಾರಿಯೂ ಮನೋಭಾವನೆಯಿಂದಾಗಿ ಸುಭಾಷರು ಸಹಜವಾಗಿ ಗಾಂಧಿಯವರ ಅಸಹನೆ, ಅಸಮಾಧಾನ ಮತ್ತು ನಿರ್ಲಕ್ಷ್ಯಕ್ಕೆ ಒಳಗಾದಿದ್ದಲ್ಲದೇ, ಇದರಿಂದ ಅಸಮಧಾನಗೊಂಡು ಕಡೆಗೆ ತಮ್ಮ ಐಎನ್ಎ ಸೇನೆಗಾಗಿ ಸೈನಿಕರನ್ನು ಒಟ್ಟು ಗೂಡಿಸುವ ಸಲುವಾಗಿ ದೇಶದಿಂದಲೇ ಹೊರಹೋಗಿದ್ದು ಒಂದು ರೀತಿಯ ದೌರ್ಭಾಗ್ಯ ಮತ್ತು ಸೌಭಾಗ್ಯವೇ ಎಂದು ಹೇಳಬೇಕಾಗುತ್ತದೆ.
ಗಾಂಧಿಯವರು ತಮ್ಮ ಸಿದ್ಧಾಂತಕ್ಕೆ ವಿರುದ್ಧವಾಗಿ ಎರಡನೇ ಮಹಾಯುದ್ಧದಲ್ಲಿ ಭಾರತೀಯ ಸೈನ್ಯವನ್ನು ಬ್ರಿಟೀಷರ ಪರವಾಗಿ ಹೋರಾಟಕ್ಕಿಳಿಸಿದ ಸಂದರ್ಭದಲ್ಲಿ, ಶತ್ರುವಿನ ಶತ್ರು ಮಿತ್ರ ಎಂಬ ನೀತಿಯಂತೆ ನೇತಾಜಿಯವರು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಮತ್ತು ಇಟಲಿಯ ನಾಯಕ ಮುಸಲೋನಿಯನ್ನು ಭೇಟಿಯಾಗಿ ಬ್ರಿಟೀಷರ ವಿರುದ್ದ ಹೋರಾಡಲು ಅವರ ಸಹಾಯಹಸ್ತವನ್ನೂ ಚಾಚಿದ್ದಲ್ಲದೇ, ಜಪಾನಿನ ಸಹಕಾರದೊಂದಿಗೆ ಬ್ರಿಟೀಷರ ವಿರುದ್ಧ ಹೊಸ ಸೈನ್ಯ ಕಟ್ಟಿ ಹೋರಾಡಿ ಆರಂಭದಲ್ಲಿ ಯಶಸ್ಸನ್ನೂ ಗಳಿಸಿದ್ದು ನಿಜಕ್ಕೂ ಶ್ಲಾಘನೀಯವಾದ ಸಾಧನೆಯೇ ಸರಿ.
