ಚಿಕ್ಕಂದಿನಲ್ಲಿಯೇ, ಖಾಯಿಲೆಯಿಂದಾಗಿ ಕೇವಲ 4.2″ ಎತ್ತರ ಬೆಳೆದಾಗ ಸುತ್ತಮುತ್ತಲಿನವರೆಲ್ಲರೂ ಕುಳ್ಳಾ ಕುಳ್ಳಾ ಎಂದು ಆಡಿಕೊಂಡಾಗ, ತನ್ನ ಅಂಗವೈಕುಲ್ಯವನ್ನೇ ಮೆಟ್ಟಿ ನಿಂತು. ನಾನು ಎತ್ತರವಾಗಿಲ್ಲದಿದ್ದರೆ ಏನಂತೇ? ನನ್ನ ಶಕ್ತಿ ಮತ್ತು ಸಾಮರ್ಥ್ಯದಿಂದ ಭಾರತದ ತ್ರಿವರ್ಣಧ್ವಜವನ್ನು ಭಾನೆತ್ತರಕ್ಕೆ ಹಾರಿಸುತ್ತೇನೆ ಎಂಬ ಛಲದಿಂದ ಪ್ಯಾರಾ ಓಲಂಪಿಕ್ಸ್ ನಲ್ಲಿ ಭಾರತ ಗೌರವವನ್ನು ಎತ್ತಿ ಹಿಡಿದ ಕೆ. ವೈ. ವೆಂಕಟೇಶ್ ಅವರ ಸಾಧನೆಯನ್ನು ಗುರುತಿಸಿ ಕೇಂದ್ರಸರ್ಕಾರ 2020ರ ಸಾಲಿನ ಪದ್ಮಶ್ರಿ ಪ್ರಶಸ್ತಿಗೆ ಆಯ್ಕೆಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಅಂತಹ ಹೆಮ್ಮೆ ಸಾಧಕನ ಯಶೋಗಾಥೆಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಮೆಲುಕು ಹಾಕೋಣ ಬನ್ನಿ.
ಅದು 1989, ಆರ್. ಟಿ. ನಗರದ ಆದರ್ಶ ಪಾಲಿಟೆಕ್ನಿಕ್ಕಿಗೆ ಮೊದಲ ವರ್ಷದ ಡಿಪ್ಲಮೋಗೆ ಸೇರಿಕೊಂಡು ಮೊದನೇ ದಿನ ಕಾಲೇಜಿಗೆ ಹೋಗಿದ್ದೆ. ಸಣ್ಣಗೆ ಪೀಚಲು ಹುಡುಗನಂತಿದ್ದ ನನ್ನನ್ನು ಯಾರೋ ಏಯ್ ಏನೋ ನಿನ್ನ ಹೆಸ್ರೂ? ಅಂತಾ ಕೇಳಿದ ಹಾಗಾಯ್ತು. ಯಾರಪ್ಪಾ ಅದೂ ಅಂತ ಹಿಂದುರಿಗಿ ನೋಡಿದರೆ ನನ್ನ ಹಿಂದೆ ಕುಳ್ಳಗಿನ ದಪ್ಪದಾದ (ಸೋಡಾಬುಡ್ದಿ) ಕನ್ನಡಕ ಹಾಕಿಕೊಂಡಿದ್ದ ಹುಡುಗನೊಬ್ಬ ಕಾಣಿಸಿದ. ಅವನ ಜೊತೆ ಮೂರ್ನಾಲ್ಕು ಹುಡುಗರಿದ್ದರು. ನಾನು ಸಹಾ ಭಯದಿಂದಲೇ ನನ್ನ ಹೆಸರು ಹೇಳಿದೆ. ಎಲ್ಲಿಂದ ಬರೋದು.. ಇತ್ಯಾದಿ ಇತ್ಯಾದಿ. ಪ್ರಶ್ನೆಗಳನ್ನು ರ್ಯಾಗಿಂಗ್ ಮಾಡುವ ರೀತಿ ಕೇಳಿ ನಂತರ ನನ್ನ ಹೆಸ್ರೂ ವೆಂಕಟೇಶ. ಈ ಕಾಲೇಜಿನಲ್ಲಿ ಸೀನಿಯರ್. ನಿನ್ನ ತಂಟೆಗೆ ಯಾರಾದ್ರೂ ಬಂದ್ರೇ ನನ್ನ ಹೆಸ್ರು ಹೇಳು ಅಂತ ಹೇಳಿ ಕಳುಹಿಸಿದ. ಹೂಂ ಸರಿ ಎಂದು ಬದುಕಿದೆಯಾ ಬಡ ಜೀವ ಎಂದು ಅಲ್ಲಿಂದ ಓಟ ಕಿತ್ತಿದ್ದೆ.
