ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರ ದಿನೇ ದಿನೇ ನೋಡ ನೋಡುತ್ತಲೇ ಬೆಳೆಯುತ್ತಲೇ ಹೊದಂತೆಲ್ಲಾ, ನಗರದ ಹಿಂದಿನ ಎಲ್ಲದರ ಮೌಲ್ಯವನ್ನು ಕೇವಲ ಹಣದ ರೂಪದಲ್ಲಿ ಮಾತ್ರವೇ ಅಳೆಯಲಾರಂಭಿಸಿದರು. ಬೆಂಗಳೂರಿನ ಪರಂಪರೆ, ಇತಿಹಾಸ ಅಥವಾ ಸಂಸ್ಕೃತಿಗೆ ಯಾವುದೇ ಮೌಲ್ಯವಿಲ್ಲದೇ, ಎಲ್ಲವೂ ರಿಯಲ್ ಎಸ್ಟೇಟ್ ಮುಂದೆ ಅಡಿಯಾಳಾಗಿ ತಲೆಬಗ್ಗಿಸಿ ಒಂದೊಂದೇ ಕಳೆದು ಹೋಗಿರುವುದು ನಿಜಕ್ಕೂ ಬೇಸರದ ಸಂಗತಿ. ಹಿಂದಿನ ಕಲೆ ಮತ್ತು ಇತಿಹಾಸದ ಪ್ರತೀಕವಾಗಿದ್ದಂತಹ ಒಂದೊಂದೇ ಕಟ್ಟಡಗಳು ನೆಲ್ಲಕ್ಕುರುಳಿಸಿ ಆ ಜಾಗದಲ್ಲಿ ಬಹುಮಹಡಿ ಗಗನ ಚುಂಬನ ಕಟ್ಟಡಗಳು ಏಳಿಸುವುದನ್ನೇ ನಗರಾಭಿವೃಧ್ಧಿ ಎಂದೇ ಎಲ್ಲರೂ ಭಾವಿಸಿರುವುದು ನಿಜಕ್ಕೂ ದುಃಖಕರವೇ ಸರಿ. ಬೆಂಗಳೂರಿನ ಹೃದಯಭಾಗ ಎನಿಸಿಕೊಂಡಿರುವ ಅಂದಿಗೂ ಇಂದಿಗೂ ಬೆಂಗಳೂರಿನ ವೈಭವೋಪೇತ ಭಾಗವೇ ಆಗಿರುವ ಎಂ.ಜಿ ರಸ್ತೆಯ ವೃತ್ತದಲ್ಲಿದ್ದ ಕಾವೇರಿ ಎಂಪೋರಿಯಂ ಪಕ್ಕದಲ್ಲಿದ್ದ ಬೃಂದಾವನ್ ಹೋಟೆಲ್ಲಿನ ಗತವೈಭವದ ಇತಿಹಾಸದ ಬಗ್ಗೆ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಮೆಲುಕು ಹಾಕೋಣ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಕೆಲ ದಿನಗಳ ಹಿಂದೆ ಮುಖಮುಟವನ್ನು ನೋಡುತ್ತಿದ್ದಾಗ ಫೇಸ್ ಬುಕ್ಕಿನಲ್ಲಿ ಯಾರೋ ಪುಣ್ಯಾತ್ಮರು 2012ರಲ್ಲಿ ಮುಚ್ಚಿಹೋದ ಬೃಂದಾವನ್ ಹೋಟೆಲ್ ಒಂದರ ಫೋಟೋವೊಂದನ್ನು ನೋಡಿದೆ. ಕೇವಲ ಫೋಟೋವೊಂದನ್ನು ಹಾಕಿದ್ದಕ್ಕೇ ಸರಿ ಸುಮಾರು 400ಕ್ಕೂ ಹೆಚ್ಚು ಮಂದಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು ಎಂದರೆ ಆ ಹೋಟೆಲ್ಲಿನ ಖ್ಯಾತಿ ಎಷ್ಟಿತ್ತು ಎಂಬುದರ ಅರಿವಾಗುತ್ತದೆ. ತೊಂಬ್ಬತ್ತು ಮತ್ತು ಎರಡು ಸಾವಿರದ ದಶಕದಲ್ಲಿ ಆ ಹೋಟೆಲ್ಲಿನಲ್ಲಿ ಗ್ರಾಹನಾಗಿ ಅಲ್ಲಿನ ಊಟವನ್ನು ಸವಿದಿದ್ದ ಕಾರಣ ಬೃಂದಾವನ್ ಹೋಟೆಲ್ ಕುರಿತಂತೆ ಕೆಲವೊಂದು ಸವಿ ಸವಿ ನೆನಪುಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಬಯಕೆಯಾಗಿದೆ.