ಸುಭಾಷರು ಸಾವರ್ಕರ್ ಅವರನ್ನು ಭೇಟಿಯಾದ ಸಂದರ್ಭ ಹೇಗಿತ್ತೆಂದರೆ, ನರೇಂದ್ರರಿಗಾಗಿ ಪರಮಹಂಸರು ಕಾಯುತ್ತಿದ್ದ ಹಾಗಿತ್ತಂತೆ. ನೀನು ಖಂಡಿತವಾಗಿಯೂ ನನ್ನ ಬಳಿ ಬಂದೇ ಬರುತ್ತೀಯೇ ಎಂದು ಗೊತ್ತಿತ್ತು. ಇಷ್ಟೇಕೆ ತಡ ಮಾಡಿ ಬಂದೆ ಎಂದು ರಾಮಕೃಷ್ಣರು ಕೇಳಿದಂತೆಯೇ ಸಾವರ್ಕರ್ ಅವರೂ ಸಹಾ ಸುಭಾಷರನ್ನು ಕೇಳಿ, ನಿನ್ನ ಧ್ಯೇಯೊದ್ದೇಶಗಳೇನು ಎಂದು ಕೇಳಿದಾಗ, ಭಾರತದಲ್ಲಿರುವ ಎಲ್ಲಾ ಬ್ರಿಟೀಶರ ಮೂರ್ತಿಗಳನ್ನು ಕಿತ್ತೊಗೆಯಬೇಕೆಂದು ಸಂಕಲ್ಪ ಮಾಡಿದ್ದೇನೆ ಎಂದರಂತೆ ಸುಭಾಷರು. ಸುಭಾಷರ ಮಾತನ್ನು ಕೇಳಿದ ಸಾವರ್ಕರ್ ನಗುತ್ತಾ, ಅಯ್ಯೋ ಪೆದ್ದಾ, ಬ್ರಿಟೀಷರ ಮೂರ್ತಿಗಳನ್ನು ಕಿತ್ತೊಗೆದರೆ ಮತ್ತೊಂದು ಮೂರ್ತಿಗಳನ್ನು ಸ್ಥಾಪಿಸುತ್ತಾರೆ ಈ ಕೆಲಸ ಮಾಡಲು ನೂರಾರು ಜನರು ಸಿಗುತ್ತಾರೆ. ಆದರೆ ನಿನಗೆ ಬ್ರಿಟೀಷರನ್ನೇ ದೇಶದಿಂದ ಕಿತ್ತೊಗೆಯುವ ಶಕ್ತಿಯಿದೆ. ಅಂತಹ ಮಹೋನ್ನತ ಕಾರ್ಯದಲ್ಲಿ ತೊಡಗಿಸಿಕೋ. ಅದಕ್ಕಾಗಿ ಸಶಕ್ತ ಸೈನ್ಯವನ್ನು ಕಟ್ಟು ಎಂದು ಪ್ರೇರೇಪಿಸಿದ್ದೇ ಮುಂದೆ ಸುಭಾಷರಿಗೆ ಐ.ಎನ್.ಎ. ಕಟ್ಟಲು ಮೂಲ ಪ್ರೇರಣೆಯಾಗಿತ್ತು.
ಹೀಗೆ ಬೋಸರ ಜನಪ್ರಿಯತೆ ಹೆಚ್ಚುವುದನ್ನು ಗಮನಿಸಿದ ನೆಹರು, ಬೋಸರನ್ನು ಇದೇ ರೀತಿಯಲ್ಲಿಯೇ ಮುಂದುವರೆಯಲು ಬಿಟ್ಟಲ್ಲಿ ಇವರು ತಮ್ಮ ಪ್ರತಿಸ್ಪರ್ಧಿಯಾಗುತ್ತಾರೆ ಎಂಬ ದುರಾಲೋಚನೆಯ ದೂರಾಲೋಚನೆಯಿಂದಾಗಿ ಸುಭಾಷರ ಬಗ್ಗೆ ಗಾಂಧಿಯವರಿಗೆ ಭಿನ್ನಾಭಿಪ್ರಾಯ ಮೂಡಿಸುವುದರಲ್ಲಿ ಯಶಸ್ವಿಯೂ ಆದರು.
ಗಾಂಧಿಯವರು ಉತ್ತಮ ಸಾಧನೆಗಾಗಿ ಗುರಿ ಮತ್ತು ಮಾರ್ಗ ಎರಡೂ ಮುಖ್ಯ. ಉತ್ತಮ ಗುರಿ ತಲುಪಲು ಉತ್ತಮ ಮಾರ್ಗವೂ ಮುಖ್ಯ ಎಂಬ ಸಿದ್ಧಾಂತವನ್ನು ನಂಬಿದದ್ದರೆ, ಸುಭಾಷರು, ಉತ್ತಮ ಗುರಿಯ ಸಾಧನೆಗಾಗಿ ಮತ್ತು ನಮ್ಮ ರಕ್ಷಣೆಗಾಗಿ ಯಾವುದೇ ಮಾರ್ಗ ಅನುಸರಿಸಿಯಾದರೂ ಸರಿ. ಒಟ್ಟಿನಲ್ಲಿ ಗುರಿ ತಲುಪುವುದು ಮುಖ್ಯ ಎಂದೇ ಭಾವಿಸಿದ್ದರು.
