ಕಳೆದ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚಿತವಾಗುತ್ತಿರುವ ವಿಷಯವೆಂದರೆ ತೈಲಬೆಲೆಯ ಏರಿಕೆ. ಸದ್ಯದ ಪರಿಸ್ಥಿತಿಯಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ 85-90ರ ಆಸುಪಾಸಿನಲ್ಲಿದ್ದು ಇನ್ನು ಕೆಲವೇ ವಾರಗಳಲ್ಲಿ ಶತಕದತ್ತ ಧಾಪುಗಾಲು ಹಾಕಿದೆ.
ಇದನ್ನೇ ಬಂಡವಾಳ ಮಾಡಿಕೊಂಡ ವಿರೋಧ ಪಕ್ಷ ಅದರಲ್ಲೂ ಪ್ರಮುಖವಾಗಿ ಕಾಂಗ್ರೇಸ್ ಪಕ್ಷ ಇದೇ ಏನೂ ಅಚ್ಚೇ ದಿನ್? ಎನ್ನುವ ಶೀರ್ಷಿಕೆಯಲ್ಲಿ, ಭಾರತವು ಪೆಟ್ರೋಲ್ / ಡೀಸೆಲ್ / ಎಲ್ಪಿಜಿ ಬೆಲೆಗಳಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದೆ ಎಂದು ಹೇಳುತ್ತಾ ಈ ಕೆಳಕಂಡ ಅಂಕಿ ಅಂಶಗಳನ್ನು ಪ್ರಕಟಿಸಿದಿದೆ.
2012-13ರಲ್ಲಿ ಕಚ್ಚಾ ತೈಲ ಬೆಲೆ $ 110 ರಿಂದ 130 ಬೆಲೆ ಇದ್ದದ್ದು ಈಗ $ 60 ಕ್ಕೆ ಇಳಿದಿಯಾದರೂ ಪೆಟ್ರೋಲ್ / ಡೀಸೆಲ್ ಬೆಲೆಗಳು ದಿನೇ ದಿನೇ ಹೆಚ್ಚುತ್ತಿದೆ. ಪೆಟ್ರೋಲ್ ಮೇಲಿನ ಕೇಂದ್ರ ತೆರಿಗೆ 2014 ರಲ್ಲಿ 20 9.20 ಆಗಿತ್ತು. ಈಗ ಅದನ್ನು ₹ 32.98 ಕ್ಕೆ ಹೆಚ್ಚಿಸಲಾಗಿದೆ ಅದು 258% ಹೆಚ್ಚಾಗಿದೆ. ಡೀಸೆಲ್‌ನಲ್ಲಿ ಅದು 2014 ರಲ್ಲಿ ₹ 3.46 ಆಗಿತ್ತು, ಈಗ ಅದು ₹ 31.83 ಕ್ಕೆ ಏರಿದೆ. 876% ಹೆಚ್ಚಳವಾಗಿದೆ.
ಇಂದು ಕಚ್ಚಾ ತೈಲ ವೆಚ್ಚವು ಕೇವಲ $ 26.54 ಇದ್ದರೂ ಕೇಂದ್ರ ಮತ್ತು ರಾಜ್ಯ ತೆರಿಗೆಗಳೇ ₹ 56.47 ಇರುವುದರಿಂದ ಗ್ರಾಹಕರು ಪೆಟ್ರೋಲಿಗೆ ₹ 90.83 ಮತ್ತು ಕೇಂದ್ರ ಮತ್ತು ರಾಜ್ಯ ತೆರಿಗೆಗಳು ₹ 47.86 ಸೇರಿ ಡೀಸೆಲ್ ಬೆಲೆ ಇಂದು ₹ 82.83 ಆಗಿದೆ. ಎಲ್‌ಪಿಜಿ ಬೆಲೆಗಳು 2014 ರಲ್ಲಿ ಸುಮಾರು ₹ 400 ಆಗಿತ್ತು. ಈಗ ಅದು ₹ 800 ಆಗಿದೆ. ಹಾಗಾಗಿ ಅಚ್ಚೇ ದಿನ್ ಎಂದರೆ ಇದೇ ಇಲ್ಲವೇ ಅದನ್ನು ಸ್ವಾಗತಿಸೋಣ ಮತ್ತು ಸಂಭ್ರಮಿಸೋಣ ಎಂದು ಕುಹಕವಾಡಿದೆ.