ಆಮೇಲೆ ಇತರೇ ಸೀನಿಯರ್ ಬಳಿ ವಿಚಾರಿಸಿದಾಗ ಓ ಅವನಾ, ಕುಳ್ಳಾ ವೆಂಕಟೇಶ. ನಮ್ಮ ಕಾಲೇಜಿನ ತುಂಬಾ ಸೀನಿಯರ್. ಅವಾಗವಾಗ ಸಪ್ಲಿಮೆಂಟರಿ ಬರೆಯೋದಿಕ್ಕೆ ಬರ್ತಾ ಇರ್ತಾನೆ ಅಂತ ಹೇಳಿದ್ರು, ಆದಾದ ಮೇಲೆ ಒಂದೆರಡು ಬಾರಿ ವೆಂಕಟೇಶನನ್ನು ನಮ್ಮ ಕಾಲೇಜಿನಲ್ಲಿ ನೋಡಿ ಪರಿಚಯದ ನಗೆ ಬೀರಿದ್ದೆ, ಮೂರ್ನಾಲ್ಕು ವರ್ಷಗಳ ನಂತರ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಎಸ್. ರಮೇಶ್ ಅವರು ಯಾವುದೋ ಧಾರ್ಮಿಕ ಸಮಾರಂಭಕ್ಕೆ ಬಂದಿದ್ದಾಗ ಅವರ ಜೊತೆ ವೆಂಕಟೇಶನನ್ನು ನೋಡಿ ಆಶ್ಚರ್ಯಚಕಿತನಾಗಿ ಇದೇನು ಇಲ್ಲಿ ಎಂದು ಕೇಳಿದಾಗ, ನಾನು ರಮೇಶ್ ಅವರ ಪರ್ಸನಲ್ ಸೆಕ್ರೆಟರಿ ಎಂದು ಹೆಮ್ಮೆಯಿಂದ ವೆಂಕಟೇಶ ಹೇಳಿದ್ದ.
ಆಮೇಲೆ ವೆಂಕಟೇಶನನ್ನು ನೋಡಿದ್ದೇ ಟಿವಿಯಲ್ಲಿ. ಯಾವುದೋ ಕ್ರೀಡಾ ಕೂಟದಲ್ಲಿ ಗುಡು ಗುಡು ಅಂತ ತನ್ನ ಪುಟ್ಟ ಪುಟ್ಟ ಹೆಜ್ಜೆ ಹೆಜ್ಜೆಗಳನ್ನು ಇಟ್ಟುಕೊಂಡು ಓಡುತ್ತಾ ಮೊದಲಿಗನಾಗಿ ಪ್ರಶಸ್ತಿಯನ್ನು ಮಡಿಲುಗೇರಿಸಿಕೊಂಡಿದ್ದನ್ನು ನೋಡಿ, ಅರೇ ನಮ್ಮ ವೆಂಕಟೇಶ ನಿಜಕ್ಕೂ ಸೂಪರ್ ಅಂತಾ ಹೆಮ್ಮೆ ಪಟ್ಟಿದ್ದೆ. ಇವತ್ತು ಬೆಳಿಗ್ಗೆ ಪೇಪರ್ ನೋಡಿದಾಗ ಅದೇ ನಮ್ಮ ವೆಂಕಟೇಶನಿಗೆ ಆತನ ಕ್ರೀಡಾ ಸಾಧನೆಯನ್ನು ಪರಿಗಣಿಸಿ ದೇಶದ ಅತ್ಯುನ್ನತ ಗೌರವದ ಪದ್ಮಶ್ರೀ ಪ್ರಶಸ್ತಿಗಾಗಿ ಕೇಂದ್ರ ಸರ್ಕಾರ ಆಯ್ಕೆ ಮಾಡಿರುವ ವಿಷಯ ತಿಳಿದು ವೆಂಕಟೇಶನ ಮೇಲಿದ್ದ ಗೌರವ ನಿಜಕ್ಕೂ ಇನ್ನೂ ಹೆಚ್ಚಾಯಿತು.