ಕರ್ನಾಟಕದ ಕರಾವಳಿ ಪ್ರಾಂತದ ಉಡುಪಿಯ ಮೂಲದವರಾದ ಶ್ರೀ ರಾಮಕೃಷ್ಣ ರಾವ್ ಅವರು ತಮ್ಮ ಕೆಲಸವನ್ನರಸಿ ದೂರದ ಮದ್ರಾಸಿಗೆ ಹೋಗಿ ಅಲ್ಲಿ ಹೋಟೆಲ್ಲಿನಲ್ಲಿ ಕೆಲಸವನ್ನಾರಂಭಿಸಿ ಕಡೆಗೆ ತಮ್ಮದೇ ಹೋಟೆಲ್ಲೊಂದನ್ನು ಆರಂಭಿಸಿ ಅಲ್ಪ ಸ್ವಲ್ಪ ಹಣವನ್ನು ಗಳಿಸುತ್ತಾರೆ. ದೂರದ ಮದ್ರಾಸಿಗಿಂತಲೂ ತಮ್ಮ ಕರ್ನಾಟಕದಲ್ಲೇ ಹೋಟೆಲ್ಲೊಂದನ್ನು ಏಕೆ ಅರಂಭಿಸಬಾರದು? ಎಂದು ಯೋಚಿಸುತ್ತಿರುತ್ತಾರೆ. ಬೆಂಗಳೂರಿನ ಕಂಟೋನ್ಮೆಂಟ್ ಭಾಗವಾಗಿದ್ದ ಬಹುತೇಕ ಬ್ರಿಟೀಷರ ಸಂಸ್ಕೃತಿಯನ್ನೇ ಅಳವಡಿಸಿಕೊಂಡಿದ್ದ ಇಂದಿನ ಮಹಾತ್ಮಾಗಾಂಧಿ ರಸ್ತೆಯಲ್ಲಿ ಉತ್ತಮವಾದ ದಕ್ಷಿಣ ಭಾರತ ಸಸ್ಯಾಹಾರಿ ಹೋಟೆಲ್ ಇಲ್ಲದಿದ್ದದ್ದನ್ನು ಗಮನಿಸಿ 1967 ರಲ್ಲಿ ತಮ್ಮ ಕುಟುಂಬಸ್ಥರೊಡನೆ ಹೋಟೆಲ್ ಬೃಂದಾವನವನ್ನು ಸ್ಥಾಪಿಸುತ್ತಾರೆ. ಆರಂಭದಲ್ಲಿ ಕೇವಲ ರೆಸ್ಟೋರೆಂಟ್ ಆರಂಭಿಸಿ ನಂತರ ಅಲ್ಲಿಯೇ ದೂರದ ಊರಿನಿಂದ ಬೆಂಗಳೂರಿಗೆ ಬಂದು ಉಳಿದುಕೊಳ್ಳುವವರಿಗೆ ಅನುಕೂಲವಾಗುವಂತೆ ಕೊಠಡಿಗಳನ್ನೂ ನಿರ್ಮಿಸುತ್ತಾರೆ.