ಇದನ್ನು ಕೂಲಂಕುಶವಾಗಿ ಅರ್ಥಮಾಡಿಕೊಳ್ಳದ ಕೆಲ ಸ್ಥಳೀಯ ನಾಯಕರುಗಳು ಇದನ್ನೇ ವಿರೋಧಿಸುತ್ತಾ ಹಲವಾರು ಕಡೆ ಪ್ರತಿಭಟನೆಗಳನ್ನೂ ಮಾಡುವ ಮೂಲಕ ತಮ್ಮ ನಾಯಕರುಗಳಿಗೆ ತಮ್ಮ ಅಸ್ಮಿತೆ ಮತ್ತು ಅಸ್ತಿತ್ವವನ್ನು ಉಳಿಸಿಕೊಳ್ಳಲು ಪರದಾಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದವೆನಿಸುತ್ತಿದೆ.
ಈ ರೀತಿಯ ನಕಲಿ ಅಂಕಿ ಅಂಶಗಳನ್ನು ಅಗಾಗಾ ಪ್ರಕಟಿಸುವ ಮೂಲಕ ವಿರೋಧಪಕ್ಷಗಳು ಸುಖಾಸುಮ್ಮನೆ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿವೆ. ಸಾಮಾನ್ಯ ಪ್ರಜೆಯಾಗಿ ಈ ಅಂಕಿ ಅಂಶವನ್ನು ನೋಡಿದ ತಕ್ಷಣಾ ಅರೇ ಇವರು ಹೇಳುತ್ತಿರುವುದು ನಿಜವಲ್ಲವೇ ಎಂದೆಣಿಸಿದರೂ ಸ್ವಲ್ಪ ತಾಳ್ಮೆ ವಹಿಸಿ ಲೆಕ್ಕಾಚಾರ ಮಾಡಿದಲ್ಲಿ ಅವರು ಹೇಳುತ್ತಿರುವುದರಲ್ಲಿ ಹುರುಳಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
2012-13ರಲ್ಲಿ UPA-2 ಸರ್ಕಾರವಿದ್ದಾಗ ಪೆಟ್ರೋಲ್ ಬೆಲೆ 80 ರೂಪಾಯಿಗಳಿತ್ತು. ಆ ಸಮಯದಲ್ಲಿ ನಮ್ಮ ಸಂಬಳ ಎಷ್ಟಿತ್ತು? ಮತ್ತು ಈಗ ಪೆಟ್ರೋಲ್ ಬೆಲೆ 90 ರೂಪಾಯಿಗಳು ಆಗಿರುವಾಗ ನಮ್ಮ ಸಂಬಳ ಎಷ್ಟಿದೆ? ಎಂದು ಯೋಚಿಸಿ. ಎಂಟು ವರ್ಷ ಹಿಂದಿರುವ ಸಂಬಳವೇ ಇನ್ನೂ ಇದೆಯೇ ಅಥವಾ ಹೆಚ್ಚಾಗಿದೆಯೇ ಎಂಬುದನ್ನು ಗಮನಿಸಿದಾಗ ಬೆಲೆ ಏರಿಕೆಯ ಪ್ರಮಾಣ ನಮಗೇ ಅರಿವಾಗುತ್ತದೆ.
