ಆರ್.ಟಿ.ಓ. ಆಫೀಸ್ ಅವಾಂತರ

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ನನ್ನ ವಾಹನ ಪರವಾನಗಿಯನ್ನು ನವೀಕರಿಸಬೇಕಿತ್ತು. ದುರಾದೃಷ್ಟವಷಾತ್ ಕರೋನಾಕ್ಕೆ ತುತ್ತಾಗಿ ಆರು ವಾರಗಳ ಕಾಲ ಮನೆಯಿಂದ ಹೊರಗೇ ಬಾರದ ಕಾರಣ, ನವೀಕರಿಸಲು ಸಾಧ್ಯವಾಗಿರಲಿಲ್ಲ. ಸರ್ಕಾರವೂ ಸಹಾ ಇಂತಹ ಪರಿಸ್ಥಿತಿಯನ್ನು ಅರಿತುಕೊಂಡೇ ಪರವಾನಗಿಯ ಅವಧಿ ಮುಗಿದ್ದರೂ ನವೀಕರಿಸಲು ಆರು ತಿಂಗಳುಗಳ ಕಾಲ ಅನುಮತಿ ನೀಡಿತ್ತು.

ಡಿಸಂಬರ್ ತಿಂಗಳಿನಲ್ಲಿ ಪರವಾನಗಿಯನ್ನು ನವೀಕರಿಸಲು online ಮುಖಾಂತರವೇ ಪ್ರಯತ್ನಿಸಬೇಕು ಎಂಬ ಹೊಸಾ ನಿಯಮದಂತೆ https://parivahan.gov.in/parivahan/ ವೆಬ್ ಸೈಟಿಗೆ ಹೋಗಿ ನನ್ನ ಲೈಸೆನ್ಸ್ ನಂಬರ್ ಎಂಟರ್ ಮಾಡಿದರೆ, ನನ್ನ ನಂಬರ್ BackLog ನಲ್ಲಿದೆ ಹಾಗಾಗಿ ಯಲಹಂಕ ಆರ್.ಟಿ.ಓ ಆಫೀಸಿಗೆ ಖುದ್ದಾಗಿ ಹೋಗಿ ವಿಚಾರಿಸಿ ಎಂಬ ಸಂದೇಶ ತೋರಿಸಿತು. ಸರಿ ಎಂದು ನನ್ನ ದಾಖಲೆಗಳ Xerox ಮಾಡಿಸಿಕೊಂಡು ಕೇವಲ ದಾಖಲೆಗಳನ್ನು ಕೊಡುವುದಷ್ಟೇ ಅಲ್ಲವೇ ಎಂದುಕೊಂಡು ಮನೆಯಲ್ಲಿಯೇ ಬಹಳ ದಿನಗಳಿಂದಲೇ ಇದ್ದ ಕಾರಣ 3/4 pant ಹಾಕಿಕೊಂಡು ಯಲಹಂಕ ಆರ್.ಟಿ.ಓ ಆಫೀಸಿಗೆ ಹೋದೆ. Pant ಹಾಕಿಕೊಂಡು ಬಂದ್ರೇ ಮಾತ್ರಾ ಒಳಗೆ ಬಿಡಿ ಅಂದಿದ್ದಾರೆ ನಮ್ಮ ಆಫೀಸರ್ ಎಂದು ಅಲ್ಲಿನ ದ್ವಾರಪಾಲಕರು ಹೇಳಿದ್ದಲ್ಲದೇ, ಇಲ್ಲೇ ಹತ್ತಿರದ ಅಂಗಡಿಗಳಲ್ಲಿ ಪೈಜಾಮ ಸಿಗುತ್ತದೆ ಅದನ್ನು ಹಾಕಿಕೊಂಡು ಬನ್ನಿ. ಆಗ ಒಳಗೆ ಬಿಡ್ತೀನಿ ಎಂದು ಯಾವುದೂ ಅಂಗಡಿಗೆ marketing ಮಾಡಿದರು.ಸುಂಕದವನ ಮುಂದೆ ಸಂಕಟ ಹೇಳಿಕೊಂಡರೆ ಏನು ಪ್ರಯೋಜನ? ಎಂದು ಭಾವಿಸಿ, ನನ್ನ ಜೊತೆಯಲ್ಲಿಯೇ ಬಂದಿದ್ದ ನನ್ನ ಮಡದಿಯ ಮುಖಾಂತರವೇ ನನ್ನ ಪರವಾಗಿ ನನ್ನೆಲ್ಲಾ ದಾಖಲೆಗಳನ್ನು ಅಲ್ಲಿನ ಸಿಬ್ಬಂಧಿಗೆ ಕೊಟ್ಟಾಗ ಒಂದು ವಾರದ ನಂತರ ಪುನಃ ಪ್ರಯತ್ನಿಸಿ ನೋಡಿ BackLog ಸರಿ ಹೋಗಿರುತ್ತದೆ ಎಂದು ಹೇಳಿ ಕಳುಹಿಸಿದ್ದರು.

ಒಂದು ವಾರ ತಾಳ್ಮೆಯಿಂದ ಕಾಯ್ದು ನಂತರ ಪ್ರಯತ್ನಿಸಿದರೇ ಮತ್ತದೇ ನಿಮ್ಮ ನಂಬರ್ BackLog ನಲ್ಲಿದೆ ಎನ್ನುವ ಸಂದೇಶ. ಹಾಗೂ ಹೀಗೂ ಆರ್.ಟಿ,ಓ ಆಫೀಸಿನ ನಂಬರ್ ಪಡೆದುಕೊಂಡು ಮೂರ್ನಾಲ್ಕು ಬಾರಿ ಕರೆ ಮಾಡಿದ ನಂತರ ಸಂಬಂಧ ಪಟ್ಟ ಸಿಬ್ಬಂದ್ಧಿ ಕರೆಯನ್ನು ಸ್ವೀಕರಿಸಿ ಸರ್ ನಿಮ್ಮ ನಂಬರ್ ಮುಂದೆ 0 ಹಾಕಿ ಪ್ರಯತ್ನಿಸಿ ನೋಡಿ ಎಂದು ಹೇಳಿ ಪಟ್ ಎಂದು ಕರೆ ಕತ್ತರಿಸಿಬಿಟ್ಟರು. ಅವರು ಹೇಳಿದಂತೆ ಹಿಂದೆ ಮುಂದೆ, ಮಧ್ಯ ಎಲ್ಲಾ ಕಡೆ 0 ಹಾಕಿ ನೋಡಿದರೂ ಮತ್ತದೇ ಸಂದೇಶ. ಪುನಃ ಹಲವಾರು ಪ್ರಯತ್ನಗಳ ನಂತರ ಅದ್ದೇ ಸಿಬ್ಬಂಧಿಯನ್ನು ಸಂಪರ್ಕಿಸಿದರೆ ಸರ್ ಒಂದ್ಸಲಾ 2 ಹಾಕಿ ನೋಡಿ ಎಂದರು. ಸರಿ ಎಂದು ಅದನ್ನೂ ಪ್ರಯತ್ನಿಸಿ ನೋಡಿದರೂ ಅದೇ ಸಂದೇಶ. ಮರಳಿ ಯತ್ನವ ಮಾಡು ಎನ್ನುವಂತೆ ಮತ್ತೆ ಕರೆ ಮಾಡಿ, ಏನ್ ಸರ್, ಯಾವ ನಂಬರ್ ಹಾಕಿದ್ರೂನೂ ಸರಿಹೋಗ್ತಾನೇ ಇಲ್ಲಾ ನೀವೇ ಒಂದ್ಸಲಾ ನೋಡಿ ಸರಿಯಾದ ನಂಬರ್ ಹೇಳಿ ಎಂದರೆ, ಸರ್ ಸರ್ವರ್ ಡೌನ್ ಆಗಿದೆ ಎಂಬ ಸಬೂಬು ಹೇಳಿ ಕರೆ ಕತ್ತರಿಸಿದರು.

ಇವರ ಬಳಿ ನನ್ನ ಕೆಲಸ ಆಗುವುದಿಲ್ಲ ಎಂದು ಅರಿತು, ಉಡುಪಿಯ ಆರ್.ಟಿ,ಓ. ಕಛೇರಿಯಲ್ಲಿ ನಮಗೆ ಪರಿಚಯವಿದ್ದವರಿಗೆ ಕರೆ ಮಾಡಿ ನನ್ನ ಗೋಳನ್ನು ಹೇಳಿಕೊಂಡಾಗ ಅವರು ನನ್ನ ನಂಬರ್ ಪಡೆದುಕೊಂಡು ನೋಡಿದರೆ, ನನ್ನ ಕಾರ್ಡ್ನಲ್ಲಿದ್ದ ಲೈಸನ್ಸ್ ನಂಬರಿಗೂ ಸರ್ವರ್ ನಲ್ಲಿದ್ದ ನಂಬರಿಗೂ ವೆತ್ಯಾಸವಾಗಿದ್ದನ್ನು ತಿಳಿಸಿ, ನನಗೆ ನನ್ನ ಸರಿಯಾದ ನಂಬರ್ ಕೊಟ್ಟಿದ್ದಲ್ಲದೇ BackLog ಸಮಸ್ಯೆಯನ್ನೂ ಪರಿಹರಿಸಿಕೊಟ್ಟಿರು. ಇಷ್ಟೆಲ್ಲಾ ಆಗುವುದಕ್ಕೆ ಮತ್ತೆರಡು ದಿನಗಳು ಕಳೆದು ಹೊಗಿತ್ತು. ಸರಿಯಾದ ನಂಬರ್ ಪಡೆದುಕೊಂಡು online appointment ತೆಗೆದುಕೊಳ್ಳಲು ಪ್ರಯತ್ನಿಸಿದಾಗ, ಅಲ್ಲಿ ನನ್ನದೊಂದು ಇತ್ತೀಚಿನ ಭಾವಚಿತ್ರ ಮತ್ತು ಎಲ್ಲಾ ದಾಖಲೆಗಳ Soft copy ಮತ್ತು ಸಹಿಯನ್ನು upload ಮಾಡಲು ತಿಳಿಸಿತ್ತು. ಅದರಂತೆಯೇ ಎಲ್ಲವನ್ನೂ ಮಾಡಿ ಸೂಕ್ತ ದಿನಾಂಕ ಮತ್ತು ಸಮಯವನ್ನು ನಿಗಧಿತ ಪಡಿಸಿಕೊಂಡು Online Payment ಮಾಡಲು ಪ್ರಯತ್ನಿಸಿದರೇ ಮೂರ್ನಾಲ್ಕು ಬಾರಿ Payment Gateway ವರೆಗೂ ಹೋಗಿ ವಿಫಲವಾಯಿತು. ಸುಮ್ಮನೆ ಸಮಯ ವ್ಯರ್ಥ ಮಾಡಲು ಇಚ್ಚಿಸದೇ ಕಛೇರಿಯಲ್ಲಿಯೇ ಅಲ್ಲಿಯೇ ಹಣವನ್ನು ಕಟ್ಟಲು ನಿರ್ಧರಿ, medical certificate download ಮಾಡಿಕೊಂಡೆ.

