ಹೇಳಿ ಕೇಳಿ ಥೈಲ್ಯಾಂಡ್ ದೈವದತ್ತವಾದ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಹ ದೇಶ ಎಂದರೂ ತಪ್ಪಾಗಲಾರದು. ಭಗವಂತ ಬಹಳ ಸಮಯ ಮಾಡಿಕೊಂಡು ಒಂದೊಂದು ದ್ವೀಪಗಳನ್ನು ಸೃಷ್ಟಿ ಮಾಡಿದಂತಿದೆ. ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಿಂದ ದಕ್ಷಿಣಕ್ಕೆ ಸುಮಾರು ರಸ್ತೆಯ ಮೂಲಕ ಕ್ರಮಿಸಿದರೆ 783 ಕಿ.ಮೀ ದೂರದಲ್ಲಿರುವ ವಿಮಾನದಲ್ಲಿ ಸುಮಾರು ಒಂದು ಘಂಟೆಯಲ್ಲಿ ತಲುಪಬಹುದಾದ ಅತ್ಯಂತ ರಮಣೀಯ ದ್ವೀಪವಾದ ಕ್ರಾಬಿ ನದಿಯ ಮತ್ತು ಸಮುದ್ರದ ತಟದಲ್ಲಿರುವ ಕ್ರಾಬಿ (ಥೆಸಾಬನ್ ಮುವಾಂಗ್) ದ್ಚೀಪವನ್ನು ಸ್ವಲ್ಪ ಸುತ್ತಿ ಹಾಕಿ ಬರೋಣ.
ಸುಮಾರು 60-70 ಸಾವಿರ ಜನಸಂಖ್ಯೆ ಇರುವ ಈ ಕ್ರಾಬಿ ಪಟ್ಟಣ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿದ್ದು ಮುಸ್ಲಿಂ ಬಾಹುಳ್ಯದ ಪ್ರದೇಶವಾಗಿದೆ. ಇಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳು ಎನ್ನುವ ತಾರತಮ್ಯವಿಲ್ಲದೇ ಇಬ್ಬರೂ ಸಹಾ ಒಗ್ಗೂಡಿಯೇ ದೇಶ ವಿದೇಶಗಳಿಂದ ಬರುವ ಪ್ರವಾಸಿಗರನ್ನು ನೋಡಿದ ಕೆಲವೇ ಕೆಲವು ಕ್ಷಣಗಳಲ್ಲಿ ಅವರ ಸ್ವಭಾವ ಮತ್ತು ಇಚ್ಛೆಗಳು ಅರಿಯುವಂತಹ ಗುಣವನ್ನು ರೂಢಿಸಿಕೊಂಡು ಅವರ ಬೇಕು ಬೇಡಗಳನ್ನು ಅರ್ಧೈಸಿಕೊಂಡು ಅವರ ಇಚ್ಚೆಗೆ ತಕ್ಕಂತಹ ಸೇವೆ ಮಾಡಲು ಸದಾ ಸನ್ನದ್ಧರಾಗಿರುತ್ತಾರೆ.
