ದುರ್ಗಾ ವಸತಿ, ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ

ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ದುರ್ಗಾವಸತಿಯ ಬಡಾವಣೆಗಳನ್ನು ನಿಶ್ಚಯಿಸಿದಾಗ ಅದರ ವಿಸ್ತೀರ್ಣವನ್ನು ನೋಡಿಯೇ ತಲೆ ತಿರುರುಗುವ ಹಾಗಿತ್ತು. ನಂಜಪ್ಪ ವೃತ್ತದಿಂದ ಹಿಡಿದು ವಿದ್ಯಾರಣ್ಯಪುರದ ಮುಖ್ಯರಸ್ತೆಯ ಸಂಪೂರ್ಣ ಬಲಭಾಗ ಬಿಇಎಲ್, ಹೆಚ್.ಎಂ.ಟಿ, ಐಇಸಿಹೆಚ್ ಬಡಾವಣೆ, ಜ್ನಾನೇಶ್ವರಿ ಬಡಾವಣೆ, ವೆಂಕಟಸ್ವಾಮಪ್ಪ ಬಡಾವಣೆ, ಬಸವಸಮಿತಿ, ನರಸೀಪುರ, ದುರ್ಗಾ ಬಡಾವಣೆ, ಆಂಜನೇಯಸ್ವಾಮಿ ಬಡಾವಣೆ ಉಫ್ ಹೇಳುವುದಿರಲಿ ನೆನೆಸಿಕೊಂಡರೇ ಸಾಕು ಮೈ ಜುಮ್ಮೆನೆಸುವಷ್ಟು ವಿಸ್ತೀರ್ಣ ಹೊಂದಿದ ಪ್ರದೇಶಗಳಿಂದ ಕೂಡಿತ್ತು.

ಬೈಠಕ್ಕಿಗೆ ಬಂದ ಕಾರ್ಯಕರ್ತರ ಸಂಖ್ಯೆ ನೋಡಿದಾಗ, ಇದೇನು ಸಮಸ್ಯೆಯಾಗದು ಒಂದೆರಡು ವಾರಗಳಲ್ಲೇ ಮುಗಿಸಿಬಿಡಬಹುದು ಎಂದೆನೆಸಿತ್ತು ಎಂದರೂ ಸುಳ್ಳಲ್ಲ. 15ನೇ ತಾರೀಖು ಉಳಿದೆಲ್ಲಾ ವಸತಿಗಳು ದೇವಸ್ಥಾನದಲ್ಲಿ ರಸೀದಿ ಪುಸ್ತಗಳ ಪೂಜೆ ಮಾಡಿಸಿ ತಮ್ಮ ತಮ್ಮ ಸಮರ್ಪಣಾ ಅಭಿಯಾನವನ್ನು ಆರಂಭಿಸಿ ವರದಿ ಕೊಡಲಾರಂಭಿಸಿದರೆ, ನಮ್ಮ ವಸತಿಯಲ್ಲಿ ಪೂಜೆಯೇ ನಡೆದಿರಲಿಲ್ಲ. ಅಂದು ಸಂಜೆ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ತಡ ರಾತ್ರಿ ಪೂಜೆ ನಡೆಸಿ ಅಲ್ಲಿದ್ದ ಭಕ್ತಾದಿಗಳ ಬಳಿಯೇ ಅಭಿಯಾನ ನಡೆಸೋಣ ಎಂದರೆ ಅವರ ಬಳಿ ಆ ಕ್ಷಣದಲ್ಲಿ ನಿಧಿ ಸಮರ್ಪಣೆ ಮಾಡಲು ಹಣವೇ ಇರದಿದ್ದದ್ದು ನಿಜಕ್ಕೂ ಸೋಜಿಗವೇ ಸರಿ.

16ನೇ ತಾರೀಖು ಶನಿವಾರ ನಮ್ಮ ಟೋಳಿಯನ್ನು ಕಟ್ಟಿಕೊಳ್ಳುವುದರಲ್ಲಿಯೇ ಕಳೆದು ಹೋಗಿ ಅಂತೂ ಇಂತೂ, ವೆಂಕ, ನಾಣಿ, ಸೀನ ಎನ್ನುವಂತೆ, ಮೂರ್ನಾಲ್ಕು ಮಂದಿಯ ತಂಡವನ್ನು ಕಟ್ಟಿಕೊಂಡು 17ನೇ ತಾರೀಖು ಭಾನುವಾರ ಬೆಳಿಗ್ಗೆ ಸರಿ ಸುಮಾರು 10, 10-30ಕ್ಕೆ ನಮ್ಮ ಟೆಂಟ್ ಹೌಸ್ ಮಂಜು ಅವರ ಅಂಗಡಿಯ ಬಳಿಯಿಂದ ಜ್ಞಾನೇಶ್ವರಿ ಬಡಾವಣೆಯಿಂದ ಅಭಿಯಾನ ಆರಂಭಿಸುವ ಹೊತ್ತಿಗೆ ಇತರೇ ವಸತಿಗಳು ನೂರಾರು ಮನೆಗಳನ್ನು ತಲುಪಿ ಲಕ್ಷಾಂತರ ರೂಪಾಯಿಗಳ ನಿಧಿಯನ್ನು ಸಂಗ್ರಹಿಸಿಯಾಗಿತ್ತು.

