ಕೈ ತುತ್ತು ಎನ್ನುವ ಪದ ಕೇಳಿದ ತಕ್ಷಣ ಥಟ್ ಅಂತಾ ನಮಗೇ ಗೊತ್ತಿಲ್ಲದ ಹಾಗೆ ಹಂಸಲೇಖ ಮತ್ತು ಪ್ರಭಾಕರ್ ಅವರ ಜೋಡಿ ನೀಡಿದ ಅತ್ಯುತ್ತಮ ಹಾಡುಗಳಲ್ಲಿ ಒಂದಾದ ಕೈ ತುತ್ತು ಕೊಟ್ಟೋಳು ಐ ಲವ್ ಯೂ ಎಂದಳೋ ಮೈ ಮದರ್ ಇಂಡಿಯಾ ಎನ್ನುವ ಹಾಡನ್ನು ನಮ್ಮ ಮನಸ್ಸಿನ ಮುಂದೆ ಬಂದು ಆ ಹಾಡನು ಗುನುಗಲು ಆರಂಭಿಸುತ್ತೇವೆ. ಆದರೆ ನಿಜವಾಗಿಯೂ ಅಮ್ಮನ ಇಲ್ಲವೇ ಅಜ್ಜಿಯ ಕೈ ತುತ್ತಿನ ರುಚಿಯನ್ನು ಬಲ್ಲವರೇ ಬಲ್ಲ ಅದರ ಸವಿಯನ್ನು. ಹಾಗಾಗಿ ಅಂತಹ ಅಪರೂಪದ ಮತ್ತು ಅಪ್ಯಾಯಮಾನದ ಕೈ ತುತ್ತಿನ ರಸಗವಳವನ್ನು ಸವಿಯೋಣ ಬನ್ನಿ.
ಕೈ ತುತ್ತು ಎಂದಾಕ್ಷಣವೇ ನಮೆಗೆಲ್ಲಾ ನೆನಪಾಗೋದೇ ಸಣ್ಣ ವಯಸ್ಸಿನ ಮಕ್ಕಳಿಗೆ ಅಮ್ಮಾ ಬಟ್ಟಲಲ್ಲಿ ಸ್ವಲ್ಪ ಅನ್ನಾ ಅದಕ್ಕೆ ಸ್ವಲ್ಪ ಸಾರು ಇಲ್ಲವೇ ಹುಳಿಯನ್ನು ಹಾಕಿಕೊಂಡು ಅದಕ್ಕೆ ತುಸು ಜಾಸ್ತಿಯೇ ತುಪ್ಪವನ್ನು ಹಾಕಿ ಮಕ್ಕಳು ಬೇಡ ಬೇಡಾ ಅಂದರೂ ಬಲವಂತ ಮಾಡಿ ತಿನ್ನಿಸುವುದು. ಮಕ್ಕಳು ತಿನ್ನಲು ಹಟ ಮಾಡುತ್ತಿದ್ದರೆ, ಆವರಿಗೆ ಯಾವುದೋ ಕಥೆಯನ್ನು ಹೇಳುತ್ತಲೋ ಇಲ್ಲವೇ ಹೊರಗೆ ಬಂದು ಆಗಸದಲ್ಲಿ ಚಂದಮಾಮನನ್ನು ತೋರಿಸುತ್ತಲೋ ಕಡೆಗೆ ಅದಕ್ಕೂ ಬಗ್ಗದಿದ್ದಲ್ಲಿ ಗುಮ್ಮನಿಗೆ ಹಿಡಿದುಕೊಡುತ್ತೇನೆಂದೋ ಇಲ್ಲವೇ ಪೋಲಿಸರನ್ನು ಕರೆಯುತ್ತೇನೆಂದು ಗದರಿಸಿ ತಿನ್ನಿಸುವುದು. ಈ ರೀತಿಯ ಪ್ರಕ್ರಿಯೆ ಮಗು ತಂತಾನೇ ಕೈಯಿಂದ ಆಹಾರವನ್ನು ತಿನ್ನುವವರೆಗೂ ಮುಂದುವರೆಯುತ್ತದೆ. ಇದಾದ ಮೇಲೇ ಮಕ್ಕಳು ಶಾಲೆಗೆ ಹೊರಡುವಾಗ ಅಯ್ಯೋ ತಡವಾಗೋಯ್ತು ತಿಂಡಿ ಬೇಡ, ಊಟ ಬೇಡ ಎಂದಾಗ ಹೆತ್ತಕರುಳು ಚುರುಕ್ ಎಂದು ಮತ್ತೇ ಅದೇ ಕಕ್ಕುಲತೆಯಿಂದ ತಾಯಿ ತನ್ನ ಮಕ್ಕಳಿಗೆ ತಿನ್ನಿಸುತ್ತಾಳೆ. ಈ ರೀತಿ ತಾಯಿಯ ಕೈಯಿಂದ ತಿನ್ನಿಸಿಕೊಳ್ಳುವ ಆನಂದ ಮುಂದೆ ಬೇರಾವ ಭಕ್ಷ ಭೋಜನಗಳಿಗೂ ಇರುವುದಿಲ್ಲ ಮತ್ತು ತಾಯಿಯ ಕೈಯಿಂದ ತಿನ್ನಿಸಿಕೊಳ್ಳುವಾಗಿನ ಸಂತೋಷ ಬೇರೆ ಯಾರಿಂದಲೂ ಪಡೆಯಲು ಸಾಧ್ಯವೇ ಇಲ್ಲ.
ಇದು ತಾಯಿ ಮತ್ತು ಮಗುವಿನ ನಡುವಿನ ಅವಿನಾಭಾವ ಸಂಬಂಧವಾದರೇಿ, ಇನ್ನು ಎರಡು ಮೂರು ಮಕ್ಕಳಿದ್ದರೆ ಇದರ ಮುಂದುವರೆದ ಭಾಗವೇ ಕೈತುತ್ತು ಎಂದರೂ ತಪ್ಪಾಗಲಾರದು. ಮಕ್ಕಳು ದೊಡ್ಡವರಾದ ಮೇಲೆ ಅಮ್ಮಾ ಎಲ್ಲಾ ಮಕ್ಕಳಿಗೂ ಈ ರೀತಿಯಾಗಿ ತಿನ್ನಿಸಲು ಸಾಧ್ಯವಾಗದ ಕಾರಣ ಎಲ್ಲಾ ಮಕ್ಕಳಿಗೂ ಸಮಪ್ರಮಾಣದಲ್ಲಿ ತಟ್ಟೆಯಲ್ಲಿ ಊಟ ಅಥವಾ ತಿಂಡಿಯನ್ನು ಹಾಕಿಕೊಡುತ್ತಾಳಾದರೂ, ಮಕ್ಕಳು ಸರಿಯಾಗಿ ತಿನ್ನುವುದಿಲ್ಲ. ಆಗ ಏಕಕಾಲದಲ್ಲಿ ಎಲ್ಲಾ ಮಕ್ಕಳಿಗೂ ಸಮ ಪ್ರಮಾಣದಲ್ಲಿ ತಿನ್ನಿಸಲು ಅಮ್ಮಾ ಬಳಸುವ ತಂತ್ರವೇ ಕೈ ತುತ್ತು. ಒಂದು ಪಾತ್ರೆಯಲ್ಲಿ ಅನ್ನಾಸಾರು, ಇಲ್ಲವೇ ಹುಳಿಯನ್ನ ಅವನ್ನು ಕಲೆಸಿ, ಎಲ್ಲಾ ಮಕ್ಕಳನ್ನೂ ಅಮ್ಮನ ಸುತ್ತಾ ಕುಳ್ಳರಿಸಿಕೊಂಡು ಒಬ್ಬೊಬ್ಬರಿಗೆ ಒಂದೊಂದು ತುತ್ತನ್ನು ಕೊಟ್ಟು ಅಕ್ಕರೆಯಿಂದ ತಿನ್ನಿಸುವುದಲ್ಲದೇ, ತಮ್ಮ ಮಕ್ಕಳಿಗೆ ಅರಿವಿಲ್ಲದಂತೆಯೇ ಅವರ ನಡುವೆಯೇ ಒಂದು ಆರೋಗ್ಯಕರವಾದ ಪೈಪೋಟಿಯನ್ನು ಏರ್ಪಡಿಸುತ್ತಾಳೆ. ತಟ್ಟೆಯಲ್ಲಿ ಹಾಕಿಕೊಟ್ಟಾಗ ಸರಿಯಾಗಿ ತಿನ್ನದ ಮಕ್ಕಳೂ ಅಕ್ಕ, ತಮ್ಮ, ಆಣ್ಣಾ ತಂಗಿ ಕೈ ತುತ್ತು ತಿನ್ನುವುದನ್ನು ನೋಡಿ ತಾನೂ ಕೂಡಾ ಅವರೊಂದಿಗೆ ಜಿದ್ದಾಜಿದ್ದಿಗೆ ಇಳಿದು ಸಾಧಾರಣವಾಗಿ ತಿನ್ನುವುದಕ್ಕಿಂತಲೂ ಎರಡು ತುತ್ತು ಹೆಚ್ಚಾಗಿ ತಿಂದದ್ದು ಗೊತ್ತೇ ಆಗಿರುವುದಿಲ್ಲ. ಹಾಗೆ ಗಬ ಗಬ ಎಂದು ತಿನ್ನುವ ಭರದಲ್ಲಿ ನೆತ್ತಿ ಹತ್ತಿದಾಗ, ಮಗೂ ನಿಧಾನವಾಗಿ ಅಗಿದು ಅಗಿದು ಸವಿದು ತಿನ್ನು ಎಂದು ಬೆನ್ನು ಮತ್ತು ತಲೇ ನೇವರಿಸಿ ಕುಡಿಯಲು ಸ್ವಲ್ಪ ನೀರು ಕೊಟ್ಟು ಮತ್ತು ಕೈ ತುತ್ತು ನೀಡಿ ಮಕ್ಕಳು ತಿನ್ನುವುದನ್ನೇ ಕಣ್ತುಂಬ ನೋಡಿ ಸಂತೋಷ ಪಡುವ ತಾಯಂದಿರಿಗೆ ನಿಜಕ್ಕೂ ಸಾಟಿಯೇ ಇಲ್ಲ.
ಇದಕ್ಕೂ ಹೊರತಾಗಿ ಕೈತುತ್ತು ಹಾಕುವ ಮತ್ತೊಂದು ಸಂದರ್ಭವೆಂದರೆ, ರಾತ್ರಿ ಊಟದ ಸಮಯದಲ್ಲಿ ಅನ್ನ ಇಲ್ಲವೇ ಸಾರು/ಹುಳಿಯ ಕೊರತೆಯೋ ಇದ್ದಾಗಲೋ ಅಥವಾ, ಬೆಳಿಗ್ಗೆ ಮಾಡಿದ ಅಡುಗೆ ಖಾಲಿಯಾಗದೇ ಉಳಿದಾಗ ಅಮ್ಮಾ ಮನೆಯವರನ್ನೆಲ್ಲಾ ಒಟ್ಟಿಗೆ ಕುಳ್ಳರಿಸಿ, ಮತ್ತದೇ ಕೈತ್ತುತ್ತಿನ ತಂತ್ರವನ್ನು ಅನುಸರಿಸಿ, ಇರುವ ಎಲ್ಲಾ ಪದಾರ್ಥಗಳೂ ಖಾಲಿಯಾಗ ಬೇಕು ಮತ್ತು ಎಲ್ಲರ ಹೊಟ್ಟೆಯೂ ತುಂಬಿ ಸಂತೃಪ್ತಿಯ ತೇಗು ಬರುವ ಹಾಗೆ ತಾಯಿ ಎಲ್ಲರಿಗೂ ಸಮರ್ಪಕವಾಗಿ ಉಣ ಬಡಿಸುತ್ತಾಳೆ.