ಮೂಲತಃ ತುಮಕೂರಿನ ಕಡೆಯವರಾದರೂ ಬೆಂಗಳೂರಿನಲ್ಲಿಯೇ ಸಾಂಪ್ರದಾಯಿಕ ಮಧ್ಯಮ ವರ್ಗದ ಕುಟುಂಬದಲ್ಲಿಯೇ ಬೆಳೆದ ವೆಂಕಟೇಶ, ಚಿಕ್ಕಂದಿನಲ್ಲಿಯೇ, ಅಕೋಂಡ್ರೊಪ್ಲಾಸಿಯಾ ಎಂಬ ಬವಣೆಗೆ ತುತ್ತಾಗಿ ಕೇವಲ 4.2″ ಕುಬ್ಜನಾದಾಗ ಅನುಭವಿಸಿದ ನೋವಿಗೆ ಲೆಕ್ಕವಿಲ್ಲ. ಸದಾಕಾಲವೂ ಮೊಣಕಾಲುದ್ದದ ಬರ್ಮುಡ ಚೆಡ್ಡಿ ಕಣ್ಣಿಗೆ ದಪ್ಪನೆಯ ಕನ್ನಡಕ ಧರಿಸಿ ರಸ್ತೆಯಲ್ಲಿ ಓಡಾಡುತ್ತಿದ್ದರೆ, ಎಲ್ಲರೂ ಅವರನ್ನನ್ನೇ ದಿಟ್ಟಿಸಿ ನೋಡುತ್ತಾ ಅವರ ಎತ್ತರದ ಬಗ್ಗೆ ಆಡಿಕೊಂಡವರಿಗೆ ಲೆಖ್ಖವೇ ಇಲ್ಲ. ಇಷ್ಟೆಲ್ಲಾ ಆದರೂ ವೆಂಕಟೇಶನ ಕುಟುಂಬ ಸದಾಕಾಲವೂ ಇದೆಕ್ಕೆಲ್ಲಾ ತಲೆ ಕೆಡಸಿಕೊಳ್ಳದೇ ಆತನ ಬೆಂಬಲಕ್ಕೆ ನಿಂತದ್ದು ವೆಂಕಟೇಶನಿಗೆ ಆನೆಯ ಬಲ ತಂದಿತ್ತು.
ಇದೇ ಸಮಯದಲ್ಲಿ ಎರಡೂ ಕಾಲುಗಳು ಇಲ್ಲದಿದ್ದರೂ ಬ್ರಿಟೀಶ್ ಕಾಲುವೆಯನ್ನು ಈಜಿ ದಾಖಲೆ ನಿರ್ಮಿಸಿದ್ದ ಸಿ ಎನ್ ಜಾನಕಿಯವರ ಭೇಟಿ ವೆಂಕಟೇಶನಿಗೆ ಆಗಿ, ಅವರಿಂದ ಪ್ರೇರಿತನಾಗಿ, ಕಾಲೇ ಇಲ್ಲದವರು ಇಂತಹ ಸಾಧನೆ ಮಾಡ ಬಹುದಾದರೇ, ಎಲ್ಲವೂ ಸರಿಯಿದ್ದು ಕೇವಲ ಕುಬ್ಜನಾಗಿರುವ ನಾನೇಕೆ ಪ್ರಯತ್ನಿಸ ಬಾರದು? ಎಂದು ಪ್ಯಾರಾ ಓಲಂಪಿಕ್ಸ್ ಕ್ರೀಡಾ ಕೂಟಗಳಲ್ಲಿ ಭಾಗವಹಿಸಲಾರಂಬಿಸಿದ.
ಆಕಾರದಲ್ಲಿ ಚಿಕ್ಕದಾಗಿದ್ದರೇನಂತೆ ನೋಡ ನೋಡುತ್ತಿದ್ದಂತೆಯೇ, ಛಲ ಬಿಡದ ತ್ರಿವಿಕ್ರಮನಂತೆ ಭಾಗವಹಿಸಿದ ಕ್ರೀಡಾ ಸ್ಪರ್ಧೆಗಳಲ್ಲಿ ಪದಕಗಳನ್ನು ಬಾಚುತ್ತಾ ರಾಜ್ಯ ಮತ್ತು ರಾಷ್ಟ್ರೀಯ ಕ್ರೀಡಾ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡಿ ವಿದೇಶಗಳಲ್ಲಿಯೂ ಭಾರತವನ್ನು ಪ್ರತಿನಿಧಿಸುವ ಹಂತಕ್ಕೆ ಎರಿದ ನಮ್ಮ ವೆಂಕಟೇಶ. 1994 ರಲ್ಲಿ, ಬರ್ಲಿನ್‌ನಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ (ಐಪಿಸಿ) ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ವೆಂಕಟೇಶ್, ಅಥ್ಲೆಟಿಕ್ಸ್, ಬಾಸ್ಕೆಟ್‌ಬಾಲ್, ಹಾಕಿ, ವಾಲಿಬಾಲ್, ಫುಟ್‌ಬಾಲ್ ಮತ್ತು ಬ್ಯಾಡ್ಮಿಂಟನ್ ಸೇರಿದಂತೆ ಅನೇಕ ಪಂದ್ಯಗಳಲ್ಲಿ ಭಾಗವಹಿಸಿ ಪದಕಗಳನ್ನು ಕೊಳ್ಳೇ ಹೊಡೆದ ವೆಂಕಟೇಶ್. 1999ರಲ್ಲಿ ಆಸ್ಟ್ರಿಯಾದಲ್ಲಿ ನಡೆದ ಮಲ್ಟಿ ಡಿಸೆಬಿಲಿಟಿ ಚಾಂಪಿಯನ್‌ಶಿಪ್‌ನಲ್ಲಿ ಶಾಟ್ ಪುಟ್ ನಲ್ಲಿ ಆತನಿಗೆ ಮೊದಲ ಅಂತರರಾಷ್ಟ್ರೀಯ ಚಿನ್ನ ಲಭಿಸಿದ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.
