ಗಾನ ಗಾರುಡಿಗ, ಎಸ್ ಪಿ ಬಾಲಸುಬ್ರಹ್ಮಣ್ಯಂ

ಶ್ರೀಪತಿ ಪಂಡಿತರಾದ್ಯುಲು ಬಾಲಸುಬ್ರಹ್ಮಣ್ಯಂ  ಎಲ್ಲರ ಪ್ರೀತಿಯ ಎಸ್ಪಿಬಿ, ಇನ್ನೂ ಅನೇಕರಿಗೆ ಬಾಲೂ  ಅವರನ್ನು ಹೇಗೆ ಪರಿಚಯಿಸ ಬೇಕು ಎಂಬುದೇ ಬಹಳ ಕಷ್ಟಕರವಾದ ವಿಷಯ. ಗಾಯಕ, ನಟ, ಸಂಗೀತ ನಿರ್ದೇಶಕ, ಕಂಠದಾನ ಕಲಾವಿದ, ಮಿಮಿಕ್ರಿ ಕಲಾವಿದ, ಸೃಜನಶೀಲವ್ಯಕ್ತಿ, ಅನೇಕ ಹೊಸಾ ಪ್ರತಿಭೆಗಳಿಗೆ ಮಾರ್ಗದರ್ಶಿ ಹೀಗೆ ಹತ್ತು ಹಲವಾರು ವ್ಯಕ್ತಿತ್ವವನ್ನು ಹೊಂದಿದ್ದರು ಎಂದರೂ ತಪ್ಪಾಗಲಾರದು.

ಸ್ವಾತಂತ್ರ್ಯ ಪೂರ್ವ ಮದ್ರಾಸ್ ರೆಸೆಡೆನ್ಸಿ ಪ್ರಾಂತ್ಯಕ್ಕೆ ಸೇರಿದ್ದ ಇಂದಿನ ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಖ್ಯಾತ ಹರಿಕಥಾ ವಿದ್ವಾಸಂರಾಗಿದ್ದ ಶ್ರೀ  ಸಾಂಬಮೂರ್ತಿಗಳು ಮತ್ತು ಶಕುಂತಲಮ್ಮ ದಂಪತಿಗಳ ಪುತ್ರನಾಗಿ 1946ರ ಜೂನ್ 4ರಂದು ಜನಿಸಿದರು.  ಬಾಲ್ಯದಿಂದಲೂ ಬುದ್ಧಿವಂತ ಅದರೇ ಅಷ್ಟೇ ತುಂಟತನದವರಾಗಿದ್ದ ಬಾಲೂ ಕುಟುಂಬದವರೆಲ್ಲರ ಅಕ್ಕರೆ ಮತ್ತು ಪ್ರೀತಿಯನ್ನು ಗಳಿಸಿದ್ದರು.

ಓದಿನಲ್ಲಿ ಅತ್ಯಂತ ಚುರುಕಾಗಿದ್ದರಿಂದ ಇಂಜಿನೀಯರ್ ಆಗಬೇಕೆಂಬ ಉದ್ದೇಶದಿಂದ ಅನಂತಪುರದ ಜೆಎನ್‌ಟಿಯು ಕಾಲೇಜ್ ಆಫ್ ಎಂಜಿನಿಯರಿಂಗ್‌ಗೆ ಸೇರಿಕೊಂಡರಾದರೂ ಅನಾರೋಗ್ಯದ ಕಾರಣ ತಮ್ಮ ಇಂಜೀನಿಯರಿಂಗ್ ವಿದ್ಯಾಭ್ಯಾಸವನ್ನು ಅಲ್ಲಿಗೇ ಮೊಟುಕುಗಳಿಸಬೇಕಾಯಿತು. ನಂತರ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುವ ಸಲುವಾಗಿ ಮದ್ರಾಸಿಗೆ ಬಂದು ಅಲ್ಲಿನ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್‌ನಲ್ಲಿ ಸಹಾಯಕ ಸದಸ್ಯರಾಗಿ ಸೇರಿಕೊಂಡರು. ಶಾಸ್ತ್ರೀಯವಾಗಿ  ಸಂಗೀತವನ್ನು ಕಲಿಯದಿದ್ದರೂ ಮನೆಯಲ್ಲಿದ್ದ ಸಂಗೀತಮಯ ವಾತಾವರಣ ಮತ್ತು ತಂದೆಯಿಂದ ಬಂದಿದ್ದ ಬಳುವಳಿಯ ಕಾರಣ ಕಾಲೇಜಿನ ಸ್ಪರ್ಥೆಗಳು ಮತ್ತು ಕಾರ್ಯಕ್ರಮಗಳಲ್ಲಿ ತಮ್ಮ ಕಂಠ ಸಿರಿಯಿಂದ ಅನೇಕ ಪ್ರಶಸ್ತಿಗಳನ್ನು ಮತ್ತು ಎಲ್ಲರ ಹೃನ್ಮಗಳನ್ನು ಗೆದ್ದಿದ್ದರು.