ಅಂದೆಲ್ಲಾ ಈಗಿನಂತೆ ಐಶಾರಾಮಿ ಹೋಟೆಲ್ಲುಗಳು ಇಲ್ಲದಿದ್ದ ಕಾರಣ, ಬೆಂಗಳೂರಿನ ಅಂದಿನ ಕಾಲದ ಅನೇಕ ಭೂಗತ ಲೋಕದ ಡಾನ್ ಗಳು ಇದೇ ಹೋಟಿಲ್ಲಿನಲ್ಲಿಯೇ ತಮ್ಮ ವ್ಯವಹಾರಗಳನ್ನು ಮಾಡುತ್ತಿದ್ದರಂತೆ. ಅದರಲ್ಲೂ ಕರಾವಳಿ ಮೂಲದ ಅಂಡರ್ವರ್ಲಡ್ ಡಾನ್ ಮುತ್ತಪ್ಪ ರೈಗೂ ಸಹಾ ಹೋಟೇಲ್ ಬೃಂದಾವನ್ ಮೆಚ್ಚಿನ ತಾಣವಾಗಿತ್ತು. ಅದೇ ರೀತಿಯಲ್ಲಿ ಆಗಿನ್ನೂ ಶಾಸಕರ ಭವನ ಇಲ್ಲದಿದ್ದಾಗ, ವಿಧಾನ ಸೌಧಕ್ಕೆ ಬಹಳ ಹತ್ತಿರವಿದ್ದ ಕಾರಣ, ಬಳ್ಳಾರಿ, ಮಡಿಕೇರಿ, ಮಂಗಳೂರಿನ ಭಾಗದ ಬಹುತೇಕ ಹಿರಿಯ ರಾಜಕಾರಣಿಗಳು ಹೊಟೇಲ್ ಬೃಂದಾವನ್ ನಲ್ಲಿಯೇ ವಾಸ್ತವ್ಯ ಹೂಡುತ್ತಿದ್ದರಂತೆ. ಇನ್ನು ಕರ್ನಾಟಕದ ಬಹುತೇಕ ಅಣೆಕಟ್ಟುಗಳ ನಿರ್ಮಾಣದ ಹೊಣೆಯನ್ನು ಹೊತ್ತಿದ್ದ ರೆಡ್ಡಿಗಳಿಗೂ ಸಹಾ ಬೃಂದಾವನ್ ಹೋಟೇಲ್ ಮೆಚ್ಚಿನ ವಾಸ್ತವ್ಯದ ತಾಣವಾಗಿತ್ತು ಎಂದು ಅಲ್ಲಿಯೇ ಕೆಲಸ ಮಾಡುತ್ತಿದ್ದ ಸಿಬ್ಬಂಧಿಯೊಬ್ಬರು ನೆನಪಿಸಿಕೊಂಡರು.
ಮೂಲತಃ ಉಡುಪಿಯವರಾಗಿದ್ದು ಕೆಲ ಕಾಲ ಮದ್ರಾಸಿನಲ್ಲಿಯೂ ಹೋಟೆಲ್ ಉದ್ಯಮ ನಡೆಸಿದ್ದ ಕಾರಣ ಬೃಂದಾವನ್ ಹೋಟೇಲ್ ಉಡುಪಿ ಮತ್ತು ಮದ್ರಾಸ್ ಪಾಕಶಾಸ್ತ್ರದ ಸಮಾಗಮವಾಗಿದ್ದು ಬಹುತೇಕ ತಿಂಡಿಗಳಾದ ಇಡ್ಲಿ, ದೋಸೇ, ಪೊಂಗಲ್ ಉಪ್ಪಿಟ್ಟುಗಳು ಮದ್ರಾಸ್ ಶೈಲಿಯದ್ದಾಗಿದ್ದರೇ, ಊಟ ಮಾತ್ರಾ ಅಪ್ಪಟ ಉಡುಪಿಯ ಶೈಲಿಯಲ್ಲಿದ್ದ ಕಾರಣ ಬಹಳ ಬೇಗ ಜನಾಕರ್ಷಣಿಯವಾದ ಕೇಂದ್ರವಾಗುತ್ತದೆ.
ಆರಂಭದಲ್ಲಿ ಕೇವಲ ರೂ 2.50ಕ್ಕೆಲ್ಲಾ ಅನಿಯಮಿತ ಊಟವನ್ನು ಉಣ ಬಡಿಸುತ್ತಿದ್ದ ಕಾರಣ ಬಹುತೇಕ ಅವಿವಾಹಿತರ ಮೆಚ್ಚಿ ನತಾಣವಾಗಿ ಮಾರ್ಪಾಟಾಗುತ್ತದೆ. ವಯಕ್ತಿಕವಾಗಿ ಹೇಳಬೇಕೆಂದರೆ, 90ರ ದಶಕದಲ್ಲಿ ನಾನು ಕೆಲಸ ಮಾಡುತ್ತಿದ್ದ ಸಣ್ಣದಾದ ಸಾಫ್ಟ್ವೇರ್ ಕಂಪನಿ ಮಲ್ಲೇಶ್ವರಂನಿಂದ ಪ್ರತಿಷ್ಟಿತ ಎಂ.ಜಿ ರಸ್ತೆಗೆ ವರ್ಗಾವಣೆಯಾದಾಗಲೇ ಸಹೋದ್ಯೋಗಿಯೊಬ್ಬನಿಂದ ಈ ಬೃಂದಾವನ್ ಹೋಟೆಲ್ ಪರಿಚಯವಾಗುತ್ತದೆ. ವಾರ ಪೂರ್ತಿ ಮನೆಯಿಂದ ಡಬ್ಬಿಯ ಊಟ ಮಾಡಿದರೆ, ಶನಿವಾರ ಮಧ್ಯಾಹ್ನ ಮಾತ್ರ ಗೆಳೆಯರೊಟ್ಟಿಗೆ ಬೃಂದಾವನ್ ಹೋಟೆಲ್ಲಿನಲ್ಲಿ ಊಟ ಮಾಡುವುದು ಒಂದು ರೀತಿಯ ಅಲಿಖಿತ ನಿಯಮವಾಗಿ ಹೋಗುತ್ತದೆ.