Medical certificate, print out ತೆಗೆದುಕೊಂಡು ಹತ್ತಿರದ ಸರ್ಕಾರೀ ಆರೋಗ್ಯ ಕೇಂದ್ರಕ್ಕೆ ಹೋಗಿ, Doctor ಇದ್ದಾರಾ‌?Driving Licence renewalಗಾಗಿ medical certificateಗೆ signature ಮಾಡಿಸ್ಕೋಬೇಕಿತ್ತು ಎಂದು ತಿಳಿಸಿದೆ. ಒಂದು ಹತ್ತು ನಿಮಿಷ ಇಲ್ಲೇ ಕೂತ್ಕೊಳ್ಳಿ ಅಂತ ಆಸ್ಪತ್ರೆಯ ಹೊರಗಿನ ಕಲ್ಲು ಬೆಂಚ್ ತೋರಿಸಿದರು. ಹತ್ತು ಹದಿನೈದು ನಿಮಿಷಗಳ ನಂತರ lady doctor ಒಬ್ಬರು ಹೊರಬಂದು, ಯಾರ್ರೀ medical certificateಗೆ ಬಂದಿರೋದು ಎಂದು ಕೇಳಿದಾಗ, ವಿನಮ್ರನಾಗಿ, ನಾನೇ ಮೇಡಂ ಎಂದು ಅವರ ಮುಂದೆ ನಿಂತೆ. ಅಡಿಯಿಂದ ಮುಡಿಯವರೆಗೂ ಒಮ್ಮೆ ನೋಡಿ, ಏನಾದರೂ problem ಇದ್ಯಾ,? ಕಿವಿ ಸರಿಯಾಗಿ ಕೇಳ್ಸತ್ತಾ? ಕಣ್ಣು ಸರಿಯಾಗಿ ಕಾಣ್ಸತ್ತಾ? ಅಂತೆಲ್ಲಾ ವಿಚಾರಿಸಿ ತಮ್ಮ ಕೈಯಲ್ಲಿ ಹಿಡಿದು ತಂದಿದ್ದ chart ಓದಿಸಿ, ಅದರಲ್ಲಿದ್ದ ಬಣ್ಣಗಳನ್ನು ಗುರುತಿಸಲು ಹೇಳಿದರು. ಎಲ್ಲವೂ ಮುಗಿದ ನಂತರ, ಯಾವುದಾದರೂ identification mark ಹೇಳಿ ಎಂದರು. ಚಿಕ್ಕ ವಯಸ್ಸಿನಿಂದಲೂ ಇರುವ ಮಚ್ಚೆ ತೋರಿಸಿದರೆ, ಏ ಇದೆಲ್ಲಾ ಅಗೋದಿಲ್ಲ. ಇದನ್ನು ನಾನೇ ಸುಲಭವಾಗಿ ತೆಗೆದು ಹಾಕಿ ಬಿಡ್ತೀನಿ. ಬೇರೇ ಏನಾದರೂ ಮಾರ್ಕ್ ಇದ್ರೇ ತೋರಿಸಿ‌ ಎಂದರು. ಮೇಡಂ ಇದೇ ಮಾರ್ಕ್ ಎಲ್ಲಾ ಕಡೇ ಕೊಟ್ಟಿರುವುದು ಎಂದು ಪರಿಪರಿಯಾಗಿ ಹೇಳಿದರೂ ಕೇಳುವ ಮನಸ್ಥಿತಿಯಲ್ಲಿ ಅವರು ಇಲ್ಲದಿದ್ದ ಕಾರಣ, ಮೂಗಿನ‌ ತುದಿಯಲ್ಲಿರುವ ಸಣ್ಣ ಗಾಯದ ಗುರುತು ತೋರಿಸಿದೆ.‌ ದೂರದಿಂದಲೇ ಅದನ್ನು ಗಮನಿಸಿ ಸರಿ ಎಂದು ಒಳಗೆ ಹೋಗಿ ಸ್ವಲ್ಪ ಸಮಯದ ನಂತರ ಅವರ ಸಹಾಯಕ ಸಿಬ್ಬಂದಿಯ ಕೈಯಲ್ಲಿ ಅವರ ಅಂಗೀಕೃತ medical certificate ಕೊಟ್ಟು ಕಳುಹಿಸಿ, 100/- ಈ ಪುಸ್ತಕದಲ್ಲಿ ಇಡಿ ಎಂದರು. ಅಯ್ಯೋ ಹೆಂಗಸರೂ ಲಂಚ ತಗೋತಾರಾ ಅಂತ ಮನಸ್ಸಿನಲ್ಲಿ ಅಂದುಕೊಂಡರೂ ಮರು ಮಾತಿಲ್ಲದೇ ನೂರರ ನೋಟೊಂದನ್ನು ಆ ಪುಸ್ತಕದಲ್ಲಿ ಇಟ್ಟು ಬಂದೆ.