1964 ರಲ್ಲಿ, ಮದ್ರಾಸ್ ಮೂಲದ ತೆಲುಗು ಸಾಂಸ್ಕೃತಿಕ ಸಂಸ್ಥೆ ಹವ್ಯಾಸೀ ಗಾಯಕರಿಗಾಗಿ ಸ್ಪರ್ಧೆಯೊಂದನ್ನು ಏರ್ಪಡಿಸಿತ್ತು. ಗೆಳೆಯರ ಒತ್ತಾದ  ಮೇರೆಗೆ ಬಾಲೂ ಆ ಸ್ಪರ್ಥೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನವನ್ನು ಗಳಿಸಿದರು. ಅದೃಷ್ಟವೆಂದರೆ, ಆ ಸ್ಪರ್ಥೆಯ ತೀರ್ಪುಗಾರರಾಗಿ ಖ್ಯಾತ ಸಂಗೀತ ನಿರ್ದೇಶಕರರಾದ ಶ್ರೀ ಎಸ್. ಪಿ. ಕೋದಂಡಪಾಣಿ ಮತ್ತು ಖ್ಯಾತ ಗಾಯಕರಾದ ಶ್ರೀ ಘಂಟಸಾಲ ಅವರು ಬಾಲೂ ಅವರ ಗಾಯನಕ್ಕೆ ಮನಸೋತು, ನೀವೇಕೆ ಚಲನಚಿತ್ರದಲ್ಲಿ ಹಿನ್ನಲೆ ಗಾಯಕರಾಗಬಾರದು ಎಂದು ಕೇಳುತ್ತಾರೆ. ನಾನು  ಶಾಸ್ತ್ರೀಯವಾಗಿ ಯಾವುದೇ ಸಂಗೀತವನ್ನು  ಅಭ್ಯಾಸ ಮಾಡಿಲ್ಲ.  ಭಗವಂತಹ ಅನುಗ್ರಹದಿಂದ ಏನೋ ಅಲ್ಪ ಸ್ವಲ್ಪ ಹಾಡುತ್ತೇನೆ ಎಂದು ವಿನಮ್ರನಾಗಿ ಕೋದಂಡಪಾಣಿಯವರ ಸಲಹೆಯನ್ನು ತಿರಸ್ಕರಿದರೂ, ನಂತರ ಬಹಳ ಒತ್ತಾಯದ ಮೇರೆಗೆ ಒಮ್ಮೆ ಪ್ರಯತ್ನಿಸಿ ನೋಡೋಣ ಎಂದು ತೀರ್ಮಾನಿಸಿ, ಅದೇ ಕೋದಂಡಪಾಣಿಯವರ ನಿರ್ದೇಶನದಲ್ಲಿ ಡಿಸೆಂಬರ್ 15, 1966 ರಂದು ಶ್ರೀ ಶ್ರೀ ಶ್ರೀ ಮರ್ಯದಾ ರಾಮಣ್ಣ ಎಂಬ  ತೆಲುಗು ಚಿತ್ರದಲ್ಲಿ ಹಾಡುತ್ತಾರೆ. ಅಚ್ಚರಿ ಎಂಬಂತೆ, ಕೇವಲ ಒಂದು ವಾರದಲ್ಲೇ  ಕನ್ನಡ ಪ್ರಖ್ಯಾತ ಹಾಸ್ಯ ನಟ  ನರಸಿಂಹರಾಜು ಅವರ ಚಿತ್ರ ಕನ್ನಡದಲ್ಲಿ ನಕ್ಕರೆ ಅದೇ ಸ್ವರ್ಗ ಚಿತ್ರಕ್ಕಾಗಿ ಹಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಗಾಯಕರಾಗಿ ಪ್ರವೇಶ ಮಾಡುತ್ತಾರೆ.

ಬಾಲೂ  ಅವರು ಹಿನ್ನಲೆ ಗಾಯಕರಾಗುವುದಕ್ಕೂ ಮೊದಲು ಕನ್ನಡ, ತೆಲುಗು, ತಮಿಳು, ಮಲಯಾಳಂ,  ಸಂಸ್ಕೃತ, ಇಂಗ್ಲಿಷ್ ಮತ್ತು ಉರ್ದು  ಭಾಷೆಗಳನ್ನು ಸುಲಲಿತವಾಗಿ ಬಲ್ಲ ಅದ್ಭುತ ಶಾರೀರದ ಶ್ರೀ  ಪಿ.ಬಿ.ಶ್ರೀನಿವಾಸ್,  ಘಂಟಸಾಲ, ಸೀರ್ಕಾಳೀ ಗೋವಿಂದರಾಜನ್, ಬಾಲಮುರಳಿ ಕೃಷ್ಣ, ಏಸುದಾಸ್ ಮುಂತಾದವರು ದಕ್ಷಿಣ ಭಾರತದ ಚಲನಚಿತ್ರರಂಗದಲ್ಲಿ ದಿಗ್ಗಜರೆನಿಸಿಕೊಂಡಿರುತ್ತಾರೆ. ಈ ಎಲ್ಲಾ ಗಾಯಕರ  ಅವರವರ ಶೈಲಿಗೆ ಬದ್ಧರಾಗಿದ್ದು ಅದು ನಾಯಕ ನಟರಿಗೆ ಒಗ್ಗುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ  ಅಷ್ಟಾಗಿ ಯಾರೂ ಗಮನ ಹರಿಸುತ್ತಿರಲಿಲ್ಲ. ಆದರೆ ಒಮ್ಮೆ ಬಾಲೂ  ಅವರು ದಕ್ಷಿಣ ಭಾರತದ ಚಿತ್ರರಂಗಕ್ಕೆ ಪರಿಚಿತರಾದ ಕೂಡಲೇ ಬಾಲೂರವರು ತಾವು ಹಾಡಿದ ಗೀತೆಗೆ ಯಾವ ನಟ  ಅಭಿನಯಿಸುತ್ತಿದ್ದಾರೆ ಎಂಬುದನ್ನು ಮೊದಲು ವಿಚಾರಿಸಿ ಆ ನಟನ ಹಾವ ಭಾವ ಮತ್ತು ಧ್ವನಿಯನ್ನು ಒಮ್ಮೆ ಅಧ್ಯಯನ ಮಾಡಿ ನಂತರ ಆತನೇ ಹಾಡುತ್ತಿದ್ದಾನೆನೋ ಎನ್ನುವಂತೆ ಭಾಸವಾಗುವ ಹಾಗಿ ಧ್ವನಿಯನ್ನು ಅನುಕರಣೆ ಮಾಡುವ ಕಲೆಯನ್ನು ಸಿದ್ಧ ಪಡಿಸಿಕೊಂಡಿದ್ದರು.