ಆಗ 25ರೂಪಾಯಿಗಳಿಗೆ ಅನಿಯಮಿತ ಊಟ ಉಣಬಡಿಸುತ್ತಿರುತ್ತಾರೆ. ಶನಿವಾರ ಮಧ್ಯಾಹ್ನ 12 ರಿಂದ 1 ಗಂಟೆಯೊಳಗೆ ಹೋದಲ್ಲಿ ಮಾತ್ರವೇ ನೆಮ್ಮದಿಯಾಗಿ ಊಟ ಮಾಡಬಹುದಾಗಿತ್ತು. ಅಕಸ್ಮಾತ್ ತಡವಾಗಿ ಹೋದಲ್ಲಿ ಎಲ್ಲಾ ಟೇಬಲ್ಗಳೂ ಭರ್ತಿಯಾಗಿ ಸರದಿಯಲ್ಲಿ ನಿಲ್ಲಬೇಕಿತ್ತು. ಆನಂತರದ ದಿನಗಳಲ್ಲಿ ಅಲ್ಲಿನ ಪರಿಚಾರಕರುಗಳು ಪರಿಚಯವಾಗಿದ್ದ ಕಾರಣ ಎಷ್ಟೇ ಹೊತ್ತಿಗೆ ಹೋದರೂ ನಮಗೆ ಸ್ಥಳಾವಕಾಶ ಮಾಡಿಕೊಡುತ್ತಿದ್ದರು.
ಅಗಲವಾದ ಬಾಳೇ ಎಲೆಯನ್ನು ಹಾಸಿ ಅದರ ಮೇಲೆ ನೀರನ್ನು ಚುಮುಕಿಸಿ. ಎಲೆ ಕೊನೆಗೆ ಪಾಯಸ ಇಲ್ಲವೇ ಯಾವುದಾದರೊಂದು ಸಿಹಿ ತಿಂಡಿ, ನಂತರ ಬಗೆ ಬಗೆಯ ಪಲ್ಯಗಳು, ಉಪ್ಪಿನ ಕಾಯಿ ಬಡಿಸಿ ಮೃದುವಾದ ಕೈ ಅಗಲದ ಬಿಸಿ ಬಿಸಿಯಾದ ಚಪಾತಿ ಮತ್ತು ಸಾಗು ಬಡಿಸಿದ ತಕ್ಷಣವೇ ನಮ್ಮೆಲ್ಲಾ ಮಾತುಗಳಿಗೆ ಬ್ರೇಕ್ ಹಾಕಿ, ಕೈ ಬಾಯಿಗೆ ಕೆಲಸವನ್ನು ಕೊಡುತ್ತಿದ್ದೆವು, ಊಟ ಬಡಿಸುವ ಸಿಬ್ಬಂಧಿಯವರೂ ಸಹಾ ಒಂದು ಚೂರು ಬೇಸರವಿಲ್ಲದೇ, ಕೇಳಿದಷ್ಟು ಚಪಾತಿ ಮತ್ತು ಪಲ್ಯಗಳನ್ನು ನಗು ಮುಖದಿಂದಲೇ ಬಡಿಸುತ್ತಿದ್ದ ಕಾರಣ ತುಸು ಹೆಚ್ಚೇ ತಿನ್ನುತ್ತಿದ್ದೆವು. ನಮ್ಮ ಗೆಳೆಯರೊಂದಿಗೆ ಅಲ್ಲಿನ ಚಪಾತಿ ತಿನ್ನುವುದೇ ನಮ್ಮಲ್ಲಿ ಸ್ಪರ್ಧೆಯಾಗಿರುತ್ತಿತ್ತು. ಅಂತಿಮವಾಗಿ ನಾನು ಆರು ಚಪಾತಿ ತಿಂದೇ, ನಾನು ಎಂಟು, ಹತ್ತು ಎಂದು ಚಪಾತಿ ತಿನ್ನುವುದರಲ್ಲಿಯೇ ನಮ್ಮ ಪೌರುಷವನ್ನು ಕೊಚ್ಚಿಕೊಳ್ಳುತ್ತಿದ್ದೆವು. ಅಷ್ಟೆಲ್ಲಾ ಚಪಾತಿ ತಿಂದ ಮೇಲೆ ಅನ್ನ ತಿನ್ನುವುದಕ್ಕೆ ಹೊಟ್ಟೆಯಲ್ಲಿ ಜಾಗವೇ ಇಲ್ಲದಿದ್ದರೂ, ಅಲ್ಲಿಯ ಸಾರು ಮತ್ತು ಹುಳಿಯ ರುಚಿಯನ್ನು ಸವಿಯಲೆಂದೇ ಸ್ವಲ್ಪ ಸ್ವಲ್ಪ ಅನ್ನವನ್ನು ಹಾಕಿಸಿಕೊಂಡು ಗಡದ್ದಾಗಿ ತಿಂದು ಡರ್ ಎಂದು ತೇಗಿ ಕೈತೊಳೆದುಕೊಂಡು ಹೊರಬಂದರೆ ಅದೇನೋ ಸಾಧಿಸಿದ ಸಂತೃಪ್ತಿ ದೊರೆಯುತ್ತಿತ್ತು.