ನಡೆ ಮುಂದೆ, ನಡೆ ಮುಂದೆ, ನುಗ್ಗಿ ನಡೆ ಮುಂದೆ ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ ಎಂದು ಮನಸ್ಸಿನಲ್ಲಿಯೇ ಅಂದು ಕೊಂಡು ಎಲ್ಲರೂ ಒಟ್ಟಾಗಿ ಜೈ ಶ್ರೀರಾಮ್ ಎಂದು ಆರಂಭಿಸಿದ ಆಭಿಯಾನ ಮುಂದಿನ ಇಪ್ಪತ್ತು ದಿನಗಳ ಕಾಲ ನಿರಂತರವಾಗಿ ಯಾವುದೇ ಎಡರು ತೊಡರುಗಳು ಇಲ್ಲದೇ ಹೂವಿನಂತೆ ನಡೆದು ಹೋದದ್ದು ರಾಮನ ಕೃಪೆಯೇ ಸರಿ.

ಆರಂಭದಲ್ಲಿ ಮಹಂತೇಶ್, ಮನಿಲಾ ರೆಡ್ದಿ, ಮಂಜುನಾಥ್, ಚೇತನ್ ಮತ್ತು ನಾನು ಹೀಗೆ ಐದು ಜನರಿದ್ದ ತಂಡಕ್ಕೆ ಪ್ರಸನ್ನ ಕೋಸಗಿಯವರು ಸೇರಿಕೊಂಡರು. ನಂತರ ಮಂಜುವಿನ ಸಹಕಾರದೊಂದಿಗೆ ಬಿಜೆಪಿಯ ಕೆಲ ನಿಷ್ಠಾವಂತ ಕಾರ್ಯಕರ್ತರೂ ನಮ್ಮೊಂದಿಗೆ ಸೇರಿಕೊಂಡ ನಂತರ ಒಳ್ಳೆಯ ತಂಡ ರೂಪುಗೊಂಡಿತು. ಇಂತಹ ತಂಡವನ್ನು ಪರಿಚಯಿಸುವುದು ಮತ್ತು ಅವರ ಕಾರ್ಯಗಳನ್ನು ಅಭಿನಂದಿಸುವುದು ನಮ್ಮ ಕರ್ತವ್ಯವೆಂದು ಭಾವಿಸಿ ಈ ಲೇಖವನ್ನು ಅವರೆಲ್ಲರಿಗೂ ಅರ್ಪಿಸುತ್ತಿದ್ದೇನೆ.

ಶ್ರೀ ಮಹಂತೇಶ್ : ವೃತ್ತಿಯಲ್ಲಿ ಸಿವಿಲ್ ಇಂಜೀನಿಯರ್ ಆದರೂ, ಸಂಘ, ಯುವ ಬ್ರಿಗೇಡ್ ಮತ್ತು ಸ್ವದೇಶೀ ಜಾಗರಣ್ ಮಂಚ್ ಗಳಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ಅರ್ಪಿಸಿಕೊಂಡಿರುವ ಉತ್ಸಾಹೀ ತರುಣ. ದೇಶಕ್ಕಾಗಿ ತನ್ನ ದೇಹದಾರೋಗ್ಯವನ್ನೆಲ್ಲಾ ಬದಿಗೊತ್ತಿರುವ ಕೆಚ್ಚದೆಯವ ಎಂದರೂ ತಪ್ಪಾಗಲಾರದು. ಉತ್ಸಾಹಿ, ಶಾಂತಚಿತ್ತ ಮತ್ತು ನಿಗರ್ವಿ. ದುರ್ಗಾವಸತಿಅಭಿಯಾನದ ಸಂಪೂರ್ಣ ಜವಾಬ್ಧಾರಿಯನ್ನು ತನ್ನ ಹೆಗಲಿನ ಮೇಲೆ ಹೊತ್ತುಕೊಂಡು ದಿನದ ಇಪ್ಪತ್ನಾಲ್ಕು ಗಂಟೆಯೂ ಅಭಿಯಾನದಲ್ಲಿ ಭಾಗವಹಿಸಿದ ಹೆಗ್ಗಳಿಗೆ ಆತನದು

ಶ್ರೀಮತಿ ಮನಿಲಾ ರೆಡ್ಡಿ : ಸಂಬಂಧದಲ್ಲಿ ಮಂತಹೇಶನ ತಾಯಿ. ಶಿವಾಜಿಗೆ ಜೀಜಾಬಾಯಿ ಇದ್ದಂತೆ, ಮಂತನಿಗೆ ಮನಿಲಾ ಅವರಿದ್ದಾರೆ ಎನ್ನಬಹುದು. ಚಿಂತಾಮಣಿಯ ಮೂಲದವರರಾದ ಮನಿಲಾರವರು ಉತ್ತಮ ಯೋಗ ಪಟು, ಯೋಗ ಶಿಕ್ಷಕಿ ಮತ್ತು ಆಯುರ್ವೇದದ ಮಸಾಜ್ ತಜ್ಞೆ. ಈ ಅಭಿಯಾನದಲ್ಲಿ ತಮ್ಮ ಮಗನ ಸಾಕಷ್ಟು ಸಮಯವನ್ನು ಮೀಸಲಿಟ್ಟು ತಮ್ಮ ಮಗನ ಮೇಲಿನ ಜವಾಬ್ಧಾರಿಯ ಹೊರೆಯನ್ನು ತಾವೂ ಸಹಾ ಹೊತ್ತು ಕೊಂಡು ಆತನಿಗೆ ಕಷ್ಟವಾಗದಂತೆ ಸಮರ್ಥವಾಗಿ ನಿಭಾಯಿಸಿದ ಮಹಾನ್ ತಾಯಿ.

ಶ್ರೀ ಚೇತನ್ : ಹೆಸರಿಗೆ ಅನ್ವರ್ಥದಂತೆ ಉತ್ಸಾಹದ ಚಿಲುಮೆ. ವೃತ್ತಿಯಲ್ಲಿ ಸಾಫ್ಘ್ವೇರ್ ಕಂಪನಿಯಲ್ಲಿ ಪ್ರೋಗ್ರಾಂ ಮ್ಯಾನೇಜರ್ ಆಗಿದ್ದರೂ, ಸಮಯ ಸಿಕ್ಕಾಗಲೆಲ್ಲಾ ನಮ್ಮೊಂದಿಗೆ ಅಭಿಯಾನದಲ್ಲಿ ಜೋಡಿಸಿಕೊಂಡು ರಾಮನ ಕಾರ್ಯದಲ್ಲಿ ತನ್ನ ಅಳಿಲು ಸೇವೆಯನ್ನು ಸಲ್ಲಿಸಿದ್ದಾರೆ.

ಶ್ರೀ ಮಂಜುನಾಥ್ : ಬಾಲ್ಯದಿಂದಲೂ ಸಂಘದ ಸ್ವಯಂಸೇವಕ ನಾಗಿದ್ದು ಪ್ರಸ್ತುತ ತನ್ನದೇ ಆದ ಸ್ವಂತದ ಟೆಂಟ್ ಹೌಸ್ ನಡೆಸುತ್ತಿದ್ದರೂ, ಅರಂಭದಿಂದ ಅಂತ್ಯದವರೆಗೂ ತಂಡದ ಬೆನ್ನೆಲುಬಾಗಿದ್ದರು ಎಂದರೂ ತಪ್ಪಾಗಲಾರದು. ಅವರ ಅಂಗಡಿಯಿಂದಲೇ ಅಭಿಯಾನ ಆರಂಭಿಸೋಣ ಎಂದ ತಕ್ಷಣ ಕೂಡಲೇ ಹಣ ಸಂಗ್ರಹಣೆಗೊಂದು ಚೆಂದದ ಜೋಳಿಗೆ, ಸಂಗ್ರಹ ಪುಸ್ತಕಗಳ ಒತ್ತಿಗೆ ಸುಂದರವಾದ ರೊಟ್ಟು ಗಳನ್ನು ಕೊಟ್ಟು ತಂಡವನ್ನು ಮುಂಚೂಣಿಯಲ್ಲಿ ಮುನ್ನೆಡೆಸಿದ ಅಗ್ರೇಸರ. ಎ. ರವಿಯವರೊಂದಿಗೆ ಮಾತನಾಡಿ ಬಿಜೆಪಿ ಕಾರ್ಯಕರ್ತರನ್ನೂ ನಮ್ಮೊಂದಿಗೆ ಕೈ ಜೋಡಿಸಿದ ಕಾರಣಕರ್ತ.

ಶ್ರೀ ಚಿದಾನಂದ : ಮೂಲತಃ ವಿದ್ಯಾರಣ್ಯಪುರದ ನಿವಾಸಿ ಮತ್ತು ಸಿವಿಲ್ ಕಂಟ್ರಾಕ್ಟರ್. ಆಡು ಮುಟ್ಟದ ಸೊಪ್ಪಿಲ್ಲ. ವಿದ್ಯಾರಣ್ಯಪುರದಲ್ಲಿ ಚಿದಾನಂದನಿಗೆ ಪರಿಚಯವಿಲ್ಲದ ಜನರು ಮತ್ತು ಜಾಗವಿಲ್ಲಾ ಎಂದರೂ ತಪ್ಪಾಗಲಾರದು. ಮಂಗಳವಾರದಿಂದ ನಮ್ಮೊಂದಿಗೆ ಕೈಜೋಡಿಸಿಕೊಂಡರೂ, ಮೂರು ವಾರಗಳ ಕಾಲ ಸಮಯಕ್ಕೆ ಸರಿಯಾಗಿ ನಿಗಧಿ ಪಡಿಸಿದ ಜಾಗದಲ್ಲಿ ಬೆಳಿಗ್ಗೆ ಮತ್ತು ಸಂಜೆ ಹಾಜರಿರುತ್ತಿದದ್ದು ಗಮನಾರ್ಹವಾದ ಸಂಗತಿ. ಆತನ ಭಾಷಾ ಪ್ರಾವೀಣ್ಯತೆ, ಆತನ ಪರಿಚಿತ ಸಂಪರ್ಕಗಳನ್ನು ಅಭಿಯಾನದಲ್ಲಿ ಸಮರ್ಥವಾಗಿ ಬಳಸಿಕೊಂಡೆವು. ನರಸೀಪುರ, ದುರ್ಗಾದೇವಿ ಬಡಾವಣೆ, ದುರ್ಗಾ ಪರಮೇಶ್ವರಿ ದೇವಸ್ಥಾನ ಮತ್ತು ತಿಂಡ್ಲುವಿನ ಬಹುತೇಕ ಭಾಗಗಳಲ್ಲಿ ನಮ್ಮೊಂದಿಗೆ ಆತನಿಲ್ಲದೇ ಹೋಗಿದ್ದರೆ ಕಷ್ಟವಾಗುತ್ತಿತ್ತೇನೋ.