ಇನ್ನು ಹಿಂದೆಲ್ಲ ಬೇಸಿಗೆ ರಜೆ ಬಂದರೆ ಆಥವಾ ಊರಿನಲ್ಲಿ ಯಾವುದೋ ಹಬ್ಬ ಹರಿದಿನ/ಸಮಾರಂಭಕ್ಕೆಂದು ಇಡೀ ಕುಟುಂಬವೇ ಅಲ್ಲಿ ಸೇರುತ್ತಿತ್ತು. ಸುಮಾರು ಹತ್ತು ಹದಿನೈದು ಮಕ್ಕಳ ಸೈನ್ಯವೇ ಅಲ್ಲಿರುತ್ತಿತ್ತು. ಅಷ್ಟೊಂದು ಮಕ್ಕಳಿಗೆ ತಟ್ಟೆ ಇಲ್ಲವೇ ಎಲೆಯಲ್ಲಿ ಊಟ ಬಡಿಸುವುದು ನಂತರ ಅದನ್ನು ಶುದ್ಧೀಕರಿಸುವುದು ಬಹಳ ತ್ರಾಸದಾಯಕವಾಗುತ್ತಿದ್ದ ಕಾರಣ, ಅಜ್ಜಿ ಇಲ್ಲವೇ ಮನೆಯ ಹಿರಿಯ ಹೆಂಗಸು ಬಳಸುತ್ತಿದ್ದ ತಂತ್ರವೇ ಕೈತುತ್ತು. ಎಲ್ಲಾ ಮಕ್ಕಳನ್ನು ರಾತ್ರಿ ಮನೆಯ ಮುಂದಿನ ಹಜಾರದಲ್ಲೂ ಇಲ್ಲವೇ ಹಿತ್ತಲಿನ ಅಂಗಳದಲ್ಲೋ ಪಡಸಾಲೆಯಲ್ಲೋ, ಚಾವಡಿಯಲ್ಲೋ ತಣ್ಣಗೆ ಗಾಳಿ ಬೀಸುವ ಜಾಗದಲ್ಲಿ ಎಲ್ಲ ಮಕ್ಕಳನ್ನು ಅವರ ಕೈ ಗೆಟುಕುವ ಹತ್ತಿರದಲ್ಲಿ ವೃತ್ತಾಕಾರದಲ್ಲೋ ಅಥವಾ ಅರ್ಧವೃತ್ತಾಕಾರದಲ್ಲಿ ಕುಳ್ಳರಿಕೊಂಡು ಕೈ ತುತ್ತು ಹಾಕುತ್ತಿದ್ದರು. ಈ ರೀತಿಯಾಗಿ ಕೈ ತುತ್ತು ತಿನ್ನುವ ಮಕ್ಕಳೂ, ತುತ್ತು ಕೈಯ್ಯಲ್ಲಿ ಬಿದ್ದೊಡನೆಯೇ, ಗಬಕ್ ಎಂದು ತಿಂದು ಮತ್ತೊಂದು ತುತ್ತಿಗಾಗಿ ಕೈ ಚಾಚಿ ತಾವು ತಿಂದ ತುತ್ತನ್ನು ಎಣಿಸಿಕೊಂಡು ನಾನು ಐದು ತುತ್ತು ತಿಂದೇ, ನಾನು ಏಳು ತುತ್ತು ತಿಂದೇ ಎಂದು ಪರಸ್ಪರ ತಮ್ಮ ತಮ್ಮಲ್ಲೇ ತಮ್ಮ ಪೌರುಷವನ್ನು ಕೊಚ್ಚಿಕೊಳ್ಳುತ್ತಾ ಕೆಲವೇ ಕೆಲವು ನಿಮಿಷಗಳಲ್ಲಿ ನಿರಾಯಾಸವಾಗಿ ಮಕ್ಕಳ ಊಟದ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಹಿರಿಯರು ಊಟಕ್ಕೆ ಸಿದ್ಧವಾಗುತ್ತಿದ್ದರು.