ಇನ್ನೂ ಸ್ವಲ್ಪ ದಿನಗಳ ನಂತರ ನಾವು ಗೆಳೆಯರು ಯಾವುದಾದರೂ ಬೆಟ್ಟಿಂಗ್ ಕಟ್ಟಬೇಕೆಂದರೆ ಅದು ಬೃಂದಾವನ್ ಹೋಟೆಲ್ಲಿನ ಊಟದ ಲೆಕ್ಕದಲ್ಲಿ ಇರುತ್ತಿತ್ತು. ಯಾರು ಪಂದ್ಯ ಸೋಲುತ್ತಾರೋ ಅವರು ಉಳಿದವರಿಗೆಲ್ಲರಿಗೂ ಬೃಂದಾವನ್ ಹೋಟೆಲ್ಲಿನಲ್ಲಿ ಊಟವನ್ನು ಕೊಡಿಸಬೇಕಾಗಿತ್ತು.
ಆದಾದ ಕೆಲ ವರ್ಷಗಳ ನಂತರ ಬೃಂದಾವನ್ ಹೋಟೆಲ್ಲಿನ ಪಕ್ಕದಲ್ಲಿಯೇ ಇರುವ United mansion ಕಟ್ಟದಲ್ಲಿ Zee ಸಮೂಹಕ್ಕೆ ಕೆಲಸಕ್ಕೆ ಸೇರಿದ ಮೇಲಂತೂ ಬೃಂದಾವನ್ ಹೋಟೆಲ್ಲಿಗೂ ನಮಗೂ ಅವಿನಾಭಾವ ಸಂಬಂಧ ಏರ್ಪಟ್ಟಿತ್ತು, ಆ ಸಮಯದಲ್ಲಿ ಊಟಕ್ಕೆ 65 ರೂಪಾಯಿಗಳನ್ನು ನಿಗಧಿ ಪಡಿಸಿದ್ದರೂ ಅಲ್ಲಿನ ಸವಿಸವಿಯಾದ ಊಟದ ಮುಂದೆ ಈ ಬೆಲೆ ಹೆಚ್ಚೆನಿಸದೇ ಅದೆಷ್ಟು ಬಾರಿ ಅಲ್ಲಿನ ಊಟವನ್ನು ಸವಿದಿದ್ದೇವೋ ನೆನಪೇ ಇಲ್ಲ. ಕಾಡುಗಳ್ಳ ವೀರಪ್ಪನ್ ಭೀಮನ ಅಮವಾಸ್ಯೆಯ ಕಗ್ಗತ್ತಲಿನಲ್ಲಿ ರಾಜಕುಮಾರ್ ಆವರನ್ನು ಅವರ ಹುಟ್ಟೂರು ಗಾಜನೂರಿನಿಂದ ಅಪಹರಿಸಿಕೊಂಡು ಹೋದಾಗ ಮೂರ್ನಲ್ಕು ದಿನ ಬೆಂಗಳೂರು ಅಕ್ಷರಶಃ ಬಂದ್ ಆಗಿತ್ತು. ಇದೇ ಪ್ರಯುಕ್ತ ದಿನದ ಇಪ್ಪನ್ನಾಲ್ಕು ಗಂಟೆ ಕೆಲಸ ಮಾಡುವ ಕೆಲ ಸಿಬ್ಬಂಧಿಗಳು ನಮ್ಮ ಕಛೇರಿಯಿಂದ ಹೊರಬರಲಾಗದೇ ಕಛೇರಿಯಲ್ಲಿಯೇ ಉಳಿಯುವಂತಾದಾಗ, ಇದೇ ಬೃಂದಾವನ್ ಹೋಟೆಲ್ಲಿನವರೇ ನಮ್ಮ ಕಛೇರಿಯ ಸಿಬ್ಬಂಧ್ಧಿಗಳಿಗೆ ಹಿಂದಿನ ಬಾಗಿಲಿನಿಂದ ಊಟ ತಿಂಡಿಯ ಜವಾಬ್ಧಾರಿಯನ್ನು ನೋಡಿಕೊಂಡಿದ್ದರು.