ನಾನು ಆಯ್ಕೆ ಮಾಡಿಕೊಂಡಿದ್ದು ಶನಿವಾರ ಬೆಳಿಗ್ಗೆ 10.30 ಗಂಟೆಯಾಗಿದ್ದ ಕಾರಣ 10 ಗಂಟೆಗೆಲ್ಲಾ pant ಹಾಕಿಕೊಂಡು ಹೋಗಿ ಯಲಹಂಕ ಆರ್.ಟಿ.ಓ. ಕಛೇರಿಯ ಮುಂದೆ ಸರದಿಯಲ್ಲಿ ಮೊದಲನೆಯವನಾಗಿ ನಿಂತೆ.. ನನ್ನ ಸರದಿ ಬಂದಾಗ ಒಳಗೆ ಹೋಗಿ ನೋಡಿದರೆ ಅದಾಗಲೇ, Private Driving School ನಿಂದ ಬಂದಿದ್ದವರಿಗೆ ನಮಗಿಂತಲು ಮುಂಚೆಯೇ ಹಿಂಬಾಗಿಲಿನಿಂದ ಬಿಟ್ಟಿದ್ದ ಕಾರಣ ಸುಮಾರು ಮಂದಿ ನಮಗಿಂತಲೂ ಮುಂಚೆಯೇ ಸಾಲುಗಟ್ಟಿ ನಿಂತಿದ್ದರು. ನಮ್ಮ ಕರ್ಮ ಎಂದು ಹಳಿದು ಕೊಂಡು ಸಾಲಿನಲ್ಲಿ ನಿಂತು ಪರವಾನಗಿ ನವೀಕರಣದ ಮೊತ್ತವನ್ನು ನೀಡಿ ರಸೀದಿ ಪಡೆದಾಗ ಮತ್ತೊಂದು ಸಾಲಿನಲ್ಲಿ ಫೋಟೋ ತೆಗೆಸಿಕೊಳ್ಳಲು ಹೇಳಿದರು. ಅರೇ, web siteನಲ್ಲಿ photo upload ಮಾಡಿದ್ದಿವಲ್ಲಾ? ಎಂದರೆ ಅದೆಲ್ಲಾ ಗೊತ್ತಿಲ್ಲ ಇಲ್ಲಿ ಮತ್ತೊಮ್ಮೆ photo ತೆಗಿಸಲೇ ಬೇಕು ಎಂದರು. ಹೇಳೀ ಕೇಳಿ ಇದು ಸರ್ಕಾರಿ ಕಛೇರಿ ಇಲ್ಲಿ ಅವರು ಹೇಳಿದಂತೆಯೇ ಮಾಡಲೇ ಬೇಕು ಎಂದು ಪಕ್ಕದಲ್ಲಿ ಇದ್ದವರು ಹೇಳಿದಾಗ ಮತ್ತೊಬ್ಬರು ಅದಕ್ಕೆ ಹೂಂ ಗುಟ್ಟಿದ್ದ ಕಾರಣ ಮತ್ತೆ ಸರದಿಯಲ್ಲಿ ನಿಂತು ಫೋಟೋ ತೆಗೆಸಿಕೊಂಡೆ ನಂತರ ಅಲ್ಲಿಗೆ ಹೋಗಿ ಮತ್ತೊಂದು ಸಾಲಿನಲ್ಲಿ ನಿಲ್ಲಿ ಎಂದರು.

ಆ ಸಾಲು ನೋಡಿದರೆ ಹನುಮಂತನ ಬಾಲದಂತೆ ಉದ್ದದಷ್ಟಿತ್ತು. ಸರಿ ಎಂದು ಕೆಲ ಕಾಲ ಆ ಸಾಲಿನಲ್ಲಿಯೇ ನಿಂತ ನಂತರ ಆ ಸಾಲು ಹೊಸದಾಗಿ ಪರವಾನಗಿ ಪಡೆಯುವವರಿಗಾಗಿ ಎಂದು ತಿಳಿದ ನಂತರ ಮತ್ತೆ ಮೂರ್ನಾಲ್ಕು ಜನರನ್ನು ವಿಚಾರಿಸಿ ಮತ್ತೊಂದು ಸಾಲಿನಲ್ಲಿ ನಿಲ್ಲಲು ಹೇಳಿದರು. ಇಷ್ಟೆಲ್ಲಾ ಆಗುವಷ್ಟರಲ್ಲಿ ಗಂಟೆ 11:30 ಆಗಿತ್ತು. ಆ ಸಾಲಿನಲ್ಲಿ ಬರಬೇಕಿದ್ದ Superintendent ಅಷ್ಟು ಹೊತ್ತಾದರೂ ಕಛೇರಿಗೆ ಬಂದಿರಲಿಲ್ಲ ಮತ್ತು ಬರುತ್ತಾರೋ ಇಲ್ಲವೋ ಎಂಬ ವಿಷಯವೂ ಯಾರಿಗೂ ತಿಳಿದಿರಲಿಲ್ಲ.