ಇಂದಿಗೂ ಸಹಾ ಕೆಲವೊಂದು ಮನೆಗಳಲ್ಲಿ ತಿಂಗಳಿಗೊಮ್ಮೆಯಾದರೂ ಕೈ ತುತ್ತಿನ ಊಟವನ್ನು ಸವಿಯುವ ರೂಡಿಯನ್ನು ಇಟ್ಟು ಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಹುಣ್ಣಿಮೆಯಂದು ಮನೆಯ ಮಾಳಿಗೆಯ ಮೇಲೆ ಚಂದ್ರನ ಬೆಳದಿಂಗಳಲ್ಲಿ ಮನಕ್ಕೊಪ್ಪುವ ಹಾಡುಗಳನ್ನು ಕೇಳುತ್ತಲೋ ಇಲ್ಲವೇ ಮನೆಯವರೇ ತಮ್ಮ ಮೆಚ್ಚಿನ ಹಾಡುಗಳನ್ನು ಹಾಡುತ್ತಲೋ ಬೆಳದಿಂಗಳ ಊಟವನ್ನು ಕೈತುತ್ತಿನ ಊಟದ ಮೂಲಕ ಮಾಡುವ ಪದ್ದತಿಯನ್ನು ಜೀವಂತವಾಗಿ ಇರಿಸಿದ್ದಾರೆ.
ಅವಿಭಕ್ತ ಕುಟುಂಬಗಳು ಒಂದೊಂದೇ ಕಣ್ಮರೆಯಾಗಿ ವಿಭಕ್ತ ಕುಟುಂಬಗಳೇ ಹೆಚ್ಚಾದಂತೆ ಮನೆಯಲ್ಲಿರುವವರ ಸಂಖ್ಯೆಯೂ ಕಡೆಮೆಯಾಗುತ್ತಾ ಬಂದಿತು. ಗಂಡಾ ಹೆಂಡತಿ ಇಬ್ಬರೂ ಕೆಲಸಕ್ಕೆ ಹೊರಗೆ ಹೋಗಿ ಕೆಲಸ ಮಾಡಿ ಸುಸ್ತಾಗಿ ಮನೆಗೆ ಬರುವಷ್ಟರಲ್ಲಿ ಸಾಕು ಸಾಕಾಗಿ ಹೋಗಿರುತ್ತದೆ. ಏನೋ ಒಂದು ತಿಂದು ಸ್ವಲ್ಪ ಹೊತ್ತು ಟಿವಿ ನೋಡಿ ಮಲಗಿದರೆ ಸಾಕಪ್ಪಾ ಎನಿಸಿ ಹೋಗಿರುತ್ತದೆ. ಹಾಗಾಗಿ ಈ ಕೈತುತ್ತು ಎನ್ನುವ ಸುಂದರ ರಸಗವಳ ಅವರಿಗೆ ನೆನಪಾಗೋದೇ ಇಲ್ಲ. ಇನ್ನೂ ಕೆಲವು ಮನೆಗಳಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವ ಪದ್ದತಿಯೇ ಮರೆಯಾಗಿ ಹೋಗಿ ಎಷ್ಟೋ ಕಾಲವಾಗಿದೆ. ಎಲ್ಲರೂ ಅವರರವರ ಅನುಕೂಲಕ್ಕೆ ಅವರವರ ಕೊಠಡಿಯಲ್ಲಿ ಅವರಿಷ್ಟದಂತೆ ಊಟ ಮಾಡುವುದನ್ನು ರೂಡಿ ಮಾಡಿಕೊಂಡಿರುವ ಕಾರಣ ಈ ಕೈ ತುತ್ತು ಪದ್ದತಿ ಕ್ರಮೇಣ ಮರೆಯಾಗುತ್ತಿದೆ.