ಸಮಸ್ಯೆಗಳನ್ಮು ಸಂಪೂರ್ಣವಾಗಿ ಪರಿಹರಿಸದೇ ಅಕ್ಷಣಕ್ಕೆ ಒಂದು ಪರಿಹಾರವನ್ನು ಸೂಚಿಸಿ ದೀರ್ಘಾವದಿಯ ಪರಿಹಾರಕ್ಕಾಗಿ ಸಮಸ್ಯೆಯನ್ನು ಮುಂದೂಡುವುದು ಗಾಂಧಿಯವರ ಮಾರ್ಗವಾದರೇ, ಸುಭಾಷರು, ಸಮಸ್ಯೆಯನ್ನು ಕಂಡ ತಕ್ಷಣವೇ ಅದಕ್ಕೊಂದು ಶಾಶ್ವತವಾದ ಪರಿಹಾರವನ್ನು ನೀಡಿ ಸಮಸ್ಯೆಯನ್ನು ಪರಿಹರಿಸಿ ಮುಂದಿನ ಸಮಸ್ಯೆಯತ್ತ ಗಮನ ಹರಿಸುತ್ತಿದ್ದರು.
ಬಹುತೇಕರಿಗೆ ಗೊತ್ತಿಲ್ಲದ ವಿಷಯವೇನೆಂದರೆ ಆರೆಸ್ಸೆಸ್‌ನ ಸಂಘದ ಧ್ಯೇಯ – ಅನುಶಾಸನ ಕಾರ್ಯ ಪದ್ಧತಿ ಕುರಿತಾಗಿ ಅನೇಕರು ಶ್ಲಾಘಸುತ್ತಿದ್ದದ್ದನ್ನು ಕೇಳಿ ಅದನ್ನು ಪ್ರತ್ಯಕ್ಷವಾಗಿ ನೋಡಲೆಂದೇ, 1938ರಲ್ಲಿ ಸಂಘ ಶಿಕ್ಷಾವರ್ಗ ಶಿಬಿರಕ್ಕೆ ಭೇಟಿ ಮಾಡಲು ನಿರ್ಧರಿಸಿದ್ದರೂ ಕಾರಣಾಂತರಗಳಿಂದ ಅಲ್ಲಿಗೆ ಭೇಟಿ ಸಾಧ್ಯವಾಗಲಿಲ್ಲ. ಮುಂದೆ ಕಾಂಗ್ರೆಸ್ ಅಧ್ಯಕ್ಷ ಪದವಿಗಾಗಿ ನಡೆದ ಪ್ರಪ್ರಥಮ ಚುನಾವಣೆಯಲ್ಲಿ ಡಾ|| ಪಟ್ಟಾಭಿ ಸೀತಾರಾಮಯ್ಯರ ವಿರುದ್ಧ 215 ಮತಗಳ ಗೆಲುವನ್ನು ಸಾಧಿಸಿ ಅಧ್ಯಕ್ಷ ಪಟ್ಟವನ್ನು ಅಲಂಕರಿಸಿದರೂ, ಸುಭಾಷ್ ಅವರ ವಿರುದ್ಧ ಹಲವಾರು ಟೀಕೆಗಳು, ಅನಗತ್ಯ ಋಣಾತ್ಮಕ ಮಾತುಗಳಿಂದ ಬೇಸತ್ತು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ೧೯೪೦ ರಲ್ಲಿ ಫಾರ್‌ವರ್ಡ್ ಬ್ಲಾಕ್ ಸ್ಥಾಪಸಿದರು. ಅದೇ ವರ್ಷದ ಜೂನ್ ೧೮ರಂದು ಸಂಘದ ಪ್ರಥಮ ಸರಸಂಘ ಚಾಲಕರಾದ ಡಾ|| ಹೆಡಗೇವಾರ್ ಜತೆ ಭೇಟಿ ಮಾಡಲು ನಾಗಪುರದ ಮೋಹಿತೇವಾಡಕ್ಕೆ ಬಂದಾಗ ತೀವ್ರ ಜ್ವರದಿಂದ ಹಾಸಿಗೆ ಹಿಡಿದಿದ್ದ ಡಾ.ಜೀ ಅವರ ಜೊತೆ ಅಂದು ಮಾತು ಕಥೆ ಸಾಧ್ಯವಾಗದೇ, ಡಾ.