ಎಲ್ಲದಕ್ಕಿಂತಲೂ ಹೆಚ್ಚಾಗಿ ಗಮನಿಸಬೇಕಾದ ಅಂಶವೆಂದರೆ, 2012-13ರಲ್ಲಿ ಕೇಂದ್ರ ಸರ್ಕಾರ ಭಾರೀ ಪ್ರಮಾಣದ ಸಬ್ಸಿಡಿಯೊಂದಿಗೆ ಪೆಟ್ರೋಲನ್ನು 80 ರೂಗಳಿಗೆ ಜನರಿಗೆ ಮಾರುತ್ತಿತ್ತು. ಈ ರೀತಿಯ ಸಬ್ಸಿಡಿ ಹಣಕ್ಕಾಗಿ ಆಗ ಸರ್ಕಾರವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ತೈಲ ಸಾಲವನ್ನು ಸಂಗ್ರಹಿಸುತ್ತಿತ್ತು. ಆದರೆ ಮೋದಿಯವರ ಸರ್ಕಾರ ಬಂದ ತಕ್ಷಣವೇ ಪೆಟ್ರೋಲಿಯಂ ಉತ್ಪನ್ನಗಳಿಗೆ ಕೊಡುತ್ತಿದ್ದ ಸಬ್ಸಿಡಿಯನ್ನು ನಿಲ್ಲಿಸಿದ್ದಲ್ಲದೇ ಹಿಂದಿನ ಸರ್ಕಾರ ಮಾಡಿದ್ದ ಎಲ್ಲಾ ಸಾಲಗನ್ನು ತೀರಿಸಿದೆ ಎಂಬುದನ್ನು ಸದ್ದಿಲ್ಲದೇ ವಿರೋಧ ಪಕ್ಷಗಳು ಮರೆಮಾಚುವುದು ಕುರುಕ್ಷೇತ್ರದಲ್ಲಿ ಅಶ್ವತ್ಥಾಮೋ ಹತಃ ಕುಂಜರಃ ಎನ್ನುವ ಸನ್ನಿವೇಶ ನೆನಪಾಗುತ್ತದೆ.
UPA-1 2003 ರಲ್ಲಿ ಆಡಳಿತಕ್ಕೆ ಬಂದಾಗ ಪೆಟ್ರೋಲ್ ಬೆಲೆ 30ರ ಆಸುಪಾಸಿನಲ್ಲಿತ್ತು. ಮುಂದೆ 10 ವರ್ಷಗಳಲ್ಲಿ ಅದೇ UPA-2 2013ರಲ್ಲಿ ಅಧಿಕಾರದಿಂದ ಕೆಳಗೆ ಇಳಿಯುವಾಗ ಪೆಟ್ರೋಲ್ ಬೆಲೆ 80 ರೂಪಾಯಿಗಳಾಗಿತ್ತು ಮತ್ತು ಸಾವಿರಾರು ಕೋಟಿಗಳಷ್ಟು ಸಾಲವನ್ನು ಮಾಡಿಹೋಗಿತ್ತು ಎಂಬುದೂ ಸತ್ಯವಲ್ಲವೇ? 10 ವರ್ಷಗಳಲ್ಲಿ 50+ ರೂಪಾಯಿಗಳನ್ನು ಏರಿಸಿದ್ದವರು ಈಗ ಕಳೆದ 5 ವರ್ಷಗಳಲ್ಲಿ ( ಮೋದಿಯವರ ಮೊದಲ ಮೂರು ವರ್ಷಗಳಲ್ಲಿ ಪೆಟ್ರೋಲ್ ಬೆಲೆ ರೂ 60-65 ಇತ್ತು) 10ರೂಪಾಯಿಗಳಷ್ಟು ಏರಿದ್ದಕ್ಕೆ ಈ ಪಾಟಿ ಕೋಲಾಹಲವೇ?
