ದಕ್ಷಿಣ ಭಾರತೀಯ ಪಾಕಶಾಸ್ತ್ರದಲ್ಲಿ ಟೋಮ್ಯಾಟೋ ಹಣ್ಣುಗಳಿಗೆ ಬಹಳ ಪ್ರಾಶಸ್ತ್ಯ. ಯಾವುದೇ ತರಕಾರಿಗಳೊಂದಿಗೆ ಟೋಮ್ಯಾಟೋ ಹಣ್ಣುಗಳು ಸುಲಭವಾಗಿ ಒಗ್ಗಿಕೊಂಡು ಹೋಗುತ್ತದೆ ಇಲ್ಲವೇ ಕೇವಲ ಟೋಮ್ಯಾಟೋ ಹಣ್ಣುಗಳಿಂದಲೇ, ಬಗೆ ಬಗೆಯ ಸಾರುಗಳು, ಗೊಜ್ಜುಗಳನ್ನು ತಯಾರಿಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಟೋಮ್ಯಾಟೋ ಬಹಳ ಸುಲಭದಲ್ಲಿ ಎಲ್ಲೆಡೆಯೂ ಸಿಗುತ್ತಿರುವ ಕಾರಣ, ಬಿಸಿ ಬಿಸಿ ಅನ್ನ, ದೋಸೆ, ಚಪಾತಿಗಳ ಜೊತೆ ನೆಂಚಿಕೊಂಡು ತಿನ್ನಬಹುದಾದ ಅತ್ಯಂತ ಆರೋಗ್ಯಕರವಾದ, ರುಚಿಕರವಾದ ಮತ್ತು ಥಟ್ ಅಂತ ಮಾಡಬಹುದಾದ ಟೋಮ್ಯಾಟೋ ಹಣ್ಣಿನ ದಿಢೀರ್ ಬಿಸಿ ಉಪ್ಪಿನಕಾಯಿ ಮಾಡುವುದುದನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ.
ಸುಮಾರು 4-5 ಜನರು ಸವಿಯಬಹುದಾದಷ್ಟು ದಿಢೀರ್ ಟೋಮ್ಯಾಟೋ ಬಿಸಿ ಉಪ್ಪಿನಕಾಯಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಈ ರೀತಿಯಾಗಿವೆ
- ನಾಟಿ ಟೊಮೆಟೊ – 5 ರಿಂದ 6
- ಸಾಸಿವೆ – 2 ಚಮಚ
- ಮೆಂತ್ಯ – 1 ಚಮಚ
- ಅಚ್ಚ ಮೆಣಸಿನ ಪುಡಿ – 1 ಚಮಚ
- ಅರಿಶಿನ – 1/4 ಚಮಚ
- ಇಂಗು ಸ್ವಲ್ಪ
- ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ
- ಅಡುಗೆ ಎಣ್ಣೆ – 3 ಚಮಚ
ದಿಢೀರ್ ಟೋಮ್ಯಾಟೋ ಬಿಸಿ ಉಪ್ಪಿನಕಾಯಿ ತಯಾರಿಸುವ ವಿಧಾನ
- ಮೊದಲು ಟೋಮ್ಯಾಟೋಗಳನ್ನು ಚೆನ್ನಾಗಿ ತೊಳೆದು ಒಣ ಬಟ್ಟೆಯಿಂದ ಒರೆಸಿಕೊಂಡು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿಟ್ಟುಕೊಳ್ಳಿ
- ಸಣ್ಣದಾದ ಬಾಣಲೆಯನ್ನು ಒಲೆಯ ಮೇಲಿಟ್ಟು, ಸಾಸಿವೆ ಮತ್ತು ಮೆಂತ್ಯವನ್ನು ಹಸೀ ಹೋಗುವವರೆಗೂ ಹುರಿದುಕೊಂಡು, ಅದು ಆರಿದ ನಂತರ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿಕೊಳ್ಳಿ.