ಜೀ ಯವರ ಆರೋಗ್ಯ ಸುಧಾರಿಸಿದ ಮೇಲೆ ಭೇಟಿಯಗಲು ನಿಧರಿಸಿದರು. ದುರಾದೃಷ್ಟವಷಾತ್ ಹಾಗೆ ನಿರ್ಧರಿಸಿದ ಮೂರೇ ದಿನದಲ್ಲಿ ಡಾ|| ಹೆಡಗೇವಾರ್ ನಿಧನರಾದ ಕಾರಣ ಇಬ್ಬರು ದಿಗ್ಗಜರ ಮಹಾಮಿಲನ ತಪ್ಪಿಹೋಗಿದ್ದು ದೇಶಕ್ಕೆ ತುಂಬಲಾರದ ನಷ್ಟವೇ ಸರಿ. ಬಹುಶಃ ಆ ಇಬ್ಬರು ಮಹಾನ್ ನಾಯಕರು ಭೇಟಿಯಾಗಿದ್ದಲ್ಲೇ ಸ್ವಾತಂತ್ರ್ಯಾ ನಂತರ ಭಾರತದ ಪರಿಸ್ಥಿತಿ ಇಂದಿನಂತಿರದೇ ಬಹಳವಾಗಿಯೇ ಭಿನ್ನವಾಗಿರುತ್ತಿತ್ತು ಎಂದರೂ ಅತಿಶಯೋಕ್ತಿಯೇನಲ್ಲ.
ಎರಡು ಬಾರೀ ಕಾಂಗ್ರೇಸ್ ಅಧ್ಯಕ್ಶರಾಗಿದ್ದರೂ, ಗಾಂಧಿಯವರ ಅಹಿಂಸಾ ವಾದಕ್ಕೆ ಬ್ರಿಟೀಷರು ಬಗ್ಗುವುದಿಲ್ಲ. ಅವರಿಗೇನಿದ್ದರೂ ದಂಡ ದಶಗುಣಂ ಭವೇತ್ ಎನ್ನುವಂತೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ದೂರಾಲೋಚನೆಯಿಂದ ಸಾವರ್ಕರ್ ಅವರ ಪ್ರೇರಣೆಯಂತೆ ಆಜಾದ್ ಹಿಂದ್ ಫೌಜ್ (ಇಂಡಿಯನ್ ನ್ಯಾಷನಲ್ ಆರ್ಮಿ – ಐಎನ್‌ಎ) ಎಂಬ ಸೇನೆಯನ್ನು ಕಟ್ಟಿದಲ್ಲದೇ ಬ್ರಿಟೀಷರ ವಿರುದ್ಧ ಹೋರಾಡಲು ಕೇವಲ ಭಾರತವಲ್ಲದೇ, ಜಪಾನ್, ಜರ್ಮನಿ, ನೇಪಾಳ ಬರ್ಮಾ, ಶ್ರೀಲಂಕ ಮುಂತಾದ ಹತ್ತಾರು ದೇಶಗಳಿಂದ ವೀರ ಯೋಧರ ಪಡೆಯನ್ನು ಸಿದ್ಧಗೊಳಿಸಿ ಅವರಿಗೆ ಶಸ್ತ್ರ ತರಭೇತಿಯನ್ನು ನೀಡಿದ್ದಲ್ಲದೇ ಬ್ರಿಟೀಷರ ವಿರುದ್ಧ ಹೋರಾಟ ನಡೆಸಿ ಕ್ರಾಂತಿಕಾರಿ ನಿಲುವಿನ ನಾಯಕರಾಗಿ ಹೊರಹೊಮ್ಮಿದ್ದರು. ಅಪ್ರತಿಮ ದೇಶಭಕ್ತರಾಗಿದ್ದ ಬೋಸ್ ವಿದೇಶದಲ್ಲೂ ಸ್ವಾತಂತ್ರ್ಯ ಹೋರಾಟವನ್ನು ಸಂಘಟಿಸಿದ್ದರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶ ವಿದೇಶದಲ್ಲಿ ಸುತ್ತಾಡಿದ ಸುಭಾಷ್ ಚಂದ್ರ ಬೋಸ್ ಅವರು ಬ್ರಿಟಿಷರಿಗೇ ಸಿಂಹಸ್ವಪ್ನವಾಗಿ ಕಾಡಿದ್ದರು. ತಮ್ಮ ಪ್ರಖರ ಚಿಂತನೆಯ ಮೂಲಕವೇ ಎಲ್ಲರ ಮನಸ್ಸು ಗೆದ್ದಿದ್ದ ನೇತಾಜಿ, ತಮ್ಮ ದೇಶ ಪ್ರೇಮದ ಕಿಚ್ಚಿನಿಂದಲೇ ಆಗಸದೆತ್ತಕ್ಕೆ ಬೆಳೆದಿದ್ದರು. ಭಾರತವನ್ನು ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಲೇಬೇಕೆಂದು ಪಣ ತೊಟ್ಟಿದ್ದ ನೇತಾಜಿ ಅಂದಿನ ಬ್ರಿಟಿಷ್ ಸರ್ಕಾರಕ್ಕೆ ತನ್ನ ಪ್ರಖರ ನಿಲುವುಗಳಿಂದಲೇ ಬಿಸಿ ಮುಟ್ಟಿಸಿದ್ದರು.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕೆಚ್ಚೆದೆಯ ಹೋರಾಟದ ಫಲವಾಗಿಯೇ ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲೇ 21-10-1943ರಂದೇ ಭಾರತದ ಪ್ರಥಮ ಸರ್ಕಾರ ಆಜಾದ್ ಹಿಂದ್ ಸರ್ಕಾರ್ ಸ್ಥಾಪಿತವಾಗಿದ್ದಲ್ಲದೇ, ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಗಳಾದದ್ದು ಈಗ ಇತಿಹಾಸ. ಜಪಾನ್ ಸೇರಿದಂತೆ ಚೀನಾ,ರಷ್ಯ, ಪ್ರಾನ್ಸ, ಸಿಂಗಪುರ,ಬರ್ಮಾ, ಜರ್ಮನಿ, ಕ್ರೋಷಿಯಾ, ಫಿಲಿಫೈನ್ಸ್, ನಾನ್ ಕಿಂಗ್,ಥೈಲ್ಯಾಂಡ್, ಕ್ರೋವೇಷಿಯಾ, ಸಯಾಂ, ಇಟಲಿ, ಮಾಂಚುಕುವೋನಂಥಾ ರಾಷ್ಟ್ರಗಳು ಆಜಾದ್ ಹಿಂದ್ ಸರ್ಕಾರವನ್ನು ಭಾರತ ಸರ್ಕಾರವೆಂದು ಸುಭಾಷರನ್ನು ಭಾರತದ ಪ್ರಧಾನ ಮಂತ್ರಿಯೆಂದು ಮಾನ್ಯತೆ ನೀಡಿದ್ದವು ಎಂದರೆ ಸುಭಾಷ್ ಅವರ ಕೀರ್ತಿ ಎಷ್ಟಿತ್ತು ಎಂಬುದು ಅರಿವಾಗುತ್ತದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಆಜಾದ್ ಹಿಂದ್ ಸರ್ಕಾರ್ ಲೇಖನವನ್ನು ಓದುವ ಮೂಲಕ ತಿಳಿದು ಕೊಳ್ಳ ಬಹುದಾಗಿದೆ.