ಪಕ್ಕದ ಕೌಂಟರಿನಲ್ಲಿದ್ದ ಮಹಿಳೆ ಯಾವುದೇ ಕೆಲಸವಿಲ್ಲದೇ ಸುಮ್ಮನೇ mobile ನೋಡಿಕೊಂಡು ಕುಳಿತಿದ್ದರೂ ಆಫಿಸರ್ ಬರ್ತಾರೆ ಸ್ವಲ್ಪ ಕಾಯಿರಿ ಸರ್ ಪುಕ್ಕಟ್ಟೆ ಸಲಹೆ ನಮ್ಮ ಸಹನೆಯನ್ನು ಪರೀಕ್ಷಿಸುತ್ತಿತ್ತು. ಗಂಟೆ 12 ಆದರೂ ಆತ ಬಾರದಿದ್ದಾಗ, ಒಲ್ಲದ ಮನಸ್ಸಿನಿಂದಲೇ ಆಕೆಯೇ Online ನಲ್ಲಿ upload ಮಾಡಿದ್ದ ಎಲ್ಲಾ ಧಾಖಲೆಗಳನ್ನೂ ಪರೀಕ್ಷಿಸಿ ಹಣ ಕಟ್ಟಿದ್ದ ರಸೀದಿಯನ್ನು ನೋಡಿ , ಇದೇನ್ ಸರ್ medical certificate ನಲ್ಲಿ Doctor Practice No. ಹಾಕಿಯೇ ಇಲ್ಲಾ ಎಂದಾಗ, ಎದೆ ಧಸಕ್ ಎಂದಿತು. ಅಯ್ಯೋ ರಾಮ, ಇದೊಂದು‌ ಕಾರಣಕ್ಕೆ ಮತ್ತೊಮ್ಮೆ ಬರಬೇಕಾ? ಎಂದು ಕೊಂಡು, ಮೇಡಂ. ಅವರು Government PHC Doctor. ಅವರು ಸೀಲ್ ಹಾಕಿದ್ದಾರಲ್ಲಾ ಎಂದೆ. ಥಟ್ ಅಂತಾ ಒಮ್ಮೆ ತಲೆ ಎತ್ತಿ ನನ್ನನ್ನೊಮ್ಮೆ ತಿಂದು ಹಾಕುವಂತೆ ನೋಡಿದರು. ನನ್ನ ಮುಖ ನೋಡಿ ಅದೇನು ಅನ್ನಿಸಿತೋ ಕಾಣೆ. ಸರಿ ಎಲ್ಲಾ ಸರಿ ಇದೆ ಎಂದು ಸಣ್ಣ ರುಜು ಹಾಕಿಕೊಡುವಷ್ಟರಲ್ಲಿ ಗಂಟೆ 12:30 ಆಗಿತ್ತು. ಪಕ್ಕದ ಟಪಾಲ್ ಸೆಕ್ಷನ್ನಿಗೆ ಹೋಗಿ ಕೊಡಿ ಎಂದರು.