ಶ್ರೀ ರವೀಂದ್ರ : ರಾಮನಿರುವಲ್ಲಿ ಲಕ್ಷ್ಮಣ ಹೇಗೆ ಇರುತ್ತಾನೋ ಹಾಗೆ ಚಿದಾನಂದ ಇರುವಲ್ಲಿ ರವೀಂದ್ರ ಇದ್ದೇ ಇರುತ್ತಾರೆ ಎನ್ನುವುದು ಜಗ್ಗಜಾಹೀತಾಗಿದೆ. ಒಂದೇ ತಾಯಿಯ ಮಕ್ಕಳಾಗದಿದ್ದರೂ, ಒಡಹುಟ್ಟಿದವರಂತೆಯೇ ಸದಾಕಾಲವೂ ಪ್ರತಿಯೊಂದು ಕಾರ್ಯದಲ್ಲಿಯೂ ಈ ಜೋಡಿ ಇರುವುದು ನಿಜಕ್ಕೂ ಅಭಿನಂದನೀಯ. ಈ ಅಪರೂಪದ ಜೋಡಿ ನಮ್ಮ ತಂಡದೊಂದಿಗೂ ಭಾಗಿಯಾಗಿದ್ದರು ಎನ್ನುವುದು ಹೆಮ್ಮೆಯ ಸಂಗತಿ. ಶ್ರೀ ರವೀಂದ್ರರವರು ನಮ್ಮ ತಂಡದ ಅತ್ಯಂತ ಶಾಂತ ಸ್ವಭಾವದ ವ್ಯಕ್ತಿ. ವೃತ್ತಿಯಲ್ಲಿ ಸಿವಿಲ್ ಕಂಟ್ರಾಕ್ಟರ್, ತಮ್ಮೆಲ್ಲಾ ಕೆಲಸಗಳನ್ನು ಬದಿಗೊತ್ತಿ ಪ್ರತೀ ದಿನ ಸಂಜೆ ನಮ್ಮ ತಂಡದೊಂದಿಗಿದ್ದು ತಮ್ಮ ಅನುಭವವನ್ನು ಅಭಿಯಾನಕ್ಕೆ ಧಾರೆ ಎರೆದಿದ್ದಾರೆ.

ಶ್ರೀ ಶರಣಪ್ಪನವರು : ವಯಸ್ಸಿನಲ್ಲಿ ನಮ್ಮ ತಂಡದ ಅತ್ಯಂತ ಹಿರಿಯ ಸದಸ್ಯರಾದರೂ ಅತ್ಯಂತ ಉತ್ಸಾಹಿಗಳು. ಹೆಚ್.ಎಂ.ಟಿ ಕಾರ್ಖಾನೆಯಲ್ಲಿ ನಿವೃತ್ತಿ ಹೊಂದಿದ ನಂತರ ಪ್ರಸ್ತುತ ಹೆಚ್. ಎಂ.ಟಿ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿರುವುದು ನಮಗೆ ಆನೆಯ ಬಲ ತಂದಿತ್ತು. ಹೆಚ್.ಎಂ.ಟಿ ಬಡಾವಣೆಯ ಬಹುತೇಕ ಮನೆಗಳ ನೇರ ಪರಿಚಯ ಅವರಿಗೆ ಇದ್ದ ಕಾರಣ ನಮ್ಮ ಅಭಿಯಾನ ಸುಲಭವಾಗಿ ಮತ್ತು ಸರಾಗವಾಗಿ ನಡೆಯುವಂತಾಗಿತ್ತು. ಇವರೂ ಸಹಾ ಬೆಳಿಗ್ಗೆ ಮತ್ತು ಸಾಯಂಕಾಲ ಸಮಯಕ್ಕೆ ಸರಿಯಾಗಿ ನಮ್ಮೊಂದಿಗೆ ಆಭಿಯಾನದಲ್ಲಿ ಭಾಗವಹಿಸಿದ್ದು ನಿಜಕ್ಕೂ ಶ್ಲಾಘನೀಯ.

ಮಹೇಂದ್ರ : ಬಾಲ್ಯದಿಂದಲೂ ಸಂಘದ ಸ್ವಯಂ ಸೇವಕ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ವಿದ್ಯಾರಣ್ಯಪುರದ ಹೆಚ್.ಎಂ.ಟಿ ಬಡಾವಣೆಯ ಬಹುತೇಕರ ವ್ಯಕ್ತಿಗತ ಪರಿಚಯ ಮಹೇಂದ್ರನಿಗಿದ್ದದ್ದು ನಮ್ಮ ಅಭಿಯಾನಕ್ಕೆ ಬಹಳಷ್ಟು ಸಹಕಾರಿಯಾಗಿತ್ತು.

ಶ್ರೀಮತಿ ನಳೀನಾಕ್ಷಿ : ಮೂಲತಃ ಮಂಗಳೂರಿನವರಾದರೂ, ಬಹಳ ವರ್ಷಗಳಿಂದ ವಿದ್ಯಾರಣ್ಯಪುರದಲ್ಲಿರುವ ಗೃಹಿಣಿ. ಮಾತೆಯರಲ್ಲಿ ನಮ್ಮ ತಂಡದ ಅತ್ಯಂತ ಹಿರಿಯ ಸದಸ್ಯೆಯಾದರೂ, ಯಾವುದೇ ಸಮಸ್ಯೆಗಳಿಲ್ಲದೇ ಮೂರು ವಾರಗಳ ಕಾಲ ತಂಡದೊಂದಿಗೆ ಅಭಿಯಾನದಲ್ಲಿ ಒಂದು ಚೂರೂ ಬೇಸರವಿಲ್ಲದೇ ಜವಾಬ್ಧಾರಿಯನ್ನು ಅತ್ಯಂತ ತಾಳ್ಮೆಯಿಂದ ನಿಭಾಯಿಸಿದವರು. ಅಭಿಯಾನದ ಸಮಯದಲ್ಲಿ ಬಿಸಿಲಿನ ಬೇಗೆಯಲ್ಲಿ ಬಳಲಿದವರಿಗೆ ತಮ್ಮ ಕೈಯ್ಯಿಂದಲೇ, ಚಾಕ್ಲೇಟ್, ಪೆಪ್ಪರ್ಮೆಂಟ್, ಇಲ್ಲವೇ ದೇವರ ಪ್ರಸಾದಗಳನ್ನು ಕೊಡುತ್ತಾ ನಮ್ಮನ್ನೆಲ್ಲಾ ಹುರಿದುಂಬಿಸಿದವರು.

ಶ್ರೀಮತಿ ಡಾ. ವಿಶಾಲಾಕ್ಷಿ : ವೃತ್ತಿಯಲ್ಲಿ ಫಿಸಿಯೋಥೆರೆಪಿ ವೈದ್ಯರಾದರೂ, ಪರಮ ಸಾಯಿ ಭಕ್ತೇ. ಸದಾಕಾಲವೂ ಸಾಯಿರಾಂ ಸ್ಮರಣೆಯಿಲ್ಲದೇ, ಮಾತೇ ಹೊರಡದು. ತಮ್ಮ ಬಿಡುವಿಲ್ಲದ ವೃತ್ತಿಯ ನಡುವೆಯೂ, ಮೂರು ವಾರಗಳ ಕಾಲ ಸಂಜೆಯ ಹೊತ್ತು ಎರಡು ಮೂರು ಗಂಟೆಗಳ ಕಾಲ ಅಭಿಯಾನಕ್ಕಾಗಿಯೇ ತಮ್ಮ ಅಮೂಲ್ಯಸಮಯವನ್ನು ಮೀಸಲಾಗಿಟ್ಟಿದ್ದಲ್ಲದೇ, ಕಡೆಯ ಎರಡು ದಿನಗಳ ಕಾಲ ವಿದ್ಯಾರಣ್ಯಪುರದ ಬಹುತೇಕ ವೈದ್ಯರುಗಳನ್ನು ಸಂಪರ್ಕಿಸಿ ಅವರನ್ನೂ ಅಭಿಯಾನದಲ್ಲಿ ಪಾಲ್ಗೊಂಡುವಂತೆ ಮಾಡಿದ ದಿಟ್ಟ ಮಹಿಳೆ.

ರಮಾ ಮತ್ತು ಪದ್ಮ: ಅಪ್ಪಟ್ಟ ಗೃಹಿಣಿಯರು ಮತ್ತು ಬಿಜೆಪಿಯ ಮಹಿಳಾ ಕಾರ್ಯಕರ್ತೆಯರು. ಬಹಳ ಚುರುಕಿನ ದಿಟ್ಟ ಮಹಿಳೆಯರು. ಅದರಲ್ಲೂ ಪದ್ಮಾರವರಂತೂ ಬಹಳ ಚುರುಕಾಗಿದ್ದು ಎಲ್ಲರಿಗಿಂತಲೂ ಮುಂಚೆ ಸರ ಸರನೇ ಬಹು ಮಡಿಗಳ ಕಟ್ಟಡಗಳನ್ನು ಸರಾಗವಾಗಿ ಹತ್ತುವ ಮೂಲಕ ಅಭಿಯಾನವನ್ನು ಚುರುಕುಗೊಳಿಸಿದರು.

ಶ್ರೀ ರವಿ ತೇಜ ಮತ್ತು ಶ್ರೀಮತಿ ಪಲ್ಲವಿ ರವಿ ತೇಜ ದಂಪತಿಗಳು : ಬಹುಶಃ ತಮ್ಮ ತಂಡ ಕಿರಿಯ ಸದಸ್ಯರಾದರೂ ಕಾರ್ಯ ಮತ್ತು ಗಾತ್ರದಲ್ಲಿ ಹಿರಿಯರೇ ಸರಿ. ತಮ್ಮ ಕೆಲಸಗಳ ಒತ್ತಡದ ಮಧ್ಯೆಯೂ ಅಭಿಯಾನಕ್ಕೆಂದೇ ಸಮಯವನ್ನು ಮೀಸಲಾಗಿಟ್ಟಿದ್ದಲ್ಲದೇ ಅತ್ಯಂತ ಲವಲವಕೆಯಿಂದ, ಗಟ್ಟಿತನ ಮತ್ತು ದಿಟ್ಟತನದಿಂದ ಆಭಿಯಾನಾದಲ್ಲಿ ನಮ್ಮ ತಂಡದಲ್ಲಿದ್ದದ್ದು ನಮಗೆ ಆನೆ ಬಲ ತಂದಂತಿತ್ತು ಎಂದರೂ ತಪ್ಪಾಗಲಾರದು.