ಎಂ.ಜಿ ರಸ್ತೆಯಲ್ಲಿನ ಕೆಲಸ ಬಿಟ್ಟು ಕೋರಮಂಗಲದಲ್ಲಿ ಕೆಲಸ ಮಾಡುತ್ತಿದ್ದರೂ ಅಗೊಮ್ಮೆ ಈಗೊಮ್ಮೆ ಗೆಳೆಯರೊಡನೆ ಬೃಂದಾವನ್ ಹೋಟೆಲ್ಲಿಗೆ ಬಂದು ಊಟ ಮಾಡುತ್ತಿದ್ದೆವು. ಯಾವಾಗ ಎಂಜಿ ರಸ್ತೆಯಲ್ಲಿ ಮೆಟ್ರೋ ಕೆಲಸ ಆರಂಭವಾಯಿತೋ ಅಲ್ಲಿಂದ ಎಂಜಿ ರಸ್ತೆಯ ಬಹುತೇಕರ ವ್ಯಾಪಾರಕ್ಕೆ ಹೊಡೆತ ಬಿತ್ತು. ಅಂತಹ ಹೊಡೆತದಿಂದ ಬೃಂದಾವನ್ ಹೋಟೆಲ್ಲಿನವರೂ ಹೊರಬರಲಾಗದೇ ಅಂತಿಮವಾಗಿ ಸುಮಾರು 45 ವರ್ಷಗಳ ಸುಧೀರ್ಘವಾದ ವ್ಯಾಪಾರದ ನಂತರ 2012ರಲ್ಲಿ ಬೃಂದಾವನ್ ಹೋಟೆಲ್ಲನ್ನು ಅಧಿಕೃತವಾಗಿ ಮುಚ್ಚಲು ನಿರ್ಧರಿಸಿದ್ದರು.
ಅದೊಂದು ಮಂಗಳವಾರ, ಬೃಂದಾವನ್ ಹೋಟೆಲ್ಲಿನಲ್ಲಿ ಖಾಯಂ ಆಗಿ ಊಟ ಮಾಡುತ್ತಿದ್ದವರು ನಾಳೇ ಹೋಟೆಲ್ ಇಲ್ಲಾ ಎಂಬ ಬೋರ್ಡ್ ನೋಡಿ, ಅರೇ ಇದೇನಿದು ನಾಳೆ ಏಕೆ ಹೋಟೆಲ್ ಬಂದ್ ಎಂದು ವಿಚಾರಿಸಿದಾಗ, ಕೇವಲ ನಾಳೇ ಮಾತ್ರವಲ್ಲಾ. ಇನ್ನು ಮುಂದೆ ಖಾಯಂ ಆಗಿ ಬೃಂದಾವನ್ ಹೋಟೆಲ್ ಮುಚ್ಚಲಾಗಿದೆ ಎಂದು ತಿಳಿಸಿದಾಗ ಅದೆಷ್ಟೋ ಜನರು ಮರುಗಿದ್ದುಂಟು. ಬೆಂಗಳೂರಿನ ಎಂ.ಜಿ. ರಸ್ತೆಯ ಪಾಶ್ಚಾತ್ಯ ಸಂಸ್ಕೃತಿಯ ನಡುವೆಯೂ ಅಪ್ಪಟ ದಕ್ಷಿಣ ಭಾರತೀಯ ಆಹಾರ ಇಡ್ಲಿ ಸಾಂಬಾರ್ ಚೆಟ್ನಿ, ದೋಸೆ, ಪೂರಿ ಯಂತಹ ತಿಂಡಿ ಫಿಲ್ಟರ್ ಕಾಫೀ, ಟೀಗಳನ್ನು ಕೈ ಗೆಟುಕುವ ಬೆಲೆಯಲ್ಲಿ ಸವಿಯಬಹುದಾಗಿದ್ದಂತಹ, ಬೃಂದಾವನ್ ಹೋಟೆಲ್ ಶಾಶ್ವತವಾಗಿ ಮುಚ್ಚಲಾಗಿತ್ತು.