ಥೈಲ್ಯಾಂಡ್ ಎಂದಾಕ್ಷಣ ಸುಂದರವಾದ ದ್ವೀಪಗಳು, ಮೋಜು ಮತ್ತು ಮಸ್ತಿ ಎಂದುಕೊಂಡವರಿಗೆ ಅದರ ಹೊರತಾಗಿಯೂ ನಯನ ಮನೋಹರವಾದ ಬುದ್ಧನ ಅನೇಕ ದೇವಾಲಯಗಳಿವೆ. ನೈಸರ್ಗಿಕ ಪ್ರಕೃತಿದತ್ತವಾದ ಪರಿಸರದಲ್ಲಿ ನಿಜವಾದ ಆಧ್ಯಾತ್ಮಿಕ ಅನುಭವವನ್ನು ನೀಡುವ. ಟೈಗರ್ ಕೇವ್ ಟೆಂಪಲ್ ಅಥವಾ ವಾಟ್ ಥಾಮ್ ಸುವಾ ಕ್ರಾಬಿ ಪಟ್ಟಣದಿಂದ 5 ಕಿ.ಮೀ ದೂರದಲ್ಲಿದೆ. ಇಲ್ಲಿನ ದೇವಾಲಯದ ತಡದಲ್ಲಿರುವ ಆಕರ್ಷಕವಾದ ಗುಹೆಯ ರೂಪದ ದೇವಾಲಯಕ್ಕೆ ದ್ವಾರಪಾಲಕರಂತಿರುವ ಎರಡು ದೊಡ್ಡದಾದ ಹುಲಿಗಳು ಹೃನ್ಮನಗಳನ್ನು ಸೆಳೆಯುತ್ತವೆ. ಅದೊಮ್ಮೆ ಒಂದು ಹುಲಿ ಮುಖ್ಯ ಗುಹೆಯನ್ನು ಪ್ರವೇಶಿಸಿ ಆ ಗುಹೆಯನ್ನೇ ತನ್ನ ವಾಸ ಸ್ಥಾನವನ್ನಾಗಿ ಮಾಡಿಕೊಂಡಿತ್ತು ಎಂಬ ಐತಿಹ್ಯವಿದ್ದ ಕಾರಣ ಈ ದೇವಾಲಯಕ್ಕೆ ವಾಟ್ (ದೇವಾಲಯ) ಥಾಮ್ (ಗುಹೆ) ಸುವಾ (ಹುಲಿ) ಎಂಬ ಹೆಸರು ಬಂದಿದೆ ಎನ್ನುತ್ತದೆ ಅಲ್ಲಿನ ಇತಿಹಾಸ. ಇಂದಿಗೂ ಇಲ್ಲಿನ ದೇವಾಲಯದಲ್ಲಿ ಹುಲಿಯ ಹೆಜ್ಜೆ ಗುರುತುಗಳಿವೆ ಮತ್ತು ಅದರ ಜೊತೆ ಸುಂದರವಾದ ಬುದ್ಧನ ಪ್ರತಿಮೆಗಳಿವೆ.
ಈ ದೇವಸ್ಥಾನದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ, ಸುಣ್ಣದ ಮಣ್ಣಿನ ಎತ್ತರದದ ದೊಡ್ಡದಾದ ಮತ್ತು ಅಷ್ಟೇ ಕಡಿದಾದ ಬೆಟ್ಟ. ಆ ಸುಂದರವಾದ ಬೆಟ್ಟವನ್ನು ನೋಡಿ 1,237 ಮೆಟ್ಟಿಲುಗಳಾ? ನನ್ನ ಕೈಯ್ಯಲ್ಲಿ ಅಗೋದಿಲ್ಲಪ್ಪಾ ಎಂದು ನನ್ನ ಮಡದಿ ರಾಗವೆಳೆದಾಗ, ಏ 1,237 ಮೆಟ್ಟಿಲುಗಳು ತಾನೇ ಸುಲಭವಾಗಿ ಹತ್ತಿ ಬಿಡಬಹುದು ಎಂದು ಪುಸಲಾಯಿಸಿ ಮೊದಲ ಮುನ್ನೂರು ನಾಲ್ಕು ನೂರು ಬೆಟ್ಟಿಲುಗಳನ್ನು ಆರಾಮವಾಗಿ ಹತ್ತುತ್ತಿದ್ದಂತೆಯೇ ದೂರದ ಬೆಟ್ಟ ನುಣ್ಣಗೆ ಎಂಬ ಗಾದೆ ನೆನಪಾಗುವಂತೆ ಮಾಡಿತು. ಸಾಮಾನ್ಯವಾಗಿ ಬಹಳಷ್ಟು ಮೆಟ್ಟಿಲುಗಳು ಎಂಟರಿಂದ ಹತ್ತು ಇಂಚುಗಳ ಎತ್ತರವಿದ್ದು ಸುಮಾರು ಒಂದರಿಂದ ಒಂದುವರೆ ಅಡಿ ಅಗಲದಷ್ಟಿರುತ್ತದೆ. ಅದರೆ ಇಲ್ಲಿ ಎಲ್ಲವೂ ಕಡಿದೇ. ಇಲ್ಲಿನ ಮೆಟ್ಟಿಲುಗಳು ಏಕರೂಪವಾಗಿರದೇ, ಕೆಲವೊಂದು ಮೆಟ್ಟಿಲುಗಳು ಒಂದರಿಂದ ಒಂದೂ ಕಾಲು ಆಡಿಗಳಷ್ಟು ಎತ್ತರವಿದ್ದರೆ, ಕೇವಲ ಎಂಟರಿಂದ ಹತ್ತು ಇಂಚಿನ ಅಗಲದ್ದಾಗಿದ್ದು ಬಹಳಷ್ಟು ತಿರುವುಗಳಿಂದ ಕೂಡಿದೆ. ಬಹಳಷ್ಟು ಬೆಟ್ಟಗಳು 30-45 ಡಿಗ್ರಿಗಳಾಗಿದ್ದರೆ ಇಲ್ಲಿನ ಮೆಟ್ಟಿಲುಗಳು 70-80 ಡಿಗ್ರಿಗಳಷ್ಟು ಇದ್ದು ನಿಜಕ್ಕೂ ಬೆಟ್ಟ ಹತ್ತುವುದು ಸವಾಲಿನದ್ದೇ ಆಗಿದೆ. ಸುಮಾರು 500 ಮೆಟ್ಟಿಲುಗಳನ್ನು ಹತ್ತಿದಕೂಡಲೇ, ಅಲ್ಲೇ ಪಕ್ಕಕ್ಕೆ ಒರಗಿ ಕುಳಿತ ಮಡದಿ ನನ್ನ ಕೈಯಲ್ಲಿ ಆಗೋದಿಲ್ಲ. ನೀವು ಬೇಕಿದ್ರೇ ಹೋಗಿ ಬನ್ನಿ ಎಂದಾಗ, ಸ್ವಲ್ಪ ನೀರು ಕುಡಿಸಿ ಕೆಲಕಾಲ ಅಲ್ಲಿಯೇ ವಿರಮಿಸಿಕೊಂಡು ಸ್ವಲ್ಪ ಮೆಟ್ಟಿಲುಗಳನ್ನು ಹತ್ತಿ ಏದುರಿಸು ಬಿಡುತ್ತಿದ್ದಾಗಲೇ ಹೇ.. ಹುಷಾರು ನಿಧಾನವಾಗಿ ನೋಡ್ಕೊಂಡ್ ಹತ್ತಮ್ಮಾ ಎನ್ನುವ ಕನ್ನಡ ಪದ ಕಿವಿಗೆ ಬಿದ್ದಾ ಕ್ಷಣ, ಕನ್ನಡ ಎನೆ ಕುಣಿದಾಡುವುದೆನ್ನದೇ, ಕನ್ನಡ ಎಂದರೆ ಕಿವಿ ನಿಮಿರುವುದು ಎಂಬ ಕುವೆಂಪುರವರ ಕವನದಂತೆ, ಸಾಗರದಾಚೆ ನಾಡಿನಲಿ ಕನ್ನಡ ನುಡಿಯಾ ಕೇಳುತಲೀ ಎನ್ನುವ ಸಿಂಗಾಪುರದಲ್ಲಿ ರಾಜಾ ಕುಳ್ಳಾ ಚಿತ್ರದ ಗೀತೆಯಂತೆ ಹೃದಯ ತುಂಬಿ ಬಂದು, ನಮಸ್ಕಾರ. ಬೆಂಗಳೂರಿನವರಾ? ಎಂದು ನನಗೇ ಅರಿವಿಲ್ಲದಂತೆಯೇ ಕೇಳಿದ್ದೆ. ಅವರೂ ಸಹಾ ಆಶ್ಚರ್ಯ ಚಕಿತರಾಗಿ ನಮ್ಮಿಬ್ಬರನ್ನೂ ನೋಡಿ. ಹೂಂ ಹೌದು ಬೆಂಗಳೂರಿನ ಬಸವೇಶ್ವರ ನಗರದವರು. Weeding Pre-Shootಗಾಗಿ Family & Photographers ರೊಂದಿಗೆ ಬಂದಿದ್ದೇವೆ ಎಂದರು. ಹಾಗೇ ಅವರೊಂದಿಗೆ ಕನ್ನಡದಲ್ಲಿಯೇ ಹರಟುತ್ತಾ, ಸ್ವಲ್ಪ ಸ್ವಲ್ಪವೇ ಮೆಟ್ಟಿಲುಗಳನ್ನು ಹತ್ತಿ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಮತ್ತೆ ಮುಂದುವರಿಸುತ್ತಾ ಹಾಗೂ ಹೀಗೂ ಬೆಟ್ಟದ ತುದಿಯನ್ನು ತಲುಪಿದ್ದೇ ಗೊತ್ತಾಗಲಿಲ್ಲ.
ಬಿಸಿಲಿನ ಬೇಗೆಯ ನಡುವೆಯೂ ಬೆಟ್ಟದ ತುದಿಯನ್ನು ತಲುಪುತ್ತಿದ್ದಂತೆಯೇ ತಣ್ಣನೆಯ ಗಾಳಿ ನಮ್ಮನ್ನು ಸ್ವಾಗತಿಸಿದರೆ, ಎದುರಿಗೆ ಕಾಣುವ ಭವ್ಯವಾದ ಬುದ್ಧನ ವಿಗ್ರಹ ಅದರ ಬುಡದಲ್ಲಿರುವ ಗಣೇಶನ ವಿಗ್ರಹ ಮತ್ತು ಅಲ್ಲಿಂದ ಇಡೀ ಪಟ್ಟಣದ ವಿಹಂಗಮ ನೋಟ ಬೆಟ್ಟ ಹತ್ತಿದ್ದ ಆಯಾಸವನ್ನೆಲ್ಲಾ ಕ್ಷಣ ಮಾತ್ರದಲ್ಲಿಯೇ ಪರಿಹರಿಸಿ, ಅಷ್ಟು ಕಷ್ಟ ಪಟ್ಟು ಹತ್ತಿದ್ದಕ್ಕೂ ಸಾರ್ಥಕ ಎನಿಸುವಂತೆ ಮಾಡಿತ್ತು.