ಪಕ್ಕದ ಟಪಾಲ್ ಸೆಕ್ಷನ್ನಿಗೆ ಹೋದರೆ ಮತ್ತೊಮ್ಮೆ ಆಕೆಯೂ ಎಲ್ಲಾ ದಾಖಲೆಗಳನ್ನು ಪರೀಕ್ಷಿಸಿ, ಸಾರ್ ಹೀಗೆ ಕೊಟ್ರೇ ಹ್ಯಾಗೆ ? ಇದನ್ನೆಲ್ಲಾ ಒಂದು ಫೈಲಿನಲ್ಲಿ ಹಾಕಿಕೊಡಿ ಮತ್ತೇ ಪೋಸ್ಟಲ್ ಕವರ್ ಎಲ್ಲಿ ಸಾರ್? ಎಂದಾಗ ನಾನು ಮತ್ತೆ ಕಕ್ಕಾ ಬಿಕ್ಕಿ. web siteನಲ್ಲಿ ಇದರ ಬಗ್ಗೆ ಮಾಹಿತಿ ಹಾಕಿರಲಿಲ್ಲವಲ್ಲಾ ಎಂದಾಗ, ಲೈಸನ್ಸ್ ನಿಮ್ಮ ಮನೆಗೆ ಬರೋದು ಬೇಡ್ವೇನ್ರಿ? ಎಂದು ಜೋರಾಗಿ ಕೇಳಿದಾಗ ಮರು ಮಾತನಾಡದೇ ಬೇಕು ಮೇಡಂ ಎಂದು ಹೇಳಿ, ಮುಳ್ಳಿನ ಮೇಲೆ ಪಂಚೆ ಬಿದ್ದು ಹೋಗಿದೆ ಅದನ್ನು ಜೋಪಾನವಾಗಿ ತೆಗೆಯದಿದ್ದರೆ ಪಂಚೆ ಹರಿಯುವ ಸಾಧ್ಯತೆಯೇ ಹೆಚ್ಚು ಎಂದು ಮನಸ್ಸಿನಲ್ಲಿಯೇ ಹೇಳಿಕೊಂಡೇ, ಅಲ್ಲೇ ಒಂದೆರಡು ಫರ್ಲಾಂಗ್ ದೂರದಲ್ಲಿರುವ ಸಾಲು ಸಾಲಾದ ಅಂಗಡಿಯೊದಕ್ಕೆ ಹೋಗಿ ಒಂದು ಫೈಲ್ ಮತ್ತು ಸ್ಟಾಂಪ್ ಹಚ್ಚಿದ ಕವರ್ ಅವರು ಹೇಳಿದಷ್ಟು ಬೆಲೆಯನ್ನು ನೀಡಿ ಕೊಂಡು ಕೊಂಡು ಎಲ್ಲಾ ದಾಖಲೆಗಳನ್ನೂ ಆ ಫೈಲಿನಲ್ಲಿ ಹಾಕಿ ಅದರ ಮೇಲೆ ನನ್ನ ಹೆಸರು ಮತ್ತು ವಿಳಾಸವನ್ನೆಲ್ಲಾ ಬರೆದು ಮತ್ತದೇ ಕೌಂಟರ್ ಬಳಿ ಬರುವಷ್ಟರಲ್ಲಿ ಸಾಲು ದೊಡ್ಡದಾಗಿ ಬೆಳೆದಿತ್ತು. ಮತ್ತೊಮ್ಮೆ ಸರದಿಯಲ್ಲಿ ನಿಂತು ಎಲ್ಲವನ್ನೂ ಕೊಟ್ಟ ಮೇಲೆ ಮತ್ತೊಮ್ಮೆ ಪರೀಕ್ಷಿಸಿದ ಆಕೆ Acknowledgement ಕೊಟ್ಟಾಗ ಎಷ್ಟು ದಿನಗಳಲ್ಲಿ ಲೈಸನ್ಸ್ ಬರುತ್ತದೆ ಮೇಡಂ ಎಂದಾಗ, 30 ದಿನಗಳ ಒಳಗೆ ಬರುತ್ತದೆ ಹೋಗಿ ಎಂದರು.

ಎಷ್ಟು ಹೊತ್ತಾದರೂ ಮನೆಯವರ ಸುದ್ದಿಯೇ ಇಲ್ಲವಲ್ಲಾ ಎಂದು ಆದಾಗಲೇ ನಾಲ್ಕಾರು ಬಾರಿ ಮಡದಿಯ ಕರೆ ಬಂದಾಗಿತ್ತು. ಆಕೆಗೂ ಕರೆ ಮಾಡಿ ಕೆಲಸವೆಲ್ಲಾ ಮುಗಿಯಿತು. ಇನ್ನೊಂದು ತಿಂಗಳಿನಲ್ಲಿ ಲೈಸೆನ್ಸ್ ಮನೆಗೇ ಸ್ಪೀಡ್ ಪೋಸ್ಟ್ ಮುಖಾಂತರ ಬರುತ್ತದೆ ಎಂದು ತಿಳಿಸಿ ಮನೆಗೆ ಬರುವಷ್ಟರಲ್ಲಿ ಗಂಟೆ ಎರಡಾಗಿತ್ತು.

ಇದಾಗಿ ಮೂರು ವಾರಗಳ ನಂತರ Your License Renewal application has been accepted for processing ಎಂಬ SMS ಬಂದಾಗ ಓಹೋ, ನಮ್ಮ ಕೆಲಸ ಪ್ರಗತಿಯಲ್ಲಿದೆ ಇನ್ನೇನು ಕೆಲವೇ ದಿನಗಳಲ್ಲಿ ಲೈಸೆನ್ಸ್ ಬರುತ್ತದೆ ಎಂದೆಣಿಸಿದ್ದೆ. ಅದಾದ ಕೆಲ ದಿನಗಳ ನಂತರ Your license renewal Application has been Approved ಎಂಬ SMS ಕಳುಹಿಸಿದರೂ licence ಮಾತ್ರಾ ಬರಲೇ ಇಲ್ಲ.. ಕಡೆಗೆ websiteನಲ್ಲಿ status check ಮಾಡಿದಾಗ, your licence is getting Printing ಎಂಬ ಸಂದೇಶ ನೋಡಿ ಮನಸ್ಸಿಗೆ ತುಸು ನೆಮ್ಮದಿ. ಕಡೆಗೆ 50 ದಿನಗಳು ಕಳೆದ ನಂತರ ಇಂದು ನನ್ನ ಪರವಾನಗಿ ನವೀಕರಣಗೊಂಡು ನನ್ನ ಕೈಗೆ ಬಂದು ಸೇರಿದಾಗ, ಅಬ್ಬಾ ಅಂತೂ ಇಂತು ಇನ್ನು ಹತ್ತು ವರ್ಷಗಳ ಕಾಲ ನೆಮ್ಮದಿಯಿಂದ ಗಾಡಿ ಓಡಿಸಬಹುದು ಎಂಬ ನಿರಾಳ ಮನಸ್ಸಿನಲ್ಲಿ‌ ಮೂಡಿದ್ದಂತೂ ಸುಳ್ಳಲ್ಲ.