ರಾಮಕೃಷ್ಣ ರಾವ್ ಅವರು ಆರಂಭಿಸಿದ್ದ ಬೃಂದಾವನ್ ಹೋಟೆಲ್ಲನ್ನು ಅವರ ಸಹೋದರರಾಗಿದ್ದ ಶಂಕರ್ ರಾವ್, ಮತ್ತು ಅವರ ಕುಟುಂಬದ ಕುಡಿಗಳಾಗಿದ್ದ ಎ. ಮೋಹನ್ ರಾವ್, ಶ್ರೀನಿವಾಸ ರಾವ್ ಮತ್ತು ನೂರಕ್ಕೂ ಹೆಚ್ಚಿನ ಸಿಬ್ಬಂದಿಗಳು ಅಕ್ಷರಶಃ ನಿರುದ್ಯೋಗಿಗಳಾಗುತ್ತಾರೆ. ಅಲ್ಲಿನ ಸಿಬ್ಬಂಧಿಗಳಿಗೆ ತಮ್ಮ ಉಡುಪಿ ಮೂಲದ ಅನೇಕ ಹೋಟೆಲ್ಲಿನಲ್ಲಿ ಕೆಲವನ್ನು ಹುಡುಕಿಕೊಡುವ ಮೂಲಕ ತಮ್ಮೊಂದಿಗೆ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ್ದವರ ಬದುಕನ್ನು ಹಸನು ಮಾಡುವ ಮೂಲಕ ಮಾನವೀಯತೆಯನ್ನು ಎತ್ತಿ ಹಿಡಿಯುತ್ತಾರೆ.
ಬೃಂದಾವನ್ ಹೋಟೇಲ್ ಮಾಲಿಕರು ಅಲ್ಲಿ ಕೇವಲ ಹೋಟೆಲ್ ಅಷ್ಟೇ ಅಲ್ಲದೇ. ಬೃಂದಾವನ್ ಟ್ರಾವೆಲ್ಸ್ ಕೂಡಾ ನಡೆಸುತ್ತಿದ್ದರು. ಸುಮಾರು 30-50 ಅಂಬಾಸೆಡರ್ ಕಾರುಗಳೊಂದಿಗೆ ಸುಮಾರು 50-70 ಚಾಲಕರುಗಳಿಗ ಆಶ್ರಯದಾತರಾಗಿದ್ದರು. ಅವರ ಬಳಿ ಕೆಲಸ ಮಾಡುತ್ತಿದ್ದ ಇಂದು ಅನೇಕರು ತಮ್ಮದೇ ಆದ ಟ್ರಾವೆಲ್ಸ್ ಗಳನ್ನು ನಡೆಸುತ್ತಿದ್ದರೆ, ಇನ್ನೂ ಕೆಲವರು ಪ್ರಸ್ತುತ ಕರ್ನಾಟಕ ರಾಜ್ಯ ಟ್ರಾವೆಲರ್ಸ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವುದು ಗಮನಾರ್ಹ. ಕೇವಲ ಉದ್ಯಮವಲ್ಲದೇ ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದ್ದ ರಾಮಕೃಷ್ಣ ರಾವ್ ಪ್ರತೀ ವಾರವೂ ನೂರಾರು ವಿದ್ಯಾರ್ಥಿಗಳಿಗೆ ಆಧ್ಯಾತ್ಮಿಕ ಶಿಕ್ಷಣವನ್ನು ನೀಡುತ್ತಿರುವ ವಿದ್ಯಾಪೀಠಕ್ಕೆ ಅಗತ್ಯವಿದ್ದ ದಿನಸಿಗಳನ್ನು ತಮ್ಮ ಹೋಟೆಲ್ ಮುಖಾಂತರ ಕಳಿಸಿಕೊಡುತ್ತಿದ್ದದ್ದದ್ದು ನಿಜಕ್ಕೂ ಅನನ್ಯ ಮತ್ತು ಅದ್ಭುತವೇ ಸರಿ.