ಈ ವಿಶಿಷ್ಟ ಕಲೆಯಿಂದಾಗಿಯೇ ಬಾಲೂ ಬಹುಬೇಗ ಪ್ರಖ್ಯಾತರಾಗಿ ಅಂದಿನ ಖ್ಯಾತ ನಟರುಗಳಾಗಿದ್ದ  ಎಂ.ಜಿ.ಆರ್, ಎನ್.ಟಿ.ಆರ್. ಶಿವಾಜಿ ಗಣೇಶನ್, ನಾಗೇಶ್ವರ್ ರಾವ್, ಜೆಮಿನಿ ಗಣೇಶನ್ ಮುಂತಾದವರುಗಳಿಂದ ಹಿಡಿದು  ಇತ್ತೀಚಿನ ನಟರುಗಳಿಗೂ ಹಾಡುಲಾರಂಭಿಸಿದರು. ಬಾಲೂ ಮತ್ತು  ಕನ್ನಡ ಖ್ಯಾತ ನಟರುಗಳಾದ ವಿಷ್ಣುವರ್ಧನ್ ಮತ್ತು ಅಂಬರೀಷ್ ಅವರ ನಡುವಿನ ಗೆಳೆತನ ವೃತ್ತಿ ಜೀವನಕ್ಕೂ  ಮಿಗಿಲಾಗಿ, ಏಕವಚನದಲ್ಲಿ ಮಾತನಾಡುವ ಸಹೋದರರಂತಿತ್ತು. ಅದರಲ್ಲೂ ವಿಷ್ಣುವರ್ಧನ್ ಅವರು ತಮ್ಮ ಹಾಡುಗಳನ್ನು ಕಡ್ಡಾಯವಾಗಿ ಬಾಲೂ ಅವರಿಂದಲೇ ಹಾಡಿಸಲೇ ಬೇಕೆಂಬ ಪೂರ್ವ ಷರತ್ತನ್ನು ಹಾಕಿಯೇ ಚಿತ್ರಗಳಿಗೆ ಸಹಿ ಮಾಡುತ್ತಿದ್ದರೆಂದರೆ ಅವರಿಬ್ಬರ ನಡುವಿನ ಸಂಬಂಧ ಹೇಗೆ ಇತ್ತು ಎಂಬುದರ ಅರಿವಾಗುತ್ತದೆ. ಉಳಿದ ಗಾಯಕರ ಹಾಡುಗಳಿಗಿಂತ ಬಾಲೂ ಹಾಡುಗಳಲ್ಲಿ ಹೆಚ್ಚಿನ ಮಾರ್ಧನಿ ಇರುವ ಕಾರಣ, ಆ ಹಾಡುಗಳಿಗೆ ಸುಲಭವಾಗಿ  ಆಭಿನಯಿಸಬಹುದು ಎಂಬುದು ವಿಷ್ಣು ಅವರ  ಅಭಿಪ್ರಾಯವಾಗಿತ್ತು. ಅದೇ ಕಾರಣದಿಂದಾಗಿಯೇ  ನಾಗರ ಹಾವು, ಬಂಧನ, ಕರ್ಣ, ಆಪ್ತಮಿತ್ರ, ಮತ್ತು ವಿಷ್ಣು ರವರ ಕಡೆಯ ಚಿತ್ರವಾದ ಆಪ್ತರಕ್ಷಕದ ವರೆಗೂ ಇತ್ತು.

ಎಂಭತ್ತರ ದಶಕ ನಿಜಕ್ಕೂ ಬಾಲೂ  ಅವರ ವೃತ್ತಿ ಬದುಕಿನಲ್ಲಿ ಮಹತ್ತರ ತಿರುವನ್ನು ಪಡೆಯಿತು. 1981ರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗದ ಹೆಸರಿನಲ್ಲಿಯೇ ಶಾಸ್ತ್ರೀಯ ಸಂಗೀತಗಾರ ಚಿತ್ರಕಥೆಯನ್ನು ಹೊಂದಿದ್ದ ಕೆ.ವಿಶ್ವನಾಥ್ ನಿರ್ದೇಶನದ,  ಕೆ.ವಿ. ಮಹಾದೇವನ್ ಅವರ ರಾಗ ಸಂಯೋಜನೆಯಲ್ಲಿ ತಯಾರಾದ ಶಂಕರಾಭರಣಂ ಚಿತ್ರದ ಅಷ್ಟೂ ಹಾಡುಗಳನ್ನು ಬಾಲೂ ರವರು ಹಾಡುವ ಮೂಲಕ ಎಲ್ಲಾ ಶಾಸ್ತ್ರೀಯ ಸಂಗೀತಗಾರರೂ ಮೂಗಿನಮೇಲೆ ಬೆರೆಳಿಡುವಂತೆ ಮಾಡಿದರು. ಶಂಕರಾಭರಣಂ ಹಾಡುಗಳನ್ನು ಕೇಳಿದವರು, ಬಾಲೂರವರು ಶಾಸ್ತ್ರೀಯ ಸಂಗೀತವನ್ನು ಕಲಿತಿಲ್ಲ ಎಂದು ಹೇಳಿದರೆ ಖಂಡಿತವಾಗಿಯೂ ನಂಬಲಾರರು. ಈ ಚಿತ್ರದ ಹಾಡುಗಾರಿಕೆಯ ಮೂಲಕ  ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದದ್ದಲ್ಲದೇ,  ಮೊದಲ ಬಾರಿಗೆ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದರು.