ಶ್ರೀಮತಿ ಪ್ರೀತಿ ಜಯಂತ್ : ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಮಹಿಳೆಯ ತ್ಯಾಗವಿರುತ್ತದೆ ಎನ್ನುವಂತೆ, ದುರ್ಗಾ ವಸತಿಯ ಭಾಗವಾಗಿದ್ದರೂ ತಮ್ಮ ಪತಿ ಜಯಂತ್ ಅವರನ್ನು ಶಕ್ತಿ ಗಣಪತಿ ವಸತಿಯೊಂದಿಗೆ ಜೋಡಿಸಿ, ತಮ್ಮ ಪುಟ್ಟ ಕಂದನನ್ನು ಪಕ್ಕದ ಮನೆಯಲ್ಲಿ ಬಿಟ್ಟು ಸಮಯ ಮಾಡಿಕೊಂಡು ನಮ್ಮ ಅಭಿಯಾನದಲ್ಲಿ ಭಾಗಿಯಾಗಿದ್ದದ್ದು ನಿಜಕ್ಕೂ ಅಭಿನಂದನೀಯ. ನಮ್ಮ ತಂಡದಲ್ಲಿ ಒಬ್ಬರನ್ನೊಬ್ಬರ ಕಾಲೆಳೆಯುತ್ತಾ, ಚೈತನ್ಯದ ಚಿಲುಮೆಯಾಗಿ ತಂಡಕ್ಕೆ ಸ್ಪೂರ್ತಿಯನ್ನು ತುಂಬಿದ ಕೀರ್ತಿ, ಪ್ರೀತಿಯವರದ್ದು.

ಉಮೇಶ್ ಗಾಯಕ್ವಾಡ್ : ನಮ್ಮ ತಂಡದ ಮತ್ತೊಬ್ಬ ಚೈತನ್ಯದ ಚಿಲುಮೆ ಮತ್ತು ಹಸನ್ಮುಖಿ. ಸಮಯ ಸಿಕ್ಕಾಗಲೆಲ್ಲಾ ನಮ್ಮೊಂದಿಗಿದ್ದು ತಮ್ಮ ಅಪಾರವಾದ ಅನುಭವ ಮತ್ತು ಸಂಪರ್ಕವನ್ನು ಅಭಿಯಾನದಲ್ಲಿ ತೊಡಗಿಸಿಕೊಂಡವರು.

ಪ್ರಸನ್ನ ಕೋಸಕಿ : ವೃತ್ತಿಯಲ್ಲಿ ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಪ್ರೋಗ್ರಾಂ ಮ್ಯಾನೇಜರ್. ಸದಾ ಕಾಲವೂ ಒಂದಲ್ಲಾ ಒಂದು ಕೆಲಸದಲ್ಲಿ ನಿರತರಾಗಿರುವಂತಹ ಜವಾಬ್ಧಾರಿಯುತ ವ್ಯಕ್ತಿ. ಸಂಘದ ದೃಷ್ಠಿಯಿಂದ ಯಲಕಹಂಕ ಭಾಗದ ಸಂಘಚಾಲಕ್. ಇಷ್ಟೆಲ್ಲಾ ಹೊಣೆಯನ್ನು ಹೊತ್ತಿರುವಂತಹ ಪ್ರಸನ್ನ ಸಂಪೂರ್ಣವಾಗಿ ತನು ಮನ ಮತ್ತು ಧನಗಳಿಂದ ಕುಟುಂಬ ಸಮೇತರಾಗಿ ನಮ್ಮ ತಂಡದೊಂದಿಗೆ ಸಮಯ ಸಿಕ್ಕಾಗಲೆಲ್ಲಾ ಭಾಗವಹಿಸಿದ್ದಲ್ಲದೇ, ನಮ್ಮ ವಸತಿಯ ಗಣ್ಯವ್ಯಕ್ತಿಗಳ ಸಂಪರ್ಕ ಮಾಡಿ ಅಂತಹವರನ್ನು ನಿಧಿ ಸಮರ್ಮಣಾ ಅಭಿಯಾನದಲ್ಲಿ ಭಾಗಿಯಾಗುವಂತೆ ಮಾಡಿದ ಶ್ರೇಯಕರ್ತರಾಗಿದ್ದಾರೆ.