ಅಂತಹ ಸುಂದರವಾದ ಪ್ರಕೃತಿ ತಾಣದಲ್ಲಿ ಸುಮಾರು ಅರ್ಧ ಮುಕ್ಕಾಲು ಗಂಟೆ ಕಳೆದು ಹೋಗುವುದೇ ಗೊತ್ತಾಗುವುದಿಲ್ಲ. ಸಾಧಾರಣವಾಗಿ ಬಹುತೇಕ ಬೆಟ್ಟಗಳನ್ನು ಹತ್ತುವಾಗ ಕಷ್ಟ ಪಟ್ಟು ಹತ್ತಿದರೆ, ಇಳಿಯುವಾಗ ಸುಲಭವೆನಿಸುತ್ತದೆ. ಆದರೆ ಇಲ್ಲಿಯ ಮೆಟ್ಟಿಲುಗಳು ಬಹಳ ಇಳಿಜಾರು ಮತ್ತು ಕಡಿದಾದ ಪರಿಣಾಮ ಇಳಿಯುವಾಗಲೂ ಬಹಳ ಹುಶಾರಾಗಿಯೇ ನಿಧಾನವಾಗಿ ಇಳಿಯಬೇಕಾಗುತ್ತದೆ. ಭಕ್ತಾದಿಗಳು ಮತ್ತು ಪ್ರವಾಸಿಗರು ಇಷ್ಟು ಕಷ್ಟ ಪಡುವ ಬದಲು ಈ ಬೆಟ್ಟದ ಬುಡದಿಂದ ತುದಿಯವರೆಗೂ ಸುಲಭವಾಗಿ ತಲುಪುವಂತೆ ರೋಪ್ ಟ್ರೈನ್ ಹಾಕಬಹುದಿತ್ತಲ್ಲವೇ ಎಂಬ ಯೋಚನಾ ಲಹರಿಯೊಂದು ತಲೆಗೆ ಬಂದು ಕಡೆಗೆ ಬೆಟ್ಟ ಇಳಿದ ನಂತರ ಅಲ್ಲಿನವರೊಬ್ಬರ ಬಳಿಿ ಈ ಕುರಿತಂತೆ ವಿಚಾರಿಸಿದಾಗ, ಶ್ರಮವಹಿಸಿ ಭಗವಂತನನ್ನು ದರ್ಶನ ಮಾಡಿದಾಗ ಸಿಗುವ ಆನಂದ ಅನುಭವವೇ ಬೇರೆ. ಪ್ರತೀ ಬಾರಿ ಕಡಿದಾದ ಎತ್ತರದ ಮೆಟ್ಟಿಲುಗಳನ್ನು ಹತ್ತುವಾಗ ಭವವಂತನ ಧ್ಯಾನವನ್ನು ಮಾಡಿಕೊಂಡೇ ಹತ್ತುತ್ತೇವೆ ಮತ್ತು ಮೇಲೆ ಹತ್ತಿ ಆ ಭಗವಂತನನ್ನು ನೋಡಿದಾಕ್ಷಣ ಭಕ್ತಿಪರವಶರಾಗಿ ಆ ಭಗವಂತನ ಚರಣಾರವಿಂದಗಳಲ್ಲಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳುತ್ತೇವೆ. ಆ ಕ್ಷಣದಲ್ಲಿ ನಮ್ಮೆಲ್ಲಾ ಲೌಕಿಕ ಭಾವನೆಗಳನ್ನು ಮರೆತು ಭಗವಂತನಲ್ಲಿ ಲೀನವಾಗುವಂತಹ ಸುಂದರ ಕ್ಷಣಗಳು ಸುಲಭವಾದ ಮೆಟ್ಟಿಲುಗಳನ್ನು ಹತ್ತುವುದರಿಂದಾಗಲೀ ಅಥವಾ ರೋಪ್ ಟ್ರೈನ್ ಮುಖಾಂತರ ತಲುಪಿದಾಗ ಆಗದ ಕಾರಣ ಈ ಬೆಟ್ಟವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ ಎಂದು ನಮ್ಮ ಸಮಸ್ಯೆಯನ್ನು ಪರಿಹರಿಸಿದರು.
ಬೆಟ್ಟ ಇಳಿಯುತ್ತಿದ್ದಂತೆಯೇ ದೇವಾಲಯದ ಹಿಂದೆಯೇ ದೇವಾಲಯದ ಆಡಳಿತ ಮಂಡಳಿ ನಡೆಸುವ ಕ್ಯಾಂಟೀನ್ ನಲ್ಲಿ ಸಿಗುವ ತಾಜಾ ತಾಜಾ ಹಣ್ಣುಗಳು ಮತ್ತು ಬಗೆ ಬಗೆಯ ಮಿಲ್ಕ್ ಶೇಕ್, ಚಿಪ್ಸ್, ಚಾಕ್ಲೇಟ್ಗಳನ್ನು ತಿಂದು ಆಯಾಸವನ್ನು ಪರಿಹರಿಸಿಕೊಂಡು ಕೆಲವು ಬಾಳೆಹಣ್ಣುಗಳನ್ನು ಖರೀದಿಸಿ ದೇವಸ್ಥಾನದ ಸುತ್ತಲೂ ಕಾಣಸಿಗುವ ನೂರಾರು ಕೋತಿಗಳಿಗೆ ಕೊಟ್ಟಾಗ ಮನಸ್ಸಿಗಾಗುವ ಆನಂದ ನಿಜಕ್ಕೂ ವರ್ಣಿಸುವುದಕ್ಕಿಂತಲೂ ಅಲ್ಲಿಗೇ ಹೋಗಿ ಅನುಭವಿಸಿದರೇ ಚೆಂದ. ಕೋತಿಗಳು ಭಾರತದ್ದಾದರೂ, ಥೈಲ್ಯಾಂಡಿನದ್ದಾದರೂ ತಮ್ಮ ಕಪಿ ಚೇಷ್ಟೇ ಬಿಡದು ಎನ್ನುವುದಕ್ಕೆ ಸಾಕ್ಷಿಯಾಗಿ ತಮ್ಮ ಆಹಾರದ ಹುಡುಕಾಟದಲ್ಲಿ ನಮ್ಮ ಕೈಚೀಲಗಳ ಮೇಲೆ ಎಗ್ಗಿಲ್ಲದೇ ಎರಗುವ ಸಂಭವವೂ ಇರುವ ಕಾರಣ ಸ್ವಲ್ಪ ಜೋಪಾನವಾಗಿರುವುದು ಉತ್ತಮ.
ಕ್ರಾಬಿ ಪಟ್ಟಣದ ಗಿಜಿ ಬಿಜೆಯ ನಡುವೆಯೂ ಇಂತಹ ರಮಣೀಯವಾದ ಪ್ರಶಾಂತವಾದ ವಾತಾವರಣ ನಿಜಕ್ಕೂ ಮನಸ್ಸನ್ನು ಸೂರೆಗೊಳ್ಳುತ್ತದೆ. ಬೆಟ್ಟದ ಅಡಿಯಲ್ಲಿ ಕಾಣಸಿಗುವ ಪುಟ್ಟ ಪುಟ್ಟ ಮಕ್ಕಳ ಮುದ್ದಾದ ನಗುತ್ತಿರುವ ವಿಗ್ರಹಗಳನ್ನು ನೋಡಿದಾಗ ದೂರದ ಬೆಂಗಳೂರಿನಲ್ಲಿ ಮಕ್ಕಳನ್ನು ಬಿಟ್ಟು ಗಂಡ ಹೆಂಡತಿ ಇಲ್ಲಿ ಸುತ್ತಾಡುವುದಕ್ಕೆ ಬಂದಿದ್ದೀರಾ? ಎಂದು ಕಿಚಾಯಿಸುವ ರೀತಿಯಲ್ಲಿತ್ತು.
ಮುಂದಿನ ಲೇಖನದಲ್ಲಿ ಕ್ರಾಬಿಯ ಮತ್ತಷ್ಟೂ ಮಹೋಹರ ವಿಷಯಗಳನ್ನು ಮುಕ್ತವಾಗಿ ನಿಮ್ಮೊಂದಿಗೆ ಹಂಚಿಕೊಳ್ಳುವವರೆಗೂ ಈ ಲೇಖನ ಕುರಿತಂತೆ ನಿಮ್ಮ ಆಭಿಪ್ರಾಯವನ್ನು ತಿಳಿಸಿ. ಇಮಗೆ ಈ ಲೇಖನ ಇಷ್ಟವಾದ್ರೇ ನಿಮ್ಮ ಬಂಧು ಮಿತ್ರರೊಡನೆ ಹಂಚಿಕೊಳ್ತೀರೀ ತಾನೇ?
ಏನಂತೀರೀ?
ನಿಮ್ಮವನೇ ಉಮಾಸುತ