ರಷ್ಯಾದ ಯಹೂದಿಯೊಬ್ಬನಿಗೆ ಅಂತಿಮವಾಗಿ ತನ್ನ ತಾಯ್ನಾಡಾದ ಇಸ್ರೇಲ್‌ಗೆ ವಲಸೆ ಹೋಗಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಮಾಸ್ಕೋ ವಿಮಾನ ನಿಲ್ದಾಣದಲ್ಲಿ, ಕಸ್ಟಮ್ಸ್ ಅಧಿಕಾರಿಗಳು ಆತನ ಸಾಮಾನು ಸರಂಜಾಮುಗಳಲ್ಲಿ ಲೆನಿನ್ ಪ್ರತಿಮೆಯನ್ನು ಕಂಡು, ಅರೇ ಇದು ಏನು? ಎಂದು ಪ್ರಶ್ನಿಸಿದರು. ಕೂಡಲೇ ಆ ವ್ಯಕ್ತಿ, ಸರ್ ಇದು ಏನು? ಎಂಬುದು ತಪ್ಪಾದ ಪ್ರಶ್ನೆ. ಅದರ ಬದಲು ಇವರು ಯಾರು? ಎಂದು ನೀವು ಕೇಳಬೇಕಾಗಿತ್ತು ಎಂದು ಹೇಳಿ, ಇವರು ಕಾಮ್ರೇಡ್ ಲೆನಿನ್. ಸಮಾಜವಾದದ ಅಡಿಪಾಯವನ್ನು ಹಾಕಿದ ಮಹಾನ್ ವ್ಯಕ್ತಿಯಲ್ಲದೇ, ರಷ್ಯಾದ ಜನರ ಭವಿಷ್ಯ ಮತ್ತು ಸಮೃದ್ಧಿಯನ್ನು ಸೃಷ್ಟಿಸಿದವರು ಹಾಗಾಗಿ ಬಹಳ ಅಭಿಮಾನದಿಂದ ಮತ್ತು ಹೆಮ್ಮೆಯಿಂದ ಪ್ರೀತಿಯ ನಾಯಕನ ನೆನಪಾಗಿ ಈ ವಿಗ್ರಹವನ್ನು ತೆಗೆದುಕೊಂಡು ಹೋಗುತ್ತಿದ್ದೇನೆ ಎಂದಾಗ, ಅದರಿಂದ ಸಂಪ್ರೀತಗೊಂಡ ರಷ್ಯಾದ ಕಸ್ಟಮ್ಸ್ ಅಧಿಕಾರಿಗಳು ಯಾವುದೇ ಹೆಚ್ಚಿನ ಪರಿಶೀಲನೆ ಇಲ್ಲದೆ ಆತನನ್ನು ಇಸ್ರೇಲಿಗೆ ಹೋಗಲು ಅನುವು ಮಾಡಿಕೊಟ್ಟರು.
ಇಸ್ರೇಲಿಗೆ ತಲುಪಿದ ನಂತರ ಟೆಲ್ ಅವೀವ್ ವಿಮಾನ ನಿಲ್ದಾಣದಲ್ಲಿಯೂ, ಇಸ್ರೇಲಿನ ಕಸ್ಟಮ್ಸ್ ಅಧಿಕಾರಿಗಳು ಆ ವ್ಯಕ್ತಿಯ ಸಾಮಾನು ಸರಂಜಾಮುಗಳನ್ನು ಪರೀಕ್ಷಿಸಿ, ಅರೇ ಇದು ಏನು? ಎಂದು ಪ್ರಶ್ನಿಸಿದರು. ಕೂಡಲೇ, ಸರ್, ಇದು ಏನು? ಎಂಬ ತಪ್ಪಾದ ಪ್ರಶ್ನೆಯನ್ನು ಕೇಳಿದ್ದೀರಿ. ನೀವು ಇವರು ಯಾರು? ಎಂಬ ಪ್ರಶ್ನೆಯನ್ನು ಕೇಳಬೇಕಿತ್ತು ಎಂದು ಹೇಳಿ ಒಂದು ಕ್ಷಣವೂ ಸುಮ್ಮನಾಗದೇ, ಇವರು ಲೆನಿನ್. ಇವರಿಂದಲೇ, ಯಹೂದಿಗಳು ರಷ್ಯಾವನ್ನು ತೊರೆಯಲು ಕಾರಣವಾಯಿತು. ಈ ಕಾರಣದಿಂದಲೇ ಪ್ರತೀ ದಿನವೂ ಆತನನ್ನು ಶಪಿಸುವ ಸಲುವಾಗಿಯೇ ನಾನು ಈ ಪ್ರತಿಮೆಯನ್ನು ನನ್ನೊಂದಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ. ಈ ಮಾತುಗಳಿಂದ ಮರುಕ ಪಟ್ಟ ಇಸ್ರೇಲಿ ಕಸ್ಟಮ್ಸ್ ಅಧಿಕಾರಿಗಳು, ಈ ಕುರಿತಂತೆ ನಾನು ಸಹಾ ಕ್ಷಮೆಯಾಚಿಸುತ್ತೇನೆ ಎಂದು ಹೇಳಿ, ನೀವೀಗ ಹೊರಡ ಬಹುದು ಎಂದು ಹೇಳಿ ಕಳುಹಿಸಿದರು.