ಸಾಮಾನ್ಯವಾಗಿ ಯಾವುದೇ ಕೆಲಸ ಕಾರ್ಯಗಳಲ್ಲಿ ಭಾಗಿಗಳಾಗುವಂತೆ ಕೋರುವಾಗ ದಯವಿಟ್ಟು ತಮ್ಮ ತನು ಮನ ಧನದ ಸಹಾಯ ಕೋರುವುದು ವಾಡಿಕೆ. ಇಂದು ಬಹುತೇಕರು ಧನದ ಸಹಾಯ ಮಾಡಲು ಸನ್ನದ್ಧರಾಗಿದ್ದರೂ ತನ ಮತ್ತು ಮನ ದೊಂದಿಗೆ ಭಾಗಿಗಳಾಗುವವರ ಸಂಖ್ಯೆ ಬಹುತೇಕ ಬೆರಳೆಣಿಕೆಯಲ್ಲಿರುತ್ತದೆ. ರಾಮ ಮಂದಿರದ ಅಭಿಯಾನದಲ್ಲಿ ಭಾಗವಹಿಸಲೆಂದೇ ಏನೋ ಕೋವಿಡ್ ನಿಂದಾಗಿ ಕೆಲಸ ಕಳೆದುಕೊಂದಿದ್ದ ನನಗೆ ಈ ಅಭಿಯಾನದಲ್ಲಿ ಸಂಪೂರ್ಣವಾಗಿ ಭಾಗಿಯಾಗುವ ಅವಕಾಶ ನನಗೆ ಸಿಕ್ಕಿತ್ತು. ದುರ್ಗಾವಸತಿಯ ಅಭಿಯಾನದ ತಂಡದ ಭಾಗವಾಗಿ 22 ದಿನಗಳ ಕಾಲ ಸರಾಸರಿ ಪ್ರತೀ ದಿನ 9549 ಹೆಜ್ಜೆಗಳಂತೆ, ಒಟ್ಟು 210078 ಹೆಜ್ಜೆಗಳು ಅಂದರೆ ಸುಮಾರು 156 ಕಿ.ಮೀ. ದೂರವನ್ನು ಈ ಆಭಿಯಾನದಲ್ಲಿ ಸವೆಸಿದ್ದಲ್ಲದೇ, ಕೇವಲ ನಮ್ಮ ವಸತಿಯಲ್ಲದೇ ಅಕ್ಕ ಪಕ್ಕದ ವಸತಿಯಲ್ಲಿ ಸಂಗ್ರಹವಾದ ಹಣವನ್ನೂ ಸಹಾ ಜತನದಿಂದ ಬ್ಯಾಂಕಿನಲ್ಲಿ ಸಂದಾಯ ಮಾಡುವ ಮೂಲಕ ತನು, ಮನ ಮತ್ತು ಧನದ ರೂಪದಲ್ಲಿ ರಾಮ ಮಂದಿರದ ಅಭಿಯಾನದಲ್ಲಿ ಭಾಗಿಯಾಗುವ ಅವಕಾಶವನ್ನು ಪ್ರಭು ಶ್ರೀರಾಮ ನನಗೆ ವಯಕ್ತಿಕವಾಗಿ ಕರುಣಿಸಿದ್ದದ್ದು ನಿಜಕ್ಕೂ ಪೂರ್ವ ಜನ್ಮದ ಸುಕೃತವೇ ಸರಿ.

ಇಲ್ಲಿ ನಮೂದಿಸಿರುವ ಹೆಸರುಗಳಲ್ಲದೇ ಪೃಥ್ವಿ, ಶ್ರೀ ಅಭಿರಾಮ ಮತ್ತು ಶ್ರೀಮತಿ ಶ್ರೀಲತ ದಂಪತಿಗಳು, ಶ್ರೀ ನಂಜಯ್ಯ ಗೌಡರು (ಪಾನೀ ಪುರಿ ಗೌಡ್ರು) ಶ್ರೀ ವಿಶ್ವನಾಥ್ ರೆಡ್ಡಿಯವರು (ಮಹಂತೇಶ್ ತಂದೆ), ರಾಜಕೀಯ ಧುರೀಣರಾದ ಶ್ರೀ ಎ. ರವಿ ಮತ್ತು ಶ್ರೀ ಪಿಳ್ಳಪ್ಪನವರು ಮತ್ತು ಶ್ರೀನಾಥ್ ಹೀಗೆ ಇನ್ನೂ ಅನೇಕರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಮ್ಮೊಂದಿಗೆ ಅಭಿಯಾನದಲ್ಲಿ ಪಾಲ್ಗೊಂಡ ಪರಿಣಾಮವಾಗಿಯೇ, late ಆದರೂ latest ಆಗಿ ಬಂದರು ಎನ್ನುವಂತೆ ತಡವಾಗಿ ಅಭಿಯಾನವನ್ನು ಆರಂಭಿಸಿದರೂ, ತಂಡವಾಗಿ ಅಭಿಯಾನದಲ್ಲಿ ನಮ್ಮೆಲ್ಲಾ ಹಮ್ಮು ಬಿಮ್ಮುಗಳನ್ನು ಬದಿಗೊತ್ತಿ ಭಾಗವಹಿಸಿದ ಕಾರಣ, ಜಾಲಹಳ್ಳಿ ನಗರದಲ್ಲಿಯೇ ಅತ್ಯಂತ ಯಶಸ್ವೀ ತಂಡವಾಗಿ ದುರ್ಗಾ ವಸತಿ ತಂಡ ಹೊರಹೊಮ್ಮಿರುವ ಯಶಸ್ಸಿನ ಶ್ರೇಯ ಇಡೀ ತಂಡಕ್ಕೇ ಸಲ್ಲುತ್ತದೆ.