2002 ರಲ್ಲಿ ಬ್ಯಾಡ್ಮಿಂಟನಲ್ಲಿ ಬೆಳ್ಳಿ ಪದಕವನ್ನು ಪಡೆದದ್ದಲ್ಲದೇ ಓಪನ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್‌ಶಿಪ್ 2004 ರಲ್ಲಿ ಶಾಟ್ ಪುಟ್, ಡಿಸ್ಕಸ್ ಥ್ರೋ ಮತ್ತು ಜಾವೆಲಿನ್ ಥ್ರೋನಲ್ಲಿ ಮೂರು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ಪಡೆದ. ಅದೇ ವರ್ಷ, ಮತ್ತೊಂದು ಚಿನ್ನದ ಪದಕ ಗಳಿಸಿದ., ಸ್ವೀಡಿಷ್ ಓಪನ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ. ಹಾಕಿ ಸ್ಪರ್ಧೆಯಲ್ಲಿ ಚಿನ್ನದ ಪದಕ, ಫುಟ್ಬಾಲ್ ಮತ್ತು ಬ್ಯಾಸ್ಕೆಟ್‌ಬಾಲ್ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕಗಳನ್ನು ಗೆದ್ದಿದ್ದಾನೆ ನಮ್ಮ ವೆಂಕಟೇಶ್.
2005ರಲ್ಲಿ ನಡೆದಿದ್ದ 4ನೇ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ, ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಭಾರತದ ಮೊದಲ ಕ್ರೀಡಾಪಟು ಎನ್ನುವ ದಾಖಲೆ ಬರೆದಿದ್ದಲ್ಲದೇ, ಈ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ಹಾಗೂ ಬ್ಯಾಡ್ಮಿಂಟನ್‌ನಲ್ಲಿ 2 ಚಿನ್ನ, 1 ಬೆಳ್ಳಿ ಹಾಗೂ 3 ಕಂಚಿನ ಪದಕ ಗಳಿಸಿದ್ದರು. ಇವನ ಪದಕಗಳ ಸಾಧನೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿಯೂ ಸೇರ್ಪಡೆಯಾಗಿತ್ತು. 2006 ರಲ್ಲಿ ಯುರೋಪಿಯನ್ ಓಪನ್ ಚಾಂಪಿಯನ್‌ಶಿಪ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕವನ್ನು ಗೆದ್ದಿದ್ದಲ್ಲದೇ,ಆನೇಕ ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ಗಳಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿಧಿಸಿ ಹಲವಾರು ಪ್ರಶಸ್ತಿಗಳನ್ನು ಮತ್ತು ಪದಕಗಳನ್ನು ಗೆಲ್ಲುವ ಮೂಲಕ ದೇಶದ ಕೀರ್ತಿಪತಾಕೆಯನ್ನು ವಿಶ್ವಾದ್ಯಂತ ಹಾರಿಸಿದ್ದಾನೆ ನಮ್ಮ ವೆಂಕಟೇಶ್.