ಬ್ರಿಟಿಷರ ವಿರುದ್ಧ ಪ್ರಭಲ ಸೇನೆಯನ್ನು ಕಟ್ಟುವ ನಿಟ್ಟಿನಲ್ಲಿಯೇ ಪ್ರವಾಸಲ್ಲಿದ್ದಾಗ 1945ರ ಆಗಸ್ಟ್ 18ರಂದು ತೈವಾನ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನೇತಾಜಿಯವರು ಮೃತಪಟ್ಟರು ಜಪಾನ್ ಸರ್ಕಾರ ವರದಿ ಮಾಡಿತು. ಬೋಸ್ ಅವರು ಪ್ರಯಾಣಿಸುತ್ತಿದ್ದ ವಿಮಾನ, ಹಾರಾಟ ಆರಂಭಿಸಿ 20 ಮೀಟರ್ ಎತ್ತರಕ್ಕೆ ಹೋದ ಬಳಿಕ ಎಡಬದಿಯ ರೆಕ್ಕೆಗೆ ಧಕ್ಕೆಯಾಗಿ ನಂತರ ಎಂಜಿನ್‌ಗೂ ಧಕ್ಕೆಯಾಗಿ ಕೆಲವೇ ಕ್ಷಣಗಳಲ್ಲಿ ಸಂಪೂರ್ಣ ವಿಮಾನ ಬೆಂಕಿಗೆ ಆಹುತಿಯಾಯಿತು. ಈ ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಬೋಸ್ ಅವರು ಸಾಹಸಪಟ್ಟು ವಿಮಾನದಿಂದ ಕೆಳಗೆ ಇಳಿಸಿ, ಮಧ್ಯಾಹ್ನ 3 ಗಂಟೆಗೆ ತೈಪೆಯ ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸುಮಾರು 7 ಗಂಟೆಗೆ ಅವರು ಮೃತಪಟ್ಟರು. ಆಗಸ್ಟ್ 22ರಂದು ಬೋಸ್ ಅವರ ಅಂತ್ಯಕ್ರಿಯೆ ನಡೆಸಲಾಯಿತು ಎಂದು ವರದಿ ತಿಳಿಸಿದೆ.
ಆದರೆ ಸುಭಾಷರ ಅಭಿಮಾನಿಗಳು ಅಂದಿಗೂ ಇಂದಿಗೂ ಈ ವರದಿಯನ್ನು ಒಪ್ಪದೇ ನೇತಾಜಿಯವರನ್ನು ಬ್ರಿಟೀಷರೇ ಮೋಸದಿಂದ ಕೊಲೆ ಮಾಡಿರಬಹುದು ಎಂದು ಕೆಲವರು ಹೇಳಿದರೆ, ಇನ್ನೂ ಹಲವರು ಬೋಸರು ಸ್ವಾತಂತ್ರ್ಯ ನಂತರವೂ ಮಾರು ವೇಷದಲ್ಲಿ ಘುಮ್ನಾ ಬಾಬಾ ಎಂಬ ಹೆಸರಿನಲ್ಲಿಯೇ ಇದ್ದರು ಎಂದರೆ ಇನ್ನೂ ಕೆಲವರು ಇಂದಿಗೂ ಸುಭಾಷರು ಬದುಕಿದ್ದಾರೇ ಎಂದೆ ನಂಬಿಕೆ ಹೊಂದಿದ್ದಾರೆ. ಮೊನ್ನೆ ಸಂಯುಕ್ತ ಕರ್ನಾಟಕದಲ್ಲಿ ಖ್ಯಾತ ಪತ್ರಕರ್ತರಾದ ಈಶ್ವರ ದೈತೋಟ ಅವರ ಈ ಲೇಖನ ಅದಕ್ಕೆ ಪುಷ್ಟಿ ಕೊಡುವಂತಿದೆ.