ಈ ಆಭಿಯಾನದಲ್ಲಿ ಪಾಲ್ಗೊಂಡಾಗಿನ ಅನುಭವ ನಿಜಕ್ಕೂ ಅನನ್ಯ ಮತ್ತು ಆನಂದಮಯವೇ ಸರಿ. ಸರಿ ಸುಮಾರು ಮೂರು ಸಾವಿರದಿಂದ ಮೂರೂವರೆ ಸಾವಿರ ಮನೆಗಳನ್ನು ತಂಡದೊಂದಿಗೆ ಭೇಟಿ ಮಾಡಿದ ಅಪರೂಪದ ಸದಾವಕಾಶ. ಈ ಮೂಲಕ ಸಾವಿರಾರು ಹೊಸಬರನ್ನು ಪರಿ‍ಚಯ ಮಾಡಿಕೊಂಡಿದ್ದಲ್ಲದೇ, ನೂರಾರು ಪರಿಚಯಸ್ಥರನ್ನು ಮತ್ತೊಮ್ಮೆ ಭೇಟಿಯಾಗಿ ನಮ್ಮ ಗೆಳೆತನವನ್ನು ಮತ್ತಷ್ಟೂ ಗಟ್ಟಿ ಮಾಡಿಕೊಳ್ಳುವ ಸುವರ್ಣಾವಕಾಶ ದೊರೆಕಿತು. ನಾವು ಭೇಟಿ ಮಾಡಿದ ಶೇ 98ರಷ್ಟು ಮನೆಗಳಲ್ಲಿ ಯಾವುದೇ ಧರ್ಮ, ಜಾತಿ, ಬಡವ ಮತ್ತು ಬಲ್ಲಿದರೆನ್ನದೇ ಸ್ವಪ್ರೇರಣೆಯಿಂದ ಅಭಿಯಾನದಲ್ಲಿ ಭಾಗವಹಿಸಿದ್ದು ನಿಜಕ್ಕೂ ಅವರ್ಣನೀಯ. ಅವರೆಲ್ಲರ ಅಳಿಲು ಸೇವೆಯ ಕಾಣಿಕೆಯ ಪರಿಣಾಮವಾಗಿ ಇನ್ನು ಎರಡು ಮೂರು ವರ್ಷಗಳಲ್ಲಿ ನಿಗಧಿತ ಸಮಯದಲ್ಲಿಯೇ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಮಂದಿರನ ಭವ್ಯವಾದ ಮಂದಿರ ನಿರ್ಮಾಣವಾಗಿ ವಿಶ್ವಾದ್ಯಂತ ಹಂಚಿ ಹರಡಿಹೋಗಿರುವ ಸಮಸ್ತ ಹಿಂದುಗಳ ಶ್ರದ್ಧಾ ಕೇಂದ್ರವಾಗಿ ಮಾರ್ಗದರ್ಶನ ಮಾಡುವಂತಾಗಲಿ ಮತ್ತು ನಮಗೆಲ್ಲರಿಗೂ ಆ ದೇವಸ್ಥಾನದ ದರ್ಶನದ ಭ್ಯಾಗ್ಯ ಆದಷ್ಟು ಬೇಗನೆ ಸಿಗಲಿ ಎಂದೇ ಎಲ್ಲರ ಆಶಯವಾಗಿದೆ. ಕುಟುಂಬದೊಡನೆ ಅಯೋಧ್ಯಾ ರಾಮನ ದರ್ಶನ ಮಾಡುವಾಗ ಈ ಭವ್ಯ ದೇಗುಲದ ನಿರ್ಮಾಣ ಕಾರ್ಯದಲ್ಲಿ ನಮ್ಮದೂ ಸಹಾ ತನು ಮನ ಧನದ ಅಳಿಲು ಸೇವೆ ಇದೆ ಎನ್ನುವ ಸಾರ್ಥಕತೆಯೇ ಅನನ್ಯವಾದದ್ದು

ರಾಮನಿಗೆ ಸೀತಾನ್ವೇಷಣೆಯಲ್ಲಿ ಸಹಕರಿಸಲು ಜಟಾಯು ನಾವಾಗಲಿಲ್ಲ …

ರಾಮನೊಂದಿಗೆ ವಾನರರಂತೆ ರಾಮಸೇತುವಿನ ಭಾಗವಾಗುವ ಭಾಗ್ಯ ನಮಗೆ ಸಿಗಲಿಲ್ಲ …

ಕಡೆಯ ಪಕ್ಷ ರಾಮನ ಮಂದಿರಕ್ಕಾಗಿ ನಡೆದ ಕರಸೇವೆಯಲ್ಲಿ ಭಾಗವಹಿಸುವ ಭಾಗ್ಯವೂ ನಮ್ಮಲ್ಲಿ ಬಹುತೇಕರಿಗೆ ಸಿಕ್ಕಿರಲಿಲ್ಲ …

ಸದ್ಯ ಈಗ ನಿರ್ಮಾಣವಾಗುತ್ತಿರುವ ರಾಮನ ಭವ್ಯ ಮಂದಿರಕ್ಕಾಗಿ ಸೇವೆ ಸಲ್ಲಿಸುವ ಭಾಗ್ಯ ಸಿಕ್ಕಿದ್ದೇ ನಮ್ಮ ಪುಣ್ಯ.

ಈ ಐತಿಹಾಸಿಕ ಅಭಿಯಾನದಲ್ಲಿ ಎರಡು ವಾರ ಕಟಿ ಬದ್ಧರಾಗಿ ನಮ್ಮೊಂದಿಗೆ ಶ್ರಮಿಸಿದ ಎಲ್ಲರಿಗೂ ಮತ್ತೊಮ್ಮೆ ವಂದನೆಗಳು ಮತ್ತು ಅಭಿನಂದನೆಗಳು.

ಏನಂತೀರೀ?
ನಿಮ್ಮವನೇ ಉಮಾಸುತ

One thought on “ದುರ್ಗಾ ವಸತಿ, ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s