1981ರಲ್ಲಿಯೇ ತಮಿಳು ಮೂಲದನೊಬ್ಬ ಉತ್ತರ ಭಾರತದ ಹೆಣ್ಣು  ಮಗಳನ್ನು ಪ್ರೀತಿಸುವ ಕಥಾಹಂದರದ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಅವರು ನಿರ್ದೇಶಿಸಿದ ಕಮಲಹಾಸನ್ ಮತ್ತು ರತಿ ಅಗ್ನಿಹೋತ್ರಿ ನಟಿಸಿದ ಹಿಂದಿ ಚಲನಚಿತ್ರ ಏಕ್ ದುಜೆ ಕೆ‌ ಲಿಯೇ ಮೂಲಕ ಬಾಲೂ  ಹಿಂದಿ ಸಿನಿಮಾರಂಗಕ್ಕೂ ಪದಾರ್ಪಣೆ ಮಾಡಿದ್ದರು. ಆ ಸಿನಿಮಾದ ತೆರೇ ಮೇರೇ ಬೀಚ್ ಮೇ… ಹಾಡು ಎಲ್ಲರ ಮನಸೂರೆಗೊಂಡಿತಲ್ಲದೇ, ಆ ಹಾಡಿಗಾಗಿ  ಮತ್ತೊಮ್ಮೆ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದರು.

ಒಂದೇ ದಿನದಲ್ಲಿ ಅತಿ ಹೆಚ್ಚು ಹಾಡುಗಳನ್ನು ಧ್ವನಿಮುದ್ರಣ ಮಾಡಿದ ಸಾರ್ವಕಾಲಿಕ ದಾಖಲೆ ಎಸ್ಪಿಬಿ ಆವರ ಹೆಸರಿನಲ್ಲಿದೆ. 1981ರಲ್ಲಿ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಪಿ. ಉಪೇಂದ್ರ ಕುಮಾರ್  ಅವರ ನಿರ್ದೇಶನದಲ್ಲಿ ಬೆಳಿಗ್ಗೆ 9:00 ರಿಂದ ರಾತ್ರಿ 9:00 ವರೆಗೆ 12 ಗಂಟೆಗಳಲ್ಲಿ 21 ಕನ್ನಡ ಹಾಡುಗಳನ್ನು ಹಾಡುವ ಮೂಲಕ ಅದುವರೆಗೂ ಇದ್ದ ಎಲ್ಲಾ ದಾಖಲೆಯನ್ನು ಧೂಳಿಪಟ ಮಾಡಿದ್ದರು.  ಅದೇ ರೀತಿ ಒಂದೇ ದಿನದಲ್ಲಿ ತಮಿಳು ಹಾಗೂ ತೆಲುಗಿನಲ್ಲಿ 19 ಹಾಡುಗಳನ್ನೂ ಹಿಂದಿಯಲ್ಲಿ 16 ಹಾಡುಗಳನ್ನು ಹಾಡಿದ್ದರು

ದಕ್ಷಿಣಭಾರತ ಖ್ಯಾತ ಸಂಗೀತ ನಿರ್ದೇಶಕರಾದ  ಇಳೆಯರಾಜ ಮತ್ತು ಬಾಲೂ ಅವರ ಒಡನಾಟ, ಅವರಿಬ್ಬರೂ ಸಿನಿಮಾರಂಗಕ್ಕೆ ಬರುವ ಮುಂಚಿನಿಂದಲೂ ಇತ್ತು. ಅನಿರುಧ್ ಹಾರ್ಮೋನಿಯಂನಲ್ಲಿ, ಇಳೆಯರಾಜಾ ಗಿಟಾರ್ ಮತ್ತು  ಹಾರ್ಮೋನಿಯಂ, ಬಾಸ್ಕರ್ ತಾಳವಾದ್ಯ ಮತ್ತು ಗಂಗೈ ಅಮರನ್ ಅವರ ಗಿಟಾರ್‌ ವಾದನದ ತಂಡವೊಂದನ್ನು ರಚಿಸಿಕೊಂಡು ದಕ್ಷಿಣ ಭಾರತದಾದ್ಯಂತದ ಅನೇಕ  ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ನಾನಾ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಈ ಸಂಬಂಧ ಮತ್ತು ಅನುಬಂಧ ಹಾಗೆಯೇ ಮುಂದು ವರೆದು ಇಳೆಯರಾಜಾ ಅವರ ಬಹುತೇಕ ಹಾಡುಗಳಿಗೆ ಬಾಲುರವರೇ ಗಾಯಕರಾಗಿರುವುದು ಗಮನಾರ್ಹ ವಿಷಯವಾಗಿದೆ. ಅದರಲ್ಲೂ ಸಾಗರ ಸಂಗಮಂ, ರುದ್ರವೀಣಾದಂತಹ ಶಾಸ್ತ್ರೀಯ ಸಂಗೀತಾಧಾರಿತ ಎಲ್ಲರ ಮನಸೂರೆಗೊಂಡಿದ್ದಲ್ಲದೆ ಇಬ್ಬರಿಗೂ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ತಂದು ಕೊಟ್ಟಿತು.

ಬಾಲುರವರು ಹಾಡುವಾಗ ತಮ್ಮ ಸೃಜನಶೀಲ ಪ್ರತಿಭೆಯಿಂದಾಗಿ ಸಂಗೀತ ನಿರ್ದೇಶಕರು ಬಯಸಿದ್ದಕ್ಕಿಂತಲೂ ಹೆಚ್ಚಿನ ಮಾಧುರ್ಯತೆಯನ್ನು ತುಂಬುತ್ತಿದ್ದ ಕಾರಣ ಬಹುತೇಕ ಎಲ್ಲಾ ಸಂಗೀತ ನಿರ್ದೇಶಕರ ಅಚ್ಚು ಮೆಚ್ಚಿನ ಗಾಯಕರಾಗಿದ್ದರು. ಅದೂ ಅಲ್ಲದೇ ಅವರೊಂದಿಗೆ ಹಾಡುತ್ತಿದ್ದ ಸಹಗಾಯಕಿಯರುಗಳಾಗಿದ್ದ ಎಲ್. ಆರ್. ಈಶ್ವರಿ, ಎಸ್.ಜಾನಕಿ, ಪಿ. ಸುಶೀಲ, ಕಸ್ತೂರಿ ಶಂಕರ್, ಬಿ.ಕೆ. ಸುಮಿತ್ರ, ಚಿತ್ರಾ ಅಲ್ಲದೇ ಇತ್ತೀಚಿನ ಗಾಯಕಿಯರ ವರೆಗೂ ಅವರು ಸ್ಪೂರ್ತಿ ತುಂಬುತ್ತಿದ್ದರು. ಹಾಗಾಗಿಯೇ ಇವರೆಲ್ಲರ ಯುಗಳ ಗಾಯನ ಅದ್ಭುತವಾಗಿ ಮೂಡಿ ಬರಲು ಸಾಧ್ಯವಾಗಿದೆ.