ಮಹಾತ್ಮ ಗಾಂಧಿ ರಸ್ತೆಯ ಹೆಗ್ಗುರುತಾಗಿದ್ದ 1967ರಲ್ಲಿ 46,000 ಚದರ ಅಡಿ ವಿಸ್ತೀರ್ಣದ ಹೋಟೆಲ್ ಭೂಮಿಯನ್ನು ಕೇವಲ 25 ಸಾವಿರ ರೂಗಳಿಗೆ ಸ್ವಾಧೀನಪಡಿಸಿಕೊಂಡು ಬೃಂದಾವನ್ ಹೋಟೆಲನ್ನು ಆರಂಭಿಸಿದ್ದ ರಾವ್ ಕುಟುಂಬ ಅದನ್ನು 2012 ರಲ್ಲಿ ಕೇವಲ 82 ಕೋಟಿ ರೂ.ಗಳಿಗೆ ಶುಭಂ ಜ್ಯುವಲರಿ ಖ್ಯಾತಿಯ ರಾಜೇಶ್ ಎಕ್ಸ್‌ಪೋರ್ಟ್ಸ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ರಾಜೇಶ್ ಮೆಹ್ತಾರವರು ನಗರದ ಹೃದಯ ಭಾಗದಲ್ಲಿ ತಮ್ಮ ಖಾಸಗಿ ನಿವಾಸಕ್ಕಾಗಿ ಹುಡುಕುತ್ತಿದ್ದ ಜಾಗಕ್ಕಾಗಿ ಮಾರಾಟ ಮಾಡುತ್ತಾರೆ. ನಿಜ ಹೇಳಬೇಕೆಂದರೆ, ಮಾರುಕಟ್ಟೆಯ ಆಸ್ತಿಯ ಮೌಲ್ಯ ಅದಕ್ಕಿಂತಲೂ ಹೆಚ್ಚೇ ಇದ್ದರೂ. Carvery Emporium ಮತ್ತು United mansion ಕಟ್ಟಡಗಳ ನಡುವೆ ಕಿರಿದಾದ ರಸ್ತೆಯಿಂದ ಈ ಪ್ರದೇಶಕ್ಕೆ ಹೋಗಬೇಕಿರುವ ಕಾರಣದಿಂದಾಗಿ ಇದು ಇಷ್ಟು ಕಡಿಮೆ ಬೆಲೆಗೆ ಮಾರಾಟವಾಗಿರಬಹುದು ಎನ್ನುವುದೇ ಎಲ್ಲರ ನಂಬಿಕೆಯಾಗಿದೆ.
ಈ ಮೂಲಕ ದೂರದೂರದ ಪ್ರಯಾಣಿಕರಿಗೆ ವಸತಿ ಒದಗಿಸುವುದರ ಹೊರತಾಗಿ, ಸ್ವಾದಿಷ್ಟವಾದ ಮತ್ತು ರುಚಿಕರವಾದ ಭಕ್ಷ್ಯಗಳನ್ನು ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಉಣಬಡಿಸಿದ ಬೃಂದಾವನ್ ಹೋಟೆಲ್ ಅಧಿಕೃತವಾಗಿ ಇತಿಹಾಸದ ಪುಟಕ್ಕೆ ಸೇರಿಹೋಗಿದ್ದು ಅತ್ಯಂತ ದುಃಖಕರವೇ ಸರಿ.
ಏನಂತೀರೀ?
ನಿಮ್ಮವನೇ ಉಮಾಸುತ
ದೂರದ ಗಡಿಭಾಗದ ಸಣ್ಣ ಊರಿನ ನನಗೆ ಬೆಂಗಳೂರು ನಗರದಲ್ಲಿನ ಹೃದಯ ಭಾಗದಲ್ಲಿನ ಪ್ರಖ್ಯಾತ ಸ್ಥಳವೊಂದರ ಗತ ಇತಿಹಾಸ ಮತ್ತು ವರ್ತಮಾನದ ವಿದ್ಯಮಾನಗಳನ್ನೂ ಉಣಬಡಿಸಿ ಉಪಕಾರ ಮಾಡಿದಿರಿ. ಬೃಂದಾವನ್ ಹೋಟೆಲ್ ನ ಚಪಾತಿ ಅನ್ನ ಸಾರುಗಳ ರುಚಿಯನ್ನು ಸವಿಯದಿದ್ದರೂ ಸವಿ ಸವಿ ಭಾವಗಳ ರಸದೌತಣವನ್ನು ಸವಿಯಲು ಕಾರಣರಾದಿರಿ.
ಸಾಧ್ಯವಾದರೆ ಇಂತಹ ಮತ್ತೊಂದು ಸ್ಥಳವಿದ್ದರೆ ಇತಿಹಾಸ ಸೇರುವ
ಮುನ್ನ ಕಂಡು ಉಂಡು ಬರಲು ವ್ಯವಸ್ಥೆ ಮಾಡಿ ಗಡಿನಾಡಿನ ಹಳ್ಳಿಹೈದನನ್ನು ಕೇವಲ ಬರಹದ ಮೂಲಕ ಅಲ್ಲದೆ ಪ್ರತ್ಯಕ್ಷ ನೈಜ ಸವಿಯನ್ನೂ ಕಾಣಲು ಕಾರಣರಾಗಿ.😊😜
LikeLiked by 1 person