ಇಷ್ಟೆಲ್ಲಾ Technology Update ಆಗಿದ್ದರೂ ಒಂದು License Renewal ಮಾಡಲು ಎರಡರಿಂದ ಎರಡೂವರೆ ತಿಂಗಳುಗಳ ಕಾಲ ಪರದಾಡ ಬೇಕಾಯಿತಲ್ಲಾ ಎಂಬ ಬೇಸರ ಕಾಡಿದ್ದಂತೂ ಸತ್ಯ. ಸರ್ಕಾರ ಮಧ್ಯವರ್ತಿಗಳ ಹಾವಳಿಯನ್ನು ತಡೆಯಲೆಂದೇ ನಾನಾ ರೀತಿಯ ಸುಧಾರಣೆಗಳನ್ನು ತಂದರೂ, ಸರ್ಕಾರೀ ಕಛೇರಿಯಲ್ಲಿನ ಸಿಬ್ಬಂಧಿಗಳ ಅಜಾಗರುಕತೆಯೋ, ಇಲ್ಲವೇ ಗಣಕೀಕೃತ ಯಂತ್ರದ ಉಪಯೋಗ ಮಾಡಲು ಬಾರದಿರುವ ಸಿಬ್ಬಂಧಿಗಳ ಧೋರಣೆಯಿಂದಾಗಿಯೋ ಇಲ್ಲವೇ ಮತ್ತಾವುದೋ ಕಾಣದ ಕೈಗಳ ಪಟ್ಟ ಭದ್ರಹಿತಾಸಕ್ತಿಯಿಂದಾಗಿಯೋ Online ಎನ್ನುವುದು ಕೇವಲ ಕಣ್ಣೊರೆಸುವ ತಂತ್ರವಾಗಿ ಮಿಕ್ಕೆಲ್ಲವೂ ಅವರವರ ಅನುಕೂಲಕ್ಕೆ ತಕ್ಕಂತೆಯೇ ನಡೆಯುತ್ತಿರುವುದಕ್ಕೆ ಈ ಪ್ರಸಂಗವೇ ಜ್ವಲಂತ ಉದಾಹರಣೆಯಾಗಿದೆ. ಸರ್ಕಾರ ನಡೆಸುವವರು ಬದಲಾದರೂ, ಸರ್ಕಾರೀ ಕಛೇರಿಗಳಲ್ಲಿ ಅದೇ ಸರ್ವಾಧಿಕಾರಿ ಮನಸ್ಥಿತಿಯ ಅಧಿಕಾರಿಗಳೇ ಇರುವ ಕಾರಣ ಪರಿಸ್ಥಿತಿ ಸ್ವಲ್ಪವೂ ಬದಲಾಗದೇ ಇರುವುದು ನಿಜಕ್ಕೂ ವಿಪರ್ಯಾಸವೇ ಸರಿ. ಬೆಕ್ಕಿಗೆ ಹೇಗೆ ಗಂಟೆ ಕಟ್ಟುವುದು? ಮತ್ತು ಕಟ್ಟುವವರು ಯಾರು? ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

ಏನಂತೀರೀ?
ನಿಮ್ಮವನೇ ಉಮಾಸುತ

One thought on “ಆರ್.ಟಿ.ಓ. ಆಫೀಸ್ ಅವಾಂತರ

  1. I had similar experience for renewing rc for my scooter…its fc for old vehicle….
    It almost took 60+ days….
    But i used to email transport secretary and pro for several small issues during this period to resolve some hindrances.
    I still don’t understand why these officers living on bribe money….

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s