ಕೋವಿಡ್ ನಿಂದಾಗಿ ಪ್ರಪಂಚಾದ್ಯಂತ ಎಲ್ಲಾ ದೇಶಗಳೂ ಆರ್ಥಿಕವಾಗಿ ತತ್ತರಿಸಿ ಹೋಗಿರುವಾಗ ಎಲ್ಲದರ ಬೆಲೆ ಕಡಿಮೆ ಮಾಡಬೇಕು ಎಂದು ಆಗ್ರಹ ಮಾಡುವುದು ಕಾರ್ಯಸಾಧುವೇ? ಈ ವರ್ಷವಿಡೀ ಕೋವಿಡ್ ಕಾರಣದಿಂದಾಗಿ ಕುಸಿದು ಹೋಗಿರುವ ಆರ್ಥಿಕತೆಯನ್ನು ಎತ್ತಿ ನೀಡಲು ಒತ್ತು ನೀಡಿದ್ದಲ್ಲದೇ, ದೇಶಾಧ್ಯಂತ ಆರ್ಥಿಕವಾಗಿ ಬಡವರಾಗಿದ್ದವರಿಗೆ 1 ಲಕ್ಷ ಕೋಟಿ ಸಬ್ಸಿಡಿಗಳು, ಉಚಿತ ಪಡಿತರ ಮತ್ತು ಆಸ್ಪತ್ರೆಯ ವೆಚ್ಚವನ್ನು ಸರ್ಕಾರ ಕೊಡುವುದಕ್ಕೆ ಹಣ ಎಲ್ಲಿಂದ ಬರಬೇಕು ಎಂಬುದನ್ನು ವಿರೋಧ ಪಕ್ಷದವರು ಜನರಿಗೆ ತಿಳಿಸುತ್ತಾರೆಯೇ?
130 ಕೋಟಿ ಇರುವ ದೇಶದಲ್ಲಿ, ನಿಜವಾಗಿಯೂ ಆದಾಯ ತೆರಿಗೆ ಪಾವತಿಸುವವರು 2-3% ಇದ್ದವರು ಇತ್ತೀಚಿನ ಮೂರ್ನಾಲ್ಕು ವರ್ಷಗಳಲ್ಲಿ ಮೋದಿ ಸರ್ಕಾರ ತಂದ ಕೆಲ ಕಠಿಣ ನಿಯಮಗಳಿಂದಾಗಿ 5-6% ರಷ್ಟು ಏರಿದೆ. ಉಳಿದವರು ಸಾಕಷ್ಟು ಅದಾಯವನ್ನು ಗಳಿಸುತ್ತಿದ್ದರೂ ಒಂದು ನಯಾಪೈಸೆ ತೆರಿಗೆಯನ್ನೂ ಕಟ್ಟದೇ ಎಲ್ಲಾ ಸರ್ಕಾರೀ ಸೌಲಭ್ಯಗಳನ್ನು ಪಡೆಯುತ್ತಿದ್ದಾರಲ್ಲವೇ?
ಒಂದು ಕಡೆ ಪಾಕೀಸ್ಥಾನ ಮತ್ತೊಂದು ಕಡೆ ಚೀನಾದಂತಹ ತಂಟೆ ಕೋರ ನೆರೆಹೊರೆಯವರನ್ನು ಇಟ್ಟು ಕೊಂಡು ಪ್ರತೀ ಬಾರಿ ಅವರ ಆಕ್ರಮಣಗಳನ್ನು ಸಹಿಸುತ್ತಲೇ ಹೋಗುತ್ತಿದ ಸಹಿಷ್ಣು ಭಾರತ ದೇಶ, ಈಗ ಸೇರಿಗೆ ಸವ್ವಾ ಸೇರು ಎನ್ನುವಂತೆ ಅವರ ದೇಶದೊಳಗೇ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡುವಷ್ಟರ ಮಟ್ಟಿಗೆ ಕಳೆದ ಐದಾರು ವರ್ಷಗಳಲ್ಲಿ ಬೆಳೆದಿದ್ದೇವೆ ಎಂದರೆ ದೇಶದ ರಕ್ಷಣಾ ವ್ಯವಸ್ಥೆಗೆ ಕೋಟ್ಯಾಂತರ ಹಣವನ್ನು ಖರ್ಚು ಮಾಡಿರುವ ವಿವರವನ್ನೂ ಸಹಾ ವಿರೋಧ ಪಕ್ಷಗಳು ಜನರಿಗೆ ಇದೇ ರೀತಿ ತಿಳಿಯಪಡಿಸ ಬೇಕಲ್ಲವೇ?