ಹೀಗೆ ರಷ್ಯಾ ಮತ್ತು ಇಸ್ರೇಲಿನ ಕಸ್ಟಮ್ ಅಧಿಕಾರಿಗಳಿಗೆ ವಿಭಿನ್ನವಾದ ಉತ್ತರಗಳನ್ನು ನೀಡಿ ತಂದ ಪ್ರತ್ರಿಮೆಯನ್ನು ತನ್ನ ಹೊಸ ಮನೆಯ ಮೇಜಿನ ಮೇಲೆ ಇಟ್ಟಿದ್ದಲ್ಲದೇ, ತಾನು ಸುರಕ್ಷಿತವಾಗಿ ರಷ್ಯಾದಿಂದ ತಾಯ್ನಾಡಿಗೆ ಮರಳಿದ್ದನ್ನು ಸಂಭ್ರಮಿಸಲು ತನ್ನ ಬಂಧು ಮಿತ್ರರನ್ನು ತನ್ನ ಮನೆಗೆ ಭೋಜನಕ್ಕೆ ಆಹ್ವಾನಿಸಿದನು.
ಹಾಗೆ ಭೋಜನಕ್ಕೆ ಬಂದ ಸ್ನೇಹಿತರೊಬ್ಬರು, ಮೇಜಿನ ಮೇಲಿದ್ದ ಲೆನಿನ್ ಪ್ರತಿಮೆಯನ್ನು ಗಮನಿಸಿ, ಇವರು ಯಾರು? ಎಂದು ಪ್ರಶ್ನಿಸಿದಾಗ, ಆತ ಅರೇ ಗೆಳೆಯಾ ಇವರು ಯಾರು? ಎಂದು ತಪ್ಪಾದ ಪ್ರಶ್ನೆಯನ್ನು ಕೇಳದಿರು. ಇದು ಏನು? ಎಂದು ಪ್ರಶ್ನಿಸು. ಇದು ಹತ್ತು ಕಿಲೋಗ್ರಾಂಗಳಷ್ಟು ತೂಕದ ಘನ ಚಿನ್ನವಾಗಿದ್ದು, ಯಾವುದೇ ಕಸ್ಟಮ್ಸ್ ಸುಂಕ ಮತ್ತು ತೆರಿಗೆಯನ್ನು ಪಾವತಿಸದೇ ನನ್ನ ವಾಕ್ಛಾತುರ್ಯದಿಂದ ಸುಲಭವಾಗಿ ರಷ್ಯಾದಿಂದ ಇಸ್ರೇಲಿಗೆ ತಂದಿದ್ದೇನೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡ.
ಸಾರಾಂಶ: ಊಟ ಬಲ್ಲವನಿಗೆ ರೋಗವಿಲ್ಲ. ಮಾತು ಬಲ್ಲವನಿಗೆ ಶಿಕ್ಷೆ ಇಲ್ಲ. ಪಟ ಪಟನೆ ಸುಂದರವಾಗಿ ಮಾತನಾಡಲು ಬರುವವನು ಎಂತಹವನ್ನೂ ಎಂತಹ ವಿಭಿನ್ನ ಪರಿಸರದಲ್ಲಿಯೂ ಮರುಳು ಮಾಡಬಲ್ಲ ಎಂಬುದಕ್ಕೆ ಈ ಪ್ರಸಂಗವೇ ಸಾಕ್ಷಿ.
ಏನಂತೀರೀ?
ನಿಮ್ಮವನೇ ಉಮಾಸುತ
ಗೆಳೆಯರೊಬ್ಬರು ಕಳುಹಿಸಿದ್ದ ಆಂಗ್ಲ ಸಂದೇಶದ ಭಾವಾನುವಾದ