ಈ ಲೇಖನ ಓದಿನ ನಂತರವಾದರೂ, ಕನಿಷ್ಠ ಪಕ್ಷ ವಾರಕ್ಕೊಂದೆರಡು ಭಾರಿಯಾದರೂ ಮನೆಯವರೆಲ್ಲರೂ ಒಟ್ಟಿಗೆ ಕುಳಿತು ಟಿವಿ ಎಲ್ಲವನ್ನೂ ಆರಿಸಿ ನೆಮ್ಮದಿಯಿಂದ ಇಷ್ಟ ಪಟ್ಟು ಹರಟುತ್ತಾ ಊಟ ಮಾಡುವ ಅಭ್ಯಾಸ ರೂಢಿ ಮಾಡಿಕೊಂಡರೆ ಈ ಲೇಖನ ಬರೆದದ್ದಕ್ಕೂ ಸಾರ್ಥಕವೆನಿಸುತ್ತದೆ. ಅದೇ ರೀತಿ ತಿಂಗಳಿಗೆ ಒಮ್ಮೆಯಾದರೂ ಅಮ್ಮ ಇಲ್ಲವೇ ಮಡದಿಗೆ ಹೇಳಿ ಎಲ್ಲರೂ ಆಕೆಯ ಸುತ್ತಾ ಕುಳಿತು ನಗುನಗುತ್ತಲೇ ಕೈ ತುತ್ತನ್ನು ಸವಿದು ನೋಡಿ. ಹಾಗೆ ಒಂದು ಕಡೆ ಎಲ್ಲರೂ ಕುಳಿತು ಕೈ ತುತ್ತು ತಿನ್ನುವಾಗ, ತಿನ್ನುವವರಿಗೆ ಸಿಗುವ ಆನಂದ ಮತ್ತು ಕೈ ತುತ್ತು ಬಡಿಸುವವರಿಗೆ ದೊರೆಯುವ ತೃಪ್ತಿ ನಿಜಕ್ಕೂ ಅವರ್ಣನೀಯ. ಈ ರೀತಿಯಾಗಿ ಇಬ್ಬರಿಗೂ ದೊರೆಯುವ ಸಂತೃಪ್ತಿಯನ್ನು ಹೇಳುವುದಕ್ಕಿಂತಲೂ ಅನುಭವಿಸುವ ಮಜವೇ ಬೇರೆ. ನಮ್ಮನೆಯಲ್ಲಿ ಇವತ್ತು ಕೈ ತುತ್ತು ಹಾಕಿಸಿಕೊಂಡು ಊಟ ಮಾಡ್ತಾ ಇದ್ದೀವಿ. ನೀವೂ ಕೂಡಾ ನಿಮ್ಮ ಮನೆಯಲ್ಲಿ ಕೈ ತುತ್ತು ಹಾಕಿಸಿಕೊಂಡು ಊಟಾ ಮಾಡ್ತೀರೀ ತಾನೇ?
ಏನಂತೀರೀ?
ನಿಮ್ಮವನೇ ಉಮಾಸುತ
ತುಂಬಾ ತಿಂಗಳುಗಳ ಹಿಂದೆಯೇ ಕೈ ತುತ್ತಿನ ಕುರಿತಂತೆ ಲೇಖನ ಬರೆಯಬೇಕೆಂದು ಆರಂಭಿಸಿ ಅರ್ಧ ಬರೆದು ನಿಲ್ಲಿಸಿದ್ದೆ. ಮೊನ್ನೆ ನಮ್ಮ ಆತ್ಮೀಯರಾದ ಶೈಲಾ ಆಂಟಿ, ಶ್ರೀಕಂಠಾ.. ಕೈ ತುತ್ತಿನ ಕುರಿತಾದ ನಿನ್ನ ಲೇಖನಕ್ಕಾಗಿ ಕಾಯ್ತಾ ಇದ್ದೀವಿ ಎಂದು ನೆನಪಿಸಿದಾಗ ಮತ್ತೆ ಅದನ್ನು ಮುಂದುವರೆಸಿ ನಿಮಗೆಲ್ಲಾ ಉಣಬಡಿಸಿದ್ದೇನೆ. ಹಾಗಾಗಿ ಶೈಲಾ ಆಂಟಿಗೆ ಹೃತ್ಪೂರ್ವಕ ಧನ್ಯವಾದಗಳು