ರಸ್ತೆಗಳು ಅಭಿವೃದ್ಧಿಯಾದರೇ ದೇಶ ಉದ್ಧಾರವಾದಂತೆ ಎನ್ನುವ ಮಾತಿಗೆ ಅನುಗುಣವಾಗಿ ಪ್ರತೀ ದಿನವೂ ದಾಖಲೇ ಪ್ರಮಾಣದಲ್ಲಿ ದೇಶಾದ್ಯಂತ ಅದರಲ್ಲೂ ಗಡೀ ಭೂಭಾಗಗಳಲ್ಲಿ ವಿದೇಶೀ ವಿರೋಧಗಳನ್ನೆಲ್ಲಾ ಬದಿಗೊತ್ತಿ ಸುವರ್ಣಪಥ ರಸ್ತೆಗಳನ್ನು ನಿರ್ಮಿಸಿರುವುದಕ್ಕೆ ಈ ಸರ್ಕಾರ ವ್ಯಯಿಸಿರುವ ಕೋಟ್ಯಾಂತರ ಹಣವನ್ನು ಬಹಿರಂಗ ಪಡಿಸಬೇಕಲ್ಲವೇ?
ಸ್ವಾತಂತ್ರ್ಯ ಬಂದು 70 ವರ್ಷವಾದರೂ ದೇಶದ ಬಹುತೇಕ ಹಳ್ಳಿಗಳು ವಿದ್ಯುತ ಕಾಣದೇ, ಸೌದೇ ಒಲೆಯಲ್ಲಿಯೇ ಅಡುಗೆ ಮಾಡುತ್ತಾ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದವರಿಗೆ ವಿದ್ಯುತ್ ಸೌಲಭ್ಯವನ್ನು ಒದಗಿಸಿದ್ದಲ್ಲದೇ, ಉಚಿತವಾಗಿ ಗ್ಯಾಸ್ ಸಿಲಿಂಡರ್ ಕೊಟ್ಟಿದ್ದಲ್ಲದೇ ಸಬ್ಸಿಡಿ ಹಣದಲ್ಲಿ ರೀಫಿಲ್ ಮಾಡಿಸುತ್ತಿರುವುದಕ್ಕೆ ಎಲ್ಲಿಂದ ಹಣ ಬರುತ್ತದೆ ಎಂಬುದನ್ನೂ ತಿಳಿಸಬೇಕಲ್ಲವೇ?
ಪೆಟ್ರೋಲ್ ಬೆಲೆಗಳು ಹೆಚ್ಚಾಗಿದ್ದರೂ, ಯುಪಿಎ ಸಮಯಕ್ಕಿಂತ ಭಿನ್ನವಾಗಿ ಇತರ ಸರಕುಗಳ ಬೆಲೆಗಳು ಗಣನೀಯವಾಗಿ ಏರಿಕೆಯಾಗಿಲ್ಲ ಎಂಬುದನ್ನೂ ತಿಳಿಸಬೇಕಲ್ಲವೇ?