ತಮ್ಮ ಮೊದಲ ಹಿಂದಿ ಚಿತ್ರದ ಹಾಡಿಗೇ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರೂ ಅದೆಕೋ ಏನೋ  ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚಿದ್ದಂತೆ ಹಿಂದೀ ಚಿತ್ರರಂಗದಲ್ಲಿ ವಿಜೃಂಭಿಸಲು ಬಾಲುರವರಿಗೆ ಸಾಧ್ಯವಾಗಲಿಲ್ಲ. 1989 ರಲ್ಲಿ ಸೂರಜ್ ಆರ್. ಬರ್ಜತ್ಯ ನಿರ್ದೇಶನದದ ಸಲ್ಮಾನ್ ಖಾನ್ ಮತ್ತು ಭಾಗ್ಯಶ್ರೀ ಅಭಿನಯದ  ಮೈನೆ ಪ್ಯಾರ್ ಕಿಯಾ ಚಿತ್ರದಲ್ಲಿ ಮತ್ತೊಮ್ಮೆ ಬಾಲೂರವರಿಗೆ ಹಾಡಲು ಅವಕಾಶ ಸಿಕ್ಕಿ ಆ ಚಿತ್ರದ ಎಲ್ಲಾ ಹಾಡುಗಳೂ ಅತ್ಯಂತ ಯಶಸ್ವಿಯಾಯಿತಲ್ಲದೇ,  ದಿಲ್ ದಿವಾನಾ ಹಾಡಿನ  ಅತ್ಯುತ್ತಮ  ಹಿನ್ನೆಲೆ ಗಾಯಕರಾಗಿ ಎಂಬ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗಳಿಸಿದರು. ಅಲ್ಲಿಂದ ಮುಂದೆ ಸಲ್ಮಾನ್ ಖಾನ್ ಅವರ ಬಹುತೇಕ ಚಿತ್ರಗಳಿಗೆ ಧ್ವನಿಯಾದರು. ಹಮ್ ಆಪ್ಕೆ ಹೈ ಕೌನ್ ಚಿತ್ರದಲ್ಲಿ ಲತಾ ಮಂಗೇಶ್ಕರ್ ಅವರೊಂದಿಗೆ ಬಾಲೂ ರವರು ಹಾಡಿದ ದೀದಿ ತೇರಾ ದೇವರ್ ದಿವಾನಾ.. ಇಂದಿಗೂ ಬಹಳ ಜನಪ್ರಿಯವಾಗಿದೆ.

ಇಷ್ಟೆಲ್ಲಾ ಗಾಯನದ ಸಾಧನೆಯ ಮಧ್ಯೆಯೂ ಬಾಲೂ ರವರು ಕಂಠದಾನ ಕಲಾವಿದರಾಗಿಯೂ  ಪ್ರಖ್ಯಾತರಾಗಿ ಅದರಲ್ಲಿನ ಸಾಧನೆಗಾಗಿಯೂ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು ಎಂದರೆ ಆಶ್ಚರ್ಯವಾಗಹುದು. ಕೆ.ಬಾಲಚಂದರ್ ಅವರ ತಮಿಳು ಚಿತ್ರ ಮನ್ಮಧ ಲೀಲಾದ ತೆಲುಗು ಆವೃತ್ತಿ ಮನ್ಮಧಾ ಲೀಲೈ ಚಿತ್ರಕ್ಕೆ ಕಮಲಹಾಸನ್ ಅವರಿಗೆ  ಡಬ್ಬಿಂಗ್ ಮಾಡುವ ಮೂಲಕ ಕಂಠದಾನ ಕಲಾವಿದರಾದರು. ತಮಿಳು ಮತ್ತು ತೆಲುಗು ಭಾಷೆಯ ಮೇಲೆ ಹಿಡಿತ ಹೊಂದಿದ್ದ ಕಾರಣ ಬಹುತೇಕ ಖ್ಯಾತ ತಮಿಳು ನಟರುಗಳು ತೆಲುಗು ಅವತರಣಿಕೆಗೆ ಮತ್ತು ತೆಲುಗು ನಟರುಗಳ ತಮಿಳು ಅವತರಣಿಕೆಗೆ ಬಾಲೂರವರು ಕಂಠದಾನ ಮಾಡುತ್ತಿದ್ದರು. ಕಮಲಹಾಸನ್ ಅವರ  ದಶಾವತಾರಂನ ತೆಲುಗು ಆವೃತ್ತಿಯ, ಕಮಲ್ ಹಾಸನ್ ನಿರ್ವಹಿಸಿದ ಹತ್ತು ಪಾತ್ರಗಳಲ್ಲಿ ಏಳು ಪಾತ್ರಗಳಿಗೆ ಅದರಲ್ಲೂ ಸ್ತ್ರೀ ಪಾತ್ರವನ್ನು ಒಳಗೊಂಡಂತೆ) ಧ್ವನಿ ನೀಡಿರುವುದು ವಿಶೇಷ,  ಅಣ್ಣಮಯ್ಯ ಮತ್ತು ಶ್ರೀ ಸಾಯಿ ಮಹೀಮಾ ಚಿತ್ರಗಳಿಗಾಗಿ ಅತ್ಯುತ್ತಮ  ಡಬ್ಬಿಂಗ್ ಕಲಾವಿದ ಎಂದು  ನಂದಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.  ಗಾಂಧಿ ಚಿತ್ರದ ತೆಲುಗು-ಡಬ್ ಆವೃತ್ತಿಯಲ್ಲಿ ಗಾಂಧಿ ಪಾತ್ರಧಾರಿ ಬೆನ್ ಕಿಂಗ್ಸ್ಲೆ ಅವರಿಗೂ ಡಬ್ ಮಾಡಿದ್ದರು.