ಹಾಗಾಗಿಯೇ ಲೇಖನದ ಆರಂಭದಲ್ಲಿ ಸುಭಾಷರ ಜನ್ಮದಿನ ವರ್ಧಂತಿಯೋ ಇಲ್ಲವೇ ಜಯಂತಿಯೋ ಎಂಬ ಜಿಜ್ಞಾಸೆ ಕಾಡುತ್ತಿದೆ ಎಂದು ಬರೆದಿದ್ದೆ. ಒಟ್ಟಿನಲ್ಲಿ ಸುಭಾಷರು ಜೀವಂತವಾಗಿ ಇರಲೀ ಅಥಾವ ಇಲ್ಲದಿರಲೀ, ಅವರ ಕೆಚ್ಚದೆಯ ಹೋರಾಟ ಅಂದಿಗೂ ಮತ್ತು ಇಂದಿಗೂ ಅನೇಕ ರಾಷ್ಟ್ರ ಭಕ್ತರಿಗೆ ಮಾರ್ಗದರ್ಶನವಾಗಿದೆ. ಗಾಂಧಿಯವರ ಸ್ವಾತಿಕ ಹೋರಾಟ ಅಥವಾ ಸುಭಾಷರ ಉಗ್ರ ಹೋರಾಟದ ಮಾರ್ಗವು ಭಿನ್ನವಾದರೂ ಅವರಿಬ್ಬರ ರಾಷ್ಟ್ರಪ್ರೇಮ ಮಾತ್ರ ಅನನ್ಘ ಹಾಗೂ ಅನುಕರಣೀಯವೇ ಸರಿ.
ಏನಂತೀರೀ?
ನಿಮ್ಮವನೇ ಉಮಾಸುತ
ವೀರ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಲೇಖನ ಸ್ಪೂರ್ತಿ ದಾಯಕವಾಗಿ ಮೂಡಿಬಂದಿದೆ,
ಸ್ವತಂತ್ರ ಪೂರ್ವ ಮುನ್ನ ಹಲವಾರು ಭಾರತೀಯ ರನ್ನು ಹುರಿದುಂಬಿಸಿ ತನ್ನ ದೇ ಆಲೋಚನೆ ಶಕ್ತಿ ಯಿಂದ ಇಂಡಿಯನ್ ನ್ಯಾಷನಲ್ ಆರ್ಮಿ ಸ್ಥಾಪಿಸಿ, ಶ್ರೀ ಕ್ರಿಷ್ಣ ಅರ್ಜುನನು ತಿಳಿಸದಂತೆ ಮುಳ್ಳನ್ನು ಮುಳ್ಳಿನಿಂದಲೆ ತೆಗೆಯುವಂತೆ ಬ್ರಿಟಿಷ್ ರ ವಿರುದ್ಧ ಪಣ ತೊಟ್ಟಿ ಹೋರಾಟ ನಡೆಸಿದರು.
ಸ್ವಾಮಿ ವಿವೇಕಾನಂದರನ್ನು ಯಾರೋ ಸ್ವಾತಂತ್ರ್ಯ ಬಗ್ಗೆ ಕೇಳಿದಾಗ ಉತ್ತರಿಸಿದರು “ಯಾರು ನಿಸ್ವಾರ್ಥರು , ತ್ಯಾಗ, ಆದರ್ಶ, ಕೆಚ್ಚೆದೆಯ ಮನೋಭಾವ, ಕಬ್ಬಿಣದಂತ ಮಾಂಸ ಖಂಡವುಳ್ಳವರು ಕೇವಲ ಹತ್ತು ಜನರು ಯುವಕರು ಸಾಕು ಈ ದೇಶ ಸ್ವಾತಂತ್ರ್ಯ ಪಡೆಯುದಕ್ಕೆ ಎಂದು, ನಿಜ ಅಲ್ಲದೆ ಮತೇನು.
ನಮ್ಮ ದೇಶದ ಸಾವಿರಾರು ಮಹಾ ಪುರುಷರು ಜನಿಸಿದ್ದು ಅವರ ಅದರ್ಶ ಒಂದೇ ಸಾಕು ನಮ್ಮೆಲ್ಲರಿಗೂ,
ಇಂದು ಸುಭಾಷ್ ಚಂದ್ರ ಬೋಸ್ ರವರ ೧೨೫ ಜಯಂತಿ ನಮ್ಮ ದೇಶ ಕಂಡ ಅಪ್ರತಿಮ ಹೋರಾಟಗಾರ, ಇಂಥ ಮಹಾಪುರುಷರನ್ನು ಭಾರತಾಂಬೆ ನಮಗೆ ಕೊಟ್ಟ ವರವಲ್ಲವೆ.
ಜೈ ಭಾರತಾಂಬೆ.
( ಬಾ.ರಾ. ಸುದರ್ಶನ )
LikeLiked by 1 person