ಮೋದಿಯವರು ಅಧಿಕಾರಕ್ಕೆ ಬಂದಾಗ ನಾ ಮೇ ಖಾವುಂಗಾ, ನಾ ಮೇ ಖಾನೇ ದೂಂಗಾ ಎಂದು ಹೇಳಿದ್ದನ್ನು ಅಕ್ಷರಶಃ ಪಾಲಿಸುತ್ತಲೇ ಕಳೆದ ಏಳು ವರ್ಷಗಳ ಕಾಲ ಯಾವುದೇ ಹಗರಣದಲ್ಲಿ ಭಾಗಿಯಾಗದೇ, ಪ್ರತೀಯೊಂದು ಪೈಸೆ ಪೈಸೆಗೂ ಡಿಜಿಟಲ್ ರೂಪದಲ್ಲಿ ಲೆಖ್ಖವನ್ನು ಇಟ್ಟಿರುವುದನ್ನೂ ಸಹಾ ವಿರೋಧ ಪಕ್ಷಗಳು ತಿಳಿಸಬೇಕಲ್ಲವೇ?
ಭಾರತ ಎಂದರೆ ಮೂಗು ಮುರಿಯುತ್ತಿದ್ದ ಕಾಲವು ಕಳೆದ ಏಳು ವರ್ಷಗಳಲ್ಲಿ ಮಾಯವಾಗಿ ತಮ್ಮ ವಿದೇಶಾಂಗ ನೀತಿ ಮತ್ತು ಸ್ನೇಹಪರ ವಿದೇಶೀ ಭೇಟಿಗಳಿಂದ ಭಾರತೀಯರು ಎಂದರೆ ಹೆಮ್ಮೆ ಮತ್ತು ಗರ್ವ ಪಡುವಂತೆ ಮಾಡಿದ ಮತ್ತು ಭಾರತ ಮತ್ತೊಮ್ಮೆ ವಿಶ್ವಗುರುವಾಗುತ್ತಿರುವ ಕೀರ್ತಿಯೂ ನೀವೇ ಹೇಳುವ ಸೂಟ್ ಬೂಟ್ ಸರ್ಕಾರಕ್ಕೇ ಸಲ್ಲುತ್ತದೆ ಎಂಬುದನ್ನೂ ತಿಳಿಸಬೇಕಲ್ಲವೇ?
ಮೋದಿ ಸರ್ಕಾರ ಆಡಳಿತ ವೈಖರಿಯನ್ನು ಗಮನಿಸಿ ಇನ್ನೂ ಹತ್ತಾರು ವರ್ಷಗಳ ಕಾಲ ಸಂವಿಧಾನಾತ್ಮಕವಾಗಿ ಮತ್ತೆ ಅಧಿಕಾರಕ್ಕೆ ಬರುವುದು ಹಗಲು ಕನಸು ಎಂಬುದನ್ನು ಚೆನ್ನಾಗಿ ಅರಿತಿರುವ ಇಂದಿನ ವಿರೋಧ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ದೇಶದ ಹಿತವನ್ನು ಮರೆತು ದೇಶ ಮತ್ತು ವಿದೇಶಗಳಲ್ಲಿ ನಮ್ಮ ದೇಶವನ್ನು ಮತ್ತು ನಮ್ಮ ನಾಯಕರುಗಳನ್ನು ಕೆಟ್ಟದಾಗಿ ಬಿಂಬಿಸುವ ಮೂಲಕ ದೇಶದ ಬೆಳವಣಿಗೆಯನ್ನು ಹದಗೆಡಿಸುತ್ತಿರುವುದಲ್ಲದೇ, ದೇಶದ ಹೆಮ್ಮೆಯನ್ನೂ ಹಾಳುಮಾಡುತ್ತಿರುವುದು ನಿಜಕ್ಕೂ ದುಃಖಕರವೇ ಸರಿ.