ಭಾರತೀಯ ಭಾಷೆಯ ಬೇರಾವ ಭಾಷೆಯಲ್ಲಿಯೂ ಹೆಚ್ಚಾಗಿ ಕಾಣಸಿಗದ ಮತ್ತು ಕನ್ನಡ  ಸಾಹಿತ್ಯ ಸಾರಸ್ವತಲೋಕದಲ್ಲಿ ಮಾತ್ರವೇ ಕಾಣ ಬಹುದಾದಂತಹ  ಭಾವಗೀತೆಗಳು ಬಾಲೂ ರವರಿಗೆ ಅಚ್ಚುಮೆಚ್ಚಾಗಿತ್ತು, ಹಾಗಾಗಿಯೇ ಕನ್ನಡ ಅನೇಕ ಕವಿಗಳ ಭಾವಕ್ಕೆ ತಮ್ಮ ಗಾಯನ ಮೂಲಕ ಭಾವತುಂಬಿದ ಕೀರ್ತಿಯೂ ಬಾಲುರವರದ್ದಾಗಿದೆ.

ಇವೆಲ್ಲದರ ನಡುವೆಯೂ ಅಲ್ಲೊಂದು ಇಲ್ಲೊಂದು ಚಿತ್ರಗಳ ಹಾಡುಗಳಲ್ಲಿ ಅಭಿನಯಿಸುತ್ತಿದ್ದದ್ದೂ ಉಂಟು ಅದರಲ್ಲೂ ತಿರುಗು ಬಾಣ ಚಿತ್ರದ ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ, ಮಿಥಿಲೆಯ ಸೀತೆಯರು  ಚಿತ್ರದ ಜೀವನ ಉಲ್ಲಾಸ ಪಯಣ.. ಹಾಡುಗಳು ಅತ್ಯಂತ ಜನ ಪ್ರಿಯವಾಗಿದ್ದ ಕಾರಣ ತೊಂಭತ್ತರ ದಶಕದಲ್ಲಿ ಶಶಿಕುಮಾರ್ ನಾಯಕರಾಗಿದ್ದ ಕನ್ನಡ ಚಿತ್ರವಾದ ಮುದ್ದಿನ ಮಾವದಲ್ಲಿ ಅಭಿನಯಿಸಿದ್ದರು. ಈ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ, ಖ್ಯಾತ ಗಾಯಕ ಬಾಲುರವರ ಶರೀರಕ್ಕೆ ಮತ್ತೊಬ್ಬ ಪ್ರಖ್ಯಾತ ವರನಟ ರಾಜಕುಮಾರ್ ಅವರು ಶಾರೀರವಿದೆ.

ಪ್ರೇಮಲೋಕ ಚಿತ್ರದ ಮೂಲಕ ಬಾಲೂ ಮತ್ತು ಹಂಸಲೇಖರವರ ನಡುವಿನ ಗಳಸ್ಯ ಗಂಠಸ್ಯ ಆರಂಭವಾಗಿ ಹಂಸಲೇಖರವರು ಸಂಗೀತ ನೀಡಿದ ಬಹುತೇಕ ಚಿತ್ರಗಳಲ್ಲಿ ಬಾಲುರವರೇ ಹಾಡಿದ್ದಾರೆ, ಹಿಂದೂಸ್ಥಾನೀ ಸಂಗೀತಾಧಾರಿತ 1995ರಲ್ಲಿ ಬಿಡುಗಡೆಯಾದ ಶ್ರೀ ಗಾನಯೋಗಿ ಪಂಚಕ್ಷರಿ ಗವಾಯಿ ಚಿತ್ರದ ಉಮಂಡು ಘುಮಂಡು ಹಾಡಿಗೆ ಮತ್ತೊಮ್ಮೆ ರಾಷ್ಟ್ರೀಯ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಗೆ ಬಾಲಸುಬ್ರಹ್ಮಣ್ಯಂ ಪಾತ್ರರಾದರು.

2000ದಿಂದ ಈಚೆಗೆ ಚಿತ್ರಗಳಿಗೆ ಹಾಡುವುದನ್ನು ಕಡಿಮೆ ಗೊಳಿಸಿದ ಬಾಲೂ ಈ-ಟೀವಿಯವರಿಗಾಗಿ ಸಂಗೀತಾಧಾರಿತ ರಿಯಾಲಿಟೀ ಶೋ ಎದೆತುಂಬಿ ಹಾಡುವೆನು, ಪಾಡುತಾ ತೀಯಗ ಎಂಬುದನ್ನು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಡೆಸಿಕೊಡಲಾರಂಭಿಸಿದರು.  ಈ ಕಾರ್ಯಕ್ರಮದ ಮೂಲಕ ವಿವಿಧ ನಗರಗಳಲ್ಲಿ ಹುದುಗಿದ್ದ  ಎಲೆಮರೆಕಾಯಿಯಂತಹ ಅನೇಕ ಉದೋಯೋನ್ಮುಖ ಪ್ರತಿಭೆಗಳಿಗೆ ತಮ್ಮ ಅನುಭವವನ್ನು ಧಾರೆ ಎರೆದು ಅವರಿಗೆ ಪ್ರೋತ್ಸಾಹವನ್ನು ತುಂಬುಬ ಮುಖಾಂತರ ನೂರಾರು ಗಾಯಕ/ಗಾಯಕಿಯರನ್ನು ಪ್ರವರ್ಧಮಾನಕ್ಕೆ ತಂದರು. ಇದೇ ಕಾರ್ಯಕ್ರಮದ ಮೂಲಕ ನಾಡಿನ ಖ್ಯಾತ ವಿದೂಷಿಗಳು, ವಿದ್ವಾಂಸರುಗಳು, ಕೀರ್ತಿವಂತರನ್ನು ಪರಿಚಯಿಸಿದ ಗರಿಮೆಯೂ ಬಾಲಸುಬ್ರಹ್ಮಣ್ಯಂ ಅವರದ್ದಾಗಿದೆ.

ಇತ್ತೀಚಿನ ದಿನಗಳಲ್ಲಿ  ಅನೇಕ ಸಮಾಜಮುಖೀ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕ್ಕೊಳ್ಳುತ್ತಿದ್ದರು, 2020 ರಲ್ಲಿ  ಇಡೀ ಪ್ರಪಂಚವನ್ನೇ ಕಾಡಿದ ಮಹಾಮಾರಿ ಕರೋನ ಕುರಿತಾಗಿ ಮೇ ತಿಂಗಳಿನಲ್ಲಿ ಇಳೆಯರಾಜಾ ಅವರು ಸಂಯೋಗಿಸಿದ್ದ ಮಾನವೀಯತೆಯ ಕುರಿತಾದ ಭಾರತ್ ಭೂಮಿ ಎಂಬ ಹಾಡನ್ನು ಹಾಡುವ ಮೂಲಕ  ಪೋಲಿಸರು, ವೈದ್ಯರು, ದಾದಿಯರು ಮುಂತಾದ ಕೋವಿಡ್ ಯೋಧರಿಗೆ ಸ್ಪೂರ್ತಿಯನ್ನು ತುಂಬಿದ್ದರು.  ಇದೇ ರೀತಿಯ ಮತ್ತೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗಲೇ, ಅವರಿಗೆ ಆಗಸ್ಟ್ 5, 2020 ರಂದು, ಕೋವಿಡ್ ಸೋಂಕಿತರೆಂದು ಧೃಢಪಟ್ಟು ಅವರನ್ನು ಚೆನ್ನೈನ ಎಂಜಿಎಂ ಹೆಲ್ತ್‌ಕೇರ್‌ಗೆ ಸೇರಿಸಲಾಯಿತು.  ಆರಂಭದಲ್ಲಿ ನಾನು ಶೀಘ್ರವಾಗಿ ಗುಣಮುಖನಾಗಿ ನಿಮ್ಮಮುಂದೆ ಹಾಡಲು ಬರುತ್ತೇನೆ ಎಂಬ ವೀಡಿಯೋ ಸಂದೇಶವನ್ನು ಆಸ್ಪತ್ರೆಯಿಂದಲೇ ಕಳುಹಿಸಿದರಾದರೂ, ದಿನೇ ದಿನೇ ಅವರ ಆರೋಗ್ಯ ಕ್ಷೀಣಿಸುತ್ತಲೇ ಹೋಯಿತು.

ಬಾಲೂ ರವರು ಶೀಘ್ರವಾಗಿ ಗುಣಮುಖರಾಗಲೆಂದು  ಅವರ  ಅಭಿಮಾನಿಗಳು ಬೇಡಿಕೊಳ್ಳದ ದೇವರಿಲ್ಲ ಮಾಡಿಸದ ಪೂಜೆಯಿಲ್ಲ.  ಡೇ ಬಾಲೂ.. ಸೀಗ್ರಮಾ ಎಳೆಂದು ವಾಡಾ.. ಎಂದು ಕೇಳಿಕೊಂಡ  ಅವರ ಆತ್ಮೀಯ ಗೆಳೆಯರಾದ ಗಂಗೈ ಅರಮರನ್ ಮತ್ತು ಇಳೆಯರಾಜಾ ಅವರ ವೀಡಿಯೋ ಎಲ್ಲರ ಮನವನ್ನು ಕಲುಕುವಂತೆ ಮಾಡಿತ್ತು. ಎಷ್ಟೇ ಆತ್ಯುತ್ತಮವಾದ ಚಿಕಿತ್ಸೆಯನ್ನು ಕೊಡಿಸಿದರೂ ಅವಾವುದೂ ಫಲಕರಿಯಾಗದೇ, ಸೆಪ್ಟೆಂಬರ್ 25, 2020 ರಂದು ಮಧ್ಯಾಹ್ನ 1:04 ಗಂಟೆಗೆ ಗಾನ ಗಾರುಡಿಗ ಶ್ರೀ ಎಸ್. ಪಿ.  ಬಾಲಸುಬ್ರಹ್ಮಣ್ಯಂ  ನಮ್ಮನ್ನೆಲ್ಲಾ ಬಿಟ್ಟು ಅಗಲಿಹೋಗುವ ಮೂಲಕ ಇಡೀ ಸಂಗೀತ ಪ್ರಿಯರನ್ನು ಶೋಕತಪ್ತರನ್ನಾಗಿ ಮಾಡಿದರು.  ಸೆಪ್ಟೆಂಬರ್ 26, 2020 ರಂದು  ಸಕಲ ಸರ್ಕಾರೀ ಗೌರವಗಳೊಂದಿಗೆ ತಿರುವಳ್ಳೂರು ಜಿಲ್ಲೆಯ ತಾಮರೈಪಕಂನಲ್ಲಿರುವ ಅವರ ತೋಟದ ಮನೆಯಲ್ಲಿ ಅವರನ್ನು ಸಮಾಧಿ ಮಾಡಲಾಯಿತು.