2012 ರಲ್ಲಿ ವಯೋಸಹಜ ಕಾರಣಗಳಿಂದ ಸ್ಪರ್ಧಾತ್ಮಕ ಕ್ರೀಡೆಗಳಿಂದ ನಿವೃತ್ತಿ ಪಡೆದರೂ, ಅಂಗವಿಕಲರ ವಿವಿಧ ಕ್ರೀಡೆಗಳ ಆಡಳಿತ, ಅಭಿವೃದ್ಧಿ ಮತ್ತು ಪ್ರಚಾರದಲ್ಲಿ ತನ್ನನ್ನು ತಾವು ತೊಡಗಿಸಿಕೊಂಡಿದ್ದಲ್ಲದೇ ಅಂಗವಿಕಲರಿಗಾಗಿ ಕರ್ನಾಟಕ ಪ್ಯಾರಾ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಕಾರ್ಯದರ್ಶಿಯಾಗಿದ್ದರು. ಇದರ ಜೊತೆಗೆ ಐಪಿಸಿ ಮಾನ್ಯತೆ ಪಡೆದ ಕೋಚಿಂಗ್ ಕೂಡಾ ಪಡೆದು ಕೂಂಡು ತನ್ನಂತೆಯೇ ಅಂಗವೈಕಲ್ಯತೆಯಿಂದ ಬಳುತ್ತಿರುವವರಿಗೆ ಅನೇಕ ಕ್ರೀಡೆಗಳಲ್ಲಿ ತರಭೇತಿ ನೀಡುವ ಮೂಲಕ ಭಾರತದಲ್ಲಿ ಪ್ಯಾರಾ ಕ್ರೀಡೆಯನ್ನು ಉತ್ತೇಜಿಸುವುದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿದ್ದಾರೆ. ಇದಲ್ಲದೇ, ವೆಂಕಟೇಶನ ನೇತೃತ್ವದಲ್ಲಿಯೇ ಅನೇಕ ಅಂತರರಾಷ್ಟ್ರೀಯ ಪ್ಯಾರಾ ಕ್ರೀಡಾ ಕೂಟಗಳಿಗೆ ಹಲವಾರು ಆಟಗಾರರನ್ನು ಕರೆದುಕೊಂಡು ಹೋಗಿ ಪದಕಗಳನ್ನು ಗೆದ್ದು ಬಂದಿದ್ದಾರೆ.
ವೆಂಕಟೇಶ್ ಅವರ ಇಷ್ಟೆಲ್ಲಾ ಸಾಧನೆಗಳನ್ನು ಪರಿಗಣಿಸಿದ ಅನೇಕ ಸಂಘ ಸಂಸ್ಥೆಗಳು ವೆಂಕಟೇಶ್ ಅವರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಸನ್ಮಾನಿಸಿದೆ. ಭಾರತ ಸರ್ಕಾರವೂ ಪ್ಯಾರಾಓಲಂಪಿಕ್ಸ್ ನಲ್ಲಿನ ವೆಂಕಟೇಶ್ ಅವರ ಸಾಧನೆಗಾಗಿ 20-21ರ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ತೊಂಬತ್ತರ ದಶಕದಲ್ಲಿ ನಾನು ನೋಡಿದ್ದ ನಮ್ಮ ಕಾಲೇಜಿನ ಸೀನಿಯರ್ ಕುಳ್ಳಾ ವೆಂಕಟೇಶ ಇಂದು ಇಷ್ಟು ಎತ್ತರಕ್ಕೆ ಬೆಳೆದಿರುವುದು ನಿಜಕ್ಕೂ ಗರ್ವ ಪಡುವ ಸಂಗತಿಯಾಗಿದೆ. ಅಯ್ಯೋ ನಮ್ಮ ಮಗ ಈರೀತಿ ಅಂಗವೈಕುಲ್ಯನಾದನಲ್ಲಾ, ಮುಂದೆ ಇವನ ಜೀವನ ಹೇಗಪ್ಪಾ ಎಂದು ಚಿಂತಿಸುತ್ತಿದ್ದ ಪೋಷಕರಿಗೆಲ್ಲಾ ಸ್ಪೂರ್ತಿ ನೀಡುವಂತೆ ಸಾಧನೆ ಮಾಡಲು, ಛಲವೊಂದಿದ್ದರೆ, ತನ್ನ ಅಂಗವೈಕಲ್ಯವನ್ನೇ ಮೆಟ್ಟಿಲಾಗಿಸಿಕೊಂಡು ಪರಿಶ್ರಮದಿಂದ ಹೆತ್ತವರು ಮತ್ತು ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಬಹುದು ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿರುವ ನಮ್ಮ ವೆಂಕಟೇಶ ನಿಜಕ್ಕೂ ಕನ್ನಡ ಕಲಿಗಳೇ ಸರಿ.
ಏನಂತೀರೀ?
ನಿಮ್ಮವನೇ ಉಮಾಸುತ
Super talent
LikeLiked by 1 person