ಇನ್ನೂ ವಿಪರ್ಯಾಸವೆಂದರೆ, ತಮ್ಮ ನಾಯಕರು ಹೇಳಿದ್ದು ತಪ್ಪು ಎಂದು ಗೊತ್ತಿದ್ದರೂ ಅಂಧಾನುಕರಣೆಯಿಂದ ದೇಶದಲ್ಲಿ ಒಂದಲ್ಲಾ ಒಂದು ವಿಷಯಕ್ಕೆ ಅನಾವಶ್ಯಕವಾಗಿ ದಂಗೆಗಳನ್ನು ಎಬ್ಬಿಸುತ್ತಿರುವುದು ಕ್ಷುಲ್ಲಕವಾಗಿ ಪ್ರತಿಭಟನೆ ಮಾಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದವೇ ಸರಿ.
ಕಡೆಯದಾಗಿ ಹೇಳ ಬೇಕಾಗಿರುವುದೇನೆಂದರೆ ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಸಂಗ್ರಹಿಸುವ ತೆರಿಗೆಯ ಸಂಪೂರ್ಣ ಹಣ ಕೇಂದ್ರ ಸರ್ಕಾರಕ್ಕೆ ಮಾತ್ರವೇ ಹೋಗದೇ ಅದರಲ್ಲಿ ಸಿಂಹಪಾಲು ರಾಜ್ಯ ಸರ್ಕಾರಕ್ಕೇ ಲಭಿಸುವ ಕಾರಣ, ದೇಶದ ಎಲ್ಲಾ ರಾಜ್ಯ ಸರ್ಕಾರಗಳೂ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿ.ಎಸ್. ಟಿ ಅಡಿಯಲ್ಲಿ ತರಲು ವಿರೋಧಿಸುತ್ತಿರುವ ವಿಷಯದ ಅರಿವು ಸಹಾ ಇಂದಿನ ಪ್ರಜ್ಞಾವಂತ ಭಾರತೀಯರಿಗೆ ಕಳೆದ ಆರೆಂಟು ವರ್ಷಗಳಲ್ಲಿ ಭಾರತೀಯರಿಗೆ ಅರಿವಾಗಿದೆ.
ಹಾಗೆಂದ ಮಾತ್ರಕ್ಕೆ ನಾನು ತೈಲ ಬೆಲೆ ಏರಿಕೆಯನ್ನು ಸಮರ್ಥನೆ ಮಾಡುತ್ತಿದ್ದೇನೆ ಎಂದಲ್ಲಾ. ತೈಲ ಬೆಲೆ ಏರಿದರೆ ಉಳಿದೆಲ್ಲ ಉತ್ಪನ್ನಗಳ ಬೆಲೆಯೂ ಪರೋಕ್ಷವಾಗಿ ಏರುತ್ತದೆ ಎನ್ನುವುದು ನಿಜವಾದರೂ, ಆಡಳಿತ ಪಕ್ಷ ಮಾಡಿದ್ದೆಲ್ಲವನ್ನೂ ವಿರೋಧಿಸಲೇ ಬೇಕೆನ್ನುವ ಮನೋಸ್ಥಿತಿಯ ವಿರೋಧ ಪಕ್ಷಗಳ ಗೋಸುಂಬೆತನವನ್ನು ಬಯಲು ಮಾಡುವುದಕ್ಕಾಗಿ ಈ ಲೇಖನ. ಕಾಂಗ್ರೆಸ್ ಆಡಳಿತ ಮಾಡುತ್ತಿದ್ದಾಗ ಬೆಲೆ ಏರಿಸಿದರೆ ಸಮರ್ಥನೀಯ. ಬಿಜೆಪಿ ಏರಿಸಿದರೆ ಮಾತ್ರ ತಪ್ಪು ಎನ್ನುವುದು ಸರಿಯಲ್ಲ ಅಲ್ಲವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಈ ಲೇಖನಕ್ಕೆ ಪೂರಕವಾದ ಅಂಕಿ ಅಂಶಗಳನ್ನು ಒದಗಿಸಿದ ಗೆಳೆಯ ಲೋಹಿತಾಶ್ವ ತ್ಯಾಗರಾಜ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.