ಎಸ್.ಪಿ.ಬಿಯವರು ಗಳಿಸಿದ ಪ್ರಶಸ್ತಿಗಳು ಲೆಖ್ಕವೇ ಇಲ್ಲ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, 1990 ರಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿ, 2007 ರಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿ – 2007 ರಲ್ಲಿ ತೆಲುಗು, ಫಿಲ್ಮ್‌ಫೇರ್ ಪ್ರಶಸ್ತಿ – 2008 ರಲ್ಲಿ ತಮಿಳು, ಫಿಲ್ಮ್‌ಫೇರ್ ಪ್ರಶಸ್ತಿ – 2011 ರಲ್ಲಿ ಕನ್ನಡ, 1996 ರಲ್ಲಿ ರಾಷ್ಟ್ರೀಯ ಪ್ರಶಸ್ತಿ, 1995 ರಲ್ಲಿ ರಾಷ್ಟ್ರೀಯ ಪ್ರಶಸ್ತಿ, 1988 ರಲ್ಲಿ ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರೀಯ ಪ್ರಶಸ್ತಿ 1983 ರಲ್ಲಿ, 1981 ರಲ್ಲಿ ರಾಷ್ಟ್ರೀಯ ಪ್ರಶಸ್ತಿ, 1979 ರಲ್ಲಿ ರಾಷ್ಟ್ರೀಯ ಪ್ರಶಸ್ತಿ, 1987 ರಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿ ದಕ್ಷಿಣ ಮತ್ತು 1984 ರಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿ ದಕ್ಷಿಣ.

ತಮ್ಮ ಮಧುರವಾದ ಕಂಠದಿಂದ ಹಾಡುಗಳಿಗೆ ಜೀವ ತುಂಬುತ್ತಿದ್ದ ಖ್ಯಾತ ಗಾಯಕ ಬಾಲಸುಬ್ರಹ್ಮಣ್ಯಂ ಅವರಿಗೆ ದೇಶದ ಅತ್ಯುತ್ತಮ ನಾಗರೀಕ ಪ್ರಶಸ್ತಿಗಳಾದ ಪದ್ಮಶ್ರೀ (2001), ಪದ್ಮಭೂಷಣ(2011) ಪ್ರಶಸ್ತಿಗಳು ಅದಾಗಲೇ ಲಭಿಸಿದ್ದು ಈ ಬಾರಿ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿಯನ್ನು ಭಾರತ ಸರ್ಕಾರ ಬಾಲ ಸುಬ್ರಹ್ಮಣ್ಯರವಗೆ ನೀಡುವ ಮೂಲಕ ಅವರ ಸಂಗೀತ ಸಾಧನೆಯನ್ನು ಪುರಸ್ಕರಿಸಿದೆ.

ಕಳೆದ 50 ವರ್ಷಗಳಲ್ಲಿ ಭಾರತದ ಅಷ್ಟೂ ಭಾಷೆಗಳಲ್ಲದೇ ವಿದೇಶೀ ಭಾಷೆಗಳೂ ಸೇರಿದಂತೆ ಸುಮಾರು 45 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡುವ ಮೂಲಕ  ಗಿನ್ನೆಸ್ ರೆಕಾರ್ಡ್ ಪುಸ್ತಕದ ದಾಖಲೆಗೂ ಬಾಲೂರವರು ಪಾತ್ರರಾಗಿದ್ದಾರೆ. ಅಂಕಿ ಸಂಖ್ಯೆಯಲ್ಲಿ ಲೆಖ್ಖಾಚಾರ ಹಾಕಿ ನೋಡಿದರೆ ಅವರು ವಿವಿಧ ಭಾಷೆಗಳಲ್ಲಿ ವರ್ಷಕ್ಕೆ ಸುಮಾರು 930 ಹಾಡುಗಳು ಅಂದರೆ, ಪ್ರತೀ ದಿನಕ್ಕೆ ಅಂದಾಜು 3 ಹಾಡುಗಳನ್ನು ಹಾಡುವ ಮೂಲಕ ಕೋಟ್ಯಂತರ ಜನರ ಮನದಲ್ಲಿ ವಿರಾಜಮಾನರಾಗಿದ್ದಾರೆ. ಈ ಹಾಡುಗಳಲ್ಲದೇ ಅವರು ಹಾಡಿದ ಖಾಸಗೀ ಆಲ್ಬಂ, ಭಕ್ತಿಗೀತೆಗಳು, ಭಾವಗೀತೆಗಳು ಕಿರುತೆರೆಯ ಸೀರಿಯಲ್ಗಳ ಶೀರ್ಷಿಕೆ ಗೀತೆಗಳಿಗೆ ಲೆಖ್ಖವೇ ಇಲ್ಲ.

ಭೌತಿಕವಾಗಿ ಎಸ್. ಪಿ.ಬಿ ಯವರು ಇಂದು ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಅವರ ಅನುಪಮ ಹಾಡುಗಳ ಮೂಲಕ ಆಚಂದ್ರಾರ್ಕವಾಗಿ ಬಾಲೂ ರವರು ನಮ್ಮೊಂದಿಗೆ ಇದ್ದೇ ಇರುತ್ತಾರೆ. ಭಗವಂತ ಆವರಿಗೆ ಮುಂದಿನ ಜನ್ಮ ಕರುಣಿಸಿದರೆ ಅದು ಬಾಲು ಅವರ ಇಚ್ಛೆಯಂತೆ ಕನ್ನಡ ನಾಡಿನಲ್ಲೇ ಆಗಲಿ ಎಂದು ಕೇಳಿಕೊಳ್ಳೋಣ. ಕನ್ನಡಿಗರೆಂದರೆ ಬಾಲುರವರಿಗೆ ಅಪಾರವಾದ ಮಮಕಾರ ಅದೇ ರೀತಿ ಬಾಲು ಅವರನ್ನು ಕಂಡರೆ ಕನ್ನಡಿಗರಿಗೂ ಮಮತೆಯೇ.

ಏನಂತೀರೀ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s