- ಗಟ್ಟಿ ತಳದ ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ, ಸಾಸಿವೆ ಸಿಡಿಸಿದ ನಂತರ ಸ್ವಲ್ಪ ಇಂಗು ಮತ್ತು ಕತ್ತರಿಸಿದ ಟೋಮ್ಯಾಟೋಗಳನ್ನು ಹಾಕಿ ಬಾಡಿಸಿಕೊಳ್ಳಿ
- ಟೋಮ್ಯಾಟೋ ಚೆನ್ನಾಗಿ ಬಾಡುತ್ತಿದ್ದಂತೆಯೇ, ಅದಕ್ಕೆ ಉಪ್ಪು ಅರಿಶಿನಪುಡಿ, ಅಚ್ಚ ಖಾರದ ಪುಡಿ ಮತ್ತು ಬೆಲ್ಲವನ್ನು ಸೇರಿಸಿ, ಮುಚ್ಚಳವನ್ನು ಮುಚ್ಚಿ 3 ರಿಂದ 4 ನಿಮಿಷ ಬೇಯಲು ಬಿಡಿ.
- ಆದಾದ ನಂತರ ಸಾಸಿವೆ ಮತ್ತು ಮೆಂತ್ಯದ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮತ್ತೆ ಐದಾರು ನಿಮಿಷಗಳಷ್ಟು ಬೇಯಿಸಿದಲ್ಲಿ ಸವಿ ಸವಿಯಾದ ರುಚಿಯಾದ, ಬಿಸಿ ಬಿಸಿ ಟೋಮ್ಯಾಟೋ ಉಪ್ಪಿನಕಾಯಿ ಸವಿಯಲು ಸಿದ್ಧ.
ಈ ಉಪ್ಪಿನಕಾಯಿಯನ್ನು ದೋಸೆ, ಚಪಾತಿ ಜೊತೆ ನೆಂಚಿಕೊಂಡು ತಿನ್ನ ಬಹುದಾದರೂ, ಬಿಸಿ ಬಿಸಿ ಅನ್ನದ ಜೊತೆ ಸ್ವಲ್ಪ ತುಪ್ಪ ಸೇರಿಸಿ ಚೆನ್ನಾಗಿ ಕಲಸಿಕೊಂಡು ಮಾವಿನ ಮಿಡಿ ಉಪ್ಪಿನಕಾಯಿ ಜೊತೆ ಸವಿಯಲು ಬಲು ಮಜವಾಗಿರುತ್ತದೆ.
ಇನ್ನೇಕೆ ತಡಾ, ಓದ್ಕೋಳೀ, ಮಾಡ್ಕೊಳೀ, ತಿನ್ಕೋಳಿ.
ಏನಂತೀರೀ?
ನಿಮ್ಮವನೇ ಉಮಾಸುತ
ಮನದಾಳದ ಮಾತು : ಟೋಮ್ಯಾಟೋ ಹಣ್ಣುಗಳು ಕೇವಲ ಆಡುಗೆಗೆ ಮಾತ್ರವಲ್ಲದೇ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಕಾರಣ, ಎಲ್ಲಾ ಕಾಲದಲ್ಲಿಯೂ ಬಹಳ ಬೇಡಿಕೆ ಇರುವ ತರಕಾರಿಯಾಗಿದೆ. ಹೃದಯದ ರಕ್ತ ನಾಳದಲ್ಲಿರುವ ಕೊಬ್ಬು ನಿವಾರಣೆಗೆ ಟೊಮೆಟೊ ರಾಮಬಾಣವಾಗಿದೆ.
ಟೋಮ್ಯಾಟೋಗಳನ್ನು ಅಡುಗೆಯಲ್ಲಿ ಸಾರು, ಸಾಗು, ಹುಳಿ, ಚೆಟ್ನಿ, ಗೊಜ್ಜು, ಸೂಪ್, ಉಪ್ಪಿನಕಾಯಿ ಗಳಲ್ಲದೇ ಹಾಗೆಯೇ ಹಸಿಯಾಗಿ ಈರುಳ್ಳಿ, ಕ್ಯಾರೇಟ್, ಸೌತೇಕಾಯಿಯ ಜೊತೆ ಸಲಾಡ್ ರೂಪದಲ್ಲಿಯೂ ತಿನ್ನಬಹುದಾಗಿದೆ.
ಈ ಪಾಕವಿಧಾನವನ್ನು ತಿಳಿಸಿಕೊಟ್ಟ ಶ್ರೀಮತಿ ಮಾಧುರ್ಯ ಮುರಳಿಧರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು